ಶಿಕ್ಷಣ ಪದ್ಧತಿ

ಶಿಕ್ಷಣ ಪದ್ಧತಿ

ತಲೆ ಮಾರುಗಳಿಂದ ಕಲಿಸಿದ್ದನ್ನೇ ಕಲಿಸುವ ರೂಢಿ ಇಟ್ಟುಕೊಂಡ ದೇಶದಿಂದ ವಿದ್ಯಾಭ್ಯಾಸ ಮುಗಿಸಿ ಅಮೇರಿಕೆಗೆ ಹೊಸದಾಗಿ ಹೋದಾಗ ಎದುರಿಸಬೇಕಾದ ಸಮಸ್ಯೆಗಳಿಗೆ ಲೆಕ್ಕವಿಲ್ಲ. ನಮ್ಮಲ್ಲಿಯ ಶಿಕ್ಷಣ ಪದ್ಧತಿಗೂ ಅಲ್ಲಿಯದಕ್ಕೂ ಆಕಾಶ ಪಾತಾಳದಷ್ಟು ಅಂತರ. ನಮ್ಮ ಪ್ರಾಧ್ಯಾಪಕರು ಬರೆಸಿದ್ದನ್ನೇ ಗಟ್ಟಿಮಾಡಿ ಪರೀಕ್ಷೆ ಒಂದು ತಿಂಗಳು ಇರುವಾಗ ಹಗಲಿರಳು ಊರುಹಾಕಿ, ನಿರೀಕ್ಷಿತ ಪ್ರಶ್ನೆಗಳಿಗಷ್ಟೆ ಉತ್ತರ ತಯಾರಿಸಿ ಪರೀಕ್ಷೆ ಕೊಡುವ ಆರಾಮ–ಜೀವನ ಭಾರತೀಯ ವಿದ್ಯಾರ್ಥಿಗಳದು. ಅಲ್ಲಾದರೂ ಪ್ರಾಧ್ಯಾಪಕರು ಏನೇನೂ ಬರೆಸುವುದು ಇಲ್ಲ; ಕಲಿಸುವುದೂ ಇಲ್ಲ. ಏನೇನು ಓದಬೇಕೆಂದು ಮಾತ್ರ ಹೇಳಿ ಉಳಿದೆಲ್ಲ ದುಡಿತವನ್ನು ವಿದ್ಯಾರ್ಥಿಗೇ ಬಿಟ್ಟು ಬಿಡುತ್ತಾರೆ. ಹೀಗಾಗಿ ಅಲ್ಲಿ ಬಹಳಷ್ಟು ಓದಬೇಕಾಗುತ್ತದೆ. ನಮ್ಮ ಅವರ ಶಿಕ್ಷಣದ ಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಅಜಗಜಾಂತರವಿದೆ.

ಅಮೇರಿಕೆಗೆ ಹೊರಡುವ ಮೊದಲು ಆ ದೇಶದಲ್ಲಿ ಪರೀಕ್ಷೆಗಳನ್ನು ಪಾಸುಮಾಡುವುದು ಮುಖ್ಯವಲ್ಲ; ಆದರೆ ವಿಷಯಜ್ಞಾನ ಮಹತ್ವದ್ದು. ಆದ್ದರಿಂದ ಪ್ರತಿನಿತ್ಯದ ಕೆಲಸದ ಮೇಲಿನಿಂದ ವರ್ಗ ನಿರ್ಧರಿಸುತ್ತಾರೆಂದು ಓದಿ ತಿಳಿದುಕೊಂಡಿದ್ದೆ. ಪರೀಕ್ಷೆಗಳಿಂದ ಬೇಸತ್ತವನಿಗೆ ಇದರಿಂದ ಬಹಳ ಆನಂದವೂ ಆಗಿತ್ತು. ಆದರೆ ಅಲ್ಲಿ ಹೋದ ಮೇಲೆ ವಿಶ್ವವಿದ್ಯಾಲಯದ ಪಾಠಕ್ರಮ ಸುರುವಾಗುವುದಕ್ಕೆ ಮೊದಲೇ ಪರೀಕ್ಷೆಯಿಂದಲೇ ನನ್ನ ವಿದ್ಯಾರ್ಥಿ–ಜೀವನವೂ ಮೊದಲಆಯಿತು. ಎಲ್ಲದ್ದಕ್ಕೂ ಮೊದಲು ವಿದೇಶಿಯರು ಇಂಗ್ಲೀಷ್ ಪರೀಕ್ಷೆ ಕೊಡಬೇಕಂತೆ! ಅದನ್ನು ಪಾಸು ಮಾಡದಿದ್ದರೆ ಇಂಗ್ಲೀಷ್ ಕಲಿಯಬೇಕಂತೆ. ಸುದೈವಕ್ಕೆ ನನಗೆ ಈ ಸ್ಥಿತಿ ಬರಲಿಲ್ಲ. ಆದರೆ ಎರಡು ವರ್ಷ ಶಿಕ್ಷಕರ ಕುರ್ಚಿಯಲ್ಲಿ ಕುಳಿತು ನಂತರ ವಿದ್ಯಾರ್ಥಿಯ ಬೆಂಚಿನ ಮೇಲೆ ಕೂಡುವುದು ಎಷ್ಟು ತೊಂದರೆಯಿದೆಯೆಂದು ಮೊದಲು ಬಾರಿಗೆ ಕಂಡುಕೊಂಡೆ. ನಂತರ ಬಂದಿತು ಪ್ರವೇಶ ಪರೀಕ್ಷೆ. ಭಾರತದಿಂದ ಎಂ.ಎಸ್.ಮುಗಿಸಿ ಹೋದರೆ ಅಲ್ಲಿ ಅದನ್ನು ಮಾನ್ಯ ಮಾಡುತ್ತಾರೆಂಬ ನಿಯಮವಿಲ್ಲ. ಕಲಿತ ವಿಷಯ ಎಷ್ಟರ ಮಟ್ಟಿಗೆ ಅರ್ಥಮಾಡಿಕೊಂಡಿದ್ದಾನೆ ಎಂದು ನಿರ್ಣಯಿಸಲು ಈ ಪರೀಕ್ಷೆಯಂತೆ. ಈ ಪರೀಕ್ಷೆಯಲ್ಲಿ ತೋರಿಸಿದ ಯೋಗ್ಯತೆಯ ಮೇಲೆ ಮುಂದಿನ ವಿದ್ಯಾಭ್ಯಾಸ ಅವಲಂಬಿಸಿರುತ್ತದೆ. ಈ ಪರೀಕೆ ಲಿಖಿತ ಮತ್ತು ಮೌಖಿಕವಿರುವುದು. ಕೆಲವಡೆ ಕೇವಲ ಲಿಖಿತವಿರಬಹುದು ಅಥವಾ ಮೌಖಿಕವಾಗಿಯೂ ಇರಬಹುದು. ಆದರೆ ಈ ಪರೀಕ್ಷೆಯ ಪ್ರಶ್ನೆಗಳ ವ್ಯಾಪ್ತಿ ಎಷ್ಟಿರಬಹುದೆಂದು ಕೆಲ ಮಾತುಗಳಲ್ಲಿ ಹೇಳುವುದು ಸಾಧ್ಯವಿಲ್ಲ. ಹೀಗಾಗಿ ಹತ್ತು ವರ್ಷಗಳ ವರೆಗೆ ಕಲಿತದ್ದೆಲ್ಲ ತಿರುವಿ ಹಾಕಬೇಕಾಯಿತು. ಈ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಇನ್ನಿಲ್ಲದಷ್ಟು ಆನಂದವಾಯಿತು. ಏನೋ ಇಷ್ಟು ದೂರ ಬಂದು ಕಷ್ಟಪಟ್ಟುದ್ದಕ್ಕೆ ಏನಾದರೂ ಸಾಧಿಸಿಯೇನು ಎಂಬ ಆಸೆ ಬಲವಾಗ ತೊಡಗಿತು.

ಇಲ್ಲಿಂದ ಮುಂದೆ ಎಣೆಯಿಲ್ಲದ ಓದಿಗೆ ಪ್ರಾರಂಭವಾಯಿತು. ಮುಂದಿನ ಎರಡು ಮೂರು ವರ್ಷಗಳಲ್ಲಿ ಮಾಡಲಿರುವ ಸಂಶೋಧನೆಯ ರೂಪರೇಷೆಯ ವಿವರವನ್ನು ಕೊಡಬೇಕೆಂದು ಪ್ರಾಧ್ಯಾಪಕರ ಅಪ್ಪಣೆಯಾಯಿತು. ಅವರೇ ಸಂಶೋಧನೆಯ ವಿಷಯ-ಕ್ರಮ ಸೂಚಿಸಬಹುದೆಂದು ನಂಬಿದ ನನಗೆ ದಿಗಲಾಯಿತು. ಸಂಶೋಧನೆಯೆಂದರೆ ಏನೆಂದು ಸರಿಯಾಗಿ ತಿಳಿದುಕೊಳ್ಳುವ ಭವಿಷ್ಯದ ಸಂಶೋಧನೆಯ ಬಗ್ಗೆ ಹೇಳಿ ತಾನೆ ಹೇಳಬಲ್ಲೆ? ಹಗಲಿರುಳು ವಾಚನಾಲಯದಲ್ಲೆ ಕಳೆಯಲಾರಂಭಿಸಿದೆ. ಹತ್ತಾರು ಪುಸ್ತಕ, ನೂರಾರು ಪತ್ರಿಕೆ, ಸಾವಿರಾರು ಪುಟಗಳನ್ನು ಓದಿ ಮನನಮಾಡುವ ಸಂದರ್ಭ ಬಂದಾಗ ತಿಳಿಯಿತು, ಸಂಶೋಧನೆಯೆಂದರೆ ಹೇಗಿರುತ್ತದೆಂದು! ಬಹಳ ಕಷ್ಟಪಟ್ಟು ಸಂಶೋಧನೆಯ ರೂಪರೇಷೆಯ ಕರಡುಪ್ರತಿಯನ್ನು ಹಿಂಜರಿಯುತ್ತ ಪ್ರಾಧ್ಯಾಪಕರ ಎದುರು ಇಟ್ಟಾಗ ನನಗಾವ ಆಸೆಯೂ ಉಳಿದಿರಲಿಲ್ಲ. ಆದರೆ ಅವರ ಮುಖದಲ್ಲಿ ತೃಪ್ತಿಯ ನಗೆ ಹೊರಸೂಸಿದಾಗ ಆಶೋದಯವಾಯಿತು.

ಭಾರತದಲ್ಲಿಯಂತೆ ಸಂಶೋಧನೆಯ ಪ್ರಬಂಧವೊಂದನ್ನು ಬರೆದರೆ ಅಮೇರಿಕೆಯಲ್ಲಿ ಪಿಎಚ್.ಡಿ. ಪದವಿ ದೊರೆಯಲಾರದು. ಬೇರೆ ಬೇರೆ ವಿಷಯಗಳಲ್ಲಿ ಪರಿಣಿತಿ ಪಡೆಯಬೇಕಾಗುತ್ತದೆ. ಕೀಟಶಾಸ್ತ್ರದ ಅಭ್ಯಾಸಿ ಭಾರತದಲ್ಲಿ ಕೀಟಗಳನ್ನಷ್ಟೆ ಕುರಿತು ಅಭ್ಯಾಸ ಕೈಕೊಂಡರೆ ಅಮೇರಿಕೆಯಲ್ಲಿ ಇದಕ್ಕೆ ಹೊಂದಿ ರಸಾಯನಶಾಸ್ತ್ರ, ಗಣಿತಶಾಸ್ತ್ರ, ಪದಾರ್ಥವಿಜ್ಞಾನ ಮೊದಲಾದವುಗಳನ್ನೂ ಅಭ್ಯಸಿಸಬೇಕಾಗುತ್ತದೆ.

ತಮಗೆ ಬೇಕಾದ ವಿಷಯಗಳನ್ನು ಆರಿಸುವ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ಇದೆ ಎಂದು ಭಾರತದಲ್ಲಿ ಹೇಳಿದ್ದರೂ ಅಲ್ಲಿ ಹೋದ ಮೇಲೆ ನನ್ನ ಸಲಹಾಕಾರರು ಇಂಥಿಂಥ ವಿಷಯಗಳಲ್ಲಿ ಉತ್ತಮ ಗ್ರೇಡ ಗಳಿಸಬೇಕು ಎಂದು ಹೇಳಿದಾಗ ನನ್ನ ಜಂಘಾಬಲವೇ ಉಡುಗಿಹೋಯಿತು. ಪ್ರತಿಯೊಂದು ವಿಷಯದಲ್ಲೂ ಅತ್ಯಾಧುನಿಕ ಮಾಹಿತಿಯನ್ನು ಪಡೆಯಬೇಕು, ಪ್ರತಿಯೊಬ್ಬ ಶಿಕ್ಷಕನೂ ಗುಡ್ಡದಷ್ಟು ಗೃಹವಾಚನವನ್ನು ಕೊಡುತ್ತಾನೆ. ಎರಡು ದಿನ ರಜೆಯಿದ್ದ ವಾರಾಂತ್ಯ ಬಂದರಂತೂ ನಾಲ್ಕು ದಿನದ ಕೆಲಸ ಕೊಡುತ್ತಾರೆ. ಬೆಳಿಗ್ಗೆ ಎಂಟರಿಂದ ಹನ್ನೆರಡರ ವರೆಗೆ ಕೆಲಸ ಮಾಡಿದರೂ ಮುಗಿಯುವಂತಿಲ್ಲ. ಪುಣ್ಯಕ್ಕೆ ಕಾಲೇಜು, ವರ್ಗಗಳು ವಿದ್ಯಾರ್ಥಿಗೆ ಅಭ್ಯಾಸಕ್ಕೆ ಒಂದು ಪ್ರತ್ಯೇಕ ಕೋಣೆಯನ್ನು ಕೊಡುವುದಲ್ಲದೇ ಉಪಯೋಗದ ಎಲ್ಲ ಕೋಣೆ, ಪ್ರಯೋಗ ಶಾಲೆಗಳ ಬೀಗದ ಕೈಗಳನ್ನು ಕೊಟ್ಟಿರುತ್ತಾರೆ. ಚಹಾ–ಕಾಫಿ, ಅಲ್ಪೋಪಹಾರಗಳ ವ್ಯವಸ್ಥೆ ಅದೇ ಕಟ್ಟಡದಲ್ಲಿ ಇರುತ್ತದೆ. ಮಲಗಲು ಹಾಸಿಗೆಯೊಂದನ್ನು ಬಿಟ್ಟು ಉಳಿದೆಲ್ಲದರ ವ್ಯವಸ್ಥೆಯಿರುತ್ತದೆ. ಕೆಲ ವಿದ್ಯಾರ್ಥಿಗಳು ಅದಕ್ಕೂ ಅನುಕೂಲ ಮಾಡಿಕೊಂಡು ಕಾಲೇಜಿನಲ್ಲೇ ಮಲಗಿದ್ದೂ ಉಂಟು!

ವರ್ಗ, ಪ್ರಯೋಗಶಾಲೆಗಳಷ್ಟೆ ಅಲ್ಲದೇ ಅಲ್ಲಿಯ ಅಭ್ಯಾಸಕ್ರಮದಲ್ಲಿ ವಾಚನಾಲಯವೂ ಹೆಚ್ಚು ಮುಖ್ಯವಾಗಿರುತ್ತದೆ. ಒಮ್ಮೆಯೂ ವಾಚನಾಲಯಕ್ಕೆ ಹೋಗದೆ, ಪ್ರಾಧ್ಯಾಪಕರು ಕೊಟ್ಟ ನೋಟ್ಸುಗಳನ್ನೆ ಆಗಲಿ, ಮುದ್ರಿತವಾದ ಟಿಪ್ಪಣಿಗಳನ್ನೇ ಆಗಲಿ ಓದಿ ಪಾಸಾಗುವುದು ನಮ್ಮಲ್ಲಿಯ ವಿದ್ಯಾರ್ಥಿಗಳ ಕ್ರಮ. ಆದರೆ ಅಮೇರಿಕೆಯಲ್ಲಿ ವಾಚಾನಾಲಯಕ್ಕೆ ಹೋಗುವುದು ಅನಿವಾರ್ಯವಾಗಿಬಿಡುತ್ತದೆ. ಗೃಹಪಾಠಕ್ಕೆಂದು ಕೊಡುವ ಬಹಳಷ್ಟು ವಿಷಯಗಳ ಸಂಶೋಧನಾ ಪತ್ರಗಳೊಳಗಿಂದ ಕೊಟ್ಟಿರುತ್ತಾರೆ. ಅದಕ್ಕಾಗಿ (reference) ಸಹಾಯಕ ಓದಿನ ಕೆಲಸ ನಡೆಯಬೇಕಲ್ಲ? ಪಠ್ಯಪುಸ್ತಕಗಳಾದರೂ ಎರಡು, ಮೂರು ವರ್ಷಗಳಿಗೊಮ್ಮೆ ಬದಲಾಗುತ್ತಲೇ ಇರುವುದರಿಂದ ಹೊಸ ಪುಸ್ತಕಗಳಿಗೆ ವಾಚನಾಲಯಗಳೇ ಗತಿ. ಹೊಸ ಹೊಸ ಪುಸ್ತಕಗಳು ಹೊರ ಬಂದಂತೆ ಅವುಗಳನ್ನು ಪಠಪುಸ್ತಕಗಳನ್ನಾಗಿ ಸ್ವೀಕರಿಸುವುದು ಅಲ್ಲಿ ಪದ್ಧತಿ. ಆದ್ದರಿಂದ ಪ್ರತಿವರ್ಷ ನೂತನ ಸಂಶೋಧನೆ ಮತ್ತು ಕ್ರಮಗಳನ್ನು ಪಠಕ್ರಮಕ್ಕೆ ಜೋಡಿಸುತ್ತ ಹೋಗುತ್ತಾರೆ. ಹೊಸ ಪುಸ್ತಕಗಳು ಹೊರಗೆ ಬಂದಾಗ ಹಳೆಯದನ್ನು ಕೊಳ್ಳುವುವರೇ ಇರುವದಿಲ್ಲ. ಆದ್ದರಿಂದ ಅವು ರದ್ದಿಯಂಗಡಿಯಲ್ಲಿ ತೀರ ಅಗ್ಗ ಬೆಲೆಗೆ ದೊರೆಯುತ್ತವೆ. ನನ್ನಂತಹ ವಿದೇಶಿಯ ವಿದ್ಯಾರ್ಥಿಗಳೇ ಅವುಗಳಿಗೆ ಹೆಚ್ಚಾದ ಗಿರಾಕಿಗಳು.

ಸಂಶೋಧನೆಯಲ್ಲಿ ತೊಡಗಿದವರಿಗಂತೂ ವಾಚನಾಲಯವೇ ಜೀವಾಳ. ಎಲ್ಲಿ ಬೇಕಾದರೂ ಹೋಗಿ ಬೇಕಾದ ಪುಸ್ತಕ ಎಳೆದು ಓದಬಹುದು. ಮನೆಗೆ ಒಯ್ಯುವ ಪುಸ್ತಕಗಳಿಗೆ ಮಾತ್ರ ದಾಖಲೆ ಮಾಡಬೇಕಾಗುತ್ತದೆ. ಇದೀಗ ಪುಸ್ತಕಗಳು ಪ್ರಕಟವಾಗುತ್ತಿರುವದರಿಂದ ಅದನ್ನು ಇಡಲು ಸ್ಥಳವಿಲ್ಲದ್ದರಿಂದ ಅದನ್ನು ಹೆಚ್ಚಾಗಿ (micro-film) ಸೂಕ್ಷ್ಮ-ಫಿಲ್ಮಗಳನ್ನಾಗಿ ಪರಿವರ್ತಿಸಿ ಇಡುತ್ತಾರೆ. ಬೇಕಾದಾಗ ಇವನ್ನು ತೆಗೆದುಕೊಂಡು ಮಶೀನಿನಲ್ಲಿ ಹಾಕಿ ಓದಿದರಾಯಿತು. ಯಾವುದೇ ಸಂಶೋಧನ–ಪತ್ರಿಕೆ ಕಾಲೇಜಿನ ವಾಚನಾಲಯದಲ್ಲಿ ಇರದಿದ್ದರೆ ಹೊರಗಿನಿಂದ ಅವನ್ನು ತರಿಸುವ ವ್ಯವಸ್ಥೆಯಿದೆ. ಸಂಶೋಧನೆಗೆ ಬೇಕಾಗುವ ಸಾಮಗ್ರಿಗಳಾದರೂ ಅಷ್ಟೆ. ಇಂದು ಇದಿಲ್ಲ; ನಾಳೆ ಅದಿಲ್ಲ ಎಂದು ತಲೆಕೆರೆದುಕೊಳ್ಳಬೇಕಾಗಿಲ್ಲ. ಡಿಪಾರ್ಟಮೆಂಟಿನ ಸಂಗ್ರಹಾಲಯದ ಬೀಗದ ಕೈಯೇ ವಿದ್ಯಾರ್ಥಿಗಳ ಹತ್ತಿರವಿರುವುದು. ಬೇಕಾದಾಗ ಬೇಕಾದ್ದನ್ನು ಬೇಕಷ್ಟು ತೆಗೆದುಕೊಳ್ಳಬಹುದು. ಯಾವುದೇ ವಸ್ತುವಿನ ಅವಶ್ಯಕತೆ ಕಂಡುಬಂದರೆ ಪ್ರಾಧ್ಯಾಪಕರಿಗೆ ತಿಳಿಸಿದರಾಯಿತು. ತತ್ಕ್ಷಣ ಫೋನಿನ ಮೂಲಕ ಕಂಪನಿಗೆ ಆರ್ಡರ್ ಹೋಗುತ್ತದೆ. ಮರುದಿನ ಆ ಸಾಮಾನು ನಮ್ಮ ಕೈಸೇರುತ್ತದೆ. ಇಷ್ಟೆ ಅನುಕೂಲ ಸೌಕರ್ಯಗಳಿರುವಾಗ ಸಂಶೋಧನೆ ಮಾಡಲಾಗದಿದ್ದರೆ ಯಾರು ತಾನೆ ಕ್ಷಮಿಸಿಯಾರು?

ಸಂಶೋಧನೆಯಲ್ಲಿ ಪರೀಕ್ಷೆಗಳೂ ಪ್ರಮುಖ ಪಾತ್ರವಹಿಸುತ್ತವೆ. ಇವು ಅನೇಕ ವಿಧವಾಗಿರುತ್ತವೆ. ಪ್ರತಿಯೊಂದು ವಿಷಯದಲ್ಲೂ ಮೊದಲಿನ ಐದು ನಿಮಿಷಗಳಲ್ಲಿ ಅನಿರೀಕ್ಷಿತ ಪರೀಕ್ಷೆ ತೆಗೆದುಕೊಳ್ಳಬಹುದು. ತಿಂಗಳಿಗೆ ಎರಡು, ಒಂದು ತಾಸಿನ ಪರೀಕ್ಷೆಗಳನ್ನು ಇಟ್ಟಿರಬಹುದು. ಇಲ್ಲವೇ ಮನೆಯಿಂದ ಉತ್ತರ ಬರೆದುಕೊಂಡು ಬರುವ (take home examination) ಪರೀಕ್ಷೆಯೂ ಇರಬಹುದು. ಇವಲ್ಲದೇ ಒಂದು ಶೈಕ್ಷಣಿಕ `ಸಮೆಸ್ಟರ’ (semester) ಟರ್ಮಿನಲ್ಲಿ ಹಲವಾರು ಪೇಪರುಗಳನ್ನು ಬರೆಯುವ ಪರೀಕ್ಷೆಯಿರುತ್ತದೆ. ಯಾವುದಾದರೊಂದು ಯೋಜನೆ ಆರಿಸಿಕೊಂಡು ಅದರ ಮೇಲೆ ಲೇಖ ಬರೆಯುವ ಪರೀಕ್ಷೆಯೂ ಇರಬಹುದು. ನಡುವೆ ರಜೆ ಬಂದರಂತೂ ಮೈತುಂಬ ಕೆಲಸ. ಅಂತ್ಯದಲ್ಲಿ, ವರ್ಷದಲ್ಲಿ ಆಗಾಗ್ಗೆ ಕೊಟ್ಟ ಪರೀಕ್ಷೆಗಳಲ್ಲಿ ಪಡೆದ ಗುಣಗಳ ಸರಾಸರಿ ವರ್ಗವನ್ನು ದಯಪಾಲಿಸುತ್ತಾರೆ. ಭಾರತದಂತೆ ಶೇಕಡಾ ೩೫ ಪಾಸು-ವರ್ಗ, ಶೇಕಡಾ ೪೫ ಎರಡನೇ ವರ್ಗ, ಶೇಕಡಾ ೬೦ ಮೊದಲನೇ ವರ್ಗವೆಂಬ ಲೆಕ್ಕಾಚಾರವಿಲ್ಲ. ಅಲ್ಲಿ A (ಅತ್ಯುತ್ತಮ), B (ಉತ್ತಮ), C (ಮಧ್ಯಮ), D (ಪಾಸು), F (ನಪಾಸು) 1 (ಅಪೂರ್ಣ) ಮುಂತಾದ ಗ್ರೇಡುಗಳು ಸಾಮಾನ್ಯವಾಗಿವೆ. ಅಲ್ಲದೇ ಹೆಚ್ಚಿನ ಬುದ್ಧಿವಂತರಿರುವ ವರ್ಗದಲ್ಲಿ ಹೆಚ್ಚಿಗೆ ಗುಣಗಳ ಮೇಲೂ, ತೀರ ಸಾಮಾನ್ಯ ವಿದ್ಯಾರ್ಥಿಗಳ ವರ್ಗದಲ್ಲಿ ಸ್ವಲ್ಪ ಕಡಿಮೆ ಗುಣಗಳ ಮೇಲಿಂದಲೂ ವರ್ಗವನ್ನು ನಿರ್ಧರಿಸುತ್ತಾರೆ. ಅಂದರೆ ಇದರ ಅರ್ಥ ದಡ್ಡರ ಕ್ಲಾಸಿನಲ್ಲಿ ಶೇಕಡಾ ೬೦ ಗುಣಗಳಿಗೆ A ಗ್ರೇಡ ಸಿಗುವದೆಂದಲ್ಲ. ಡಿಗ್ರಿ ಪಡೆಯಲು ಪ್ರತಿಯೊಂದು ಕೋರ್ಸಿಗೆ (course ಅಂದರೆ ಒಂದು ವಿಷಯದಲ್ಲಿ ಪರಿಪೂರ್ಣತೆ ಪಡೆಯುವ ವಿಷಯಕ್ರಮ) ನಿರ್ದಿಷ್ಟ ಸರಾಸರಿ ಗ್ರೇಡ ಪಡೆಯಲೇ ಬೇಕೆಂಬ ಕಡ್ಡಾಯವಿದೆ. ಉದಾಹರಣೆಗೆ ಹೇಳುವುದಾದರೆ ಕೆಳಗಿನ ವರ್ಗದವರಿಗೆ C ಗ್ರೇಡ ಸರಾಸರಿ ಇರಬೇಕೆಂದರೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ B ಗ್ರೇಡ ಸರಾಸರಿ ಇರಬೇಕೆಂಬ ನಿಯಮವಿದೆ. ಅಂದರೆ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬನಿಗೆ ಒಂದು ವಿಷಯದಲ್ಲಿ C ಗ್ರೇಡ ದೊರಕಿದರೆ ಸರಾಸರಿ ಗುಣ ಪಡೆಯಲು ಆತ ಇನ್ನೊಂದು ವಿಷಯದಲ್ಲಿ A ಗ್ರೇಡ ಪಡೆಯಲೇ ಬೇಕು. ಇಪ್ಪತ್ತರಿಂದ ಐವತ್ತು ವಿದ್ಯಾರ್ಥಿಗಳಿರುವ ವರ್ಗದಲ್ಲಿ ಎಲ್ಲ ವಿಷಯಗಳಲ್ಲಿ A ಗ್ರೇಡ ಪಡೆಯುವುದು ಅತ್ಯಂತ ಕಠಿಣವಾದ ಕೆಲಸ. ಒಮ್ಮೆ ಶಿಕ್ಷಕರೂ ವಿದ್ಯಾರ್ಥಿಗಳೂ ಉಪಹಾರ ತೆಗೆದುಕೊಳ್ಳುತ್ತಿದ್ದಾಗ ಶಿಕ್ಷಕರೊಬ್ಬರು;

“ನಿಮ್ಮ ಅಭ್ಯಾಸವೊಂದನ್ನು ಬಿಟ್ಟರೆ ನೀವು ಬೇರಾವ ಚಟುವಟಿಕೆಯಲ್ಲೂ ಭಾಗವಹಿಸುವುದಿಲ್ಲ?” ಎಂದು ವಿದ್ಯಾರ್ಥಿಗಳನ್ನು ದೂರಿದರು. ವಿದ್ಯಾರ್ಥಿಯೊಬ್ಬ “ದಿನದಲ್ಲಿ ಹದಿನಾರು ತಾಸು ದುಡಿದರೂ ನೀವು ಕೊಟ್ಟ ಕೆಲಸ ಮುಕ್ತಾಯವಾಗದಿರುವಾಗ ಉಳಿದ ಚಟಿವಟಿಕೆಗೆ ವೇಳೆಯೆಲ್ಲಿಂದ ಬರಬೇಕು?” ಎಂದು ಮರುಸವಾಲು ಹಾಕಿದ. ಶಿಕ್ಷಕರು ಕೂಡಲೇ ಉತ್ತರಿಸಿದರು “ನಿನ್ನ ಹದಿನಾರು ತಾಸಿನ ದುಡಿತ ಕಡಿಮೆಯೆಂದೇ ಹೇಳಬೇಕು. ಯಾಕೆಂದರೆ ನಾಳೆ ದಿನಕ್ಕೆ ಹದಿನೆಂಟು ತಾಸು ದುಡಿಯುವವರೊಂದಿಗೆ ನೀನು ಸ್ಪರ್ಧಿಸಬೇಕಾಗಿದೆ!”

ಸ್ನಾತಕೋತ್ತರ ವಿದ್ಯಾರ್ಥಿಯ ಮೊದಲನೇ ಶಿಕ್ಷಣ–ಹಂತ (ಟರ್ಮ)ದಲ್ಲಿ B ಗ್ರೇಡ ಸರಾಸರಿಗಿಂತ ಸ್ವಲ್ಪ ಕಡಿಮೆಯಾದರೂ ಅವನಿಗೆ ಎಚ್ಚರಿಕೆ (warning) ಕೊಟ್ಟು ಎರಡನೇ ಹಂತದಲ್ಲಿ ಓದನ್ನು ಮುಂದುವರಿಸಲು ಅನುಮತಿ ನೀಡುತ್ತಾರೆ. ಆಗಲೂ ಸರಾಸರಿ B ಗ್ರೇಡ ಬರದಿದ್ದರೆ ನೇರ ಮನೆಗೆ ಕಳಿಸಿಬಿಡುತ್ತಾರೆ. ಹೀಗೆ ಅಪ್ಪಣೆ ಪಡೆದು ಮರಳುವವರಲ್ಲಿ ಭಾರತೀಯರ ಸಂಖ್ಯೆಯೇನೂ ಕಡಿಮೆಯಿಲ್ಲ. ನಾವೆಲ್ಲ ಎಂಟು ವಿದ್ಯಾರ್ಥಿಗಳ ಗುಂಪು ಕೀಟಶಾಸ್ತ್ರದ ಉಚ್ಚ ಅಭ್ಯಾಸವನ್ನು ಕೈಕೊಂಡಿದ್ದೆವು. ವರ್ಷದ ಕೊನೆಯಲ್ಲಿ ನಾಲ್ವರನ್ನು ತಿರುಗಿ ಕಳಿಸಲಾಯಿತು. ಭಾರತದಲ್ಲಿ ಇಂತಹ ಗ್ರೇಡ್ ಪದ್ಧತಿ ಇಲ್ಲದ್ದರಿಂದ ಅಮೇರಿಕೆಗೆ ಹೋಗುವ ವಿದ್ಯಾರ್ಥಿಗಳ ಬುದ್ಧಿಬಲದ ಪರಿಚಯ ಅಲ್ಲಿಯವರಿಗೆ ಆಗುವುದು ಬಿಗಿ. ಅಲ್ಲದೇ ಅವರು ಜೊತೆಗೆ ಒಯ್ಯುವ ಶಿಫಾರಸು–ಪತ್ರಗಳು (recommendation letters) ಪರಿಸ್ಥಿತಿಯಿಂದ ದೂರವಾಗಿರುತ್ತದೆ. ಇವುಗಳನ್ನೇ ನಂಬಿದ ಪ್ರಾಧ್ಯಾಪಕರಿಗೆ ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳ ಪ್ರಗತಿ ಕಂಡಾಗ ನಿರಾಶೆ, ಆಶ್ಚರ್ಯಗಳು ಉಂಟಾಗುವುದು ಸಹಜ. ನನ್ನ ಪ್ರಾಧ್ಯಾಪಕ ಡಾ. ಕ್ರಾಲ್ರು ಒಂದು ದಿನ

“ಕ್ರಿಶ್, ನನಗೊಂದು ಸಮಸ್ಯೆಯಾಗಿದೆ ನಿನ್ನ ದೇಶದಿಂದ ಬರುವ ವಿದ್ಯಾರ್ಥಿಗಳಿಗೆಲ್ಲ ಅತ್ಯುತ್ತಮ ಶಿಫಾರಸ್ಸು–ಪತ್ರಗಳಿರುತ್ತವೆ. ಇವುಗಳ ಆಧಾರದ ಮೇಲೆ ಇಲ್ಲಿ ಪ್ರವೇಶ ದೊರಕಿಸಿದ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಲ್ಲವೇ ನಮ್ಮ ಅಪೇಕ್ಷೆಯಷ್ಟು ಚೆನ್ನಾಗಿ ಮಾಡುವುದಿಲ್ಲ. ಇದಕ್ಕೆ ಕಾರವೇನು?” ಎಂದು ಕೇಳಿದರು. ಅದಕ್ಕೆ ನಾನು,

“ನಿಮ್ಮಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ತಮಗೆ ತಿಳಿದದ್ದನ್ನು ಮುಚ್ಚುಮರೆಯಿಲ್ಲದೇ ಶಿಫಾರಸು–ಪತ್ರದಲ್ಲಿ ನಮೂದಿಸುತ್ತಾರೆ. ಅವರು ವಿದ್ಯಾರ್ಥಿಗಳ ದೋಷಗಳನ್ನು ಕಾಣಿಸಲು ಮರೆಯುವುದಿಲ್ಲ. ತಾವು ಬರೆದದ್ದು ವಿದ್ಯಾರ್ಥಿಗಳಿಗೆ ತಿಳಿಯುವುದಿಲ್ಲವೆಂದು ಖಾತ್ರಿ ಇದೆ. ಒಂದು ವೇಳೆ ತಿಳಿದರೂ ಅದಕ್ಕಾಗಿ ಅವರು ಹೆದರಬೇಕಾಗಿಲ್ಲ. ಭಾರತದಲ್ಲಿ ಸ್ಥಿತಿ ತೀರ ಬೇರೆಯಾಗಿದೆ. ಶಿಕ್ಷಕರು ತಮ್ಮ ಶಿಫಾರಸ್ಸು–ಪತ್ರದಿಂದ ವಿದ್ಯಾರ್ಥಿಗೆ ಲಾಭ ಆಗುವಂತಿದ್ದರೆ ತಾನೇಕೆ ಅಡ್ಡಿಯಾಗಬೇಕು ಎಂಬ ಉದಾರಭಾವದಿಂದ ವಿದ್ಯಾರ್ಥಿಗಳಲ್ಲಿ ಇಲ್ಲದ ಉತ್ತಮ ಗುಣಗಳನ್ನೆಲ್ಲ ಶಿಫಾರಸ್ಸು–ಪತ್ರದಲ್ಲಿ ಕಾಣಿಸುತ್ತಾರೆ. ಕೆಲವು ಶಿಕ್ಷಕರು ಇಂತಹ ಪತ್ರಗಳನ್ನು ವಿದ್ಯಾರ್ಥಿಗಳೇ ಬರೆದು ತರಲು ತಿಳಿಸಿ, ತಾವು ಸಹಿ ಮಾತ್ರ ಮಾಡುತ್ತಾರೆ! ಶಿಕ್ಷಕರು ಇಂಥ ಪತ್ರಗಳನ್ನು ಅಮೇರಿಕೆಗೆ ಕಳಿಸಲು ಸ್ವಂತ ಕಿಸೆಯಿಂದ ಖರ್ಚುಕೊಡುವ ಮನಸ್ಸು ಮಾಡದ್ದರಿಂದ ವಿದ್ಯಾರ್ಥಿಯೇ ಇವನ್ನು ಕಳಿಸಿಕೊಡುತ್ತಾನೆ. ಆದ್ದರಿಂದ ಒಂದು ವೇಳೆ ವಿದ್ಯಾರ್ಥಿಗೆ ಅನುಕೂಲವಾದ ಶಿಫಾರಸ್ಸು–ಪತ್ರವನ್ನು ಆತ ಕೊಡದಿದ್ದರೆ ಅದು ನಿಮ್ಮ ಕೈಸೇರುವುದೂ ಇಲ್ಲ. ಅಮೇರಿಕೆಗೆ ಬರುವ ಹೆಚ್ಚಿನ ವಿದ್ಯಾರ್ಥಿಗಳು ಭಾರತದ ಬುದ್ಧಿಶಾಲಿಗಳಲ್ಲ. ಬಹುಸಂಖ್ಯಾತರ ತಂದೆ–ತಾಯಿ, ಇಲ್ಲವೆ ಪಾಲಕರು ಅಗರ್ಭ ಶ್ರೀಮಂತರಿರುತ್ತಾರೆ. ಇಲ್ಲವೇ ದೊಡ್ಡ ಸರಕಾರಿ ಹುದ್ದೆಯಲ್ಲಿರುತ್ತಾರೆ. ಶಿಫಾರಸಿನ ಬಲ, ಧನಬಲಗಳಿಂದ ಬಂದವರು ಇಲ್ಲಿಯ ಅಭ್ಯಾಸವನ್ನು ಎದುರಿಸಲಿಕ್ಕಾಗದೇ ಶರಣು ಹೊಡೆಯುತ್ತಾರೆ.” ಎಂದು ಸಮಾಧಾನ ಹೇಳಿದೆ. ಪ್ರಾಧ್ಯಾಪಕರು ನಗುತ್ತ,

“ಕ್ರಿಶ್ ನೀನು ಯಾವ ಬಲದ ಆಧಾರದಿಂದ ನಮ್ಮ ದೇಶಕ್ಕೆ ಬಂದೆ?” ಎಂದು ನನ್ನನ್ನೇ ಕೇಳಿದರು. ನನಗೆ ಇವಾವುದರ ಆಧಾರವೂ ಇದ್ದಿಲ್ಲವೆಂದು ಅವರಿಗೆ ಗೊತ್ತು. ಬೇಕೆಂದು ಕೆಣಕಲೆಂದೇ ಹಾಗೇ ಕೇಳಿದ್ದರು.

ಬಹಳಷ್ಟು ಶ್ರಮವಹಿಸಿ ಗ್ರೇಡು ಗಳಿಸಿದೆವು ಎಂದಿಟ್ಟುಕೊಂಡರೆ ಸಾರ್ಥಕವಾಗಲಿಲ್ಲ. ಜೊತೆಗೆ ದೀರ್ಘ ಸಂಶೋಧನೆಯನ್ನೂ ಕೈಕೊಳ್ಳಬೇಕು ಎಂದು ಪ್ರಾಧ್ಯಾಪಕರು `ಬಜಾಯಿಸುತ್ತಲೇ’ ಇರುತ್ತಾರೆ. ಸಾಲದ್ದಕ್ಕೆ ಸಂಶೋಧನೆಯ ಗುಣಾವಗುಣಗಳನ್ನು ಪರಾಮರ್ಶಿಸಲು ಮೂವರು ಪ್ರಾಧ್ಯಾಪಕರ ಸಮಿತಿಯೊಂದು ಇರುತ್ತದೆ. ತಿಂಗಳಿಗೊಮ್ಮೆ ಅವರನ್ನು ಭೆಟ್ಟಿಯಾಗಿ ನೀವು ಮಾಡಿದ ಸಂಶೋಧನೆಗಳನ್ನೆಲ್ಲ ವಿವರಿಸಬೇಕು. ಅವರು ತೃಪ್ತಿಯನ್ನು ವ್ಯಕ್ತಪಡಿಸಿದಾಗಲೇ ಗಾಡಿ ಮುಂದುವರಿಯುತ್ತದೆ.

ವಿಷಯದ ಅಭ್ಯಾಸ ಪ್ರಾರಂಭಿಸಿದ ಒಂದು ಒಂದೂವರೆ ವರ್ಷದೊಳಗೆ `ಅರ್ಹತಾ ಪರೀಕ್ಷೆ’ (qualifying examination) ಯನ್ನು ಪಾಸುಮಾಡಬೇಕು. ಈ ಪರೀಕ್ಷೆ ಪಾಸುಮಾಡುವ ಮೊದಲು ಪಿಎಚ್.ಡಿ. ಯ ಅರ್ಹ–ವಿದ್ಯಾರ್ಥಿಯೆಂದು ಆತ ಪರಿಗಣನೆಯಾಗುವುದೇ ಇಲ್ಲ. ಈ ಪರೀಕ್ಷೆಯಾದರೂ ಬಹಳ ಕಠಿಣವಾಗಿರುತ್ತದೆ. ಆರು ಜನ ಪ್ರಾಧ್ಯಾಪಕರ ಪರೀಕ್ಷಾ–ಸಮಿತಿಯೊಂದು ಇರುತ್ತದೆ. ಪರೀಕ್ಷೆ ಕೇವಲ ಲಿಖಿತವಿರಬಹುದು; ಕೇವಲ ಮೌಖಿಕವಿರಬಹುದು. ಇಲ್ಲವೇ ಎರಡನ್ನೂ ಒಳಗೊಂಡಿರಬಹುದು. ನಾನು ಕೇವಲ ಮೌಖಿಕ ಪರೀಕ್ಷೆಯನ್ನು ಕೊಡಬೇಕಾಯಿತು.

ಈ ಪರೀಕ್ಷೆಯಲ್ಲಿ ಅಡಿಗೆಯಿಂದ ಅಣುವಿನ ವರೆಗೆ ಯಾವುದೇ ವಿಷಯದ ಮೇಲೆ ಪ್ರಶ್ನೆ ಕೇಳಬಹುದು. ಈ ಪರೀಕ್ಷೆಯ ವೈಶಿಷ್ಟ್ಯವೆಂದರೆ ಕೇವಲ ಎರಡು ಬಾರಿ ಇದಕ್ಕೆ ಕೂಡ್ರಲು ಅವಕಾಶವಿದೆ. ಎರಡನೇ ಬಾರಿಯೂ ಯಶಸ್ವಿಯಾಗದ್ದಿದ್ದರೆ ಹಿಂದಿರುಗುವದೊಂದೇ ಮಾರ್ಗ. ಕೆಲವು ಸುದೈವಿಗಳು ಮೊದಲನೇ ಸಲ ಕೆಲವೇ ಗುಣಗಳಿಂದ ಅಯಶಸ್ವಿಯಾದರೆ ಎಂ.ಎಸ್. ಗೆ (ಎಂ.ಎಸ್ಸಿ.) ಪ್ರವೇಶ ಪಡೆಯುತ್ತಾರೆ. ಒಂದು ವಿಶ್ವವಿದ್ಯಾಲಯದಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಗೆ ಬೇರೆ ಯಾವದೇ ವಿಶ್ವವಿದ್ಯಾಲಯದಲ್ಲೂ ಪ್ರವೇಶ ದೊರೆಯಲಾರದು. ಎಲ್ಲಿಯೇ ಅರ್ಜಿ ಹಾಕಿದರೂ ಆ ಸಂಸ್ಥೆಯ ಅಧಿಕಾರಿಗಳ ಮೊದಲಿನ ಪ್ರಾಧ್ಯಾಪಕರಿಗೆ ಫೋನ್ ಮಾಡಿ ಆ ವಿದ್ಯಾರ್ಥಿಯ ವಿವರವಾದ ಮಾಹಿತಿಯನ್ನು ಪಡೆಯದಿರುವುದಿಲ್ಲ.

ಇಷ್ಟಕ್ಕೇ ಮುಗಿಯಲಿಲ್ಲ ಕಷ್ಟಪರಂಪರೆ. ಪಿಎಚ್.ಡಿ. ಯ ಅತ್ಯುಚ್ಚ ಪದವಿ ಪಡೆಯುವವರಿಗೆ (ವಿಜ್ಞಾಅದಲ್ಲಿ ಕೂಡ) ಇಂಗ್ಲೀಷ್ ಬಿಟ್ಟು ಫ್ರೆಂಚ್, ಜರ್ಮನ್, ರಶಿಯನ್ದೊಳಗಿನ ಯಾವದೇ ಎರಡು ಭಾಷೆಯೊಳಗೆ ವಿಶೇಷ ಪರೀಕ್ಷೆ ಕೊಡಬೇಕು. ಈ ಪರೀಕ್ಷೆಗಳನ್ನು ಆಯಾ ವಿಭಾಗದವರೇ ನಡೆಸುವದರಿಂದ ಅವರು ಸಹಜವಾಗಿಯೇ ಹೆಚ್ಚಿನ ಮಟ್ಟವನ್ನು ಅಪೇಕ್ಷಿಸುತ್ತಾರೆ. ನಾನು ಫ್ರೆಂಚ್ ಭಾಷೆ ಕಲಿಯಲು ಬಹಳಷ್ಟು ಬೆವರು ಇಳಿಸಬೇಕಾಯಿತು. ಕೀಟಶಾಸ್ತ್ರ (Entomology) ನನ್ನ ವಿಷಯವಾಗಿದ್ದರಿಂದ, ವಿಷಯಾಭ್ಯಾಸವನ್ನು (course-work) ಕೆಳಗಿನ ವರ್ಗದಿಂದಲೇ ಪ್ರಾರಂಭಿಸಬೇಕಾಯಿತು. ಫ್ರೆಂಚ್ ವರ್ಗಗಳು ಬೆಳಿಗ್ಗೆ ಏಳುಗಂಟೆಗೆ ಇರುತ್ತಿದ್ದವು. ಮೈ ಕೊರೆಯುವ ಚಳಿಯಲ್ಲಿ ಧಾವಿಸಬೇಕಾಗುತ್ತಿತ್ತು. ವರ್ಗದಲ್ಲಿಯ ಪಾಠದ ವೇಗವನ್ನು ನೋಡಿದಾಗ ನಾನು ಐದು ವರ್ಷ ಕಲಿತರೂ ಈ ಭಾಷೆ ನನಗೆ ಬಾರದೆಂದು ತಿಳಿದುಕೊಂಡೆ. ವರ್ಗದ ಪಾಠದ ಜೊತೆಗೆ ಖಾಸಗೀ ರೀತಿಯಲ್ಲೂ ಪಾಠ ಹೇಳಿಸಿಕೊಳ್ಳಲಾರಂಭಿಸಿದೆ. ನನಗೆ `ಟ್ಯೂಶನ್’ ಕೊಡುತ್ತಿದ್ದವಳು ಫ್ರೆಂಚ್ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿನಿ. ತಾಸಿಗೆ ಫೀ ಎಂದು ಮೂರು ಡಾಲರ್ (ಈಗಿನ ಲೆಕ್ಕದಂತೆ ೨೨ ರೂಪಾಯಿ ೫೦ ಪೈಸೆ) ಕೊಡಬೇಕಾಗುತ್ತಿತ್ತು ಅವಳಿಗೆ. ಒಂದೆರಡು ಗಂಟೆಯೆಂದರೆ ಹತ್ತು ಬಾರಿ ಕೈಗಡಿಯಾರ ನೋಡುತ್ತ, ಬಾಯ್ತುಂಬ ಮಾತನಾಡುತ್ತ, ಹವಾಮಾನದ ಸುದ್ದಿಯಾಡುತ್ತ, ಅಂಗವಿನ್ಯಾಸ ಮಾಡುತ್ತ ಕಾಲ ಕಳೆಯುತ್ತಿದ್ದಳು. ಟ್ಯೂಶನ್ನಿಗೆಂದು ನನ್ನ ಬೊಕ್ಕಸ ಬರಿದಾಗುತ್ತ ಬಂದರೂ ಫ್ರೆಂಚ್ ಭಾಷೆ ತಲೆಯಲ್ಲಿ ತುಂಬಿಕೊಳ್ಳುವುದು ದುಸ್ತುರವಾಯಿತು. ಫ್ರೆಂಚ್ ಭಾಷೆ ಆಕರ್ಷಿಸುವಂತಹದಲ್ಲವೆಂದು ನಾನು ಕಂಡುಕೊಂಡೆ. ಈ ಬಿಗಿ ಭಾಷೆಯನ್ನು ಕಲಿಯಲು ಇನ್ನೂ ಒಂದು ಉಪಾಯ ಕೈಕೊಳ್ಳಬೇಕಾಯಿತು. ನಮ್ಮ ಕಾಲೇಜಿನಲ್ಲಿ ಕೆಲವು ಫ್ರೆಂಚ್ ವಿದ್ಯಾರ್ಥಿಗಳಿದ್ದರು. ಅವರೊಡನೆ ಬಿಡುವಿದ್ದಾಗಲೆಲ್ಲ ಫ್ರೆಂಚ್ ಮಾತನಾಡಲು ಪ್ರಯತ್ನಿಸತೊಡಗಿದೆ. ಅವಕಾಶ ಸಿಕ್ಕಾಗಲೆಲ್ಲ ಅವರಿಂದಲೂ ಪಾಠ ಹೇಳಿಸಿಕೊಳ್ಳುತ್ತಿದ್ದೆ. ಈ ಒಂದು ಭಾಷೆ ಕಲಿಸಲು ವೆಚ್ಚ ಮಾಡಿದ ರೊಕ್ಕ, ವೇಳೆಗಳನ್ನು ಭಾರತದಲ್ಲಿ ವೆಚ್ಚ ಮಾಡಿದ್ದರೆ ಇನ್ನೊಂದು ಮಾಸ್ಟರ್ಸ್ ಡಿಗ್ರಿ ದೊರೆಯುತ್ತಿತ್ತು! ಈ ಪರೀಕ್ಷೆ ಪಾಸಾದ ದಿನ ನನ್ನ ಅತಿ ದೊಡ್ಡ ಭಾರವೊಂದು ಇಳಿದಂತಾಯಿತು.

ಇವೆಲ್ಲ ಕುತ್ತುಗಳನ್ನು ದಾಟಿದ ಮೇಲೆ ಸಂಶೋಧನೆ ಜೋರಾಗಿ ನಡೆಯಿತು. ನಮ್ಮ ಕಾಲೇಜಿನಿಂದ ಐದು ಮೈಲು ದೂರದಲ್ಲಿ “ಪ್ರಾಯೋಗಿಕ” ಅರಣ್ಯವಿದೆ. (experimental forest). ಅಲ್ಲಿಗೆ ಪ್ರತಿನಿತ್ಯ ಹೋಗಬೇಕಾಗುತ್ತಿತ್ತು. ಕಾರು ಇಲ್ಲದವರಿಗೆ ಕಾಲಬಲವೇ ಗತಿ ತಾನೆ. ದಾರಿಹೋಕರಿಗೆ ಬೇರೆ ರಸ್ತೆಯಿಲ್ಲದ್ದರಿಂದ ಟ್ರಕ್, ಕಾರುಗಳು ಎಡೆಬಿಡದೇ ಹೋಗುವ ರಸ್ತೆಯಲ್ಲಿ ಸಾವಧಾನದಿಂದ ಹೋಗಬೇಕಾಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಕಾರಿನವರ ದಯೆ ಬಂದು ಗುರುತು–ಪರಿಚಯವಿಲ್ಲದಿದ್ದರೂ ಕಾರಿನಲ್ಲಿ ಕೂಡ್ರಿಸಿಕೊಂಡು ತಲುಪ ಬೇಕಾದ ಸ್ಥಳಕ್ಕೆ ಮುಟ್ಟಿಸಿದ್ದೂ ಉಂಟು. ಪ್ರಾಯೋಗಿಕ ಅರಣ್ಯದಲ್ಲಿ ದಿನಕ್ಕೆ ಎಂಟು ಹತ್ತು ತಾಸು ಕಳೆಯಬೇಕಾಗುತ್ತಿತ್ತು. ಅಲ್ಲಿಯ ಕೀಟಸಂಗ್ರಹವನ್ನಾಗಲಿ ಬೇರೆ ಸಾಮಗ್ರಿಯನ್ನಾಗಲಿ ತಂದು ಕಾಲೇಜಿನ ಪ್ರಯೋಗಶಾಲೆಯಲ್ಲಿ ಕೆಲಸ ಮುಂದುವರಿಸಬೇಕಾಗುತ್ತಿತ್ತು. ಕೆಲವೊಮ್ಮೆ ಮಧ್ಯರಾತ್ರಿಯ ತನಕವೂ ದುಡಿಯ ಬೇಕಾಗುತ್ತಿತ್ತು. ಎಷ್ಟೋ ಸಲ ನಸುಕು ಹರಿಯುವ ತನಕವೂ ಪ್ರಯೋಗಶಾಲೆಯಲ್ಲಿ ಕಳೆದ ನೆನಪಿದೆ. ನನ್ನ ಪ್ರಾಧ್ಯಾಪಕರಾದರೂ ಈ ಕಠಿಣ ದುಡಿತವನ್ನು ಮೆಚ್ಚಿಕೊಂಡು, ತುಂಬ ಪ್ರೋತ್ಸಾಹಿಸಿದ್ದರಿಂದ ನಾನು ಯಾವಾಗಲೂ ಉತ್ಸಾಹದಿಂದ ಇರುತ್ತಿದ್ದೆ. ಅಮೇರಿಕೆಯಲ್ಲಿ ಮೊದಲೇ ತೀರ ಕಡಿಮೆಯಾದ ವಿದ್ಯಾರ್ಥಿ–ಪ್ರಾಧ್ಯಾಪಕರ ಅಂತರ ಮಾಯವಾಗುತ್ತ ಬಂದಿತು. ನನ್ನನ್ನು ಸರಿಸಮಾನತೆಯಿಂದ ನನ್ನ ಪ್ರಾಧ್ಯಾಪಕರು ಕಾಣಲಾರಂಭಿಸಿದರು. ಆದರೆ ಹೀಗೆಂದು ಹೆಚ್ಚಿನ ಸಲಿಗೆಗೂ ಅವರು ಅವಕಾಶ ಕೊಟ್ಟಿರಲಿಲ್ಲ.

ನಂತರ ಬಂದದ್ದು ಪ್ರಬಂಧ (thesis) ವನ್ನು ಮುಗಿಸುವ ಸಮಸ್ಯೆ `ಟಾಯಿಪ್’ ಮಾಡುವವರು ಬಹಳೇ ಹಣ ಕೇಳುವುದರಿಂದ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರಬಂಧವನ್ನು ತಾವೇ `ಟಾಯಿಪ್’ ಮಾಡುತ್ತಾರೆ. ನಾನೂ `ಟಾಯಿಪ್’ ಮಾಡುವುದನ್ನು ಕಲಿತುಕೊಂಡೆ. ಮೊದಲ ಸಲ ಎರಡುನೂರು ಪುಟದ ನನ್ನ ಪ್ರಬಂಧವನ್ನು `ಟಾಯಿಪ್’ ಮಾಡಿ ಹೆಮ್ಮೆಯಿಂದ ಪ್ರಾಧ್ಯಾಪಕರ ಎದುರಿಗೆ ಇಟ್ಟಾಗ–

“ಕ್ರಿಶ್, ಇದೇನು, ನಿಮ್ಮ ಮಹಾಭಾರತ ಬರೆದಿರುವಿರಾ?” ಎಂದು ಕೇಳಿ ನಕ್ಕರು. ಅವರ ಸೂಚನೆಯಂತೆ ಸಂಕ್ಷೇಪಿಸಿ ಅದನ್ನು ಎಪ್ಪತ್ತು ಪುಟಕ್ಕೆ ಇಳಿಸಲಾಯಿತು. ಪ್ರಬಂಧಕ್ಕೆ ಅವಶ್ಯವಾಗಿ ಚಿತ್ರ, ರೇಖಾಚಿತ್ರ, ಭಾವಚಿತ್ರಗಳು ಬೇಕಷ್ಟೆ? ಇವಕ್ಕಾದರೂ ಬಹಳಷ್ಟು ಹಣ ತೆತ್ತಬೇಕಾಗುವುದು. ಸುದೈವಕ್ಕೆ ನನಗೆ ಇವುಗಳಲ್ಲಿ ಸ್ವಲ್ಪ ಪರಿಶ್ರಮವಿತ್ತು. ಅಮೇರಿಕೆಗೆ ಹೋದ ನಂತರ ಪೋಟೋಗ್ರಾಫಿಯನ್ನೂ ಸುಧಾರಿಸಿಕೊಂಡೆ. ಇವೆಲ್ಲ ಆಕೃತಿ–ಚಿತ್ರಗಳನ್ನು ತಯಾರಿಸಲು ಒಮ್ಮೊಮ್ಮೆ ಬೆಳಿಗ್ಗೆ ನಾಲ್ಕು ಗಂಟೆಯ ತನಕ ಪ್ರಯೋಗಶಾಲೆಯಲ್ಲಿ ಕಳೆದ ದಿನಗಳಿವೆ. ಪ್ರಬಂಧದ ಕರಡು–ಪತ್ರಿಕೆಗಳನ್ನು ಪರೀಕ್ಷಾ–ಸಮಿತಿಯ ಆರು ಪ್ರಾಧಾಪಕರಿಗೆ ತೋರಿಸಬೇಕು. ಅವರ ಸೂಚನೆಗಳಂತೆ ಅದನ್ನು ತಿದ್ದಬೇಕು. ಪಕ್ಕಾ ಕಾಫಿಗಳಲ್ಲಿ ಒಂದೆರಡು ತಪ್ಪುಗಳಿದ್ದರೂ ನಡೆಯಲಾರದು. ಹೀಗಾಗಿ ಕಣ್ಣಲ್ಲಿ ಕಣ್ಣಿಟ್ಟು ಪರಿಶೀಲಿಸಬೇಕಾಗುತ್ತದೆ. ಕೊನೆಗೆ ನುರಿತ ಟಾಯಿಪಿಸ್ಟ ಒಬ್ಬಳಿಂದಲೇ ಕೊನೆಯ ಪ್ರತಿಗಳನ್ನು `ಟಾಯಿಪ್’ ಮಾಡಿಸಬೇಕಾಯಿತು. ಅದಕ್ಕೆ ಸುಮಾರು ಎರಡು ಸಾವಿರ ರೂಪಾಯಿ ಖರ್ಚಾಯಿತು!

ವಿದ್ಯಾಭ್ಯಾಸ ಮುಕ್ತಾಯವಾಗುತ್ತ ಬಂದಂತೆ ದಿಗಿಲೂ ಹೆಚ್ಚಾಗತೊಡಗಿತು. ಕೊನೆಗೆ ಪರೀಕ್ಷೆಯನ್ನು ಎದುರಿಸಬೇಕಾಗಿತ್ತು. ಏಳು ಪ್ರಾಧ್ಯಾಪಕರ ಸಮಿತಿಯ ಎದುರು ನನ್ನ ಸಂಶೋಧನೆಯನ್ನು ಸಮರ್ಥಿಸುವ (defence of the thesis) ಪರೀಕ್ಷೆಯದಾಗಿತ್ತು. ಸಂಶೋಧನೆಯ ಪ್ರತಿಯನ್ನು ನೋಡಿ ತಲೆದೂಗಿದ ಪ್ರಾಧ್ಯಾಪಕರೇ ಇವರಾದರೂ ಪರೀಕ್ಷೆಯ ಹಾಲಿನಲ್ಲಿ ಮೌಖಿಕವಾಗಿ ಅವರನ್ನು ಎದುರಿಸುವ ಪ್ರಸಂಗ ಬಂದಾಗ ಅವರ ಪ್ರತಿಕ್ರಿಯೆ ಹೇಗಿರುತ್ತದೋ ಯಾರು ಬಲ್ಲರು? ಸುತ್ತು ಕಡೆಯಿಂದ ಎಡೆಬಿಡದೇ ಪ್ರಶ್ನೆಗಳ ಸುರಿಮಳೆಯಾಗ ತೊಡಗಿತು. ಬಿಡದೇ ಅವುಗಳಿಗೆ ಉತ್ತರಿಸಬೇಕಾಯಿತು. ಎರಡೂವರೆ ತಾಸುಗಳ ಅಗ್ನಿಪರೀಕ್ಷೆಯ ನಂತರ ಬೆವರು ಒರಿಸಿಕೊಳ್ಳಲು ಸಮಯ ದೊರೆಕಿತು. ಅವರೆಲ್ಲ ಒಮ್ಮತದಿಂದ ನನ್ನನ್ನು ಅಭಿನಂದಿಸಿದಾಗ ಕೊನೆಗೊಮ್ಮೆ ಗೆದ್ದನೆಂದು ಪುಲಕಿತನಾದೆ. ಅಂದಿನಿಂದ ಡಾ.ಕಾಮತನಾದೆ!

ಡಾಕ್ಟರೇಟ್ ಪದವಿ ದೊರಕಿದ ಹರ್ಷೊದ್ವೇಗ ಕಡಿಮೆಯಾಗುವ ಮೊದಲೇ ಮುಂದೇನು? ಎಂಬ ಸಮಸ್ಯೆ ತಲೆದೋರಿತು. ಇತರ ನನ್ನ ಭಾರತೀಯ ಸಹಪಾಠಿಗಳ ಪಾಡನ್ನು ದಿನವಹಿ ನೋಡುತ್ತಿದ್ದ ನನಗೆ ಮೂರು ವರ್ಷಗಳ ಶ್ರಮ ಸಾರ್ಥಕವಾಯಿತೆಂದು ಗೊತ್ತಿದ್ದರೂ ಅನಿಶ್ಚಿತ ಭವಿಷ್ಯದ ಸಮಸ್ಯೆಯನ್ನು ಕಡೆಗಣಿಸುವಂತಿರಲಿಲ್ಲ. ನನ್ನ ಪಾಸ್ಪೋರ್ಟ್ ಇನ್ನೂ ಹದಿನೆಂಟು ತಿಂಗಳ ವರೆಗೆ ಬಾಧ್ಯವಿತ್ತು. ಈ ಅವಧಿಯಲ್ಲಿ ಅಮೇರಿಕೆಯಲ್ಲೇ ಇದ್ದು ಹಣ ಗಳಿಸಬಹುದೆಂಬ ವಿಚಾರ ಬಂತು. ಆದರೆ ನನಗಾಗಿ ಕಾಯುತ್ತಿದ್ದ ತಂದೆ–ತಾಯಿ, ತಮ್ಮ ಅಣ್ಣನ ಮದುವೆಯಲ್ಲಿ ಮೆರೆದಾಡಬೇಕೆಂಬ ಹುಮ್ಮಸದ ತಮ್ಮ ತಂಗಿಯರು, ಅಣ್ಣನ ಮದುವೆಯಾದ ಹೊರತು ತನಗೆ ಮದುವೆಯಿಲ್ಲವಲ್ಲ ಎಂದು ಕಾತುರಗೊಂಡ ತಮ್ಮ ಇವರೆಲ್ಲರ ನೆನೆಪು ತೀವ್ರವಾಗತೊಡಗಿತು. ಅಮೇರಿಕೆಯಲ್ಲಿ ನೆಮ್ಮದಿಯ ಜೀವನ ಸುಲಭಸಾಧ್ಯವಿದ್ದರೂ ನನ್ನನ್ನು ಸಾಕಿ ಸಲುಹಿದ, ನನ್ನ ದೇಶ ಉಪ್ಪುಂಡು ಬೆಳೆದ ನನ್ನ ತಾಯ್ನಾಡು ಎಡೆಬಿಡದೇ ನನ್ನನ್ನು ಕರೆಯತೊಡಗಿದವು. ಇಲ್ಲಿ ಪಡೆದ ಉಚ್ಚ ಶಿಕ್ಷಣದ ಯೋಗ್ಯ ಉಪಯೋಗವನ್ನು ನನ್ನ ದೇಶದಲ್ಲಿಯೇ ಮಾಡಬೇಕೆಂದು ಹಿಂದೆಯೇ ನಿರ್ಧರಿಸಿದ್ದೆ. ಈಗ ಇಲ್ಲಿದ್ದೇ ಭಾರತದಲ್ಲಿ ನೌಕರಿಯೊಂದನ್ನು ಗೊತ್ತುಮಾಡುವದೆಂದು ನಿರ್ಣಯಿಸಿಕೊಂಡೆ. ಆ ದಿಕ್ಕಿನಲ್ಲಿ ಪ್ರಯತ್ನಿಸತೊಡಗಿದೆ ಯೋಗಾಯೋಗವೆಂಬಂತೆ ಭಾರತದ U.P.S.C. (Union Public Service Commission) ಯ ಅಧಿಕಾರಿಯೊಬ್ಬರು ಶೀಘ್ರದಲ್ಲಿಯೇ ಅಮೇರಿಕೆಗೆ ಬರಲಿದ್ದರು. ಉಚ್ಚ–ಪದವಿಗಳನ್ನು ಪಡೆದು ಭಾರತಕ್ಕೆ ಬರಲು ಒಪ್ಪದೇ ಅಮೇರಿಕೆಯಲ್ಲೆ ಇರಬಯಸುವ ಭಾರತೀಯರ ಮನ ಒಲಿಸಲು ವಿಶಿಷ್ಟ ಹೊಣೆಗಾರಿಕೆಯೊಂದಿಗೆ ಅವರನ್ನು ಕಳಿಸಲಾಗಿತ್ತಂತೆ. ಅಮೇರಿಕೆಯ ಪ್ರಮುಖ ಶಹರಗಳಲ್ಲಿ ಸಂಚರಿಸಿ ನೂರಾರು ಭಾರತೀಯ ವಿದ್ಯಾರ್ಥಿಗಳನ್ನು ಭೆಟ್ಟಿಯಾಗಿ ಕೇಂದ್ರಸರಕಾರದ ವತಿಯಿಂದ ಅವರಿಗೆಲ್ಲ ನೌಕರಿಯ ಆಶ್ವಾಸನೆ ಕೊಡುವ ಅಧಿಕಾರವನ್ನು ಇವರು ಪಡೆದಿದ್ದರು!

ಅಮೇರಿಕೆಯಲ್ಲಿ ಶಿಕ್ಷಣ ಮುಗಿಸಿದ ಅಥವಾ ಮುಗಿಸಲಿರುವ, ಭಾರತದಲ್ಲಿ ನೌಕರಿಯನ್ನು ಬಯಸುವ ಜನರನ್ನೆಲ್ಲ ನೂಯಾರ್ಕ ನಗರದಲ್ಲಿ `ಇಂಟಾರ್ವ್ಹೂ’ಗೆ ಕರೆಯಲಾಯಿತು.

ನನ್ನಂತೆ ನೌಕರಿಗಾಗಿ ಅರ್ಜಿ ಸಲ್ಲಿಸಿದ ಹಲವಾರು ಜನರಿದ್ದರು. ಒಬ್ಬನು ಬೋಸ್ಟನ್ನಿನಿಂದ ಬಂದರೆ ಇನ್ನೊಬ್ಬನು ಎಮಹರ್ಸ್ಟದಿಂದ ಬಂದಿದ್ದನು. ಸಾವಿರ ಮೈಲು ದೂರದಿಂದ ಬಂದ ಕೆಲವರಿದ್ದರು. ಕೊಲಂಬಿಯಾ `ಕಾಲೇಜ ಕಟ್ಟಡದಲ್ಲಿ `ಇಂಟರ್ವ್ಹೂ’ ಇಟ್ಟಿದ್ದರು. ಎಲ್ಲರೂ ಭಾರತೀಯ ಪದ್ಧತಿಯ `ಇಂಟರ್ವ್ಹೂ’ ನಿರೀಕ್ಷಿಸಿದ್ದರಿಂದ ಸಾಕಷ್ಟು ಉಜಳಣಿ ಮಾಡಿಕೊಂಡೇ ಬಂದಿದ್ದರು. ಶಿಸ್ತಿನ ಬಟ್ಟೆ, ಬರೆ, ಹೆಚ್ಚಿನ ಠೀವಿಗಳಿಂದ ವೇಳೆಗೆ ಮೊದಲೇ ಬಂದಿದ್ದರು. ಅಮೇರಿಕನ್ ಮಹಿಳೆಯೊಬ್ಬಳು ಬಂದು ನಮ್ಮ ಕಾಗದ–ಪತ್ರಗಳನ್ನು ಪರಿಶೀಲಿಸಿದಳು. ಬಂದವರೆಲ್ಲ ಪರಿಚಯಮಾಡಿಕೊಂಡು ಮಾತುಕತೆಗೆ ಪ್ರಾರಂಭಿಸಿದೆವು. ನಿರ್ದಿಷ್ಟ ವೇಳೆಗಿಂತ ಒಂದು ತಾಸು ತಡವಾಗಿ ಬಂದು, ಭಾರತೀಯ ಅಧಿಕಾರಿಗಳು ತಮ್ಮ ಭಾರತೀಯತನವನ್ನು ಸ್ಪಷ್ಟಗೊಳಿಸಿದರು. ಕೋರ್ಟಿನ ನೌಕರರು ಅಪರಾಧಿಯ ಹೆಸರು ಹಿಡಿದು ಕೂಗುವಂತೆ ಮೊದಲನೇ ಉಮೇದುವಾರನನ್ನು ಉಚ್ಚ–ಧ್ವನಿಯಿಂದ ಕರೆಯಲಾಯಿತು. ಆತ ಹೋದ ಐದು ನಿಮಿಷಗಳಲ್ಲೇ ಪೆಚ್ಚುಮುಖ ಹಾಕಿಕೊಂಡು ಬಂದ. ಏನಾಯಿತೆಂದು ಕೇಳುವ ಮೊದಲೇ ನನ್ನ ಹೆಸರನ್ನು ಕೂಗಿದ್ದರಿಂದ ಒಳಗೆ ಹೋಗುವಂತಾಯಿತು. ಕೋಣೆಯೊಳಗೆ ಹೋದೊಡನೆ ಅಲ್ಲಿ ಕುಳಿತವರ ಪರಿಚಯಮಾಡಿಕೊಡುವ ಗೊಡವೆಗೆ ಯಾರೂ ಹೋಗಲಿಲ್ಲ. (ಅಮೇರಿಕೆಯ ವಾಸ್ತವ್ಯದಲ್ಲಿ ಈ ರೂಢಿ ವಾಡಿಕೆಯಾಗಿಬಿಟ್ಟಿತ್ತು) ಶಾಲಾ ವಿದ್ಯಾರ್ಥಿಯಂತೆ ಎಲ್ಲರನ್ನು ಎದುರಿಸಿದ ಖುರ್ಚಿಯೊಂದಿತ್ತು. ಅದರಲ್ಲಿ ಕೂಡುವಂತೆ ಅಪ್ಪಣೆಯಾಯಿತು. ಇದುವರೆಗೆ ಜೀವನದಲ್ಲಿ ಪಾಪ–ಪುಣ್ಯದ ಕೆಲಸಗಳನ್ನೆಲ್ಲ ಮುಗಿಸಿ ಪರಮಾತ್ಮನ ಕರೆಗಾಗಿ ಕಾಯುವ ವಯಸ್ಸಿನ ಮುದಿಯನೊಬ್ಬ ಕುಳಿತಿದ್ದ. ಭಾರತದಿಂದ ಇದೀಗ ಇಳಿದಿದೆ ಸವಾರಿ ಎಂಬುದು ಕುಳಿತ ಠೀವಿಯಿಂದಲೇ ಸ್ಪಷ್ಟವಿತ್ತು. ಇನ್ನೊಂದು ಖುರ್ಚಿಯಲ್ಲಿ ಸರ್ದಾರಜಿಯೊಬ್ಬ ಠೀವಿಯಿಂದ ವಿರಾಜಮಾನನಾಗಿದ್ದ. ಬಹಳ ಕಾಲದಿಂದ ಅಮೇರಿಕೆಯಲ್ಲಿದ್ದಾನೆಂಬುದಕ್ಕೆ ಆತ ಧರಿಸಿದ ಬಟ್ಟೆಗಳೇ ಸಾಕ್ಷಿಯಾಗಿದ್ದವು. ಮೂರನೆಯ ಖುರ್ಚಿಯಲ್ಲಿ ಅಮೇರಿಕನ್ ಪ್ರಾಧ್ಯಾಪಕನೊಬ್ಬನನ್ನು ಒತ್ತಾಯದಿಂದ ಕೂಡ್ರಿಸಿದಂತಿತ್ತು. ಮುದಿಯ ಮಾತಿಗೆ ಪ್ರಾರಂಭಿಸಿದ.

“ನೀನು ಎಂದು ಭಾರತಕ್ಕೆ ಮರಳಬೇಕೆಂದಿದ್ದೀ?”

“ಆದಷ್ಟು ತೀವ್ರವಾಗಿ.” ಎಂದು ಉತ್ತರಿಸಿದಾಗ.

“ನೀನು ಯಾವ ಪರೀಕ್ಷೆ ಪಾಸುಮಾಡಿರುವಿ?” ಎಂಬ ಪ್ರಶ್ನೆ ಬಂದಿತು. ನಂತರ,

“ನೀನು ಎಷ್ಟು ಗುಣಗಳನ್ನು ಪಡೆದಿರುವಿ?” ಎಂದೂ ಪ್ರಶ್ನೆ ಬಂದಿತು. ಇವುಗಳ ವಿವರಗಳನ್ನೆಲ್ಲ ಹತ್ತೆಂಟು ಫಾರ್ಮುಗಳಲ್ಲಿ ಈಗಾಗಲೇ ತುಂಬಿ ಕಳಿಸಿದ್ದರೂ ಮತ್ತೊಮ್ಮೆ ಬೊಗಳಿದೆ. ನಂತರ,

“ನಿನಗೆ ಭಾರತದಲ್ಲಿ ನೌಕರಿ ದೊರೆಕಿದೆಯೇ?” ಎಂದು ಕೇಳಿದ. `ಅದಕ್ಕಾಗಿಯೇ ನಾನು ಮೂರು ನೂರು ಮೈಲಿ ದೂರದಿಂದ ಈ `ಇಂಟರ್ವ್ಹೂ’ಗೆ ಬಂದಿದ್ದೇನೆ”ಂದು ಬೊಗಳಿದೆ. ನಂತರ.

“ನಮ್ಮ ಹತ್ತಿರ ಈಗ ಖಾಲಿ ಜಾಗಗಳಿಲ್ಲ (no vacancy). ಮುಂದೆ ಸ್ಥಳಗಳು ಖಾಲಿಯಾದರೆ ಯಾರಾರು ಸಿಗಬಹುದೆಂದು ಟಿಪ್ಪಣೆ ಮಾಡಿಕೊಳ್ಳಲು ಈ `ಇಂಟರ್ವ್ಹೂ’ ಇಡಲಾಗಿದೆ. ಭಾರತಕ್ಕೆ ಮರಳಿದ ಮೇಲೆ ಕೂಡಲೇ ನೌಕರಿ ಸಿಗದಿದ್ದರೆ ವಿಜ್ಞಾನಿ–ಪಂಗಡ (Scientists pool) ದಲ್ಲಿ ಸೇರಿಕೊ. ಅಲ್ಲಿ ಸೇರಲು ತೊಂದರೆಯಾದಲ್ಲಿ ನಮ್ಮ ರಾಯಭಾರಿ–ಕಚೇರಿಯಿಂದ ಒಂದು ಸೂಚನಾ–ಪತ್ರ ಒಯ್ದಲ್ಲಿ ಎಲ್ಲ ಸುಸೂತ್ರವಾಗಿ ನಡೆಯುವುದು. ನೌಕರಿಯ ಸ್ಥಳಗಳು ಖಾಲಿಯಾದಲ್ಲಿ `ಇಂಟರ್ವ್ಹೂ’ ಕೂಡ ಇಲ್ಲದೇ ನಿಮ್ಮೆಲ್ಲರನ್ನು ಸೇರಿಸಿಕೊಳ್ಳಲಾಗುವುದು.” ಎಂಬ ಅಭಯದೊಂದಿಗೆ ಮುದಿಯ ಮಾತು ಮುಗಿಸಿದ. ಪಾಪ, ಅಮೇರಿಕನ್ ಮಹನೀಯ ವಾಡಿಕೆಯ ಒಂದೆರಡು ಪ್ರಶ್ನೆಗಳನ್ನು ಕೇಳಿದ. ಸರದಾರಜೀ ಮುಚ್ಚಿದ ಬಾಯನ್ನು ತೆರೆಯಲೇ ಇಲ್ಲ. ಐದು ನಿಮಿಷಗಳಲ್ಲಿ `ಇಂಟರ್ವ್ಹೂ’ ಮುಗಿದು ಹೋಗಿತ್ತು. ಇಂಥದಕ್ಕಾಗಿ ಎಷ್ಟೋ ಕೆಲಸ ಬಿಟ್ಟು ಹುಚ್ಚಾಪಟ್ಟೆ ಖರ್ಚುಮಾಡಿ ಇಲ್ಲಿಗೆ ಓಡಿ ಬಂದೆನಲ್ಲ ಎಂದು ಬಹಳ ಅನುಮಾನವೆನಿಸಿತು. ಉಳಿದವರ ಅನುಭವಗಳಾದರೂ ನನ್ನದಕ್ಕಿಂತ ಭಿನ್ನವಾಗಿರಲಿಲ್ಲ. ಒಬ್ಬ ಮಹಿಳಾ ಡಾಕ್ಟರ್ ಅಂತೂ ಅಮೇರಿಕನ್ನನ ಎದುರಿಗೇ ನಮ್ಮ ಅಧಿಕಾರಿಗೆ ಛೀ–ಥೂ ಹಾಕಿದಳು!

ಇಂಥ ಭಾರತೀಯ `ಇಂಟರ್ವ್ಹೂ’ಗಳಿಗೆ ಅಮೇರಿಕನ್ `ಇಂಟರ್ವ್ಹೂ’ಗಳಿಗೂ ಶಿಕ್ಷಣದಲ್ಲಿದ್ದಷ್ಟೆ ಅಂತರವಿದೆ. ವಿಶ್ವವಿದ್ಯಾಲಯದಲ್ಲಾಗಲಿ ಇತರ ಶಿಕ್ಷಣಸಂಸ್ಥೆಗಳಲ್ಲಾಗಲಿ ನೌಕರಿ ಇದ್ದರೆ ಅವರು ವಿವಿಧ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿಗೆ ಬರೆಯುತ್ತಾರೆ. ಪ್ರಾಧ್ಯಾಪಕರು ಸೂಚಿಸಿದವರನ್ನು ವಿಶ್ವವಿದ್ಯಾಲದ ಆವಾರದಲ್ಲಿಯೇ ಅಧಿಕಾರಿಯೊಬ್ಬ ಬಂದು ಭೆಟ್ಟಿಯಾಗುತ್ತಾನೆ. ಆತನೊಡನೆ ಮಾತುಕತೆಯಾಡಿ ನೌಕರಿ ಸೇರಲು ಸಾಧ್ಯಾಸಾಧ್ಯತೆಗಳ ಬಗ್ಗೆ ವಿಚಾರಿಸಿ ಅವನ ಅನುಕೂಲವನ್ನು ಗೊತ್ತುಪಡಿಸುತ್ತಾನೆ. ಪ್ರಾಧ್ಯಾಪಕ ಸ್ಥಳಕ್ಕೆ ಭರ್ತಿ ಮಾಡುವದಿದ್ದರೆ `ಸೆಮಿನಾರ್’ ಒಂದನ್ನು ಏರ್ಪಡಿಸುತ್ತಾರೆ. ಈ ಸೆಮಿನಾರ್ನಲ್ಲಿ ಉಮೇದುವಾರನ ಯೋಗ್ಯತೆ ನಿರ್ಣಯಿಸಲ್ಪಡುತ್ತದೆ. ಯಾವುದಾದರೂ ಕಂಪನಿಯ ಕೆಲಸಕ್ಕೆ ಅಮೇರಿಕನ್ನರೂ, ಭಾರತೀಯರೂ ಹಾತೊರೆಯುತ್ಟಾರೆ. ಅವನ ವಾಸಸ್ಥಾನದಿಂದ `ಇಂಟರ್ವ್ಹೂ’ ನಡೆಯಲಿರುವ ಕಂಪನಿಯ ಆಫೀಸಿನ ತನಕ ಕಾರು, ವಿಮಾನ, ಅಲ್ಲಿಂದ ಕಾರುಗಳ ವ್ಯವಸ್ಥೆಯಾಗುತ್ತದೆ. ಕಾರಿನಲ್ಲಿ ಕಂಪನಿಯ ಆವಾರವನ್ನು ಪ್ರವೇಶಿಸುತ್ತಿದ್ದಂತೆ ಕಂಪನಿಯ ಅಧಿಕಾರಿಯೊಬ್ಬ ಬಂದು ಸ್ವಾಗತಿಸುತ್ತಾನೆ. ವಿಶ್ರಾಂತಿ, ತಿಂಡಿ–ತೀರ್ಥಗಳ ವ್ಯವಸ್ಥೆಯಾಗುತ್ತದೆ. ನಂತರ ಕಂಪನಿಯ ಇತರ ಅಧಿಕಾರಿಗಳ ಪರಿಚಯ ಮತ್ತು ಅವರ ಕೆಲಸದ ಪರಿಚಯಮಾಡಿಕೊಡಲಾಗುತ್ತದೆ. ಮಧ್ಯಾನ್ಹ ಊಟದ ಹೊತ್ತಿಗೆ ಭರ್ಜರಿ ಊಟವಾಗುತ್ತದೆ. ಆಧಿಕಾರಿಯು ದಿನವಿಡೀ ಉಮೇದುವಾರನೊಂದಿಗಿದ್ದು ಆತನೊಂದಿಗೆ ಅನೇಕ ವಿಷಯ ಚರ್ಚಿಸಿರುತ್ತಾನೆ. ಆದರೆ ಶಾಲಾಮಕ್ಕಳ ತೆರದಲ್ಲಿ (ಭಾರತೀಯ `ಇಂಟರ್ವ್ಹೂ’!) ಪ್ರಶ್ನೋತ್ತರಗಳಿಗೆ ಅವಕಾಶವಿರುವುದಿಲ್ಲ. ಜಾಣ್ಮೆಯಿಂದ ತಮಗೆ ಬೇಕಾದ ರೀತಿಯಲ್ಲಿ ಉಮೇದುವಾರನ ಪರೀಕ್ಷೆಯಾಗಿರುತ್ತದ. ವಸತಿಗೆ ಉತ್ತಮ ಹೋಟೆಲಿನಲ್ಲಿ ವ್ಯವಸ್ಥೆಯಾಗಿರುತ್ತದೆ. ಇಷ್ಟೆಲ್ಲ ಸತ್ಕಾರದ ನಂತರ ಬರುವ ವೆಚ್ಚ, ಹೋಟೆಲ್ ವೆಚ್ಚ, ತಿರುಗಿ ಹೋಗುವುದಕ್ಕೆ ಚೆಕ್ ತಯಾರಾಗಿ ಉಮೇದುವಾರನ ಕೈಯಲ್ಲಿ ಇಡಲಾಗುತ್ತದೆ. ಇಂತಹ `ಇಂಟರ್ವ್ಹೂ’ಗಳಿಗೂ ತನ್ನೊಬ್ಬನನ್ನು ಬಿಟ್ಟರೆ ಉಳಿದವರೆಲ್ಲರೂ ಶತಮೂರ್ಖರೆಂದು ನಂಬಿದ ಭಾರತೀಯ ಅಧಿಕಾರಿಗಳು ನಡೆಸುವ `ಇಂಟರ್ವ್ಯೂ’ಗಳಿಗೂ ಎಲ್ಲಿಯ ಸಂಬಂಧ? ನಮ್ಮ ನ್ಯೂಯಾರ್ಕ `ಇಂಟರ್ವ್ಹೂ’ ತೆಗೆದುಕೊಂಡ ಭಾರತೀಯ ಮಹನೀಯನ ಮಗಳೊಬ್ಬಳು ಅಮೇರಿಕನ್ನನನ್ನು ಮದಿವೆಯಾಗಿ ಅಲ್ಲಿಯ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಳಂತೆ. ಪ್ರತಿವರ್ಷ ಭಾರತೀಯ ವಿಜ್ಞಾನಿಗಳ `ಮನ ಒಲಿಸಿ’ ಭಾರತಕ್ಕೆ ಹಿಂದಿರುಗುವಂತೆ ಮಾಡುವ ಮಹಾಕಾರ್ಯದ ನೆವದಿಂದ ಮಗಳ ಹತ್ತಿರ ಬರುತ್ತಾನೆ ಈ ಮುದಿಯ! ಭಾರತದಂತಹ ಬಡದೇಶ ಇಂತಹ ಅಧಿಕಾರಿಗಳಿಗೆ ಪರದೇಶ ಪ್ರವಾಸದ ಅವಕಾಶ ಈ ರೀತಿ ಒದಗಿಸುತ್ತದೆಂದು ನೆನಸಿಕೊಂಡರೆ ನಾಚಿಕೆಯಾಗುತ್ತದೆ.

ಹತ್ತಾರು ಪತ್ರಗಳನ್ನು `ವಿಜ್ಞಾನಿ-ಪಂಗಡ’ಕ್ಕೆ ಬರೆದರೂ ಅವರಿಂದ ಉತ್ತರವೇನೂ ದೊರೆಯಲಿಲ್ಲ. ಕೊನೆಗೂ ಯಾವ ಆಶ್ವಾಸನೆಯೂ ಇಲ್ಲದೇ ಅಮೇರಿಕವನ್ನು ಶೂನ್ಯಮನಸ್ಕನಾಗಿ ಬಿಡಬೇಕಾಯಿತು. ಇಂಗ್ಲೆಂಡ್, ಫ್ರಾನ್ಸ್, ಹಾಲಂಡ್, ಜರ್ಮನಿ, ಸ್ವಿಟ್ಝರ್ಲಂಡ್, ಇಟಲಿ, ಗ್ರಿಸ್, ಇಜಿಫ್, ಪಾಕಿಸ್ತಾನ್ ಮೊದಲಾದ ದೇಶಗಳಲ್ಲಿ ಸಂಚರಿಸುತ್ತ ನಾಲ್ಕು ವರ್ಷಗಳ ವಿದೇಶ–ವಾಸ್ತವ್ಯದ ನಂತರ ತಿರುಗಿ ಭಾರತಕ್ಕೆ ಬಂದೆ. ಊರಿನಲ್ಲಿ ನಾಲ್ಕೆಂಟು ದಿನ ಅಮೇರಿಕೆಯ ಅನುಭವಗಳ ಕುರಿತು ಮಾತನಾಡಲು ಮೋಜೆನಿಸಿದರೂ ಪದೇ ಪದೇ ಅದನ್ನೇ ಹೇಳುವ ಸಂದರ್ಭ ಬಂದಾಗ ಬೇಸರಕ್ಕಿಟ್ಟುಕೊಂಡಿತು. ಸಾಲದ್ದಕ್ಕೆ ನನ್ನ ಮನಸ್ಸಿನ ಗೆಳೆಯರೆಲ್ಲ ನೌಕರಿ ನಿಮಿತ್ತ ಎಲ್ಲೆಲ್ಲೊ ಚದುರಿಹೋಗಿದ್ದರು. ಹೀಗಾಗಿ ಮನೆಯಲ್ಲಿಯೇ ಹೆಚ್ಚಿನ ವೇಳೆ ಕಳೆಯಬೇಕಾಯಿತು. ದಿನಕ್ಕೆ ಹದಿನಾರು ಹದಿನೆಂಟು ತಾಸು ದುಡಿಯುತ್ತಿದ್ದವನಿಗೆ, ಅವೇ ತಾಸುಗಳನ್ನು ಏನೇನೂ ಕೆಲಸವಿಲ್ಲದೇ ಕಳೆಯುವ ಸಂದರ್ಭ ಬಂದಿತು. ಮುಂದೇನು? ಎಂಬ ಪ್ರಶ್ನೆ ಇನ್ನೂ ಹೆಚ್ಚಾಗಿ ಪೀಡಿಸತೊಡಗಿತು. ಕೊನೆಗೊಮ್ಮೆ ಬಹಳ ಬೇಸತ್ತು ವಿಜ್ಞಾನಿಗಳ ಕೂಟಕ್ಕೆ (scientist’ poll) ಕಟುವಾದ ಕಾಗದವೊಂದನ್ನು ಬರೆದೆ.

ಆಶ್ಚರ್ಯದ ಮಾತೆಂದರೆ ಅನಿರೀಕ್ಷಿತವಾಗಿ ಅವರಿಂದ ತೀವ್ರದಲ್ಲಿಯೇ ಉತ್ತರ ಬಂದಿತು. ನನ್ನ ರಾಜೀನಾಮೆಯ ಪತ್ರದ ಪ್ರತಿ. ನಾನು ನಿರುದ್ಯೋಗಿಯೆಂಬ ಪುರಾವೆಯ ಪತ್ರ ಮತ್ತು ನನಗೆ ಬೇರೆಲ್ಲೂ ನೌಕರಿ ಸಿಕ್ಕಿಲ್ಲವೆಂದು `ದೃಢೀಕರಿಸುವ ಪತ್ರಗಳನ್ನು ಕೇಳಿದ್ದರು. ಇವನ್ನೆಲ್ಲ ಕಳಿಸಿದ ಒಂದು ತಿಂಗಳ ಮೇಲೆ ರಾಜಸ್ತಾನದ ಕೃಷಿ ಕಾಲೇಜಿನಲ್ಲಿ ಹಾಜರ ಆಗಬೇಕೆಂದು ಆರ್ಡರ್ ಬಂದಿತು. ಆ ಕಾಲೇಜಿನ ವಿಶ್ವವಿದ್ಯಾಲಯದ ಆಫೀಸಿಗೆ ಹೋಗಿ ವಿಚಾರಿಸಿದಾಗ, ತಮಗೆ ಯಾವ ಸಂದೇಶವೂ ಬಂದಿಲ್ಲವೆಂದು ಹೇಳಿದರು. ಆದರೆ ಆ ಕಾಲೇಜು ಇರುವ ಸ್ಥಳವನ್ನು ತಿಳಿಸಿ ಅಲ್ಲಿ ಹೋಗಿ ವಿಚಾರಿಸಬಹುದೆಂದರು. ಕೊನೆಗೊಮ್ಮೆ ಅವರು ಹೇಳಿದ ಸ್ಥಳಕ್ಕೆ ಮುಟ್ಟಿದೆ! ಅಲ್ಲಿ ದೊರೆತ ಆದರದ ಸನ್ಮಾನ ಈ ಹಿಂದಿನ ಕಹಿ ಅನುಭವಗಳನ್ನು ಕೆಲಕಾಲ ಮರೆಯುವಂತೆ ಮಾಡಿತು.