ಲೇಖನಿಯ ಸ್ನೇಹಿತೆ

ಲೇಖನಿಯ ಸ್ನೇಹಿತೆ

ಅನೇಕ ವರ್ಷಗಳ ಪತ್ರವ್ಯವಹಾರದ ನಂತರ ಸಮಕ್ಷಮ ಭೆಟ್ಟಿಯಾಗುವ ಸುಸಂಧಿ ದೊರಕಿದಾಗ ಆಗುವ ಸ್ಥಿತಿ ಜೀನ್ ರೊಥಗಳನ್ನು ಭೆಟ್ಟಿಯಾದಾಗ ನಾನು ಅನುಭವಿಸಿದೆ. ಭಾರತದಲ್ಲಿದ್ದಾಗಲೇ ಪತ್ರಮೂಲಕವಾಗಿ ಪ್ರಾರಂಭವಾದ ಸ್ನೇಹ ಅಮೇರಿಕೆಗೆ ಹೋದ ಮೇಲೂ ಮುಂದುವರಿಯಿತು. ಅಮೇರಿಕೆಗೆ ಹೋದೊಡನೆ ಅವಳನ್ನು ಭೆಟ್ಟಿಯಾಗುವ ಇಚ್ಛೆಯಾದರೂ ಆಕೆ ಸಾಯರೆಕ್ಯೂಸಿನಿಂದ ಮೂರು ಸಾವಿರ ಮೈಲು ದೂರದಲ್ಲಿ ಇರುತ್ತಿದ್ದರಿಂದ ಮತ್ತೆ ಮೂರು ವರ್ಷ ನಮ್ಮ ಪತ್ರಸ್ನೇಹ ಅದೇ ರೂಪದಲ್ಲಿ ಮುಂದುವರಿಯಬೇಕಾಯಿತು. ಕೊನೆಗೊಮ್ಮೆ ನಾನು ಅಮೇರಿಕೆಯನ್ನು ಸುತ್ತಾಡಲು ಹೋದಾಗ ಆಕೆಯ ಊರಾದ “ಸ್ವೀಟ್ ಹೊಮ್” (Sweet Home) ಕ್ಕೆ ಹೋಗುವ ಸದಾವಕಾಶ ದೊರೆಯಿತು. ಭೆಟ್ಟಿಯಾದಾಗ ಇಬ್ಬರಿಗೂ ಹೇಗೆ ಮಾತನ್ನು ಆರಂಭಿಸಬೇಕೆಂದು ಹೊಳೆಯಲಿಲ್ಲ. ಭೆಟ್ಟಿಯಾದ ಸಂತೋಷದಲ್ಲಿ ಸುಮ್ಮನೆ ಸ್ವಲ್ಪ ಹೊತ್ತು ನೋಡುತ್ತ ನಿಂತೆವು. ಮಾತು ಪ್ರಾರಂಭವಾದಾಗ ಅದು ಕೊನೆಯ ಪತ್ರದ ಉತ್ತರರೂಪವನ್ನು ಧರಿಸಿಕೊಂಡು ಬಂತು.

ಶ್ರೀಮತಿ ಜೀನ್ರೋಥ್ ಮಧ್ಯಮ ವಯಸ್ಸಿನ ಮೂರು ಮಕ್ಕಳ ತಾಯಿ. ವೃತ್ತಿಯಿಂದ ಅವರು ಒಕ್ಕಲಿಗರು. ವಿರಾಮದ ದಿನಗಳಲ್ಲಿ ಆಕೆಯ ಗಂಡ ಜೇಕ್ ಕಟ್ಟಿಗೆಯ ಕಾರಖಾನೆಯಲ್ಲಿ ಕೆಲಸ ಮಾಡುತ್ತಾನೆ. ಅವರಿಗೆ ನಾಲ್ವತ್ತು ಎಕರೆ ಹೊಲವಿದೆ. ಸಾಗುವಳಿಗೆ ಬೇಕಾದ ಎಲ್ಲ ಯಂತ್ರಸಾಮಾಗ್ರಿಗಳಿವೆ. ಹಾಲಿಗಾಗಿ ಆಕಳುಗಳನ್ನು ಸಾಕಿದ್ದಾರೆ. ತಂದೆ, ತಾಯಿ, ಮಕ್ಕಳು ಕೂಡಿ ಹೊಲದಲ್ಲಿ ದುಡಿಯುತ್ತಾರೆ. ಜೊತೆಗೆ ವಿವಿಧಪ್ರಕಾರದ ಕಾಯಿಪಲ್ಲೆಗಳನ್ನು ತಮ್ಮಲ್ಲಿ ಬೆಳೆಸಿ ಡಬ್ಬಿಗಳಲ್ಲಿ ಕಾಯ್ದಿಡುತ್ತಾರೆ. ಚಳಿಗಾಲಕ್ಕೆಂದು, ಇನ್ನೂ ತಮಗೆ ಹೆಚ್ಚಾಗಿ ಉಳಿದ ಕಾಯಿಪಲ್ಲೆ ಹಣ್ಣುಗಳನ್ನು ನೆರೆಹೊರೆಯವರಿಗೆ ಕೊಟ್ಟು ತಮಗೆ ಬೇಕಾದ ಜೀನಸುಗಳನ್ನು ಕೊಳ್ಳುತ್ತಾರೆ. ಊರಿನ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ನೆರೆಹೊರೆಯವರಿಗೆ ಅನೇಕ ವಿಧದಲ್ಲಿ ಸಹಾಯಮಾಡುತ್ತಾರೆ.

ಜೀನಳ ವಂಶಜರು ಫ್ರೆಂಚರಂತೆ. ಮೆಥಡಿಸ್ಟ ಪಂಗಡಕ್ಕೆ ಸೇರಿದ ಪ್ರೊಟೆಸ್ಟಂಟರು ಇವರು, ತುಂಬ ಧಾರ್ಮಿಕರು, ತುಂಬ ಸಾದಾ ಸರಳ ಜೀವನ ನಡೆಸುತ್ತಿದ್ದ ರೋಥ್ ಕುಟುಂಬ ಅಮೇರಿಕನ್ನರಿಗೆ ಸಹಜವಾದ ಬಾಹ್ಯಾಡಂಬರದಿಂದ ದೂರ ಇದ್ದದ್ದು ಸದಿಚ್ಛೆಯಿಂದಲೇ ಬಡವರಾಗಿ ಉಳಿದಿದ್ದಾರೆ. ವೇಳೆ ಸಿಕ್ಕಾಗಲೆಲ್ಲ ಜೀನಳು ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುತ್ತಾಳೆ. ಅನೇಕ ಮಹಿಳಾ–ಮಂಡಲಗಳ ಸಂಪರ್ಕವಿಟ್ಟುಕೊಂಡಿದ್ದಾಳೆ. ಆಗಾಗ ಹೋಗಿ ಭಾಷಣ ಕೊಡುತ್ತಾಳೆ. ಕುಟುಂಬದೊಡನೆ ಆಗಾಗ ಬೇರೆಬೇರೆ ಸ್ಥಳಗಳಿಗೆ ಹೋಗಿ ಬರುತ್ತಾಳೆ. ಅನೇಕ ಜನ ಭಾರತೀಯ ಮತ್ತು ಜಪಾನೀ ಲೇಖನಿಯ ಸ್ನೇಹಿತರಿದ್ದಾರೆ ಆಕೆಗೆ. ಬೆಳಿಗ್ಗೆ ಕುಟುಂಬದ ಯೋಗ–ಕ್ಷೇಮ, ಮನೆಗೆಲಸಗಳಿಗೆ ಲಕ್ಷ್ಯಗೊಡುವ ಮೊದಲು, ಪತ್ರ ಬರೆಯಲು ಸ್ವಲ್ಪ ವೇಳೆ ಮೀಸಲಿಡುತ್ತಾಳಂತೆ, ಆಮೇಲೆ ಸ್ವತಃ ಆಕಳುಗಳನ್ನು ಹಿಂಡಿ ಬಕೆಟ್ಟುಗಟ್ಟಲೆ ಹಾಲು ತರುತ್ತಾಳೆ. ಆ ಹಾಲನ್ನೆಲ್ಲ ಒಂದೇ ದಿನದಲ್ಲಿ ಮುಗಿಸುವದರಿಂದ ಜೀನಳ ಕುಟುಂಬವೆಲ್ಲ ಪೈಲವಾನರದಾಗಿದೆ. ಸಾಲದ್ದಕ್ಕೆ ಇಬ್ಬರು ಸಣ್ಣ ಮಕ್ಕಳನ್ನು ಸಾಕಲು ತೆಗೆದುಕೊಂಡಿದ್ದಾಳೆ. ಕುದುರೆ, ನಾಯಿ, ಬೆಕ್ಕುಗಳನ್ನು ಸಾಕಿದ್ದಾಳೆ. ಎಲ್ಲವನ್ನು ಯೇಸುಕ್ರಿಸ್ತನೇ ತನ್ನಿಂದ ಮಾಡಿಸುತ್ತಾನೆ ಎಂದು ದೃಢವಾಗಿ ನಂಬಿದ್ದಾಳೆ.

ತನ್ನ ದೇವರು, ಧರ್ಮಗಳಲ್ಲಿ ಹೆಚ್ಚಾಗಿ ವಿಶ್ವಾಸವಿಟ್ಟು ಜೀನಳಿಗೆ ಇತರ ಧರ್ಮದ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲ ಸಾಕಷ್ಟಿದೆ. ನಾನಲ್ಲಿ ಹೋದ ಸಂಜೆ ಮಾಮೂಲಿ ಮಾತುಕತೆ ನಡೆದವು. ಮರುದಿನ ರವಿವಾರವಾದ್ದರಿಂದ ಅವರೆಲ್ಲ ಚರ್ಚಿಗೆ ಹೋಗಲಿದ್ದರು. ನಾನೂ ಅವರೊಡನೆ ಹೋದೆ. ಅಂದು ವಿಶಿಷ್ಟ ಅಡಿಗೆಯಿದ್ದುದರಿಂದ ಜೀನ್ ಭರದಿಂದ ಅಡಿಗೆಗೆ ತೊಡಗಿದಳು. ನನಗಾಗಿ ಅಡಿಗೆಯ ಮನೆಯಲ್ಲೇ ಕುರ್ಚಿ ಹಾಕಿದಳು. ಸರಿ, ಮಾತಿಗಾರಂಭವಾಯಿತು;

“ಕ್ರಿಶ್, ನಿಮ್ಮ ದೇವಾಲಯಕ್ಕೂ ನಮ್ಮ ಚರ್ಚಿಗೂ ಅಂತರವಿರಬಹುದಲ್ಲವೇ?”

“ಬಹಳ ಅಂತರವಿದೆ. ನಿಮ್ಮ ಹಿಂದಿನ ಚರ್ಚುಗಳು ಹೇಗೆ ಇದ್ದವೊ ಗೊತ್ತಿಲ್ಲ. ಆಧುನಿಕ ಚರ್ಚುಗಳಂತೂ ಅಮೇರಿಕನ್ನರ ಬೆಡಗು, ಬಿನ್ನಾಣಗಳನ್ನು ಪ್ರದರ್ಶಿಸುವ ಸ್ಥಳಗಳಾಗಿವೆ. ಜನರೆಲ್ಲ ಕ್ಲಬ್ಗೋ, ಪಾರ್ಟಿಗೋ ಹೋಗುವವರಂತೆ ಎಚ್ಚರದಿಂದ ಶೃಂಗರಿಸಿಕೊಂಡು, ಆತ್ಮವನ್ನು ಮನೆಯಲ್ಲಿಯೇ ಬಿಟ್ಟು ಒಬ್ಬರನ್ನು ಇನ್ನೊಬ್ಬರು ಭೆಟ್ಟಿಯಾಗುತ್ತ `ಹಾಯ್ ಹಾಯ್’ ಎನ್ನುತ್ತ ಪಾದ್ರಿಗಳು ಹೇಳಿದ ರಾಜಕಾರಣದ ಭಾಷಣಗಳನ್ನು ಕೇಳಿ, ತುಂಬಿದ ಕಿಸೆಯನ್ನು ಖಾಲಿಮಾಡಿಕೊಂಡು ಬರುತ್ತಾರೆ. ಜನರಿಗೆಲ್ಲ ಅತ್ಯವಶ್ಯಕವಾದ ಆಧ್ಯಾತ್ಮಿಕತೆಯ ಒಂದಂಶವಾದರೂ ನಿಮ್ಮ ಚರ್ಚುಗಳಲ್ಲಿ ದೊರೆಯುವುದಿಲ್ಲ. ನಮ್ಮಲ್ಲೂ ದೇವರನ್ನು ಭೆಟ್ಟಿಯಾಗುವ ಕಾಲಕ್ಕೆ ದೇವಸ್ಥಾನಕ್ಕೆ ಹೋಗಿಬರುವವರಿದ್ದಾರೆ. ಆದರೆ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಜೀವನಕ್ಕೆ ದೇವಾಲಯ ಕೇಂದ್ರವಾಗಿದೆ.”

“ಚರ್ಚುಗಳಿಗೆ ಹೆಸರಿಡಲು ನೀನೆಷ್ಟು ಚರ್ಚುಗಳಿಗೆ ಹೋಗಿ ಬಂದಿದ್ದೀಯಾ?”

“ಭಾರತದಲ್ಲಿದ್ದಾಗ ನಾಲ್ಕೈದು ಚರ್ಚುಗಳಿಗೆ ಹೋಗಿ ಬಂದಿದ್ದೇನೆ. ಸಾಯರೆಕ್ಯೂಸಿಗೆ ಬಂದ ನಂತರ ಹತ್ತಿಪ್ಪತ್ತು ಸಲ ಬೇರೆ ಬೇರೆ ಚರ್ಚುಗಳಿಗೆ ಹೋಗಿ ಬಂದಿದ್ದೇನೆ. ಅಲ್ಲದೇ ಎರಡು ಬಾರಿ ಸೋಡಸ್ (ನ್ಯೂಯಾರ್ಕ)ದ ಪಾದ್ರಿಗಳೊಬ್ಬರ ವೈಯುಕ್ತಿಕ ಅತಿಥಿಯಾಗಿ ಹೋಗಿದ್ದೆ. ಹೀಗಾಗಿ ಚರ್ಚಿನ ಆಗು-ಹೋಗುಗಳನ್ನೆಲ್ಲ ಕಣ್ಣಾರೆ ಕಂಡು ನಿರ್ಣಯಿಸುವ ಧೈರ್ಯಮಾಡಿದ್ದೇನೆ. ಚರ್ಚಿನ ಬೋಧನೆಯೆಲ್ಲ ಬಹಳ ಸಂಕುಚಿತ ದೃಷ್ಟಿಕೋನವುಳ್ಳದ್ದಾಗಿದೆ. ನಾನು ಕೇಳಿದ ಕೆಲವು ದೃಷ್ಟಾಂತಗಳನ್ನು ಕೊಡಲೇ?

ಇಂದು ನಾವು ಇಪ್ಪತ್ತನೆಯ ಶತಮಾನದಲ್ಲಿದ್ದೇವೆ. ಈ ಶತಮಾನದಲ್ಲಿ ಆದಷ್ಟು ವಿಜ್ಞಾನದ ಪ್ರಗತಿ ಹಿಂದೆಂದೂ ಆಗಿಲ್ಲ. ಮಾನವನು ಕೆಳಮಟ್ಟದ ಪಶುಪಕ್ಷಿಗಳಿಂದ ಉತ್ಕ್ರ್ಂತಿ (evolution) ಹೊಂದುತ್ತ ಸದ್ಯದ ಸ್ವರೂಪ ತೆಳಿದಿದ್ದಾನೆಂದು ಪ್ರಾಣಿಶಾಸ್ತ್ರಜ್ಞರು ಸಿದ್ಧಪಡಿಸಿದ್ದಾರಷ್ಟೆ? ಆದರೆ ನಿಮ್ಮ ಉಪದೇಶಕರು ಇನ್ನೂ `ಆಡಾಂ’ ಮತ್ತು `ಈವ್’ರ ಕತೆಯನ್ನು ಪುನರುಚ್ಚರಿಸುತ್ತ ನಾವೆಲ್ಲ ಅವರ ಮರಿಮಕ್ಕಳೆಂದು ಒತ್ತಿ ಹೇಳುತ್ತಾರೆ. ಬಾಯಬಲ್ದಲ್ಲಿ ಬರೆದದ್ದೆಲ್ಲ ವೇದವಾಕ್ಯವೆಂದು ಖಂಡಿತ ನಂಬಿದಂತೆ ಇರುತ್ತದೆ ಅವರ ಧ್ವನಿ.

ಚರ್ಚಿನ ಬಹಳಷ್ಟು ಪ್ರವಚನಗಳು ಸಿರಿವಂತಿಕೆಯೆಂದರೆ ದೇವರ ಕೃಪಾ ಕಟಾಕ್ಷದ ಸೂಚಕವೆಂದು ನಂಬಿದಂತೆ ಇರುತ್ತದೆ. ಹೀಗಾಗಿ ದೇವರ ಸಾನ್ನಿಧ್ಯ ಪಡೆಯಲು ಜನ ಹೆಚ್ಚುಚ್ಚು ಧನಸಂಪಾದನೆಯಲ್ಲಿ ತೊಡಗಿದರೆ ಆಶ್ಚರ್ಯವಿಲ್ಲ. ಧನದ ರೂಪದಲ್ಲಿ ದೇವರು ಹೀಗೆ ಸಹಾಯ ಮಾಡುತ್ತಾನೆಂಬುದರ ಬಗ್ಗೆ ಹತ್ತಾರು ಕತೆಗಳನ್ನು ಕೇಳಿದ್ದೇನೆ. ಎಲ್ಲ ಕತೆಗಳಲ್ಲೂ ಪ್ರಾರಂಭದಲ್ಲಿ ನಾಯಕ-ನಾಯಿಕೆಯರು ಮೊದಲು ನಾಸ್ತಿಕರಿದ್ದು ಚರ್ಚಿಗೆ ಹೋಗುತ್ತಿರುವುದಿಲ್ಲ. ಆದ್ದರಿಂದ ಬಹಳ ಕಷ್ಟದಿಂದ, ಬಡತನದಿಂದ ಜೀವನ ನಡೆಸುತ್ತಿರುತ್ತಾರೆ. ಒಮ್ಮೆ ಇವರಿಗೆ ಯೇಸುಕ್ರಿಸ್ತನು ಕನಸಿನಲ್ಲಿ ಬಂದೊ, ಅಥವಾ ಪಾದ್ರಿಯೊಬ್ಬ ಭೆಟ್ಟಿಯಾಗಿಯೋ ಇವರಿಗೆ ಚರ್ಚಿಗೆ ಹೋಗ ಹೇಳಿ ಅವರ ವೈಯುಕ್ತಿಕ ಕಷ್ಟಗಳನ್ನು ದೇವರಲ್ಲಿ ಅರುಹಲು ಆಜ್ಞೆ ಕೊಡುತ್ತಾರೆ. ಅವರು ಅದರಂತೆ ಮಾಡಿದಾಗ ಅವರಿಗೆ ಧನ, ಆಹಾರ, ಸುಖ, ಸಮೃದ್ಧಿಗಳು ಒದಗುತ್ತವೆ!

ಇನ್ನೊಂದು ಚರ್ಚಿನಲ್ಲಿ ಸುಂದರವಾದ ವೈಜ್ಞಾನಿಕ ಚಲನಚಿತ್ರವೊಂದನ್ನು ತೋರಿಸಿದರು. ಅದರಲ್ಲಿ ಗತ-ವೇಳೆ-ಚಲನಚಿತ್ರದಿಂದ (Time-lapse-photography) ಅರಳುವ ಹೂವುಗಳು, ಬೆಳೆಯುವ ಜೀವಾಣುಗಳು ಓಡುವ `ಪೆರಮೇಶಿಯಮ್’ ಮೊದಲಾದವುಗಳ ಚಲನವಲನಗಳನ್ನು ತೋರಿಸಿ, ಕೊನೆಯಲ್ಲಿ ಇವುಗಳನ್ನೆಲ್ಲಾ ಜೀಸಸ್ ಕ್ರಾಯಿಸ್ಟ್ನು ನಿಮಗಾಗಿ ನಿರ್ಮಾಣ ಮಾಡಿದ್ದಾನೆ ಎಂದು ಹೇಳಿದರು.

ನನಗೆ ಬಂದ ನಗುವನ್ನು ಕಷ್ಟದಿಂದ ತಡೆದುಕೊಂಡೆ.

ನಾನು ನೋಡಿದಂತೆ ಇಂದು ಕ್ರಿಸ್ತಧರ್ಮ ಚರ್ಚಿಗೆ ಹೋಗುವದರಲ್ಲಿಯೇ ಮುಕ್ತಾಯವಾಗುತ್ತದೆ. ಸಾಲದ್ದಕ್ಕೆ ಹೆಚ್ಚಿನ ಸಂಖ್ಯೆಯ ಕ್ರೈಸ್ತರಿಗೆ ಇತರ ಧರ್ಮಗಳ ಬಗ್ಗೆ ರವಷ್ಟೂ ತಿಳಿಯದು. ಅವರಿಗೆ ಇಸ್ಲಾಂ ಅಂದರೆ ನಾಲ್ಕು-ಹೆಂಡಂದಿರನ್ನು ಮಾಡಿಕೊಳ್ಳುವ ಧರ್ಮ, ಯಹೂದಿ-ಧರ್ಮವೆಂದರೆ `ಕೋಶರ್ ಮಾಂಸ’ ತಿನ್ನುವುದು ಮತ್ತು ಹಿಂದೂಧರ್ಮವೆಂದರೆ ಗೋಮಾತೆಯನ್ನು ಪೂಜಿಸುವ ಧರ್ಮ ಎಂದಿಷ್ಟು ಗೊತ್ತು.”

“ನನಗಾದರೂ ಹಿಂದೂಧರ್ಮದ ಬಗ್ಗೆ ಬಹಳ ತಿಳಿಯದು. ಕೆಲವು ಭಾರತೀಯ ಸ್ನೇಹಿತರಿಂದ ತಿಳಿದುಕೊಳ್ಳಲು ಯತ್ನಿಸಿದೆ. ಅವರಾದರೂ ಸಮರ್ಪಕವಾಗಿ ಉತ್ತರಿಸಲಿಲ್ಲ. ನೀನು ಸ್ವಲ್ಪ ವಿವರಿಸುವಿಯಾ?”

“ಇತರ ಧರ್ಮಗಳಿಗೆ ಹೋಲಿಸಿದರೆ ಹಿಂದೂಧರ್ಮದ ವ್ಯಾಖ್ಯೆ ಸ್ವಲ್ಪದರಲ್ಲಿ ಕೊಡುವುದು ಕಷ್ಟ. ಏಕೆಂದರೆ ನಮ್ಮ ಧರ್ಮ ಒಂದು ಚರ್ಚು, ಒಂದು ಧರ್ಮಗ್ರಂಥ. ಕೆಲ ಪಾದ್ರಿಗಳು ಇವರಿಗಷ್ಟೆ ಪರಿಮಿತವಾಗಿರದೇ ಪ್ರತಿ ವ್ಯಕ್ತಿಯ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಮಗೆ ಧರ್ಮ, ಜೀವನದ ಪದ್ಧತಿಯೂ ಹೌದು; ನಮ್ಮ ಧರ್ಮ ಒಂದು ವ್ಯಕ್ತಿಯ ನಿರ್ಮಾಣವಲ್ಲ. ಒಂದು ಶತಕದ ಬೆಳವಣಿಗೆಯಲ್ಲ. ನಮ್ಮ ಧರ್ಮ ಒಂದು ವ್ಯಕ್ತಿಯ ನಿರ್ಮಾಣವಲ್ಲ. ಒಂದು ಶತಕದ ಬೆಳವಣಿಗೆಯಲ್ಲ. ನಮ್ಮ ಪುರಾತನರಲ್ಲಿ ಸಹಸ್ರಾರು ವರ್ಷಗಳಿಂದ ಜ್ಞಾನಿಗಳು (ಋಷಿಗಳು ದ್ರಷ್ಟಾರರು) ತಮ್ಮದೇ ರೀತಿಯಲ್ಲಿ ನಮ್ಮ ಧರ್ಮದ ವ್ಯಾಖ್ಯೆ ಕೊಡಲು ಯತ್ನಿಸಿದ್ದಾರೆ. ಒಂದು `ಬಾಯಬಲ್’, ಒಂದು `ಕುರಾನ್’ದಂತಹ ಧರ್ಮಗ್ರಂಥಗಳಲ್ಲಿ ಅತ್ಯಾಧುನಿಕ ಸ್ವಾತಂತ್ರ್ಯಕ್ಕೆ ಬಿಡಲಾಗಿದೆ. ಬೌದ್ಧಿಕ ಜಗತ್ತಿನಲ್ಲಿ ಹಿಂದೂಧರ್ಮ ಉಳಿದೆಲ್ಲ ಧರ್ಮಗಳನ್ನು ಹಿಂದೆ ಹಾಕಿದೆಯೆಂದು ಅಭಿಮಾನದಿಂದ ಹೇಳಬಹುದು. ಪಾಶ್ಚಾತ್ಯ ವಿದ್ವಾಂಸರು ಅನೇಕ ಜನ ಈ ಮಾತನ್ನು ಒಪ್ಪಿಕೊಂಡಿದ್ದಾರೆ.

ನಮ್ಮಲ್ಲಿ ಮನುಷ್ಯನ ಆತ್ಮಕ್ಕೆ ಅತಿ ಶ್ರೇಷ್ಠ ಸ್ಥಾನ ಕೊಡಲಾಗಿದೆ. ಆತ್ಮವೇ ದೇವರು ಎಂದು ಹೇಳಿದ್ದರಿಂದ ಅದಕ್ಕನುಗುಣವಾಗಿ ನಡೆದರೆ ದೇವರಿಗೆ ಅನುಗುಣವಾಗಿ ನಡೆದಂತೆ ಎಂದು ಭಾವಿಸಲಾಗುತ್ತದೆ. ಸಮಾಜದಲ್ಲಿ ಧಾರ್ಮಿಕ–ಕ್ಷೇತ್ರದಲ್ಲಿ ಪರೋಪಕಾರ ಮಾಡುವವನು ಧಾರ್ಮಿಕನೆಂದು ಪರಿಗಣಿಸಲಾಗುವದರಿಂದ ಸ್ವಾರ್ಥತ್ಯಾಗಕ್ಕೆ ನಮ್ಮ ಧರ್ಮದಲ್ಲಿ ಬಹಳ ಪ್ರಾಶಸ್ತ್ಯ ಕೊಡಲಾಗಿದೆ. ನಮ್ಮಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಹಿಂದೂವಾದ್ದರಿಂದ ಧರ್ಮಾಂತರ ಮಾಡುವ ಪದ್ಧತಿ ನಮ್ಮಲ್ಲಿಲ್ಲ. ಅದೇ ಕ್ರೈಸ್ತರು ತಮ್ಮ ಧರ್ಮಪ್ರಸಾರದಲ್ಲಿ ವಿಶೇಷ ಆಸ್ಥೆ ವಹಿಸುತ್ತಾರೆ. ಕ್ರೈಸ್ತೇತರು ನಿಜವಾದ ಮಾನವರಲ್ಲ(?) ಎಂದು ಅವರ ಭ್ರಮೆ. ನಮ್ಮಲ್ಲೂ ಕ್ರೈಸ್ತಧರ್ಮ–ಪ್ರಚಾರಕರು ಮೂಲೆ ಮೂಲೆಗೆ ಹರಡಿಕೊಂಡಿದ್ದಾರೆ … ಇವರಲ್ಲಿ ಅಮೇರಿಕದ ಪ್ರತ್ಯಕ್ಷ ಅಪ್ರತ್ಯಕ್ಷ ಧನಸಹಾಯ ಪಡೆಯುವವರು ಸಾಕಷ್ಟು ಜನರಿದ್ದಾರೆ. ಆದರೆ ಒಂದು ಮಾತು ಜೀನ್, ನಮ್ಮಲ್ಲಿಯ ಬಡತನದ ಉಪಯೋಗವನ್ನು ಇದಕ್ಕಾಗಿ ಮಾಡುತ್ತಿದ್ದಾರೆ. ಅನ್ನ, ಬಟ್ಟೆ, ಧನ, ಶಿಕ್ಷಣ, ನೌಕರಿಗಳನ್ನು ಕೊಡುವ ಆಶ್ವಾಸನೆ ತೋರಿಸಿ ಜನ ಧರ್ಮಾಂತರ ಹೊಂದುತ್ತಾರೆ. ಹೃದಯ ಪರಿವರ್ತನೆಯಿಂದ ಕ್ರಿಶ್ಚನ್ ಆಗುವವರು ಬೆರಳ ಮೇಲೆ ಎಣಿಸುವಷ್ಟು ಜನರಿರಬಹುದು.

ಜೀನಳಾದರೂ ಭಾರತೀಯ ಕ್ರೈಸ್ತರ ಬಗ್ಗೆ, ಕ್ರೈಸ್ತಮತ–ಪ್ರಚಾರಕರ ಬಗ್ಗೆ ವಿಶೇಷ ಆಸ್ಥೆ ತಳೆದವಳು ತನ್ನಿಂದಾದಷ್ಟು ಅವರಿಗೆ ಸಹಾಯವನ್ನು ಮಾಡುತ್ತಿದ್ದಳು. ಆದ್ದರಿಂದ ನನ್ನ ಈ ವಿವರಣೆ ಕೇಳಿದಾಗ ಅವಳಿಗೆ ಸಖೇದಾಶ್ಚರ್ಯವಾಯಿತು. ಆದರೂ,

“ಕಂಗಾಲ ಜನರಿಗಷ್ಟೆ ಇದರ ಅವಶ್ಯಕತೆ ಇರುತ್ತದೆ. ಉಂಡುಟ್ಟು ಸುಖವಾಗಿದ್ದ ಜನ ಹುಟ್ಟಾ ಪಾಲಿಸುತ್ತ ಬಂದ ಧರ್ಮವನ್ನು ಕಾರಣವಿಲ್ಲದೇ ಏಕೆ ಬಿಟ್ಟುಕೊಟ್ಟಾರು.” ಎಂದು ಒಪ್ಪಿಕೊಂಡಳು.

ಊಟವಾದ ಮೇಲೆ ಇದೇ ಸರಣಿಯಲ್ಲಿ ಮಾತು ಮುಂದುವರಿಯಿತು. ನಾನೇ ಅಂದೆ:

“ಕ್ರೈಸ್ತಮತ–ಪ್ರಚಾರದಲ್ಲಿ ಅಮೇರಿಕನ್ನರು ಹೆಚ್ಚೆಚ್ಚು ಆಸ್ಥೆ ವಹಿಸುತ್ತಾರೆ. ಕೇವಲ ಆಫ್ರಿಕ, ಏಷ್ಯಗಳಲ್ಲಿ ಅಷ್ಟೆ ಅಲ್ಲ. ಅಮೇರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲೂ ಇದು ನಡೆಯುತ್ತದೆ. ಅಷ್ಟೇಕೆ ನನ್ನನ್ನು ಧರ್ಮಾಂತರಗೊಳಿಸಲು ಸಾಯರೆಕ್ಯೂಸಿನಲ್ಲಿ ಮೂವರು ಕ್ರಿಶ್ಚಿನ್ನರು ಬಂದಿದ್ದರು!”

“ಓಹೋ!” ಜೀನ್ ಅವಿಶ್ವಾಸ ವ್ಯಕ್ತಪಡಿಸಿದಳು.

“ನಿಜಕ್ಕೂ ಹೌದು ಜೀನ್, ಅಂದು ಯಾವದೋ ಪರೀಕ್ಷೆಯ ತಯಾರಿಗೆ ಭರದಿಂದ ತೊಡಗಿದ್ದೆ. ನನಗಾರೋ ಅತಿಥಿಗಳು ಬಂದಿದ್ದಾರೆಂದು ಮನೆಯ ಮಾಲಕ ಕೂಗಿ ಹೇಳಿದ. ನನ್ನ ಪರಿಚಯ ತೀರ ಕಡಿಮೆ ಇದ್ದುದ್ದರಿಂದ ಕುತೂಹಲವೆನಿಸಿ ಧಾವಿಸಿ ಬಂದು ನೋಡಿದೆ. ಯಾರೋ ಮೂವರು ಅಪರಿಚಿತರು ನನಗಾಗಿ ಕಾದಿದ್ದರು. ಒಬ್ಬನು ಯಾಂಕಿಯಾದರೆ, ಇನ್ನಿಬ್ಬರು ಏಷಿಯನ್ನರು. ತಾವು ನಾಗಾಲ್ಯಾಂಡ್ ಮತ್ತು ಫಿಲಿಫೈನ್ಸದವರೆಂದು ಪರಿಚಯ ಹೇಳಿಕೊಂಡರು. ಬಂದ ಕಾರಣವನ್ನು ಹೇಳುವ ಮೊದಲು, ಮೂರು ವರ್ಷಗಳ ಹಿಂದೆ ನಾನು ಲಂಡನ್ನಿನಿಂದ ಬರೆದ ಕಾಗದವೊಂದನ್ನು ನನ್ನ ಕೈಯಲ್ಲಿಟ್ಟರು. ವಿದೇಶಗಳಿಂದ ಬರುವ ಸಂಸ್ಥೆಯೊಂದು ಕೊಟ್ಟ ಜಾಹೀರಾತನ್ನು ವೃತ್ತಪತ್ರಿಕೆಯಲ್ಲಿ ಓದಿ, ಸಹಾಯಕೋರಿ ಬರೆದ ಕಾಗದವದು. ನ್ಯೂಯಾರ್ಕದಲ್ಲಿ ಈ ಮೊದಲು ಸ್ವಾಗತ ನೀಡಲಾಗದ್ದಕ್ಕೆ ಕ್ಷಮೆ ಕೋರಿ ಈ ಮೂವರು ಸರತಿಯಂತೆ ಕ್ರೈಸ್ತಧರ್ಮಬೋಧನೆಗೆ ಪ್ರಾರಂಭಿಸಿದರು. ತಮ್ಮ ಸಂಕುಚಿತ ದೃಷ್ಟಿ, ಸ್ವಾರ್ಥ, ಪರಮಧರ್ಮಗಳ ಬಗ್ಗೆ ಇದ್ದ ಅಜ್ಞಾನವನ್ನು ಸಂಪೂರ್ಣವಾಗಿ ತೋರಿಸಿಕೊಂಡರು. ಅವರಿಗೆ ಗೊತ್ತಿದ್ದಕ್ಕಿಂತ ಕ್ರೈಸ್ತಧರ್ಮದ ಬಗ್ಗೇ ನನಗೇ ಹೆಚ್ಚು ತಿಳಿದಿತ್ತು! ಯಾಂಕಿಯಂತೂ ಮಾತಿನಮಲ್ಲ. ತಲೆನೋವಾಗುವಷ್ಟು ತೊಂದರೆ ಕೊಟ್ಟ. ಅವರಿಗೆಲ್ಲ ಒಂದೊಂದು ಬಿಗಿದುಕಳಿಸುವಷ್ಟು ಸಿಟ್ಟು ಬಂದಿತ್ತು. ಅತಿಥಿಗಳಿಗೆ ಅನಾದರ ತೋರಿಸಬಾರದೆಂಬ ವಿವೇಕ ನನ್ನನ್ನು ತಡೆಹಿಡಿಯಿತು. ಅವರ ಹುಂಬತನ ನೋಡಿ ಒಳಗೊಳಗೇ ನಕ್ಕೆ. ಈ ರೀತಿಯ ಪ್ರಚಾರದಿಂದ ಎಂದಾದರೂ ಕ್ರೈಸ್ತಧರ್ಮ ಪ್ರಚಾರವಾದೀತೇ ಎನಿಸಿತು.

“ಚರ್ಚುಗಳಲ್ಲಿ ವಿವಿಧ ಸಾಮಾಜಿಕ ಚಟುವಟಿಕೆಗಳು ನಡೆಯುತ್ತವೆ. ಅವುಗಳಲ್ಲಿ ನೀನು ಭಾಗವಹಿಸಬೇಕು. ನಿನಗೆ ಬಿಡುವಾಗಿದ್ದಾಗ ಪೋನ್ ಮಾಡು, ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇವೆ” ಎಂದು ಆಶ್ವಾಸನೆ ಕೊಟ್ಟು ಪೋನ್ ನಂಬರು ಮತ್ತು ಇತರ ವಿವರಗಳಿದ್ದ ಕಾರ್ಡು ಕೊಟ್ಟು ಹೊರಬಿದ್ದರು.

ತತ್ಕ್ಷಣ ಆ ಕಾಗದ ಕಸದ ಬುಟ್ಟಿಯನ್ನು ಸೇರಿತು.

“ಅವರು ಯಾವ ಪಂಥಕ್ಕೆ ಸೇರಿದವರಿದ್ದರು?” ಜೀನ್ ಕೂಡಲೆ ಕೇಳಿದಳು.

“ಯಾವ ಪಂಥವೋ? … ನಮ್ಮ ಜಾತೀಯತೆಯ ಬಗ್ಗೆ ನಿಮ್ಮವರೆಲ್ಲ ಎಷ್ಟು ಹಾಸ್ಯ ಮಾಡುತ್ತೀರಿ! ನಮಗೆ ಕಡಿಮೆಯಿಲ್ಲದ ಪಂಗಡ, ಒಳಪಂಗಡಗಳು ನಿಮ್ಮಲ್ಲಿವೆಯಲ್ಲ? ಯಾರಿಗಾದರೂ ಏಳೆಂಟು ಮಕ್ಕಳಿದ್ದರೆ ರೋಮನ್ ಕ್ಯಾಥೋಲಿಕ್ರಿರಬೇಕು ಎಂದು ಹಾಸ್ಯ ಮಾಡುತ್ತಾರೆ. ಬ್ಯಾಪ್ಟಿಸ್ಟ್, ಪ್ರೆಸ್ಬಿಟೇರಿಯನ್, ಮೆಥಡಿಸ್ಟ … ಇನ್ನೆಷ್ಟೊ ಪಂಥಗಳೆಲ್ಲ ತಾವೇ ಉಳಿದವರಿಗಿಂತ ಕ್ರಿಸ್ತನಿಗೆ ಹತ್ತಿರ ಸಂಬಂಧಿಕರೆಂದು ಹೇಳಿಕೊಳ್ಳುತ್ತಾರೆ ಅಲ್ಲವೆ?”

“ನೀನು ಹೇಳುವದರಲ್ಲಿ ಸತ್ಯವಿದೆ ಕ್ರಿಶ್. ಹೋದ ಚುನಾವಣೆಯಲ್ಲಿ ಅಧ್ಯಕ್ಷ ಕೆನಡಿ, ಕೆಥೂಲಿಕ್ ಪಂಥಕ್ಕೆ ಸೇರಿದವರಿದ್ದದ್ದರಿಂದ ರೇಡಿಯೋ, ಟೆಲಿವಿಜನ್, ವೃತ್ತಪತ್ತಿಕೆಗಳು ಅವರ ವಿರುದ್ಧ ಜಾತೀಯ ಯುದ್ದವನ್ನೇ ಹೂಡಿಬಿಟ್ಟಿದ್ದವು. ಪ್ರೊಟೆಷ್ಟಂಟರನ್ನೆಲ್ಲ ಎಲ್ಲಿ ನಿರ್ಲಕ್ಷ ಮಾಡಲಾಗುತ್ತದೆಯೋ ಎಂದು ನಾವೆಲ್ಲ ಹೆದರಿದ್ದೆವು. ಈ ಹೆದರಿಕೆಯಿಂದಲೇ ನಾವೆಲ್ಲ ವಿರುದ್ಧ ಹುರಿಯಾಳಾಗಿ ನಮ್ಮ ಮತ ಕೊಟ್ಟೆವು. ಕೊನೆಗೆ ಕೆನಡಿಯವರು–

“ನನ್ನ ಪಂಥ, ನನ್ನ ಹೊಣೆಗಾರಿಕೆಯ ನಿರ್ವಹಣೆಗೆ ಅಡ್ಡಿ ಬಂದರೆ ಅಧ್ಯಕ್ಷಪದಕ್ಕೆ ರಾಜಿನಾಮೆ ಕೊಡುತ್ತೇನೆ. ಎಂದು ಅವರು ಬಹಿರಂಗವಾಗಿ ಸಾರುವಷ್ಟು ಜಾತೀಯತೆಯ ಪ್ರಚಾರ ಸಾಗಿತ್ತು ಇಲ್ಲಿ.” ಎಂದಳು.

“ಅದೇ ಕೆನಡಿ ಅಧ್ಯಕ್ಷರಾದ ಮೇಲೆ ತಮ್ಮ ಬುದ್ಧಿಮತ್ತೆ, ದೃಷ್ಟಿವೈಶಾಲ್ಯ ಮತ್ತು ಮುಂದಾಲೋಚನೆಗಳಿಂದ ಈ ಹಿಂದಿನ ಎಷ್ಟೊ ಅಧ್ಯಕ್ಷರನ್ನು ಹಿಂದಕ್ಕೆ ಹಾಕಲಿಲ್ಲವೇ? ಯಾರೋ ಒಬ್ಬರು ಜನರಲ್ ಐಸೆನ್ಹಾವರರು, ತಮ್ಮ ಎಂಟು ವರ್ಷದ ಸುಧೀರ್ಘ ಅಧ್ಯಕ್ಷತೆಯಲ್ಲಿ `ಇಂಗ್ಲಿಷ್ ಸ್ಪೆಲಿಂಗ್’ ಮತ್ತು `ಪೋಲೋ’ ಆಟವನ್ನು ಸುಧಾರಿಸಿಕೊಂಡರು ಎನ್ನಲಿಲ್ಲವೇ?” ಒಂದು ಪುರವಣಿ ಜೋಡಿಸಿದೆ. ಜೀನ್ ನಕ್ಕಳು. ಏನೋ ನೆನಪು ಮಾಡಿಕೊಂಡು–

“ಸೋಡಸ್ ಎಲ್ಲಿದೆ ಕ್ರಿಶ್?” ಎಂದು ಕೇಳಿದಳು.

“ಸಾಯರೆಕ್ಯೂಸ್ ರೊಚೆಸ್ಟರಗಳ ನಡುವೆ ಓನ್ಟರಿಯೋ ಸರೋವರದ ಮೇಲೆ ಈ ಚಿಕ್ಕ ಪಟ್ಟಣವಿದೆ. ಈ ಪಟ್ಟಣದವರು ಪ್ರತಿವರ್ಷ ಹತ್ತಾರು ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಮಂತ್ರಿಸಿ ಸತ್ಕರಿಸುತ್ತಾರೆ. ಮೊದಲ ಸಲ ಅಲ್ಲಿಯ ಮುಖ್ಯ ಪ್ರೀಸ್ಟರ್ನ ಅತಿಥಿಯಾಗಿ ಹೋಗಿದ್ದೆ. ಆಗ ಅವರ ಪತ್ನಿ ಕಾಯಿಲೆಬಿದ್ದ ತನ್ನ ತಂಗಿಯನ್ನು ನೋಡಳು ಫಿಲಡೆಲ್ಫಿಯಕ್ಕೆ ಹೋಗಿದ್ದಳು. ಹೀಗಾಗಿ ನಾವಿಬ್ಬರೇ ಮನೆಯಲ್ಲಿ ಇದ್ದೆವು. ಅಂತರ್ರಾಷ್ಟ್ರೀಯ ವಿದ್ಯಾರ್ಥಿ ತಮ್ಮ ಅತಿಥಿಯಾದ್ದರಿಂದ ಹೆಚ್ಚಿನ ಸಂಭ್ರಮ ಅವರಿಗೆ. ಮರುದಿನ ನನ್ನನ್ನು ಚರ್ಚಿಗೆ ಕರೆದು ಕೊಂಡು ಹೋಗಿ ತಮ್ಮ ಪ್ರವಚನ ಪ್ರಾರಂಭಿಸುವ ಮೊದಲು ನೆರೆದ ಸಮೂಹಕ್ಕೆ ನನ್ನ ಪರಿಚಯ ಮಾಡಿಕೊಟ್ಟರು. ಮರಳಿ ಹೋಗುವಾಗ ಅವರೆಲ್ಲರ ಕೈಕುಲುಕಿ ಸಾಕಾಗಿ ಹೋಯಿತು. ಸೋಡಸ್ ಬಹಳ ಸುಂದರವಾದ ಊರು. ಊರ ತುಂಬ ಪೀಚ್, ಎಪ್ಪಲ್, ಸ್ಟ್ರೊಬೇರಿ, ಚೆರಿಹಣ್ಣುಗಳ ತೋಟಗಳಿವೆ. ಊರಿನ ಸನಿಹದಲ್ಲೇ ಆಲ್ಹಾದಕರ ಸರೋವರವಿದೆ. ನನಗೆ ಸೋಡಸ್. ಬಹಳ ಸೇರಿತು. ಮುಖ್ಯ ಪಾದ್ರಿಗಳು ತಮ್ಮ ಪತ್ನಿ ಹಿಂದಿರುಗಿದ ಮೇಲೆ ಇನ್ನೊಮ್ಮೆ ಬರಬೇಕೆಂದು ಆಗ್ರಹದ ಆಮಂತ್ರಣವಿತ್ತರು. ಎರಡನೇ ಬಾರಿ ಹೋದಾಗ ನನಗೆ ವಿಶೇಷ ಆತಿಥ್ಯ ಕಾದಿತ್ತು … ”

ಇಷ್ಟರಲ್ಲಿ ಜೀನಳ ಪತಿ ಜೇಕರು ಸಾಮಾನುಗಳನ್ನು ಹೊತ್ತುಕೊಂಡು ಒಳಗೆ ಬಂದರು. ಜೀನ್ ನಾವೇನು ಮಾತನಾಡುತ್ತಿದ್ದೆವೆಂದು ಯಜಮಾನನಿಗೆ ವರದಿಸಿದಳು. ಅಲ್ಲಿಂದ, ನಡೆದ ಸಂಭಾಷಣೆಯಲ್ಲಿ ಅವರೂ ಸೇರಿದರು.

“ಕ್ರಿಶ್, ಒಂದು ವಾರದ ಹಿಂದೆ ಟಿ.ವಿ. ಯಲ್ಲಿ ನಿನ್ನ ಭಾರತದ ಒಂದು ಕಾರ್ಯಕ್ರಮವಿತ್ತು. ಸಾವಿರಾರು ಜನ ಭಾರತೀಯರು ರಸ್ತೆಗಳ ಮೇಲೆಯೇ ತಮ್ಮ ಜೀವನ ನಡೆಸುತ್ತಿದ್ದುದನ್ನು ನೋಡಿ ಬಹಳ ಕಿಸಿವಿಸಿಯಾಯಿತು. ಈ ಸಮಸ್ಯೆ ನಿಮ್ಮಿಂದ ಬಿಡಿಸಲಿಕ್ಕೆ ಆಗದೇ?” ಎಂದು ಕಳವಳದಿಂದ ಕೇಳಿದರು.

“ಅಮೇರಿಕನ್ ಪತ್ರಿಕೆಗಾರರು, ಟಿ.ವಿ. ಯವರೆಲ್ಲ ಭಾರತದ ಕೊಳಚೆ ಓಣಿಗಳಲ್ಲಷ್ಟೆ ತಿರುಗಾಡಿ, ಅಸಾಮಾನ್ಯ ಚಿತ್ರಗಳನ್ನೂ, ಕೇವಲ ದೋಷಗಳನ್ನೇ ಎತ್ತಿ ತೋರಿಸುವ ದೃಶ್ಯಗಳನ್ನೇ ತಮ್ಮ ದೇಶದಲ್ಲಿ ಪ್ರದರ್ಶಿಸಿ, ಜನರ ಕುತೂಹಲ ಕೆರಳಿಸಿ ಹಣ ಸಂಪಾದಿಸುತ್ತಾರೆ. ಕೇವಲ ಕೆಡುಕನ್ನೇ ನೋಡಹೋದರೆ ಅಮೇರಿಕದಲ್ಲೇನು ಕೊಳಚೆ ಕಡಿಮೆಯಾಗಿದೆಯೇ? ನನ್ನ ಹತ್ತಿರವೇ ನೂರಾರು ಚಿತ್ರಗಳಿವೆ, ಬೇಕಿದ್ದರೆ ತೋರಿಸುತ್ತೇನೆ.” ಎಂದು ಸ್ವಲ್ಪ ಚುಚ್ಚಿದೆ.

“ನಾನು ಹೇಳುವುದು ಬಡತನದ ಮಾತು. ದಕ್ಷಿಣ ರಾಜ್ಯದವರು (ಏಪೆಲೇಶಿಯನ್ನರು) ಬಡವರಿದ್ದರೂ ನಿಮ್ಮಷ್ಟು ಬಡವರಿಲ್ಲ. ಈ ಕಡು ಬಡತನಕ್ಕೆ ಕಾರಣವೇನು ಎಂದು ಕೇಳಿದೆ.” ಮಾತು ಉರುಳಿಸಿದರು.

“ನಮ್ಮದು ವೈವಿಧ್ಯಪೂರ್ಣ ದೇಶ. ಬಡತನ, ಸಿರಿವಂತಿಕೆಗಳೆರಡೂ ನಮ್ಮ ದೇಶದಲ್ಲಿವೆ. ಶಿಲಾಯುಗದ ಜನರೂ ಇದ್ದಾರೆ. ಅತ್ಯಾಧುನಿಕರೆನಿಸಿಕೊಳ್ಳುವ ಜನರೂ ಇದ್ದಾರೆ. ಅತ್ಯಂತ ಶ್ರೀಮಂತರು ಭಾರತದಲ್ಲಿದ್ದರೆ, ನಿಮ್ಮ ಯೋಜನೆಗೆ ಮೀರಿದ ಕಡು ಬಡವರು ಇದ್ದಾರೆ. ಭಾರತದ ಬುದ್ಧಿಶಾಲಿ ಜಗತ್ತು ಇನ್ನಾವ ದೇಶದ ಬುದ್ಧಿಶಾಲಿಗೂ ಕಡಿಮೆಯಿಲ್ಲ. ನಿಮ್ಮದು ಮಧ್ಯವರ್ತಿಯಾದ ದೇಶ.”

“ಹಾಗಿದ್ದರೆ ನಮ್ಮ ದೇಶ ಜಗತ್ತಿನಲ್ಲಿಯೇ ಮುಂದುವರಿದ ದೇಶ, ಐಶ್ವರ್ಯವಂತ ದೇಶ, ಬಲಾಢ್ಯ ದೇಶ ಎಂದೇಕೆ ಪರಿಗಣಿಸಲಾಗುತ್ತದೆ?” ಜೆಕ್ ಕೇಳಿದರು.

“ನದಿಗೆ ಮಹಾಪೂರ ಬಂದಂತೆ ನಿಮ್ಮ ದೇಶಕ್ಕೆ ಒಮ್ಮೆಲೇ ಪ್ರೌಢಾವಸ್ಥೆ ಬಂದಿದೆ. ಈ ಮಹಾಪೂರ ಇಳಿಯುವಂತೆ ಸಮೃದ್ಧಿಯ ನಿಮ್ಮ ಸ್ಥಿತಿ ಇಳಿಮುಖವಾಗದಿದ್ದರೆ ಸಾಕು. ನಮ್ಮ ನಿಮ್ಮ ದೇಶಗಳಲ್ಲಿ ಯಾವದೇ ತುಲನೆ ಸಾಧ್ಯವಿಲ್ಲ. ಭಾರತ ಸಂಸ್ಕೃತಿಯ ಪ್ರೌಢಾವಸ್ಥೆ ಮುಟ್ಟಿದಾಗ ಅಮೇರಿಕ ನಿದ್ರಾವಸ್ಥೆಯಲ್ಲಿತ್ತು. ನಿಮ್ಮದು ಹೊಸ ರಾಷ್ಟ್ರ. ಜನವಸತಿ ಕಡಿಮೆ. ಫಲವತ್ತಾದ ಭೂಮಿ, ವನಸಿರಿ, ಖನಿಜಸಂಪತ್ತಿನಿಂದ ತುಂಬಿ ತುಳುಕುವ ನಾಡು, ನಿಸರ್ಗವೆಲ್ಲ ನಿಮಗೆ ಅನುಕೂಲವಿದ್ದಾಗ ಬಲಾಢ್ಯವಾದ ರಾಷ್ಟ್ರವಾದರೆ ಆಶ್ಚರ್ಯವೇನು? ನಿಮಗಿಂತ ಮೂರು ಪಟ್ಟು ಜನವಸತಿಯುಳ್ಳ ಭಾರತ ನಿಮ್ಮ ದೇಶದ ಮೂರರಲ್ಲೊಂದು ಪಾಲು ಮಾತ್ರ ವಿಸ್ತಾರವಾಗಿದೆ. ಅಂದರೆ ನಂಬುತ್ತೀರಷ್ಟೆ? ಅನಾದಿಕಾಲದಿಂದ ನಮ್ಮ ಜನವಸತಿ ಬೆಳೆಯುತ್ತಲೇ ಇದೆ. ಮಕ್ಕಳೇ ತಮ್ಮ ಪಾಲಿನ ಐಶ್ವರ್ಯವೆಂಬ ನಮ್ಮ ಜನರ ನಂಬಿಗೆಯೇ ಇದಕ್ಕೆ ಕಾರಣ. ಹೊಲಗಳು ಶತಮಾನಗಳಿಂದ ಧಾನ್ಯ ಬೆಳೆದು ಬೆಳೆದು ಶಕ್ತಿಹೀನವಾಗಿವೆ. … ನಿಮ್ಮ ದೇಶ ಮುಂದುವರಿದಿದೆ ನಿಜ, ಆದರೆ ಅಮೇರಿಕನ್ರಷ್ಟೇ ಅಲ್ಲದೇ ಇತರ ಎಷ್ಟೋ ದೇಶಗಳ ಜನರೂ ಇದಕ್ಕೆ ಕಾರಣರಾಗಿದ್ದಾರೆ. ಜರ್ಮನ್, ಆಯ್ರಿಶ್, ಜಪಾನೀ, ಭಾರತೀಯ ವಿಜ್ಞಾನಿಗಳೆಷ್ಟೊ ಜನ ಅಮೇರಿಕದ ಏಳ್ಗೆಗೆ ದುಡಿದಿದ್ದಾರೆ. ಭಾರತೀಯರ ಯೋಗ್ಯತೆಯನ್ನು ಅಳೆಯಬೇಕಾದರೆ ಭಾರತೀಯ ಮತ್ತು ಅಮೇರಿಕನ್ ವಿದ್ಯಾರ್ಥಿಗಳಿಗೆ ಒಂದೇ ತರದ ಶಿಕ್ಷಣ, ಉಪಕರಣ ಮತ್ತು ಪ್ರೋತ್ಸಾಹಗಳನ್ನು ನೀಡಿದರೆ ಭಾರತೀಯರು ಅಮೇರಿಕನ್ ವಿದ್ಯಾರ್ಥಿಗಳನ್ನು ಹಿಂದೆ ಹಾಕುವುದರಲ್ಲಿ ಯಾವ ಸಂದೇಹವೂ ಇಲ್ಲ. ಇಲ್ಲಿಯ ಅನೇಕ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಭಾರತೀಯರು ತಮ್ಮ ಸಹಪಾಠಿಗಳನ್ನು ಮೀರಿಸಿ ಸಹಜವಾಗಿಯೇ ಶಿಷ್ಯವೇತನ ಗಳಿಸುತ್ತಾರೆ. ಇಲ್ಲಿ ಬಂದ ಹೆಚ್ಚಿನ ಭಾರತೀಯರು ಕಾರ್ಯತತ್ಪರತೆ ಮತ್ತು ಕಾರ್ಯಕುಶಲತೆಗಳಲ್ಲಿ ಅಮೇರಿಕನ್ನರನ್ನು ಹಿಂದೆ ಹಾಕಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

“ಹೌದು, ಇಷ್ಟೆಲ್ಲ ವಿದ್ಯಾರ್ಥಿಗಳು ಇಲ್ಲಿ ಕಲಿತು ತಮ್ಮ ದೇಶಕ್ಕೆ ಮರಳುತ್ತಾರಷ್ಟೆ? ಅವರೇಕೆ ಭಾರತವನ್ನು ಮುಂದೆ ತರುವದರಲ್ಲಿ ಶ್ರಮಿಸುವದಿಲ್ಲ?” ಎಂದು ಮರ್ಮವನ್ನೇ ಕೆಣಕಿದರು ಜೆಕ್.

“ಇದಕ್ಕೆ ಉತ್ತರ ಕೊಡುವುದು ಕಠಿಣವಾದರೂ ನನಗೆ ತಿಳಿದ ಮಟ್ಟಿಗೆ ನಿಮಗೆ ಅರ್ಥವಾಗುವಂತೆ ಹೇಳುತ್ತೇನೆ. ನಾವು ಸ್ವಾತಂತ್ರ್ಯ ಪಡೆದು ಎರಡು ದಶಕಗಳಾಗುತ್ತ ಬಂದರೂ ನಮ್ಮ ವಿಚಾರಸರಣಿ, ದೃಷ್ಟಿಕೋನಗಳಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ನಮ್ಮಲ್ಲಿ ಇನ್ನೂ ಕೆಲಸಕ್ಕೆ ಯೋಗ್ಯವಾದ ಪ್ರೋತ್ಸಾಹನೆ, ಪ್ರಶಂಸೆ, ಸಂಭಾವನೆಗಳು ಸರಿಯಾಗಿ ಸಿಗುತ್ತಿಲ್ಲ. ಶಿಕ್ಷಣಪದ್ಧತಿಯಲ್ಲಿ ಸುಧಾರಣೆಯೂ ಕಂಡುಬಂದಿಲ್ಲ. ವಿದ್ಯಾರ್ಥಿಗಳಿಗೆ ಸಾಕಷ್ಟು ಸವಲತ್ತುಗಳು, ಪ್ರೋತ್ಸಾಹನೆ ನೀಡುವ ಬದಲು ದಶಕಗಳ ಹಿಂದಿನ ಪುಸ್ತಕಗಳು ಮತ್ತು ತಲೆಮಾರಿನಿಂದ ಬಂದ ನೋಟ್ಸುಗಳನ್ನು ಕೊಟ್ಟು ಕಲಿಸಿ, ಅವರಲ್ಲಿ ಸ್ವವಿಚಾರಶಕ್ತಿ ಜಾಗೃತವಾಗದಂತೆಯೇ ಮಾಡಿದ್ದಾರೆ. ಕೆಲಸ ಮಾಡುವವರನ್ನೂ ಮಾಡದವರನ್ನೂ ಒಂದೇ ದೃಷ್ಟಿಯಿಂದ ಜನತೆ ನಡೆಸಿಕೊಳ್ಳುವದರಿಂದ ತರುಣರು ವಿದ್ಯಾರ್ಥಿ-ಜೀವನದಿಂದಲೇ ಮೈಗಳ್ಳತನ ಕಲಿತುಬಿಡುತ್ತಾರೆ.

ಸಾಲದ್ದಕ್ಕೆ ನೂರಾರು ವರ್ಷಗಳ ದಾಸ್ಯ ನಮ್ಮ ಕ್ರಿಯಾಶಕ್ತಿ, ಕಲ್ಪಕಶಕ್ತಿಗಳನ್ನು ಕುಂಠಿತಗೊಳಿಸಿದೆ. ಅಲ್ಲದೇ ಧರ್ಮವೂ ಈ ದೌರ್ಬಲ್ಯವನ್ನು ಹೆಚ್ಚಿಸಿದೆ. ಹಿಂದೂ ತತ್ವಜ್ಞಾನದ ಪ್ರಕಾರ ಜಗತ್ತೆಲ್ಲ ಮಿಥ್ಯ, ಹಿಂದಿನ ಜನ್ಮದ ಪಾಪ–ಪುಣ್ಯಗಳಿಗೆ ನಾವು ಪಾಲುಗಾರರು, ಒಂದಿಲ್ಲೊಂದು ದಿನ ನಾವು ಪರಮಾತ್ಮನಲ್ಲಿ ಐಕ್ಯವಾಗುವವರಿದ್ದುದರಿಂದ ಈ ತಾತ್ಪೂರ್ತಿಕ ಜೀವನದ ಲೋಭಕ್ಕೆ ಒಳಗಾಗದೇ ವೈರಾಗ್ಯದಿಂದ ಬಾಳಬೇಕೆಂಬ ವಿಶ್ವಾಸ ನಮ್ಮಲ್ಲಿ ಬೆಳೆದುಬಂದಿದೆ. ಒಂದು ದೃಷ್ಟಿಯಿಂದ ಇದು ಉತ್ತಮ ತತ್ವಜ್ಞಾನವಾದರೂ ದೈನಂದಿನ ವಿಕಾಸಕ್ಕೆ ಅದು ನಿರುಪಯೋಗಿಯಾಗಿದೆ. ಜನರು ಮೈಮುರಿ ದುಡಿದು ಹೆಚ್ಚಿನ ಸುಖ-ಸೌಲಭ್ಯಗಳನ್ನು ದೊರಕಿಸುವ ಬದಲಾಗಿ ಇದ್ದದ್ದರಲ್ಲಿಯೇ ಸಂತೃಪ್ತಿ ಪಡೆಯಲು ಬಯಸುತ್ತಾರೆ. ದಿನಕ್ಕೆ ಎರಡು ಊಟ ಸಿಗದಿದ್ದವರು ಕೂಡ ದೇವರಲ್ಲಿ “ಸಿಗುವ ಒಂದು ಊಟಕ್ಕೆ ಧಕ್ಕೆ ತರಬೇಡ” ಎಂದು ಪ್ರಾರ್ಥಿಸುತ್ತಾರೆ. ಇಂದು ಭಾರತದಲ್ಲಿ ಕ್ರಾಂತಿಯುಗ ಬೇಕಾಗಿದೆ. ಕೊಲೆ, ಸುಲಿಗೆ, ರಕ್ತಪಾತಗಳಿಲ್ಲದ ಕ್ರಾಂತಿ. ಈ ಕ್ರಾಂತಿಯಿಂದ ನಮ್ಮದೆಂಬ ಸುಗುಣಗಳನ್ನು ಬಿಟ್ಟುಕೊಡದೇ ಪಾಶ್ಚಾತ್ಯರ ಉತ್ತಮಾಂಶಗಳನ್ನು ನಾವೂ ಅಳವಡಿಸಿಕೊಳ್ಳಬೇಕಾಗಿದೆ … ” ಎಂದು ಏನೇನೋ ಹೇಳಬೇಕೆಂದಿದ್ದೆ. ವಿಷಯ ಗಹನವಾದದ್ದರಿಂದ ಜೀನ್ ವಿಷಯ ಬದಲಿಸಿದಳು.

“ಕ್ರಿಶ್, ಧರ್ಮವೆಂದ ಕೂಡಲೇ ನೆನಪಾಯಿತು. ಭಾರತೀಯ ಮಹಿಳೆಯರು ಹಣೆಯಲ್ಲಿ ಕೆಂಪು ಬಣ್ಣ ಹಚ್ಚಿಕೊಳ್ಳುತ್ತಾರಲ್ಲ ಅದು ಧರ್ಮದ ಕುರುಹೇ”

“ಇದು ಧರ್ಮಸಂಕೇತವಲ್ಲದಿದ್ದರೂ ಸೀರೆಯಂತೆ ಈ ಬಣ್ಣವೂ ಸಾವಿರಾರು ವರ್ಷಗಳಿಂದ ಭಾರತೀಯ ಉಡುಗೆಯ ಭಾಗವಾಗಿ ಹೋಗಿದೆ. ಇದು ಸೌಭಾಗ್ಯದ ಸಂಕೇತವೆಂದು ಭಾರತೀಯ ಹೆಣ್ಣುಮಕ್ಕಳು ಧರಿಸುತ್ತಾರೆ. ವಿಧವೆಯರು ಮಾತ್ರ ಧರಿಸುವುದಿಲ್ಲ.”

(ಸೌಭಾಗ್ಯ ಎಂದರೇನು ಎಂದು ಅವರಿಗೆ ತಿಳಿಸಿ ಹೇಳಬೇಕಾದರೆ ನನಗೆ ಕುರಿ, ಕೋಣಗಳು ಬಿದ್ದು ಹೋದವು!)

“ಭಾರತೀಯ ಮಹಿಳೆಯರು ಉಡುಪಿನಷ್ಟು ಅಂದವಾದ ಉಡುಪು ಬೇರೆ ಇನ್ನಿಲ್ಲ.” ಎಂದು ಜಿನ್ ಶಿಫಾರಸು ಮಾಡಿದಳು.

“ನಿಜ, ಅಮೇರಿಕನ್ನರಿಗೆ ಭಾರತೀಯ ಸೀರೆ ಆಕರ್ಷಿಸಿದಷ್ಟು ಇನ್ನಾವ ಬಟ್ಟೆಯೂ ಆಕರ್ಷಿಸುವುದಿಲ್ಲವೆಂದು ತೋರುತ್ತದೆ. ನಾವು ವಾಷಿಂಗ್ಟನ್ನಿಗೆ ಹೋದಾಗ ಒಂದು ಮೋಜು ನಡೆಯಿತು” ಎಂದು ವಾಶಿಂಗ್ಟನ್ನಿನ ಘಟನೆಯನ್ನು ಅವರಿಗೆ ಹೇಳಿದೆ.

ಶ್ವೇತಭವನ (ಅಮೇರಿಕದ ಅಧ್ಯಕ್ಷರ ವಾಸಸ್ಥಾನ)ವನ್ನು ನೋಡಲು ನಾನು ಆತುರನಾಗಿದ್ದೆ. ಅಮೇರಿಕನ್ನರಿಗೆ ಕೂಡ ಅಮೇರಿಕರ “ರಾಜ–ರಾಣಿ”ಯರಂತಿದ್ದ ಕೆನಡಿದಂಪತಿಗಳ ವಾಸಸ್ಥಾನವನ್ನು ನೋಡುವ ಅವಕಾಶ ಸುಲಭವಾಗಿ ದೊರೆಯುವುದಿಲ್ಲ. ಹೀಗಾಗಿ ವಾರಾಂತ್ಯದಲ್ಲಿ ದೂರ ದೂರದಿಂದ ಕಾರಿನಲ್ಲಿ ಬಂದು ತಾಸುಗಟ್ಟಲೆ ಬಿಸಿಲಿನಲ್ಲಿ ನಿಂತು ಶ್ವೇತಭವನದ ದರ್ಶನ ಪಡೆದು ಧನ್ಯರಾದೆವೆಂದು ತಿಳಿಯುತ್ತಾರೆ. ಕಾರಿಲ್ಲದ ಭಾರತೀಯ ವಿದ್ಯಾರ್ಥಿಗಳು ಅಮೇರಿಕದ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ಸ್ವಲ್ಪ ಪ್ರಯಾಸದ ಕೆಲಸ. ಅಂತೆಯೇ ಯಾರೊಬ್ಬರ ಹತ್ತಿರ ಕಾರೊಂದು ಇದ್ದರೆ. ಉಳಿದವರು ಪೆಟ್ರೋಲ್ ವೆಚ್ಚದ ಪಾಲುದಾರರಾಗಿ ಪ್ರವಾಸಕ್ಕೆ ಹೊರಡುತ್ತಾರೆ. ನಾನೂ ಹೀಗೆಯೇ ಕಾರಿದ್ದ ಭಾರತೀಯ ದಂಪತಿಗಳೊಡನೆ ಅಮೇರಿಕೆಯ ರಾಜಧಾನಿಯನ್ನು ನೋಡಲು ಹೊರಟೆ. ರಾತ್ರಿಯೆಲ್ಲ ಪ್ರವಾಸ ಮಾಡಿ ವಾಶಿಂಗ್ಟನ್ ಮುಟ್ಟಿದಾಗ ನಸಕು ಹರಿದಿತ್ತು. ಅಂದು ರವಿವಾರವಾದ್ದರಿಂದ ಅಂದೇ ಶ್ವೇತಭವನ ನೋಡಿ ಮುಗಿಸಬೇಕಾಗಿತ್ತು. (ರವಿವಾರವಷ್ಟೆ ಅದು ಸಾರ್ವಜನಿಕರಿಗೆ ತೆರೆದಿರುತ್ತದೆ.) ಹೀಗಾಗಿ ರಾತ್ರಿಯೆಲ್ಲ ನಿದ್ರೆಗೆಟ್ಟರೂ ಹೋಟೆಲೊಂದಕ್ಕೆ ಹೋಗಿ ಬಟ್ಟೆಬರೆ ಬದಲಿಸಿ, ಶ್ವೇತಭವನಕ್ಕೆ ಮತ್ತೆ ಹೊರಟೆವು. ನಾವಲ್ಲಿಗೆ ಹೋದಾಗ ಅದಾಗಲೇ ಜನಸಂದಣಿ ಸೇರಿಬಿಟ್ಟಿತ್ತು. ನೂರಾರು ಕಾರುಗಳು, ಸಾವಿರಾರು ಜನರು ಕೂಡಿದ್ದರು. ನಮಗೆ ಕಾರುನ್ನು ನಿಲ್ಲಿಸಲು ಸ್ಥಳ ಸಿಗಲಿಲ್ಲ. ಕಾರನ್ನು ನಿಲ್ಲಿಸಿ ನಂತರ ಒಳಗೆ ಹೋಗಲು `ಕ್ಯೂ’ನಿಲ್ಲಬೇಕಾದ್ದರಿಂದ ಬಹಳ ತಡವಾಗಬಹುದೆಂದು ನನ್ನ ಗೆಳೆಯ ನಮ್ಮನ್ನು ಮೊದಲೇ ಇಳಿಸಿ ತಾನು ಕಾರನ್ನು ನಿಲ್ಲಿಸಲು ಪಾರ್ಕಿಂಗ್ ಸ್ಥಳಕ್ಕೆ ಹೋದ. ಜನರೆಲ್ಲ ಶಿಸ್ತಿನಿಂದ ನಾಲ್ಕು ಜನರ ಸಾಲಿನಲ್ಲಿ ನಿಂತಿದ್ದರು. ನಾವೂ (ನಾನು, ಸ್ನೇಹಿತನ ಹೆಂಡತಿ, ಅವರ ಇಬ್ಬರು ಮಕ್ಕಳು) ಸಾಲಾಗಿ ಒಂದು ಉದ್ದ ಸಾಲಿನಲ್ಲಿ ಸೇರಿಕೊಂಡೆವು. ಸಾವಿರಾರು ಮಂದಿ ಸಾಲಿನಲ್ಲಿ ನಿಂತಿದ್ದರೂ ನೋಡುವುದು ಬಲು ಬೇಗ ಮುಗಿಯುತ್ತಿದ್ದರಿಂದ ನಮ್ಮ ಸರತಿ ಬೇಗ ಬಂದಿತು.

ಶ್ವೇತಭವನ ಹೆಸರಷ್ಟೇ ದೊಡ್ಡದು. ಶ್ವೇತಬಣ್ಣವೊಂದನ್ನು ಬಿಟ್ಟರೆ ಅಲ್ಲಿ ಏನೂ ಇಲ್ಲವೆಂದು ಬೇಗ ಅರಿವಾಯಿತು. ಭಾರತದ ಯಾವದೇ ಮಹಾರಾಜರ ಅರಮನೆ ಇದಕ್ಕಿಂತ ದೊಡ್ಡದಿದ್ದು ಸುಂದರವಾಗಿದೆ. ಇದನ್ನು ನೋಡಲೆಂದು ಐದುನೂರು ಮೈಲು ಬಂದೆನೆಲ್ಲ ಎಂದು ನಿರಾಸೆಯಾಯಿತು. ಶ್ರೀಮತಿ ಕೆನಡಿಯವರ ದರ್ಶನ ಲಭಿಸುವದೊ ಎಂದು ನೋಡಿದರೆ ಆಕೆ ಇಟಾಲಿಗೆ ಹೋಗಿದ್ದರು. ಶ್ವೇತಭವನದಲ್ಲಿ ಹಸಿರು ಕೋಣೆ, ಕೆಂಪು ಕೋಣೆ, ಅಬ್ರಾಹಮ್ ಲಿಂಕನ್, ರೂಝವೆಲ್ಟ್ರು ಉಪಯೋಗಿಸುತ್ತಿದ್ದ ಕುರ್ಚಿಗಳು, ಅವರು ಊಟ ಮಾಡುತ್ತಿದ್ದ ಟೇಬಲ್ ಎಲ್ಲವನ್ನು ನೋಡಿದೆವು. ಬಸವಣ್ಣನ ಮೂಗಿನಲ್ಲಿ ಬಟ್ಟಿಟ್ಟು ಮಳ್ಳ ಕಂಡ ಮಳ್ಳ ಠ್ಯಾಂ ಎಂದ ನಿರಾಸೆ–ಭಾವ ನನ್ನಲ್ಲಿ ತುಂಬಿತು. ಆದರೂ ನನ್ನ ಜೊತೆಗೆ ಒಳಗೆ ಬಂದ ಅಮೇರಿಕನ್ ಗುಂಪಿಗೆ ನಿರಾಸೆಯಾದಂತೆ ತೋರಲಿಲ್ಲ. ಅವರೆಲ್ಲ ನನ್ನ ಸ್ನೇಹಿತನ ಹೆಂಡತಿ ಉಟ್ಟ ಸುಂದರ ನಕ್ಷೆಯುಳ್ಳ ರೇಶಿಮೆ ಸೀರೆಯನ್ನು ಕುತೂಹಲದಿಂದ ನೋಡುತ್ತಿರುವುದು ಗೊತ್ತಾಯಿತು. ನಾವು ತಿರುಗಿ ಬರುವ ಹೊತ್ತಿಗೆ ನೂರಾರು ಕಣ್ಣುಗಳು ಆ ಸೀರೆಯನ್ನು ನೋಡಿರಬೇಕು, ಹತ್ತಾರು ಕೈಗಳು ಅದನ್ನು ಮುಟ್ಟಿ ನೋಡಿರಬೇಕು. ಶ್ವೇತಭವನ ಬಿಟ್ಟು ಹೊರಗೆ ಬಂದಾಗ ಮುದುಕಿಯೊಬ್ಬಳು ಓಡುತ್ತ ಬಂದು,

“ನನ್ನ ಮೊಮ್ಮಗಳಿಗೆ ಸೀರೆಯ ಮೇಲೆ ಒಂದು ಪ್ರಬಂಧ ಬರೆಯಬೇಕಾಗಿದೆಯಂತೆ. ಆದ್ದರಿಂದ ಈ ಸೀರೆಯನ್ನು ನೋಡಿ ನಿಮ್ಮನ್ನು ಮಾತನಾಡಿಸಬೇಕು ಎಂದಿದ್ದಾಳೆ.” ಎಂದು ವಿನಂತಿಸಿಕೊಂಡಳು. ಪುಟ್ಟ ಹುಡುಗಿಯೊಬ್ಬಳು ಅಜ್ಜಿಯ ಹಿಂದೆ ಬಂದು ಸೀರೆಯನ್ನು ಮುಟ್ಟಿ ನೋಡಿ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು. ನನ್ನ ಸ್ನೇಹಿತನ ಹೆಂಡತಿಗೆ ಇಂಗ್ಲೀಷ್ ಚೆನ್ನಾಗಿ ಬರುತ್ತಿರಲಿಲ್ಲವಾದ್ದರಿಂದ ಪ್ರಶ್ನೆಗಳಿಗೆಲ್ಲ ನಾನೇ ಉತ್ತರ ಕೊಡಬೇಕಾಯಿತು. ಮಧ್ಯವಯಸ್ಕಳೊಬ್ಬಳು ಬಂದು ತನ್ನ ಊರವರಿಗೆ ಸೀರೆಯನ್ನು ತೋರಿಸುವ ಉತ್ಸುಕತೆಯಿಂದ ನಮ್ಮ ಹತ್ತಿರ ಬಂದು,

“ಫೋಟೋ ತೆಗೆಯಬಹುದೇ?” ಎಂದು ದೈನ್ಯದಿಂದ ವಿನಂತಿಸಿಕೊಂಡಳು. ಗೆಳೆಯನ ಹೆಂಡತಿ ಹಿಗ್ಗಿನಿಂದ ಕೂಡಲೆ ಒಪ್ಪಿದಳು. ಸರಿ, ಒಂದು, ಎರಡು, ಮೂರು, ನಾಲ್ಕು ಬಾರಿ ಕ್ಯಾಮರಾ ಕ್ಲಿಕ್ ಎಂದಿತು. ನನ್ನ ಗೆಳೆಯ ಇನ್ನೂ ನಮ್ಮನ್ನು ಸೇರಿಕೊಂಡಿರಲಿಲ್ಲವಾದ್ದರಿಂದ ಆತನಿಗೆ ಕಾಯುತ್ತ ಒಂದೆಡೆ ನಿಂತಿದ್ದೆವು. ಅಲ್ಲೂ ಕೆಲ ಅಮೇರಿಕನ್ನರು ಬಂದು ಫೋಟೋಗಾಗಿ `ಪೋಜ್’ (pose) ಕೊಡುವಂತೆ ಪ್ರಾರ್ಥಿಸಿಕೊಂಡರು. ನಾವು ಪತಿ ಪತ್ನಿಯರೆಂದೇ ಅವರು ತಿಳಿದು ಕೊಂಡಿರಬೇಕು. ನನಗೆ ಬಹಳ ತೊಂದರೆಗಿಟ್ಟುಕೊಂಡಿತು. ಆದರೆ ಗೆಳೆಯನ ಹೆಂಡತಿ ಫೋಟೋ ತೆಗೆಸಿಕೊಳ್ಳಲು ಬಹಳ ಉತ್ಸಾಹ ತೋರಿಸಿ. ಕೇಳುವವರಿಗೆಲ್ಲ ತನಗೆ ತಿಳಿದ ಇಂಗ್ಲೀಷದಲ್ಲಿ ಆಗಲೆಂದು ಕೂಡಲೇ ಉತ್ತರಿಸುತ್ತಿದ್ದಳು. ಸರಿ, ನಾನು ಬೇಡವೆನ್ನುವ ಮೊದಲೇ ಅವಳನ್ನು ನನ್ನ ಪಕ್ಕದಲ್ಲಿ ತಮಗೆ ಬೇಕಾದಂತೆ ನಿಲ್ಲಿಸಿ ಒಂದೇ ಸಮನೇ ಫೋಟೋ ತೆಗೆಯಲಾರಂಭಿಸಿದರು! ಸ್ನೇಹಿತನ ಮಕ್ಕಳೂ ನನ್ನ ಪಕ್ಕದಲ್ಲಿ ನಿಂತವು! ನೂರಾರು ಕ್ಯಾಮರಾಗಳು ನಾಲ್ಕೂ ದಿಕ್ಕಿನಿಂದ ಬಂದು ಕ್ಲಿಕ್ ಕ್ಲಿಕ್ ಎನ್ನತೊಡಗಿದವು. ಹೀಗೆ ಮದುವೆಯಾಗುವ ಮೊದಲೇ “ಸಂಸಾರ”ದೊಂದಿಗೆ ತೆಗೆದ ನನ್ನ ಫೋಟೊ ನೂರಾರು ಅಮೇರಿಕನ್ ಮನೆಗಳಲ್ಲಿ ಅಲಂಕರಿಸಿರಬೇಕು!

ಈ ಘಟನೆಯನ್ನು ರೊಥ್ ಕುಟುಂಬದವರಿಗೆ ವಿವರಿಸುತ್ತ,

“ಭಾರತದ ಸೀರೆ ಹೀಗೆ ಅಮೇರಿಕನ್ನರಿಗೆ ಎಣೆಯಿಲ್ಲದ ಸೋಜಿಗದ ವಸ್ತುವಾಗಿ ಬಿಟ್ಟಿದೆ!” ಎಂದು ಅವರತ್ತ ತಿರುಗಿ `ಸಮ್’ಗೆ ಬಂದು ಮುಟ್ಟಿದೆ.

“ಭಾರತದಲ್ಲಿ ವಿಧವೆಯರು ಇದ್ದಾರೆಯೇ? ಅವರು ಪತಿಯೊಡನೆ ಸತಿ ಹೋಗುತ್ತಾರೆಂದು ಎಲ್ಲೋ ಓದಿದ ನೆನಪು.”

“ನೀವು ಹೇಳುವುದು ಶತಮಾನಗಳ ಹಿಂದಿನ ಮಾತು, ಯಾಕೋ ಏನೋ ಅಮೇರಿಕನ್ ವೃತ್ತಪತ್ರಗಳೂ, ಟಿ.ವಿ.ಯೂ ಇಂಥ ವಿಚಿತ್ರ ಸಮಾಚಾರ ಹರಡುವದರಲ್ಲಿಯೇ ತೊಡಗಿವೆ. ಭಾರತದ ಹಾವಾಡಿಗರು, ಜಾದೂಗಾರರು, ಮಹಾರಾಜರು, ಭಿಕ್ಷುಕರು, ದನ–ಕರುಗಳು (ಇವು ಭಾರತದಲ್ಲಿ ಪೋಲಿಸರ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತವೆ) ಇದೇ ವಿಷಯಗಳು ಸುಳ್ಳಿನ ಮಸಾಲೆಯೊಂದಿಗೆ ರೋಚಕವಾಗುವಂತೆ ಪತ್ರಿಕೆ, ರೇಡಿಯೋ, ಟಿ.ವಿ.ಗಳಲ್ಲಿ ಕಾಣುತ್ತವೆ. ಭಾರತಕ್ಕೆ ಹೋದ ಅಮೇರಿಕನ್ನರಾದರೂ ಇಂತಹ ವಿಷಯಗಳ ಬಗ್ಗೆಯೇ ಮಾಹಿತಿ ಸಂಗ್ರಹಿಸಿ ಚಿತ್ರಗಳನ್ನು ತೆಗೆದುಕೊಂಡು ಬರುತ್ತಾರೆ. ಕುರುಡರು ಆನೆ ನೋಡಿದಂತೆ ಮಾಡುತ್ತಾರೆ. ಏನು ಸಾಧಿಸುತ್ತಾರೋ ತಿಳಿಯದು. ಅದು ಇಲ್ಲಾ ಎಂದಲ್ಲ. ಅದೇ ಎಲ್ಲಾ ಅಲ್ಲ. ಭಾರತದಲ್ಲಿರುವ ಸಹಸ್ರಾರು ಜೀವನ ಮುಖಗಳಲ್ಲಿ ಅದೊಂದು ಮುಖ ಅಷ್ಟೆ. ಅಮೇರಿಕನ್ನರು–ಭಾರತಕ್ಕೆ ಹೋಗಿ ಬಂದವರೇ ಆಗಲಿ, ಭಾರತದ ಗುಣಾಂಶಗಳನ್ನು ನೋಡುವ ಪರಿಪಾಠ ಏಕೆ ಹಾಕಿಕೊಂಡಿಲ್ಲವೋ ಏನೋ?”

“ನಮ್ಮ ವರ್ತಮಾನ–ಪತ್ರಗಳು, ರೇಡಿಯೋ, ಟಿ,ವಿ.ಗಳು ಉಳಿದ ದೇಶಗಳಲ್ಲಿಯಂತೆ ಸರಕಾರದಿಂದ ನಿಯಂತ್ರಿತವಾಗಿದ್ದರಿಂದ ತಮ್ಮ ಈ ಸ್ವಾತಂತ್ರ್ಯದ ಸದುಪಯೋಗವಾಗುತ್ತಿದೆಯೆಂದು ನಂಬಿದ್ದೆ. ಆದರೆ ಸ್ವಾತಂತ್ರ್ಯಪ್ರಿಯ ಜನರಿಗೆ ಈ ರೀತಿಯ ಸಂಕುಚಿತ ಸಮಾಚಾರಗಳು ದೊರೆಯುತ್ತವೆಂದರೆ ಆಶ್ಚರ್ಯದ ಮಾತಿನಕ್ಕಿಂತ ವಿಷಾದದ ಮಾತು.” ಜೇಕ್ ನುಡಿದರು.

“ಅಲ್ಲಿಯೇ ಬಂದಿದೆ ತೊಡಕು. ಜನರ ಒಲವು ನಿಲವುಗಳ ಪ್ರಕಾರ ಸುದ್ದಿ, ಸಮಾಚಾರಗಳಿಗೆ ಪ್ರಾಧಾನ್ಯ ಕೊಡಲಾಗುತ್ತಿದೆ. ಸುದ್ದಿಯ ಸಾದರವಲ್ಲದಿದ್ದರೂ ಬರವಣಿಗೆಯ ಕೌಶಲ್ಯದಿಂದ ಅದನ್ನು ಜನಪ್ರಿಯ ಮಾಡಲು ಈ ಜನ ಬಲ್ಲರು. ಅಮೇರಿಕನ್ನರಿಗೆ ಹೊಸತನದ ಹಪಾಪಿ ಹೆಚ್ಚು. ಸಾದಾ ಕುತೂಹಲ ಕೆರಳಿಸುವ (exciting) ಘಟನೆಗಳನ್ನೇ ಬಯಸುತ್ತಾರೆ. ಪತ್ರಿಕಾಕಾರರಾದರೂ ಜನತೆಯ ಈ ಬಯಕೆಯನ್ನು ಪೂರೈಸುವದರಲ್ಲಿಯೇ ಸದಾ ತೊಡಗಿದ್ದಾರೆ. ಇಲ್ಲಿನ ಪ್ರಮುಖ ಪತ್ರಿಕೆಯಾದ `ನ್ಯೂಯಾರ್ಕ್ ಟಾಯಿಮ್ಸ್’ ಕೂಡ ಇದಕ್ಕೆ ಅಪವಾದವಲ್ಲ. ಭಾರತದ ಬಗ್ಗೆ ಯಾವಾಗಲೂ ವಕ್ರವಿಚಾರಗಳೇ (biased) ಕಂಡುಬರುತ್ತವೆ. ಇದಕ್ಕೆ ಉದಾಹರಣೆ ಬೇಕೆಂದರೆ, ಮೊನ್ನೆ ಭಾರತವು ಗೋವೆಯ ವಿಮೋಚನೆ ಮಾಡಿದಾಗ ಒಂದಾದರೂ ಅಮೇರಿಕನ್ ಪತ್ರಿಕೆ ಸತ್ಯವಾದ ಘಟನೆಯನ್ನು ಪ್ರಕಟಿಸಿತೇ?” ಎಂದು ಕೇಳಿದೆ. ಅದಕ್ಕೆ ಜೇಕ್ ತಿರುಗಿ ನನ್ನನ್ನೇ ಕೇಳಿದ

“ಹಾಗಾದರೆ ಕ್ರಿಶ್ ನಿಜವಾಗಿ ಘಟಿಸಿದ್ದಾರೂ ಏನು?”

“ಇಲ್ಲಿಯ ವೃತ್ತಪತ್ರಿಕೆಗಳು `ಗೋವೆಯು ನಾಲ್ಕು ನೂರು ವರ್ಷಗಳಿಂದ ಫೋರ್ತುಗಾಲದ ಅವಿಭಾಜ್ಯ ಅಂಗವೆಂದೂ ಅಲ್ಲಿಯ ಜನಸಂಖ್ಯೆ ನೂರಕ್ಕೆ ಅರವತ್ತರಷ್ಟು ಕ್ರಿಶ್ಚನ್ರೆಂದೂ, ಅಲ್ಲಿಯ ಜನತೆಯ ಇಚ್ಛೆಯ ವಿರುದ್ಧ ಭಾರತ ಸರಕಾರ ಸೈನ್ಯ ಕಳಿಸಿ ಆ ಪ್ರದೇಶವನ್ನೆಲ್ಲ ಆಕ್ರಮಿಸಿತು.’ ಎಂದೂ ಸಾರಿದವು … ”

ಜೀನ್ ನಡುವೆಯೇ …

“ಪೋರ್ತುಗೀಜರ ಪ್ರದೇಶವನ್ನು ನೀವು ಆಕ್ರಮಿಸಿದ್ದು ತಪ್ಪಲ್ಲವೇ” ಎಂದು ಕೇಳಿದಳು.

“ನ್ಯೂಯಾರ್ಕ್ ನಗರವನ್ನು ಭಾರತ ಸರಕಾರವು ನಾಲ್ಕು ನೂರು ವರ್ಷ ತನ್ನ ವಶದಲ್ಲಿಟುಕೊಂಡರೆ ನ್ಯೂಯಾರ್ಕವು ಎಂದಾದರೂ ಭಾರತದ ಅವಿಭಾಜ್ಯ ಭಾಗವಾದೀತೆ?” ಎಂದು ನಾನೇ ಅವರನ್ನು ಕೇಳಿದೆ. ಅದಕ್ಕೆ ಜೇಕ್ ಅಂದ:

“ಹಾಗಿದ್ದರೆ ಗೋವೆ ಪೋರ್ತುಗಾಲದ ಭಾಗವಲ್ಲವೆ? ಅದೊಂದು ಪೋರ್ತುಗಾಲದ ಹತ್ತಿರವೇ ಇದ್ದ ನಡುಗಡ್ದೆಯೆಂದು ತಿಳಿದಿದ್ದೆ.”

“ಗೋವೆ ನಮ್ಮ ಊರಿನಿಂದ ಐವತ್ತು ಮೈಲಿನ ಒಳಗೇ ಇದೆ. ನನ್ನ ಮಾತೃಭಾಷೆ ಮತ್ತು ಗೋವೆಯ ಭಾಷೆ ಒಂದೇ ಆಗಿದೆ. ಕೆಲವು ತಲೆಮಾರಿನ ಹಿಂದೆ ನಮ್ಮ ಪೂರ್ವಜರು ಪೋರ್ತುಗೀಜರಿಂದ ಬಲತ್ಕಾರದ ಕ್ರಿಶ್ಚನ್ ಧರ್ಮಾಂತರ ತಪ್ಪಿಸಲು ಗೋವೆಯಿಂದ ಓಡಿ ಬಂದರು. ನಮ್ಮ ಕುಲದೇವತೆಯ ದೇವಾಲಯವಿನ್ನೂ ಗೋವೆಯಲ್ಲಿಯೇ ಇದೆ. ಗೋವೆಯ ಜನರ ಭಾಷೆ, ಆಹಾರ, ಉಡುಗೆ–ತೊಡಿಗೆ ಎಲ್ಲ ನನ್ನ ಮನೆಯ ಪದ್ಧತಿಯಂತೆಯೇ ಇದೆ. ನಾನು ಭಾರತೀಯನಿದ್ದಷ್ಟೆ ಗೋವೆಯ ಜನರೂ ಭಾರತೀಯರಾಗಿದ್ದಾರೆ.”

“ಗೋವೆಯ ಬಗ್ಗೆ ನನಗೆ ಹೆಚ್ಚು ತಿಳಿಯದು, ಆದರೆ ಕಾಶ್ಮೀರ ನ್ಯಾಯವಾಗಿ ಪಾಕಿಸ್ತಾನಕ್ಕೆ ಸೇರಬೇಕಾದದ್ದು. ನಿಮ್ಮ ನಾಯಕರಾದ ಮಿ|| ಗ್ಯಾಂಡಿ (ಗಾಂಧಿಯ ಅಪಭ್ರಂಶ!)ಯವರು ಜಾತಿಯ ತಳಹದಿಯ ಮೇಲೆ ವಿಭಾಗಿಸಲು ಒಪ್ಪಿ, ಹಿಂದುಗಳ ಇಂಡಿಯವನ್ನೂ ಮುಸಲ್ಮಾನರ ಪಾಕಿಸ್ತಾನವನ್ನೂ ನಿರ್ಮಿಸಲಿಲ್ಲವೇ? ಕಾಶ್ಮೀರದಲ್ಲಿ ಶೇಕಡಾ ೬೦ಕ್ಕಿಂತ ಹೆಚ್ಚು ಜನ ಮುಸಲ್ಮಾನರಿರುವದರಿಂದ ಅದು ನ್ಯಾಯವಾಗಿ ಪಾಕಿಸ್ತಾನಕ್ಕೆ ಹೋಗಬೇಡವೇ? ಇಷ್ಟಿದ್ದರೂ ಸೈನ್ಯಬಲದಿಂದ ಕಾಶ್ಮೀರವನ್ನು ಏಕೆ ಭಾರತದಲ್ಲಿ ಸೇರಿಸಿದ್ದಾರೆ?” ಎಂದು ಜೇಕ್ ತನ್ನ ಸೋಲು ತಪ್ಪಿಸಿಕೊಳ್ಳಲು ಒಂದರಿಂದ ಇನ್ನೊಂದು ವಿಷಯಕ್ಕೆ ಜಿಗಿದ.

“ನೀವು ಹೇಳಿದ್ದು ಅಕ್ಷರಶಃ ನಿಮ್ಮ ವೃತ್ತಪತ್ರಗಳ ಹೇಳಿಕೆಯಾಗಿದೆ. ಆದರೆ ಇದು ಸತ್ಯದಿಂದ ಬಹಳ ಬಹಳ ದೂರವಿದೆ. ಹೋದಲ್ಲೆಲ್ಲ ಪಂಗಡಗಳನ್ನು ಮಾಡಿ ಆಳುವುದು ಬ್ರಿಟಿಷರ ಪದ್ಧತಿಯಾಗಿತ್ತು. ಅವರಿಗೆ ಭಾರತ ಬಿಟ್ಟು ತೊಲಗುವ ಮನಸ್ಸಿರದ್ದರಿಂದ ಹೋಗುವ ಮೊದಲು ಪಾಕಿಸ್ತಾನದ ನಿರ್ಮಾಣ ಮಾಡಿ ಹೋದರು. ಇವರನ್ನು ಭಾರತದಿಂದ ತೊಲಗಿಸಬೇಕಾದರೆ ಭಾರತ, ಪಾಕಿಸ್ತಾನ ನಿರ್ಮಾಣಕ್ಕೆ ಒಪ್ಪಬೇಕಾಯಿತು. ಈ ದೇಶದ ಇಬ್ಭಾಗದಲ್ಲಿ ಎರಡೂ ಕಡೆಯ ಕೆಲವು ನಾಯಕರದಷ್ಟೇ ಕೈವಾಡವಿತ್ತೇ ಹೊರತಾಗಿ ಪಾಕಿಸ್ತಾನ ಬೇಕೆಂದು ಅಖಂಡ ಭಾರತದ ಮುಸಲ್ಮಾನರೆಲ್ಲ ಎಂದೂ ಕೇಳಿಕೊಳ್ಳಲಿಲ್ಲ. ಇಂದಿಗೂ ಎರಡೂ ದೇಶದ ಜನತೆ ಇದೇ ರೀತಿಯ ಅಭಿಪ್ರಾಯವುಳ್ಳದ್ದಾಗಿದೆ. ಪಾಕಿಸ್ತಾನದ ಅರ್ಧದಷ್ಟು ಮುಸಲ್ಮಾನರು ಭಾರತದಲ್ಲಿದ್ದಾರೆ! ಜಾತೀಯತೆಯ ಮೇಲೆ ಕಾಶ್ಮೀರ ಪಾಕಿಸ್ತಾನಕ್ಕೆ ಹೋಗಬೇಕೆಂದರೆ ಭಾರತದ ಹತ್ತು ಕೋಟಿಗಿಂತ ಹೆಚ್ಚು ಮುಸಲ್ಮಾನರು ಎಲ್ಲಿ ಹೋಗಬೇಕು? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ಅಲ್ಲದೇ ವಿಭಜನೆಯ ವೇಳೆಯಲ್ಲಿ ಸ್ವತಂತ್ರವಿದ್ದ ಸಂಸ್ಥಾನಿಕರಿಗೆಲ್ಲ ಭಾರತ ಇಲ್ಲವೇ ಪಾಕಿಸ್ತಾನದಲ್ಲಿ ಸೇರ್ಪಡೆಯಾಗುವ ಸ್ವಾತಂತ್ರ್ಯವಿತ್ತು. ಆದರ ಪ್ರಕಾರ ಕಾಶ್ಮೀರದ ಅರಸು ಭಾರತ ಒಕ್ಕೂಟಕ್ಕೆ ಸೇರಿದರೆ ತಪ್ಪೇನು? ಭಾರತ ಕೇವಲ ಹಿಂದೂಗಳ ರಾಷ್ಟ್ರವಿರದೇ ವಿವಿಧ ಜಾತಿ, ಜನಾಂಗ, ಪಂಗಡ, ಧರ್ಮಗಳ ರಾಷ್ಟ್ರವಾಗಿದೆ. ನಮ್ಮದು ಜಾತ್ಯಾತೀತ ರಾಷ್ಟ್ರ. ನಮ್ಮ ಉಪರಾಷ್ಟ್ರಪತಿಗಳು ಮುಸ್ಲಿಂ ಧರ್ಮದವರಿದ್ದಾರೆ. ಪ್ರತಿಷ್ಠಿತ ಹೊಣೆಗಾರಿಕೆಯ ಸ್ಥಾನಗಳಲ್ಲೆಲ್ಲ ಮುಸ್ಲಿಂರಿದ್ದಾರೆ … ಹಾಗೆ ನೋಡಿದರೆ ಪಾಕಿಸ್ತಾನಕ್ಕೆ ಕಾಶ್ಮೀರದ ಮೇಲೆ ಯಾವ ರೀತಿಯಲ್ಲೂ ಅಧಿಕಾರವಿಲ್ಲ. ಪಾಕಿಸ್ತಾನಕ್ಕೆ ನಿಜಕ್ಕೂ ಕಾಶ್ಮೀರ ಬೇಕಾಗಿಲ್ಲ. ಆದರೆ ದೇಶದ ದಾರಿದ್ರ್ಯ, ಕೊರತೆಗಳಿಂದ ಸಂತ್ರಪ್ತ ಜನತೆಯ ಲಕ್ಷ್ಯವನ್ನು ಬೇರಡೆ ಸೆಳೆಯುವುದಕ್ಕೆ, ಧಾರ್ಮಿಕ ಭಾವನೆಗಳನ್ನು ಕೆಣಕಿ ಉದ್ರೇಕಿಸಲಿಕ್ಕೆ ಕಾಶ್ಮೀರ ಒಂದು ಸಾಧನವಾಗಿದೆ.”

“ಪಾಕಿಸ್ತಾನದ ಜನತೆಗೆ ಕಾಶ್ಮೀರದ ಬಗ್ಗೆ ಅಷ್ಟು ಆದರವಿಲ್ಲವೆಂದು ನಿನಗೆ ಹೇಗೆ ಗೊತ್ತು?”

“ಬಹುಶಃ ಪಾಕಿಸ್ತಾನ–ಭಾರತದವರು ಅಜನ್ಮ ವೈರಿಗಳೆಂದು ನೀವು ತಿಳಿದಿರಬಹುದು. ಕಳೆದ ಮೂರು ವರ್ಷಗಳಿಂದ ನಾವು ಇಬ್ಬರು ಭಾರತೀಯರು, ಇಬ್ಬರು ಪಾಕಿಸ್ತಾನಿಗಳು ಒಟ್ಟಿಗಿದ್ದೇವೆ ಎಂದರೆ ನಂಬುತ್ತೀರಷ್ಟೆ? ನಾವೆಲ್ಲ ಕೂಡಿ ಅಡಿಗೆ ಮಾಡುತ್ತೇವೆ. ಊಟ ಮಾಡುತ್ತೇವೆ, ಪರಸ್ಪರ ಗೇಲಿ ಮಾಡುತ್ತ ಬಹಳ ಮೋಜಿನಿಂದ ಇದ್ದೇವೆ ನಮ್ಮಲ್ಲಿ ಈ ತನಕ ಯಾವದೇ ಒಳಭೇದ, ಜಗಳಗಳು ಬಂದಿಲ್ಲ. ಕಾಶ್ಮೀರದ ವಿಷಯದಲ್ಲಿ ಎರಡೂ ಸರಕಾರಗಳು ಕೂಡಿಕೊಳ್ಳುವುದು ಇದೆ ಎಂದು ಎರಡೂ ದೇಶದ ವಿಚಾರವಂತರೂ ಒಪ್ಪುತ್ತಾರೆ. ರಾಜಕಾರಣದಲ್ಲಿ ವಿರುದ್ಧ ಪಂಗಡಗಳಿಗೆ ಸೇರಿದ ದೇಶದ ನಾಗರಿಕರು ಒಂದೇ ಮನೆಯವರಂತೆ ವಾಸಿಸುತ್ತಾರೆಂದು ತಿಳಿದಾಗ ಬಹಳಷ್ಟು ಅಮೇರಿಕನ್ನರಿಗೆ ಆಗುವ ಆಶ್ವರ್ಯ ಅಷ್ಟಿಷ್ಟಲ್ಲ. ಸರಕಾರವೆಂದರೆ ಸರ್ವಜನಾಭಿಪ್ರಾಯವಲ್ಲ ಎಂಬ ಮಾತು ನಿಜವಷ್ಟೆ? ಬಹುಶಃ ಅಮೇರಿಕನ್ ಜನಸಾಮಾನ್ಯರಿಗೂ ರಶಿಯನ್ ಜನಸಾಮಾನ್ಯರಿಗೂ ನಾವು ತಿಳಿದಷ್ಟು ಭೇದವಿದೆಯೋ ಇಲ್ಲವೋ?”

“ನೀನನ್ನುವುದು ನಿಜ. ನನಗೇನಾದರೂ ರಶಿಯಕ್ಕೆ ಹೋಗಿ ಅಲ್ಲಿಯ ಜನರ ಸಂಪರ್ಕ ಬಂದರೆ ಈಗಿರುವಷ್ಟು ರಶಿಯದ ಬಗ್ಗೆ ಅನಾದರ ಆಗ ಉಳಿಯುತ್ತದೋ ಇಲ್ಲವೊ!”

“ಹಿಂದೂ–ಮುಸಲ್ಮಾನರು ಶತಮಾನಗಟ್ಟಲೆಯಿಂದ ಸಹಜೀವನ ನಡೆಸುತ್ತ ಬಂದಿದ್ದಾರೆ. ಒಮ್ಮೆಲೇ ಮುಸಲ್ಮಾನ ಮುಖಂಡರಿಗೆ ಪ್ರತ್ಯೇಕ ರಾಜ್ಯವೊಂದು ಬೇಕಾಯಿತು. ನಿಜವಾಗಿ ಹೇಳಬೇಕೆಂದರೆ ಪೂರ್ವಪಾಕಿಸ್ತಾನಗಳ ಮುಸಲ್ಮಾನರಿಗೇ ಇಲ್ಲ! ನಮ್ಮಲ್ಲಿಯ ಮುಸಲ್ಮಾನರಾದರೂ ಭಾರತದ ನೆಲದೊಡನೆ ಒಂದಾಗಿದ್ದಾರೆ. ನನಗೆ ಶಾಲಾ ದಿನಗಳಿಂದ ಮುಸಲ್ಮಾನ ಗೆಳೆಯರಿದ್ದಾರೆ.”

ಜೇಕ್ ಹೊರಗೆ ಹೋಗಬೇಕಾದ್ದರಿಂದ ನಮ್ಮ ಸಂಭಾಷಣೆ ಅಲ್ಲಿಗೆ ನಿಂತಿತು. ಜೇನ್ ಮತ್ತೆ ಅಡಿಗೆಮನೆ ಸೇರಿದಳು. ನಾನು ಒಳಗೆ–ಹೊರಗೆ ಮಕ್ಕಳೊಡನೆ ಮಾತನಾಡುತ್ತ ಸುತ್ತಾಡುತ್ತಿದ್ದೆ. ಒಂದೆಡೆ ರಾಶಿ ಹಾಕಿದ ಕಾಗದ ಮತ್ತು ಪ್ಲಾಸ್ಟಿಕ್ದ ಹೊರಚೀಲಗಳು, ಖಾಲಿ ಟಿನ್ನುಗಳ ಕಡೆಗೆ ನನ್ನ ಲಕ್ಷ್ಯ ಹರಿಯಿತು. ಜೀನ್ಳಿಗೆಂದೆ:

“ಅದಾಗಲೇ ಹೇಳಿದ್ದೆನಲ್ಲವೇ? ಅಮೇರಿಕನ್ನರಿಗೆ ಹೊಸತನದ ಹಪಾಪಿ ಬಹಳೆಂದು, ನೋಡು, ಪ್ರತಿಯೊಂದು ಪೊಟ್ಟಣಕ್ಕೆ ಹೊಸ ರೀತಿಯ ತಯಾರಿಕೆ, ಹೊಸ ಆಕಾರ, ಹೊಸ ಸುವಾಸನೆ, ಹೊಸ ಬಣ್ಣ–ಏನೂ ಇಲ್ಲವೆಂದರೆ ಹೊಸ ನಮೂನೆಯ ಪೆಕೆಟ್ ಎಂದಾದರೂ ಬರೆಯುತ್ತಾರೆ.

ಜೀನ್ ಕುತೂಹಲದಿಂದ ಎಲ್ಲ ಪೊಟ್ಟಣಗಳನ್ನೂ ಪರಿಶೀಲಿಸಿದಳು. ಎಲ್ಲ ಪೊಟ್ಟಣಗಳಲ್ಲಿ `ಹೊಸ’ ಶಬ್ದ ಒಂದಿಲ್ಲೊಂದು ರೀತಿಯಲ್ಲಿ ಸೇರಿಸಲಾಗಿತ್ತು. ಮತ್ತೆ ಹೋಗಿ ಕಪಾಟು, ರಿಫ್ರಿಜಿರೇಟರ್ಗಳ ಬಾಗಿಲು ತೆಗೆದು ಅವುಗಳಲ್ಲಿಟ್ಟ ಪೊಟ್ಟಣಗಳನ್ನು ನೋಡಿದಳು. ಅವುಗಳ ಮೇಲೆಯೂ ಹಾಗೇ ಬರೆಯಲಾಗಿತ್ತು. ಆಶ್ಚರ್ಯದಿಂದ ಜೀನ್ಳೆಂದಳು:

“ಕ್ರಿಶ್, ನಾನು ಎಷ್ಟೊಂದು ವರ್ಷಗಳಿಂದ ಈ ಜೀನಸುಗಳನ್ನು ತಂದು ಅಡಿಗೆ ಮಾಡುತ್ತಿದ್ದೇನೆ. ಆದರೆ ಒಮ್ಮೆಯೂ ಇಂತಹ ಸಂಶೋಧನೆ ಮಾಡಿರಲಿಲ್ಲ. ನಮ್ಮಲ್ಲಿ ಜಾಹೀರಾತುಗಳ ಜಾಡ್ಯ ದಿನದಿನಕ್ಕೆ ಬೆಳೆದಂತೆ ನಾವು ಇವಕ್ಕೆಲ್ಲ ಕುರುಡರಾಗಲಿಕ್ಕೆ ಹತ್ತಿದ್ದೇವೆ.”

ಅವರಲ್ಲಿದ್ದ ಮೂರು ದಿನ ರೊಥ್–ದಂಪತಿಗಳು ನೂರಾರು ಸಾಮಾಜಿಕ, ರಾಜಕೀಯ ಪ್ರಶ್ನೆಗಳನ್ನೆತ್ತಿ ಚರ್ಚೆಗಳೆಯುತ್ತಿದ್ದರು. ಇಂತಹ ಚರ್ಚೆಗಳಲ್ಲಿ ನನ್ನದೇ ಮೇಲುಗೈ ಆಗುತ್ತಿತ್ತು. ಅತಿಥಿಯನ್ನು ನೋಯಿಸಬಾರದೆಂದು ಅವರು ಸೋಲು ಒಪ್ಪುತ್ತಿದ್ದರೋ ಅಥವಾ ಉಳಿದ ಅಮೇರಿಕನ್ನರಂತೆಯೇ ಬಲು ಬೇಗ ವಾದಿಸಲಾಗದೇ ಸೋಲುತ್ತಿದ್ದರೋ ಎಂದು ಹೇಳುವುದು ಕಷ್ಟ. ಆದರೆ ಹೆಮಲಿನ್ ಕುಟುಂಬದಂತೆ ನಿವ್ಯಾರ್ಜ ಪ್ರೀತಿ, ಆತ್ಮೀಯತೆಗಳು ನನಗೆ ಇಲ್ಲೂ ದೊರಕಿದವು. ನಾನು ಹೊರಡುತ್ತಿದ್ದಂತೆ,

“ಕ್ರಿಶ್, ನಮ್ಮಷ್ಟು ಬುದ್ಧಿವಂತರು, ಸುಸಂಸ್ಕೃತರು ಜಗತ್ತಿನಲ್ಲಿ ಇನ್ನಾರೂ ಇಲ್ಲವೆಂದು ಅಮೇರಿಕನ್ನರಿಗೆ ದುರಭಿಮಾನ ಬಂದುಬಿಟ್ಟಿದೆ … ಭಾರತೀಯರೆಂದರೆ ಹಿಂದುಳಿದವರು, ಹೊಟ್ಟೆಗಿಲ್ಲದವರು ಎಂಬ ಭಾವನೆ ನಮ್ಮದಾಗಿತ್ತು. ನಿನ್ನಂತಹ ರಾಜಕಾರಣ ಸೋಂಕದ `ಸಾಂಸ್ಕೃತಿಕ ರಾಯಭಾರಿ’ಯನ್ನು ಭೆಟ್ಟಿಯಾದಾಗ ವಸ್ತುಸ್ಥಿತಿಯ ಕಲ್ಪನೆಯಾಗುತ್ತದೆ. ನಿನ್ನ ಸಹವಾಸ (company) ಒದಗಿದ್ದಕ್ಕಾಗಿ ಅನೇಕ ಧನ್ಯವಾದಗಳು.” ಎಂದು ಮನಸ್ಸು ತುಂಬಿ ಬೀಳ್ಕೊಟ್ಟಾಗ ರೊಥ್ ದಂಪತಿಗಳ ಹೃದಯ ಭಾವೋದ್ವೇಗದಿಂದ ಭಾರವಾಗಿತ್ತು.

ಅಡಿ ಟಿಪ್ಪಣಿಗಳು

ಲೂಯಿಸಿಯಾದಲ್ಲಿ `ಪುಲಬ್ರಾಯಿಟ್ ಸ್ಕಾಲರ್’ ಆಗಿ ಇರುತ್ತಿದ್ದ ಮೈಸೂರಿನ ಶ್ರೀ ಎ. ವೆಂಕಟರಾಮ್ ಅವರು.

ಭಾರತದ ಮಹಾರಾಜ–ಮಹಾರಾಣಿಯರೆಂದರೆ ಅಮೇರಿಕನ್ನರಿಗೆ ಮೇರೆ ಇಲ್ಲದ ಕುತೂಹಲ. ಇವರೆಲ್ಲ ಆಗರ್ಭ ಶ್ರೀಮಂತರೆಂದೂ, ಸಕಲ ಔಶ್ವರ್ಯೊಪಭೋಗಗಳನ್ನು ಅನುಭವಿಸುವ ವರ್ಗವೆಂದು ಸಾಮಾನ್ಯ ನಂಬಿಕೆಯಿದೆ. ಇಲ್ಲಿ ಮಹಾರಾಜ ಎಂಬ ಶಬ್ದ ಭಾರೀ ಶ್ರೀಮಂತ ಎನ್ನುವ ಅರ್ಥದಲ್ಲಿ ಬಳಸಲಾಗಿದೆ.