ಹೆಮಲಿನ್ ಕುಟುಂಬದೊಂದಿಗೆ

ಹೆಮಲಿನ್ ಕುಟುಂಬದೊಂದಿಗೆ

ಅಂತರ್ರಾಷ್ಟ್ರೀಯ ವಿದ್ಯಾರ್ಥಿಗಳ ಶಿಕ್ಷಣದ ಚರ್ಚಾಕೂಟವೊಂದನ್ನು ಸಾಯರೆಕ್ಯೂಸಿನಲ್ಲಿ ಕರೆಯಲಾಗಿತ್ತು. ಭಾರತೀಯ ವಿದ್ಯಾರ್ಥಿಗಳ ವತಿಯಿಂದ ನನ್ನ ಆಯ್ಕೆಯಾಗಿತ್ತು. ಅಂದಿನ ಸಮಾರಂಭದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ, ಬೇರೆ ಬೇರೆ ಅಮೇರಿಕನ್ನರ ಮನೆಯಲ್ಲಿ ಊಟಕ್ಕೆ ಆಮಂತ್ರಿಸಿ ಸತ್ಕರಿಸಲಾಗುವದೆಂದು ತಿಳಿಸಲಾಗಿತ್ತು. ಹೆಮಲಿನ್ ದಂಪತಿಗಳ ಅತಿಥಿಯಾಗಿ ಹೋಗುವ ಸುಯೋಗ ನನಗೆ ಪ್ರಾಪ್ತವಾಯಿತು. ಇದೊಂದು ಸುಯೋಗವೆಂದು ಅಭಿಮಾನದಿಂದ ಹೇಳಬಲ್ಲೆ. ಏಕೆಂದರೆ ಅಮೇರಿಕೆಯಲ್ಲಿ ಸಾಮಾನ್ಯವಲ್ಲದ ಕುಟುಂಬವೊಂದರಲ್ಲಿ ನಿಜದರ್ಶನ ನನಗಾಯಿತು. ಶ್ರೀ ಡಿಕ್ ಹೆಮಲಿನ್ನರು ತಾರಾಗಣಗಳಲ್ಲಿ ಮಾನವ ನಿರ್ಮಿತ ವಾಹನಗಳನ್ನು ಕಳಿಸುವ ವಿಭಾಗದ ಭಾರೀ ಅಂತರಿಕ್ಷ ಎಂಜನಿಯರರಾಗಿದ್ದಾರೆ (space-engineer). ಹುಡುಗನಂತೆ ಕಾಣುವ ಹೆಮಲಿನ್ ನನ್ನನ್ನು ಕರೆಯಲು ಬಂದಾಗ, ಇವರು ಇಷ್ಟು ದೊಡ್ಡ ನೌಕರಿಯಲ್ಲಿದ್ದಾರೆಂಬುದನ್ನು ನಂಬಲು ಸಾಧ್ಯವಾಗುವಂತಿರಲಿಲ್ಲ. ಅವರ ಅತ್ಯಾಧುನಿಕ (Sport-car) ಕಾರಿನಲ್ಲಿ ಅವರ ಮನೆಗೆ ಹೊರಟೆವು.

ದಾರಿಯಲ್ಲಿ ಆ ಮಾತು ಈ ಮಾತು ಆಡುತ್ತ, ತನಗೆ ಸಾಕುಪ್ರಾಣಿಗಳ ಮೇಲೆ ತುಂಬ ಪ್ರೇಮ; ತಾನು ಸಾಕಿದ ಕುದುರೆಗಳನ್ನು ತೋರಿಸುತ್ತೇನೆ ಎಂದು ಏನೇನೋ ಅಸಂಬದ್ಧ ಮಾತು ಹೇಳಿದ. ಮನೆ ಸಮೀಪಿಸುತ್ತಿದ್ದಂತೆ ಕಾದು ನಿಂತಿದ್ದ ಅವರ ಮನೆಯ ಹುಡುಗರು ಕಾಣಿಸಿದರು. ಮನೆಗೆ ಹೋಗುವ ಮೊದಲು, ಡಿಕ್ ತಮ್ಮ ಕುದುರೆಗಳನ್ನು ತೋರಿಸುತ್ತೇನೆಂದು ಕಾರನ್ನು ಲಾಯದತ್ತ ಹೊರಳಿಸಿದ. ಸರಿ, ಮಕ್ಕಳೂ ಹೆಚ್ಚಿನ ಹುಮ್ಮಸ್ಸದಿಂದ ಮುಂದಾಗಿ ಓಡಿದರು. ತಮ್ಮ ತಮ್ಮ ಕುದುರೆಗಳತ್ತ ಹೋಗಿ ಅವನ್ನು ಮಾತಾಡಿಸಿ, ಮೇವು ತಿನ್ನಿಸಿ ಮದ್ದಿಸಲಾರಂಭಿಸಿದರು. ತಂದೆಯ ಕುದುರೆಯ ಮೇಲೆ ತಾವು ಸವಾರಿಮಾಡಬಹುದೇ ಎಂದು ಕೇಳಿದ ಎರಡು ಹಿರಿಯ ಮಕ್ಕಳು ಕುದುರೆಯನ್ನೇರಿಯೇ ಬಿಟ್ಟರು! ಬಹಳ ಹೊತ್ತು ನಿಂತು ನಿಂತು ಬೇಸರ ಬಂದಿರಬೇಕು ಕುದುರೆಗೆ, ಅಂತೆಯೇ ಹೊರಗೆ ಬಂದೊಡನೆ ನಾಗಲೋಟದಿಂದ ಸುತ್ತ ಓಡಲಾರಂಭಿಸಿತು. ಡಿಕ್ ಒಳ್ಳೆ ಅಭಿಮಾನದಿಂದ ತಮ್ಮ ಕುದುರೆಯನ್ನು, ತಮ್ಮ ಮಕ್ಕಳನ್ನು ನೋಡುತ್ತಿದ್ದರು.

ಭಾರತದಲ್ಲಿ ಕಾಡುಪ್ರಾಣಿಗಳು ಮತ್ತು ಸಾಕುಪ್ರಾಣಿಗಳು ಬಹಳವೆಂದು ಡಿಕ್ ಓದಿ ತಿಳಿದುಕೊಂಡಿದ್ದರಂತೆ. ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲೆಂದು ನನ್ನನ್ನು ಅತಿಥಿಯಾಗಿ ಬರಮಾಡಿಕೊಂಡಿದ್ದರಂತೆ.

“ನಿಮ್ಮ ದೇಶದಲ್ಲಿ ಆನೆಗಳು ಬಹಳಲ್ಲವೇ?” ಎಂದು ಪ್ರಾರಂಭಿಸಿದರು.

“ನಾನು ಮೈಸೂರಿನವನು. ಅದು ಆನೆಗಳ ತವರೂರು.” ಎಂದಾಗ ಅವರ ಉತ್ಸಾಹ ಉಕ್ಕೇರಿತು. ಪ್ರಶ್ನೆಗಳ ಸುರಿಮಳೆಗೆ ಪ್ರಾರಂಭವಾಯಿತು.

“ಜನರು ಮರಿ–ಆನೆಗಳನ್ನೇ ಖರೀದಿಸುತ್ತಾರೋ ಅಥವಾ ಬೆಳೆದ ಆನೆಗಳನ್ನು ಕೊಳ್ಳುತ್ತಾರೋ?” “ಕುದುರೆ, ಎತ್ತುಗಳಂತೆ ಆನೆಗಳನ್ನು ಮಾರುವದಾಗಲಿ, ಕೊಳ್ಳುವದಾಗಲಿ ವಿರಳ. ಕಾಡಾನೆಗಳು ದಟ್ಟವಾದ ಅರಣ್ಯದಲ್ಲಿ ಹಿಂಡುಹಿಂಡಾಗಿ ವಾಸಿಸುರುತ್ತವೆ. ಹೀಗಾಗಿ ಅವನ್ನು ಹಿಡಿಯಲು ಬಲು ಕಷ್ಟದ ಕೆಲಸ. ಆಗಾಗ `ಖೆಡ್ಡಾ’ ಪದ್ಧತಿಯಿಂದ ಆನೆಗಳನ್ನು ಹಿಡಿದು ಪಳಗಿಸಿ ತರಬೇತಿ ಕೊಡುತ್ತಾರೆ.”

“ಖೆಡ್ಡಾ ಪದ್ಧತಿಯೆಂದರೇನು ಕ್ರಿಶ್?” ಡಿಕ್ ಕೇಳಿದ.

“ಆನೆಗಳನ್ನು ಹಿಡಿದು ಪಳಗಿಸುವುದು ಬಹಳ ಸೂಕ್ಷ್ಮ ಮತ್ತು ಆಯಾಸದ ಕೆಲಸ. ಹತ್ತಾರು ಜನ ದಟ್ಟಾರಣ್ಯದಲ್ಲಿ ಅಡಗಿ ಕುಳಿತು, ಆನೆಗಳ ಚಲನವಲನಗಳನ್ನು ಪರಿಶೀಲಿಸುತ್ತಾ, ಅವು ಮೇಯುವ, ನೀರು ಕುಡಿಯುವ, ವಿಶ್ರಾಂತಿಸುವ ಸ್ಥಳಗಳನ್ನು ಗುರುತುಮಾಡಿಕೊಳ್ಳುತ್ತಾರೆ. ಆಮೇಲೆ ಬಲವಾದ ಸಂಘಟನೆಯೊಂದು ತಯಾರಾಗುತ್ತದೆ. ಬೇರೆ ಬೇರೆ ಸ್ಥಳಗಳಲ್ಲಿ ಆಳವಾದ ಕುಳಿಗಳನ್ನು ತೋಡುತ್ತಾರೆ. ಅರಣ್ಯದ ನಾಲ್ಕೂ ಕಡೆಯಿಂದ ಸಾವಿರಾರು ಜನರು ಢೋಲು, ನಗಾರಿ, ಕೊಂಬು, ಕಹಳೆ ಮೊದಲಾದ ವಾದ್ಯಗಳ ಹೆಚ್ಚಿನ ಗದ್ದಲ ಮಾಡುತ್ತ ಆನೆಗಳ ವಾಸಸ್ಥಳದತ್ತ ಸಾಗುತ್ತಾರೆ. ಆನೆಗಳೆಲ್ಲ ಈ ಸದ್ದಿಗೆ ಕಂಗಾಲಾಗಿ ಅರಣ್ಯದ ಮಧ್ಯ ಧಾವಿಸುತ್ತವೆ. ಹೀಗೆ ಬರುವ ಆನೆಗಳಿಗೆ ಮುಚ್ಚಿದ ಕುಳಿಗಳು ಕಣ್ಣಿಗೆ ಕಾಣದೇ ಅವುಗಳಲ್ಲಿ ಕುಸಿಬೀಳುತ್ತವೆ. ಆಳವಾದ ಕುಳಿಗಳಲ್ಲಿ ಬಿದ್ದು ಅಸಹಾಯವಾದಾಗ ಅವು ಗಂಟಲು ಬಿರಿಯುವಂತೆ ಘೀಳಿಡುತ್ತವೆ. ಕಾಡಾನೆಗಳಿಗೆ ಅದ್ಭುತ ಶಕ್ತಿಯಿರುತ್ತದೆ. ಆದ್ದರಿಂದ ಅವುಗಳ ಶಕ್ತಿಯನ್ನು ಕುಂದಿಸಲು ಹಲವಾರು ದಿನ ಅವಕ್ಕೆ ಉಪವಾಸ ಹಾಕುತ್ತಾರೆ. ಮಾನವನ ಅಪ್ಪಣೆಯಂತೆ ನಡೆದರೆ ಸಾಕಾನೆಗೆ ಆಹಾರ ದೊರೆಯುತ್ತದೆ. ತನಗೂ ಏಕೆ ದೊರೆಯಬಾರದು ಎಂಬ ವಿವೇಕ ಕಾಡಾನೆಗೆ ಬಂದಾಗ ಅದು ಪಳಗಿದೆ ಎಂದು ತಿಳಿಯಬೇಕು.” ಎಂದೆಲ್ಲಾ ನನ್ನ ಜ್ಞಾನಭಾಂಡಾರ ಒಡೆದು ನಾನು ಡಿಕ್ನ ಪ್ರಶ್ನೆಗೆ ವಿವರಿಸಿ ಉತ್ತರ ಕೊಡಬೇಕಾಯಿತು.

“ಮದ್ದಾನೆಗಳನ್ನು ಹಿಡಿಯಲು ಇಷ್ಟು ತೊಂದರೆಯಾದರೆ ಮರಿಯಾನೆ (ಚಿಟ್ಟಾನೆ)ಗಳನ್ನು ಹಿಡಿದು ಪಳಗಿಸುವ ಉಪಾಯವಿಲ್ಲವೇ?” ಡಿಕ್ ಮತ್ತೆ ಕೇಳಿದ.

“ಭಾರತೀಯ ತಾಯ್ತಂದೆಗಳಂತೆ ಆನೆಗಳೂ ಸಹ ತಮ್ಮ ಮಕ್ಕಳ (ಮೂವತ್ತು-ಮೂವತ್ತೈದು ವರ್ಷಗಳ ವರೆಗೂ) ಚಿಂತೆಯನ್ನು ಬಹಳಷ್ಟು ವಹಿಸಿಕೊಳ್ಳುತ್ತವೆ. ಹಿಂಡನ್ನಗಲಿ ಹೋಗಲು ಬಿಡುವುದಿಲ್ಲ. ಒಂದು ಮರಿಗೆ ಏನಾದರೂ ಅಪಘಾತ ಸಂಭವಿಸಿದರೆ ಇಡೀ ಹಿಂಡೇ ಸಹಾಯಕ್ಕೆ ಧಾವಿಸುತ್ತದೆ. ಒಮ್ಮೆ ಓಡುವ ಕಾರೊಂದು ಆನೆಯ ಮರಿ ಅಡ್ಡ ಬಂದದ್ದರಿಂದ ಅದಕ್ಕೆ ಬಡಿಯಿತು. ಮರಿ ಘೀಳಿಟ್ಟಿತು. ಕೂಡಲೇ ಹತ್ತಾರು ಆನೆಗಳು ಓಡಿ ಬಂದು ಕಾರಿನವನನ್ನು ಕೊಂದು, ಕಾರನ್ನು ಚೂರುಚೂರು ಮಾಡಿದವಂತೆ! ಆನೆಗೆ ಜ್ಞಾಪಕಶಕ್ತಿಯೂ ಚೆನ್ನಾಗಿರುತ್ತದಂತೆ. ಎಂದೋ ಆದ ಅನ್ಯಾಯಕ್ಕೆ ಎಷ್ಟೋ ಕಾಲದ ನಂತರವೂ ಮುಯ್ಯ ತೀರಿಸಿಕೊಳ್ಳುತ್ತದಂತೆ.” ಎಂದು ಕೆಲವು ಘಟನೆಗಳನ್ನೂ ಹೇಳಿದೆ. ಡಿಕ್ ಇಷ್ಟಕ್ಕೆ ತೃಪ್ತನಾಗದೇ.

“ಜನರು ಆನೆಗಳನ್ನು ಸಾಕುಪ್ರಾಣಿಗಳನ್ನಾಗಿ ಮಾಡಿದ್ದಾರೆಯೇ? ಆನೆಗಳಿಗೆ ಮಕ್ಕಳೆಂದರೆ ಅಷ್ಟು ಪ್ರೀತಿಯಿದೆಯೇ? ವಿದ್ಯಾರ್ಥಿಗಳು ಆನೆಗಳ ಮೇಲೆ ಕುಳಿತೇ ಶಾಲೆ–ಕಾಲೇಜುಗಳಿಗೆ ಹೋಗುತ್ತಾರೆಯೇ? (ಕಾರುಗಳು ಕಡಿಮೆಯಿದ್ದ ಭಾರತದಲ್ಲಿ ಆನೆಗಳು ಕಾರುಗಳ ಕೆಲಸ ಮಾಡುತ್ತವೆಂದು ಆತ ನಂಬಿರಬೇಕು!) ಕುದುರೆಯ ರೇಸಿನಂತೆ ಆನೆಯ ರೇಸ ನಡೆಯುವುದೇ? ಆನೆ, ಯಜಮಾನನನ್ನು ಚೆನ್ನಾಗಿ ಪ್ರೀತಿಸುವದೇ? ಊರು–ಶ{ಹ}ರಗಳಲ್ಲಿ ಅದರ ಮುಖ್ಯ ಆಹಾರವೇನು? ಒಂದು ಆನೆ ಸಾಕಲು ತಿಂಗಳಿಗೆ ಸರಾಸರಿ ಎಷ್ಟು ಖರ್ಚು ಬರುವುದು? ಹೆಣ್ಣಾನೆ ವರ್ಷದಲ್ಲಿ ಎಷ್ಟು ಮರಿ ಕೊಡುತ್ತದೆ? ಕ್ರಿಶ್, ನೀನು ಇಲ್ಲಿಂದ ಮರಳಿದ ಮೇಲೆ ಮಹಾರಾಜನಂತೆ ಆನೆಯ ಮೇಲೆ ಸವಾರಿಮಾಡುವೆಯಾ? … ” ಇತ್ಯಾದಿ ಇತ್ಯಾದಿ ಪ್ರಶ್ನೆಗಳ ಮಳೆಯನ್ನೇ ಸುರಿಸಿದನು. ಅವನು ಎಲ್ಲ ಪ್ರಶ್ನೆಗಳಿಗೆ ನನ್ನಿಂದ ಶಕ್ಯವಿದ್ದಷ್ಟು ಸಮರ್ಪಕ ಉತ್ತರಗಳನ್ನು ಕೊಡುತ್ತ …

“ಆನೆಗಳನ್ನು ಕಷ್ಟತರ ಕೆಲಸಗಳಿಗೆ ಉಪಯೋಗಿಸುವ ರೂಢಿಯಿದೆ. ಆನೆಗಳನ್ನು ಸಾಕುವವರು ತುಂಬ ವಿರಳ. ಅದರ ಡೊಳ್ಳುಹೊಟ್ಟೆ ತುಂಬುವದರಲ್ಲಿ ಯಾರೊಬ್ಬರ ಮನೆಮಾರು ಎಲ್ಲಾ ದಿವಾಳಿಯಾದೀತು.” ಎಂದು ನಾನು ಹೇಳಿದಾಗ ಅವನಿಗೆ ಸ್ವಲ್ಪ ನಿರಾಸೆಯೇ ಆಯಿತು.

ಸರಿ, ಮಧ್ಯಂತರ ಈ ಅವಾಂತರ ಮುಗಿಯುತ್ತಲೆ ಮನೆಯತ್ತ ಸಾಗಿದೆವು. ಮನೆ ಸಮೀಪಿಸಿದಂತೆ ಡಿಕ್ರ ಕಿರಿಮಗಳು ಓಡಿ ಹೋಗಿ ಒತ್ತು–ಗುಂಡಿ (push-button) ಯನ್ನು ಒತ್ತಿದಳು. ಕಾರಿನ ಗ್ಯಾರೇಜಿನ ಬಾಗಿಲು ತಂತಾನೇ ತೆಗೆದುಕೊಂಡು ಕಾರನ್ನು ಬರಮಾಡಿಕೊಂಡು ತಿರುಗಿ ಮುಚ್ಚಿಕೊಂಡಿತು. ಇದೆಲ್ಲ `ಇಲೆಕ್ಟ್ರಾನಿಕ್’ ಪದ್ಧತಿಯಿಂದ ನಡೆಯುತ್ತದೆಂದು ಡಿಕ್ ಹೇಳಿದ. ಗ್ಯಾರೇಜ ಒಂದು ಕಾರಖಾನೆಯಂತೇ ಇತ್ತು. ಕಾರಿನ ದುರಸ್ತಿಗೆ ಬೇಕಾದ ಎಲ್ಲ ಭಾಗಗಳು ಇದ್ದವು. ಕಾರು-ದುರಸ್ತಿ ಅಮೇರಿಕೆಯಲ್ಲಿ ವಿಪರೀತ ತುಟ್ಟಿಯಿರುವದರಿಂದ ಅಮೇರಿಕನ್ನರು ಆದಷ್ಟು ರಿಪೇರಿಯನ್ನು ಸ್ವತಃ ಮಾಡುತ್ತಾರೆ.

ಡಿಕ್ರ ಪತ್ನಿ ಹೆಲನ್ ನಮಗಾಗಿ ಕಾದಿದ್ದಳು. ಮಕ್ಕಳು ಮುಂದಾಗಿ ಓಡಿ ಹೋಗಿ ತಾಯಿಗೆ ಕುದುರೆ-ಸವಾರಿಯ ವಿಷಯವನ್ನು ವಿವರಿಸಿದ್ದರು. ಪರಸ್ಪರ ಪರಿಚಯದ ನಂತರ ಹೆಲನ್ನಳು-

“ಕ್ರಿಶ್, ನಿನಗೆ ಮಕ್ಕಳ ಪರಿಚಯವಾಗಿದೆಯೇ?” ಎಂದು ಕೇಳಿದಳು.

“ಇಲ್ಲ”ವೆಂದು ಉತ್ತರಿಸಿದೆ.

“ನನಗೆ ಗೊತ್ತು, ಡಿಕ್ಕನಿಗೆ ಕುದುರೆ, ಆನೆಗಳು ತಲೆಯಲ್ಲಿ ಹೊಕ್ಕವೆಂದರೆ ಜಗತ್ತೇ ಮರೆಯಾಗುತ್ತದೆ.” ಎಂದು ನಸುನಗುತ್ತ ಗಂಡನ ಕಡೆ ನೋಡಿದಳು. ಗಂಡನು ಇದೇನು ತನಗೆ ಹೊಸದಲ್ಲವೆಂದು ವಿಚಾರಮಗ್ನನಂತೆಯೇ ಇದ್ದ.

ಹಿರಿಯ ಮಗಳು ಡಾರ್ಬೆರಾಳಿಗೆ ತಾಯಿಯದೇ ನಗುಮುಖ. ಏಳೇ ವರ್ಷ ವಯಸ್ಸಾದರೂ ಹತ್ತು ವರ್ಷದವಳಂತೆ ಕಾಣುತ್ತಾಳೆ. ಎರಡನೇ ಮಗಳು ಡಾಯೆನಾ ಬಳಕಲು ದೇಹದವಳು; ಗಂಭೀರಸ್ವಭಾವದವಳು. ನಾಲ್ಕು ವರ್ಷದ ಡೆವಿಸ್ಗೆ ತಾಯಿಯ ಸೌಂದರ್ಯವಾಗಲಿ ತಂದೆಯ ಬುದ್ಧಿಯಾಗಲಿ ಬಂದಂತಿರಲಿಲ್ಲ. ಕೊನೆಯ ಮಗಳು ಡೆನಿಸ್ಳು ಇನ್ನೂ ಎರಡು ವರ್ಷದ ಮಗು. ತೊದಲು ಮಾತನಾಡುತ್ತಿದ್ದಳು. ಕೆಲವು ಅಮೇರಿಕನ್ನರಿಗೆ ತಮ್ಮ ಕುಟುಂಬದವರ ಹೆಸರುಗಳೆಲ್ಲ ಒಂದೇ ಅಕ್ಷರದಿಂದ ಪ್ರಾರಂಭಿಸಬೇಕು ಎನ್ನುವ ಹುಚ್ಚು ಬಹಳ. ನನ್ನ ಸ್ನೇಹಿತರೊಬ್ಬರ ಮನೆಯಲ್ಲಿ ಎಲ್ಲರ ಹೆಸರುಗಳೂ `ಜೆ’ದಿಂದ ಪ್ರಾರಂಭವಾಗುತ್ತವೆ. ಜೇನ್, ಜೇಕ್, ಜೋಯ್ಸ್, ಜುಡಿ, ಜಿಮ್ ಮತ್ತು ಜೆರಿ, ಅಧ್ಯಕ್ಷ ಜಾನ್ಸನ್ನರ ಕುಟುಂಬದವರ ಹೆಸರುಗಳು–ಲಿಂಡನ್, ಲುಸಿ, ಲಿಂಡಾ ಮತ್ತು ಲೇಡಿ ಬರ್ಡ (ಶ್ರೀಮತಿ ಜಾನ್ಸನ್ನರ ಹೆಸರು) ಎಂದಿದೆ. ಡಿಕ್ಕರ ಕುಟುಂಬದಲ್ಲಿ ಎಲ್ಲ ಮಕ್ಕಳ ಹೆಸರೂ `ಡಿ’ಯಿಂದ ಸುರುವಾಗುವುದರಲ್ಲಿ ಆಶ್ಚರ್ಯವಿಲ್ಲ. ಡೆಬಿ (ಡರ್ ಬೆರಾ)ಗೆ, ಭಾರತದ ಬಗ್ಗೆ ಒಂದು ಪ್ರಬಂಧವನ್ನು ಬರೆಯಲು ಹೇಳಲಾಗಿತ್ತಂತೆ. ಆದ್ದರಿಂದ ನನ್ನ ಬರವನ್ನು ಬಹಳ ಆತುರತೆಯಿಂದ ನಿರೀಕ್ಷಿಸುತ್ತಿದ್ದಳಂತೆ. ಕಾಗದ ಮತ್ತು ಪೆನ್ಸಿಲ್ಗಳನ್ನು ತಂದು, ನನ್ನ ಮುಂದೆ ಆರೂಢಳಾಗಿ `ಸಂದರ್ಶಕ’ಳಂತೆ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದಳು.

“ಭಾರತೀಯ ವಿದ್ಯಾರ್ಥಿಗಳ ಉಡುಪು ಏನು? ಅವರು ಎಂತಹ ವಾಹನಗಳ ಮೇಲೆ ಶಾಲೆಗೆ ಹೋಗುತ್ತಾರೆ? ಅವರ ಶಾಲೆಯ `ಯುನಿಫಾರ್ಮ’ದ ಬಣ್ಣ ಯಾವುದು? ಅವರ ಆಟಗಳು ಯಾವವು? ಅವರು ಯಾವ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಾರೆ?”

ಇತ್ಯಾದಿ, ಇತ್ಯಾದಿ ನೂರಾರು ಪ್ರಶ್ನೆಗಳ ವಿವರ ಆಕೆಗೆ ಬೇಕಾಗಿತ್ತು. ರೇಡಿಯೋ ಗಡಿಯಾರದ ಮಧುರ ಧ್ವನಿಗೆ ಹಾಸಿಗೆ ಬಿಟ್ಟೆದ್ದು, ಹಲ್ಲುಗಳನ್ನು `ಬ್ರಶ್’ ಮಾಡಿ, ಹಣ್ಣಿನ ರಸ, ತತ್ತಿ, ಚಿಕನ್, ಬ್ರೆಡ್, ಹಾಲುಗಳ `ನಾಶ್ತಾ’ ಮಾಡಿ, ಕಾರಿನಲ್ಲಿಯೋ ಮೋಟಾರಿನಲ್ಲಿಯೋ ಶಾಲೆಗೆ ಹೋಗಿ, ಅಲ್ಲಿ ವಿವಿಧ ಬಗೆಯ ನಿರ್ಮಾಪಕ (ನಿರ್ಮಾಣದ constructive ) ಆಟ–ಪಾಟಗಳಲ್ಲಿ ಭಾಗವಹಿಸಿ, ವಾಚನಾಲಯಗಳಿಗೆ ಹೋಗಿ, ತಮ್ಮ ವಯಸ್ಸಿಗೆ ತಕ್ಕಂತಿರುವ ಪುಸ್ತಕಗಳನ್ನು ಓದಿ, ಬಗೆಬಗೆಯ `ಇಲೆಕ್ಟ್ರಾನಿಕ್’ ಆಟಿಗೆಗಳಿಂದ ಆಡುವವರಿಗೆ ಹಸಿದ ಹೊಟ್ಟೆಗೆ ಅಷ್ಟು ರೊಟ್ಟಿಯನ್ನೊ, ತಂಗಳ ಅನ್ನವನ್ನೊ ಹಾಕಿ, ಅಣ್ಣನ ಹಳೇ ಚೊಣ್ಣವನ್ನು ಧರಿಸಿ, ಬರಿಗಾಲಿನಿಂದ ಶಾಲೆಗೆ–ಚಳಿಗೋ, ಮಳೆಗೋ, ಬಿಸಿಲಿಗೋ ಮೈಯೊಡ್ಡಿ–ಓಡುತ್ತ ಹೋಗಿ, ಮಣ್ಣಿನಲ್ಲಿ ಕುಳಿತು ಗೋಲಿಯಾಟವನ್ನೊ, ಚಿನ್ನಿಫಣಿಯನ್ನೊ ಆಡುವ ನಮ್ಮ ವಿದ್ಯಾರ್ಥಿಗಳ ಜೀವನವನ್ನು ಹೇಗೆ ವಿವರಿಸಬೇಕೆಂದು ಸಮಸ್ಯೆಯಾಯಿತು. ಅವರಿಗೆ ತಿಳಿಯುವಂತೆ ಭಾರತೀಯ ಆಟಗಳೆಲ್ಲ ಖರ್ಚಿಲ್ಲದವುಗಳೆಂದೆ, ಹಾಳೆಯಿಂದ ಹಡಗ, ಲಾಂಚ್, ಪಟಾಕ್ಷಿ ಮಾಡಿ ಆಡುತ್ತಾರೆಂದೆ. ಆವರಿಗೆ ಅವನ್ನು ಮಾಡಿಯೂ ತೋರಿಸಿದೆ. ಹುಡುಗರಿಗೆಲ್ಲಾ ಬಹಳ ಖುಷಿಯಾಯಿತು. ಕಬ್ಬಡ್ಡಿ (ಹುಡುತುತು) ಖೋ ಖೋ, ತಿಳ್ಳಿ, ಸರಬಡಗಿ, ಗಿಡಮಂಗ, ಕುಂಟಲ್ಪಿ, ಆಣಿಕಲ್ಲಾಡೋದು, ಅಸಿಬಿಸಿ, ಕಣ್ಣುಮುಚ್ಚಣಿಕಿ, ಮೊದಲಾದ ನಮ್ಮಲ್ಲಿಯ ಗಂಡುಹುಡುಗರು, ಹೆಣ್ಣುಹುಡುಗರ ಆಟಗಳನ್ನು ನನಗೆ ಗೊತ್ತಿದಷ್ಟು ವಿವರಿಸಿ ಹೇಳಿದೆ. ಇದನ್ನು ಕೇಳಿ, ಅವರಿಗೆ ತಮ್ಮ ಆಟಿಗೆಗಳನ್ನು ತೋರಿಸುವ ಹುಕಿ ಬಂದಿತು. ಕೂಡಲೇ–

“ಮೊಮ್, ಕ್ರಿಶ್ನಿಗೆ ಒಂದು ನಿಮಿಷದಲ್ಲಿ ನಮ್ಮ ಆಟಿಗೆಗಳನ್ನು ತೋರಿಸಿಕೊಂಡು ಬರೆಲೇ?” ಎಂದು ಡೇವಿ ಕೇಳಿದ. ಮಕ್ಕಳಿಗೆ ನಿರುತ್ಸಾಹಗೊಳಿಸುವ ಮನಸ್ಸಿಲ್ಲದೆ ತಾಯಿ ಒಪ್ಪಿಗೆಯಿತ್ತಳು. ಸರಿ, ಮಕ್ಕಳು ಹಿಗ್ಗಿ, ನಾನು ತಾನೆಂದು ನನ್ನ ಕೈ ಹಿಡಿದು ಎಳೆಯುತ್ತ ಕೆಳಮನೆಗೆ (basement) ಹೊರಟರು. ಮೆಟ್ಟಿಲು ಇಳಿದ ಕೂಡಲೇ ಸುಸಜ್ಜಿತವಾದ ಕೋಣೆ. ವಿವಿಧ ತರದ ಸೆರೆಗಳನ್ನು ಇಟ್ಟಿದ್ದರು. ಪಕ್ಕದ ಕೋಣೆಯಲ್ಲಿ ಬಟ್ಟೆ ತೊಳೆಯುವ. ಒಣಗಿಸುವ ಮತ್ತು ಇಸ್ತ್ರೀ ಮಾಡುವ ಯಂತ್ರಸಲಕರಣೆಗಳಿದ್ದವು. ನಂತರ ಬಂದಿತು ದೊಡ್ಡದೊಂದು ಹಾಲು. ಬಣ್ಣ ಬಣ್ಣದ ಕಾರು, ಸಾಯಕಲ್, ವಿಮಾನಗಳಿದ್ದವು. ಪ್ರತಿಮಕ್ಕಳು ತಮ್ಮ ತಮ್ಮ ವಾಹನಗಳನ್ನು ನಡೆಸಿ ತೋರಿಸಿದವು. ಡಾಯನಾಳು-

“ಕ್ರಿಶ್, ನಿನಗೆ ನನ್ನ ಮೋಟಾರ ನಡೆಸಲು ಬರುತ್ತದೆಯೇ” ಎಂದು ಕೇಳಿದಳು ಕೂಡಲೇ ಸೋಲನ್ನೊಪ್ಪಿಕೊಳ್ಳದೆ ಕೋಟು ತೆಗೆದಿಟ್ಟು ಮೋಟಾರು ಪ್ರಾರಂಭಿಸಿಯೇಬಿಟ್ಟೆ. ಮಕ್ಕಳೆಲ್ಲಾ ಚಪ್ಪಾಳೆ ತಟ್ಟಿದವು. ಡಾರ್ಬೆರಾ-

“ಕ್ರಿಶ್, ನಿನ್ನ ಭಾರತೀಯ ಆಟವೊಂದನ್ನು ತೋರಿಸಲ್ಲ?” ಎಂದು ನೆನಪು ಮಾಡಿದಳು. ನಾನೊಬ್ಬನೇ ಒಂದು ಪಕ್ಷ, ಉಳಿದವರೆಲ್ಲ ಇನ್ನೊಂದು ಪಕ್ಷ ಮಾಡಿ ಕಬ್ಬಡಿ ಕಬ್ಬಡಿ, ಆಟವನ್ನು ವಿವರಿಸಿದೆ. ಸರಿ `ಕಬಡಿ, ಕಬಡಿ’ ಎನ್ನುತ್ತ ನಾನು ಹೊರಡುವದೇ ತಡ, ಒಬ್ಬಳು ಶರ್ಟನ್ನು, ಇನ್ನೊಬ್ಬಳು ಟೈಯನ್ನು, ಇನ್ನೊಬ್ಬನು ಕಾಲನ್ನು ಭದ್ರವಾಗಿ ಅವಚಿಕೊಂಡುಬಿಟ್ಟರು! ಅವರ ವಿಜಯಕ್ಕಾಗಿ ನಾನು ಸೋಲಬೇಕಾಯಿತು. ಅವರ ಚೀರಾಟ, ಜಿಗಿದಾಟಗಳಿಗೆ ಮಿತಿಯೇ ಇರಲಿಲ್ಲ.

ಬಹಳ ಹೊತ್ತಿನ ತನಕ ಅತಿಥಿ ಬಾರದ್ದರಿಂದಲೂ, ಕೆಳಮನೆಯ ನಮ್ಮ ಗದ್ದಲ ಮೇಲಕ್ಕೂ ತಲುಪಿದ್ದರಿಂದಲೂ–ಮೇಲಿದ್ದವರೂ ಕೆಳಗೆ ಬರುವಂತಾಯಿತು.

ಇನ್ನೊಮ್ಮೆ ಆಟ ಪ್ರಾರಂಭವಾಯಿತು. ಡಿಕ್, ಹೆಲನ್ರಿಗೆ ಮೋಜೆನಿಸಿ ಆವರೂ ಆಟದಲ್ಲಿ ಸೇರಿದರು! ಮಕ್ಕಳೆಲ್ಲಾ ಕ್ರಿಶ್ನ ಪಾರ್ಟಿ ಸೇರಿ, ಡೆಡ್ ಮತ್ತು ಮೊಮ್ (ತಂದೆ-ತಾಯಿ)ರನ್ನು ಸೋಲಿಸಿಬಿಟ್ಟರು. ದಣಿದ ಆಟಗಾರರಿಗೆ ಕೊಕೊಕೋಲ, ಬಿಸ್ಕತ್ತುಗಳು ಬಂದವು. ಕೆಳಮನೆಯ ಕೋಲಾಹಲ ಉಪ್ಪರಿಗೆಯ ಮೇಲೆ ಇರುತ್ತಿದ್ದ ಡಿಕ್ ಮತ್ತು ಹೆಲನ್ನರ ತಾಯಂದಿರ ಕಿವಿಗೂ ಮುಟ್ಟಿ, ಅವರೂ ಸಾವಕಾಶವಾಗಿ ಕೆಳಮನೆಯಲ್ಲಿ ಇಳಿದರು. `ಹಾಯ್ ಹಾಯ್’ಗಳು ಮುಗಿದ ನಂತರ ಮಾತಿಗೆ ಆರಂಭವಾಯಿತು. ನಾವು ಮಾತಿನಲ್ಲಿರುವಾಗಲೇ ಹೆಲನ್ ಮಕ್ಕಳಿಗೆ ಮಲಗುವ ವೇಳೆಯಾಯಿತೆಂದು ಬಟ್ಟೆ–ಬರೆ ಬದಲಿಸಿ, ಹಲ್ಲುಜ್ಜಿ ಮಲಗುವ ಸಿದ್ಧತೆ ಮಾಡುವಂತೆ ಆಜ್ಞೆಯಿತ್ತಳು. ಆಟ–ಸೂರ್ಯನ ಕಡೆಗೆ ಮುಖ ಮಾಡಿ, ಹಿಗ್ಗಿ, ಇಷ್ಟಗಲವಾಗಿದ್ದ ಮಕ್ಕಳ ಸೂರ್ಯಪಾನ–ಮುಖಗಳು, ನಿದ್ರೆಯ ಹೆಸರನ್ನು ಕೇಳಿದ ಕೂಡಲೆ ಬಾಡಿ, ಕಂದಿ, ಜೋಲುಬಿದ್ದವು. ಆದರೂ ಗೊಣಗುತ್ತಲೇ ಅವು ಹೋದವು. ನಾವು ಮೇಲ್ಗಡೆ ದಿವಾಣ–ಖಾನೆಗೆ ಬಂದೆವು. ಮಕ್ಕಳು ಮಲಗುವ ಮೊದಲು ಹಿರಿಯರಿಗೆಲ್ಲಾ ಸುಖರಾತ್ರೆಯ ಚುಂಬನ (good-night-kisses) ಕೊಡುವುದು ರೂಢಿ ಹಿರಿಯರೊಂದಿಗೆ ನನಗೂ ಆತ್ಮೀಯ ಆಲಿಂಗನ, ಚುಂಬನಗಳು ದೊರಕಿದವು! ಮೆಲುದನಿಯಲ್ಲಿ-

“ನಾವೆಲ್ಲ ನಿನ್ನನ್ನು ತುಂಬ ಪ್ರೀತಿಸುತ್ತೇವೆ ಕ್ರಿಶ್, ನೀನು ಮತ್ತೆ ಯಾವಾಗ ನಮ್ಮ ಮನೆಗೆ ಬರುವಿ? ಮುಂದಿನ ವಾರ ಬರುವಿಯಾ? ಸ್ವಲ್ಪ ಬೇಗನೆ ಬಾ. ಬಹಳ ಹೊತ್ತು ಆಡೋಣವಂತೆ.” ಎಂದು ಒಂದರ ಹಿಂದೊಂದು ಮಗು ಬಂದು, ನನ್ನ ಹತ್ತಿರದಲ್ಲಿ ಪಿಸುಗುಟ್ಟಿದವು. ತಮ್ಮ ಮಲಗುವ ಮನೆಗೆ ಹೋದರೂ ಅಲ್ಲಿಂದಲೆ ಹಣಕಿ ಹಾಕಿ ಹಾಕಿ ನೋಡುವರು, ಡೇವನಂತೂ ತುಸು ಹೊತ್ತಾದ ಮೇಲೆ ಯಾರಿಗೂ ಕಾಣದಂತೆ ನಾನು ಕುಳಿತ ಸೋಫಾದ ಹಿಂದು ಬಂದು ಕುಳಿತು ನನ್ನ ಬೆನ್ನಿಗೆಮೃದುವಾದ ಏಟುಗಳನ್ನು ಹಾಕುತ್ತಲಿದ್ದ. ತಾಯಿಗೆ ಸಂಶಯ ಬಂದು ಆಕೆ ಎದ್ದು ಬಂದು ಅವನನ್ನು ಎಳೆದುಕೊಂಡು ಹೋಗಿ ಹಾಸಿಗೆಯಲ್ಲಿ ಮಲಗಿಸಿ, ಹೊರಗಿನಿಂದ ಬಾಗಿಲು ಹಾಕಿಕೊಂಡಳು. ಮತ್ತೆ ಬಂದು …

“ಕ್ರಿಶ್, ನೀನು ನಮ್ಮ ಹುಡುಗರ ಮೇಲೆ ಭಾರತದ ಮಾಯಾವಿದ್ಯೆಯ ಪ್ರಯೋಗ ಮಾಡಿದಂತಿದೆ. ಆದ್ದರಿಂದ ಎಂದೂ ಮಲಗಲು ಆಕ್ಷೇಪಿಸದವರು ಈಗ ಎಷ್ಟು ಹೊತ್ತಾದರೂ ಎಚ್ಚರವಾಗಿಯೇ ಇದ್ದಾರೆ … \, ಭಾರತೀಯ ಹುಡುಗರೂ ಹೀಗೇ ಮಾಡುತ್ತಾರೆಯೇ?” ಎಂದು ಮುಗುಳುನಗೆ ಬೀರಿ ಕೇಳಿದಳು.

“ಜಗತ್ತಿನ ಎಲ್ಲ ಮಕ್ಕಳೂ ಹೆಚ್ಚು ಕಡಿಮೆ ಒಂದೇ.” ಎಂದು ಸ್ವಲ್ಪ ಅಧಿಕಾರವಾಣಿಯಿಂದ ಸ್ವಲ್ಪ ಹೆಮ್ಮೆಯಿಂದ ಹೇಳಿದೆ.

ನಮ್ಮ ಮಾತು ಹಾಗೇ ಸಾಗಿತು. ಮಾತಿನ ನಡುವೆ ನನಗೆ ಛಾಯಾಚಿತ್ರದಲ್ಲಿ ಅಭಿರುಚಿ ಎಂದು ಕೇಳಿ, ತಮ್ಮ ಕುಟುಂಬದವರ ಫೋಟೋಗಳನ್ನು ತೋರಿಸಿದರು. ಡಿಕ್ ತಾನೇ ತೆಗೆದ, ತಮ್ಮ ತಾಯಿಯ ವಿವಾಹದ ಚಲನಚಿತ್ರ ತೋರಿಸುತ್ತೇನೆಂದು ಒಂದು ಪ್ರೊಜೆಕ್ಟರ್ ಮತ್ತು ಫಿಲ್ಮಗಳನ್ನು ತಂದು,

“ನಿನ್ನ ತಾಯಿಯ ವಿವಾಹ-ಚಿತ್ರವನ್ನು ನೀನು ಹೇಗೆ ತೆಗೆದೆ?” ಎಂದು ಕೇಳಬೇಕೆಂದಿದ್ದೆ. ಆದರೆ ಅಮೇರಿಕನ್ನರು ಏನು ಮಾಡಿಯಾರು, ಏನು ಮಾಡಲಿಕ್ಕಿಲ್ಲ ಎಂಬುದು ಹೇಳಲು ಬರುವುದಿಲ್ಲ. ಜನ್ಮಪೂರ್ವದಲ್ಲಿಯೇ ಕೆಮರಾ ಹಿಡಿಯಲು ಬರುವ ಮಕ್ಕಳಿದ್ದರೆ ಏನಾಶ್ವರ್ಯ, ಎಂದುಕೊಂಡು ನೋಡಿ ಮಾತನಾಡೋಣವೆಂದು ಆಗ ಸುಮ್ಮನಿದ್ದೆ. ಚಲನಚಿತ್ರ ಪ್ರಾರಂಭವಾಯಿತು. ಕಾರುಗಳು ಬಂದವು. ಜನರು ಸೇರಿದರು. ಪಾದ್ರಿ ಗಾಂಭೀರ್ಯದಿಂದ ವೇದಿಕೆಯನ್ನೇರಿದ. ಮದುಮಗಳು-ಡಿಕ್ರ ತಾಯಿ-ಆಗಲೂ ಮುದಿಕಿಯೇ! ತನ್ನ ಎರಡನೇ ಪತಿಯೊಂದಿಗೆ ಸಂಭ್ರಮದಿಂದ ಮಧುಚಂದ್ರ (honey-moon) ಕ್ಕೆ ಹೊರಟಿದ್ದನ್ನು ನೋಡಿ ನಗು ಬಾರದೆ ಇರಲಿಲ್ಲ. ಪಾಪ ಆ ಮುದುಕನೂ ಮದಿವೆಯಾದ ಮೂರುನಾಲ್ಕು ವರ್ಷಗಳಲ್ಲಿ ತೀರಿಕೊಂಡನಂತೆ, ಮತ್ತೆ ಒಬ್ಬಂಟಿಗಳಾದ್ದರಿಂದ ಆಕೆ ಮಗನ ಸಂಗಡ ಇದ್ದಾಳೆ. ಜೊತೆಗೆ ಹೆಲನ್ನರ ವಿಧವೆ ತಾಯಿಯೂ ಇದ್ದಾಳೆ. ಹೀಗೆ ಇಬ್ಬರ ತಾಯಂದಿರೂ ತಮ್ಮ ತಮ್ಮ ಮಕ್ಕಳೊಡನೆ ಬಂದಿದ್ದು ಬಾಳ್ವೆ ಮಾಡುವುದು ಅಮೇರಿಕೆಯಲ್ಲಿ ಅತಿ ವಿರಳ. ಭಾರತೀಯ ಸಂಸಾರವನ್ನು ಹೋಲುವ ಈ ಅಮೇರಿಕನ್ ಸಂಸಾರ ನೋಡಿ ನನಗೆ ಎಷ್ಟೋ ಸಮಾಧಾನವೆನಿಸಿತು.

WIth Hamlins

ತಿಂಡಿ-ತಿನಸು, ಮಾತು-ಕತೆಗಳಲ್ಲಿ ವೇಳೆ ಹೋಗಹತ್ತಿತು. ಅನಂತರ ಶಿಕ್ಷಣ ಸಮ್ಮೇಲನವಿದ್ದುದರಿಂದ ಲಗುಬಗೆಯಿಂದ ಹೊರೆಟೆವು. ಸಮ್ಮೇಲನದಲ್ಲಿ ಮಹತ್ವದ್ದು ಏನೂ ಇರಲಿಲ್ಲ. ಬರೇ ಪರಸ್ಪರ ಪರಿಚಯ `ಹಾಯ್ ಹಾಯ್’ಗಳಲ್ಲಿ ಹೆಚ್ಚಿನ ವೇಳೆ ಹೋಯಿತು. ನನ್ನನ್ನು ಮನೆಗೆ ಮುಟ್ಟಿಸುತ್ತ ಡಿಕ್ರು–

“ಕ್ರಿಶ್ ಮುಂದಿನ ವಾರ ಮತ್ತೆ ನೀನು ಮನೆಗೆ ಬರಬೇಕು. ಎಷ್ಟು ಹೊತ್ತಿಗೆ ಬರಬೇಕೆಂದು ಪೋನ ಮಾಡಿ ತಿಳಿಸುತ್ತೇನೆ.” ಎಂದು ಮತ್ತೆ ಔತಣ ಕೊಟ್ಟೇ ಬೀಳ್ಕೊಟ್ಟರು.

ನಿರೀಕ್ಷಿಸದ್ದಕ್ಕಿಂತ ಮೊದಲೇ ಕರೆ ಬಂದಿತು. ಅಂದು ರಾತ್ರಿ `ಟಿ.ವಿ.’ಯಲ್ಲಿ ಶ್ರೀಮತಿ ಜೆಕಲಿನ್ ಕೆನಡಿಯವರ ಭಾರತಸಂದರ್ಶನದ ವರ್ಣಚಿತ್ರದ ಕಾರ್ಯಕ್ರಮವಿತ್ತು. ನಾನೂ ಅಲ್ಲಿದ್ದರೆ ಭಾರತೀಯ ವೇಷಭೂಷಣ, ವಾದ್ಯವಿಶೇಷಗಳು ಇತ್ಯಾದಿ ಭಾರತೀಯ ಜನಜೀವನದ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುವುದೆಂದು ಹೆಮಲಿನ್ ದಂಪತಿಗಳ ಅಭಿಪ್ರಾಯವಾಗಿತ್ತು. ಊಟಕ್ಕೂ ಆಮಂತ್ರಣವಿತ್ತು. ಸಪ್ಪೆ ಊಟದ ನೆನಪು ಬಂದು ಜೊತೆಗೆ ಇದ್ದರೆ ನೆಟ್ಟಗೆ ಎಂದು ಕೆಲವು ಹಪ್ಪಳಗಳನ್ನು ತೆಗೆದುಕೊಂಡು ಹೋದೆ.

ಎರಡನೇ ಬಾರಿ ಅವರಲ್ಲಿ ಹೋದಾಗ ಮೊದಲಿನ ಸಲದ ಕೃತ್ರಿಮ ಔಪಚಾರಿಕೆ ಇರಲಿಲ್ಲ. ಅಮೇರಿಕನ್ನರನ್ನು ಅವರ ದೈನಂದಿನ ಜೀವನದಲ್ಲಿ ಕಾಣುವಂತೆ ಆಯಿತು. ನಾನೂ ಮನೆಯಲ್ಲಿ ಒಬ್ಬನಾದಂತೆ ಅನಿಸಿತು. ನಾನು ತಂದ ಹಪ್ಪಳಗಳು ಎಲ್ಲರ ಕುತೂಹಲವನ್ನು ಕೆರಳಿಸಿದವು. ಹೆಲನ್ ಅವನ್ನು ತಿನ್ನುವ ವಿಧಾನದ ಬಗ್ಗೆ ಕೇಳಿದಳು. ಗ್ರಿಸ್ (ಕುದಿಯುವ ಎಣ್ಣೆಗೆ ಅಮೇರಿಕನ್ನರು ಗ್ರಿಸ್ ಎನ್ನುತ್ತಾರೆ!)ನಲ್ಲಿ ಕರಿಯುವದೆಂದರೂ ಅದಕ್ಕೆ ಎಷ್ಟು ಉಷ್ಣತೆ ಬೇಕೆಂಬುದು ನನಗೂ ಗೊತ್ತಿರಲಿಲ್ಲ; ಅವರಿಗೂ ಕಲ್ಪನೆ ಇರಲಿಲ್ಲ. ೩೦೦ ಡಿಗ್ರಿ C ಉಷ್ಣತಾಮಾನದ ವಿದ್ಯುತ್ ಪಾತ್ರೆ ಇದ್ದರೆ ಸಾಕೆಂದು ಹೇಳಿದೆ. ಸರಿ, ಎಣ್ಣೆ ಕಾದ ಮೇಲೆ ಒಂದು ಹಪ್ಪಳ ಹಾಕಿದೆ. ಹಪ್ಪಳ ಮೇಲೆ ಬರಲೇ ಇಲ್ಲ! ೩೫೦ ಡಿಗ್ರಿ C ಉಷ್ಣತೆ ಏರಿಸಲಾಯಿತು, ಪ್ರಯೋಜನವಾಗಲಿಲ್ಲ. ಕೊನೆಗೆ ೪೫೦ ಡಿಗ್ರಿ C ದ ವಿದ್ಯುತ್ ಪಾತ್ರೆ ಉಪಯೋಗಿಸಬೇಕಾಯಿತು. ಹಪ್ಪಳ ಕರಿಯುವ ಸಂಭ್ರಮ ನೋಡಲು ಹುಡುಗರೆಲ್ಲರು ನನ್ನನ್ನು ಸುತ್ತುವರಿದು ನಿಂತಿದ್ದರು. ಚಿಕ್ಕ ಡೇವಿಡ್ ತನಗೆ ಕಾಣದ್ದರಿಂದ ಟೇಬಲ್ ಮೇಲೆ ಹತ್ತಿ ನಿಂತಿದ್ದ. ಎಣ್ಣೆಯ ಸಮೀಪ ನಿಂತಿದ್ದರಿಂದ ಅವನನ್ನು ಎತ್ತಿ ಕೆಳಗೆ ಇಳಿಸಿದೆ, ಮತ್ತೆ ಹತ್ತಿ, ತನ್ನನ್ನು ಇಳಿಸುವಂತೆ ಹೇಳಿದ. ಸರಿ, ಎಲ್ಲ ಹುಡುಗರೂ ತನಗೂ ಹಪ್ಪಳ ನೋಡಲು ಟೇಬಲ್ ಏರಬೇಕಾಗಿದೆಯೆಂದು ಕೂಗಾಡಹತ್ತಿದರು. ಎಲ್ಲರಿಗೂ ಎತ್ತಿ ತೋರಿಸಿ ಕೆಳಗಿಳಿಸಬೇಕಾಯಿತು. ಹಪ್ಪಳಗಳು ಕರಿದು ತಯಾರಾದವು. ಎಲ್ಲರೂ ತನಗೆಂದು ತನಗೆಂದು ಅವನ್ನು ಬೇಡಿ ತಿಂದರು. ಆದರೆ ಎರಡೇ ನಿಮಿಷಗಳಲ್ಲಿ ಮಕ್ಕಳ ಕಣ್ಣು ಕೆಂಪೇರಿ ಮೂಗಿನಿಂದ ನೀರು ಸುರಿಯಲಾರಂಭಿಸಿತು. ಮೂಗೂ ಕಣ್ಣುಗಳೊಡನೆ ಸಹಕರಿಸಿತು. ದೊಡ್ಡವರ ಹೊಟ್ಟೆಯಲ್ಲಿ ಕಾಡುಗಿಚ್ಚು ಹೊತ್ತಿದಂತೆ ಆಯಿತಂತೆ!

ಅಂದಿನ ಊಟ ಬಹಳ ಸಾದಾ ಇತ್ತು. ಕೇವಲ ಹೆಂಬರಗಾರ್ (ಬ್ರೆಡ್ಡಿನ ತುಂಡುಗಳ ನಡುವೆ ಮಾಂಸದ ವಡೆಗಳನ್ನು ಜೊಡಿಸಿದ ಖಾದ್ಯ)ಗಳು ಇದ್ದವು.

“ಸಂಗಡ ಕುಡಿಯಲು ಏನು ಕೊಡಲಿ?” ಎಂದು ಹೆಲನ್ ನನ್ನನ್ನು ಕೇಳಿ,

“ಡಿಕ್ ಇನ್ನೂ ಚಿಕ್ಕಮಕ್ಕಳಂತೆ ಹಾಲು ಕುಡಿಯುತ್ತಾನೆ.” ಎಂದು ಗಂಡನ ಗೇಲಿಮಾಡಿದಳು. ಅದಕ್ಕೆ ನಾನು

“ನಾನು ಮಗುವಿಗಿಂತ ಮಗುವಾಗಿದ್ದೇನೆ. ನಾನು ಕುಡಿಯುವಷ್ಟು ಹಾಲನ್ನು ಡಿಕ್ನಿಂದ ಕುಡಿಯಲಾಗುತ್ತದೊ ಇಲ್ಲವೊ. ಅಮೇರಿಕೆಗೆ ಬಂದಂದಿನಿಂದ ನನಗೆ ನೀರು ಕುಡಿದ ನೆನಪೇ ಇಲ್ಲ.” ಎಂದು ಉತ್ತರಿಸಿದಾಗ ಆಕೆ ಹಿಗ್ಗಿದಳು. ತನ್ನ ಗಂಡನಂತಹ ಜನರೂ ಇದ್ದಾರೆಂದು ಸಮಾಧಾನಪಟ್ಟಿರಬೇಕು. ದೊಡ್ಡ ಶೀಸೆಯೊಂದರಲ್ಲಿ ನನಗೂ ಹಾಲು ಬಂದಿತು.

ಅಂದು ರಾತ್ರಿಯೂ `ಟಿ.ವಿ.’ ಕಾರ್ಯಕ್ರಮ ಮುಗಿದ ಮೇಲೆ ಹೊತ್ತು ಮಾತನಾಡುತ್ತ ಕುಳಿತಿದ್ದೆವು. ಅಂದಿನ ತನಕ ಕೇವಲ ಔಪಚಾರಿಕವಾದ, ಸಾಮಾಜಿಕವಾದ ಆತಿಥ್ಯ ಬೇರೆ ಬೇರೆ ಮನೆಗಳಲ್ಲಿ ನನಗೆ ದೊರಕಿತ್ತು. ಹೆಮಲಿನ್ ಕುಟುಂಬದ ಮಮತೆ, ಆತ್ಮೀಯತೆಗಳು ಬಲು ಬೇಗ ನನ್ನನ್ನು ಅವರಲ್ಲಿ ಒಬ್ಬನನ್ನಾಗಿ ಮಾಡಿದವು. ನಂತರವೂ ಒಂದೆರಡು ಸಲ ಅವರಲ್ಲಿ ಹೋಗಿದ್ದೆ. ಒಮ್ಮೆ ಹೆಮಲಿನ್ನರು ಅಮೇರಿಕನ್ ಜಾದೂ ಆಟಕ್ಕೆ ನನ್ನನ್ನು ಕರೆದೊಯ್ದರು. ಅಮೇರಿಕನ್ನರಿಗೆ ಜಾದೂ, ಯಕ್ಷಿಣಿವಿದ್ಯೆಯಲ್ಲಿ ಬಹಳ ಆಸಕ್ತಿ ಆದರೆ ದುರದೃಷ್ಟದಿಂದ ಒಳ್ಳೆ ಇಂದ್ರಚಾಲಿಕರು ಭಾರತದಲ್ಲಿಯೇ ಇದ್ದಾರೆ. ಹೊಟ್ಟೆಗಿಲ್ಲದೆ ಅವರು ಬಳಲುತ್ತಿದ್ದರೂ ಅವರ ಕೈಚಳಕ ಮೆಚ್ಚುವಂತಹದು, ಸ್ವತಃ ಖರ್ಚಿಗೆ ಕಾಸಿಲ್ಲದಿದ್ದರೂ ರೂಪಾಯಿಯ ರಾಶಿ ತೋರಿಸುತ್ತಾರೆ. ತನ್ನ ಭವಿಷ್ಯವನ್ನು ಹೇಳಲಾರದವನು ಇತರ ಜನ್ಮಾಂತರ. ಪರಜನ್ಮಗಳ ಬಗ್ಗೆ ಹೇಳುತ್ತಾರೆ. ಈ ಅಮೇರಿಕನ್ ಜಾದೂಗಾರನ ಹತ್ತಿರ ಬೆಲೆಯುಳ್ಳ ಉಡುಪುಗಳು, ವಿವಿಧ ಪ್ರಕಾರದ ಸಲಕರಣೆಗಳು ಇದ್ದರೂ ಮಾತಿನ ಮಾಯಾವಿದ್ಯೆ ನಮ್ಮ ಜಾದೂಗಾರರಂತೆ ಆತನಿಗೆ ಸಾಧಿಸಿರಲಿಲ್ಲ. ಮಾತಿನಲ್ಲಿ ಪ್ರೇಕ್ಷಕರನ್ನು ಮರುಳುಮಾಡಿ, ಕಳ್ಳ ಜಾಡಿನಿಂದ ಕೈಚಳಕ ಸಾಧಿಸುವ ನಮ್ಮ ಇಂದ್ರಜಾಲಿಕರೆಲ್ಲಿ? ಮಾತೇ ಆಡದ ಅಮೇರಿಕನ್ ಇಂದ್ರಜಾಲಿಕನೆಲ್ಲಿ? ನನಗೇನೋ ಈ ಆಟ ತೃಪ್ತಿಕರವೆನಿಸಲಿಲ್ಲ.

ಕೆಲವೇ ತಿಂಗಳುಗಳಲ್ಲಿ ಹೆಮಲಿನ್ನರಿಗೆ ಅಲ್ಲಿಂದ `ಲಾಸ್-ಎಂಜಿಲಿಸ್’ಗೆ (ಕೆಪೋರ್ನಿಯ) ವರ್ಗವಾಯಿತು. ನಾಲ್ಕು ಸಾವಿರ ಮೈಲು ದೂರದಲ್ಲಿದ್ದರೂ ಪತ್ರಮುಖೇನ ನಾವು ಹತ್ತಿರದಲ್ಲೆ ಇದ್ದೆವು. ಮೂರು ವರ್ಷಗಳ ನಂತರ ನನ್ನ ಓದು ಮುಗಿದು ಭಾರತಕ್ಕೆ ಮರಳಲಿದ್ದಾಗ ಅಮೇರಿಕಾ ಪ್ರವಾಸ ಕೈಕೊಂಡಿದ್ದೆ. ಆಗ ಮತ್ತೆ ಅವರನ್ನು ಭೆಟ್ಟಿಯಾಗುವ ಸದವಕಾಶ ದೊರೆಯಿತು, ಡಿಕ್ರು ನನ್ನನ್ನು ಸ್ವಾಗತಿಸುವದಕ್ಕಾಗಿ ಐವತ್ತು ಮೈಲು ದೂರದ ಬಸ್ನಿಲ್ದಾಣಕ್ಕೆ ಕಾರು ತೆಗೆದುಕೊಂಡು ಬಂದಿದ್ದರು. ಈ ಸಲದ ಅವರ ಹೊಸ ಬ್ರಿಟಿಶ್ ಕಾರು ಬೆಕ್ಕನ್ನು ಕಂಡ ಇಲಿಯಂತೆ ಓಡುತ್ತಿತ್ತು. ಜಗತ್ಪ್ರಸಿದ್ಧವಾದ ಪಾಸಡಿನ, ಹಾಲಿವುಡ್ಗಳನ್ನು ತೋರಿಸಿಕೊಂಡು ಮನೆಗೆ ಕರೆದೊಯ್ದುರು. ಮೂರು ವರ್ಷಗಳಲ್ಲಿ ಮಕ್ಕಳೆಲ್ಲ ಬೆಳೆದು ನಿಂತಿದ್ದರು. ಆದರೆ ಹಿಂದಿನ ಗೆಳೆತನ ಮರೆತಿರಲಿಲ್ಲ. ಮನೆಗೆ ಕಾಲಿಡುತ್ತಲೇ,

“ಕ್ರಿಸ್, ನಮಗಾಗಿ ಈ ಸಲವೂ ಹಪ್ಪಳ ತಂದಿದ್ದೀಯಾ?” ಎಂದು ಡೇವ್ ಕೇಳಿದ ಅಪರೂಪಕ್ಕೆ ಮನೆಗೆ ಬಂದ `ಮಾಮಾ’ನನ್ನು ಸುತ್ತುವರಿಯುವಂತೆ ಈ ಮಕ್ಕಳು ನನ್ನನ್ನು ಸುತ್ತುವರಿದು ನೂರಾರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಡೆನಿಸ್ಳು ತನ್ನ ಹೊಸ ತಂಗಿಯನ್ನು ಎತ್ತಿಕೊಂಡು ಬಂದು ತೋರಿಸಿದಳು. ಮಲಗಿದ ಮಗುವನ್ನು ಎತ್ತಿದ್ದರಿಂದ ಮತ್ತು ಮಕ್ಕಳ ಕೋಲಾಹಲಕ್ಕೆ ಅದು ಅಳಲಾರಂಭಿಸಿತು. ನಾನು ಎತ್ತಿಕೊಂಡಾಗ ಮೀಸೆಯ ಈ ಅಪರಿಚಿತ ಯಾರೆಂದು ತಿಳಿಯದೇ ಅಳು ನಿಲ್ಲಿಸಿ ಪಿಳಿಪಿಳಿ ನೋಡಲಾರಂಭಿಸಿತು. ಮಕ್ಕಳಿಗೆಲ್ಲ ತಮಾಷೆಯೆನಿಸಿ ನಕ್ಕವು. ಈ ಬಾರಿಯೂ ನನ್ನನ್ನು ಕರೆದುಕೊಂಡು ಹೋಗಿ ತಮ್ಮ ಹೊಸ ಆಟಿಗೆಗಳನ್ನು ತೋರಿಸಿದವು. ಕಬಡ್ಡಿ ಆಟವನ್ನೂ ಆಡುವ ಮನಸ್ಸು ಇತ್ತು. ಆದರೆ ನನ್ನೊಡನೆ ಮಾತುಕತೆಯಾಡಲು ಆತುರಳಾದ ಹೆಲನ್ ಅಡಿಗೆ ಮನೆಗೇ ನನ್ನನ್ನು ಕರೆದುಕೊಂಡು ಹೋದಳು.

ಅಡಿಗೆಮನೆ ಅಧುನಿಕ ಸಲಕರಣೆಗಳಿಂದ ಸುಸಜ್ಜಿತವಾಗಿತ್ತು. ಅಡಿಗೆಗೆ ವಿದ್ಯುತ್ ಒಲೆ, `ಓವನ್’ಗಳು ಪಾತ್ರೆಗಳನ್ನು ಸ್ವಚ್ಚಮಾಡಲು `ಡಿಶ್-ವಾಶ್’, ಎಲ್ಲವುಗಳನ್ನು ಪುಡಿಮಾಡುವ `ಕ್ರಶರ್’, ಮಸಾಲೆ ಅರೆಯುವ `ಬ್ಲೆಂಡರ್’ಗಳು. ಅಡಿಗೆಗೆ ಇಟ್ಟರೆ ಅಡಿಗೆ ಸಿದ್ಧವಾದೊಡನೆ ತನ್ನಷ್ಟಕ್ಕೆ ಉಷ್ಣತೆ ನಂದಿಹೋಗುವ ವ್ಯವಸ್ಥೆಯಿತ್ತು. ಒಂದೊಂದೇ ನೋಡಿ ಪ್ರಶಂಸಿಸುತ್ತಿದ್ದೆ.

ಆದರೆ ಹೆಲನ್ ಹೇಳಿದಳು:

“ಕ್ರಿಶ್ ಇವೆಲ್ಲ ಸರಿಯಾಗಿ ನಡೆದರೇ ಚೆಂದ … ಹೋದ ವಾರ ನನ್ನ ಗೋಳು ಹೇಳತೀರದು.

“ಏನಾಯಿತು?” ಎಂದೆ.

“ನನ್ನ ಎರಡು ಬಟ್ಟೆ ಒಗೆಯುವ ಯಂತ್ರಗಳಲ್ಲಿ ಒಂದು ಸಂಪು ಹೂಡಿಬಿಟ್ಟಿತು. ಮಕ್ಕಳಿದ್ದ ಮನೆಯಲ್ಲಿ ಒಂದು ಮಶಿನ್ ಕೆಟ್ಟರೆ ಕೈ ಮುರಿದಂತಾಗುವದೆಂದು ಮೊದಲ ಬಾರಿ ಕಂಡುಂಡೆ.”

“ಹೆಲನ್, ನಿನಗೆ ಒಂದಾದರೂ ಮೆಶಿನ್ ಇತ್ತಲ್ಲ. ಭಾರತೀಯರಿಗೆ ಬಟ್ಟೆ ತೊಳೆಯುವ ಯಂತ್ರವಿದೆಯೆಂದು ಗೊತ್ತಿಲ್ಲ. ಅಂಥಲ್ಲಿ ಅದರ ಉಪಯೋಗವಂತೂ ದೂರವೇ ಉಳಿಯಿತು. ತುಂಬ ಮಕ್ಕಳಿದ್ದ ಮನೆಯಲ್ಲಿ ಯಂತ್ರವೇ ಇಲ್ಲದಿದ್ದರೆ ನೀನೇನು ಮಾಡಬಹುದಾಗಿತ್ತು. ಕಲ್ಪಿಸಿಕೋ?” ಸುಮ್ಮನಿರಲಾರದೇ ನಾನೂ ಕೆಣಕಿದೆ. ನನ್ನ ಮಾತುಗಳನ್ನು ಕೇಳಿ ಹೆಚ್ಚುತ್ತಿದ್ದ ತರಕಾರಿ-ಚಾಕುಗಳನ್ನು ಅಲ್ಲೆ ಬಿಟ್ಟು ಹೆಲನ್ ಆಶ್ಚದಿಂದ-

“ಹಾಗಾದರೆ ನಿಮ್ಮ ಮನೆಯಲ್ಲಿ ಬಟ್ಟೆ ತೊಳೆಯುವ, ಒಣಗಿಸುವ ಯಂತ್ರ ಇಲ್ಲವೇ? … ಬಡವರ ಮನೆಯಲ್ಲಿ ಇರಲಿಕ್ಕಿಲ್ಲ. ಆದರೆ ಉಳ್ಳವರ ಮನೆಗಳಲ್ಲಿ … ? ಮಹಾರಾಜರ ಮನೆಗಳಲ್ಲಿ ಇರಬಹುದಲ್ಲ?” ಕೇಳಿದಳು.

“ನಿಮಗೆ ಯಂತ್ರಗಳ ಸಹಾಯವಿದೆ. ನಮಗೆ ಜನಬಲವಿದೆ. ನಿಮ್ಮ ಪ್ರತಿಯೊಂದು ಒತ್ತು–ಗುಂಡಿ (push-button) ಇದ್ದಂತೆ ಮಹಾರಾಜರಿಗೆ ಸೇವಕ ಸೇವಕಿಯರಿರುತ್ತಾರೆ. `ಮಹಾರಾಣಿ’ಯ 2 ವೇಳೆ ಅಡಿಗೆಯವ, ಚೌಕೀದಾರ, ಮಾಲಿ, ಅಗಸ ಮುಂತಾದವರಿಗೆ ಕೆಲಸ ಒಪ್ಪಿಸುವುದರಲ್ಲೆ ಹೋಗುತ್ತದೆ.” ಎಂದು ಮಹಾರಾಣಿಯ ಕಥೆ ಹೇಳಿದೆ.

“ಎಷ್ಟು ಮೋಜಿರಬೇಕು ನಿಮ್ಮ ದೇಶ! ಈ ಅಡಿಗೆಮನೆಯಿಂದ ಬಿಡುಗಡೆಗಿಂತ ಹೆಚ್ಚಿನ ಸೌಖ್ಯ ಇನ್ನಿಲ್ಲ, ಕ್ರಿಶ್, ನೀನು ಭಾರತಕ್ಕೆ ಹೋದರೆ ನಾಲ್ಕೈದು ಸೇವಕರನ್ನಾದರೂ ಇಡುವಿಯಾ? ನಿನ್ನ ಸಂಬಳವೆಲ್ಲ ಅವರಿಗೇ ಹೋಗುವುದಲ್ಲ?” ಎಂದು ಕೇಳಿ ನಾನೂ ಒಬ್ಬ ಮಹಾರಾಜರ ವರ್ಗಕ್ಕೆ ಸೇರಿದವನೋ ಅಥವಾ ಬಡವರ ಗುಂಪಿಗೆ ಸೇರಿದವನೋ ಪರೀಕ್ಷಿಸಿದಳು. ಅದಕ್ಕೆ ನಾನು ನಗುತ್ತ–

“ನೀವೇನು ಯಂತ್ರಕ್ಕೆ ಖರ್ಚು ಮಾಡುವದಿಲ್ಲವೇ? ನಮ್ಮಲ್ಲಿ ಮಾನವ–ಯಂತ್ರಗಳು ಇವುಗಳಿಗಿಂತ ಅಗ್ಗವಾಗಿವೆ. ತಿಂಗಳಿಗೆ ನಾಲ್ಕು ಡಾಲರ್ ಕೊಟ್ಟರೆ ಅಡಿಗೆಯವಳು ಅಡಿಗೆ ಮಾಡಿಟ್ಟು ಹೋಗುತ್ತಾಳೆ. ನಾಲ್ಕು ಡಾಲರ್ ಕೊಟ್ಟರೆ ಆಳೊಬ್ಬ ಸಿಗುತ್ತಾನೆ. ಎರಡು ಡಾಲರಿಗೆ ಪಾತ್ರೆ ತಿಕ್ಕುವವಳು ಸುಲಭವಾಗಿ ದೊರೆಯುತ್ತಾಳೆ” ಎಂದು ಹೇಳಿದರೂ, ನನ್ನ ಈ ನಕ್ಕ ನಗೆಯ ಒಳಗೆ ನನ್ನ ದೇಶದ ದಾರುಣ ಬಡತನದ ಸಾವಿರ ಚೇಳುಗಳು ಕಡಿದಂತಾಗುತ್ತಿತ್ತು. ಅದನ್ನೆಲ್ಲ ಸಹಿಸಿ. ಈ ಅಗ್ಗ ಕೂಲಿಗೆ ಆ ಬಡತನವೇ ಕಾರಣ ಎಂದು ಮಾತ್ರ ಬಾಯಿ ಬಿಡಲಿಲ್ಲ. ನನ್ನ ಈ ಮಾತನ್ನು ನಂಬುವದು ಹೆಲನ್ಳಿಗೆ ಅಸಾಧ್ಯವಾಯಿತು. ಅದರೂ ಅತುರತೆಯಿಂದ–

“ಡಿಕ್, ಡಿಕ್, ನೀನೂ ಭಾರತದಲ್ಲಿ ಒಂದು ನೌಕರಿಯನ್ನು ಹುಡುಕಬಾರದೆ? ನಾವೂ ಮಹಾರಾಜರಂತೆ ಇರಬಹುದು!” ಎಂದು ಹೊರಗಿದ್ದ ಗಂಡನನ್ನು ಕೂಗಿ ಹೇಳಿದಳು. ಡಿಕ್ ಇದೇನು ತಮಾಷೆಯೆಂದು ಒಳಗೆ ಬಂದರು. ಅವರಿಗೂ ಆಕೆ ಈ ಆಳುಗಳ ಸೌಲಭ್ಯವನ್ನು ತಿಳಿಸಿದಾಗ ಆಶ್ಚರ್ಯವೆನಿಸಿತು.

ಓಹೋ! ನಿಮಗೇನು ಭಾರತದಲ್ಲಿ ನೌಕರಿ ಸಿಗಬಹುದು. ಆದರೆ ಸಂಬಳ ಮಾತ್ರ ಇಲ್ಲಿಯ ಒಂದು ಹತ್ತಾಂಶವೂ ಸಿಗಲಿಕ್ಕಲ್ಲ. ನೀವಿಲ್ಲಿ ಕೆಲಸ ಮಾಡುವ ಕಂಪನಿಯೇ ನಿಮ್ಮನ್ನು ಭಾರತಕ್ಕೆ ಕಳಿಸಿದರೆ ಮಾತ್ರ ನೀವು ನಿಜಕ್ಕೂ ಮಹಾರಾಜರಂತೆ ಬಾಳಬಹುದು.” ಎಂದು ಉತ್ತರಿಸಿದೆ.

ಹೆಲನ್ನರಿಗೆ ಇದು ಅಸಾಧ್ಯ ಮಾತೆಂದು ಗೊತ್ತಿದ್ದರಿಂದ,

“ನನಗೆ ಆಳುಗಳಿಂದ ಕೆಲಸ ಮಾಡಿಸುವ ಭಾಗ್ಯವಿಲ್ಲದಿದ್ದರೂ ಆ ಭಾಗ್ಯ ಪಡೆದು ಬಂದವರ ದೇಶವನ್ನಾದರೂ ನೋಡುವ ಆಶೆ ಉತ್ಕಟವಾಗಿದೆ. ನಮ್ಮನ್ನು ಎಂದು ಭಾರತಕ್ಕೆ ಕರೆದುಕೊಂಡು ಹೋಗುತ್ತೀ ಕ್ರಿಶ್?” ಎಂದು ಕೇಳಿದಳು.

“ಕ್ರಿಶ್ನ ಪರಿಚಯವಾದಾಗಿನಿಂದ ನನಗೂ ಭಾರತಕ್ಕೆ ಹೋಗಬೇಕೆಂದಿದೆ. ನೋಡೋಣ. ಒಂದು ವಾರದ ರಜೆ ತೆಗೆದುಕೊಂಡಿದ್ದೇನಲ್ಲ, ಹಾಯಾಗಿ ಕುಳಿತು ಅದರ ಬಗ್ಗೆ ವಿಚಾರಿಸೋಣಂತೆ.” ಎಂದು ಡಿಕ್ ರಾಗ ಎಳೆದ.

ಹರಟೆಯ ನಡುವೆ ಅಡಿಗೆ–ಊಟಗಳು ಸಾಗಿದವು. ನನ್ನ ವಿಶ್ರಾಂತಿಗೆಂದು ಹೆಮಲಿನ್ನರು ತಮ್ಮ ಸ್ವಂತದ ಕೋಣೆಯನ್ನು ತೆರವು ಮಾಡಿದ್ದರು. ನಾನು ಎಷ್ಟು ಬೇಡವೆಂದರೂ ಅಲ್ಲಿಯೇ ಮಲಗಬೇಕೆಂದು ಪಟ್ಟು ಹಿಡಿದರು. ತಾವು ಮಕ್ಕಳೊಡನೆ ಮಲಗಿದರು. ಭಾರತಕ್ಕೆ ಹೋದ ಮೇಲೆ ಮಹಾರಾಜನಾಗುತ್ತೇನೋ, ಮತ್ತೇನಾಗುತ್ತೇನೋ ಎಂದು ಹೇಳಲಾಗದಿದ್ದರೂ ಇಲ್ಲಿ ಅಮೇರಿಕನ್ ದಂಪತಿಗಳಿಂದ ಮಾತ್ರ ನನಗೆ ಮಹಾರಾಜರ ಸತ್ಕಾರ, ಸ್ವಾಗತ ದೊರೆಯಿತು!

ಬೆಳಿಗ್ಗೆ ಎಚ್ಚರವಾದದ್ದು ಮಕ್ಕಳು ಬಾಗಿಲನ್ನು ನೂಕಿದಾಗ, ಬಾಗಿಲು ತೆರೆಯುತ್ತವೇ ಎಲ್ಲ ಹುಡುಗರೂ ಒಳಗೆ ಬಂದು ಮಂಚವೇರಿದವು. ಕೋಲಾಹಲವೇ ಕೋಲಾಹಲ. ಒಬ್ಬನು ತನ್ನನ್ನೆತ್ತಿಕೋ ಎಂದರೆ, ಇನ್ನೊಬ್ಬಳು `ಉಪ್ಪುಮರಿ’ ಮಾಡು ಎನ್ನುವಳು. ಚಿಕ್ಕ ಡೆನಿಸ್ ಬಂದು ನನ್ನ ಕೆನ್ನೆಗೆ ಮುತ್ತು ಕೊಟ್ಟು,

“ಕ್ರಿಶ್, ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದಳು. ನಾನು ಎದ್ದು ಕೂದಲು ಹಿಕ್ಕಿಕೊಳ್ಳುತ್ತಿರುವಾಗ ಡಾಯೆನಾ ಬಂದು ಅಪ್ಪಿಕೊಂಡಳು.

“ಕ್ರಿಶ್, ನೀನು ನಮ್ಮ ಎರಡನೇ ತಂದೆಯಂತೆ ಆದ್ದರಿಂದ ನಾವೆಲ್ಲ ನಿನ್ನನ್ನು ಪ್ರೀತಿಸುತ್ತೇವೆ.” ಎಂದಳು. ಅದು ಮುಗ್ಧ ಮಾತಾಗಿದ್ದರೂ ನನ್ನ ಪ್ರೌಢಮತಿಗೆ ಸರಿಬೀಳದ್ದರಿಂದ ಮಾತು ಬದಲಿಸಿದೆ. ಅಷ್ಟರಲ್ಲಿ ಶಾಲೆಗೆ ಹೋಗಲು ಸಿದ್ಧರಾಗಿರೆಂದು ತಾಯಿಯ ಆಜ್ಞೆ ಬಂದಿತು. ಎಲ್ಲರೂ ಬರುವ ಮೋಟಾರಿಗಾಗಿ ಕಾಯಲು ಸಿದ್ಧರಾದರು. ಮೋಟಾರು ಬಿಡುವ ತನಕ ಜೊತೆಗೆ ಇರೆಂದು ಎಲ್ಲ ಹುಡುಗರು ಆಗ್ರಹಪಡಿಸಿದವು. ಒಪ್ಪಿ ಹೊರಟಾಗ ತಾನು–ತಾನೆಂದು ಕೈ ಹಿಡಿಯಲು ಎಳೆದಾಡಿದವು. ಕೊನೆಗೆ ಎರಡು ಕೈಗಳನ್ನು ಮೂವರು ಹಿಡಿದು ಹೊರಟರು. ಇದನ್ನು ನೋಡುತ್ತ ನಿಂತ ಹೆಲನ್–

“ಕ್ರಿಶ್, ನಿನಗೆ ಮದುವೆಯಾಗದಿದ್ದರೂ ಮಕ್ಕಳನ್ನು ಸಂಬಾಳಿಸಿಕೊಂಡು ಹೋಗುವ ಕಲೆ ಸಾಧಿಸಿದೆ. ಡಿಕ್ನಿಗೆ ಇದಾವುದೂ ಸೇರುವುದಿಲ್ಲ. ನಿನ್ನ ಪತ್ನಿಯಾಗುವವಳು ಪಡೆದುಬಂದಿರುತ್ತಾಳೆ.” ಎಂದು ಹೊಗಳಿದಳು.

ಮೋಟಾರು–ನಿಲ್ದಾಣದಲ್ಲಿ ಕೆಲವು ತಾಯಂದಿರು ತಮ್ಮತಮ್ಮ ಮಕ್ಕಳೊಂದಿಗೆ ಬಂದು ನಿಂತಿದ್ದರು. ಅವರೆಲ್ಲ ಮಕ್ಕಳಿಂದ ಹೆಮಲಿನ್ನರ ಮನೆಯಲ್ಲಿ `ಕ್ರಿಶ್’ ಬರುವವನಿದ್ದಾನೆಂದು ಮೊದಲೇ ತಿಳಿದುಕೊಂಡಿದ್ದರು. ಅವರೆಲ್ಲರ ಪರಿಚಯವೂ ಆಯಿತು. ಅಷ್ಟರಲ್ಲಿ ಬಸ್ ಬಂದಿದ್ದರಿಂದ ಹುಡುಗರೆಲ್ಲ ಅದರಲ್ಲಿ ಹತ್ತಿದರು. ಬಸ್ಸು ಕಣ್ಮರೆಯಾಗುವ ತನಕ ಪುಟ್ಟಪುಟ್ಟ ಕೈಗಳು ಕಿಟಕಿಯ ಹೊರಗೆ ಬೀಸುತ್ತಲೇ ಇದ್ದವು.

ಮಧ್ಯಾನ್ಹ ಊಟದ ನಂತರ ನನಗೆ ವಿಶ್ರಮಿಸಲು ಹೇಳಿದರು. ಏನೋ ಓದುತ್ತ ಬಿದ್ದುಕೊಂಡಿದ್ದೆ. ಸ್ವಲ್ಪ ಹೊತ್ತಿನೊಳಗೆ ಹುಡುಗರು ತಿರುಗಿ ಬಂದರು. ಡೇವ್ ಕಳೆದ ಮೂರು ದಿನಗಳಿಂದ ಸ್ವೆಟರನ್ನು ಶಾಲೆಯಲ್ಲಿ ಮರೆತು ಬಂದಿದ್ದನಂತೆ. ದಿನಾಲು ತಾಯಿ ನೆನಪು ಮಾಡುತ್ತಿದ್ದಳು. ಇಂದೂ ಹೊರಡುವ ಮುನ್ನ ಸ್ವೆಟರನ್ನು ಮರೆಯಬೇಡವೆಂದು ಹೇಳಿದ್ದಳು. ಆದರೂ ಸ್ವೆಟರ್ ಮನೆಗೆ ಬಂದಿರಲಿಲ್ಲ! ತಾಯಿ ಬೇಸತ್ತು.

“ಕ್ರಿಶ್, ನಿಮ್ಮಲ್ಲಿ ಹುಡುಗರು ಹೀಗೆ ಮಾಡಿದರೆ ತಾಯಿ ಏನು ಮಾಡುತ್ತಾಳೆ?” ಎಂದು ಕೇಳಿದಳು.

“ಮರೆತ ಸಾಮಾನು ತರದಿದ್ದರೆ ಅಂದು ಊಟವಾಗಲೀ ತಿಂಡಿಯಾಗಲಿ ದೊರೆಯುವದಿಲ್ಲವೆಂದು ಬಜಾಯಿಸುತ್ತಾಳೆ” ಎಂದೆ. ಹೆಲನ್ನಳಿಗೆ ಈ ಉಪಾಯ ಸರಿಕಂಡಿರಬೇಕು. ಡೇವನನ್ನು ಕರೆದು ಸ್ವೆಟರ್ ಬಿಟ್ಟು ಬಂದದ್ದಕ್ಕೆ ಸಂಜೆಯ ತಿಂಡಿ ಆತನಿಗೆ ಸಿಗಲಿಕ್ಕಿಲ್ಲವೆಂದು ಹೇಳಿದಳು. ಒಂದು ತಾಸಿನೊಳಗೆ ಸ್ವೆಟರ್ ಮನೆಗೆ ಬಂದಿತು! ನಮ್ಮ ನಿರೀಕ್ಷೆ ಮೀರಿ ಡೇವ್ ಓಡುತ್ತಲೇ ಶಾಲೆಗೆ ಹೋಗಿ ಅದನ್ನು ತಿರುಗಿ ತಂದಿದ್ದ. ಹೆಲನ್ ಸಂತೋಷದಿಂದ,

“ಕ್ರಿಶ್, ನಿನ್ನ ಉಪಾಯ ಫಲಿಸಿದೆ (Krish, it works)” ಎಂದಳು.

“ಮಕ್ಕಳಿಗೆ ಇದರಿಂದ ತೊಂದರೆಯಾದರೂ ಪಾಠ ಕಲಿಯುತ್ತಾರೆ.” ನಾನೆಂದಾಗ ಎಲ್ಲರೂ ಒಪ್ಪಿದರು.

ಹುಡುಗರು ಬಟ್ಟೆ–ಬರೆ ಬದಲಿಸಿ ಆಟದ ತೋಟಕ್ಕೆ ನನ್ನನ್ನು ಕರೆದುಕೊಂಡು ಹೋದರು. ಜೋಕಾಲಿ, ಜಾರುಬಂಡಿಗಳ ಆಟವಾಯಿತು. ಖೋ, ಖೋ ಆಟ ಅವರಿಗೆ ಕಲಿಸಿದೆ. ಕುಂಟಾಟವನ್ನೂ ಹೇಳಿಕೊಟ್ಟೆ. ಅಷ್ಟರಲ್ಲಿ ಕಾಫಿಗೆ ಕರೆ ಬಂದಿತು. ಕಾಫಿ ಕುಡಿಯಲು ಕುಳಿತಾಗ ಏಳು ವರ್ಷದ ಡಾಯೆನಾ.

“ಮೊಮ್, ನಾನು ಕ್ರಿಶ್ನನ್ನು ಬಹಳ ಪ್ರೀತಿಸುತ್ತೇನೆ. ನನಗವನು ಬಹಳ ಸೇರುತ್ತಾನೆ. ನಾನು ಅವನನ್ನೇ ಮದುವೆಯಾಗುತ್ತೇನೆ?” ಎಂದಳು. ಆ ಮಾತಿಗೆ ನಾವೆಲ್ಲ ಬೆಪ್ಪಾದೆವು.

“ನೀನೆಷ್ಟು ಸುಂದರಳಿದ್ದಿ ಡಾಯೆನಾ. ನನ್ನಂತಹ ಕಪ್ಪು ಬಣ್ಣದವನನ್ನು ಹೇಗೆ ಮದುವೆಯಾಗುವಿ?” ಎಂದು ನಾನು ಕೇಳಿದಾಗ.

“ನೀನು ಕಪ್ಪೇನಲ್ಲ. ಗೋದಿಯ ಬಣ್ಣ. ನಿನ್ನ ಬಣ್ಣ ನನಗೆ ಬಹಳ ಸೇರುತ್ತದೆ.” ಎಂದು ಉತ್ತರಿಸಿದಳು. ನಾನು.

“ನೀನು ನನ್ನನ್ನು ಮದುವೆಯಾಗಲು ಒಪ್ಪಿದ್ದಿ. ಆದರೆ ನಾನು ನಿನ್ನನ್ನು ಒಪ್ಪಿಕೊಂಡಿದ್ದೇನೆಯೇ ಎಂದು ಕೇಳಲೇ ಇಲ್ಲವಲ್ಲ?” ಎಂದು ಚೇಷ್ಟೆಯಾಡಿದೆ. ಡಾಯೆನಾ,

“ನೀನು ನಮ್ಮನ್ನೆಲ್ಲ ಎಷ್ಟೊಂದು ಪ್ರೀತಿಸುತ್ತಿ. ನನ್ನನ್ನು ಮದುವೆಯಾಗು ಎಂದು ಕೇಳಿಕೊಂಡರೆ ಆಗುವದಿಲ್ಲವೇ?” ಎಂದು ಯಾವ ಸಂಶಯವೂ ಇಲ್ಲದೆ ಸರಳವಾಗಿ ಕೇಳಿದ ಈ ಮುಗ್ಧ ಪ್ರಶ್ನೆಗೆ ಎಲ್ಲರೂ ಹೊಟ್ಟೆ ಬಿಗಿಹಿಡಿದು ನಕ್ಕರು. ನಾನು,

“ಹೋಗಲಿ ನಾನು ಒಪ್ಪಿಕೊಂಡೆ ಎಂದೇ ಇಟ್ಟುಕೊಳ್ಳೋಣ. ನಾನೆಷ್ಟು ದೊಡ್ಡವ; ನೀನಾದರೂ ಚಿಕ್ಕವಳು. ನಮ್ಮ ಮದುವೆ ಹೇಗೆ ಆಗಬೇಕು?” ಎಂದು ಮತ್ತೆ ಕೇಳಿದೆ. ಡಾಯೆನಾ,

“ನಾನೇನು ಯಾವಾಗಲೂ ಚಿಕ್ಕವಳಾಗಿಯೇ ಉಳಿಯುತ್ತೇನೆಯೇ? ನಾನು ದೊಡ್ಡವಳಾದ ಮೇಲೆ ಕಾರು ತೆಗೆದುಕೊಂಡು ಭಾರತಕ್ಕೆ ಬರುತ್ತೇನಂತೆ. ಅಲ್ಲಿ ಇಬ್ಬರೂ ಮದುವೆಯಾಗೋಣ.”ಎಂದಳು.

ಕೊನೆಯ ವಾದದಲ್ಲಿ ನಾನೇ ಸೋಲಬೇಕಾಯಿತು.

ಆದರೆ, ಎಲ್ಲಿ ಈ ಹುಡುಗಿ ದೊಡ್ಡವಳಾದ ಮೇಲೆ ಭಾರತಕ್ಕೆ ಹೊರಟೇ ಬಂದುಬಿಡುತ್ತಾಳೋ ಏನೋ ಎಂಬ ಒಂದು ಭಯ ಒಳಗೇ ಕಟ್ಟಾಡಿಸಿತು.

ಡಿಕ್ರಿಗೆ ಭಾರತಕ್ಕೆ ಹೋಗುವ ವಿಚಾರ ತುಂಬ ಒಪ್ಪಿಗೆಯಾಯಿತೆಂದು ಕಾಣುತ್ತದೆ. ಅಂತೆಯೇ ಪ್ರಶ್ನೆ ಹಾಕಿ ಹಾಕಿ ಮಾಹಿತಿ ಸಂಗ್ರಹಿಸಲಾರಂಭಿಸಿದರು. ಟ್ರೆವಲ್ ಏಜಂಟರೊಬ್ಬರ ಬಳಿ ಕರೆದುಕೊಂಡು ಹೋದರು. ಆತನಿಂದ ಭಾರತದ ಬಗ್ಗೆ ಇದ್ದ ಸಾಹಿತ್ಯವನ್ನು ರಾಶಿ ರಾಶಿ ಸಂಗ್ರಹಿಸಿ ತಂದರಲ್ಲದೇ ಪಾಸ್ಪೋರ್ಟಗಾಗಿ ಅರ್ಜಿಯನ್ನು ಸಲ್ಲಿಸಿದರು. ನಾವೆಯಲ್ಲಿ ಭಾರತಕ್ಕೆ ಹೋಗುವ ಸಾಹಸವನ್ನು ಮಾಡಿದ್ದರಂತೆ ಅದಕ್ಕಾಗಿ ಐವತ್ತು ಫೋಟಿನ ಸುಸಜ್ಜಿತ ನಾವೆಯೊಂದನ್ನು ಕೊಳ್ಳುವ ವಿಚಾರವೂ ಇತ್ತು ಅವರಿಗೆ. ಹೆಂಡತಿಗೆ `ಸಮುದ್ರ-ಬೇನೆ’ (see sickness) ಇದ್ದುದ್ದರಿಂದ ಆ ವಿಚಾರ ಬಿಟ್ಟುಕೊಡಬೇಕಾಯಿತು. ಆನಂತರ ಕಾರಿನ ವಿಚಾರ ಬಂತಂತೆ. ಹಲವಾರು ನಕಾಶೆಗಳ ಅಭ್ಯಾಸವನ್ನೂ ನಡೆಸಿದ್ದರು. ಅವರ ಉತ್ಸಾಹವನ್ನು ನೋಡಿ ನಾಳೆಯೇ ಭಾರತಕ್ಕೆ ಹೊರಡುತ್ತಾರೇನೋ ಎಂದು ಹೆದರಿಬಿಟ್ಟಿದ್ದೆ. (ಅವರಿಗೆ ರಜೆ ದೊರೆಯದಿದ್ದರಿಂದ ಭಾರತದ ಪ್ರವಾಸ ಮುಂದೆ ಬಿತ್ತೆಂದು ನಂತರ ಅವರ ಪತ್ರ ಬಂದಿತ್ತು.)

ರಾತ್ರಿ ಊಟಕ್ಕೆ ಕುಳಿತಾಗ ಮಕ್ಕಳೆಲ್ಲ ಮಲಗಿದ್ದರಿಂದ ಸೊಂಪಾಗಿ ಮಾತು ಸಾಗಿತ್ತು. ಮಾತನಾಡುತ್ತ ಆಡುತ್ತ ವಿಷಯ ಸಾವಕಾಶವಾಗಿ ಭಾರತೀಯ ಮಹಿಳೆಯತ್ತ ತಿರುಗಿತು.

“ಮಹಿಳೆಯರಿಗೆ ಎಂತಹ ಸಾಮಾಜಿಕ-ಜೀವನ (social-life) ಇದೆ. ನಿಮ್ಮ ದೇಶದಲ್ಲಿ?” ಹೆಲನ್ ಕೇಳಿದಳು.

“ನಿಮ್ಮ ಜೀವನಕ್ಕೂ ಭಾರತೀಯ ಮಹಿಳೆಯ ದೈನಂದಿನ ಜೀವನಕ್ಕೂ ಬಹಳ ವ್ಯತ್ಯಾಸವಿದೆ. ಇಲ್ಲಿಯಂತೆ ಅಡಿಗೆಗೆ ಬೇಕಾಗುವ ಜೀನಸುಗಳೆಲ್ಲ ಪೊಟ್ಟಣಗಳಲ್ಲಿ ಸಿಗದ್ದರಿಂದ ಧಾನ್ಯ ಸ್ವಚ್ಛ ಮಾಡುವಲ್ಲಿಂದ ಹಿಡಿದು ಆಕೆ ಪ್ರತಿಯೊಂದು ಕೆಲಸವನ್ನೂ ತಾನೇ ಮಾಡಬೇಕಾಗುತ್ತದೆ. ಅವಳ ಕೆಲಸದ ಯಂತ್ರ ಬೆಳಗ್ಗಿನಿಂದ ರಾತ್ರಿಯವರೆಗೂ ಬಿಡದೇ ನಡೆದಿರುತ್ತದೆ. ಚಹ, ಕಾಫಿ, ಊಟ, ತಿಂಡಿ, ನೀರು, ಅಡಿಗೆ, ಬಟ್ಟೆ ಒಗೆತ, ಗುಡಿಸುವುದು, ಸಾರಿಸುವುದು ಎಲ್ಲವೂ ಮನೆಯವಳ ಜವಾಬ್ದಾರಿ. ಇವುಗಳ ನಡುವೆ ಸಿಕ್ಕ ಅಲ್ಪ ವೇಳೆಯಲ್ಲಿ ನೆರೆಮನೆಗೆ ಹೋಗಿ ಅಡಿಗೆ, ಮದುವೆ, ಮುಂಜಿವೆಗಳ ಮಾತು-ಕತೆಯಾಡಿದಳೆಂದರೆ ಆಷ್ಟೇ ಮನರಂಜನೆ ಅವಳಿಗೆ. ತನ್ನ ಗಂಡ ಮತ್ತು ಮಕ್ಕಳ ಸುಖವೇ ತನ್ನ ಸುಖವೆಂದು ನಂಬಿದ ಭಾರತೀಯ ನಾರಿಗೆ ತನ್ನ ಜೀವನದ ಬಗ್ಗೆ ಮರುಕವಿಲ್ಲ ಸಮಾಧಾನವಿದೆ.” ನಾನು ತಿಳಿಸಿದೆ.

ಸಂಭಾಷಣೆಯಲ್ಲಿ ಹೆಲನ್ ಮಾ, ರೋಜಮಾ (ಹಾಗೆಂದು ಹೆಲನ್ಳ ತಾಯಿಯನ್ನೂ, ಡಿಕ್ಕರ ತಾಯಿಯನ್ನೂ ನಾನು ಕರೆಯುತ್ತಿದ್ದೆ) ಭಾಗವಹಿಸಿದ್ದರು. ಹೆಲನ್ಮಾಳಿಗೆ ತನ್ನ ಬಾಲ್ಯದ ನೆನಪಾಗಿರಬೇಕು. ಆಕೆಯೆಂದರು:

“ಕ್ರಿಶ್, ನಾನು ಸಣ್ಣವಳಿದ್ದಾಗ ನೀನು ಈಗ ವರ್ಣಿಸಿದ ಜೀವನವೇ ನಮ್ಮದೂ ಆಗಿತ್ತು. ನನ್ನ ತಂದೆ ಒಕ್ಕಲಿಗನಾಗಿದ್ದ. ಆತ ಹೊಲದಲ್ಲಿದ್ದಾಗ ನಾನು ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದೆ. ಕುದುರೆಯ ಮೈ ತೊಳೆಯುವುದು ಮನೆಗೆ ಸುಣ್ಣಬಣ್ಣ ಹಚ್ಚುವದು, ಇವೆಲ್ಲ ನನ್ನ ಪ್ರೀತಿಯ ಕೆಲಸಗಳಾಗಿದ್ದವು. ಈಗಿನಂತೆ ಆಹಾರದ ಪೊಟ್ಟಣಗಳು ಆಗ ದೊರೆಯುತ್ತಿರಲಿಲ್ಲ. ನಾವೇ ಕಾಳು–ಕಡಿ ಆರಿಸಿ, ಬೀಸಿ ಹಿಟ್ಟುಮಾಡಿ, ತಿಂಡಿ ತಿನಸುಗಳನ್ನು ಮಾಡಬೇಕಾಗಿತ್ತು. ಈಗ ನೀನು ಕಾಣುತ್ತಿರುವ ಅಮೇರಿಕನ್ ಜೀವನವೆಲ್ಲ ಇತ್ತೀಚಿನದು. ದ್ವಿತೀಯ ಮಹಾಯುದ್ಧದ ನಂತರದ ಬೆಳವಣಿಗೆಯಿದು. ಈ ಬದಲಾವಣೆ ಹುಡುಗರ ಸಮಸ್ಯೆಗಳಿಗೆ ಕಾರಣವಾಗಿದೆ.”

“ನಮ್ಮಲ್ಲಿ ಮಕ್ಕಳೆಲ್ಲ ಮನೆಗೆಲಸದ ಎಷ್ಟೋ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಅಂಗಡಿಗಳಿಗೆ ಹೋಗಿ ಸಾಮಾನು ತರುವದಾಗಲಿ, ಧಾನ್ಯ ಬೀಸಿಸಿಕೊಂಡು ಬರುವದಾಗಲಿ, ಇತರ ಚಿಕ್ಕಪುಟ್ಟ ಕೆಲಸಗಳಲ್ಲಾಗಲಿ ಸಹಾಯ ಮಾಡುತ್ತಾರೆ. ಇದರಿಂದ ತಾಯಿಗೆ ಸಹಾಯವಾಗುವದಲ್ಲದೇ ಮಕ್ಕಳ ಹೊಣೆಗೇಡಿತನಕ್ಕೆ ಅವಕಾಶವಿರುವುದಿಲ್ಲ” ಎಂದೆ. ಅದಕ್ಕೆ ಹೆಲನ್ಮಾ,

“ನೀನು ಹೇಳುವುದು ಅಕ್ಷರಶಃ ಸತ್ಯವಿದೆ ಕ್ರಿಶ್. ನಮ್ಮ ವೇಳೆಯೆಲ್ಲ ಕೆಲಸದಲ್ಲಿ ಹೋಗುತ್ತಿತ್ತು. ಹೀಗಾಗಿ ಇಂದಿನ ಹುಡುಗರ ಎಷ್ಟೋ ತಿಳಗೇಡಿ ಚಟುವಟಿಕೆಗಳು ನಮ್ಮ ಕಲ್ಪನೆಯಲ್ಲೂ ಬರುವಂತಿರಲಿಲ್ಲ. ಇಂದು ಮನೆಗೆರಡು ಕಾರು, ವಾರಕ್ಕೆ ಬೇಕಾಗುವ ತಿಂಡಿಗಳನ್ನು ಇಡಲು `ರಿಫ್ರಿಜೆರೇಟರ್’ ಬಟ್ಟೆ ಒಗೆಯಲು, ಪಾತ್ರೆ ತೊಳೆಯಲು. ಮನೆ ಸ್ವಚ್ಛಮಾಡಲು ಮಶಿನ್ಗಳು ಇರಬೇಕಾದರೆ ಮನೆಯ ಯಜಮಾನಿ, ಬೆನ್ನು ಮುರಿದುಹೋಗುವಷ್ಟು ದುಡಿಯಬೇಕಾಗಿಲ್ಲ. ತಾಯಿಗೆ ಸಾಕಷ್ಟು ಕೆಲಸವಿಲ್ಲದಿರುವಾಗ ಮಕ್ಕಳಿಗೆಲ್ಲಿಂದ ಬರಬೇಕು? ಇಷ್ಟು ಸಾಲದೆಂಬಂತೆ ಧನಸಂಪಾದನೆಯ ಸವಲತ್ತುಗಳೂ ಇವೆ. ಮಕ್ಕಳಿಗೆ ಆರ್ಥಿಕ ಸ್ವಾತಂತ್ರ್ಯ ಬಂದಾಗಿನಿಂದ ನಮ್ಮ ಕೌಟುಂಬಿಕ ಜೀವನಕ್ಕೆ ಬಲವಾದ ಆಘಾತವುಂಟಾಗಿದೆ. ತಂದೆ–ತಾಯಿಗಳು ಸುಖಲೋಲುಪರಾದಾಗ ಮಕ್ಕಳೂ ಇಲ್ಲಸಲ್ಲದ ಹುಡುಗಾಟಿಕೆಯಲ್ಲಿ ತೊಡಗಿರುತ್ತವೆ” ಎಂದಳು. ಹೆಲನ್ ನಡುವೆ ತನ್ನದೊಂದು ಮಾತು ಸೇರಿಸಿ,

“ಇಂದಿನ ಜಗತ್ತಿನಲ್ಲಿ ನಮ್ಮ ಜೀವನವನ್ನು ನಾವೇ ರೂಪಿಸಿಕೊಳ್ಳುವಂತೆಯಿಲ್ಲ. ನಮ್ಮ ಸುತ್ತ ಸಮಾಜ ಅಧಿಕಾರ ನಡೆಸಿರುತ್ತದೆ … ನೋಡು ಕ್ರಿಶ್, ನಮ್ಮ ಮಕ್ಕಳನ್ನು ಕಾಮಪ್ರಚೋದನೆಯೇ ಮುಖ್ಯವಾದ ಟಿ.ವಿ. ಯಿಂದ ದೂರ ಇಡಬೇಕೆಂದು ಮೊದಲಿನಿಂದಲೂ ನಿರ್ಧರಿಸಿ ಎಷ್ಟೋ ವರ್ಷ ನಾವು ಟಿ.ವಿ. ಸೆಟ್ಕೊಳ್ಳಲಿಲ್ಲ. ಶಾಲೆಗೆ ಹೋಗುತ್ತಿದ್ದ ಮಕ್ಕಳು,

“ಡೆಡ್, ನಮ್ಮಲ್ಲಿ ಏಕೆ ಟಿ.ವಿ. ಇಲ್ಲ? ಜಾನ್ನ ಮನೆಯಲ್ಲಿದೆ, ಟಿಮ್ನ ಮನೆಯಲ್ಲಿದೆ. ಎಲ್ಲರ ಮನೆಯಲ್ಲೂ ಇದೆ, ನಮ್ಮಲ್ಲಿ ಏಕೆ ಇಲ್ಲ? … ಇಂದು ಆರು ಗಂಟೆಗೆ `ಕಾಮಿಕ್ಸ್’ ಇದೆಯಂತೆ. ನಾವು ಜಾನ್ನ ಮನೆಗೆ ಹೋಗಿ ನೋಡಬಹುದೇ?” ಎಂದು ಕೇಳಿದವು ಇನ್ನೊಮ್ಮೆ,

“ನಾವು ಟಿ.ವಿ. ಕೊಳ್ಳಲಿಕ್ಕೆ ಆಗದಷ್ಟು ಬಡವರೇ?” ಎಂದು ಕೇಳಿದವು. ಅವು ಹಾಗೆಂದಾಗ ಎಲ್ಲಿಲ್ಲದ ಕೋಪ ಬಂದಿತ್ತು. ಇನ್ನೊಬ್ಬರ ಮನೆಗೆ ಹೋಗಿ ನೋಡಲೇ ಎಂದಾಗ ಸಿಟ್ಟು ಪರಾಕಾಷ್ಠೆ ಮುಟ್ಟಿತ್ತು. ಆಧುನಿಕ ಮನೋವಿಜ್ಞಾನದ ಪ್ರಕಾರ ಮಕ್ಕಳ ಮೇಲೆ ಸಿಟ್ಟಿಗೆದ್ದರೆ ಅವುಗಳ ಮಾನಸಿಕ ಬೆಳವಣಿಗೆಗೆ ಧಕ್ಕೆ ತಗಲುತ್ತದಂತೆ. ದೈಹಿಕ ಶಿಕ್ಷೆಯೂ ಕೇಡು ಮಾಡುತ್ತದಂತೆ. ಆದ್ದರಿಂದ ಮಕ್ಕಳ ಮನ ಒಲಿಸಲು.

“ಟಿ.ವಿ. ನೋಡಬಾರದು. ಅದು ಒಳ್ಳೆಯದಲ್ಲ. ಆದ್ದರಿಂದ ನಮ್ಮಲ್ಲಿ ಇಟ್ಟಿಲ್ಲ. ನೀನು ಜಾನ್ನ ಮನೆಗೆ ಹೋಗಿ ಟಿ.ವಿ. ನೋಡುವುದು ಬೇಡ” ಎಂದಾಗ ಡೇವ್ ಪಟ್ಟು ಹಿಡಿದು ಕುಳಿತ. ಎಷ್ಟು ತಿಳಿಹೇಳಿದರೂ ಆತನ ಮನಸ್ಸನ್ನು ಒಲಿಸುವುದು ಸಾಧ್ಯವಾಗದ್ದರಿಂದ ಚರ್ಮದ ಪಟ್ಟಿಯಿಂದ ಎರಡು ಬಿಗಿದೆ. ಸರಿ, ಅಷ್ಟಕ್ಕೆ ಹುಡುಗ ತುಂಬ ಸಾಧುವಾದನಲ್ಲದೇ ತಿರುಗಿ ಟಿ.ವಿ. ಯ ಮಾತು ಕೂಡ ಎತ್ತಲಿಲ್ಲ!” ಎಂದಳು.

ಇಷ್ಟೊತ್ತು ಭಾರತದ ನಕಾಶೆ ತಿರುವಿ ಹಾಕುತ್ತಿದ್ದ ಡಿಕ್ ಈಗ ಸಂಭಾಷಣೆಯಲ್ಲಿ ಬಂದು ಸೇರಿದರು. ಆಗ ಹೆಲನ್,

“ಡಿಕ್, ಇಂದು ಮಧ್ಯಾಹ್ನ ಒಂದು ಮೋಜಾಯಿತು. ಡೇವ್, ನಾಲ್ಕು ದಿನಗಳಿಂದ ಸ್ವೆಟರನ್ನು ಶಾಲೆಯಲ್ಲಿ ಮರೆತುಬರುತ್ತಿದ್ದನಲ್ಲವೇ? ಇಂದು ಕ್ರಿಶ್ ಸೂಚಿಸಿದಂತೆ, ಸ್ವೆಟರ್ ತರದಿದ್ದರೆ ಸಂಜೆಯ ತಿಂಡಿಯಿಲ್ಲವೆಂದು ಹೇಳಿಬಿಟ್ಟೆ, ಡೇವ್ ಓಡುತ್ತೇ ಶಾಲೆಗೆ ಹೋಗಿ ಸ್ವೆಟರ್ ತಂದ! ಈ ಭಾರತೀಯ ಮಂತ್ರ ಒಳ್ಳೇ ಸಹಾಯಕ್ಕೆ ಬಂದಿತು.” ಎನ್ನುತ್ತ ಕಪಾಟಿನ ಮೇಲಿದ್ದ ಎರಡು ಬೆರಳಗಲದ ಪಟ್ಟಿಯನ್ನು ತೋರಿಸಿ ನನ್ನನ್ನುದ್ದೇಶಿಸಿ,

“ಕೆಲವೊಮ್ಮೆ ಮಕ್ಕಳು ನಮ್ಮ ಮಾತು ಕೇಳದಿದ್ದರೂ ಇದರ ಮಾತನ್ನು ಕೇಳುತ್ತವೆ.” ಎಂದಳು ಡಿಕ್ಕರು,

“ಕ್ರಿಶ್, ಭಾರತದಲ್ಲಿ ಮಕ್ಕಳಿಗೆ ದೇಹದಂಡನೆ ಕೊಡುತ್ತಾರೆಯೇ?” ಎಂದು ಕೇಳಿದರು.

“ಮಾತಿನಿಂದ ತಿಳಿದುಕೊಳ್ಳಲಾರದವನಿಗೆ ಬೆತ್ತದಿಂದ ಹೇಳಿಕೊಡಬೇಕಾಗುತ್ತದೆ. ನಿಮ್ಮ ದೇಶದಲ್ಲಿಯೂ ಬೆತ್ತದ ಅವಶ್ಯಕತೆ ಬಹಳವಿದೆಯೆಂದು ನನಗನಿಸುತ್ತದೆ. ದಂಡನೆಯಿಲ್ಲದಿದ್ದರೆ ಮಕ್ಕಳು ಯಾರಿಗೂ ಹೆದರುವುದಿಲ್ಲ. ನಮ್ಮ ಆಫೀಸಿನ ಟೈಪಿಸ್ಟಳಿಗೆ ಮೂವರು ಮಕ್ಕಳು. ಬರುವಾಗ ಮಕ್ಕಳನ್ನು ಕರೆದುಕೊಂಡೇ ಬರುತ್ತಾಳೆ. ಭಯಂಕರ ಗದ್ದಲ ಹಾಕುತ್ತವೆ ಹುಡುಗರು. ತಾಯಿ ಒಂದೇ ಸಮನೆ ಮೆಲುದನಿಯಲ್ಲಿ ಸುಮ್ಮನಿರುವಂತೆ ಬೇಡಿಕೊಳ್ಳುತ್ತಾಳೆ. ಅವು ಕಿವಿಗೊಡುವುದೇ ಇಲ್ಲ. ಒಮ್ಮೆ ತಮ್ಮತಮ್ಮಲ್ಲಿ ಕಾದಾಡಿ ನಮ್ಮ ಅಲ್ಮೈರಾದ ದೊಡ್ಡ ಕನ್ನಡಿಯನ್ನು ಒಡೆದು ಹಾಕಿದವು. ತಾಯಿ ಆಗಲೂ ಒಂದೆರಡು ಮಾತನಾಡಿ ಸುಮ್ಮನಿರಬೇಕೇ? ಆ ಹುಡುಗರೂ ಏನೂ ಆಗಿಲ್ಲವೆಂಬಂತೆ ತಮ್ಮ ಕಾಳಗವನ್ನು ಮುಂದುವರಿಸಿದವು.” ನಾನೆಂದಾಗ,

“ಅವಳು ಅವರಿಗೆ ದೈಹಿಕ ದಂಡನೆ ವಿಧಿಸಿದ್ದರೆ ಇಷ್ಟೆಲ್ಲ ತೊಂದರೆ ಕೊಡುತ್ತಿರಲಿಲ್ಲವೆಂದು ನಿನಗನಿಸುತ್ತದೆಯೇ?” ಡಿಕ್ ಕೇಳಿದ.

“ನಿಸ್ಸಂಶಯವಾಗಿ, ನನ್ನ ಪ್ರಾಧಾಪಕ, ಮೆಕ್ ಎಂಡ್ರೂಸರು ಒಂದು ಘಟನೆಯನ್ನು ಹೇಳುತ್ತಿದ್ದರು. ಅವರು ಒಮ್ಮೆ ಕೆಲವು ಕುಟುಂಬಗಳೊಡನೆ `ಪಿಕ್ನಿಕ್’ಗೆ ಹೋಗಿದ್ದರಂತೆ. ಜಾನ್ ದಂಪತಿಗಳಿಗೆ ಏಳೆಂಟು ವರ್ಷದ ಒಬ್ಬಳೇ ಮಗಳಂತೆ. ಹೀಗಾಗಿ ಅವಳನ್ನು ತುಂಬ ಮುದ್ದಿಸಿ, ಒಂದಿಷ್ಟೂ ನೋಯಿಸದೆ ಬೆಳಸಿದ್ದರಂತೆ. ಹುಡುಗಿ ಕಾಡಾನೆಯಂತೆ ಬೆಳದಿದ್ದಳಲ್ಲದೆ ತನ್ನ ವಯಸ್ಕರನ್ನು ಹೊಡೆಯುವುದು, ಬಡಿಯುವುದು ಮಾಡುತ್ತಿದ್ದಳು. ಹಾದಿಯುದ್ದಕ್ಕೂ ಆಕೆ ಕಿಡಿಗೇಡಿತನ ಮಾಡಿದರೂ ತಂದೆ-ತಾಯಿ ಪಿಟ್ಟೆನ್ನಲಿಲ್ಲವಂತೆ. ಮೆಕ್ ಎಂಡ್ರೂಸರಿಗೆ ಇದು ಸಹನವಾಗದಿದ್ದರೂ ಸುಮ್ಮನಿದ್ದರು. ಮಂಡಳಿ ಊಟಕ್ಕೆ ಕುಳಿತಾಗ ಹುಡುಗಿ ಇತರ ಮಕ್ಕಳ ಎಲೆಗಳಲ್ಲಿ ಮಣ್ಣು ತೂರಿದಳಂತೆ. ಊಟವಾದ ಮೇಲೆ ಹುಡುಗರೆಲ್ಲ ಕೆಲವರು ಸರೋವರದ ದಂಡೆಯಲ್ಲಿ ನಿಂತು ತೆರೆಗಳನ್ನು ನೋಡುತ್ತಿದ್ದಾಗ ಆ ಹುಡುಗಿ ಹಿಂದಿನಿಂದ ಹೋಗಿ ಇನ್ನೊಬ್ಬ ಹುಡುಗಿಯನ್ನು ನೂಕಿ ಬಿಟ್ಟಳಂತೆ! ಸಿಟ್ಟಿನಿಂದ ಕೆಂಡಕೆಂಡವಾದ ಮೆಕ್ ಎಂಡ್ರೂಸರು ಓಡಿ ಹೋಗಿ ಆ ಹುಡುಗಿಯನ್ನು ಹಿಡಿದು ನಾಲ್ಕಾರು ಏಟುಗಳನ್ನು ಬಿಗಿದರು. ಹುಡುಗಿಯ ಪಾಲಕರು `ನಮ್ಮ ಹುಡುಗಿಯನ್ನು ದಂಡಿಸುವ ಅಧಿಕಾರ ನಿಮಗಿಲ್ಲ’ ಎಂದು ತಡೆಯಲು ಬಂದರಂತೆ. “ನೀವು ಒಂದು ಹೆಜ್ಜೆ ಮುಂದಿಟ್ಟರೆ ನಿಮಗೂ ಏಟು ಬಿದ್ದಾವು” ಎಂದು ಗುಡುಗಿ ಪ್ರಾಧ್ಯಾಪಕರು ಹುಡುಗಿಗೆ ಮತ್ತೆರೆಡು ಏಟು ಬಿಗಿದು “ನೀನು ಸರಿಯಾಗಿ ನಡೆದುಕೊಳ್ಳದಿದ್ದರೆ ಇನ್ನೊಂದು ಅರ್ಧ ತಾಸಿಗೆ ಬಂದು ನಿನ್ನ ಬೆನ್ನ ಮೂಳೆ ಮುರಿದುಬಿಡುತ್ತೇನೆ”ಂದು ಗದ್ದರಿಸಿ ತಮ್ಮ ಕುಟುಂಬದೊಡನೆ ತಿರುಗಿ ಬಂದರಂತೆ. ಮರುದಿನ ತಮ್ಮ ಇನ್ನೊಬ್ಬ ಗೆಳೆಯನಿಗೆ ಆ ಹುಡುಗಿಯ ಬಗ್ಗೆ ವಿಚಾರಿಸಿದರು; ಓ! ನೀನು ಹೊರಟು ಹೋದ ಮೇಲೆ ಆ ಹುಡುಗಿ ದೇವಿಯಂತೆ (angel) ನಡೆದುಕೊಂಡಳು!” ಎಂದು ಟಾಮ್ ಉದ್ಗದಿಸಿದನಂತೆ. ಅತಿ ಸಲಿಗೆ ಹುಡುಗರನ್ನು ಕೆಡಿಸುತ್ತದೆ ಎನ್ನುವದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ?” ನಾನು ಉದಾಹರಣೆ ಕೊಟ್ಟು ವಿವರಿಸಿದೆ.

“ನೀನು ಹೇಳುವುದು ಸರಿ ಕ್ರಿಶ್, ಆದರೆ ಇದಕ್ಕೆ ನಮ್ಮ ಸಮಾಜದ ಅನುಮೋದನೆಯಿಲ್ಲ. ನಿನಗೆ ಟಿ.ವಿ. ಯ ವಿಷಯ ಹೇಳುತ್ತಿದ್ದೆನಲ್ಲವೇ? ಮಕ್ಕಳು ಟಿ.ವಿ.ಯ ಗೊಡವೆ ಬಿಟ್ಟರು. ಆದರೆ ನಮ್ಮ ಸಂಸ್ಥೆಗಳು ನಮ್ಮನ್ನು ಬಿಡಬೇಕಲ್ಲ? ಒಂದು ದಿನ ಶಿಕ್ಷಕಿಯ ಯಾವದೋ ಟಿ.ವಿ. ಕಾರ್ಯಕ್ರಮ ನೋಡಿ ಅದರ ಬಗ್ಗೆ ಒಂದು ಪ್ರಬಂಧವನ್ನು ಬರೆಯಲು ಹೇಳಿದ್ದಳು. ನಮ್ಮಲ್ಲಿ ಟಿ.ವಿ. ಇಲ್ಲದ್ದರಿಂದ ಮಕ್ಕಳಿಂದ ಆ ಮನೆಗೆಲಸ ಪೂರೈಸಲಾಗಲಿಲ್ಲ. ಮರುದಿನ ಶಿಕ್ಷಕಿಯಿಂದ ಕರೆ ಬಂದಿತು. ಟಿ.ವಿ. ಯ ಬಗ್ಗೆ ನಮ್ಮ ವಿರೋಧವನ್ನು ವ್ಯಕ್ತಪಡಿಸಿದಾಗ ಶಿಕ್ಷಕಿ ತಲೆಯಲ್ಲಾಡಿಸಿ, ತನ್ನ ಕೈಯಲ್ಲಿ ಏನೂ ಇಲ್ಲವೆಂದೂ ಮೇಲಧಿಕಾರಿಗಳ ನಿರ್ದೆಶನದಂತೆ ತಾನು ಪಾಠ ಕೊಡುವುದಾಗಿ ತಿಳಿಸಿದಳು. ಉಪಾಯವಿಲ್ಲದೇ ನಾವೂ ಟಿ. ವಿ. ತರಬೇಕಾಯಿತು; ತಂದೆವು. ಆದರೆ ಮಕ್ಕಳು ಶೈಕ್ಷಣಿಕ ಕಾರ್ಯಕ್ರಮಗಳನ್ನಷ್ಟೇ ನೋಡಬೇಕೆಂದು ಕಡ್ಡಾಯ ಮಾಡಿಬಿಟ್ಟಿದ್ದೇವೆ.” ಹೆಲನ್ ಅಷ್ಟರಲ್ಲೆ ತಿದ್ದಿಕೊಂಡಳು.

“ನಿಮ್ಮ ಧೋರಣೆ ನೋಡಿ ನನಗೆ ಬಹ ನೆಮ್ಮದಿಯೆನಿಸಿದೆ. ನಿಮ್ಮಂತೆ ಹೆಚ್ಚಿನ ಅಮೇರಿಕನ್ನರ ಧೋರಣೆಯಿದ್ದರೆ ನಿಮ್ಮ ದೇಶ ಇನ್ನೂ ಉನ್ನತಿಯ ಹಾದಿಯಲ್ಲಿ ಇರುತ್ತಿತ್ತು.” ನಾನೂ ಒಂದು ಉಪದೇಶಕೊಟ್ಟೆ. ಎಲ್ಲರೂ ಮೌನವಾಗಿ ಸಮ್ಮತಿ ಸೂಚಿಸಿದರು. ಎಲ್ಲರೂ ತಮ್ಮ ತಮ್ಮ ಕೋಣೆಗಳಿಗೆ ಮರಳಿದರು. ನಾಲ್ಕೈದು ದಿನ ಹೆಮಲಿನ್ರೊಂದಿಗೆ ಇದ್ದು ಅವರ ಆತಿಥ್ಯ ಪಡೆದೆ. ನನಗೆ ಗೊತ್ತಿದ್ದ ಕೆಲ ಭಾರತೀಯ ಅಡಿಗೆ ತಿಂಡಿಯನ್ನು ಮಾಡಿ ಅವರಿಗೆ ಬಡಿಸಿದೆ. ಆ ನಾಲ್ಕೈದು ದಿನಗಳು ನಾಲ್ಕೈದು ನಿಮಿಷಗಳಂತೆ ಕಳೆದವು. ನಾನು ಹೊರಟು ನಿಂತಾಗ ಹೆಲನ್ನಳ ಕಂಠ ತುಂಬಿ ಬಂದಿತ್ತು.

“ಕ್ರಿಶ್, ನೀನು ಬಲು ಬೇಗ ನಮಗೆ ಸಮೀಪದವನಾದೆ. ನೀನು ನನ್ನ ತಮ್ಮನಂತೆ ನನಗೆ ಭಾಸವಾಗುತ್ತಿದೆ … ಇನ್ನೂ ಕೆಲ ದಿನ ನೀನು ಇಲ್ಲಿ ನಿಲ್ಲುವಂತಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!” ಎಂದು ದಾರಿಯಲ್ಲಿ ತಿನ್ನುವದಕ್ಕೆಂದು `ಸೆಂಡ್ವಿಚ್’, ಗೇರುಬೀಜಗಳನ್ನು ಕಟ್ಟಿ ಕೊಟ್ಟಳು. ಊರಲ್ಲಿಯ ನನ್ನ ಅಕ್ಕಂದಿರು ತೋರಿಸುವ ಮಮತೆಗೆ ಯಾವುದರಲ್ಲೂ ಕಡಿಮೆಯಾಗಿರಲಿಲ್ಲ. ನನ್ನ ಬಸ್ಸು ಮಧ್ಯರಾತ್ರಿ ಹೊರಡಲಿತ್ತು. ನಾನು ಹೊರಟಾಗ ಮಕ್ಕಳೆಲ್ಲ ಮಲಗಿದ್ದರು. ಮರುದಿನ ಎದ್ದಾಗ ನಾನಿಲ್ಲದ್ದು ನೋಡಿ ಮಕ್ಕಳಿಗೆ ನಿರಾಶೆಯಾಯಿತೆಂದು ಹೆಲನ್ನಳ ಪತ್ರ ತಿಳಿಸಿತು.