ಯಾಂಕಿ ಗೆಳೆಯರು

ಯಾಂಕಿ ಗೆಳೆಯರು

ಅಮೇರಿಕೆಗೆ ಹೋದ ಭಾರತೀಯರೆಲ್ಲ ಕೂಡಿ ಅಲ್ಲೊಂದು ಚಿಕ್ಕ ಭಾರತವನ್ನೆ ನಿರ್ಮಿಸುತ್ತಾರೆ. ಹೀಗಾಗಿ ಅಮೇರಿಕನ್ ವಿದ್ಯಾರ್ಥಿಗಳೊಡನೆ ಬೆರೆಯುವದಾಗಲಿ, ಅಮೇರಿಕನ್ನರೊಡನೆ ಹೆಚ್ಚಿನ ಸಾಮಾಜಿಕ ಸಂಪರ್ಕ ಬರುವದಾಗಲಿ ಕಡಿಮೆಯೆ. ಸ್ವತಃ ತಾವೇ ಪ್ರಯತ್ನ ಮಾಡದೇ ಅಮೇರಿಕನ್ ವಿದ್ಯಾರ್ಥಿಗಳು ವಿದೇಶೀಯ ವಿದ್ಯಾರ್ಥಿಗಳೊಡನೆ ಬೆರೆಯುವುದಿಲ್ಲ ಎಂದು ಈ ವಿದ್ಯಾರ್ಥಿಗಳ ನಂಬಿಕೆ. ನಾನು ಅಮೇರಿಕನ್ ವಿದ್ಯಾರ್ಥಿಗಳೊಡನೆ ಸಹವಾಸ ಬೆಳೆಸಲು ಆತುರನಾಗಿದ್ದೆ. ತಮ್ಮ ತಮ್ಮಲ್ಲೆ ತೀರ ಔಪಚಾರಿಕವಾಗಿರುವ ಅಮೇರಿಕನ್ನರು ವಿದೇಶೀಯರೊಡನೆ ಹೇಗೆ ತಾನೆ ಸಲಿಗೆ ಬೆಳೆಸಿಯಾರು? ಮೊದಮೊದಲು ಒಂದೆರಡು ತಿಂಗಳು ಬರಿಯ `ಹಾಯ್ ಹಾಯ್’ದಲ್ಲಿಯೇ ಕಳೆಯಿತು.

ಅಮೇರಿಕೆಯ ಶಿಕ್ಷಣಕ್ರಮದಲ್ಲಿ ಪರೀಕ್ಷೆಗಳ ಜೊತೆಗೆ ತುಂಬಿದ ಸಭೆಗಳಲ್ಲಿ ಭಾಷಣಮಾಡುವುದು, ಚರ್ಚೆಗಳಲ್ಲಿ ಭಾಗವಹಿಸುವುದು ಮುಂತಾದವುಗಳಲ್ಲಿ ತರಬೇತಿ ಕೊಡುತ್ತಾರೆ. ಒಮ್ಮೆ ಇಂತಹ ಸೆಮಿನಾರ್ ಒಂದರಲ್ಲಿ ನನ್ನ ಸಂಶೋಧನೆಯ ವಿಷಯವಾಗಿಯೆ ವಿಮರ್ಶೆಯನ್ನು ಇಟ್ಟಿದ್ದರು. ಅಮೇರಿಕನ್ ಶಿಕ್ಷಕರು ವಿದ್ಯಾರ್ಥಿಗಳಂತೆ ಹಾವಭಾವದಿಂದ ತಮ್ಮ ಅರ್ಧ ಪಾಠ ಕಲಿಸಿದರೆ ವಿದ್ಯಾರ್ಥಿಯಾದ ನಾನು ಶಿಕ್ಷಕರಂತೆ ಠೀವಿಯಿಂದ ನಿಂತುಬಿಟ್ಟಿದ್ದೆ. (ಈ ಮೊದಲು ಶಿಕ್ಷಕನು ಎರಡು ವರ್ಷದ ಅನುಭವ ನನ್ನಲ್ಲಿ ಸಾಂಪ್ರದಾಯಿಕ `ಶಿಕ್ಷಕತ್ವ’ವನ್ನು ಬೇರೂರಿಸಿಬಿಟ್ಟಿತ್ತು.) ನನ್ನ ಇಂಗ್ಲೀಷ ಉಚ್ಚಾರ ಅಮೇರಿಕನ್ನರ ಉಚ್ಚಾರಕ್ಕಿಂತ ಭಿನ್ನವಾಗಿದ್ದರಿಂದ ನನ್ನ ಭಾಷಣದ ವೇಗ ಹೆಚ್ಚಾಯಿತೆಂದು ಪ್ರಾಧ್ಯಾಪಕರು ನಡುನಡುವೆ ಬ್ರೇಕ್ ಹಾಕುತ್ತಿದ್ದರು. ಅಂದಿನ ನನ್ನ ವಾದಸರಣಿ, ವಿದ್ಯಾರ್ಥಿ–ಶಿಕ್ಷಕರಲ್ಲಿ ನನ್ನ ಬಗ್ಗೆ ಹೊಸ ಭಾವವನ್ನು ಹುಟ್ಟಿಸಿತೆಂದು ತೋರುತ್ತದೆ. ವರ್ಗದಲ್ಲಿ ಪೆದ್ದನಂತೆ ಕುಳಿತರೂ ಬುದ್ಧಿಯಲ್ಲಿ ಪೆದ್ದನಲ್ಲವೆಂದು ತಿಳಿದಿರಬೇಕು. ಅಂತೂ ಏನೋ ಎಂದೂ ಮಾತನಾಡಿಸದ ವಿದ್ಯಾರ್ಥಿಗಳೂ ಸಹ ಬಂದು ಬಂದು ಕೈಕುಲುಕಿ ಅಭಿನಂದಿಸಿದರು. ಒಬ್ಬ ವಿದ್ಯಾರ್ಥಿಯಂತೂ, “ಕ್ರಿಶ್, ನೀನು ಹೇಳಿದ್ದು ನಮ್ಮಲ್ಲಿಯ ಎಷ್ಟೋ ಪ್ರಾಧ್ಯಾಪಕರು ಕಲಿಸುವದಕ್ಕಿಂತ ಚೆನ್ನಾಗಿ ತಿಳಿಯಿತು. ನಮ್ಮ ಶಿಕ್ಷಕವೃಂದವೆಲ್ಲ ನಿನ್ನಂತಿದ್ದರೆ … ” ಎಂದು ಮುಕ್ತಕಂಠದಿಂದ ಹೊಗಳಿದ. ಜಾನ್ನಿಗೆ ನನ್ನ ವಿಷಯದ ಬಗ್ಗೆ ಇನ್ನಷ್ಟು ವಿವರಣೆ ಬೇಕಾಗಿತ್ತು. ಅಂತೆಯೇ “ಕ್ರಿಶ್ ಕಾಫಿ ಕುಡಿಯಲು ನನಗೆ ಜೊತೆ ಕೊಡುವಿಯಾ? ಅಲ್ಲಿಯೇ ಕುಳಿತು ಮಾತನಾಡೋಣ.” ಎಂದು ಹೇಳಿದ. ನನಗೂ ಗಂಟಲು ಒಣಗಿದ್ದರಿಂದ ಆಗಲೆಂದು ಇಬ್ಬರೂ ಕೆಫಿಟೇರಿಯದತ್ತ ಹೊರೆಟೆವು.

ಕೆಫಿಟೇರಿಯದಲ್ಲಿ ಯಂತ್ರಗಳ ಹೊರತು ಇನ್ನಾರು ಇರಲಿಲ್ಲ. ಕಾಫಿ, ಚಹ, ಹಾಲು ಐಸ್ಕ್ರೀಮಗಳನ್ನು ಕೊಡುವ ಯಂತ್ರಗಳು ಸಾಲಾಗಿ ನಿಂತಿದ್ದವು. ಕಾಫಿಯ ಯಂತ್ರದಲ್ಲಿ ಕರಿ ಕಾಫಿ, ಬಿಳಿ ಕಾಫಿ, ಸಕ್ಕರೆಯ ಕಾಫಿ, ಸ್ಟ್ರಾಂಗ್ ಕಾಫಿ ಸಿಗುತ್ತದೆ. ಕೊಟ್ಟ ಹಣವನ್ನು ಪರೀಕ್ಷಿಸಿ ಎಣಿಸುವ ಬುದ್ಧಿಯೂ ಈ ಯಂತ್ರಗಳಿಗೆ ಇದೆ! ಹೆಚ್ಚು ಹಣ ಕೊಟ್ಟರೆ ಚಿಲ್ಲರೆ ತಿರುಗಿ ಕೊಡುತ್ತದೆ. ಕಡಿಮೆ ಕೊಟ್ಟರೆ ಇನ್ನಷ್ಟು ಬೇಕೆನ್ನುತ್ತದೆ. ಖೊಟ್ಟಿ ನಾಣ್ಯ ಕೊಟ್ಟರೆ ನಿರಾಕರಿಸುತ್ತದೆ. ಅಂತೂ ಒಬ್ಬ ಗಲ್ಲೆಯ ಮೇಲೆ ಕೂಡುವ ಭಾರತೀಯನ ಕೆಲಸ ಮಾಡುತ್ತದೆ ಈ ಯಂತ್ರ. ಚಹ, ಕಾಫಿ, ಹಾಲು, ಐಸ್ಕ್ರೀಮ್ ಇವುಗಳಲ್ಲಿ ಯಾವುದನ್ನು ತೆಗೆದುಕೊಂಡರೂ ಒಂದೇ ಬೆಲೆ! ನನ್ನ ಸಹಪಾಠಿ ಕಿಸೆಯಿಂದ ಹತ್ತು ಸೆಂಟಿನ ನಾಣ್ಯವನ್ನು ತೆಗೆದು ತನಗೊಬ್ಬನಿಗೇ ಕಾಫಿ ಕೊಂಡು, ಹೀರಲು ಪ್ರಾರಂಭಿಸಿದ. ನಾನೊಂದು ಕುರ್ಚಿ ಎಳೆದುಕೊಂಡು ಅವನ ಎದುರಿಗೇ ಕುಳಿತೆ.

“ನಿನಗೆ ಕಾಫಿ ಬೇಡವೇ?” ಎಂದು ಕೇಳಿದ.

“ನಿನ್ನಿಂದ ನಿರೀಕ್ಷಿಸಿದ್ದೆ, ಆದರೆ ನೀನೊಬ್ಬನೇ ಹೀರಲಾರಂಭಿಸಿದೆಯಲ್ಲ!” ಎಂದು ಮುಖಕ್ಕೇ ಹೇಗೆ ಹೇಳಬೇಕು ಎಂಬ ಸ್ವಾಭಾವಿಕ ಸಂಕೋಚದಿಂದ ನಾನು ಹಾಗೆ ಹೇಳಲಾರದೆ,

“ನನ್ನ ಹತ್ತಿರ ಚಿಲ್ಲರೆಯಿಲ್ಲ.” ಎಂದು ಬೇರೆ ನೆವ ಹೇಳಿದೆ. ಅದಕ್ಕವನು,

“ಅಷ್ಟೇ ತಾನೆ, ನಾನು ಚಿಲ್ಲರೆ ಕೊಡುತ್ತೇನೆ. ನಾಳೆ ನನಗೆ ತಿರುಗಿ ಕೊಟ್ಟರೂ ನಡೆಯುವುದು.” ಎಂದು ಹತ್ತು ಸೆಂಟು ತೆಗೆದು ನನ್ನ ಕೈಯಲ್ಲಿಟ್ಟ. ಬಹುಶಃ ನನ್ನ ಹತ್ತಿರ ಚಿಲ್ಲರೆಯೇಕೆ, ನೋಟು ಸಹ ಇಲ್ಲವೆಂದು ತಿಳಿಯುವ ಗೋಜಿಗೆ ಹೋಗಿರಲಿಕ್ಕಿಲ್ಲ ಆತ. ಅಂದು ಅಮೇರಿಕನ್ ಗೆಳೆತನದ ಪ್ರಥಮ ಪಾಠವನ್ನು ಕಲಿತೆ.

ಮರುದಿನ ಬೆಳಿಗ್ಗೆ ಕಾಲೇಜಿಗೆ ಬಂದೊಡನೆ ಅವನ ರೊಕ್ಕ ವಾಪಸ ಮಾಡಿ, ನಾನೇ ಅವನನ್ನು ಕಾಫಿ ಕುಡಿಯಲು ಕರೆದೆ. ಅವನು ಬರಲು ಮನಸ್ಸಿಲ್ಲದೇ, ಒಲ್ಲೆ ಎನ್ನಲಾರದೇ ಬಂದ. ನನ್ನ ರೊಕ್ಕದಿಂದಲೇ ಎರಡು ಗ್ಲಾಸು ಕಾಫಿಯನ್ನು ಯಂತ್ರದಿಂದ ತೆಗೆದುಕೊಂಡು, ಒಂದು ಗ್ಲಾಸನ್ನು ಅವನ ಕೈಗೆ ಕೊಟ್ಟಾಗ ಅವನಿಗಾದ ಆಶ್ಚರ್ಯ ಅಷ್ಟಿಷ್ಟಲ್ಲ. ಅವನು ತನ್ನ ಪಾಲಿನ ರೊಕ್ಕ ಕೊಡಲು ಬಂದಾಗ ಬೇಡವೆಂದೆ. ನನ್ನ ಈ ನಡತೆ ಅವನಿಗೆ ಹೆಚ್ಚಿನ ಆಶ್ಚರ್ಯವನ್ನುಂಟು ಮಾಡಿರಬೇಕು. ನಾನು ಅವನಿಗೆ ಭಾರತದಲ್ಲಿ ಸ್ನೇಹಿತರು ಚಹ ಕುಡಿಯುವ ಪದ್ಧತಿಯನ್ನು ವಿವರಿಸಿದೆ. ಹತ್ತೆಂಟು ಗೆಳೆಯರು ಚಹದಂಗಡಿಗೆ ಹೋದರೂ ಯಾರಾದರೂ ಒಬ್ಬರೇ ಹಣ ಕೊಡುತ್ತಾರೆ. ಎಂದಾಗ ಆತನಿಗೆ ವಿಸ್ಮಯದ ಪರಮಾವಧಿ. ಪ್ರತಿ ಸಾರೆ ಹೋದಾಗ ಬೇರೆಬೇರೆಯವರು ಕೊಡುವದರಿಂದ ಯಾರೊಬ್ಬರಿಗೂ ಭಾರವಾಗುವದಿಲ್ಲ ಎಂದಾಗ “ಹಾಗಾದರೆ ಸೈ” ಎಂದ. ಅಂದಿನಿಂದ `ಭಾರತೀಯ ಸ್ನೇಹಿತನ ಕಾಫಿ’ (Indian-friendship-tea) ಕುಡಿಯಲು ಆತ ಆಗಾಗ್ಗೆ ಕರೆಯುತ್ತಿದ್ದ. ಯಂತ್ರದ ಕಾಫಿ ತುಟ್ಟಿಯಾಗುತ್ತದೆಂದು ಕೆಲ ದಿನಗಳ ನಂತರ ಕಾಲೇಜಿನ ನನ್ನ ಕೋಣೆಯಲ್ಲೆ ಕಾಫಿ ಮಾಡಲಾರಂಭಿಸಿದೆ. ಹನ್ನೆರಡು ಗಂಟೆಗೆ ಆತ ಎಲ್ಲಿದ್ದರೂ ಕಪ್ ಕೈಯಲ್ಲಿ ಹಿಡಿದುಕೊಂಡು ಕೋಣೆಯಲ್ಲಿ ಹಾಜರಾಗುತ್ತಿದ್ದ. ನಂತರ ನಮ್ಮ ಕಾಫಿ ಕ್ಲಬ್ ಸುದ್ದಿ ಉಳಿದ ಸಹಪಾಠಿಗಳಲ್ಲಿ ಹರಡಿತು. ಅವರೂ ಬಂದು ಸೇರಿದರು. ಬರಬರುತ್ತ ಅವರು ನನಗಾಗಿ ಸೆಂಡ್ವಿಚ್, ಸೇಬು ಅಥವಾ ಇನ್ನಾವುದಾದರೂ ತಿಂಡಿ ತರಲಾರಂಭಿಸಿದರು ಅವರ ತಿಂಡಿ ನನ್ನ ಕಾಫಿಗಳಲ್ಲಿಯ ಭಾರತೀಯ ಆತ್ಮೀಯತೆ ಕೆಲವೇ ತಿಂಗಳಲ್ಲಿ ನಮ್ಮನ್ನು ಒಂದಾಗಿ ಬೆಸೆದುಬಿಟ್ಟಿತು.

ಕಾಫಿ-ಸೆಂಡ್ವಿಚ್ಗಳ ಸಂತರ್ಪಣೆಯಲ್ಲಿ ಆಗೀಗ-ಅಮೇರಿಕನ್ ಸಂಸ್ಕೃತಿಗಳ ಬಗ್ಗೆ ನಮ್ಮನಮ್ಮಲ್ಲಿ ಒಳ್ಳೆ ಚರ್ಚೆ ನಡೆಯುತ್ತಿತ್ತು. ವಾಗ್ಯುದ್ಧಗಳೂ ನಡೆಯದೆ ಇರುತ್ತಿರಲಿಲ್ಲ. ಎರಡೂ ಸಾಮಾನ್ಯವಾಗಿದ್ದವು. ಭಾರತೀಯರ ಬಗ್ಗೆ ಅಮೇರಿಕನ್ನರಿಗೆ ಎಂತಹ ತಪ್ಪು ಕಲ್ಪನೆಗಳಿವೆಯೆಂದು ನನಗೆ ಆಗ ಸ್ಪಷ್ಟವಾಗುತ್ತ ಬಂದಿತು. ಕೆಲವು ಬಾರಿ ನನ್ನನ್ನು ಕೆರಳಿಸಲೆಂದೇ ಏನಾದರೂ ಅಡ್ಡ ಪ್ರಶ್ನೆಗಳನ್ನು ಕೇಳುತ್ತಿದ್ದರು. ಆದರೆ ವಾದಕ್ಕೆ ನಿಂತರೆ ಅವರ ಟೊಳ್ಳುತನವೆಲ್ಲ ಹೊರಬರುತ್ತಿತ್ತು. ನಮ್ಮ ಮಾತಿನ ಹೊಳೆ ಹಲವಾರು ಮುಖವಾಗಿ ಹರಿಯುತ್ತಿತ್ತು.

ಪ್ರಶ್ನೆ: ಕ್ರಿಶ್, ವಿಶ್ವದ ನಾರಿಯರೆಲ್ಲ ತಾವು ಪುರುಷರಿಗೆ ಒಂದಿಷ್ಟೂ ಕಡಿಮೆಯಲ್ಲವೆಂದು ಸಾಧಿಸಲು ಹೊರಟಾಗ, ಭಾರತೀಯ ನಾರಿಯರೇಕೆ ಇನ್ನೂ ಗಂಡಸಿನ ದಾಸ್ಯದಲ್ಲಿ ನರಳುತ್ತಿದ್ದಾರೆ?

ಉತ್ತರ: “ಭಾರತೀಯ ನಾರಿಯರು ಗಂಡಸರ ದಾಸಿಯರೆಂದು ನಿಮಗೆ ಯಾರು ಹೇಳಿದರು? ಒಂದು ದೃಷ್ಟಿಯಲ್ಲಿ ನೋಡಿದರೆ ಗಂಡಸರಿಗಿಂತ ಹೆಚ್ಚು ಗೌರವ ಸ್ತ್ರೀಯರಿಗೆ ಸಲ್ಲುತ್ತದೆ ಭಾರತದಲ್ಲಿ.” (ಒಂದು ಸಂಸ್ಕೃತ ಶ್ಲೋಕವನ್ನು ಉದಾಹರಿಸಿ ಅರ್ಥ ವಿವರಿಸಿದೆ.)

ಪ್ರಶ್ನೆ: “ಹಾಗಾದರೆ ಭಾರತೀಯ ಗಂಡಸರೆಲ್ಲ ಪಾಶ್ಚತ್ಯ ಉಡುಪು ತೊಟ್ಟರೂ ಸ್ತ್ರೀಯರೇಕೆ ಪ್ರಾಚೀನ ಯುಗದ ಸೀರೆಯನ್ನೇ ಉಡುತ್ತಾರೆ. ಜಗತ್ತಿನ ಎಲ್ಲ ಸುಧಾರಿಸಿದ ರಾಷ್ಟ್ರಗಳಲ್ಲಿ ಸ್ತ್ರೀಯರು ಪಾಶ್ಚಾತ್ಯ ಉಡುಪನ್ನೇ ತೊಡುವುದಿಲ್ಲವೇ? ಅಲ್ಲದೇ ಭಾರತೀಯ ಸ್ತ್ರೀಯರು ಮನೆಗೆಲಸವೇ ತಮ್ಮ ಸರ್ವಸ್ವವೆಂದು, ಸರ್ವಸುಖವೆಂದು, ತಿಳಿಯುತ್ತಾರಂತೆ. ಇದು ಗುಲಾಮಗಿರಿಯ ಸಂಕೇತವಲ್ಲದೇ ಇನ್ನೇನು?”

ಉತ್ತರ: “ಅಮೇರಿಕನ್ ನಾರಿಯರು ಮೊಣಕಾಲಿನ ಕೆಳಭಾಗವನ್ನು ಸುಂದರವಾಗಿಡಲು ಎಷ್ಟೊಂದು ಕಾಳಜಿ ವಹಿಸಬೇಕಾಗುತ್ತದೆ. ಎಷ್ಟೊಂದು ಹಣ ಸೂರೆ ಮಾಡಬೇಕಾಗುತ್ತದೆ? ಇಷ್ಟಾದರೂ ಅದರಲ್ಲಿ ಸ್ವಲ್ಪ ಊನ ಕಂಡು ಬಂದರೆ ಆಕೆಗೆ ಮದಿವೆಯಾಗುವದೇ ಇಲ್ಲ. ಅದೇ ಭಾರತೀಯ ಸ್ತ್ರೀ ಸೀರೆಯನ್ನು ಉಟ್ಟರೆ, ಇದ್ದ ಕುಂದುಕೊರತೆಗಳೂ ಮುಚ್ಚಿಹೋಗುತ್ತವೆ. ಇದೊಂದು ಅನುಕೂಲವಲ್ಲವೇ? ಅಲ್ಲದೇ ಸೀರೆಯಲ್ಲಿ `ಹೆಣ್ಣುತನ’ ಹೆಚ್ಚು ಸುಂದರವಾಗಿ ಕಾಣುತ್ತದೆ. ಅಂತೆಯೇ ಅಮೇರಿಕನ್ ಮಹಿಳೆಯರು ಸೀರೆಗೆ ಮನಸೋತು ಆಗೀಗ ಸೀರೆ ಉಡಲು ಹಾತೊರೆಯುವದಿಲ್ಲವೇ? ಇನ್ನು ಮನೆಗೆಲಸಗಳನ್ನು ಸ್ತ್ರೀಯರಲ್ಲದೇ ಇನ್ನಾರು ಮಾಡಬೇಕು? ನಿಮ್ಮಲ್ಲಿ ಸ್ತ್ರೀಯರು ತಾವು ಮನೆಯ ಹೊರಗೂ, ಗಂಡಸರು ಮನೆಯ ಒಳಗೂ ಇರಬೇಕೆಂದು ಪ್ರಯತ್ನಿಸುವದರಿಂದ ನೀವೆಲ್ಲ ಎಷ್ಟೋ ಅನ್ಯಾಯಗಳನ್ನು ಸಹಿಸಬೇಕಾಗಿ ಬಂದಿದೆ!”

ಪ್ರಶ್ನೆ: “ನಿಮ್ಮ ದೇಶದಲ್ಲಿ ಹಿಂದುಗಳು ಎರಡು ಮೂರು ಹೆಂಡದಿಂರನ್ನೂ, ಮುಸಲ್ಮಾನರು ನಾಲ್ಕು ಹೆಂಡಂದಿರನ್ನೂ ಮದುವೆಯಾಗಿ ಸಂಸಾರ ಒಟ್ಟಿಗೆ ಮಾಡುತ್ತಾರೆಂದು ಓದಿದ ನೆನಪು. ಇದು ಸ್ತ್ರೀಯರಿಗೆ ಪುರುಷರು ಮಾಡುತ್ತಿರುವ ಅನ್ಯಾಯವಲ್ಲವೇ?”

ಉತ್ತರ: “ಅಮೇರಿಕೆಯಲ್ಲಿಯಂತೆ ಎರಡು ವರ್ಷಕ್ಕೊಂದು ಮದಿವೆಯಾಗುವದಕ್ಕಿಂತ ಇದು ಎಷ್ಟೋ ವಾಸಿಯಲ್ಲವೇ? ನಮ್ಮಲ್ಲಿ ಎರಡು ಮೂರು ಹೆಂಡಂದಿರೊಡನೆ ಒಬ್ಬ ಸಂಸಾರ ಮಾಡಿದರೆ ನೀವು ಆರೆಂಟು ಹೆಂಗಸರೊಡನೆ ಸಹಜವಾಗಿ ಸಹವಾಸ ಮಾಡುತ್ತೀರಿ. ನಮ್ಮಲ್ಲಿ ಯಾವ ಹೆಂಡತಿಗೂ ಅನ್ಯಾಯವಾಗದಂತೆ ಎಲ್ಲರನ್ನೂ ಒಟ್ಟಿಗೆ ಸಾಕಿ–ಸಲುಹಿದರೆ, ನೀವು ಪ್ರತಿಯೊಂದು ಹೊಸ ಮದಿವೆ ಮಾಡಿಕೊಂಡಾಗ ಹಿಂದಿನ ಪತ್ನಿಗೆ ಅನ್ಯಾಯ ಮಾಡಿ ವಿವಾಹವಿಚ್ಛೇದ ಮಾಡಿಕೊಳ್ಳುತ್ತೀರಿ. ಇದಕ್ಕೆ ಉದಾಹರಣೆ, ನಿಮ್ಮಲ್ಲಿ ರಾಷ್ಟ್ರದ ಅಧ್ಯಕ್ಷಪದಕ್ಕೆ ಹವಣಿಸುವ ರಾಕ್ಫೆಲರ್ನನ್ನೆ ತೆಗೆದುಕೊಳ್ಳೋಣ. ಒಬ್ಬಳಿಗೆ ಮನಸೋತು ಮೂವತ್ತು ವರ್ಷ ಜೊತೆಗೆ ಬಾಳ್ವೆ ಮಾಡಿದವಳನ್ನು ಘಟಸ್ಫೋಟ ಮಾಡಿದ್ದಾಯಿತು. ತನ್ನ ಸ್ವಾರ್ಥಕ್ಕಾಗಿ ವಿವಾಹಿತಳೊಬ್ಬಳ ಸಂಸಾರವನ್ನು ಮುರಿದ ಪಾಪ, ಮೂರು ಸಣ್ಣ ಸಣ್ಣ ಮಕ್ಕಳು, ಡಾಕ್ಟರ ಗಂಡ. ಇದು ನ್ಯಾಯವೇ? ನಮ್ಮಲ್ಲಿ ಬಹುಪತ್ನಿತ್ವ ಪ್ರಚಾರದಲ್ಲಿತ್ತು ನಿಜ. ಆದರೆ ಹೆಚ್ಚಿನ ಹೆಂಡದಿಂರನ್ನು ಸಾಕುವುದು ಜನಸಾಮಾನ್ಯರಿಗೆ ಮೀರಿದ ಮಾತಾದ್ದರಿಂದ ಶೇಕಡಾ ೯೯ ಜನರಿಗೆ ಒಬ್ಬ ಹೆಂಡತಿಯೇ ಇರುತ್ತಿದ್ದಳು. (ಅದೂ ಒಂದೇ ಸಲ ಮದಿವೆಯಾದ ಹೆಂಡತಿ!) ಇದೀಗ ಒಬ್ಬಳಿಗಿಂತ ಹೆಚ್ಚು ಜನರನ್ನು ಮದಿವೆಯಾಗಬಾರದೆಂದು ಕಾನೂನೂ ಜಾರಿಯಲ್ಲಿ ಬಂದಿದೆ. ಕಾನೂನಿನಂತೆ ಒಬ್ಬಳನ್ನು ಬಿಟ್ಟು ಇನ್ನೊಬ್ಬಳನ್ನು ಎಷ್ಟೇ ಸಲ ಮದಿವೆಯಾಗಬಹುದಲ್ಲವೇ?”

ಈ ಉತ್ತರದಿಂದ ಸ್ವಲ್ಪ ಕೆಣಕಿದಂತಾಯಿತು ಜಿಮ್ನಿಗೆ. ಆದರೂ ಸೋಲನ್ನೊಪ್ಪಿಕೊಳ್ಳದೇ,

“ಮದಿವೆಯಾದ ಹೆಣ್ಣು ಸಂಸಾರ ಮಾಡಲು ಯೋಗ್ಯಳಿಲ್ಲದಿದ್ದರೆ ವಿವಾಹ ವಿಚ್ಛೇದನೆ ಹೊಂದಿ ಇನ್ನೊಂದು ಮದಿವೆಯಾದರೆ ತಪ್ಪೇನಿದೆ?” ಎಂದು ಕೇಳಿದ ಅದಕ್ಕೆ ನಾನು,

“ನಿಮ್ಮ ಪದ್ಧತಿಯ ಪ್ರಕಾರ ಒಬ್ಬರಿಗೊಬ್ಬರು ಸರಿಹೋಗುತ್ತಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಿ ನೋಡಿ ನೋಡಿ ಮದಿವೆಯಾದರೂ ಸುಖವಾಗಿ ಸಂಸಾರವನ್ನೇಕೆ ಮಾಡಲಾಗುವುದಿಲ್ಲ? ನಿಮ್ಮ ವಿವಾಹಪದ್ಧತಿಯಲ್ಲಿ ಒಬ್ಬರಿಗಾಗಿ ಇನ್ನೊಬ್ಬರು ಎನ್ನುವದಕ್ಕಿಂತ, ತನಗಾಗಿ ಇನ್ನೊಬ್ಬರು ಎಂಬ ಧೋರಣೆಯೇ ಬಲವಾಗಿದೆ. ಇನ್ನೊಬ್ಬರಿಗಾಗಿ ತ್ಯಾಗ ಮಾಡುವ ಬುದ್ಧಿ ನಿಮಗೆ ಎಂದೂ ಬರಲಾರದು. ನಿಮ್ಮಲ್ಲಿ ಎಂತಹ ಕ್ಷುಲ್ಲಕ ಕಾರಣಗಳಿಗಾಗಿ ವಿವಾಹ ವಿಚ್ಛೇದನಗಳು ನಡೆಯುತ್ತವೆ ಎಂಬುದನ್ನು ಕಣ್ಣು ತೆರೆದು ನೋಡಿರುವಿಯಾ? ಎಲ್ಲಕ್ಕೂ ಹೆಚ್ಚಿನ ವಿವಾಹ–ವಿಚ್ಛೇದನೆಗೆ ಕಾರಣವೆಂದರೆ ಮಾನಸಿಕ ಕ್ರೌರ್ಯ (mental cruelty) ಅಂತೆ! ಹಬ್ಬಕ್ಕೆ ಪತಿಯು ಮಗನಿಗೆ ಆಟಿಗೆ ತರದೇ ಮಗಳಿಗೆ ಮಾತ್ರ ತಂದರೆ, ಪುಟ್ಬಾಲ್ ಪಂದ್ಯಾಟದಲ್ಲಿ ಆತ ವಿರುದ್ಧ ಪಾರ್ಟಿಯನ್ನು ಪ್ರೊತ್ಸಾಹಿಸಿದರೆ, ತನ್ನ ಹಿಂದಿನ ಗೆಳೆಯನೊಡನೆ ಸರಸಸಲ್ಲಾಪ ನಡೆಸಿದಾಗ ತಡೆಹಾಕಿದರೆ ಪತ್ನಿಗೆ ಅದೇ ಮಾನಸಿಕ ಕ್ರೌರ್ಯದ ತೊಂದರೆಯಾಗಿ ಬಿಡುಗಡೆ ಪಡೆಯಲು ಕಾರಣವಾಗುತ್ತದಂತೆ. ನಮ್ಮ ನಿಮ್ಮ ವಿವಾಹದ ಅಂತರವೆಂದರೆ, ನಿಮ್ಮಲ್ಲಿ ಪ್ರೇಮ ಮೊದಲು, ವಿವಾಹ ನಂತರ, ವಿವಾಹವಾದ ನಂತರ ಪ್ರೇಮ ಹೋಗಿಬಿಡುತ್ತದೆ. ವಿವಾಹವೊಂದೇ ಉಳಿಯುತ್ತದೆ. ನಮ್ಮಲ್ಲಿ ವಿವಾಹ ಮೊದಲು, ಪ್ರೇಮ ನಂತರ ಬರುವದರಿಂದ ಪ್ರೇಮ ಬೆಳೆಯಲಿಕ್ಕೆ ಅವಕಾಶವಿದೆ” ಎಂದು ಒಂದು ಸಣ್ಣ ಉಪನ್ಯಾಸವನ್ನೇ ಬಿಗಿದೆ.

ಪ್ರಶ್ನೆ: “ಬಹುಪತ್ನಿಯರು ವಿಪುಲ ಮಕ್ಕಳು, ಸಾಲದ್ದಕ್ಕೆ ಸರಕಾರದಿಂದ ಮನ್ನಣೆ ಪಡೆದ ವೇಶ್ಯೆಯರು ಇವೆಲ್ಲ ಭಾರತೀಯರು ಕಾಮುಕರೆಂದು ಸಾರಿ ಹೇಳುವದಿಲ್ಲವೇ? ನಮ್ಮಲ್ಲಿ ಬಹುಪತ್ನಿಯರೂ ಇಲ್ಲ, ವಿಫುಲ ಮಕ್ಕಳೂ ಇಲ್ಲ. ವೇಶ್ಯೆಯರ ಹೆಸರಂತೂ ಇಲ್ಲವೇ ಇಲ್ಲ ನೋಡು.”

ಉತ್ತರ: “ಓ! ತಿರುಬೊಬ್ಬೆ ಇದು! ಜಗತ್ತಿನಲ್ಲಿ ಕಾಮುಕರದೇ ದೇಶ ಯಾವುದಾದರೂ ಇದ್ದರೆ ಅದು ನಿಮ್ಮದು ನೋಡು. ನಿಮ್ಮಲ್ಲಿ ಗರ್ಭನಿರೋಧಕ ಸಾಧನಗಳು ಇಷ್ಟೊಂದು ಇದ್ದರೂ ವರ್ಷವರ್ಷ ಗರ್ಭವತಿ ಕುಮಾರಿಯರ ಸಂಖ್ಯೆ ಹೆಚ್ಚುತ್ತಿದೆ ಏಕೆ? ತಂದೆ ಗೊತ್ತಾಗದ ಮಕ್ಕಳು ಇಷ್ಟೊಂದು ಹಬ್ಬುತ್ತಾರೆ ಏಕೆ? ನಿಮ್ಮಲ್ಲಿ ನಗ್ನಚಿತ್ರಗಳು, ವಸ್ತ್ರವಿಮೋಚನ–ನೃತ್ಯ (strip–tease) ಗಳು `ನಾಯಿಟ್–ಕ್ಲಬ್’ಗಳು ಭರದಿಂದ ಬೆಳೆಯುತ್ತಿವೆ; ಅತ್ಯಂತ ಜನಪ್ರಿಯವಾಗಿವೆ ಏಕೆ? ಇವೆಲ್ಲ ನಿಮ್ಮ ಕಾಮುಕತೆಯ ದ್ಯೋತಕವಲ್ಲೇನು? ನಿಮ್ಮಲ್ಲಿ ವೇಶ್ಯೆಯೆಂಬ ಅಭಿಧಾನವಿರಲಿಕ್ಕಿಲ್ಲ. ಅವರ ಆಚಾರ ಎಲ್ಲ ಇದೆ. ಆದರೂ ವೇಶ್ಯೆಯರೇ ಇಲ್ಲ ಎಂಬ ಮಾತು ನಂಬಲು ಅಸಾಧ್ಯ. ನಿಮ್ಮ `ಪಾರ್ಟಿ-ಹುಡುಗಿಯರು’ (party-girls) `ಶೋ-ಹುಡುಗಿಯರ’ (show-girls) ಮತ್ತು `ಕೆಳದಿಯರು’ (pick-up-girls) ಇವರೆಲ್ಲ ಮಾಡುತ್ತಿರುವುದೇನು? ನಮ್ಮ ವೇಶ್ಯೆಯರನ್ನೂ ಇವರು ಮೀರಿಸುತ್ತಾರೆ. ಹೆಣ್ಣುತನವನ್ನು ರೊಕ್ಕಕ್ಕಾಗಿ ಮಾರಿಕೊಳ್ಳುವವಳು ವೇಶ್ಯೆ ಎಂದು ತೀರ ಸಾಮಾನ್ಯ ವ್ಯಾಖ್ಯೆ (definition) ಕೊಟ್ಟರೆ ಅಮೇರಿಕೆಯ ಪ್ರತಿಯೊಬ್ಬ ಕುಮಾರಿಯೂ ಈ ವರ್ಗಕ್ಕೆ ಸೇರುತ್ತಾಳೆ! ಯಾವುಳೇ ಹುಡಿಗಿ ತನ್ನ ಗೆಳೆಯನು ಚಲನಚಿತ್ರ ತೋರಿಸದಿದ್ದರೆ, ಹೋಟೆಲಿಗೆ ಕರೆದುಕೊಂಡು ಹೋಗದಿದ್ದರೆ, ಕಾಣಿಕೆ (presents) ಕೊಡದಿದ್ದರೆ `ಡೇಟಿಂಗ್’ಗೆ ಹೋಗಲು ಒಪ್ಪುತ್ತಾಳೆಯೇ? ಶಕ್ಯವೇ ಇಲ್ಲ. ಅಲ್ಲದೇ ಒಬ್ಬ ಅಮೇರಿಕನ್ ಹುಡುಗಿ ಹಲವಾರು ತರುಣರ ಸಂಗಡ `ಡೇಟಿಂಗ್’ ಮಾಡುವವಳು. ನಿಮಗೆ ವಿವಾಹಪೂರ್ವ ದೇಹ ಸಂಬಂಧವೂ ತ್ಯಾಜ್ಯವಾಗಿಲ್ಲ. ಎಷ್ಟೋ ಜನ ಐದು ಆರು ಮದಿವೆ ಮಾಡಿಕೊಳ್ಳುತ್ತಾರೆ. ನಮ್ಮ ಸಾಮಾಜಿಕ ಮಾನದಂಡದಿಂದ ನೋಡಿದರೆ ಇವರೆಲ್ಲ ವೇಶ್ಯೆಯರೇ! ಎಂದು ರೊಚ್ಚು ತುಂಬಿ ಒಟ್ಟರಿಸಿ ಹೇಳಿದೆ.

ಈ ಆರ್ಭಟಕ್ಕೆ ಜಿಮ್ ತಯಾರಿದ್ದಿಲ್ಲವಾದ್ದರಿಂದ ಬೆಚ್ಚಿಬಿದ್ದ. ನನ್ನ ವಾದ ಸರಣಿ ಅವನಿಗೆ ಸರಿಬರದಿದ್ದರೂ ಅದನ್ನು ಅಲ್ಲಗಳೆಯುವ ಧೈರ್ಯವಿರಲಿಲ್ಲ. ಅಂತೆಯೇ,

“ನೀನು ಹೇಳುವುದರಲ್ಲಿ ಸತ್ಯಾಂಶವಿರಬಹುದು. ನೀನು ನಮ್ಮ ದೇಶದ ಪ್ರತಿಯೊಂದನ್ನೂ ಸೂಕ್ಷ್ಮವಾಗಿಯೇ ನೋಡಿರುತ್ತೀ. ಬರೇ ಕೊಳಚೆಯನ್ನಷ್ಟೇ ಎತ್ತಿತೋರಿಸುತ್ತೀ. ಅಂದರೆ ನಮ್ಮ ದೇಶದಲ್ಲಿ ಒಳ್ಳೆಯದು ಏನೂ ಇಲ್ಲವೇ?” ಎಂದು ಮೆತ್ತಗಾಗಿ ಕೇಳಿದ.

“ಪ್ರತಿಯೊಂದು ದೇಶದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆದರೆ ಹೀಗಿರುತ್ತದೆ ಎನ್ನುವ ವಿವೇಕ ಬಹುಮಟ್ಟಿಗೆ ನಿಮ್ಮಲ್ಲಿ ಇಲ್ಲ. ಅದೇ ಹೀಗೆಲ್ಲ ಕೇಳುವುದಕ್ಕೆ ಕಾರಣ. ಇರಲಿ, ನಾನು ನಿಮ್ಮ ದೇಶದ ಬಗ್ಗೆ ಕೆಟ್ಟದ್ದು ಎಂದು ಹೇಳಿದ್ದನ್ನು ಬಿಟ್ಟರೆ ಉಳಿದದ್ದೆಲ್ಲ ಉತ್ತಮವಾಗಿದೆ. ನಮ್ಮ ದೇಶದಲ್ಲೂ ಕೆಟ್ಟದಿದೆ; ನಿಮ್ಮ ದೇಶದಲ್ಲೂ ಕೆಟ್ಟದಿದೆ. ಆದರೆ ನಿಮ್ಮಲ್ಲಿಯ ಒಳ್ಳೆಯ ಅಂಶವನ್ನೇ ತೆಗೆದುಕೊಂಡು ಹೋಗಬೇಕೆಂದು ನಾನಿಲ್ಲಿಗೆ ಬಂದಿರುವೆ. ನಿಮ್ಮ ಕಾರ್ಯತತ್ಪರತೆ, ಕಷ್ಟಸಹಿಷ್ಣುತೆ, ಶ್ರಮಗೌರವ, ಸರಳತೆ, ಸಮಾನತೆ (ಒಂದು ದೃಷ್ಟಿಯಿಂದ), ಕೆಲಸ–ವಿಶ್ರಾಂತಿಗಳ ಸಮತೋಲ ನಿಮ್ಮದು. ಎನ್ನುವ ಬಗ್ಗೆ ನಿಮಗೆ ಇರುವ ಅಭಿಮಾನ (ಪರಿಮಿತಾರ್ಥದಲ್ಲಿ) ಇವೆಲ್ಲ ನಿಜಕ್ಕೂ ಕಲಿಯತಕ್ಕ ಗುಣಗಳಾಗಿವೆ.”

ಇಷ್ಟು ಹೊತ್ತಿನ ತನಕ ನಮ್ಮ ವಾದವಿವಾದದಲ್ಲಿ ಭಾಗವಹಿಸದ ಟೆಡ್ನು ಒಮ್ಮೆಲೆ,

“ಕ್ರಿಶ್, ಭಾರತೀಯರ ಕೆಲವು ಅವಗುಣಗಳನ್ನು ನಾವು ತಿಳಿದುಕೊಳ್ಳಬಹುದೇ?” ಎಂದು ನಡುವೆಯೆ ಬಾಯಿ ಹಾಕಿ ಕೇಳಿದ.

ಅದಕ್ಕೆ ನಾನೆಂದೆ:

“ಭಾರತೀಯರು ಇತರರಿಂದ ಒಳ್ಳೆಯ ಗುಣಗಳನ್ನು ತೆಗೆದುಕೊಳ್ಳುವದು ಕಡಿಮೆ. ಬ್ರಿಟಿಶ್ರ ಕಾಲದಲ್ಲಿ ಬೀಜ ಬಿದ್ದು, ಮೊಳಕೆಯೊಡೆದ ಲಂಚಗುಳಿತನ ಕಾರ್ಯದ ಬಗ್ಗೆ ಅಲಕ್ಷ್ಯತೆ ಇವೇ ಈಗ ಹೆಮ್ಮರವಾಗಿ ಬೆಳೆದು ನಿಂತಿವೆ, ಕಾಯದೆಯನ್ನು ಪಾಲಿಸುವದಕ್ಕಿಂತ. ಮುರಿಯುವದಕ್ಕೇ ಹೊಂಚು ಹಾಕುತ್ತಿರುತ್ತಾರೆ. ಭಾರತದ ಮುಖಂಡರೆನಿಸಿಕೊಂಡವರು. ಸಮಾಜದ ಅಡಿಗಲ್ಲಾದ ಪ್ರತಿಷ್ಠಿತ ನಾಗರಿಕರು–ಇಂಥವರೇ ದುಡಿಯದೆ ಹೇಗೆ ಐಶ್ವರ್ಯ ಸಂಪಾದಿಸಬೇಕೆಂಬುದಕ್ಕೆ ಯಾವ ಹೀನಕೃತ್ಯವನ್ನೂ (ರಾಜಕಾರಣ ಎಂಬ ಹೆಸರಿನಿಂದ) ಮಾಡಲು ಸಿದ್ಧರಿರುತ್ತಾರೆ. ಇದರಿಂದಾಗಿ ಅಧಿಕಾರದಲ್ಲಿರುವವರ ಒಂದು ಪರಿವಾರವೇ ಬೆಳೆದುಬರುತ್ತಿದೆ. ಎಲ್ಲೆಲ್ಲೂ ಈ ಪರಿವಾರದವರ ಕೈವಾಡ ಕಂಡುಬರುತ್ತಿದೆ. ಜನ ಇವರನ್ನೇ ಅನುಸರಿಸುತ್ತಾರೆ. ಇವರ ನೆರಳು ಎಲ್ಲವನ್ನು ಮುಸುಕಿದೆ. ಬಡವರು ಇನ್ನೂ ಬಡವರಾಗುತ್ತ ನಡೆದಿದ್ದಾರೆ. ಮಧ್ಯಮವರ್ಗ ಇವರ ದಬ್ಬಾಳಿಕೆಗೆ ಸಿಕ್ಕು ನಿರ್ನಾಮವಾಗತೊಡಗಿದೆ. ದೇಶದ ಸುಧಾರಣೆಗೆಂದು ಖರ್ಚು ಮಾಡುವ ಕೋಟಿ ಕೋಟಿಗಟ್ಲೆ ರೂಪಾಯಿಗಳಲ್ಲಿ ಅರ್ಧದಷ್ಟು ಸರಳವಾಗಿ ಲಂಚಖೋರನ ಲಾಭಬಡಕರ ಕಿಸೆಗೆ ಹೋಗುತ್ತದೆ. ಜನಸಾಮಾನ್ಯರು ಹೊಸ ಜೀವನ, ಹೊಸ ವಿಚಾರ, ವಿಜ್ಞಾನದ ಹೊಸ ಸಲಹೆಗಳನ್ನು ಸ್ವೀಕರಿಸುವುದಿಲ್ಲ. ಶತಮಾನಗಳಿಂದ ಬಂದ ಜಾತೀಯತೆ, ಆಚಾರವಿಚಾರಗಳನ್ನೇ ಮೂಢತೆಯಿಂದ ಬೆಳೆಸಿಕೊಂಡು ಬರುತ್ತಿದ್ದಾರೆ. ನಮ್ಮ–ನಿಮ್ಮ ಉತ್ತಮ ವಿಚಾರ–ಕೃತಿಗಳನ್ನು ಕೂಡಿಸಿದಾಗಲೇ ಆದರ್ಶ ಸಮಾಜ ಹುಟ್ಟೀತು ಎನಿಸುತ್ತದೆ. ಆದರೆ ಒಂದು ಸಂಶಯವೂ ಇದೆ ನನಗೆ. ಎಲ್ಲ ಕಡೆಯಿಂದಲೂ ಬರೇ ಉತ್ತಮತ್ವವನ್ನಷ್ಟೇ ಕಿತ್ತಿ ತಂದು ಒಂದೇ ಕಡೆಯಲ್ಲಿ ಕೂಡಿ ಹಾಕಲು ಬರುತ್ತದೋ ಇಲ್ಲವೋ? ಈ ಪ್ರಪಂಚದಲ್ಲಿ ಒಳ್ಳೆಯದು ಕೆಟ್ಟದ್ದು ಬಿಡಿಸಲಿಕ್ಕೆ ಬಾರದಂತೆ ಬೆಸಗೊಂಡು ಬಿಟ್ಟಿವೆಯೋ ಏನೋ! ಅಂತೇ ಎಷ್ಟೇ ಬದಲಾದರೂ ಅದು ಆವರಣ ಮಾತ್ರ–ಇದು ಎಲ್ಲೋ ನನ್ನ `ಒಳಗಿನ ಒಳ ದನಿಯೊಂದು’ ಆದರೂ ನಿಮ್ಮ ಉತ್ತಮ ಅಂಶಗಳನ್ನು ಕಲಿಯಲೆಂದೇ ನಿಮ್ಮ ದೇಶಕ್ಕೆ ಧಾವಿಸಿ ಬಂದಿದ್ದೇನೆ.”

ಅಮೇರಿಕನ್ನರದು ಸರಳ ಮನೋವೃತ್ತಿ. ಅವರಿಗೆಲ್ಲ ಪ್ರತ್ಯಕ್ಷ ಕಂಡದ್ದೇ ಸತ್ಯ. ಕಾಣದ್ದು ಮಿಥ್ಯ. ತಿಳಿಯಲಾಗದ್ದನ್ನು ಅರಿಯುವ ಗೋಜಿಗೆ ಹೋಗುವವರಲ್ಲ. ಹೀಗಾಗಿ ಚಿಕ್ಕಮಕ್ಕಳಿಗೆ ಹೇಳುವಂತೆ ಉದಾಹರಣೆ ಸಹಿತ ಅವರಿಗೆ ತಿಳಿಹೇಳಿ ಮನವೊಲಿಸುವುದು ಸುಲಭ. ಹೀಗೆಲ್ಲ ನಾನು ಅವರ ದೇಶದ ಗುಣಗಳನ್ನು, ಒಳ್ಳೇತನವನ್ನು ಎತ್ತಿ ಹೇಳಿದ್ದು ಅವರ ಮೇಲೆ ಪರಿಣಾಮ ಮಾಡಿದಂತೆ ತೋರುತ್ತದೆ.

“ಕ್ರಿಶ್ ಭಾರತದಲ್ಲಿ ನಿನ್ನಂತಹ ಪ್ರಗತಿಪರ–ವಿಚಾರಶೀಲರು ಎಷ್ಟು ಜನ ಇದ್ದಾರೆ? ಬೇರೆ ಬೇರೆ ಪಾರ್ಟಿಗಳಲ್ಲಿ ಎಷ್ಟೋ ಭಾರತೀಯರನ್ನು ಈ ಮೊದಲು ಭೆಟ್ಟಿಯಾಗಿದ್ದೇವೆ. ಅವರೆಲ್ಲ ನಮ್ಮ ದೇಶವನ್ನು, ಸಂಸ್ಕೃತಿಯನ್ನು ಮುಕ್ತಕಂಠದಿಂದ ಹೊಗಳುತ್ತಾರೆ. ನಮ್ಮ ಬಗ್ಗೆ ನಿರ್ದಾಕ್ಷಣ್ಯ ಅಭಿಪ್ರಾಯ ಕೊಟ್ಟವನು ನೀನೊಬ್ಬನೇ ನೋಡು” ಎಂದು ಬಾಬ್ ಹೇಳಿದ.

“ಕ್ರಿಶ್, ನಿನ್ನ ವಿಚಾರಗಳನ್ನೆಲ್ಲ ಹೀಗೆ ತಿಳಿದುಕೊಳ್ಳಲೆಂದೇ ನಿನ್ನನ್ನು ಕಾಡುತ್ತೇವೆ. ಕೆರಳಿಸದೇ ನೀನು ವಾದಕ್ಕಿಳಿಯುವುದು ಕಡಿಮೆ. ನಮ್ಮಿಂದ ತೊಂದರೆಯಾದರೆ ಕ್ಷಮಿಸು” ಎಂದು ಜಿಮ್ ಹೇಳಿದ. ಟೆಡ್ ಇವನನ್ನೇ ಬೆಂಬಲಿಸಿದ.

ಅಮೇರಿಕನ್ ಶಾಲೆ–ಕಾಲೇಜುಗಳು ಸೋಮವಾರದಿಂದ ಶುಕ್ರವಾರದವರೆಗೆ ನಡೆಯುತ್ತವೆ. ಹೆಚ್ಚಾಗಿ ವರ್ಗಗಳು ಬೆಳಿಗ್ಗೆ ಎಂಟರಿಂದ ಸಾಯಂಕಾಲ ಐದರ ವರೆಗೆ ನಡೆದರೂ, ರಾತ್ರಿ ಕ್ಲಾಸು ತೆಗೆದುಕೊಳ್ಳುವದೂ ವಿರಳವಲ್ಲ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಯೋಗಶಾಲೆಯ ಕೀಲಿ–ಕೈ ಕೊಟ್ಟಿರುತ್ತಾರೆ. ಆದ್ದರಿಂದ ಬೇಕೆನಿಸಿದಾಗ ಅಲ್ಲಿ ಹೋಗಿ ಓದಬಹುದು. ಕೆಲಸ ಮಾಡಬಹುದು. ಶನಿವಾರ ರವಿವಾರ, ಬಹುಸಂಖ್ಯಾತ ಅಮೇರಿಕನ್ನರಿಗೆ ರಜೆ. ಶಾಲೆ, ಕಾಲೇಜುಗಳಿಗೆ ಸಹ. ವಾರದಲ್ಲಿ ಐದು ದಿನ ಚೆನ್ನಾಗಿ ದುಡಿದು, ವಾರಂತ್ಯವನ್ನು ಮೋಜಿನಲ್ಲಿ ಕಳೆಯುತ್ತಾರೆ. ಅಮೇರಿಕನ್ ಅಲ್ಲದ ನಾನು ಈ ಎರಡು ದಿನಗಳಲ್ಲಿ ಕಾಲೇಜಿಗೆ ಹೋಗಿ ಏನಾದರೂ ಕೆಲಸ ಮಾಡುತ್ತಿದ್ದೆ. ಒಂದು ರವಿವಾರ ಸಹಪಾಠಿ ಟೆರಿ ತನ್ನ ಸ್ನೇಹಿತೆಯೊಂದಿಗೆ ಅದೇಕೋ ಕಾಲೇಜಿಗೆ ಬಂದ. ನನ್ನನ್ನು ನೋಡಿ ವಿಸ್ಮಯಗೊಂಡ. ತನ್ನ ಗೆಳತಿಯ ಪರಿಚಯ ಮಾಡಿಕೊಟ್ಟ. `ಹಾಯ್ ಹಾಯ್’ಗಳು ಮುಗಿದ ನಂತರ.

“ಕ್ರಿಶ್, ಬಹಳ ದಿನಗಳಿಂದ ನಿನಗೊಂದು ಪ್ರಶ್ನೆ ಕೇಳಬೇಕೆಂದಿದ್ದೆ. ನೀನು ಮುಚ್ಚುಮರೆಯಿಲ್ಲದೆ ಉತ್ತರಿಸುವದಾದರೆ ಮಾತ್ರ ಈಗ ಕೇಳುತ್ತೇನೆ” ಎಂದ. ಅದಕ್ಕೆ ನಾನು,

“ಕೇಳಲ್ಲ, ಹೇಳಬಾರದ್ದು ನನ್ನಲ್ಲಿ ಏನೂ ಇಲ್ಲ” ಎಂದೆ. ಸುರುವಾಯಿತು ಪ್ರಶ್ನೋತ್ತರ.

“ಎಷ್ಟೊಂದು ದಿನಗಳಿಂದ ನಾನು ನೋಡುತ್ತಿದ್ದೇನೆ.ಒಮ್ಮೆ ಕೂಡ ನಿನ್ನನ್ನು ಒಬ್ಬ ಗೆಳತಿಯ ಸಂಗಡ ನೋಡಲಿಲ್ಲ. ಅದು ಹೇಗೆ? ನೀನು ಸ್ತ್ರೀ–ವೈರಿಯೇ?”

“ನಾನು ಸ್ತ್ರೀ–ವೈರಿಯಲ್ಲದಿದ್ದರೂ ಸ್ತ್ರೀ–ಭಜಕನಲ್ಲ. ಮದಿವೆಯ ಮೊದಲು ಕುಮಾರಿಯೊರಡನೆ ಕೆಲೆಯುವುದು, ತಿರುಗುವುದು ಮುಂತಾದ್ದನ್ನು ನಮ್ಮ ಸಮಾಜ ಒಪ್ಪುವುದಿಲ್ಲ. ಇಲ್ಲಿ ನಮ್ಮ ಸಮಾಜದ ಅಡ್ಡಿಗಳಿಲ್ಲದಿದ್ದರೂ ಅದರ ಕಟ್ಟು–ನಿಟುಗಳನ್ನು ನಾನು ಮನಸಾ ಒಪ್ಪಿಕೊಂಡಿದ್ದರಿಂದ ಅವನ್ನು ಎಲ್ಲಿಯೂ ಮುರಿಯುವ ಮನಸ್ಸು ನನಗೆ ಇಲ್ಲ. ಇಲ್ಲಿಯ ಕ್ಷಣಿಕ ಆನಂದದ ಬೆನ್ನುಹತ್ತಿದರೆ ಜೀವನದ ಆನಂದ ನನ್ನಿಂದ ದೂರವಾಗುವ ಸಂಭವವಿದೆ.”

“ರೋಮ್ದಲ್ಲಿದ್ದಾಗ ರೋಮನ್ನಂತಿರು” ಎಂದು ಬಲ್ಲವರು ಹೇಳುವದಿಲ್ಲವೇ?”

“ಹೂಂ; ದುರದೃಷ್ಟದಿಂದ ರೋಮಿಗೆ ಹೋದವರು ರೋಮನ್ನರ ಕೆಟ್ಟ ಚಾಳಿಗಳನ್ನಷ್ಟೇ ಕಲಿತು ಬರುತ್ತಾರೆ. ನಾನು ಈ ಮೊದಲೇ ಹೇಳಿದಂತೆ ಅಮೇರಿಕನ್ನರ ಉತ್ತಮಾಂಶಗಳನ್ನಷ್ಟೆ ಕಲಿಯಲು ಬಂದವ.”

“ಹುಡುಗಿಯರೊಡನೆ ಕಲೆಯುವುದರಲ್ಲಿ ತಪ್ಪೇನಿದೆ? ನೀನೇನನ್ನು ಕಳೆದುಕೊಳ್ಳುತ್ತಿದ್ದೀಯೆಂಬ ಕಲ್ಪನೆಯೇ ನಿನಗಿದ್ದಂತಿಲ್ಲ. ಇದಕ್ಕಾಗಿ ನೀನು ಮುಂದೆ ಪಶ್ಚಾತ್ತಾಪ ಪಡಬೇಕಾದಿತು. ಮೆಚ್ಚಿ ಬಂದವರೊಡನೆ ಸಮಯ ಕಳೆಯುವದರಲ್ಲಿ ಸ್ವರ್ಗಸುಖವಿದೆ, ಗೊತ್ತೆ? ನಿನಗೆ ಶ್ವೇತವರ್ಣಿಯ ಸ್ನೇಹಿತೆ ಸೇರದಿದ್ದರೆ ನಿಮ್ಮ ಜನರೂ, ಅವರಲ್ಲಿ ಅಂದಚೆಂದದ ಹುಡುಗಿಯರೂ ವಿಶ್ವವಿದ್ಯಾಲಯದಲ್ಲಿ ಸಾಕಷ್ಟಿದ್ದಾರಲ್ಲ?–ಅವರ ಸ್ನೇಹವನ್ನೇಕೆ ಬೆಳಸಬಾರದು?”

ಈ ಮಾತಿಗೆ ನಾನು ಗಹಗಹಿಸಿ ನಕ್ಕೆ; ಮತ್ತು ಹೇಳಿದೆ:

“ಟೆರಿ, ನಾನು ಏನು ಕಳೆದುಕೊಳ್ಳುತ್ತಿದ್ದೇನೆಂಬ ಕಲ್ಪನೆಯೇ ಇಲ್ಲದ್ದರಿಂದ ಅಸಂತೋಷಕ್ಕೆ ಆಸ್ಪದವೆಲ್ಲಿ? ಇಲ್ಲಿಯ ಭಾರತೀಯ ಹುಡುಗಿಯರು ಚೆಂದ ಕಂಡರೇ ನಿನಗೆ? ಬಹುಶಃ ಅವರ ಬಣ್ಣಬಣ್ಣದ ಸೀರಿಗೆ ಮರಳಾಗಿರಬೇಕು ನೀನು! ನಿನ್ನ ಸ್ನೇಹಿತೆ ಅದೇ ಸೀರೆಯಲ್ಲಿ ದೇವಲೋಕದ ಅಪ್ಸರೆಯಂತೆ ಶೋಭಿಸಬಹುದು. (ಇದನ್ನು ಹೇಳುವಾಗ ನನ್ನ ತಲೆಯಲ್ಲಿ ಇದ್ದಕ್ಕಿದ್ದಂತೆ ಯಾಕೋ ಏನೋ ತಟ್ಟನೆ “ಮಲಯೇ ಭಿಲ್ಲ … ಚಂದನತುರಕಾಷ್ಠಮಿಂಧನಂ ಕುರುತೇ … ಅತಿಪರಿಚಯಾದಲಜ್ಞ … ಅನಾದರೋ ಭವತಿ … ” ಹೀಗೆ ಎಲ್ಲಿಯದೋ ಒಂದು ಸಂಸ್ಕೃತ ಶ್ಲೋಕದ ತುಂಡು ತುಂಡು ಪಾದಗಳು ಒಡಮೂಡಿದವು … ಏನು ಸಂಬಂಧವೋ ಆಗ ತಿಳಿಯಲಿಲ್ಲ.) ಅದಕ್ಕೆ ದೃಷ್ಟಿ, ಸಂಸ್ಕಾರ ಬೇಕು. (ಇಷ್ಟು ಹೇಳಿದಕ್ಕೇ ಅವನ ಗೆಳತಿಯ ಮುಖ ಹಿಗ್ಗಿನಿಂದ ಇಷ್ಟಗಲವಾಯಿತು. ತನಗೊಂದು ಸೀರೆ ಬೇಕೆಂದು ಕಣ್ಣಿನಿಂದಲೇ ತನ್ನ ಗೆಳೆಯನಿಗೆ ಸೂಚಿಸಿದಳು!) ನಮ್ಮಲ್ಲಿ ಸುಂದರಿಯರಾದ ಹುಡುಗಿಯರು ಮಾಧ್ಯಮಿಕ ಶಿಕ್ಷಣ ಮುಗಿಸುವ ಮೊದಲೇ ಗೃಹಣಿಯರಾಗುತ್ತಾರೆ. ಸಾಧಾರಣ ರೂಪವತಿಯರು ಕಾಲೇಜಿನಲ್ಲಿದ್ದಾಗಲೋ ಅಥವಾ ಕಾಲೇಜ ಶಿಕ್ಷಣ ಮುಗಿದ ಮೇಲೋ ಮದಿವೆಯಾಗುತ್ತಾರೆ. ರೂಪದಲ್ಲಿ ಎಡ ಇದ್ದವರು ಮಾಟ್ರ ಇನ್ನೂ ಶಿಕ್ಷಣ ಮುಂದುವರಿಸುತ್ತಾರೆ. ಇಲ್ಲಿ ಬಂದಿರುವವರು. ಬರುವವರು ಈ ಕೊನೇ ವರ್ಗಕ್ಕೆ ಸೇರಿದವರು. ಇಂತಹರೊಡನೆ ಸ್ನೇಹ ಬೆಳಸಬೇಕೇ?”

ಬಾಹ್ಯಸೌಂದರ್ಯಕ್ಕೆ ಅಗ್ರಸ್ಥಾನ ಕೊಡುವ ಅಮೇರಿಕನ್ ಜನಾಂಗಕ್ಕೆ ಸೇರಿದ ನನ್ನ ಗೆಳೆಯನಿಗೆ ಈ ಮಾತು ಒಪ್ಪಿಗೆಯಾಯಿತು. ನಾನು ಪಾರಾದೆ ಎಂದು ತಿಳಿದುಕೊಂಡಿದ್ದೆ. ಆದರೆ ಆತ ಮಾತು ಬದಲಿಸಿ.

“ಹುಡುಗಿಯರ ಸಹವಾಸವಿಲ್ಲದಿದ್ದರೆ ಹೋಗಲಿ, ನೀನು ಸಿಗರೇಟೂ ಸೇದುವುದಿಲ್ಲ, ಸೆರೆ ಕುಡಿಯುವುದಿಲ್ಲ, ಸಿನೇಮಾ ನೋಡುವುದಿಲ್ಲ, ವಾರಾಂತ್ಯದಲ್ಲಿ ವಿಶ್ರಮಿಸುವುದಿಲ್ಲ ಕೂಡ, ಇಂತಹ ನೀರಸ, ಕಷ್ಟಮಯ ಜೀವನ ನಡೆಸುವದಿದ್ದರೆ ಜೀವಿಸಿಯಾದರೂ ಫಲವೇನು? ನಿನ್ನಂತೆ ಬಾಳುವದಿದ್ದರೆ ನಾನು ಸತ್ತು ಎಷ್ಟೋ ವರ್ಷಗಳಾಗುತ್ತಿದ್ದವು!” ಎಂದು ತಾನು ವಾದದಲ್ಲಿ ಗೆದ್ದೆನೆಂಬ ಹೆಮ್ಮೆಯಿಂದ ತನ್ನ ಗೆಳತಿಯನ್ನು ಮೃದುವಾಗಿ ಚುಂಬಿಸಿದ.

ನಾನೂ ಸುಮ್ಮನಿರಲಾರದೇ-

“ಅಮೇರಿಕನ್ನರು ತುಂಬ ವ್ಯಾಪಾರಿ–ಮನೋವೃತ್ತಿಯುಳ್ಳವರು. ಪ್ರತಿಯೊಂದು ಕಾರ್ಯಕ್ಕೂ ತನಗೇನು ಲಾಭ ಸಿಗುತ್ತದೆ ಎಂದೇ ಪ್ರಾರಂಭಿಸುತ್ತಾರೆ. ಇನ್ನೊಬ್ಬರಿಗೆ ಒಳಿತು ಮಾಡುವುದಿರಲಿ, ತನಗೆ ಲಾಭವಿಲ್ಲದ ಯಾವ ಕೆಲಸಕ್ಕೂ ಕೈಹಾಕುವುದಿಲ್ಲ. ಮೊನ್ನೆ ನ್ಯೂಯಾರ್ಕದಲ್ಲಿ ನಾಲ್ವತ್ತು ಕುಟುಂಬಗಳು ವಾಸಿಸುವ ಕಟ್ಟಡದಲ್ಲಿ ಯುವತಿಯೋರ್ವಳನ್ನು ತಿವಿತಿವಿದು ಒಬ್ಬ ಕೊಲೆಗಡುಕ ಕೊಲ್ಲಲಿಲ್ಲವೇ? ಒಬ್ಬರಾದರೂ ಅವಳನ್ನು ಬದುಕಿಸುವ ಸಾಹಸ ಮಾಡಲಿಲ್ಲ. ಪೋಲಿಸರಿಗೂ ಪೋನ ಮಾಡುವ ಬುದ್ಧಿ ಹೊಳೆಯಲಿಲ್ಲ. ಇಂತಹದರಲ್ಲಿ ಒಬ್ಬರಿಗೆ ಸಹಾಯ ಮಾಡಹೋದರೆ ಕೋರ್ಟು–ಕಚೇರಿಗಳಿಗೆ ಎಡತಾಕಬೇಕಾಗುವದೆಂದು ಅಳಕುತ್ತಾರಂತೆ ನಿಮ್ಮ ಜನ! ಅದೇ ನಮ್ಮ ಭಾರತೀಯನನ್ನು ನೋಡು ಸಾವಿರಾರು ಮೈಲು ದೂರದ ದೇಶಕ್ಕೆ ಕಲಿಯಲೆಂದು ಬಂದ ವಿದ್ಯಾರ್ಥಿಯೊಬ್ಬ ಆರೇಳು ವರ್ಷದ ಮೂಕ, ಕಿವುಡ ಮಗುವೊಂದನ್ನು ಬದುಕಿಸ ಹೋಗಿ ತಾನೇ ಮುಳಗಲಿಲ್ಲವೆ?” 1 ತ್ಯಾಗದಲ್ಲಿ ಪರಮ ಸುಖವಿದೆಯೆಂದು ನಮ್ಮ ಧರ್ಮ ಬೋಧಿಸುತ್ತದೆ. ಮೊನ್ನೆ ನಿಮ್ಮ ಊರಿನಲ್ಲಾದ ಘಟನೆಯನ್ನು ತೆಗೆದುಕೊಳ್ಳಲ್ಲ. ಹತ್ತು ವರ್ಷದ ಮಂಕು ಹುಡುಗನೊಬ್ಬ ಎತ್ತರವಾದ ಕಟ್ಟಡದ ಮೇಲಿನಿಂದ ಕೆಳಗೆ ಧುಮುಕುತ್ತೇನೆಂದಾಗ ಕಟ್ಟಡದ ಕೆಳಗೆ ನಿಂತ ಜನ “ಜಿಗಿಯೋ ಹೇಡಿ!” ಎಂದು ಪ್ರೋತ್ಸಾಹಿಸಬೇಕೆ? ಅವನಿಗೆ ರಕ್ಷಣೆ ನೀಡುವುದು ದೂರವೇ ಉಳಿಯಿತು … ” ಎಂದು ಇನ್ನೂ ಏನೇನೋ ಹೇಳಬೇಕು ಎಂದಿದ್ದೆ, ಆದರೆ ತನ್ನ ಪ್ರಿಯನ ಸೋಲು ಆತನ ಗೆಳತಿಗೆ ಅಸಮಾಧಾನವನ್ನುಂಟುಮಾಡಿರಬೇಕು. ಅಂತೆಯೇ ಆಕೆ ಮಾತಿನ ಧಾಟಿಯನ್ನು ಬಲು ಬೇಗ ಬದಲಿಸಿ–

“ಕ್ರಿಶ್, ನಿಮ್ಮ ದೇಶದಲ್ಲಿ ತರುಣ–ತರುಣಿಯರು ಸುಲಭವಾಗಿ ಬೆರೆಯುವಂತಿಲ್ಲವೆಂದು ಹೇಳಿದಿ. ಹಾಗಾದರೆ ಅವರ ಸಾಮಾಜಿಕ–ಜೀವನವೇನು? (social life), ತರುಣರು ತರುಣರೊಡನೆ, ತರುಣಿಯರು ತರುಣಿಯೊರಡನೆ ನೃತ್ಯ ಮಾಡುವರೇನು ಮತ್ತೆ?” ಎಂದು ದಿಗಿಲುಗೊಂಡು ಕೇಳಿದರು, ಈ ಪ್ರಶ್ನೆಗೆ ಎಲ್ಲರೂ ನಕ್ಕೆವು.

ನನ್ನ ವಾದವನ್ನೆ ಮುಂದುವರಿಸುತ್ತ ಹೇಳಿದೆ.

“ನಿಮಗೆ ನಿಮ್ಮದೊಂದು ಸಮಾಜ ಬಿಟ್ಟರೆ ಉಳಿದವುಗಳ ಕಲ್ಪನೆಯಿಲ್ಲ. ಅವನ್ನು ತಿಳಿದುಕೊಳ್ಳಬೇಕೆಂಬ ಜಿಜ್ಞಾಸೆ ಕೂಡ ಇಲ್ಲ. ಇಡೀ ಜಗತ್ತೇ ನಿಮ್ಮ ನೆರಳಾಗಿ ಬಾಳಬೇಕು ಎನ್ನುತ್ತೀರಿ. ಹೆಣ್ಣನ್ನೊಂದು ಕಾರಿನಲ್ಲಿ ಹತ್ತಿಸಿಕೊಂಡು ಹೋಗಿ ಚಲನಚಿತ್ರಕ್ಕೊ, ಹೋಟೆಲಿಗೊ, ನೃತ್ಯಕೂಟಕ್ಕೊ, ಹರಟೆಗೊ ಕರೆದೊಯ್ದು ಅಲ್ಲಿ ನಿಮ್ಮಂತೆ ಬಂದ ಇನ್ನೂ ಹಲವಾರು ಸ್ನೇಹಿತರೊಂದಿಗೆ ಹಣ ಮತ್ತು ವೇಳೆಯನ್ನು ಕಳೆದರೆ (ಹಾಳು ಮಾಡಿದರೆ) ತೀರಿತು, ನಿಮಗದು ಸಾಮಾಜಿಕ–ಜೀವನ, ಬೌದ್ಧಿಕ–ಜೀವನ ಎಂದು, ಅವಿಭಾಜ್ಯವಾಗಿರಬೇಕಾದ ಜೀವನ ಬೇರೆಬೇರೆಯಾಗಿ ಪಾತ್ರಸ್ಥವಾಗಿದೆ. ನಮ್ಮಲ್ಲಿ ಜೀವನ ಒಂದೆ. ಅದರಲ್ಲಿಯೆ ಇವೆಲ್ಲಾ ಹಾಸುಹೊಕ್ಕಾಗಿವೆ! ನಮ್ಮ ಪೂರ್ವಜರು ಧರ್ಮದಲ್ಲಿಯೇ ನೈತಿಕ, ಸಾಮಾಜಿಕ ಬೌದ್ಧಿಕ ಅಂಶಗಳನ್ನು ಸೇರಿಸಿಬಿಟ್ಟಿದ್ದಾರೆ. ಅಂತೆಯೇ ನಮಗೆ ಒಳ್ಳೆಯ ಜೀವನವೇ ಧರ್ಮವಾಗಿದೆ; ಧರ್ಮವೇ ಜೀವನವಾಗಿದೆ. ನಿಮ್ಮಂತೆ ರವಿವಾರ ಅಷ್ಟೇ ಚರ್ಚಿಗೆ ಹೋಗಿ ಎರಡು ಮೂರು ಗಂಟೆಗಳಲ್ಲಿ ಮರೆಯುವ ಧರ್ಮವಾಗಿಲ್ಲ ನಮ್ಮದು; ಯಾವಾಗಲೂ ಅದು ನಮ್ಮ ಹಿಂದೆ, ನಮ್ಮ ಮುಂದೆ, ನಮ್ಮ ಒಳಗೆ ಇರುವಂಥದು.”

ಅಲ್ಲಿಂದ ಟೇರಿ ಕೇಳಿದ:

“ಅಂದರೆ ನಿಮ್ಮ ಧರ್ಮಶಾಸ್ತ್ರದಲ್ಲಿ ಬರೆದದ್ದನ್ನೆಲ್ಲಾ ಪಾಲಿಸಬೇಕೇ? ಅಯ್ಯಯ್ಯೊ! ಬೈಬಲ್ದಲ್ಲಿ ಬರೆದದ್ದೆಲ್ಲಾ ರೂಢಿಯಲ್ಲಿ ತರುವದಾಗಿದ್ದರೆ ನಾನು ಹುಟ್ಟುವ ಮೊದಲೇ ಸಾಯುತ್ತಿದ್ದೆ!”

ಕಾಲದೊಡನೆ ಸೆಣೆಸಾಡುವ ಅಮೇರಿಕನ್ನರಿಗೆ ಧರ್ಮದ ಬಗ್ಗೆ ಮಾತಾಡುವುದೆಲ್ಲ ವ್ಯರ್ಥ ಎನಿಸುತ್ತದೆ; ಗೊಡ್ಡು ಎನಿಸುತ್ತದೆ. ಅಂತೆಯೇ ಹೀಗೆ ಗೊಡ್ಡು ಹರಟುವದರಲ್ಲಿ ಸ್ವಾರಸ್ಯವಿಲ್ಲೆಂದು ಇಬ್ಬರೂ ಆ ಜಾಗ ಬಿಟ್ಟೇ ಎದ್ದರು. ಹೋಗುವಾಗ ಟೆರಿಯ ಗೆಳತಿ.

“ಕ್ರಿಶ್, ಜಗತ್ತಿನ ಎಲ್ಲ ಧರ್ಮಶಾಸ್ತ್ರಗಳಲ್ಲಿ ಬರೆದದ್ದೆಲ್ಲಾ ಪುಸ್ತಕದ ಬದನೇಕಾಯಿ, ಅವೆಲ್ಲ ಅಮೂರ್ತ–ತತ್ವಜ್ಞಾನದ ಜಡ–ಮುದ್ದೆಗಳು. ನಮ್ಮ ನಿಮ್ಮ ಸದ್ಯದ ಜೀವನಕ್ಕೆ ನಿರುಪಯೋಗಿಯಾದವುಗಳು ಅಲ್ಲವೆ?” ಎಂದು ಎಲ್ಲ ಧರ್ಮಗಳ ಮೇಲೂ ತನ್ನ ಕೊನೆಯ ತೀರ್ಪನ್ನು ಕೊಟ್ಟು ತನ್ನ ಪ್ರಿಯತಮನ ಸೊಂಟವನ್ನು ಬಳಸಿಕೊಂಡು ಬಳಕುತ್ತ ನಡದೇಬಿಟ್ಟಳು.

ಹೊರಟು ಹೋಗುವ ಅವರನ್ನೇ ನಾನು ನೋಡುತ್ತಿದ್ದರೂ ಮನಸ್ಸೆಲ್ಲೋ ಹೌದು ಅಲ್ಲ`ದರ’ ಬೆನ್ನುಹತ್ತಿ ಹೋಗಿತ್ತು.

ಒಮ್ಮೆ ಮಾತಿಗೆ ಮಾತು ಮಾತು ಬಂದಾಗ, ಭಾರತೀಯರು ಎಷ್ಟು ವಯಸ್ಸಿಗೆ ಮದುವೆಯಾಗುತ್ತಾರೆ ಇತ್ಯಾದಿ ಚರ್ಚೆ ನಡೆದು ಜಿಮ್ನು-

“ಕ್ರಿಶ್, ಈಗ ನಿನ್ನ ವಯಸ್ಸೆಷ್ಟು?” ಎಂದು ಕೇಳಿದ ಅದಕ್ಕೆ ನಾನು,

“ನನಗೀಗ ಎಷ್ಟು ವಯಸ್ಸು ಎಂದು ಖಂಡಿತ ಹೇಳಲಾಗುವುದಿಲ್ಲ. ಎರಡು ವರ್ಷಗಳ ಹಿಂದೆ ಈ ದೇಶಕ್ಕೆ ಬಂದಿದ್ದೆ. ಈಗ ಹತ್ತು ವರ್ಷ ಮುದುಕನಾಗಿದ್ದೇನೆ.” ಎಂದೆ. ಅವನಿಗೆ ಅರ್ಥವಾಗದೇ ಹುಬ್ಬೇರಿಸಿದ. ಆಗ ನಾನು,

“ನಾವು ಭಾರತೀಯರು ಆರಾಮ–ಶೂರರು; ಹೊಟ್ಟೆ ತುಂಬ ಅನ್ನ, ಮೈತುಂಬ ಬಟ್ಟೆಗಳಿಲ್ಲದಿದ್ದರೂ ಸುಖವಾಗಿ ಹೇಗಿರಬೇಕು ಎಂಬ ದಿವ್ಯ–ಮಂತ್ರ ಕಲಿತವರು. ನಿಮ್ಮಂತೆ ಹಗಲು–ರಾತ್ರಿ ದುಡಿದು ಸುಖವನ್ನು ಬೆನ್ನಟ್ಟಿಕೊಂಡು ಹೋಗುವವರಲ್ಲ. ಇದ್ದದ್ದರಲ್ಲಿಯೇ ಸುಖಿಯಾಗಿರಬೇಕೆನ್ನುವವರು. (Right now I am happy, Why bother?) ಆದರೆ ಇಲ್ಲಿ ಬಂದ ನಂತರ ಭಾರತದಲ್ಲಿ ಹತ್ತು ವರ್ಷ ಮಾಡಲಾಗದ್ದನ್ನು ನಿಮ್ಮ ಶಿಕ್ಷಕವೃಂದ ನನ್ನಿಂದ ಎರಡು ವರ್ಷಗಳಲ್ಲಿ ಮಾಡಿಸಿಬಿಟ್ಟಿದೆ! ಅಂತೇ ಹತ್ತು ವರ್ಷ ವಯಸ್ಕನಾಗಿದ್ದೇನೆ. ಇನ್ನೂ ನನಗೆ ಮದಿವೆಯಾಗಿಲ್ಲ!” ಎಂದು ಹೇಳಿ ನಕ್ಕೆ. ಜಿಮ್ನೂ ನಗುತ್ತ,

“ಕ್ರಿಶ್, ದುಡಿಯದೇ ಜೀವನದಲ್ಲಿ ಏನೂ ಸಿಗುವುದಿಲ್ಲ. ಸುಖ ದೊರೆಯುವುದು ಮೈ ಮುರಿದು ದುಡಿದಾಗಲೇ. ನೀವು ಭಾರತೀಯರು ಬೇರೆಯವರ ದುಡಿತದ ಫಲವನ್ನು ತಾವು ಅನುಭವಿಸಬೇಕೆಂಬ ಮನೋವೃತ್ತಿಯವರೆಂದು ತೋರುತ್ತದೆ. ಮೈಗಳ್ಳರು!” ಎಂದು ಕುಹುಕವಾಡಿದ. ನಾನೆಂದೆ:

“ಅಮೇರಿಕನ್ನರು ತಾವು ಸುಖವೆಂದು ತಿಳಿದದ್ದೇ ಜಗತ್ತಿನ ಸುಖವೆಂದು ನಂಬುತ್ತಾರೆ. ಸುಖವು ಮನಸ್ಸಿನ ಸ್ಥಿತಿಯೇ ಹೊರತು ಬಾಹ್ಯವಸ್ತುಗಳಲ್ಲಿ ಇರುವುದಿಲ್ಲ, ಸಿಗುವುದಿಲ್ಲ ಎಂಬುದು ನಿಮ್ಮ ಬುದ್ಧಿಗೆ ತೋಚುವುದೇ ಇಲ್ಲ. ಇದರ ಬಗ್ಗೆ ಒಂದು ಸ್ವಾರಸ್ಯ ಘಟನೆಯನ್ನು ಹೇಳುತ್ತೇನೆ ಕೇಳು;

ಕೆನಡಿ ಶಾಂತಿದಲದವರು (Peace Corps) ಭಾರತದಲ್ಲೆಲ್ಲ ಹರಡಿದ್ದಾರೆ. ಇಂತಹ `ಶಾಂತಿದೂತ’ನೊಬ್ಬನು ಹಳ್ಳಿಯೊಂದಕ್ಕೆ ಭೆಟ್ಟಿ ಕೊಟ್ಟ. ಅಲ್ಲಿ ಹೊಳೆಯ ದಂಡೆಯೊಂದರಲ್ಲಿ ಮರದ ಕೆಳಗೆ ದನಕಾಯುವವನೊಬ್ಬನು ಸುಖವಾಗಿ ಮಲಗಿದ್ದನ್ನು ನೋಡಿದ. ಮಾನವೀಯತೆಯ ಉದ್ಧಾರಕ್ಕಾಗಿ ಬಂದ ಆ ಶಾಂತಿದೂತನು ಅವನ ಬಳಿಗೆ ಹೋಗಿ, ರಮಿಸಿ ಅವನನ್ನು ಮಾತನಾಡಿಸಿ “ಹೀಗೆ ನೀನು ವೃಥಾ ಕಾಲಹರಣವನ್ನೇಕೆ ಮಾಡುತ್ತಿ?” ಎಂದು ಕೇಳಿದನಂತೆ, ಅದಕ್ಕೆ ದನಕಾಯುವವನು,

“ಇನ್ನೇನು ಮಾಡಲಿ?” ಎಂದು ಮಲಗಿದ್ದ ಕಡೆಯಿಂದಲೇ ಕೇಳಿದನೆಂತೆ.

ಅದಕ್ಕೆ ಶಾಂತಿದೂತ “ಒಳ್ಳೆ ದೃಢಕಾಯನಿದ್ದೀ; ಎಲ್ಲಾದರೂ ಹೋಗಿ ಮೈಮುರಿದು ದುಡಿಯಬಹುದಲ್ಲ?” ಎಂದದ್ದಕ್ಕೆ – “ಮೈ ಮುರಿದು ದುಡಿದರೆ ಏನು ಲಾಭ?” ಎಂದು ಕೇಳಿದನಂತೆ. ಅದಕ್ಕೆ ಶಾಂತಿದೂತ, “ಮೈ ಮುರಿದು ದುಡಿದರೆ ನಿನ್ನ ಕೈತುಂಬ ರೊಕ್ಕ ಬರುತ್ತದೆಂದು ಬೇರೆ ಹೇಳಬೇಕೆ?” ಉತ್ತರಿಸಿದನಂತೆ. ಅದಕ್ಕೆ ಮತ್ತೆ …

“ಕೈತುಂಬ ರೊಕ್ಕ ಬರುತ್ತದೆಂದು ಇಟ್ಟುಕೊಳ್ಳೋಣ, ಅದರಿಂದೇನು?” ಎಂದು ಮತ್ತೆ ಕೇಳಿದ್ದಕ್ಕೆ ಇವನು …

“ರೊಕ್ಕದಿಂದ ಏನು ಬರುತ್ತದೆ ಎಂದು ಕೇಳುತ್ತೀಯಲ್ಲವೊ? ಜಗತ್ತೇ ರೊಕ್ಕದ ಮೇಲೆ ನಿಂತಿದೆ. ಒಳ್ಳೆಯ ಮನೆ–ಮಾರು, ಬಟ್ಟೆ–ಬರೆ, ರೇಡಿಯೋ, ಕಾರು, ಒಂದೇ ಎರಡೇ ಬೇಕಾದ್ದು ಸಿಗುತ್ತದೆ ರೊಕ್ಕ ಇದ್ದರೆ. ಅಲ್ಲವೇನಪ್ಪಾ?”

“ಒಳ್ಳೇದು, ಮೈಮುರಿದು ದುಡಿದಾಗ ತುಂಬ ಹಣ ಬರುತ್ತದೆ, ತುಂಬ ಹಣ ಬಂದಾಗ ಇವೆಲ್ಲ ಸಾಮಾಗ್ರಿಗಳನ್ನು ಕೊಳ್ಳಲಿಕ್ಕೆ ಆಗುತ್ತದೆ ಎಂದ ಹಾಗಾಯಿತು. ಹೌದಲ್ಲೊ? ಅದರಿಂದೇನು?” ಮತ್ತೆ ಕೇಳಿದ ದನಗಾಹಿ.

“ಏನು, ಇವೆಲ್ಲ ಸುಖದ ಹೆದ್ದಾರಿಗಳೆಂದು ನಿನಗೆ ಗೊತ್ತಿಲ್ಲವೇ? ಮೂರ್ಖ … ಅಲ್ಲ, ಅಜ್ಞಾನಿಯಿದ್ದೀ ಅಂದಹಾಗಾಯಿತು.”

ಇದಕ್ಕೆ ದನಗಾಹಿ ಹೊಟ್ಟೆ ಬಿರಿಯುವಂತೆ ನಕ್ಕು,

“ಇದಕ್ಕೇ ಅನ್ನುವುದು, ನಿಮ್ಮನ್ನೆಲ್ಲಾ ಬೆಪ್ಪರೆಂದು. ಇವು ಯಾವವೂ ಇಲ್ಲದೆಯೇ ನಾನು ಸುಖವಾಗಿಯೇ ಇದ್ದೇನೆ. ಇನ್ನು ಅದನ್ನು ಹುಡುಕಿಕೊಂಡು ಒಂದೇ ಸವನೇ ಬೆನ್ನು ಹತ್ತಿ, ಅಷ್ಟೊಂದು ತೊಂದರೆ ಯಾಕೆ ಪಡಬೇಕು?” ದನಗಾಹಿ ಮರುಸವಾಲು ಹಾಕಿದನಂತೆ ಆ ಶಾಂತಿದೂತನಿಗೆ, ಅದಕ್ಕೆ ಅವನು.

“ನಾವು ಇವರಿಗೆ ಕಲಿಸುವುದಕ್ಕಿಂತ ಇವರಿಂದಲೇ ನಾವು ಕಲಿಯಬೇಕಾಗಿದೆ. ಎಂತಹ ಅಶಿಕ್ಷಿತ ಭಾರತೀಯನೂ ಕೂಡ ಒಳ್ಳೆ ಮೇಧಾವಿಯಂತೆ ಮಾತನಾಡುತ್ತಾನೆ!” ಎಂದು ಗೊಣಗಿಕೊಳ್ಳುತ್ತ ಬಂದ ದಾರಿಗೆ ಸುಂಕವಿಲ್ಲವೆಂದು ತಿರುಗಿ ಹೋದನಂತೆ.

ಕಥೆಯನ್ನು ಕೇಳಿ ಜಿಮ್ನು ನಕ್ಕನಾದರೂ ಅದು ಅವನ ಮರ್ಮಕ್ಕೆ ಚುಚ್ಚದೆ ಇರಲಿಲ್ಲ. ಕೂಡಲೆ ಧ್ವನಿಯೇರಿಸಿ.

“ನೀನು ಹೇಳುವದೆಲ್ಲಾ ನಿಜವಾದರೆ ಭಾರತ ಸರಕಾರ ಮತ್ತು ಮಂತ್ರಿಗಳು ಪ್ರತಿ ತಿಂಗಳು ಬಂದು ಅನ್ನ, ಬಟ್ಟೆ, ಹಣಕ್ಕಾಗಿ ಏಕೆ ಒಂದೇ ಸಮನೆ ಭಿಕ್ಷೆ ಬೇಡುತ್ತಿರುವರು?” ಎಂದು ಸ್ವಲ್ಪ ರೊಚ್ಚಿಗೆದ್ದೇ ಕೇಳಿದ.

“ಅಮೇರಿಕೆಯಲ್ಲಿ ಇವು ವಿಪುಲವಾಗಿವೆ. ಅವು ಇಲ್ಲಿಯೇ ಉಳಿದುಬಿಟ್ಟರೆ ಅಮೇರಿಕೆಯ ಅರ್ಥಿಕ–ಪ್ರಗತಿಗೆ ಅಡ್ಡಿ ಬರುವದೆಂದು ನಾವು ಅವುಗಳಿಗೆ ಬೇಡಿಕೆಗಳನ್ನು ಕಳಿಸುತ್ತಲೇ ಇರುತ್ತೇವೆ. ಅಮೇರಿಕನ್ನರು ಬಹಳ ಸಿರಿವಂತರಿದ್ದರೂ ಅವರಿಗೆ ಮುತ್ಸದ್ದಿತನ ಬಹಳ ಕಡಿಮೆ. ಅಂತೆಯೇ ಜಗತ್ತಿನ ಎಷ್ಟೋ ಚಿಕ್ಕಪುಟ್ಟ ರಾಷ್ಟ್ರಗಳು ಅಮೇರಿಕೆಯ ಆಹಾರ ತಿಂದು, ಹಾಲು ಕುಡಿದು, ಅವರ ಬೆಂಬಲದಿಂದಲೇ ಅಧಿಕಾರಕ್ಕೆ ಬಂದೋ, ಸ್ವಾತಂತ್ರ್ಯಗಳಿಸಿಯೋ ತಿರುಗಿ ಅಮೇರಿಕನ್ನರನ್ನೇ ಬೈಯುತ್ತವೆ. ಅಮೇರಿಕನ್ನರಿಗೆ ಕೇವಲ ಕರೇ ಇಲ್ಲವೇ ಬಿಳೀಕಾಜಿನ ಮುಖಾಂತರ ಜಗತ್ತನ್ನು ನೋಡುವುದು ರೂಢಿಯಾಗಿಬಿಟ್ಟಿದೆ. ಇವೆರಡರ ಹೊರತಾಗಿ ಬೇರೆ ಬಣ್ಣಗಳಿವೆಯೆಂದು ಅವರಿಗೆ ಹೊಳೆಯುವುದೆ ಇಲ್ಲ. ಆದ್ದರಿಂದ ಅಂತರಾಷ್ಟ್ರೀಯ ಕ್ಷೇತ್ರದಲ್ಲಿ ಆ ಅಮೇರಿಕೆಯನ್ನು ಅನುಮೋದಿಸುವವರು ಅಮೇರಿಕೆಯ ಮಿತ್ರರೆಂದೂ ಅನುಮೋದಿಸದವರು ಶತ್ರುಗಳೆಂದೂ ಥಟ್ಟನೆ ನಿರ್ಣಯಿಸಿ ಬಿಡುತ್ತೀರಿ ಏಶಿಯದವರನ್ನು ತಿಳಿದುಕೊಳ್ಳುವುದು ಸುಲಭವಾಗಿಲ್ಲ. ಅದಕ್ಕಾಗಿ ಅವರ ಇತಿಹಾಸ. ಸಂಸ್ಕೃತಿ, ಧಾರ್ಮಿಕ ಹಿನ್ನೆಲೆ, ಅವರ ಜೀವನದ ದೃಷ್ಟಿಕೋನ ಇವುಗಳನ್ನೆಲ್ಲ ತಿಳಿದುಕೊಳ್ಳಬೇಕಾಗುತ್ತದೆ.” ಎಂದು, ಒಳಗೆ ಸ್ವಲ್ಪ ಹಿಡಿದು ಬಿಟ್ಟಂತಾದರೂ, ಹುಂಬುಗುತ್ತಿಗೆಯ ಧೈರ್ಯದಿಂದ ಒಂದು ಸಣ್ಣ ಭಾಷಣವನ್ನು ಬಿಗಿದೆ. ಜಿಮ್ನೂ ಇದರ ಕಳೆ ಕಂಡುಹಿಡಿದು, ನಗುತ್ತ.

“ಮಹಾರಾಯಾ, ಈ ಎರಡು ಮೂರು ವರ್ಷಗಳಿಂದ ಎಷ್ಟು ತಿಣುಕುತ್ತಿದ್ದರೂ ನಮಗೆ ಒಬ್ಬ ಭಾರತೀಯನನ್ನು ಸರಿಯಾಗಿ ತಿಳಿದುಕೊಳ್ಳಲು ಮಾಡಿದ ಪ್ರಯತ್ನಗಳೆಲ್ಲ ಅಸಫಲವಾಗಿರುವಾಗ, ನಮ್ಮ ಸರಕಾರ, ಅದೂ ವಾಶಿಂಗ್ಟನ್ನದಲ್ಲಿ ಕುಳಿತು ಕೋಟಿಗಟ್ಟಲೆ ಭಾರತೀಯರ ಸಮಸ್ಯೆ ತಿಳಿಯಲು ವಿಫಲವಾದರೆ ಆಶ್ಚರ್ಯವೇನಿದೆ?” ಎಂದು ನನ್ನ ಕಡೆಗೆ ಅರ್ಥಪೂರ್ಣವಾಗಿ ನೋಡಿ, ಅಲ್ಲಿಂದ ತನ್ನ ಕೈಯಲ್ಲಿಯ ವಾಚು ನೋಡಿಕೊಂಡು, ತನ್ನ ಹೆಂಡತಿ ತನಗಾಗಿ ಕಾದಿರುತ್ತಾಳೆಂದೂ, ಹೊತ್ತಿಗೆ ಸರಿಯಾಗಿ ಮುಟ್ಟದಿದ್ದರೆ ತನ್ನ ಅವತಾರವನ್ನೇ ಮುಗಿಸುತ್ತಾಳೆಂದೂ ಹೇಳಿ, ಅಲ್ಲಿಂದ ಓಟ ಕಿತ್ತನು.

ಹೆಮಲಿನ್ ಕುಟುಂಬದೊಂದಿಗೆ | ಪರಿವಿಡಿ