ಹಾಯ್

ಹಾಯ್

ಬಹಳಷ್ಟು ಓದಿ, ಬಹಳಷ್ಟು ಕೇಳಿ ಅಮೇರಿಕೆಗೆ ಹೋದದ್ದಕ್ಕೆ ನಿರಾಶೆಯೇ ಹೆಚ್ಚಾಯಿತು ಎನಬೇಕು. ನ್ಯೂಯಾರ್ಕಿನ ಗಗನಚುಂಬಿ ಕಟ್ಟಡಗಳಾಗಲಿ, ಭೂಗರ್ಭದಲ್ಲಿ ಓಡಾಡುವ ಟ್ರೇನುಗಳಾಗಲಿ ಮನಸ್ಸನ್ನು ಸೆರೆಹಿಡಿಯಲಿಲ್ಲ. ಲಕ್ಷ ಜನ ವಾಸಿಸುವ ಸ್ಥಳಗಳಲ್ಲಿ ಕೋಟಿ ಜನ ವಾಸಿಸಲು ಬಯಸಿದರೆ ಭೂಗರ್ಭವಷ್ಟೇ ಏಕೆ, ಆಕಾಶಗರ್ಭವೂ ಹಿಡಿಸದೆ ಹೋಗಬಹುದು ಎಂದು ನನ್ನ ಮನಸ್ಸಿಗನಿಸಿತು. ಸಾಲದ್ದಕ್ಕೆ ಮೈ ಕೊರೆಯುವ ಚಳಿಯನ್ನು ನಿರೀಕ್ಷಿಸಿ ಬಂದ ಪ್ರದೇಶದಲ್ಲಿ ಮೈ ಸುಡುವ ಪ್ರಖರ ಬಿಸಿಲು. ನಾನು ಓದಿ ತಿಳಿದುಕೊಂಡ ಜನಜೀವನಕ್ಕೂ ಪ್ರತ್ಯಕ್ಷ ಕಂಡ ಅಮೇರಿಕನ್ ಜನಜೀವನಕ್ಕೂ ಅಜಗಜಾಂತರ. ಇದಕ್ಕೆ ಕಾರಣ ಭರದಿಂದ ಬದಲಾಗುತ್ತಿರುವ ಅಮೇರಿಕನ್ ಸಮಾಜ. ಅಲ್ಲದೆ ಅವರ ಜನಜೀವನದಲ್ಲಿ ಹಾಸು ಹೊಕ್ಕಾದ ವಿಜ್ಞಾನದ ಸಂಶೋಧನಗಳು ಇರಬಹುದು.

ಸಾಯರೆಕ್ಯೂಸ್ ವಿಶ್ವವಿದ್ಯಾಲಯದ ಆವಾರದಲ್ಲಿ ಇದ್ದ ಕಟ್ಟಡಗಳಲ್ಲಿ ಅಧುನಿಕ ಕಟ್ಟಡಗಳಿಗಿಂತ ಹಳೆಯವೇ ಹೆಚ್ಚಾಗಿದ್ದವು. ಐದು ಅಂತಸ್ತುಗಳುಳ್ಳ ಕಟ್ಟಡಕ್ಕೆ ಕೂಡ ಲಿಫ್ಟ ಇರಲಿಲ್ಲ. ನಿರೀಕ್ಷಿಸಿದ ಅಚ್ಚುಕಟ್ಟುತನವೂ ಇರಲಿಲ್ಲ. ಆವಾರದಲ್ಲಿ ಇರುವೆ ಸಾಲಿನಂತೆ ಓಡಾಡುವ ವಿದ್ಯಾರ್ಥಿಗಳು ಮಾತ್ರ ಬಹಳ ಭಿನ್ನವಾಗಿದ್ದರು. ಎವೆಯಿಕ್ಕದೆ ಅಪರಿಚಿತ ಹೆಣ್ಣನ್ನು ನೋಡುವದು ಪಾಪ ಎಂಬ ಸಂಕಲ್ಪವಿರುವ ದೇಶದಿಂದ ಬಂದವನಿಗೆ ಇಲ್ಲಿಯ ಕುಮಾರಿಯರ ವಿಚಿತ್ರ ವಿಚಿತ್ರ ವೇಷ–ಭೂಷಣ, ಉಡಿಗೆ–ತೊಡಿಗೆ, ಕೇಶರಚನೆ, ತೀರ ಕಿರಿಸೊಂಟ, `ಪಾಲಿಶ್’ ಮಾಡಿದ ಕಾಲುಗಳು ನಿಚ್ಚಳವಾಗಿ ಕಾಣತೊಡಗಿದವು. ತಲೆಯೆತ್ತಿ ಎದುರಿಗೆ ಬರುತ್ತಿದ್ದ ಕುಮಾರಿಯೊಬ್ಬಳ ಮುಖ ನೋಡಹೋದರೆ–ಮುಗುಳುನಗೆ ಸೂಸಿ `ಹಾಯ್’ ಎಂದಳು. ಈ `ಹಾಯ್’ ನನಗೆ ಗೊಂದಲಕ್ಕಿಟ್ಟುಕೊಂಡಿತು. ಇವಳಿಗೇನು ಮುಳ್ಳು ಚುಚ್ಚಿತೇ? ಆದರೆ ನಡಿಗೆಯಲ್ಲಾಗಲಿ ನಗೆಯಲ್ಲಾಗಲಿ ಮುಳ್ಳು ಚುಚ್ಚಿದ ಲಕ್ಷಣವಿರಲಿಲ್ಲ. ತೀರ ಸ್ವಚ್ಛವಾದ ರಸ್ತೆಯ ಮೇಲೆ ಮುಳ್ಳಿಗೆಲ್ಲಿ ಅವಕಾಶ? ಈ ಮೊದಲು ಕಂಡು ಅರಿತ ಭಾರತೀಯನೇ ನಾನೆಂದು ತಪ್ಪು ತಿಳಿದು ಏನೋ ಸಂಕೇತಮಾಡಿರಬೇಕೆಂದು ಮುಂದೆ ಹೋದೆ. ಸರಿ ಇದುರು ಬರುತ್ತಿರುವ ಇನ್ನೊಬ್ಬ ಯುವತಿಯಿಂದಲೂ ಬಂದಿತು `ಹಾಯ್’! ಹೀಗೆ ನಾಲ್ಕಾರು `ಹಾಯ್’ಗಳು ಬಂದವು. ಈ `ಹಾಯ್’ಗಳಿಗೆ ವಿಶೇಷ ಅರ್ಥವಿಲ್ಲವೆಂದೂ, ಇಂಗ್ಲಿಷ್ದ `ಹಲೊ’ ಅಮೇರಿಕನ್ `ಹಾಯ್’ಗೆ ತಿರುಗಿಕೊಂಡಿದೆಯೆಂದೂ ಕಾಲಕ್ರಮೇಣ ತಿಳಿದುಕೊಂಡೆ.

ಸಾವಿರಾರು ಮೈಲು ದೂರದಿಂದ ಬಂದ ವಿದ್ಯಾರ್ಥಿಯೆಂದು ತಿಳಿದು ಸಹಪಾಠಿಯೊಬ್ಬ ನನ್ನನ್ನು ಪ್ರಾಧ್ಯಾಪಕರ ಬಳಿ ಕರೆದುಕೊಂಡು ಹೋಗಿ ಪರಿಚಯ ಮಾಡಿಕೊಟ್ಟ. ಅವರೂ “ಹಾಯ್! ಇಂದು ಬೆಳಿಗ್ಗೆ ಹೇಗಿದ್ದೀಯಾ? (How are you this morning)” ಎಂದು ಕೇಳಿದರು. ಯಾರೋ ಇವರಿಗೆ ನನ್ನ ಆರೋಗ್ಯ ಸರಿಯಾಗಿಲ್ಲವೆಂದು ತಪ್ಪು ಮಾಹಿತಿ ಕೊಟ್ಟಿರಬಹುದೆಂದು ಗ್ರಹಿಸಿ, “ಇಲ್ಲಿ ಬಂದಂದಿನಿಂದ ಚೆನ್ನಾಗಿಯೇ ಇದ್ದೇನೆ. ನನಗಾವ ಕಾಯಿಲೆಯೂ ಇಲ್ಲ” ಎಂದು ಹೇಳಿದೆ. ಅದಕ್ಕವರು ಮನಸ್ವೀ ನಕ್ಕು “ಈ ದೇಶದಲ್ಲಿ ಮಾತಿಗೆ ಮೊದಲು ಈ ಪ್ರಶ್ನೆ ಕೇಳುವುದು ವಾಡಿಕೆ. ಅದಕ್ಕೆ ಯಾವ ವಿಶೇಷ ಅರ್ಥವೂ ಇಲ್ಲ” ಎಂದರು. ಸರಿ, ಅಲ್ಲಿಂದ ಮಾತು–ಕತೆಗೆ ಪ್ರಾರಂಭವಾಯಿತು. ನನ್ನ ಇಂಗ್ಲೀಷಿಗೂ ಅವನ ಇಂಗ್ಲೀಷಿಗೂ ಆಕಾಶಪಾತಾಳದ ಅಂತರ.

ವಿಶ್ವವಿದ್ಯಾಲಯಕ್ಕೆ ಬರುವಾಗ ವಿದ್ಯಾರ್ಥಿಗಳನ್ನು ಅನುಸರಿಸಿ ಬಂದಿದ್ದೆನಾದರೂ ತಿರುಗಿ ಹೋಗುವುದು ಸಮಸ್ಯೆಯಾಯಿತು. ಒಂದೇ ತರದ ರಸ್ತೆಗಳು, ಒಂದೇ ತರದ ಕಟ್ಟಡಗಳು. ಮೂರು ನಾಲ್ಕು ರಸ್ತೆಗಳಿಂದ ಹೋಗಲೆತ್ನಿಸಿದೆ. ತಿರುಗಿ ವಿಶ್ವವಿದ್ಯಾಲಯಕ್ಕೆ ಬರುವಂತಾಯಿತು! ಯಾವನೋ ದಾರಿಹೋಕನು ನನ್ನ ಅಸಹಾಯಕತೆಯನ್ನು ಅರಿತು “ನನ್ನಿಂದ ಸಹಾಯ ಬೇಕೇ?” ಎಂದು ಕೇಳಿದ. ನಾನು ಹೋಗಬೇಕಾಗಿದ್ದ ಮನೆಯ ನಂಬರನ್ನು ತಿಳಿದುಕೊಂಡು, ತುಟಿಯ ಮೇಲೆ ಬೆರಳಿಟ್ಟು ಗಾಢವಾಗಿ ಆಲೋಚಿಸಿ “ನೀನು ಹೀಗೆ ಮಾಡು, ಆರು ಬ್ಲಾಕ್ಸ ದಕ್ಷಿಣಕ್ಕೆ `Adams’ ಮೇಲೆ ನಡೆದು ಹೋಗು. ನಂತರ ಪೂರ್ವಕ್ಕೆ ಮೂರು ಬ್ಲಾಕ್ಸ ನಡೆದರೆ ನಿನ್ನ ಮನೆ ತಪ್ಪದೇ ಸಿಗುವುದು” ಎಂದು ಹೇಳಿ ಹೊರಟೇಬಿಟ್ಟ. ಆತನ ಭಾಷೆ ಅರ್ಥವಾಗದೇ ಮನಸ್ಸಿಗೆ ಹೊಳೆದ ದಾರಿಯೊಂದರಿಂದ ಹೊರಟೆ. ಕಾಲು ಸೋತುಬರುವ ತನಕ ನಡೆದೆ. ಕೊನೆಗೂ ತಿಳಿಯದೇ ಹತ್ತಿರ ನಿಂತಿದ್ದ ಪೋಲಿಸನಿಗೆ ಕೇಳಿದೆ. ಅವನು ವಿಚಾರಮಾಡುವ ಗೋಜಿಗೆ ಹೋಗದೆ “ನೀನು ಕೆಬ್ನಲ್ಲಿ (Cab) ಹೋಗು. ವಾಯುವೇಗದಿಂದ ನಿನ್ನ ಸ್ಥಳ ತಲುಪುವೆ” ಎಂದು ಹೇಳಿ ನಾನು ಉತ್ತರಿಸುವ ಮೊದಲೇ ಒಂದು ಟೆಕ್ಸಿಯನ್ನು ನಿಲ್ಲಿಸಿಯೇ ಬಿಟ್ಟ. ನಿರುಪಾಯವಾಗಿ ಕೆಬ್ ಹತ್ತಿದೆ. ನೋಡಿದರೆ ನಾನಿಳಿದ ಮನೆ ಕೇವಲ ಎರಡು ನಿಮಿಷದ ರಸ್ತೆಯಿತ್ತು! ಮೀಟರ ೬೦ ಸೆಂಟ್ ತೋರಿಸಿತು. ಡಾಲರ್ (Dollar) ನೋಟು ಕೊಟ್ಟು ಥ್ಯಾಂಕ್ಸ್ ಪಡೆದು ಎರಡು ನಿಮಿಷದ ದಾರಿಗೆ ನಾಲ್ಕು ರೂಪಾಯಿ (೧ ಡಾಲರಿಗೆ ೪.೭೮ ರೂಪಾಯಿ ಇದ್ದಾಗ) ತೆತ್ತು ಮನೆ ಸೇರಿದೆ.

ನನ್ನ ಸಹಪಾಠಿಗಳು ಇನ್ನೂ ಮನೆಗೆ ಹಿಂದಿರುಗಿರಲಿಲ್ಲ. ಏನಾದರೂ ತಿನಸುಗಳನ್ನು ತರೋಣವೆಂದು ಹತ್ತಿರವೇ ಇದ್ದ ಸಣ್ಣದೊಂದು ಕಿರಾಣಿ ಅಂಗಡಿ ಹೊಕ್ಕೆ. ಕೌಂಟರ ಹತ್ತಿರ ನಿಂತಿದ್ದ ಯುವತಿಯೊಬ್ಬಳು `ಹಾಯ್’ ಎಂದಳು ಯೋಚಿಸುವ ಮೊದಲೇ `ಹಾಯ್’ ಎಂದುಬಿಟ್ಟಿದ್ದೆ! “ಇಂದು ಮುಂಜಾನೆ ಹೇಗಿದ್ದೀಯಾ?” ಎಂದು ಕೇಳಿದಳು. ಅದಕ್ಕೂ “ಚೆನ್ನಾಗಿದ್ದೇನೆ. ಥ್ಯಾಂಕ್ಸ್” ಎಂಬ ಉತ್ತರ ಸಿದ್ಧವಿತ್ತು. ಅಂತೂ ಎಷ್ಟು ಬೇಗ ಅಮೇರಿಕನ್ ಪದ್ಧತಿ ಕಲಿತುಬಿಟ್ಟೆನಲ್ಲ ಎಂದು ನನಗೇ ಅಚ್ಚರಿಯಾಯಿತು. ಹಾಲು ಬೆಣ್ಣೆ, ಮಜ್ಜಿಗೆ, ಹಣ್ಣು–ಹಂಪಲುಗಳನ್ನು ಖರೀದಿ ಮಾಡಿದೆ. ಅವುಗಳನ್ನೆಲ್ಲ ಸುಂದರವಾದ ಪೊಟ್ಟಣಗಳಲ್ಲಿ ಕಟ್ಟಿಕೊಟ್ಟಳು ಆ ಚೆಲುವೆ. ಪದ್ಧತಿಯಂತೆ “Thank you very much” (ಕೃತಜ್ಞತೆಗಳು) ಎಂದೆ. ಅದಕ್ಕವಳು “you are welcome” (ನಿನಗೆ ಸುಸ್ವಾಗತ) ಎಂದಳು. ಅದರ ಅರ್ಥವಾಗದೇ ಪೆಚ್ಚುಮುಖ ಹಾಕಿ ಹಿಂತಿರುಗಿದೆ. ಸಹಪಾಠಿಗಳು ಮನೆಗೆ ಹಿಂತಿರುಗಿದ ಕೂಡಲೇ ನಾನು ಮೊದಲು ಕೇಳಿದ ಪ್ರಶ್ನೆ ಆ ಯುವತಿಯ ಮಾತಿನ ಅರ್ಥ. ಅದಕ್ಕೆ ನನ್ನ ಗೆಳೆಯನೊಬ್ಬ ಯಾರು ಕೇಳಿದ್ದು, ಏನು ಎಂಬುದರ ವಿವರ ಕೇಳಿಕೊಂಡು “ಆಕೆ ಬಹಳ ಚಾಲಾಕು ಹುಡಿಗಿ. ಆಕೆಗೊಬ್ಬ ಸುಂದರ ಯುವಕ-ಸಂಗಾತಿ ಬೇಕಂತೆ. ಆದ್ದರಿಂದ ಆಕೆ ಹಾಗೆಂದಾಗ `ಎಲ್ಲಿ? ಎಂದು?’ (where and when) ಎಂದು ನೀನು ಕೇಳಬಾರದೆ? “ಎಂದ ಆದರೆ ಮೊದಲ ದಿನ ಪುಸ್ತಕದ ಅಂಗಡಿಯ ಮುದುಕನೂ ಇದೇ ಮಾತು ಹೇಳಿದ್ದರಿಂದ ಅದಕ್ಕೆ ವಿಶೇಷ ಅರ್ಥ ಕಲ್ಪಿಸಬಾರದೆಂದುಕೊಂಡೆ.