ನಾಮಾಂತರ

ಪೋನು ಟ್ರಿನ್ನ್ನ್ನ್ ಎಂದು ಬಡಿದುಕೊಳ್ಳಲಾರಂಭಿಸಿದ್ದರಿಂದ ಎತ್ತಿಕೊಂಡೆ. “ಕ್ರಿಸ್ನ ಹತ್ತಿರ ಮಾತಾಡಬಹುದೇ?” ಎಂದಿತು ಧ್ವನಿ. “ಇಲ್ಲಿ ಕ್ರಿಸ್ ಯಾರೂ ಇಲ್ಲ. ಎಲ್ಲರೂ ಭಾರತೀಯರಿದ್ದೇವೆ” ಎಂದು ಹೇಳಿದೆ. ಧ್ವನಿ ಅಷ್ಟಕ್ಕೆ ಸುಮ್ಮನಿರದೇ “ನಾನು ಮಾತಾಡಿಸಬೇಕಾದವನು ಭಾರತೀಯನೇ, ಎರಡು ವಾರಗಳ ಹಿಂದೆ ನನ್ನ ಕೀಟಶಾಸ್ತ್ರದ ಡಿಪಾರ್ಟಮೆಂಟಿಗೆ ಸೇರಿದ್ದಾನೆ.” ಎಂದಾಗ ನನ್ನ ಪ್ರಾಧ್ಯಾಪಕರೇ ನನ್ನನ್ನು ಕೇಳುತ್ತಿದ್ದಾರೆಂದು ತಿಳಿಯಿತು. ಸ್ವಲ್ಪ ಕೆಲಸವಿದ್ದುದರಿಂದ ಕಾಲೇಜಿಗೆ ಬರಲಿಕ್ಕೆ ತಿಳಿಸಲು ಪೋನು ಮಾಡಿದ್ದರು. ಹಿಂದಿನ ದಿನದ ಘಟನೆ ಒಮ್ಮೆಲೆ ನೆನಪಿಗೆ ಬಂದಿತು.

ನಾನು ಕಾಲೇಜಿಗೆ ಸೇರಿದ ಎರಡು ವಾರಗಳ ತನಕ ನನ್ನ ಪ್ರಾಧ್ಯಾಪಕರರು ನನ್ನನ್ನು “ಕೈಮಾಟ್” (ಕಾಮತದ ಅಮೇರಿಕನ್ ರೂಪ) ಎಂದೇ ಕರೆಯುತ್ತಿದ್ದರು. ಹಿಂದಿನ ದಿನ ಎಂದಿನಂತೆ ವರ್ಗಕ್ಕೆ ಬಂದಾಗ “ನನ್ನನ್ನು ಕ್ಷಮಿಸು ಮಿ. ಕ್ಯಾಮಟ್. ನಾನು ನಿನ್ನ ಮೊದಲಿನ ಹೆಸರು “ಕೈಮಾಟ್” ಎಂದು ತಿಳಿದಿದ್ದೆ. ಇಂದು ನಿನ್ನ ಕಾಗದ–ಪತ್ರಗಳನ್ನು ನೋಡುತ್ತಿದ್ದಾಗ ಅದು ನಿನ್ನ ಕೊನೆಯ ಹೆಸರು ಎಂದು ತಿಳಿಯಿತು” ಅಂದರು. ನನ್ನ ಮೊದಲ ಹೆಸರೇನು ಎಂದು ಹೇಳಿ ಅದನ್ನು ಉಚ್ಚರಿಸಲಿಕ್ಕಾಗದೇ ಬೋರ್ಡಿನ ಮೇಲೆ ಬರೆಯಲು ಹೇಳಿದರು. ಅದರಂತೆ ಬರೆದು ತೋರಿಸಿದೆ. ಅದರೆ ಅವರ ಅಮೇರಿಕನ್ ನಾಲಿಗೆಗೆ ನನ್ನ ಕೃಷ್ಣನಾಮ ಹೊರಳಲೇ ಇಲ್ಲ! ಬಹಳ ಪ್ರಯತ್ನಪಟ್ಟು “ಕ್ರಿಶನಾನಂದ” (ಕೃಷ್ಣಾನಂದ) ಎಂದು ಏನೇನೋ ಗೊಣಗಿದರು. ಈ ಕ್ಲಿಷ್ಟ ಹೆಸರಿನಿಂದ ತೃಪ್ತಿಯಾಗದೆ “ಮಿತ್ರರು, ಮನೆಯವರು ನಿನ್ನನ್ನು ಏನೆಂದು ಕರೆಯುತ್ತಾರೆ?”ಎಂದು ಕೇಳಿದರು. “ಅವರೂ ಪೂರ್ಣ ಹೆಸರಿನಿಂದಲೇ  ಕರೆಯುತ್ತಾರೆ” ಎಂದು ಹೇಳಿದಾಗ ಅವರಿಗೆ ಬಹಳ ನಿರಾಸೆಯಾಯಿತು. ಅವರಿಗೆ ಅಮೇರಿಕನ್ ಪದ್ಧತಿಯಂತೆ ಮೊದಲ ಹೆಸರಿನಿಂದಲೇ ನನ್ನನ್ನು ಕರೆಯುವ ಹಂಬಲ. ತುಂಬ ಹೊತ್ತು ಯೋಚಿಸಿ ಕೊನೆಗೆ “ನಿನ್ನ ಹೆಸರಿನ ಪೂರ್ವಾರ್ಧ ಅಮೇರಿಕದ `ಕ್ರಿಸ್’ (Chris) ಹೆಸರನ್ನು ಹೋಲುತ್ತದೆ. ಆದ್ದರಿಂದ ಅದೇ ಹೆಸರಿನಿಂದ ನಿನ್ನನ್ನು ಸಂಬೋಧಿಸಿದರೆ ಆತಂಕವಿದೆಯೇ?” ಎಂದರು. ನನ್ನ ಆತಂಕವೇನೂ ಇರದಿದ್ದರಿಂದ ಅಂದಿನಿಂದ ನಾನು `ಕ್ರಿಸ್’ ಅಂದೆ. ಕೃಷ್ಣನ ನಾಮ ಕ್ರಿಸ್ತನ ನಾಮದಲ್ಲಿ ಪರಿವರ್ತನೆ ಹೊಂದಿತು.

ಅಮೇರಿಕೆಗೆ ಹೋದ ಭಾರತೀಯರು ಧರ್ಮಾಂತರ ಪಡೆಯದಿದ್ದರೂ ನಾಮಾಂತರ ಹೊಂದದೇ ಇರುವುದಿಲ್ಲ. ನಾವು ಅಮೇರಿಕನ್ ಆಗಲು ಬಯಸುವ ಮೊದಲೇ ಅವರು ನಮ್ಮನ್ನು ಪರಿವರ್ತಿಸಿಬಿಡುತ್ತಾರೆ. ಹೆಸರು ಮೊದಲೇ ಮಾರ್ಪಾಟಾಗಿ ಬಿಡುತ್ತದೆ. ಆನಂದನು “ಎಂಡಿ”ಯಾದರೆ ಹರಿನಾರಾಯಣನು `ಹ್ಯಾರಿ’ಯಾಗುತ್ತಾನೆ. ನಮ್ಮ ಕಾಲೇಜಿನಲ್ಲಿ ಪೋಲಂಡಿನವನೊಬ್ಬ ಕೆಲಸಕ್ಕಿದ್ದ. ಆತ ಎಲ್ಲರಿಗೂ “ಚಾರ್ಲಿ”ಯಾಗಿದ್ದ. ಆತ ಒಮ್ಮೆ ಕಾರಿನ ಲೈಸಸ್ಸ್ forms ಟೈಪ ಮಾಡಲು ತಂದಾಗ ಅದರಲ್ಲಿ ಅವನ ಹೆಸರು “ಕಾಝಿಮಿರ್” (Kazimier) ಎಂದಿತ್ತು. ಅವನ ಹೆಸರಿಗೂ ಚಾರ್ಲಿಗೂ ಎಲ್ಲಿಯ ಸಂಬಂಧವೆಂದಾಗ ಅವನು ತಾನು ಬಂದ ಹೊಸದರಲ್ಲಿ ಕಾರಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದೆನೆಂದೂ ಅಲ್ಲಿಯ ಸಹೋದ್ಯೋಗಿಗಳಿಗೆ ತನ್ನ ಹೆಸರು ಹೇಳಲುಬಾರದ್ದರಿಂದ ಚಾರ್ಲಿಯಾದೆನೆಂದೂ ಹೇಳಿದ. ಅದೇ ರೂಢನಾಮವಾಯಿತು. ನಾನು ಆತನನ್ನು “ಕಾಝಿಮಿರ್” ಎಂದೇ ಕರೆಯುತ್ತಿದ್ದೆ. ಆತ ನನ್ನನ್ನು “ಕೃಷ್ನಾ” ಎನ್ನುತ್ತಿದ್ದ.

ಅಮೇರಿಕನ್ನರಿಗೆ ನನ್ನ ಪೂರ್ಣ ಹೆಸರು ಹೇಳಬೇಕಾದರೆ ಸಾಕುಸಾಕಾಗಿ ಹೋಗುತ್ತಿತ್ತು. ಕೆ. ಎಲ್. ಕಾಮತ್ ಎಂದು ಹೇಳಿದರೆ ತಪ್ಪದೇ ಕೆ. ಎಲ್. ಗ್ಯಾಮಡ್ ಎಂದು ಬರೆಯುವರು. ಒಂದೊಂದೇ ಅಕ್ಷರ ಹೇಳಿ ಬರೆಸಬೇಕಾಗುತ್ತಿತ್ತು. ಅಂತೆಯೇ “K as in kiss, A as in Andy, M as in Mad” ಮುಂತಾಗಿ ಹೇಳುವ ಪ್ರಸಂಗ ಬರುತ್ತಿತ್ತು. ಕೊನೆಗೆ ನನ್ನ ಹೆಸರು ಕೈಮಾಟ್ಗೆ ಪರಿವರ್ತಿಸಿದಾಗ ಅವರು ಸರಿಯಾಗಿ ಬರೆಯಲಾರಂಭಿಸಿದರು. ಪ್ರತಿ ಎರಡು ವಾರಕ್ಕೊಮ್ಮೆ ಪಗಾರ ಕೊಡುತ್ತಿದ್ದ ಮುದುಕಿ ಸೆಕ್ರೆಟರಿ ಪ್ರತಿ ಸಲ ಹೋದಾಗಲೂ ನನ್ನ ಹೆಸರನ್ನು ಕೇಳುವುದಾಗಲಿ ಅದನ್ನು ಹೇಗೆ ಬರೆಯುತ್ತಿ ಎಂದು ಕೇಳುವುದಾಗಲಿ ಬಿಡಲಿಲ್ಲ. ಎಷ್ಟು ಹೇಳಿದರೂ ಆಕೆ ನನ್ನ ಹೆಸರನ್ನು “Comet” ಎಂದೇ ಬರೆಯುತ್ತಿದ್ದಳು! ನಾನು ಕಾಮತನಾಗುವ ಬದಲು ಮೋಕ್ಷಗುಂಡಮ್, ಷಣ್ಮುಖಂ, ಚೆಟ್ಟಿಯಾರ್, ಭಕ್ತವತ್ಸಲಮ್, ಭಯಕೃದ್ಭಯನಾಶನಾಚಾರ್ ಆಗಿದ್ದರೆ ನನ್ನ ಅವಸ್ಥೆ ಏನಾಗುತ್ತಿತ್ತೊ?

ಮೋಟು ಹೆಸರುಗಳು ಅಮೇರಿಕನ್ ವೈಶಿಷ್ಟ್ಯ. ರೊಬರ್ಟ್ನು `ಬಾಬ್’, ವಿಲಿಯಮ್ನು `ಬಿಲ್’, “ರಿಚರ್ಡನು `ಡಿಕ್’ ಎಂದೇ ಕರಯಲ್ಪಡುತ್ತಾರೆ. ಇದರಿಂದ ಆತ್ಮೀಯತೆ ಹೆಚ್ಚುತ್ತದೆಂದು ಅವರು ನಂಬುತ್ತಾರೆ. ಈ ಪದ್ಧತಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಉಚ್ಚ ಅಧಿಕಾರಿಗಳಿಗೆ, ಕೆಳಗಿನ ನೌಕರರಿಗೆ ಅನ್ವಯಿಸುತ್ತದೆ. ನಮಗೆ ತೀರ ಪರಿಚಯದ `ಸರ್’ ಪದ ಅಮೇರಿಕೆಯಲ್ಲಿ ಬಳಕೆಯಲ್ಲಿ ಇಲ್ಲವೇ ಇಲ್ಲವೆಂದು ಹೇಳಬಹುದು. ಪ್ರಾಧ್ಯಾಪಕರನ್ನು ವಿದ್ಯಾರ್ಥಿಗಳು ಪ್ರೊಫೆಸರ್ ಅಥವಾ ಮಿಸ್ಟರ್ ಎಂದೇ ಕರೆಯುವರು. ನಾನೊಮ್ಮೆ ಪ್ರಯೋಗಶಾಲೆಯಲ್ಲಿ ಕೆಲಸದಲ್ಲಿ ತೊಡಗಿದ್ದೆ. ಪಕ್ಕದ ಕೋಣೆ ಪ್ರಾಧ್ಯಾಪಕರದಾಗಿತ್ತು. ಯಾರೋ ಅವರ ಹತ್ತಿರ ಬಂದು “ಹಾಯ್ ಮೈಕ್, ಇಂದು ಮುಂಜಾನೆ ಹೇಗಿದ್ದೀಯಾ?” ಎಂದು ಕೇಳಿದರು. ಅದಕ್ಕೆ ಅವರು “ಚೆನ್ನಾಗಿದ್ದೇನೆ ಜೆಕ್; ಥ್ಯಾಂಕ್ಸ್” ಎಂದರು. ಮಾತು ಬಹಳ ಅನೌಪಚಾರಿಕವಾಗಿ ನಡೆದಿತ್ತು. ಮಾತು ಮುಗಿದು ಜೆಕ್ ಹೊರಟಾಗ ಯಾರೆಂದು ಕುತೂಹಲದಿಂದ ಹೊರೆಗೆ ಬಂದು ನೋಡಿದೆ. ಆತ ನಮ್ಮ ಕೋಣೆಗಳನ್ನು ಸ್ವಚ್ಛ ಮಾಡುವ ಜಾನ್! ಅಮೇರಿಕೆಯಲ್ಲಿ ಸಾಮಾಜಿಕ ಭೇದಗಳಿಲ್ಲದ್ದರಿಂದ ಈ ಹಿತವಾದ ಅನೌಪಚಾರಿಕತೆ ಕಂಡುಬರುತ್ತದೆ. ಪ್ರೆಸಿಡೆಂಟ್ ಕೆನಡಿ ಜೆಕ್ ಕೆನಡಿಯೆಂದೇ ಪ್ರಸಿದ್ಧರಾಗಿದ್ದರು. ಪತ್ರಿಕಾಕಾರರು, ಸುದ್ದಿಗಾರರು ಅವರನ್ನು “ಮಿಸ್ಟರ್ ಪ್ರೆಸಿಡೆಂಟ್” ಎಂದೇ ಸಂಬೋಧಿಸುತ್ತಿದ್ದರು.

ಕಣ್ಣಿನ ಪರೀಕ್ಷೆ