ನವ್ಯಭೂತಗಳು!

ಭೂತ-ಪಿಶಾಚಿಗಳಲ್ಲಿ ಅಮೇರಿಕನ್ನರಿಗೆ ಬಹಳ ಆಸಕ್ತಿ. ಅಂತೆಯೇ ಅವುಗಳ ಬಗ್ಗೆ ರೋಮಾಂಚಕ ಕತೆಗಳನ್ನು ಕೇಳಿ ಕೇಳಿ ತಿಳಿದುಕೊಳ್ಳುತ್ತಿದ್ದರು. ನನಗೆ ಸ್ವತಃ ಇವುಗಳಲ್ಲಿ ವಿಶ್ವಾಸವಿಲ್ಲದಿದ್ದರೂ ಯಾಂಕಿಗಳ ಮನರಂಜನೆಗೆಂದು ನಮ್ಮ ಹಳ್ಳಿಗಳಲ್ಲಿ ಪ್ರಚಲಿತವಿದ್ದ, ರಾಹು, ಜಟ್ಟಿ, ಶ್ವೇತಭೂತ, ಜಡೆಮುನಿಗಳ ಕತೆಗಳನ್ನು ಹೇಳುತ್ತಿದೆ. ಇಂಥ ಕತೆಗಳು ಮಕ್ಕಳಿಗಿಂತ ಹಿರಿಯರಿಗೆ ಹೆಚ್ಚು ಹಿಡಿಸುತ್ತಿದ್ದವು. ಕಥೆ ಕೇಳಿದ ಮೇಲೆ ನೂರಾರು ಪ್ರಶ್ನೆಗಳು; “ನೀನು ಅದನ್ನು ಹಿಂಬಾಲಿಸಿ ಏಕೆ ಹೋಗಲಿಲ್ಲ? ಪೋಟೋಗಳನ್ನೇಕೆ ತೆಗೆಯಲಿಲ್ಲ? ಇತ್ಯಾದಿ.” ಇಷ್ಟೆಲ್ಲ ಕಥೆ ತಮಾಷೆಗಳು ನಡೆಯುತ್ತಿದ್ದರೂ ಅಮೇರಿಕೆಯಲ್ಲೇ ಭೂತದರ್ಶನವಾಗಬಹುದೆಂಬ ಮಾತು ನನ್ನ ಕಲ್ಪನೆಯ ಹೊರತಾಗಿತ್ತು.

ಅಂದು ಜುಲೈ ನಾಲ್ಕು ಅಮೇರಿಕನ್ನರು ಬ್ರಿಟಿಷ್ ಆಡಳಿತದಿಂದ ಮುಕ್ತರಾದ ದಿನ. ಇಡೀ ದೇಶ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತದೆ. ಕಾಲೇಜಿಗೆ ರಜೆ ಇದ್ದರೂ ನನ್ನಷ್ಟಕ್ಕೆ ಏನೋ ಕೆಲಸ ನಡೆಸಿದ್ದೆ. ಸಾವಕಾಶವಾಗಿ ಸಂಧ್ಯಾದೇವಿ ಭೂಮಿಗಿಳಿದಳು. ದಡದಡ ಬಾಗಿಲು ಬಡಿದ ಸದ್ದಾಯಿತು. ಭಾರತೀಯ ಗೆಳೆಯನೊಬ್ಬ ಒಳಗೆ ಬಂದು `ರಜೆಯ ದಿನವೇಕೆ ಕೆಲಸ ಮಾಡುತ್ತೀಯಾ?’ ಎಂದು ಕಿರಿಚಿಕೊಂಡ. ಬಂದವನಿಗೆಂದು ಕಾಫಿ ಮಾಡಿದೆ. ಅದನ್ನು ಸುರಿಯುತ್ತ ತನ್ನ ಪತ್ನಿ ಯಾವದೊ ಮಹಿಳಾಸಮಾಜಕ್ಕೆ ಭಾಷಣ ಕೊಡಲಿಕ್ಕೆ ಹೋಗಿದ್ದಾಳೆಂದು ಹೇಳಿದ. ಆದ್ದರಿಂದಲೇ ಇವನ ಬುದ್ಧಿ ಸ್ಥಿಮಿತದಲ್ಲಿ ಇಲ್ಲವೆಂದು ನನಗೆ ಅರ್ಥವಾಯಿತು. ಚೆನ್ನಾದ ಬೆಳದಿಂಗಳು ಬಿದ್ದಿದೆ. ಎಲ್ಲಿಯಾದರೂ ವಿಹಾರಕ್ಕೆ ಹೋಗೋಣವೆಂದು ಬಲತ್ಕಾರ ಮಾಡಿದ. ತನಗೆ ಇಲ್ಲಿಯ ಅನೇಕ ವಿಹಾರಸ್ಥಳಗಳು ಚೆನ್ನಾಗಿ ಗೊತ್ತಿವೆಯೆಂದೂ, ಉತ್ತಮವಾದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇನೆಂದೂ ಆಶ್ವಾಸನವಿತ್ತ.

ಸ್ನೇಹಿತನ ಹಳೆಯ ಕಾರು ಪ್ರಾರಂಭವಾಗಲು ಬಹಳ ನಿರಾಕರಿಸಿತು. ಕೊನೆಗೂ ಟರ್ ಟರ್ ಎಂದು ಹೊರಟಿತು. ಕಾರು ನನ್ನ ಪರಿಚಯದ ರಸ್ತೆ ಬಿಟ್ಟು ಹೊಸದಾದ ಕಿರಿರಸ್ತೆಯತ್ತ ಹೊರಳಿತು. ಯಾವದೋ ಹೊಸ ಜಗತ್ತಿಗೇ ಬಂದಂತೆ ಎನಿಸಹತ್ತಿತ್ತು. ಅಂಗಡಿ, ಮನೆ, ದೀಪ ಸಹ ಇಲ್ಲದ ಪ್ರಶಾಂತ ರಸ್ತೆ ಸರೋವರದ ದಂಡೆಗುಂಟ ಹೊರಟಿತ್ತು. ಸರೋವರದ ಆಚೆ ದಂಡೆಯಿಂದ ಉನ್ನತ ಕಟ್ಟಡಗಳ ಸಂದಿಯಲ್ಲಿಉದಯಿಸಿ ಬರುತ್ತಿದ್ದ ಚಂದ್ರ ಆಗೀಗ ಕಾಣಿಸಿಕೊಳ್ಳುತ್ತಿದ್ದ. ಆತನ ಸುಂದರ ಶೀತಲ ಕಿರಣಗಳು ಸರೋವರದಲ್ಲಿ ಧುಮಿಕಿ ತೆರೆಗಳೊಂದಿಗೆ ಸೇರಿ ನಮ್ಮತ್ತ ಬರುತ್ತಿದ್ದವು. ಸರೋವರದ ದಂಡೆಯ ಮೇಲೆ ನೂರಾರು ಕಾರುಗಳು ಸೈನಿಕ-ಶಿಸ್ತಿನಿಂದ ನಿಂತಿದ್ದವು. ಯಾವ ಕಾರಿನಲ್ಲೂ ಮಾನವರ ಸುಳಿವೇ ಇರದ್ದರಿಂದ ಪಂಕ್ತಿಗೋ, ನೌಕಾವಿಹಾರಕ್ಕೊ ಹೋಗಿರಬೇಕೆಂದು ಭಾವಿಸಿದೆವು. ನಮ್ಮ ಕಾರನ್ನೂ ಅಲ್ಲಿ ನಿಲ್ಲಿಸೋಣವೆಂದು ನನ್ನ ಸ್ನೇಹಿತ ಅಂದನಾದರೂ ಪಾರ್ಕ (park) ಮಾಡಲು ಸ್ಥಳವೇ ಇರಲಿಲ್ಲ. ಸ್ಥಳಕ್ಕಾಗಿ `ಕ್ಯೂ’ ಹಚ್ಚಿ ನಿಲ್ಲಬೇಕಾಯಿತು. ಅಂಥ ಸೌಂದರ್ಯಪೂರ್ಣ ಸ್ಥಳವನ್ನು ಬಿಟ್ಟುಹೋಗಲು ಯಾವ ಕಾರಿಗೆ ಮನಸ್ಸಾದೀತು? ಅಂತೂ ಅರ್ಧ ಗಂಟೆ ಕಾದ ಮೇಲೆ ಸ್ಥಳ ಸಿಕ್ಕಿತು. ವೇಗದಿಂದ ಹೋಗಿ ಸ್ಥಳ ಹಿಡಿದೆವು. ಕಾರಿನ ಹೃದಯಮಿಡಿತ ನಿಂತಾಗ ನಮ್ಮ ಎದುರುಗಿದ್ದ ಸರೋವರ ಇನ್ನೂ ಪ್ರಶಾಂತವಾಗಿ ಕಂಡಿತು. ಆಗೊಮ್ಮೆ ಈಗೊಮ್ಮೆ ಮಂದಮಾರುತನು ಬೀಸಿದಾಗ ಸರೋವರದ ಅಲೆಗಳು ತಮ್ಮ ಮಿನುಗುವ ದಂತಪಂಕ್ತಿಗಳನ್ನು ತೋರಿಸುತ್ತ ನಮ್ಮನ್ನು ಸ್ವಾಗತಿಸುತ್ತಿದ್ದವು. ಸರೋವರದ ಆಚೆ. ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಮದ್ದುಗುಂಡುಗಳನ್ನು ಹಾರಿಸುತ್ತಿದ್ದ ಸಪ್ಪಳ ಕೇಳಿಸುತ್ತಿತ್ತು. ಆಗಾಗ ಕಣ್ಣು ಕುಕ್ಕುವ ಬೆಳಕು ಝಗ್ಗೆಂದರೆ ಮರುಕ್ಷಣದಲ್ಲಿ ಮತ್ತೆ ಕತ್ತಲು. ಕಾರಿನಲ್ಲಿ ಕುಳಿತು ಕುಡಿಯುತ್ತಿದ್ದುದು `ಕೋಕೊ-ಕೊಲಾ’ ಆದರೂ ಸೆರೆಯಂತೆ ಭಾಸವಾಗುತ್ತಿತ್ತು. “ಅದ್ಭುತವಾಗಿದೆಯಲ್ಲವೇ?” ಎಂದು ಕೇಳಿದ ಪ್ರಶ್ನೆಗೆ ಗೆಳೆಯನ ಉತ್ತರ ಬಾರದ್ದರಿಂದ ಅವನ ಏಕಾಗ್ರತೆಗೆ ಅಡ್ಡಿ ತರಬಾರದೆಂದು ಸುಮ್ಮನಾದೆ.

ಕೆಲ ಹೊತ್ತಿನ ಮೇಲೆ ಗೆಳೆಯನು ಏಕಾಗ್ರಚಿತ್ತದಿಂದ ನೋಡುತ್ತಿದ್ದ ಕಾರುಗಳ ಸಮೂಹದ ಕಡೆಗೆ ನಾನೂ ನೋಡಿದೆ ಕಾರಿನಲ್ಲಿ ಒಬ್ಬರೂ ಇರಲಿಲ್ಲ. ನೂರಾರು ಕಾರುಗಳಲ್ಲಿ ನೂರಾರು
“ಜನರಾದರೂ ಇರಬೇಕಲ್ಲವೇ? ಕಾರಿನಲ್ಲಿ ಹೋಗಲಿ ಮಳಲದಂಡೆಯಲ್ಲೂ ಒಬ್ಬರೂ ಇರಲಿಲ್ಲ. ನೌಕಾವಿಹಾರವೆಂದರೆ ಒಂದು ನಾವೆಯೂ ಸರೋವರದಲ್ಲಿ ಕಾಣಲಿಲ್ಲ. ಕುತೂಹಲ ತಡೆಯಲಾರದೇ “ಕಾರಿನಲ್ಲಿಯಾಗಲಿ, ಅಕ್ಕಪಕ್ಕದಲ್ಲಿಯಾಗಲಿ ಯಾರ ಸುಳಿವೇ ಇಲ್ಲವಲ್ಲ?” ಎಂದೆ. “ನಾನೂ ಅದನ್ನೇ ನೋಡುತ್ತಿದ್ದೇನೆ ಸುಮ್ಮನಿರು” ಎಂದು ಸನ್ನೆಯಿಂದಲೇ ಸೂಚಿಸಿ ನನ್ನ ಬಾಯಿ ಮುಚ್ಚಿಸಿದ. ನಾನೂ ಕಣ್ಣಲ್ಲಿ ಕಣ್ಣಿಟ್ಟು ಸಂಶೋಧನೆ ಪ್ರಾರಂಭಿಸಿದೆ. ಎವೆಯಿಕ್ಕದೇ ಒಂದೇ ಕಾರಿನತ್ತ ದೃಷ್ಟಿ ನೆಟ್ಟೆ. ಐದು ನಿಮಿಷಗಳ ನಂತರ ಎರಡು ಹೊಳೆಯುವ ಕಣ್ಣುಗಳು ನನ್ನನ್ನೇ ನೋಡುತ್ತಿದ್ದ ಭಾಸವಾಯಿತು. ಅಧೈರ್ಯವಾಯಿತು. ಬೇರೆ ಕಡೆ ನೋಟ ಹೊರಳಿಸಿದೆ. ಮತ್ತೆ ಕಾರಿನತ್ತ ನೋಡಿದಾಗ ಕಣ್ಣುಗಳು ಮಾಯವಾಗಿದ್ದವು. ಒಮ್ಮೆಲೇ ಕಾರು ಮೇಲೆ ಕೆಳಗೆ ಪುಟಿಯಲಾರಂಭಿಸಿತು. “ಇದೇನು ಡ್ರಾಯವರನಿಲ್ಲದೇ, ಇಂಜನ್ನಿನ ಮಿಡಿತವಿಲ್ಲದೇ ಕಾರು ಚಲಿಸುವದೆಂದರೇನು?” ಎಂದು ನಿಜಕ್ಕೂ ನನಗೆ ದಿಗಿಲಾಯಿತು. ಗೆಳೆಯ ತನ್ನ ಶೋಧನೆಯಲ್ಲಿ ತಲ್ಲಿನನಾಗಿದ್ದ. ಕಾರು ಮತ್ತೆ ಶಾಂತವಾಯಿತು. ನಾನು ಭೂತ ಪಿಶಾಚಿಗಳಲ್ಲಿ ನಂಬಿಕೆಯಿಟ್ಟವನಲ್ಲ. ಆದರೆ ಆ ನೋಟ ನಿಜಕ್ಕೂ ದಿಗ್ಭ್ರಾಂತಿಯನ್ನುಂಟು ಮಾಡುವಂತೆ ಇತ್ತು. ಇಪ್ಪತ್ತು ನಿಮಿಷಗಳು ಕಳೆದಿರಬೇಕು. ಕೈಯೊಂದೆ ಕಾರಿನಿಂದ ಹೊರಗೆ ಬಂದು ಆಚೆ ಕಡೆಯಿಂದ ಟಾವೆಲ್ ಎಳೆದುಕೊಂಡಿತು. ಜೋರಾಗಿ ಶ್ವಾಸ ಕೂಡ ತೆಗೆಯದೆ ನೋಡುತ್ತಿದ್ದೆವು. ಒಮ್ಮಿಂದೊಮ್ಮೆ ಕಾರು ಪ್ರಾರಂಭವಾಗಿ ವಿದ್ಯುತ್ವೇಗದಲ್ಲಿ ಓಡಿ ಮಾಯವಾಯಿತು.

ಬರಿದಾದ ಸ್ಥಳದಿಂದ ಆಚೆ ನಿಂತ ಕಾರು ಬೆಳದಿಂಗಳಿನಲ್ಲಿ ಸ್ಪಷ್ಟವಾಗಿ ಕಾಣಲಾರಂಭಿಸಿತು. ಅದರಲ್ಲಿಯೂ ಯಾರ ಸುಳಿವೂ ಇರಲಿಲ್ಲ. ಆದರೆ ಯುವತಿಯ ಬಳೆ, ಹೊರಬಟ್ಟೆಗಳನ್ನು ಕಾರಿನ ಬಾಗಿಲಿಗೆ `ಹ್ಯಾಂಗರ್’ ಮೇಲೆ ತೂಗು ಹಾಕಲಾಗಿತ್ತು. ಕೆಲವು ಭೂತಗಳು ಸುಂದರ ಯುವತಿಯ ರೂಪ ಧರಿಸಿ ನಗ್ನವಾಗಿ ಮನಸ್ಸಿಗೆ ಬಂದಂತೆ ತಿರುಗುತ್ತವೆಂದು ಎಲ್ಲೋ ಓದಿದ ನೆನಪು. ಈ ನಗ್ನಭೂತಗಳು ಸರೋವರದಲ್ಲಿ ಜಲಕ್ರೀಡೆಗೆ ಹೋಗಿರಬಹುದೋ ಅಥವಾ ಅದೃಶ್ಯವಾಗಿ ಒಂದು ಕಾರಿನಿಂದ ಇನ್ನೊಂದಕ್ಕೆ ಜಿಗಿಯುತ್ತವೆಯೋ ಎನ್ನುವುದು ತಿಳಿಯಲಿಲ್ಲ. ನಮ್ಮ ಕಾರಿನಲ್ಲಿ ಎಲ್ಲಿ ಹೊಕ್ಕಿದೆಯೋ ಎಂದು ಎರಡು ಮೂರು ಬಾರಿ ಹಿಂದಿನ ಸೀಟು ನೋಡಿದೆ. ಸೀಟು ಬರಿದಾಗಿತ್ತು. ತಿರುಗಿ ಆ ಕಾರಿನತ್ತ ದೃಷ್ಟಿ ಹಾಯಿಸಿದಾಗ ಎಳೆ ವಯಸ್ಸಿನ ಸುಂದರ ನಗ್ನ ತರುಣಿಯೊಬ್ಬಳು ಅಸ್ತವ್ಯಸ್ತವಾಗಿ ಕೇಶರಾಶಿಯನ್ನು ಹಿಕ್ಕಿಕೊಳ್ಳುತ್ತ ಕುಳಿತಿದ್ದಳು. ಆಮೇಲೆ ಸಾವಧಾನವಾಗಿ ಎದ್ದು `ಹ್ಯಾಂಗರ್’ ಮೇಲೆ ಇದ್ದ ಬಟ್ಟೆಗಳನ್ನು ಒಂದೊಂದಾಗಿ ಎಳೆದು ಒಳಗೆ ತೆಗೆದುಕೊಂಡು ಧರಿಸಲಾರಂಭಿಸಿದಳು. ಅವಳ ಮುಖದಲ್ಲಿ ಯಾವ ತರದ ಭಯ, ಭೀತಿ, ಲಜ್ಜೆ, ಕಾತರತೆಗಳೂ ಕಂಡುಬರಲಿಲ್ಲ. ಎಲ್ಲಿಂದಲೋ ಕನ್ನಡಿ, ಲಿಪ್ಸ್ಟಿಕ್ಗಳು ಅವಳ ಕೈಗೆ ಬಂದವು. ಅವಳಿನ್ನೂ ಹಿಂದಿನ ಸೀಟಿನಲ್ಲಿ ಸಿದ್ಧವಾಗುತ್ತಿದ್ದಾಗಲೇ ಕಾರು ಸ್ಟಾರ್ಟ ಆಗಿ ಓಡಲಾರಂಭಿಸಿತು.

ತೆರವಾದ ಸ್ಥಳದಲ್ಲಿ ಇನ್ನೆರಡು ಕಾರುಗಳು ಬಂದು ನಿಂತವು. ಅವುಗಳನ್ನು ನೋಡುವ ಧೈರ್ಯ ನನಗೆ ಉಳಿಯಲಿಲ್ಲ. “ನನಗೇಕೋ ಹೆದರಿಕೆಯಾಗುತ್ತಿದೆ. ತಿರುಗಿ ಹೋಗೋಣ ನಡಿ” ಎಂದು ಗೆಳೆಯನನ್ನು ಯಾಚಿಸಿದೆ. ಗೆಳೆಯ ನಗುತ್ತ “ಮಂಕೇ ಈ ಅಧುನಿಕ ಭೂತಪಿಶಾಚಿಗಳಿಗೆ ಹೆದರುತ್ತಾರೇನಯ್ಯಾ? ಅವುಗಳ ವಿವಿಧ ಮಾಯಾಜಾಲ ನೋಡಿ ಆನಂದಿಸುವುದನ್ನು ಬಿಟ್ಟು ಹೋಗಬೇಕೇ? ಭಾರತದಲ್ಲಿ ಎಷ್ಟು ಹಣ ಸೂರೆ ಮಾಡಿದರೆ ತಾನೇ ನಿನಗೆ ಈ ನೋಟ ಸಿಕ್ಕೀತು? ತಿರುಗಿ ಹೋಗಲೇಬೇಕೆನಿಸಿದರೆ ಹೋಗೋಣವಂತೆ” ಎಂದು ಕಾರನ್ನು ಸ್ಟಾರ್ಟಮಾಡಿದ. ಇತರ ಕಾರುಗಳ ನಡುವೆ ನಮ್ಮ ಕಾರು ಹಾಯ್ದು ಹೋಗುತ್ತಿದ್ದಂತೆ ಹೆಣ್ಣು ಭೂತಗಳ ಸಂಗಡ ಗಂಡುಭೂತಗಳೂ ಗೋಚರಿಸಿದವು! ಕಾರು ಊರಿನತ್ತ ಹೊರಟಾಗ ಗೆಳೆಯ ಈ ಭೂತಗಳ ಕೆಲವು ಸ್ವಾರಸ್ಯಮಯ ಕತೆಗಳನ್ನೂ ಹೇಳಿದ. ಅನಂತರ ಆತ ಹಲವು ಸಲ `ಭೂತದರ್ಶನ’ಕ್ಕಾಗಿ ಕರೆದನಾದರೂ ನಾನು ಹೋಗಲಿಲ್ಲ. ಆತ ಇತರರೊಡನೆ ಆಗೀಗ ಹೋಗಿ ಬಂದು ಅಂದಿನ ಘಟನೆಗಳನ್ನು ರಸವತ್ತಾಗಿ ಬಣ್ಣಿಸುತ್ತಿದ್ದ. ಪುರಾತನ ಭೂತಗಳು ಸಾಕಷ್ಟು ಇರುವ ನಮ್ಮ ದೇಶದಲ್ಲಿ ಈ ನವ್ಯಭೂತಗಳ ಆಗಮನವಾಗದಿರಲೆಂದು ಒಳಗೊಳಗೇ ಬೇಡಿಕೊಂಡೆ.

ಇದೂ ಇದೆಯೇ?