ತಾನಸೇನನಿಂದ ಭೀಮಸೇನನವರೆಗೆ ಉತ್ತರಾದಿ ಸಂಗೀತವು ನಡೆದುಬಂದ ಹಾದಿ ಭಾಗ ೧

ಬುಧವಾರ ಮೇ ೨೦೦೨ ಒಂದನೇ ತಾರೀಕಿನಂದು ಅಂದರೆ ಮಹಾರಾಷ್ಟ್ರರಾಜ್ಯದ ದಿನದಂದು, ಅದಾಗಲೇ ಪದ್ಮವಿಭೂಷಿತರಾಗಿದ್ದ. ಅಚ್ಚಕನ್ನಡಿಗರಾದ ಪಂಡಿತ ಭೀಮಸೇನ ಜೋಶಿಯವರಿಗೆ ಮಹಾರಾಷ್ಟ್ರ ಸರಕಾರದ ಪರವಾಗಿ ಮುಂಬಯಿಯಲ್ಲಿ ‘ಮಹಾರಾಷ್ಟ್ರಭೂಷಣ’ ಪದವಿಯನ್ನು ಪ್ರದಾನಮಾಡಿ ೫ ಲಕ್ಷ ರೂಪಾಯಿಯ ಮೊತ್ತ ಮತ್ತು ಮಾನಪತ್ರವನ್ನು ಕೊಟ್ಟು ಗೌರವಿಸಲಾಯಿತು. ಈ ಪ್ರತಿಷ್ಠಿತ ಸಮಾರಂಭದಲ್ಲಿ ಹಾಡಲು ಧಾರವಾಡದಿಂದ ಮತ್ತೊಬ್ಬ ಅಚ್ಚಕನ್ನಡಿಗ ವೆಂಕಟೇಶ ಕುಮಾರರನ್ನು ಕರೆಸಿದ್ದು ಮುಂಬಯಿಯಲ್ಲಿ ೫೦ ವರ್ಷಗಳಿಂದ ನೆಲೆಸಿದ ಯಾವುದೇ ಕನ್ನಡ ಹೃದಯಕ್ಕೆ ಭಾರೀ ಉಲ್ಲಾಸವನ್ನು ಕೊಡುವ ಘಟನೆಯಾಗಿತ್ತು. ೯ ಕೋಟಿ ಜನರು ವಾಸ್ತವ್ಯವಿದ್ದ ರಾಜ್ಯದಲ್ಲಿ ಜೋಶಿಯವರ ಸತ್ಕಾರಕ್ಕೆ ನೆರೆಯ ಕರ್ನಾಟಕದಿಂದ ಉತ್ತರಾದೀ ಸಂಗೀತ ಹಾಡುವ ಗಾಯಕರನ್ನು ‘ಆಯಾತ’ಮಾಡಿಕೊಳ್ಳುವ ಪರಿಸ್ಥಿತಿ ಒದಗಿದ್ದು ಈ ರಾಜ್ಯದಲ್ಲಿ ಈ ಪದ್ಧತಿಯಲ್ಲಿ ಹಾಡುವ ‘ಆ’ ಮಟ್ಟದ ಗಾಯಕರೇ ಇಲ್ಲ ಎಂದು ಸಾಮಾನ್ಯರು ತಿಳಿದುಕೊಂಡರೆ ಅದು ಅತಿಶಯೋಕ್ತಿಯ ಮಾತಲ್ಲ.

ಇಂದಿಗೆ ಎಂಬತ್ತೊಂಬತ್ತು ವರ್ಷಗಳ ಹಿಂದೆ ಗದುಗಿನಲ್ಲಿ ಹುಟ್ಟಿ ತಮ್ಮ ಹತ್ತನೇ ವರ್ಷಕ್ಕೇ ಮನೆಬಿಟ್ಟು ಓಡಿಹೋಗಿ ಮುಂಬಯಿ, ಕಲಕತ್ತಾ, ಜಾಲಂಧರ, ಲಾಹೋರ ಶಹರಗಳಲ್ಲಿ ಭಾವಿಗುರುಗಳ ಶೋಧ ನಡೆಸಿ, ಮರಳಿ ೬ ವರ್ಷಗಳ ನಂತರ, ಗದುಗಿನ ಪಕ್ಕದ ಕುಂದಗೋಳಕ್ಕೆ ಬಂದು, ಇಲ್ಲಿಯ ಕಿರಾನಾ ಘರಾಣದ ಸವಾಯಿ ಗಂಧರ್ವ ರಾಮಭಾವು ಕುಂದಗೋಳಕರ ಅವರಲ್ಲಿ ಶಿಷ್ಯತ್ವವನ್ನು ಪಡೆದು, ಮುಂದೆ ತಮ್ಮ ಗುರುಗಳ ಹೆಸರನ್ನು ಅಜರಾಮರ ಮಾಡಿದ ಶ್ರೇಯ ಭೀಮಸೇನ ಜೋಶಿಯವರದು. ಕಳೆದ ೫೦ ವರ್ಷಗಳಿಂದ ಪುಣೆಯಲ್ಲಿ ತಮ್ಮ ಗುರುಗಳ ಸ್ಮರಣಾರ್ಥ ‘ಸವಾಯಿ ಗಂಧರ್ವ’ ಉತ್ಸವ ಎಡೆಬಿಡದೆ ನಡೆಸಿದ ಧೀಮಂತರು ಇವರು. ಅಂದಹಾಗೆ ಭೀಮಸೇನರ ಅಕ್ಕ ೯೦ ವರ್ಷ ಹರೆಯದ ಗಂಗೂಬಾಯಿ ಹಾನಗಲ್ಲ ಕೂಡ ಕಡಿಮೆ ತೂಕದವರಲ್ಲ. ಮೇ ತಿಂಗಳ ೧೯ ಮತ್ತು ೨೦ ೨೦೦೩ರಲ್ಲಿ ಪುಣೆಯಲ್ಲಿ ‘ಅಕ್ಕನ’ ೯೦ನೆಯ ಹುಟ್ಟುಹಬ್ಬ ಮತ್ತು ಪದ್ಮವಿಭೂಷಣ ಸನ್ಮಾನದ ಸತ್ಕಾರ ಅದ್ಧೂರಿಯಾಗಿ ನಡೆಯಿತು. ಇದರಲ್ಲಿ ಕೂಡ ಕೊನೆಗೆ ಹಾಡಿದವರು ಹೈದರಾಬಾದಿನ ಗ್ವಾಲಿಯರ ಪರಂಪರೆಯ ಖ್ಯಾತ ಕಲಾವಿದೆ ಮಾಲಿನಿ ರಾಜೂರಕರ.
ಕರ್ನಾಟಕದ ಈ ಎರಡು ವಿಭೂತಿಗಳ ಸತ್ಕಾರ ಮುಂಬಯಿ ಮತ್ತು ಪುಣೆಯಲ್ಲಿ ವೀಕ್ಷಿಸುತ್ತ ಕುಳಿತಾಗ ಉತ್ತರಾದಿ ಸಂಗೀತದ ಹಿಂದಣ ನಾಲ್ಕೈದು ಶತಮಾನಗಳ ಇತಿಹಾಸದ ಪುಟಗಳು ಸ್ಮೃತಿಪಟಲದಲ್ಲಿ ಹಾದುಹೋದವು. ಇದಕ್ಕೆ ಪೂರಕವಾಗಿ ಪುಣೆಯ ನೂರು ವರ್ಷಕ್ಕೂ ಮಿಕ್ಕಿದ ವಾಡೆಯಲ್ಲಿಯ ಗಾಂಧರ್ವ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಮೊಗಲರ ಕೊನೆಯ ಬಾದಶಹ ಬಹಾದೂರ ಜ಼ಾಫರ ಬರೆದಿಟ್ಟ ವಾಕ್ಯಗಳು ಓದುಗರ ಲಕ್ಷ್ಯವನ್ನು ಸೆಳೆಯುತ್ತವೆ. ಬ್ರಹ್ಮದೇಶದ ಮೂಲೆಯಲ್ಲಿ ಸೆರೆಯಲ್ಲಿಡಲ್ಪಟ್ಟಿದ್ದ, ಉತ್ತರಾದಿ ಸಂಗೀತದ ಮೇಧಾವಿ, ‘ಜಾಫ಼ರ’ ಎಂಬ ಕಾವ್ಯನಾಮವನ್ನಿಟ್ಟುಕೊಂಡು ನೂರಾರು ಪದ್ಯಗಳನ್ನು ರಚಿಸಿದ ಈ ಬಾದಶಹ ಬರೆದಿಟ್ಟಿದ್ದಾದರೂ ಏನು? ಕೊನೆಯ ಪಂಕ್ತಿಗಳು ಹೀಗಿವೆ:
“… ಇತನಾಹಿ ಬದನಸೀಬ ಜ಼ಾಫರ, ದಫನ ಕೆ ಲಿಯೆ
ದೋ ಗಜ ಜಮೀನ ಭೀ ನ ಮಿಲೆಂ ಯಾರ ಮೆ…”
‘ಮಣ್ಣಾಗಲು ಎರಡು ಗಜ ಇಲ್ಲದ ಜಾಫರ್, ನಿನೇಂಥ ದುರ್ದೈವಿ!’
ಬಹಾದೂರ ಶಾಹನ ಅಭಿಮಾನಿಯೊಬ್ಬ ಇದನ್ನು ಈ ರೀತಿ ಪೂರ್ತಿಗೊಳಿಸಿದ್ದು ಎಷ್ಟು ಸಾರ್ಥಕ ಎಂದು ಓದುಗರೇ ನಿಶ್ಚಯಿಸಬೇಕು. ಇದರ ಅನ್ವಯಾರ್ಥವನ್ನು ಕೊಡುವ ಆವಶ್ಯಕತೆ ಇಲ್ಲ.
“ಬದ ನಸೀಬ ತುಮ ನ ಹೋ ಜಾಫರ
ಜುಡಾ ಹೈ ತೇರಾ ನಾಮ ಹಮೇಶಾ ಗಜ಼ಲ್ ಖ್ಯಾಲಕೆ ಪೈಗಾಮಮೇ”

“ಮಣ್ಣಾಗಲು ಎರಡು ಗಜ ಇಲ್ಲದ ಜಾಫರ್, ನಿನೇಂಥ ದುರ್ದೈವಿ!’

ಬಹಾದೂರ ಶಾಹನ ಅಭಿಮಾನಿಯೊಬ್ಬ ಇದನ್ನು ಈ ರೀತಿ ಪೂರ್ತಿಗೊಳಿಸಿದ್ದು ಎಷ್ಟು ಸಾರ್ಥಕ ಎಂದು ಓದುಗರೇ ನಿಶ್ಚಯಿಸಬೇಕು. ಇದರ ಅನ್ವಯಾರ್ಥವನ್ನು ಕೊಡುವ ಆವಶ್ಯಕತೆ ಇಲ್ಲ.
“ಬದ ನಸೀಬ ತುಮ ನ ಹೋ ಜಾಫರ
ಜುಡಾ ಹೈ ತೇರಾ ನಾಮ ಹಮೇಶಾ ಗಜ಼ಲ್ ಖ್ಯಾಲಕೆ ಪೈಗಾಮಮೇ”
‘ ಗಝಲ್ ಖ್ಯಾಲ್ ಅಂಟಿದ ಶಾಶ್ವತ ನಂಟಿನ ಜಾಫರ್ ನಿನೇಕೆ ದುರ್ದೈವಿ?’
ಇದರರ್ಥ ಇಷ್ಟೆ. ಸಂಗೀತದ ಚರಿತ್ರೆಯ ವಿಷಯ ಬಂದಾಗ ಇದರಲ್ಲಿಯ ಉಸ್ತಾದ್, ಪಂಡಿತ, ಆಚಾರ್ಯ, ವಾಗ್ಗೇಯಕಾರ, ಗಾಯಕ, ನಾಯಕ ಅಥವಾ ಭಕ್ತಿಪರಾಯಣ ಪ್ರಚಾರಕರು – ಇವರು ಬಾಳಿದ್ದು, ಬದುಕಿದ್ದು ಇಂತಿಂತಹ ರಾಜ ಮಹಾರಾಜರ ಕಾಲದಲ್ಲಿ ಎಂಬುದನ್ನು ನಮೂದಿಸಲೇಬೇಕಾಗುತ್ತದೆ. ಗೋಪಾಲ ನಾಯಕ ಮತ್ತು ಅಮೀರ ಖುಸ್ರೋವಿನ ಬಗ್ಗೆ ಬರೆಯುವಾಗ ಸಂದರ್ಭೋಚಿತವಾಗಿ ಅಲ್ಲಾವುದ್ದೀನ ಖಿಲಜಿಯ (೧೩ನೇ ಶತಮಾನ)ಹೆಸರು ಬಂದೇ ಬರುತ್ತದೆ. ಅದರಂತೆ ತಾನಸೇನ ಬಾಳಿದ್ದು, ಬದುಕಿದ್ದು ದಿಲ್ಲಿಯ ಅಕ್ಬರ್ (೧೬ನೇ ಶತಮಾನ) ಮತ್ತು ಗ್ವಾಲಿಯರ್‌ನ ಮಾನ್‌ಸಿಂಹ ತೊಮರ್ ಇವರ ಕಾಲದಲ್ಲಿ. ಅಂದಿನಿಂದ ಕಾಬೂಲ್, ಕಂದಹಾರ್, ಲಾಹೋರ್ ಇವೆಲ್ಲ ೬೦-೭೦ ವರ್ಷಗಳ ಹಿಂದಿನ ತನಕವೂ ಉತ್ತರಾದೀ ಸಂಗೀತದ ಕ್ಷೇತ್ರಗಳಾಗಿದ್ದವು. ಈಗ ಅಲ್ಲಿ ಈ ಸಂಗೀತದ ನಾಮಾವಶೇಷವಾಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಭೀಮಸೇನ ಜೋಶಿ ಗುರುವಿನ ಶೋಧಕ್ಕೆ ಹೋದದ್ದು ಜಾಲಂಧರ, ಲಾಹೋರ್‌ಗಳಿಗೆ. ಉತ್ತರಾದಿ ಸಂಗೀತದ ಪಾಣಿನಿ ಎಂದೆನಿಸಿಕೊಂಡ ವಿಷ್ಣು ನಾರಾಯಣ ಭಾತಖಂಡೆ ಅವರ ಶಿಷ್ಯ ಶ್ರೀಕೃಷ್ಣ ರತನಜನಕರ – ಇವರೆಲ್ಲಾ ಸಂಗೀತದ ಪಾಠಶಾಲೆಯನ್ನು ಪ್ರಾರಂಭಿಸಿದ್ದು ಲಾಹೋರಿನಲ್ಲಿಯೇ. ಋಷಿತುಲ್ಯ ವಿಷ್ಣು ದಿಗಂಬರ ಪಲುಸ್ಕರರ ಗಾಂಧರ್ವ ಮಹಾವಿದ್ಯಾಲಯದ ಸ್ಥಾಪನೆಯಾದದ್ದು ಇಲ್ಲಿಯೇ. ಈ ಮೂವರು ಮಹಾರಾಷ್ಟ್ರದವರೇ! ಆದರೆ, ಇದೇ ಲಾಹೋರಿನಲ್ಲಿ ಅಬ್ದುಲ ಕರೀಮಖಾನರ ಶಿಷ್ಯೆ ರೋಶನಾರಾ ಬೇಗಮ್, ಸಾರಂಗೀ ನವಾಜ್ ಬುಂದು ಖಾನ್ ಇವರೆಲ್ಲ ವಿಭಜನೆಯ ನಂತರ ಪಾಕಿಸ್ತಾನಕ್ಕೆ ಹೋಗಿ ಮಮ್ಮಲ ಮರುಗಿದ್ದೂ ಇದೆ. ರೋಶನಾರಾ ಬಡತನದಲ್ಲಿ ನಗರಸಭೆಯ ಒಂದು ಆಸ್ಪತ್ರೆಯಲ್ಲಿ ಸತ್ತದ್ದು, ಬುಂದುಖಾನ್ ಬೇವಾರ್ಸಿ ಸ್ಥಿತಿಯಲ್ಲಿ ದಿನಗಳೆದದ್ದು ಅತ್ಯಂತ ದುಃಖದ ಮಾತುಗಳು. ಭಾರತದಲ್ಲೇ ಇದ್ದರೆ ಕನಿಷ್ಠ ಪಕ್ಷಕ್ಕೆ ಪದ್ಮವಿಭೂಷಿತರಾಗುತ್ತಿದ್ದರೋ ಏನೋ? ಉತ್ತರಾದಿ ಸಂಗೀತಕ್ಕೆ ಇಂತಹ ದುಃಸ್ಥಿತಿ ಬಂದದ್ದು ರಾಜಕೀಯ ಧುರೀಣರ ಧರ್ಮಾಂಧತೆಯಿಂದ ಎಂದು ವಿಷಾದದಿಂದ ನಮೂದಿಸಬೇಕಾಗುತ್ತದೆ. ಕಟ್ಟರ್ ಇಸ್ಲಾಮ್‌ವಾದದಲ್ಲಿ ಸಂಗೀತಕ್ಕೆ ಸ್ಥಾನವಿಲ್ಲ. ಅಲ್ಲಿಯ ಸೂಫಿ ಧರ್ಮಪ್ರಣಾಲಿಯ ಅವನತಿ ಕೂಡ ಇದಕ್ಕೆ ಪೂರಕ ಎಂದು ಹೇಳಬಹುದು. ಇಲ್ಲದಿದ್ದರೆ, ಕಾಬೂಲ-ಕಂದಹಾರದ ಖ್ಯಾತ ಗಾಯಕ ಮಹಮ್ಮದ್ ಹುಸೇನ್ ‘ಸಾರಂಗ’ ೪೦ ವರ್ಷಗಳ ತನಕವೂ ಪ್ರತಿವರ್ಷ ಮಕ್ಕಾ-ಮದೀನಾಕ್ಕೆ ಹೋದ ಹಾಗೆ ಮುಂಬಯಿ, ಪುಣೆ, ಕಲಕತ್ತಾ ಸಂಗೀತ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬರದೇ ಇರುತ್ತಿದ್ದರೇ?
ಸೂಫೀ ಸಂಗೀತ, ಕವ್ವಾಲಿ ಇವೆಲ್ಲ ಮುಸಲ್ಮಾನರ ಆಳಿಕೆಯಲ್ಲಿ ಊರ್ಜಿತಾವಸ್ಥೆಯನ್ನು ಮುಟ್ಟಿದ ಉತ್ತರಾದಿ ಸಂಗೀತದ ಕೆಲವು ಪರಂಪರೆಗಳು. ಔರಂಗಜೇಬ ಬಾದಶಹ (೧೬೧೮-೧೭೦೭) ಸಂಗೀತ ಕಲಾದ್ವೇಷಿಯೆಂದು ಜನಸಾಮಾನ್ಯರ ತಿಳಿವಳಿಕೆ. ರಾಗ, ಸಂಗೀತ ತಿಳಿಯದವನು ನಸುನಕ್ಕು ‘ನಾನು ಔರಂಗಜೇಬ! ’ ಎಂದು ಹೇಳುವ ರೂಢಿ ಇದೆ. ಆದರೆ ಈತ ಸಂಗೀತ ಬಲ್ಲವನಾಗಿದ್ದ, ಕಾವ್ಯಶಾಸ್ತ್ರವಿನೋದ ಪಾರಂಗತನಾಗಿದ್ದ ಮತ್ತು ಅತ್ಯಂತ ರಸಿಕ ಮನೋಜ್ಞನಾಗಿದ್ದನೆಂಬುದಕ್ಕೆ ದಾಖಲೆಗಳಿವೆ. ಸಂಗೀತ, ನೃತ್ಯ ಮತ್ತಿತರ ಆಸ್ಥಾನ ವಿದ್ವಾಂಸರೆಲ್ಲ ಬಾದಶಹನನ್ನು ಹೊಗಳುವುದೇ ತಮ್ಮ ಕಾಯಕವೆಂದು ಮಾಡಿಕೊಂಡಿದ್ದಾರೆ ಎಂದು ಈತ ಅರಿತುಕೊಂಡ, ಸಿಂಹಾಸನವನ್ನೇರಿದ ದಶಮಾನೋತ್ಸವದ ಕಾಲದಲ್ಲಿ, ಆಸ್ಥಾನವು ರಾಜಕೀಯಕ್ಕೆ ಸಂಬಂಧಪಟ್ಟ ಕಲಾಪಕ್ಕೆ ಇರಬೇಕೇ ಹೊರತು ಮನೋರಂಜನೆಗಾಗಿ ಅಲ್ಲ ಎಂಬ ಮಾತು ಮನದಟ್ಟಾದ ಕೂಡಲೇ ಆಸ್ಥಾನದ ಸಂಗೀತ ಕಚೇರಿಗಳಿಗೆ ಪೂರ್ಣವಿರಾಮ ಹಾಕಿದ. ಹಾಡುಗಾರಿಕೆಯನ್ನು ನಿಲ್ಲಿಸಿದರೂ ತನ್ನ ಆಸ್ಥಾನದ ಗಾಯಕರನ್ನು ಪ್ರತಿನಿತ್ಯ ‘ಕುರ್ನಿಸಾತ್’ ಮಾಡಿಸಲು ಈತ ಮರೆಯಲಿಲ್ಲ. ‘ಬ್ರಹ್ಮ, ವಿಷ್ಣು, ಮಹೇಶ, ಗಣೇಶ ಮತ್ತು ವ್ಯಾಸ’ ಇವರ ಕೃಪೆಯಿಂದ, ಹಿಂದೂಜ್ಯೋತಿಷ್ಯರಿಂದ ಮುಹೂರ್ತ ತೆಗೆಸಿ ಜುಲೈ ೨೩, ೧೬೫೮ರಂದು ಸಿಂಹಾಸನಾರೂಢನಾದ! ಇದನ್ನು ಇಲ್ಲಿ ಕೊಡುವ ಕಾರಣ ಈಗಲೂ ಚಲನೆಯಲ್ಲಿರುವ ಆಗಿನ ಕಾಲದಲ್ಲಿ ರಚಿಸಿದ ಒಂದು ಧ್ರುವಪದ ರಚನೆ. ಬಾಬರನಿಂದ ಬಹಾದೂರಶಾಹನವರೆಗೆ ಪ್ರತಿಯೊಬ್ಬ ಮೊಗಲರಾಜನೂ ಸಂಗೀತ ಕಲಿಯುತ್ತಿದ್ದ ,ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುವಂತಹುದು.
ಉತ್ತರಾದಿ ಪ್ರಕಾರದ ಮಾತೆತ್ತಿದಾಗ ಆಗಿನ ಕಾಲದ ಹಿಂದೂಮಹಾರಾಜರನ್ನು ನಾವು ಮರೆಯುವ ಹಾಗಿಲ್ಲ. ಇವರೆಲ್ಲರಲ್ಲಿ ೩೦ ವರ್ಷ (೧೪೮೬-೧೫೧೬) ರಾಜ್ಯವಾಳಿದ ಗ್ವಾಲಿಯರ ಸಂಸ್ಥಾನದ ಮಾನಸಿಂಹ ತೋಮರನ ಕಾಲದಲ್ಲಿಯೇ ಉತ್ತರಾದಿ ಸಂಗೀತ ಲೋಕಾಭಿಮುಖವಾಯಿತು. ಭಕ್ತಿ ಪ್ರಣಾಲಿಯ ಸೂಫಿ ಸಂತರ ಸಂಗೀತವನ್ನೂ ಪುಷ್ಟಿ ಮಾರ್ಗದ ಭಕ್ತಿಸಂಗೀತವನ್ನೂ ಬ್ರಜ್ ಭಾಷೆಗಳಲ್ಲಿ ಅನೇಕ ಕವಿಗಳಿಂದ ಬರೆಸಿ ಹಾಡುಗಾರರಿಂದ ಈತ ಹಾಡಿಸಿದ. ಇವನ ಕಾಲದಲ್ಲಿ ರಚಿಸಿದ ಧ್ರುವಪದಗಳು ಎಷ್ಟು ರುಚಿಕಟ್ಟಾಗಿದ್ದವೆಂದರೆ, ದಿಲ್ಲಿಯ ಮೊಗಲರೂ ಈ ಧ್ರುವಪದಗಳನ್ನು ತಮ್ಮದಾಗಿ ಮಾಡಿಕೊಂಡರು. ಸಂಗೀತದ ಇತಿಹಾಸದಲ್ಲಿ ಮಾನಸಿಂಹನು ಬ್ರಜ್ ಭಾಷೆಗಳ ಧ್ರುವಪದ, ಖ್ಯಾಲ, ಕವ್ವಾಲಿಗಳ ಪ್ರವರ್ತಕನೆಂದು ಹೆಸರಾಗಿದ್ದಾನೆ. ಬೈಜು, ತಾನಸೇನ್, ಸ್ವಾಮಿ ಹರಿದಾಸ, ಇವರೆಲ್ಲ ಪ್ರಸಿದ್ಧಿಗೆ ಬಂದುದು ಈ ತೋಮರನ ಕಾಲದಲ್ಲಿಯೇ! ಸರಸ್ವತಿಯ ಆರಾಧಕ ಬಿಜಾಪುರದ ಎರಡನೆ ಇಬ್ರಾಹಿಮ್ ಆದಿಲ್ ಶಾಹ (೧೫೫೬-೧೬೨೭) ಕೂಡ ತೋಮರನಂತೆ ಉತ್ತರಾದಿ ಸಂಗೀತಕ್ಕೆ ಭಾರಿ ಬೆಂಬಲ ಕೊಟ್ಟ.
ತಾನಸೇನ್ ಹಾಗೂ ಬೈಜೂ ಇವರ ಜುಗಲಬಂದಿ ಚಿತ್ರಿತವಾದ ‘ಬೈಜೂ ಬಾವರಾ’ ಕಾಲ್ಪನಿಕ ಚಿತ್ರಪಟ. ತಾನಸೇನ್ ಕಲಿತದ್ದು ಗ್ವಾಲಿಯರ ಆಸ್ಥಾನದಲ್ಲಿ ಮತ್ತು ರೀವಾ ಸಂಸ್ಥಾನದಲ್ಲಿ. ಮೊಗಲ ಸಾಮ್ರಾಜ್ಯದ ವಿಸ್ತಾರದಲ್ಲಿ ನಾಲ್ಕೂ ದಿಶೆಗಳಲ್ಲಿ ಪರಾಜಯ ಹೊಂದಿದ ರಾಜರನ್ನು ತನ್ನ ಮಾಂಡಲಿಕರನ್ನಾಗಿ ಮಾಡಿಕೊಂಡು ಅವರ ಆಸ್ಥಾನ ವಿದ್ವಾಂಸರನ್ನು ಆದರದಿಂದ ಬರಮಾಡಿಕೊಳ್ಳುವ ರೂಢಿ ಅಲ್ಲಾ ಉದ್ದೀನ್ ಖಿಲಜಿಯಿಂದ ಔರಂಗಜೇಬನ ಕಾಲದ ತನಕ ಅವ್ಯಾಹತವಾಗಿ ನಡೆಯಿತು. ಅಂದಿನ ಅಂಧಶ್ರದ್ಧೆಗಳ ಮೌಲ್ವಿಗಳ ವಿರೋಧವನ್ನು ಎದುರಿಸಿ ಸೂಫಿ ಧರ್ಮ ಸಂಸ್ಕೃತಿಯು ಉತ್ತರಾದಿ ಸಂಗೀತದ ಭದ್ರವಾದ ತಳಹದಿಯಾಯಿತು, ಆಳುವವರ ರಾಜಾಶ್ರಯದಿಂದ ಊರ್ಜಿತಾವಸ್ಥೆಗೆ ತಲುಪಿತು. ಮೀರಾಬಾಯಿ, ತುಲಸಿದಾಸರ ಭಕ್ತಿ ರಚನೆಗಳು ಅಥವಾ ವೈಷ್ಣವ ಸಂಪ್ರದಾಯದ ಚೈತನ್ಯ ಮಹಾಪ್ರಭುಗಳ ಪ್ರಭಾವ ಇದನ್ನು ಮತ್ತಷ್ಟು ಭದ್ರವಾಗಿಯೂ ಧರ್ಮಾತೀತವನ್ನಾಗಿಯೂ ಮಾಡಿತು. ಅಂದರೆ ಧರ್ಮನಿರಪೇಕ್ಷತೆಯ ಮೊದಲಿನ ಪಾಠಕ್ಕೆ ಸಂತ ಕಬೀರನೊಂದಿಗೆ ಕೆಲಮಟ್ಟಿಗೆ ಅಂದಿನ ಆಳುವ ಜನರೂ ಬೆಂಬಲವಿತ್ತಿದ್ದರು. ಇಂತಹ ಪ್ರಕ್ರಿಯೆಗಳಲ್ಲಿ ತಾನಸೇನನಿಂದ ಇಂದಿನ ಭೀಮಸೇನನವರೆಗೆ ಇದು ನಿರ್ಮಲ ಗಂಗಾಜಲದಂತೆ ಹರಿಯುತ್ತಾ ಬಂದಿದೆ……….

To be continued