`ಹಿಮಾಲಯ’ದಲ್ಲಿ

ನಾನೂ ಅಮೇರಿಕೆಗೆ ಹೋಗಿದ್ದೆ: `ಹಿಮಾಲಯ’ದಲ್ಲಿ

ಮುಂಬೈಯಲ್ಲಿ ತಂಗಿದ `ಹಿಮಾಲಯ’, ಪ್ರಮುಖ ಸಾಗರಗಾಮಿಗಳಲ್ಲಿ ಒಂದು. ಬಂದವರಲ್ಲಿ ಗದ್ದಲವೇ ಗದ್ದಲ. ಹೊರಟವರು ನೂರು ಮಂದಿಯಾದರೆ ಬೀಳ್ಕೊಡಲು ಬಂದವರು ಸಾವಿರಾರು ಮಂದಿ. ಆಪ್ತರಾಗಿ ಕೆಲವರು ಬಂದಿದ್ದರು. ಸ್ನೇಹಿತರಾಗಿ ಹಲವರು ಬಂದಿದ್ದರು. ಪೋಟೊ ತೆಗೆದನೊಬ್ಬ; ಹಾರ ಹಾಕಿದ ಇನ್ನೊಬ್ಬ; ಕಣ್ಣೀರು ಸುರಿಸಿದಳು ಮಗುದೊಬ್ಬಳು. ಯಾವನೋ ಗುಜರಾತಿಗೆ ತಿಲಕ ಹಚ್ಚಿದರು. ಮಾರವಾಡಿಗೆ ಬಣ್ಣ ಹಾಕಿದರು. ಮಹಾರಾಷ್ಟ್ರೀಯನಿಗೆ ಆರತಿ ಬೆಳಗಿದರು. ಇವೆಲ್ಲ ಸಂಭ್ರಮ ನೋಡುತ್ತ ನಿಂತ ನನಗೆ, ನಾನು ಹೊರಟು ನಿಂತವನೋ ಬೀಳ್ಕೊಡಲು ನಿಂತವನೋ ತಿಳಿಯದಾಯಿತು. ನನಗೆ ತಿಲಕ, ಹಾರ, ಬಣ್ಣ, ಕಣ್ಣೀರು ಒಂದೂ ಬರಲಿಲ್ಲ–ಬೇಕೂ ಇರಲಿಲ್ಲ. ಏನೋ ಹತ್ತಿರದ ಊರಿಗೆ ಹೊರಟವನಂತೆ ಇತ್ತು ನನ್ನ ವಿದೇಶಪಯಣ.

ಹತ್ತು ಗಂಟೆ ರಾತ್ರಿಯಾಗಿರಬೇಕು, `ಹಿಮಾಲಯ’ ಮುಂಬೈಯನ್ನು ಬಿಟ್ಟು ಕೊಟ್ಟಾಗ ಇಷ್ಟು ವರ್ಷ ಸಾಕಿ ಸಲುಹಿದ ಮಾತೃಭೂಮಿಯನ್ನು ಬಿಟ್ಟು, ಗೊತ್ತುಗುರಿಯಿಲ್ಲದ ನಾಡಿಗೆ ಹೊರಟು ನಿಂತಿದ್ದೆ. ಮುಂದಾಗುವ ಘಟನೆಗಳೊ ಅನಿಶ್ಚಿತ. ಮೂರು ನಾಲ್ಕು ವರ್ಷಗಳ ನಂತರ ಭಾರತಕ್ಕೆ ಮರಳಿದಾಗ ಏನೇನು ಬದಲಾವಣೆಗಳಾಗಬಹುದು? ಕ್ರಾಂತಿಯಾಗಬಹುದು; ಯುದ್ಧವಾಗಬಹುದು. ಹಳೆಯ ನಾಯಕರು ಬಿದ್ದು ಹೊಸ ನಾಯಕರು ಬರಬಹುದು, ಇಷ್ಟು ದಿನ ಕಾಣದ, ಅನುಭವಿಸದ ವೇದನೆ ಒಮ್ಮೆಲೆ ಉಮ್ಮಳಿಸಿ ಬಂದಿತು. ನನಗೇ ತಿಳಿಯದಂತೆ ಕಣ್ಣು ತುಂಬಿಬಂದವು. ಅಂತರ್ವೆದನೆಯನ್ನು ತಾಳಲಾರದೇ ನನ್ನ `ಕೇಬಿನ್’ ಸೇರಿಕೊಂಡೆ.

ಸುಖನಿದ್ರೆಯಾಗಿ ಎಚ್ಚರವಾದದ್ದು ಯಾರೊ ಬಾಗಿಲು ಬಡಿದಾಗ ಬಂದವನು ಸ್ಟಿವರ್ಡ (ಹಡಗದ ಮಾಣಿ). ಗಿಡ್ಡ ದೇಹ, ಮಾಟವಾದ ಮುಖವುಳ್ಳ ಬ್ರಿಟಿಶ್ ಆತ. `ಸುಪ್ರಭಾತ’ (good morning) ಎನ್ನುತ್ತಲೇ ಒಳಗೆ ನುಗ್ಗಿದ. ದೊಡ್ಡ ಹರಿವಾಣದಲ್ಲಿ ಒಂದು ಜೋಡು ಟೋಸ್ಟು, ಜಾಮ್, ಬೆಣ್ಣೆ ಮತ್ತು ಹಣ್ಣಿನ ರಸದ ಗ್ಲಾಸು ಇದ್ದವು. ಜೊತೆಗೆ ಹತ್ತಾರು ಕಾಗದಪತ್ರಗಳು, `ತಮಗೆ ಕಪ್ಪು ಕಾಫಿ (black coffee) ಬೇಕೇ ಹಾಲುಹಾಕಿದ ಕಾಫಿ ಬೇಕೇ?’ ಎಂದು ಕೇಳಿದ. `ಇದಿಷ್ಟೆ ಸಾಕು’ ಎಂದಾಗ ಆತನಿಗೆ ಬಹಳ ಸೋಜಿಗವೆನಿಸಿತು. `ನಾಷ್ಟಾ’ಕ್ಕೆ (break-fast) ನಿಮಗೆ ಮೊದಲ ಪಂಕ್ತಿ ಬೇಕೆ ಎರಡನೆಯದೇ? ಮೊದಲನೇ ಪಂಕ್ತಿ ಎಂಟು ಗಂಟೆಗೆ, ಎರಡನೆಯದು ಎಂಟೂವರೆಗೆ. ನಾಷ್ಟಾಕ್ಕಾಗಲಿ, ಊಟಕ್ಕಾಗಲಿ `ಸೂಟ್’ ಧರಿಸಿ ಬರಬೇಕು. ಹತ್ತು ಗಂಟೆಗೆ ನೀವು ಕುಳಿತಲ್ಲಿ ಆಯ್ಯಕ್ರೀಂ ಬರುವುದು. ಒಂದು ಗಂಟೆಗೆ ಊಟ, ನಾಲ್ಕು ಗಂಟೆಗೆ ಚಹ ಅಥವಾ ಕಾಫಿ. ರಾತ್ರಿ ಎಂಟು ಗಂಟೆಗೆ ಊಟ. ಸೆರೆ-ಸಿಗರೇಟು ಬಿಟ್ಟರೆ ಇನ್ನಾವುದಕ್ಕೂ ಹಣ ಕೊಡಬೇಕಾಗಿಲ್ಲ. ನಿಮಗೆ ಇನ್ನೆನಾದರೂ ಸಹಾಯ ಬೇಕಿದ್ದರೆ ಫೋನಿನಿಂದ ಕರೆಯಿರಿ. ಈಗ ನಿಮ್ಮ ಹಾಸಿಗೆ ಸರಿಪಡಿಸಲೇ’ ಎಂದು ತಿಳಿಸುವದನ್ನೆಲ್ಲ ತಿಳಿಸಿ, ಕೊನೆಗೆ ಕೇಳಿ, ಸಮ್ಮತಿ ಪಡೆದು, ಹಾಸಿದ ಬಟ್ಟೆಗಳನ್ನು ತೆಗೆದು ಶುಭ್ರವಾದ ಇತರ ಬಟ್ಟೆಗಳನ್ನು ಹಾಸಿದ. ಆತನ ಪ್ರತಿಯೊಂದು ಕೆಲಸದಲ್ಲಿ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಹತ್ತು ನಿಮಿಷಗಳಲ್ಲಿ ಆಕರ್ಷಣೀಯ ಹಾಸಿಗೆ ಸಿದ್ಧವಾಯಿತು. ಹಾಸಿಗೆ `ಸಿದ್ಧ’ ಮಾಡುವುದರಲ್ಲಿಯೇ ಆರು ತಿಂಗಳ ತರಬೇತಿ ಪಡೆದಿದ್ದಾನಂತೆ ಆತ. ಅಮೇಲೆ ಕೋಣೆಯನ್ನೆಲ್ಲ ಸಾಫ್ ಮಾಡಿ ಪಾಲಿಶ್ ಮಾಡುವ ಬೂಟುಗಳನ್ನು ಕೋಣೆಯ ಹೊರಗೆ ಇಡುವಂತೆ ಹೇಳಿ ಹೋದ.

“ಮನಸ್ಸಾಗಲಿಲ್ಲ. ನಾನೇ ಸಂಶೋಧನೆಗೆ ಹೊರಟೆ. ಕಾಲು ಸೋತುಬರುವಷ್ಟು ಹಡಗದಲ್ಲಿ ಓಡಾಡಿದರೂ ಹತ್ತಿರದಲ್ಲಿಯೇ ಬೂಟು-ಪಾಲಿಶ್ ಮಾಡುತ್ತಿದ್ದವನಿಗೆ ಕೇಳಿದೆ. `ಸಭ್ಯಗೃಹಸ್ಥರು (gentleman) ಎಂದು ಬರೆದಲ್ಲಿ ಹೋಗು’ ಎಂದು ಹೇಳಿದ. ಇದಕ್ಕೂ ಮುಂಚೆ ಹತ್ತಾರು `ಸಭ್ಯಗೃಹಸ್ಥರು’ ಮತ್ತು `ಮಹಿಳೆಯರು’ ಬೋರ್ಡುಗಳನ್ನು ದಾಟಿ ಬಂದಿದ್ದೆ. ಅವು ಕಕ್ಕಸಗಳಾಗಿರಬಹುದೆಂಬ ಸಂದೇಹ ಕೂಡ ಬರುವಂತಿರಲಿಲ್ಲ. ಒಂದರ ಒಳಗೆ ಹೊಕ್ಕಾಗ ಒಳಗಿನ ಶುಭ್ರತೆ, ಅಚ್ಚುಕಟ್ಟುತನಗಳನ್ನು ನೋಡಿ ದಿಗ್ಭ್ರಮೆಯಾಯಿತು. ಕುರ್ಚಿಯಂತೆ ಇದ್ದ `ಕಮೋಡ್’ ಕಾಗದದ ಉಪಯೋಗ ಹೇಗೆ ಹೇಗೋ ಅನಿಸಿತು. ಸ್ವಚ್ಛತೆಗೆಂದು ಸ್ನಾನವನ್ನೂ ಮುಗಿಸಿಬಿಟ್ಟೆ. ಬಿಸಿನೀರು ತಣ್ಣೀರಿನ ವ್ಯವಸ್ಥೆಯೂ ಅಲ್ಲಿ ಉತ್ತಮವಾಗಿತ್ತು.

ಎಂಟು ಗಂಟೆಗೆ ಶುಭ್ರಶ್ವೇತವಸನಧಾರಿಯೊಬ್ಬ ಮಧುರವಾದ ಗಂಟೆಯೊಂದನ್ನು ಬಾರಿಸುತ್ತ ಹೊರಟ. ಸುಸಜ್ಜಿತವಾಗಿ ಉಡುಪು ಧರಿಸಿದ ಆಂಗ್ಲ ಸ್ತ್ರೀ-ಪುರುಷರು ಸಾಲುಸಾಲಾಗಿ ಊಟದ ಮನೆಯತ್ತ ಹೊರಟಿದ್ದನ್ನು ನೋಡಿ ಅದು ನಾಷ್ಟಾದ ಗಂಟೆಯೆಂದು ತಿಳಿಯಿತು.

ಊಟದ ಮನೆಗೆ ಹೋಗಲು ಲಿಫ್ಟಿನ ವ್ಯವಸ್ಥೆಯಿತ್ತು. ಅಲ್ಲಿ ಕಾಲಿಟ್ಟಾಗ ಇಂದ್ರಲೋಕವೊಂದು ಗೋಚರಿಸಿತು. ಎಲ್ಲೆಡೆ ಸುಸಜ್ಜಿತ ಟೇಬಲ್-ಕುರ್ಚಿಗಳು. ಅವುಗಳ ಮೇಲೆ ಸುಂದರವಾಗಿ ಹಾಸಿಟ್ಟ ಟಾವೆಲ್ಗಳು ಕಪ್ಪು-ಬಸಿ, ಚಮಚಗಳು, ಎರಡು ಟೇಬಲಿಗೊಬ್ಬ ಬಿಳಿಯ `ಮಾಣಿ’. ಎಲ್ಲರ ಮೇಲ್ವಿಚಾರಣೆಗೆ ಅಧಿಕಾರಿಯೊಬ್ಬ. ಮೆಲುವಾದ ಸುಮಧುರ ಸಂಗೀತ. ನನ್ನ ಟೇಬಲ್ ಹತ್ತಿರ ಹೋದಾಗ, ಆತ್ಮೀಯತೆಯ ನಸುನಗೆಯಿಂದ `ಸುಪ್ರಭಾತ’ ಕೋರಿದ ಮಾಣಿ. ಕುರ್ಚಿಯನ್ನು ಹೊಂದಿಸಿದ. `ಇಂದಿನ ಸ್ಪೆಶಲ್’ದ ಪತ್ರಿಕೆ ಕೈಗೆ ಕೊಟ್ಟ. ಹಲವಾರು ಹಣ್ಣಿನ ರಸಗಳು, ಹತ್ತಾರು ಖಾದ್ಯಗಳು, ಬ್ರೆಡ್-ಬೆಣ್ಣೆ ಜಾಮ್ಗಳಿಗಂತೂ ಲೆಕ್ಕವಿಲ್ಲ. ಚಹ, ಕಾಫಿ, ಹಣ್ಣು-ಹಂಪಲಗಳು, ಮನದಣಿಯೆ ನಾಷ್ಟಾ ಆಯಿತು.
“ಮಗ್ಗಲಿನ ಟೇಬಲ್ ಬಳಿ ಬಂಗಾಲಿಯೊಬ್ಬನಿದ್ದ. ಯಾಕೋ ಆತ ನನ್ನೆಡೆ ಎವೆಯಿಕ್ಕದೇ ನೋಡುತ್ತಿದ್ದ. ತಿಂಡಿ, ಕಾಫಿ ಮುಗಿದೊಡನೆಯೇ `ಮಾತನಾಡಿಸಬಹುದೇ?’ ನನ್ನ ಊಹೆ ಸರಿಯಾಯಿತು. ಆತನೂ ಕಷ್ಟಪಟ್ಟ `ಸಭ್ಯಗೃಹಸ್ಥರ ಕೋಣೆಯನ್ನು’ ಹುಡುಕಿ ತೆಗೆದಿದ್ದ. ಆದರೆ ಆತನಿಗೆ ಉಪಯೋಗಿಸಿದ ಕಾಗದ ಎಲ್ಲಿ ಒಗೆಯಬೇಕೆಂಬ ಸಮಸ್ಯೆ ಉಂಟಾಯಿತಂತೆ! ಆದ್ದರಿಂದ ಯಾರಿಗೂ ಕಾಣದಂತೆ ಕಮೋಡದ ಹಿಂಬದಿಗೆ ಇಟ್ಟು ಬಂದನಂತೆ ಭೂಪತಿ! ಅವನ ಕಳವಳ ನೋಡಿ ನಗು ಬಂದಿತು. ಕಾಗದಕ್ಕಿಂತ ಘನಪದಾರ್ಥ ಹೋಗುವ ಕಮೋಡದಲ್ಲಿ ತೆಳ್ಳಗಿನ ಕಾಗದವೂ ಹೋಗುವದೆಂದು ಆತನಿಗೆ ಅದು ಹೇಗೆ ತೋಚಲಿಲ್ಲವೋ ಏನೋ!

ಕೋಣೆಗೆ ಬಂದು ಇನ್ನೇನು ಮಾಡಲೆಂದು ಯೋಚಿಸುತ್ತಿದ್ದಂತೆಯೇ ಬೆಳಿಗ್ಗೆ ತಂದ ಹಾಳೆಗಳ ಮೇಲೆ ಕಣ್ಣು ಹಾಯಿಸಿದೆ. ಒಂದು ಕಾಗದದಲ್ಲಿ ಬೆಳಗಿನಿಂದ ಮಧ್ಯರಾತ್ರಿಯವರೆಗೆ ಹಡಗಿನಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಣೆಯಿತ್ತು. ಹಡಗದಲ್ಲಿ ಮುದ್ರಿಸಲ್ಪಟ್ಟ ಒಂದು ದಿನಪತ್ರಿಕೆಯಿತ್ತು. ಒಂದು ಕೈಪಿಡಿಯೂ ಇತ್ತು. ಅದರಲ್ಲಿ ಹಡಗದ ಸವಿಸ್ತಾರವಾದ ವರ್ಣನೆಯಿತ್ತು. ಹಡಗದ ತೂಕ, ನೀರಿನ ಸಂಗ್ರಹ, ಆಹಾರ ಸಂಗ್ರಹಗಳ ವಿವರದೊಂದಿಗೆ ಚಲನಚಿತ್ರ ಗೃಹ ಎಲ್ಲಿದೆ, ಈಸು-ಗೊಳ ಎಲ್ಲಿದೆ. ಪೋಸ್ಟ್-ಆಫೀಸು ಎಲ್ಲಿದೆ, ಪೇಟೆ ಎಲ್ಲಿದೆ ಎಂದು ಸಚಿತ್ರ ವಿವರಣೆಯಿತ್ತು. ಹಾಗಾದರೆ ಹಡಗನ್ನಾದರೂ ನೋಡಿಕೊಂಡು ಬರೋಣವೆಂದು ಹೊರಟೆ.

ಹಡಗಕ್ಕೆ ಹತ್ತಾರು ಅಂತಸ್ತುಗಳಿದ್ದವು. ಎಲ್ಲದಕ್ಕೂ ಎತ್ತರದಲ್ಲಿ `ಹವಾ ಮಹಲ್’ ಇಲ್ಲಿ ಕ್ರೀಡಾಗೃಹವಿತ್ತು. ನೂರಾರು ತರದ ಆಟದ ಸಾಧನಗಳಿದ್ದವು. ಗಂಡಸರು, ಹೆಂಗಸರು, ಮುದುಕರು, ತರುಣರು ಸೂರ್ಯನಿಂದ ರಕ್ಷಣೆ ಪಡೆಯಲು ತಲೆಗೆ ಹ್ಯಾಟು ಹಾಕಿ ತರತರದ ಆಟಗಳಲ್ಲಿ ಮಗ್ನನಾಗಿದ್ದರು.

ಇದರ ಕೆಳಗಿನ ಅಂತಸ್ತು `ಬಿಸಿಲು ಕಾಯಿಸಲು’ ಮೀಸಲು. ಸುಖವಾಗಿ ಹೆಬ್ಬಾವಿನಂತೆ ಬೀಳಲು ಸುಖಾಸನಗಳಿವೆ. ಕಾಲುಗಳನ್ನು ಚಾಚಲು ಸ್ಟೂಲುಗಳಿವೆ. ಅತ್ಯಲ್ಪ ಬಟ್ಟೆ ಧರಿಸಿ ಅಲ್ಲಲ್ಲಿ ಬಿದ್ದುಕೊಂಡವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು.

ಇದಕ್ಕೂ ಕೆಳಗಿನ ಅಂತಸ್ತು ಜಲಕ್ರೀಡೆಗೆ ಮಾರ್ಪಟ್ಟಿತ್ತು. ಸಮಯದ ಪರಿವೆಯಿಲ್ಲದೇ ಮೀನಿನಂತೆ ಗಂಡು ಹೆಣ್ಣು ಈಸಾಡುತ್ತಿದ್ದರು. ಈಸಿ ದಣಿದಾಗ ದಡಕ್ಕೆ ಬಂದು ಹಾಡುತ್ತ ನರ್ತಿಸುತ್ತಿದ್ದರು. ಈ ಜಲಕ್ರೀಡೆ ನೋಡುತ್ತಿದ್ದಂತೆ ಹತ್ತಾರು ತರದ ಆಯ್ಸಕ್ರೀಂ ಬಂದಿತು. ಬೇಕಾದವರಿಗೆ ಬೇಕಾದಷ್ಟು ಆಯ್ಸಕ್ರೀಂ ನೀಡುತ್ತಿದ್ದನಾತ.

ಇನ್ನೂ ಕೆಳಗಿನ ಅಂತಸ್ತುಗಳು ಪ್ರವಾಸಿಕರ ವಾಸಗೃಹಗಳು, ಸ್ವತಂತ್ರ ಬಂಗಲೆಗಳ ಮಾದರಿಯವು. ಹಣದ ಕೊರೆತೆ ಕಾಣದವರಿಗೆ ಮೀಸಲಾದವು. ಹಡಗದಲ್ಲಿಯೇ ಪಾಶ್ಚಾತ್ಯಜನಜೀವನದ ಮೊದಲ ಅನುಭವಗಳು ನನಗೆ ಬಂದವು. ಇದ್ದಷ್ಟು ದಿನ ಸುಖವಾಗಿರಬೇಕು ಎಂಬ ಹಂಬಲವುಳ್ಳವರು ಈ ಜನ. ಉತ್ತಮ ಊಟ, ಮನದಣಿಯೆ ಆಟ, ನೃತ್ಯಕೂಟಗಳಲ್ಲಿ ವೇಳೆ ಹೇಗೆ ಹೋಗುವದೆಂದೇ ಇವರಿಗೆ ತಿಳಿಯುತ್ತಿರಲಿಲ್ಲ. ಸಾಲದ್ದಕ್ಕೆ ಹಡಗು ಮುಖ್ಯ ಬಂದರುಗಳಲ್ಲಿ ಬೆಳಿಗ್ಗೆ ತಂಗಿ ರಾತ್ರೆಯ ಹೊತ್ತು ಹೊರಡುತ್ತಿತ್ತು. ಹೀಗಾಗಿ ಸಾಕಷ್ಟು ಅಲೆಯಲು ವೇಳೆ ದೊರೆಯುತ್ತಿತ್ತು. ಪೋರ್ಟಸೈಯದ, ಸುಯೇಝು-ಕಾಲುವೆ, ಏಡನ್, ಮಾಲ್ಟಾ, ನೇಪಲ್ಸ, ಜಿಬ್ರಾಲ್ಟರಗಳನ್ನು, ನೋಡುತ್ತ ಲಂಡನ್ ಸೇರಿದೆವು. ಅಲ್ಲಿಂದ ಅತ್ಯಂತ ದೊಡ್ಡ ಹಡಗಗಳಲ್ಲಿ ಒಂದಾದ `ಕ್ವೀನ್ಮೇರಿ’ಯಲ್ಲಿ ನ್ಯೂಯಾರ್ಕಿಗೆ ಹೊರಟಿದ್ದಾಯಿತು. ಐದು ದಿನದ ಪ್ರವಾಸದ ನಂತರ ಅಮೇರಿಕೆಗೆ ಸೇರಿದೆ. ನ್ಯೂಯಾರ್ಕ ಬಂದರ ತಲುಪಿದಾಗ ಸೂರ್ಯನಿನ್ನೂ ಉದಯಿಸಿರಲಿಲ್ಲ. ಮಸಕು ಬೆಳಕಿನಲ್ಲಿ `ಸ್ವಾತಂತ್ರ ಪ್ರತಿಮೆ’ (statue of Liberty) ನಮಗೆಲ್ಲ ಸುಸ್ವಾಗತ ನೀಡಿತು. ಅಲ್ಲಿಂದ ಶೀಘ್ರವಾಗಿಯೇ ಸಾಯರೆಕ್ಯೂಸ್ ತಲುಪಿದೆ.

ಹಾಯ್