ದಿನಕ್ಕೊಂದು ಡಾಲರ್

ದಿನಕ್ಕೊಂದು ಡಾಲರ್

ಅಮೇರಿಕೆಯ ವಾಸ್ತವ್ಯದ ಸರ್ವೊಪಯೋಗ ಹೇಗೆ ತಾವು ಮಾಡಿಕೊಳ್ಳಬೇಕೆಂದು ವಿವಿಧ ಜನರ ವಿವಿಧ ವಿಚಾರಗಳಿರುತ್ತವೆ. ಕೆಲವರು ಟೇಪ–ರಿಕಾರ್ಡರ್, ಕೆಮರಾ, ಪ್ರೊಜೆಕ್ಟರ್ಗಳನ್ನೂ ಭಾರತದಲ್ಲಿ ದೊರೆಯುವ ಇತರ ಸೌಕರ್ಯ ಸಲಕರಣೆಗಳನ್ನು ತರುತ್ತಾರೆ. ಕೆಲವರು ಅಮೇರಿಕೆಯಲ್ಲಿ ದೊರಕುವ ಉತ್ತಮ ಪುಸ್ತಕಗಳನ್ನು ಕಲೆಹಾಕಬಹುದು. ಕೆಲವರು `ಯಾಂಕಿ-ಕನ್ಯೆ’ಯನ್ನು ಪತ್ನಿಯನ್ನಾಗಿ ಪಡೆಯಬಹುದು. ಕೆಲವರು ಸಾಧ್ಯವಿದ್ದಷ್ಟು ಅಮೇರಿಕನ್ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬಹುದು.

ನನಗೂ ಇಂಥ ಒಂದು ಹಿರಿಯಾಸೆ ಇತ್ತು. ಅಮೇರಿಕೆಯ ನಾಲ್ಕೂ ಮೂಲೆಗಳನ್ನು ನೋಡಬೇಕು ಎಂದು. ಆದರೆ ಭಾರತದ ಮೂರು ಪಟ್ಟು ದೊಡ್ಡದಾದ ದೇಶವನ್ನು ಸುತ್ತುಹಾಕಿ ಬರುವುದು ಸುಲಭಸಾಧ್ಯವಾದ ಮಾತಾಗಿರಲಿಲ್ಲ. ಹಣ ತುಂಬ ಬೇಕು. ಸಾಕಷ್ಟು ವಿರಾಮ ಬೇಕು. ಮೋಟಾರಿನ ಪ್ರಯಾಣವೇ ಸಾಕಷ್ಟು ವೆಚ್ಚದ್ದು. ಸುಖಪ್ರಯಾಣಕ್ಕೆ ಮೀಸಲಾದ ಖಾಸಗಿ ಟ್ರೇನುಗಳು ಇನ್ನೂ ವೆಚ್ಚದವು. ಕೇವಲ ಪೂರ್ವಕರಾವಳಿಯಿಂದ ಪಶ್ಚಿಮ ಕರಾವಳಿಗೆ ಹೋಗಲು (೩೦೦ ಮೈಲು) ವಾಹನದ ಖರ್ಚೆ ಏಳು ನೂರು ರೂಪಾಯಿ ಆಗಿತ್ತಿದ್ದಾಗ ಇಡೀ ಅಮೇರಿಕೆ ತಿರುಗುವ ತ್ರಾಣ ಕೇವಲ ವಿದ್ಯಾರ್ಥಿಯಾದ ನನಗೆ ಹೇಗೆ ಬರಬೇಕು? ಏನೋ ಕಷ್ಟಪಟ್ಟು ರಜೆಯಲ್ಲಿ ನೌಕರಿ ಮಾಡಿ ಹಣಗಳಿಸಿದೆನೆಂದು ಇಟ್ಟುಕೊಳ್ಳೋಣ. ಆದರೆ ಎರಡು ತಿಂಗಳಿಗೂ ಮಿಕ್ಕಿ ಕಾಲೇಜು–ಅಭ್ಯಾಸಗಳ ಪರಿವೆಯಿಲ್ಲದೇ ಸುತ್ತಾಡಲು ಪ್ರಾಧ್ಯಾಪಕರು ಬಿಡಬೇಕಲ್ಲ? ಅಂತೆಯೇ ತುಂಬ ಆಲೋಚಿಸಿ ಉಪಾಯವೊಂದನ್ನು ಹುಡುಕಿದೆ. ನನ್ನ ವಿಷಯಕ್ಕೆ ಹೊಂದಿದ ಹೆಚ್ಚಿನ ತರಬೇತಿಗೆ ಹೋಗುತ್ತೇನೆಂದರೆ ನನ್ನನ್ನು ಅಡ್ಡಗಟ್ಟಲಾರರೆಂದು ನನಗೆ ಗೊತ್ತು. ಹೀಗಾಗಿ ಕೀಟಶಾಸ್ತ್ರದ ವ್ಯಾವಹಾರಿಕ ತರಬೇತಿಯನ್ನು (applying and practical training) ಅಮೇರಿಕನ್ ಸರಕಾರದಿಂದ ನನಗೆ ಕೊಡಿಸುವಂತೆ ಭಾರತೀಯ ರಾಯಭಾರ–ಕಚೇರಿಗೆ ಅರ್ಜಿ ಸಲ್ಲಿಸಿದೆ. ವಿದೇಶಗಳಲ್ಲಿದ್ದರೂ ನಮ್ಮ ಭಾರತೀಯ ಆಫೀಸುಗಳ ಹುಟ್ಟುಗುಣ ಮಾಯವಾಗುವುದಿಲ್ಲ. ಹೀಗಾಗಿ ಯಾವ ಕೆಲಸವೂ ಸಕಾಲಕ್ಕೆ ಆಗುವುದಿಲ್ಲ. ತಿಂಗಳಾನುಗಟ್ಟಲೆ ಕಾದರೂ ನನ್ನ ಪತ್ರಕ್ಕೆ ಉತ್ತರ ಬರಲಿಲ್ಲ. ಒಂದೆರಡು ನೆನಪಿನ ಪತ್ರಗಳನ್ನೂ ಕಳಿಸಿಯಾಯಿತು. ಅದಕ್ಕೂ ಉತ್ತರವಿಲ್ಲ. ಕೊನೆಗೆ ನಾನು ಈ ವಿಚಾರವನ್ನು ಮರೆವಿನ ಖಾತೆಗೆ ಜಮಾಮಾಡಿಬಿಟ್ಟೆ!

ಎಂಟು ತಿಂಗಳ ನಂತರ ಒಂದು ದಿನ ನಾನು ಎಂದೋ ಮರೆತ ಪತ್ರಕ್ಕೆ ಉತ್ತರವಾಗಿ ಅಮೇರಿಕ–ಸರಕಾರ ವಿವಿಧ ರಾಜ್ಯಗಳಲ್ಲಿಯ ವಿಶಿಷ್ಟ-ತರಬೇತಿ-ಕೇಂದ್ರಗಳಲ್ಲಿ ನನಗೆ ತರಬೇತಿಯನ್ನು ಕೊಡಲು ಒಪ್ಪಿದ್ದಾರೆಂದು ಪತ್ರ ಬಂದಿತು. ಎರಡು ತಿಂಗಳ ಅವಧಿಯಲ್ಲಿ ವಾಶಿಂಗ್ಟನ್ (ಡಿ.ಸಿ.) ಮೇರಿಲಂಡ್, ಉತ್ತರ ಮತ್ತು ದಕ್ಷಿಣ ಕೆರೊಲಾಯನ್, ಟೆನೆಸಿ, ಜೊರ್ಜಿಯಾ, ಫ್ಲಾರಿಡಾ, ಅಲಬಾಮಾ, ಮಿಸಿಸಿಪಿ ರಾಜ್ಯಗಳಲ್ಲಿ ನನ್ನ ತರಬೇತಿಯ ಏರ್ಪಾಡು ಮಾಡಲಾಗಿತ್ತು. ಪತ್ರವನ್ನೂ ತರಬೇತಿಯ ವೇಳಾಪತ್ರಿಕೆಯನ್ನೂ ತೆಗೆದುಕೊಂಡು ಪ್ರಾಧ್ಯಾಪಕರತ್ತ ಧಾವಿಸಿದೆ. ಎಲ್ಲ ವಿವರಗಳನ್ನೂ ಓದಿದ ಪ್ರಾಧ್ಯಾಪಕರು ಹರ್ಷದಿಂದ.

“ಕ್ರಿಶ್ ಇಂಥ ಸುಸಂಧಿ ಎಷ್ಟು ಜನರಿಗೆ ತಾನೇ ದೊರೆಯುತ್ತದೆ? ನನಗೆ ಏನಾದರೂ ಇಂಥ ಸಂಧಿ ಸಿಕ್ಕರೆ ಇದೊ ಈಗಲೇ ಹೊರಟುಬಿಡುತ್ತೇನೆ” ಎಂದರು. ಇದರ ಹೊರತಾಗಿ ಬೇರೆ ಅನುಮತಿ ಬೇಕಿರಲಿಲ್ಲ. ಪತ್ರದೊಂದಿಗೆ ನನ್ನನ್ನು ಕರೆದುಕೊಂಡು ಡಿಪಾರ್ಟಮೆಂಟಿನ ಮುಖ್ಯಸ್ಥರತ್ತ ಹೋದರು. ಮುಖ್ಯಸ್ಥರೂ ಕೂಡಲೇ ಒಪ್ಪಿ, ನನ್ನ ಅನುಮತಿ ಪಡೆದು ವಾಶಿಂಗ್ಟನ್ನಿಂದ ನನಗೆ ಬಂದ ಪತ್ರದ ಹತ್ತೆಂಟು ನಕಲುಗಳನ್ನು ಮಾಡಿಸಿ ತಮ್ಮೊಡನೆ ಇಟ್ಟುಕೊಂಡರು. ಅವರೆಲ್ಲರ ದೃಷ್ಟಿಯಲ್ಲಿ ನಾನೀಗ ಆದರ್ಶ-ವಿದ್ಯಾರ್ಥಿ. ಈ ತನಕ ನಮ್ಮ ಕಾಲೇಜಿನ ಯಾವ ವಿದ್ಯಾರ್ಥಿಯೂ ಈ ತರಬೇತಿ ಬಗ್ಗೆ ವಿಚಾರಿಸಿರಲಿಲ್ಲವಂತೆ!

ಸರಿ, ಅಮೇರಿಕೆಯಲ್ಲಿ ಸುತ್ತಾಡುವ ಸುಯೋಗ ಅಂತೂ ಒದಗಿತು. ಆದರೆ ಪ್ರಯಾಣದ ವೆಚ್ಚಕ್ಕೆ ಏನು ಮಾಡುವದೆಂದು ವಿಚಾರಿಸಿದಾಗ ಭಯವಾಗತೊಡಗಿತು. ಮೋಟಾರು–ರೇಲ್ವೆ ಕಂಪನಿಯವರೇನಾದರೂ ಸವಲತ್ತುಗಳನ್ನು ಕೊಡುತ್ತಾರೆಯೇ ಎಂದು ಬರೆದು ವಿಚಾರಿಸಿದೆ. ಇಲ್ಲವೆಂದು ಉತ್ತರ ಬಂದಿತು. ಯಾರೋ ಎಂದೋ ವಿದೇಶದವರಿಗೆ ಅಮೇರಿಕೆಯ ಹೊರಗಿನಿಂದೆ ಟಿಕೆಟ್ ತರಿಸಿದರೆ ತೊಂಬತ್ತೊಂಬತ್ತು ಡಾಲರುಗಳಲ್ಲಿ ತೊಂಬತ್ತೊಂಬತ್ತು ದಿವಸ ಅಮೇರಿಕ–ಕೆನಡಾಗಳಲ್ಲಿ ಬೇಕಾದಲ್ಲಿ ಬೇಕಾದಷ್ಟು ಹೋಗಿ ಬರುವ ಸೌಕರ್ಯವಿದೆಯೆಂದು ಹೇಳಿದ್ದು ನೆನಪಿಗೆ ಬಂತು. ಅಂತೆಯೇ ಅಮೇರಿಕೆಯ ಪ್ರಮುಖ ಮೋಟಾರ್ ಕಂಪನಿಯಾದ `ಗ್ರೇಹೌಂಡ್’ದ ಲಂಡನ್ ಆಫೀಸಿಗೆ ಪತ್ರ ಬರೆದು ಹಾಕಿದೆ. ದುರ್ದೈವಕ್ಕೆ ಅವರ ಆಫೀಸು ಬದಲಾಗಿದ್ದರಿಂದ ಅವರಿಗೆ ಅದು ಕೂಡಲೇ ಸಿಗಲಿಲ್ಲ. ಪ್ರಯಾಣ ಪ್ರಾರಂಭಿಸಲು ಬಹಳ ದಿನಗಳಿರಲಿಲ್ಲ. ಕೊನೆಯ ಪ್ರಯತ್ನವೆಂದು ಲಂಡನ್ದಲ್ಲಿದ್ದ ನನ್ನ ಸ್ನೇಹಿತನಿಗೆ `ಗ್ರೇಹೌಂಡ’ ಕಂಪನಿಗೆ ಹೋಗಿ ವೈಯುಕ್ತಿಕವಾಗಿ ವಿಚಾರಿಸಲು ಕೇಳಿಕೊಂಡೆ. ಎಂಟೇ ದಿನಗಳಲ್ಲಿ ಇಬ್ಬರಿಂದಲೂ ಉತ್ತರ ಬಂದಿತು. ಅಂತಹ ಟಿಕೆಟ್ ಲಭ್ಯವಿದೆಯೆಂದು, ನನಗಾದ ಆನಂದಕ್ಕೆ ಮಿತಿಯಿರಲಿಲ್ಲ. ಕೂಡಲೇ ಹಣ ಕಳಿಸಿ ಟಿಕೆಟ್ ತರಿಸಿಕೊಂಡೆ. ಅಮೇರಿಕೆಯಲ್ಲಿ ಸ್ವಂತ ಕತ್ತೆಯ ಮೇಲೆ ಪ್ರವಾಸ ಮಾಡಿದರೂ ಇಷ್ಟು ಅಗ್ಗದಲ್ಲಿ ದೇಶವನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಹೊರಡುವ ತಯಾರಿ ನಡೆಸಿದೆ, ಕೆಲವೇ ಬಟ್ಟೆ-ಬರೆ, ಕ್ಯಾಮರಾ, ಚಲನಚಿತ್ರ ಕ್ಯಾಮರಾ, ದೂರದರ್ಶಕಯಂತ್ರಗಳನ್ನು ತೆಗೆದುಕೊಂಡೆ. ಸಾಯರೆಕ್ಯೂಸಿನ ನನ್ನ ಭಾರತೀಯ ಮಿತ್ರರೆಲ್ಲ ತಮಗೆ ದೊರೆಯದ ಈ ಸುಸಂಧಿಯ ಬಗ್ಗೆ ನನ್ನನ್ನು ಅಭಿನಂದಿಸಿ ಉತ್ಸಾಹದಿಂದ ಬೀಳ್ಕೊಟ್ಟರು. ಅಮೇರಿಕೆಯಲ್ಲಿ ಎರಡೇ ಮೋಟಾರ್ ಕಂಪನಿಗಳಿವೆ. ಒಂದು ಗ್ರೆಹೌಂಡ್ ಇನ್ನೊಂದು ಟ್ರೇಲ್ವೇಸ್ ಇವು ಖಾಸಗಿಯಾದರೂ ಅತ್ಯುತ್ತಮ ಸಂಘಟನೆಯುಳ್ಳವು. ಈ ಕಂಪನಿಯ ಬಸ್ಸುಗಳು ಅಮೇರಿಕೆಯಲ್ಲಿ ನಾಲ್ಕೂ ಮೂಲೆಗೆ ಹಗಲಿರಳೂ ಓಡಾಡುತ್ತಿರುತ್ತವೆ. ಬಸ್ಸುಗಳಲ್ಲಿ ಸಾಮಾನುಗಳೊಂದಿಗೆ ಪ್ರವಾಸಮಾಡುವ ಪರಿಪಾಠವಿಲ್ಲ. ಎಲ್ಲರ ಕೈಯಲ್ಲಿ ಹಗುರಾದ ಒಂದೊಂದು ಸೂಟಕೇಸ್. ಬಸ್-ನಿಲ್ದಾಣದಲ್ಲಿ ಗದ್ದಲ, ಕೂಗಾಟ, ನೂಗ್ಗಾಟ, ಚೀರಾಟಗಳಿಲ್ಲ. ಬಸ್ಸಿನ ಒಳಗೆ ಹೊಕ್ಕ ಕೂಡಲೇ ಕುಳಿತುಕೊಳ್ಳಲು. ಅಚ್ಚುಕಟ್ಟಾದ ಸುಖಾಸನಗಳು. ಇನ್ನೊಂದು ಬಾರಿ ಹೋಗಿಬರುತ್ತೇನೆಂದು ಪ್ರಿಯತಮೆಗೆ ಹೇಳುವದಿದ್ದರೆ ಹಲವಾರು ಫೋನುಗಳು ಸಿದ್ಧವಾಗಿ ನಿಂತಿರುತ್ತವೆ. ಇನ್ನೊಂದು ಕಡೆ ನೂರಾರು ಉಕ್ಕಿನ ಕಪಾಟುಗಳು ನಿಮ್ಮ ಸಾಮಾನು ಸ್ವೀಕರಿಸಲು ತಯಾರಾಗಿ ನಿಂತಿರುತ್ತವೆ. ನಿಮ್ಮ ಸಾಮಾನುಗಳನ್ನು ಈ ಕಪಾಟುಗಳ ವಶಕ್ಕೆ ಒಪ್ಪಿಸಿದರಾಯಿತು. ಇಪ್ಪತ್ತು ಸೆಂಟು ಕೊಟ್ಟರೆ ಇಪ್ಪತ್ತುನಾಲ್ಕು ಗಂಟೆಯೂ ಕಾಯುತ್ತಿರುತ್ತವೆ. ಒಂದೆಡೆ ಬೇಕಾದ ತಿಂಡಿ–ತಿನಸುಗಳ ಅಂಗಡಿ ನಿಮ್ಮ ಸೇವೆಗೆ ಸದಾ ಸಿದ್ಧವಿದೆ. ಅಮೇರಿಕೆಯ ರಾಜಧಾನಿ ವಾಶಿಂಗಟನ್ನಿಗೆ ಮೊದಲು ಹೋಗಬೇಕಾದ್ದರಿಂದ ಟಿಕೆಟ್ಟಿನ ಮೇಲೆ ಅದರ ಹೆಸರನ್ನು ಬರೆಸಿಕೊಂಡೆ. ಸಾಮಾನಿನ ಸಂಪೂರ್ಣ ಜವಾಬ್ದಾರಿ ಕಂಪನಿಯವರದು. ನಾವು ಏನೂ ಯೋಚಿಸಬೇಕಾಗಿಲ್ಲ. ಬಸ್ಸು ಬಿಡಲು ಹದಿನೈದು ನಿಮಿಷಗಳಿದ್ದವು. ಅಂತೆಯೇ ಸುಖಾಸನವೊಂದರಲ್ಲಿ ಕುಳಿತೆ. ಬಸ್ಸಿನಲ್ಲಿ ಎಷ್ಟೋ ಮುದುಕಿಯರು ಮದುಮಗಳ ಶಿಸ್ತಿನಿಂದ ಅಲಂಕರಿಸಿಕೊಂಡು ಪುಸ್ತಕವನ್ನೊ ಪತ್ರಿಕೆಯನ್ನೊ ಓದುತ್ತ ಕುಳಿತ್ತಿದ್ದರು.

ಸ್ಪೀಕರಿನ ಮೇಲೆ ಬಸ್ಸು ಇನ್ನು ಐದು ನಿಮಿಷಗಳಲ್ಲಿ ಬಿಡಲಿದೆಯೆಂದು ತಿಳಿಸಿ ಪ್ರಯಾಣಿಕರಿಗೆ ತಮ್ಮ ಸ್ಥಳದಲ್ಲಿ ಕುಳಿತುಕೊಳ್ಳುವಂತೆ ಕೇಳಿಕೊಳ್ಳಲಾಯಿತು. ಸುಖಪ್ರಯಾಣವನ್ನು ಬಯಸಿ ತಮ್ಮ ಬಸ್ಸಿನಲ್ಲಿ ಪ್ರವಾಸ ಕೈಕೊಂಡದ್ದಕ್ಕೆ ಅಭಿನಂದಿಸಲಾಯಿತು. ಬಸ್ಸಿನ ಡ್ರಾಯವ್ಹರನು (ಈ ಬಸ್ಸುಗಳಲ್ಲಿ ಕಂಡಕ್ಟರ್ ಇರುವುದಿಲ್ಲ. ಆತನ ಅಗತ್ಯವೂ ಇಲ್ಲ.) ನಗುಮುಖದಿಂದ ನಮ್ಮನ್ನೆಲ್ಲ ಬರಮಾಡಿಕೊಂಡ. ಬೃಹದಾಕಾರದ ದೊಡ್ಡ ಬಸ್ಸು. ಅದಕ್ಕೆ ಒಂದೇ ಬಾಗಿಲು, ಡ್ರಾಯವ್ಹರನೇ ತೆಗೆದು ಮುಚ್ಚುತ್ತಾನೆ. ಮೋಟಾರಿನ ಒಳಗೆಲ್ಲ ವಿಮಾನಿನ ಒಳಗಿರುವಂತೆ ವ್ಯವಸ್ಥೆ. ಪ್ರತಿಯೊಂದು ಸುಖಾಸನಕ್ಕೆ ಒಂದೊಂದು ದೀಪ. ಪ್ರತಿಯೊಬ್ಬರಿಗೂ ಒಂದೊಂದು ರೇಡಿಯೋ. ತಮಗೆ ಬೇಕಾದ ಸ್ಟೇಷನ್ ಕೇಳಬಹುದು. ಪಕ್ಕದ ಪ್ರಯಾಣಿಕರಿಗೆ ತೊಂದರೆಯಾಗದಂತೆ `ಇಯರ್-ಫೋನ್’ಗಳನ್ನು ಇಟ್ಟಿದ್ದಾರೆ. ಅವನ್ನು ನಾವು ಹಾಕಿಕೊಂಡು ತಮಗೆ ಬೇಕಾದ ಕಾರ್ಯಕ್ರಮವನ್ನು (ಇತರರಿಗೆ ತೊಂದರೆಯಾಗದಂತೆ) ಕೇಳಬಹುದು. ಅಮೇರಿಕೆಯ ದರ್ಶನಕ್ಕೆ ಹೊರಟವರಿಗೆ ಸೃಷ್ಟಿ ಸೌಂದರ್ಯದ ಪೂರ್ಣ ಕಲ್ಪನೆಯಾಗಬೇಕೆಂದು ದೊಡ್ಡ ದೊಡ್ಡ ಕಾಜುಗಳನ್ನು ಕೂಡ್ರಿಸಿದ್ದಾರೆ; ತಿಳಿನೀಲಿ-ಬಣ್ಣದ ಈ ಕಾಜುಗಳಿಂದ ಬಸ್ಸಿನಲ್ಲೂ ಕಣ್ಣಿಗೆ ತೊಂದರೆಯಾಗಲಾರದು. ಬಸ್ಸನ್ನು `ಏರ್-ಕಂಡೀಶನ್’ ಮಾಡಿದ್ದಾರೆ. ಒಳಗೇ ಕಕ್ಕಸದ ವ್ಯವಸ್ಥೆಯೂ ಇರುತ್ತದೆ. ಕುಳಿತಿದ್ದ ಹಾಗೆಯೇ ನಮ್ಮ ದೇಶದಲ್ಲಿಯ ಬಸ್ಸಿನ ಪ್ರಯಾಣ ನೆನಪಿಗೆ ಬಂದಿತು!

Kamat on a

ದೆವ್ವದಂಥ ಮೋಟಾರು, ನಿಲ್ದಾಣವನ್ನು ಬಿಟ್ಟಿತು. ಊರಿನ ಹಸಿರು ದೀಪಗಳನ್ನು ದಾಟಿ ಮುಖ್ಯ ರಾಜ್ಯಮಾರ್ಗವನ್ನು ಸೇರಿತು. ಬಸ್ಸು ಹಿತವಾದ ವೇಗದಿಂದ ಚಲಿಸುತ್ತಿದ್ದಂತೆ ಡ್ರಾಯವ್ಹರನು ಧ್ವನಿವರ್ಧಕವನ್ನು ಎತ್ತಿಕೊಂಡು ತನ್ನ ಹೆಸರೇನು, ತಾನು ಎಲ್ಲಿಯ ತನಕ ನಮ್ಮ ಸಂಗಾತಿಯಾಗಲಿರುವ, ನಮ್ಮ ಫಲಹಾರ ಎಲ್ಲಿ ದೊರೆಯುತ್ತದೆ. ಊಟವೆಲ್ಲಿ ದೊರೆಯುತ್ತದೆ ಎಂದು ಮುಂತಾಗಿ ವಿವರಿಸಿ ಹೇಳಿದ. ಮೋಟಾರು ತಾಸಿಗೆ ಎಪ್ಪತ್ತು–ಎಂಬತ್ತು ಮೈಲು ವೇಗದಿಂದ ಓಡುತ್ತಿತ್ತು. ಅಮೇರಿಕೆಯಲ್ಲಿ ರಾಜಮಾರ್ಗಗಳೆಲ್ಲ ಊರ ಹೊರಗಿವೆ. ಊರೊಳಗಿಂದ ರಾಜಮಾರ್ಗಗಳಿಗೆ ಹೋಗಲು ಕವಲು–ದಾರಿಗಳಿರುತ್ತವೆ. ಕವಲು–ದಾರಿಗಳ ಮೇಲೆ ಅಧಿಕಾರಿಗಳು ಪ್ರಯಾಣ ಎಲ್ಲಿಂದ ಪ್ರಾರಂಭವಾಯಿತೆಂದು ತೋರಿಸುವ ಟಿಕೆಟು ಕೊಟ್ಟಿರುತ್ತಾರೆ. ಬೇರೆ ಊರನ್ನು ಪ್ರವೇಶಿಸಿದಾಗ ಕವಲು–ದಾರಿಯಲ್ಲಿ ಹೋಗುತ್ತಿದ್ದಂತೆ ಅಲ್ಲಿ ಆ ಟಿಕೆಟು ಕೊಟ್ಟು ಪ್ರತಿ ಮೈಲಿಗೆ ಇಂತಿಷ್ಟು ಕರ ಎಂದು ಕೊಡಬೇಕು. ನಮ್ಮ ಬಸ್ಸು ಸಣ್ಣ ಊರೊಳಗೆ ಪ್ರವೇಶಿಸುವ ಗೋಜಿಗೆ ಹೋಗದೇ ರಾಜಮಾರ್ಗದಲ್ಲೆ ಸಾಗುತ್ತ ದೊಡ್ಡ ಊರುಗಳಲ್ಲಿ ಮಾತ್ರ ತಂಗುತ್ತಿತ್ತು. ಈ ಊರುಗಳಲ್ಲಿ ತಿಂಡಿ, ತೀರ್ಥ, ಊಟಗಳಿಗೆ ಅಥವಾ ಆ ಊರಿನ ವೈಶಿಷ್ಟ್ಯ ಪೂರ್ಣ ಚಿತ್ರವುಳ್ಳ ಪೋಸ್ಟಕಾರ್ಡುಗಳ ಮೇಲೆ ನಾಲ್ಕು ಸಾಲು ಗೀಚಿ ಪೋಸ್ಟಿಗೆ ಹಾಕುವಷ್ಟು ಹೊತ್ತು ಬಸ್ಸು ನಿಂತಿದ್ದು ಮತ್ತೆ ಮುಂದುವರಿಯುತ್ತಿತ್ತು.

ಹೊಸ ಬಸ್–ನಿಲ್ದಾಣ ಸೇರುವ ಮೊದಲು, ಡ್ರಾಯವ್ಹರನು ಬಸ್ಸಿನ ನಂಬರನ್ನು ಒತ್ತಿ ಹೇಳಿ, ಬಸ್ಸು ಎಷ್ಟು ಹೊತ್ತು ನಿಲ್ಲುವದೆಂದು ಸ್ಪಷ್ಟಪಡಿಸುತ್ತಿದ್ದ. `ಗೆಟಿಸ್ಬರ್ಗ’ದಲ್ಲಿ ಬಸ್ಸು ಇಪ್ಪತ್ತೈದು ನಿಮಿಷ ನಿಲ್ಲುವದೆಂದು ಮೊದಲೇ ಹೇಳಲಾಗಿತ್ತು. ಒಂದಿಷ್ಟು ತಿಂಡಿ ತಿಂದು ಬರುವದೊರಳಗಾಗಿ ಬಸ್ಸಿನ ನಂಬರು ಮರೆತುಹೋಯಿತು! ಒಂದೇ ತೆರನಾಗಿ ನಿಲ್ದಾಣದಲ್ಲಿ ನಿಂತಿದ್ದ ಹದಿನೆಂಟು ಇಪ್ಪತ್ತು ಬಸ್ಸುಗಳಲ್ಲಿ ನನ್ನದು ಯಾವುದೆಂದು ತಿಳಿಯದೆ ಗಲಿಬಿಲಿಗೊಂಡೆ. ಅಲ್ಲಿ ನಿಂತಿದ್ದ ಡ್ರಾಯವ್ಹರನಿಗೆ ನನ್ನ ಬಸ್ಸಿನ ವಿವರವನ್ನು ಹೇಳಿದಾಗ ಅದಾಗಲೇ ಹೋಗಿಬಿಟ್ಟಿದೆಯೆಂದ. ಆಕಾಶವೇ ನನ್ನ ಮೇಲೆ ಕಳಚಿಬಿದ್ದಂತಾಯಿತು. ಲಗುಬಗೆಯಿಂದ ಆಫೀಸಿನೊಳಗೆ ಹೋಗಿ ವಿಚಾರಿಸಿದೆ. ಅರ್ಧತಾಸಿನಲ್ಲಿ ಇನ್ನೊಂದು ಬಸ್ಸು ಬಿಡಲಿದೆಯೆಂದು ಹೇಳಿ ಅದರಲ್ಲಿ ಹೋಗಬಹುದೆಂದರು. ಸಾಮಾನಿನ ಬಗ್ಗೆ ವಿಚಾರಿಸಿದಾಗ `ವಾಶಿಂಗ್ಟನ್ನಿನಲ್ಲಿ ಗೊತ್ತಾಗಬಹುದು’ ಎಂದು ಹೇಳಿದರು. ಒಂದಿಷ್ಟು ಚಿಲ್ಲರೆ ಹಣ, ಟಿಕೆಟಿನ ತುಣುಕು ಬಿಟ್ಟರೆ ಉಳಿದೆಲ್ಲ ಸಾಮಾನೂ ಮೊದಲ ಬಸ್ಸಿನಲ್ಲಿತ್ತು. ವಾಶಿಂಗ್ಟನ್ ತಲುಪಿದ ಮೇಲೆ ಅಲ್ಲಿಯ ಆಫೀಸಿನಲ್ಲಿ ಬಿಟ್ಟ ಸಾಮಾನುಗಳು ಎಲ್ಲಿ ದೊರೆಯುತ್ತವೆಂದು ಒಬ್ಬನಿಗೆ ವಿಚಾರಿಸಿದಾಗ ಕೋಣೆಯೊಂದನ್ನು ತೋರಿಸಿದ. ಎರಡು ಮೂರು ಸಲ ಬಾಗಿಲು ತಟ್ಟಿದರೂ ಯಾರೂ ತೆಗೆಯದದ್ದನ್ನು ನೋಡಿ, ನಾನೇ ಒಳ ಹೋದೆ ಯಾರು ಇರಲಿಲ್ಲ. ಆದರೆ ಎದುರಿಗೆ ನನ್ನ ಸಾಮಾನುಗಳು ಕಾಣುವಂತೆ ಇಟ್ಟಿದ್ದರು. ಹೋದ ಜೀವ ಮರಳಿ ಬಂದಾಂತಾಯಿತು. ಹತ್ತು ನಿಮಿಷಗಳಲ್ಲಿ ಅಧಿಕಾರಿಯೊಬ್ಬ ಬಂದ, ನಾನು ಮಾತನಾಡುವ ಮೊದಲೆ `ತಡವಾಗಿ ಬಂದದ್ದಕ್ಕೆ ಕ್ಷಮಿಸಬೇಕು ಇವು ತಮ್ಮ ಸಾಮಾನುಗಳಷ್ಟೆ? ತೆಗೆದುಕೊಂಡು ಹೋಗಬಹುದು’ ಎಂದ. ಒಂದೂ ಸಾಕ್ಷಿ ಪುರಾವೆಗಳಿಲ್ಲದೇ ತೀರ ಅಪರಿಚಿತ ಊರಿನಲ್ಲಿ ಕಳೆದುಹೋಗಿರಬಹುದೆಂದು ನಂಬಿದ್ದ ಸಾಮಾನುಗಳು ಸುರಕ್ಷಿತವಾಗಿ ಸಿಗಬಹುದೆಂದು ಕನಸು-ಮನಸಿನಲ್ಲಿಯೂ ಎಣಿಸಿರಲಿಲ.

ಮೊದಲೇ ನಿರ್ದಿಷ್ಟ ಪಡಿಸಿದಂತೆ ವಾಶಿಂಗ್ಟನ್ನಿನಲ್ಲಿ `ವಾಯ್.ಎಂ.ಸಿ.ಎ.’ದಲ್ಲಿ ಇಳಿದುಕೊಂಡೆ. ಬಹಳ ನಿದ್ರೆ ಬಂದಿದ್ದರಿಂದ ಊಟ ಕೂಡ ಮಾಡದೇ ಮಲಗಿಬಿಟ್ಟೆ. ಮರುದಿನ ಬೆಳಿಗ್ಗೆ ತರಬೇತಿ–ಕೇಂದ್ರದ ಅಧಿಕಾರಿಯನ್ನು ಭೆಟ್ಟಿಯಾಗಬೇಕಾದ್ದರಿಂದ ಲಗುಬಗೆಯಿಂದ `ಬಾತ್-ರೂಮ್’ದತ್ತ ಪ್ರಾತರ್ವಿಧಿಗೆ ಧಾವಿಸಿದೆ. ಎದುರಿಗೆ ದೊಡ್ಡದೊಂದು ಬೋರ್ಡು. “ವಸತಿಗಾರರು ತಮ್ಮ ಕೋಣೆಯಿಂದ ಹೊರಗೆ ಬರುವಾಗ ಒಂದು ತಾವೆಲ್ ಆದರೂ ಸೊಂಟಕ್ಕೆ ಸುತ್ತಿರಬೇಕು” ಎಂದು ಸ್ಪಷ್ಟವಾಗಿ ಬರೆಯಲಾಗಿತ್ತು! ಅರ್ಥವಾಗದ್ದರಿಂದ ಎರಡು ಬಾರಿ ಓದಿದೆ. ತಿಳಿಯದೇ ಹಾಗೇ ಒಳಹೊಕ್ಕೆ. ಎದುರಿನ ನೋಟ ಅಚ್ಚರಿಗೂ ಹೊರತಾಗಿತ್ತು. ನಾಲ್ವರು ನಗ್ನ ತರುಣರು ಬಾಗಿಲಿಲ್ಲದ ಕಮೋಡ್–ಕಕ್ಕಸಗಳ ಮೇಲೆ ವಿಶ್ರಮಿಸಿ, ನಡೆದ ಹಿಂದಿನ ಸಭೆಯೊಂದರ ಗೊತ್ತುಗುರಿಗಳನ್ನು ಗಂಭೀರವಾಗಿ ಚರ್ಚಿಸುತ್ತಿದ್ದರು. ಅತ್ತ ಮುಕ್ಕಾಲು–ನಗ್ನನೊಬ್ಬ ಕನ್ನಡಿಯಲ್ಲಿ ನೋಡುತ್ತ ದಂತಧಾವನ ನಡೆಸಿದ್ದ. ಇನ್ನೊಬ್ಬ ನಗ್ನಮೂರ್ತಿ ಶೇವಿಂಗ್ ನಡೆಸಿದ್ದ. ಹಾಗೇ ಮುಂದೆ ಹೋದರೆ ಇನ್ನೊಬ್ಬರು ನಗ್ನರು ಸ್ನಾನ ಮಾಡುತ್ತಿದ್ದರು. ಇವರ ನಡುವೆ ಸಾಕಷ್ಟು ಬಟ್ಟೆ ಧರಿಸಿದ ನನಗೇ ನಾಚಿಕೆಯಾಯಿತು. ಆದರೆ ಅವರಾರೂ ಇದನ್ನು ಲಕ್ಷಿಸಿದಂತಿರಲಿಲ್ಲ. ಆಗ ಅರ್ಥವಾಯಿತು. ಹೊರಗೆ ತೂಗುಹಾಕಿದ ಬೋರ್ಡಿನ ಬರಹ ಏನು ಹೇಳುತ್ತದೆ ಎಂದು. ಅತ್ತಿತ್ತ ನೋಡದೆ ಮುಖ ತೊಳೆದು ಹೊರಗೆ ಬಂದೆ. ಆಮೇಲೆ ಅಲ್ಲಿದ್ದಷ್ಟು ದಿನ ಎಲ್ಲರಿಗಿಂತ ಮೊದಲು ಎದ್ದು ಪ್ರಾತರ್ವಿಧಿಗಳನ್ನು ಮುಗಿಸಿಬಿಡುತ್ತಿದ್ದೆ.

ವಾಶಿಂಗ್ಟನ್ನಿನಲ್ಲಿ ತರಬೇತಿಯ ಜೊತೆಗೆ ಪ್ರೇಕ್ಷಣೀಯ ಸ್ಥಳಗಳಾದ ಶ್ವೇತಭವನ ಪೆಂಟೋನ, ವಾಶಿಂಗ್ಟನ್, ಲಿಂಕನ್, ಜಾಫರ್ಸನ್ನರ ಸ್ಮಾರಕಗಳು, ಕಲಾಕೇಂದ್ರ, ವಸ್ತುಸಂಗ್ರಹಾಲಯ, ಕೆಪಿಟಾಲ್–ಭವನ ಮುಂತಾದವುಗಳನ್ನು ನೋಡಿದೆ.

ಕೃಷಿಭಾಗದ ಪ್ರಯೋಗ–ವಿಭಾಗವೆಲ್ಲ ಬೆಲ್ಸವಿಲ್ (ಮೆರಿಲಂಡ್)ದಲ್ಲಿ ಇದ್ದುದ್ದರಿಂದ ಅಲ್ಲಿಯೂ ಹೋಗಬೇಕಾಯಿತು. ಅದೊಂದು ಪ್ರಶಾಂತವಾದ ಹಳ್ಳಿಯಾದ್ದರಿಂದ ಸಂಶೋಧಕರು ಯಾವ ಅಡತಡೆಗಳೂ ಇಲ್ಲದೇ ತಮ್ಮ ಕೆಲಸದಲ್ಲಿ ತೊಡಗಿರುತ್ತಾರೆ. ಮೂರುನಾಲ್ಕು ದಶಕಗಳ ಹಿಂದೆ–ಪ್ರಥಮ ಮಹಾಯುದ್ಧದ ನಂತರ ಅಮೇರಿಕಕ್ಕೆ ಭಾರೀ ನಿರುದ್ಯೋಗ–ಸಮಸ್ಯೆ ಒದಗಿದಾಗ ಅದನ್ನೆದುರಿಸಲು ಆಗಿನ ಸರಕಾರ ಸಾವಿರಾರು ಜನರಿಗೆ ಕಟ್ಟಿಗೆಯ ಕಟ್ಟಡಗಳನ್ನು ಕಟ್ಟುವ ಕೆಲಸ ಒದಗಿಸಿತು. ಈ ಕಟ್ಟಡಗಳು ಅತ್ಯಂತ ಪ್ರೇಕ್ಷಣಿಯವಾಗಿವೆ. ಅಂದಿನ ಸಂತ್ರಸ್ತರು ಕಟ್ಟಿದ ಮಾರ್ಗಗಳು ಇಂದು ದೇಶಕ್ಕೆ ವರದಾನವಾಗಿ ಪರಿಣಮಿಸಿವೆ.

ಡೂರಹೆಮ್ (ಉತ್ತರ ಕೆರೊಲಿಯನ್)ದಲ್ಲಿ ಇಳಿದಾಗ ತಿರುಗಿ `ವಾಯ್.ಎಂ.ಸಿ.ಎ.ಗೆ ಹೋಗುವ ಮನಸ್ಸಾಗಲಿಲ್ಲ. ಸಾಮಾನುಗಳನ್ನು ಬಸ್–ನಿಲ್ದಾಣದ ಕೋಣೆಯ ಉಕ್ಕಿನ ಕಪಾಟಿನ ವಶಕ್ಕೆ ಒಪ್ಪಿಸಿ, ಇರಲು ವಸತಿಯನ್ನು ಹುಡುಕುತ್ತ ಹೊರಟೆ. ಬಹಳಷ್ಟು ಮಧ್ಯಮ ವರ್ಗದ ಅಮೇರಿಕನ್ನರು ತಮ್ಮ ಮನೆ ಸಾಕಷ್ಟು ದೊಡ್ಡದಿದ್ದರೆ, ಅದರೊಳಗಿನ ಒಂದೆರಡು ಕೋಣೆಗಳನ್ನು ಬೇರ್ಪಡಿಸಿ ತಮ್ಮ ಮನೆ ಸಾಕಷ್ಟು ದೊಡ್ಡದಿದ್ದರೆ, ಅದರೊಳಗಿನ ಒಂದೆರಡು ಕೋಣೆಗಳನ್ನು ಬೇರ್ಪಡಿಸಿ ಪ್ರವಾಸಿಗರಿಗೆ ದಿನ–ಬಾಡಿಗೆ ಕೊಡುವ ಪರಿಪಾಠವಿದೆ. ಇದು ನನಗೆ ಗೊತ್ತಿದ್ದುರಿಂದ ಇಂಥದೊಂದು ಮನೆಯನ್ನು ಹುಡುಕಿಕೊಂಡು ಹೊರಟೆ. ಒಳ್ಳೆಯ ಕೋಣೆಯೂ ಸಿಕ್ಕಿತು. ಇದುವರೆಗೆ ಹೊರಗೆ ಊಟ ಮಾಡುತ್ತಿದ್ದೆ. ಖರ್ಚು ಬಹಳ ಬರುತ್ತಿದ್ದುದರಿಂದ ಈ ಬಾರಿ ಸುಪರ್–ಮಾರ್ಕೆಟ್ಟಿಗೆ ಹೋಗಿ ಮೂರು–ನಾಲ್ಕು ವಿಧದ ತಿಂಡಿಗಳನ್ನು ಕೊಂಡು ತಂದೆ. 3 ಅರ್ಧ ಗೆಲನ್ ಹಾಲಿನ ಡಬ್ಬಿಯನ್ನು ತಂದೆ. ಪ್ರತಿಯೊಂದು ಮನೆಯಲ್ಲೂ ಬಿಸಿನೀರಿನ ವ್ಯವಸ್ಥೆಯಿದ್ದುದರಿಂದ, ಬಿಸಿನೀರಿನಲ್ಲಿ ಈ ಡಬ್ಬಿಗಳನ್ನು ಇಟ್ಟು ಆಹಾರವನ್ನು ಬಿಸಿಮಾಡಿಕೊಳ್ಳಲು ಅನುಕೂಲವಾಗುತ್ತಿತ್ತು. ಅಲ್ಲಿಂದ ಮುಂದೆ ಹೊರಗೆ ಊಟ ಮಾಡುವುದನ್ನೇ ನಿಲ್ಲಿಸಿಬಿಟ್ಟೆ.

ಭಾರತ ಸರಕಾರ ನನ್ನ ತರಬೇತಿಗಾಗಿ ಏರ್ಪಾಟು ಮಾಡಿದ್ದರಿಂದ ನನಗೆ ಅಮೇರಿಕನ್ ಸರಕಾರದ ವತಿಯಿಂದ ಒಳ್ಳೇ ಆತಿಥ್ಯ ದೊರೆಯುತ್ತಿತ್ತು.

ಭಾರತದಲ್ಲಿದ್ದಾಗ ಆಗಂತುಕರು ವಿಶಿಷ್ಟ ಸನ್ಮಾನ (V.I.P.treatment) ಪಡೆಯವುದನ್ನು ನೋಡಿದ್ದೇನೆ ಹೊರತು ನಾನೂ ಒಂದು ದಿನ ಈ ಆದರಕ್ಕೆ ಪಾತ್ರನಾಗಬಹುದೆಂದು ಎಂದೂ ಎಣಿಸಿರಲಿಲ್ಲ. ನಾನು ಹೋದಲ್ಲೆಲ್ಲ ಸಂಸ್ಥೆಯ ಉಚ್ಚ ಅಧಿಕಾರಿ ನನ್ನನ್ನು ಸ್ವತಃ ಬರಮಾಡಿಕೊಳ್ಳುತ್ತಿದ್ದ. ಆತನೊಂದಿಗೆ ಸಂಸ್ಥೆಯ ಎಲ್ಲ ಕಾರ್ಯಕಲಾಪಗಳನ್ನು ನೋಡುವ ಭಾಗ್ಯ ನನ್ನದಾಗುತ್ತಿತ್ತು. ಪ್ರತಿಯೊಬ್ಬ ಸಂಶೋಧಕರ ಪರಿಚಯಮಾಡಿಕೊಟ್ಟು ಅವರು ನಡೆಸಿದ ಸಂಶೋಧನೆಯ ಬಗ್ಗೆ ವಿವರಿಸಲು ಕೇಳಿಕೊಳ್ಳುತ್ತಿದ್ದ ಅಧಿಕಾರಿ, ಊರಿನಿಂದ ದೂರ ಪ್ರಯೋಗ ಶಾಲೆ ಇದ್ದಲ್ಲಿ ಬರಹೋಗಲು ಅಧಿಕಾರಿಯ ಸ್ವಂತ ಕಾರು ನನಗಾಗಿ ಕಾದಿರುತ್ತಿತ್ತು. ಅಧಿಕಾರಿ ಸ್ವತಃ ಡ್ರೈವ ಮಾಡುವ. ನಾಲ್ಕು ದಿನ, ಐದು ದಿನ, ನಾನಲ್ಲಿ ಇದ್ದಷ್ಟು ದಿನ ಸದಾ ನನ್ನೊಟ್ಟಿಗೆ ಇರುವ. ಅವನೇ ಬರದಿದ್ದರೇ ನಾನಿಳಿದಿದ್ದ ಹೋಟೇಲಿಗೆ ಕಾರೊಂದು ಬರುವುದು. ಸಂಜೆಗೆ ಬಿಡಲು ಮತ್ತೆ ಬರವುದು. ಕೆಲವು ಕಡೆ ಕೀಟಗಳಿಂದ ನಾಶವಾದ ಅರಣ್ಯದ ಭಾಗಗಳನ್ನು ನೋಡಲು `ಹೆಲಿಕ್ಯಾಪ್ಟರ್’ದ ಮೂಲಕ ವ್ಯವಸ್ಥೆಮಾಡಿದ್ದರು. ಅದರಲ್ಲಿ ನಾಲ್ವರೊಂದಿಗೆ ಕುಳಿತು ಹಗುರವಾಗಿ ಹವೆಯಲ್ಲಿ ತೇಲಾಡಿದ್ದಾಯಿತು. ಬಹಳಷ್ಟು ಅಧಿಕಾರಿಗಳು ನನ್ನನ್ನು ಮನೆಗೂ ಕರೆದೊಯ್ದಿರು. ತಮ್ಮ ಮಕ್ಕಳು ಭಾರತೀಯನನ್ನು ಭೆಟ್ಟಿಯಾಗಲು ಉತ್ಸುಕರಾಗಿದ್ದರೆಂದು ಕೆಲವರು ಹೇಳುವರು. ಭಾರತೀಯ ಸ್ಟಾಂಪು, ನಾಣ್ಯಗಳನ್ನು ಕಳಿಸುವಂತೆ ಕೆಲವರು ಕೇಳಿಕೊಳ್ಳುವರು, ಹಲವರು ಮನೆಗಳಿಗೆ ಹೋದಲ್ಲೆಲ್ಲ ತೀರ ಆತ್ಮೀಯ ಸ್ವಾಗತ ದೊರೆಯುತ್ತಿತ್ತು. ವಿದೇಶಿಯರ ಈ ಆದರ–ಗೌರವಗಳಿಗೆ ನಾನು ಪಾತ್ರನೇ? ಎಂಬ ವಿಚಾರ ಆಗಾಗ ನನ್ನನ್ನು ಬಾಧಿಸುತ್ತಿತ್ತು.

ಡೂರಹೆಮ್ದಲ್ಲಿ ಪ್ರಸಿದ್ಧವಾದ `ಡ್ಯೂಕ್’ ವಿಶ್ವವಿದ್ಯಾಲಯವಿದೆ. ಅಲ್ಲಿ ಹಲವಾರು ಭಾರತೀಯರಿದ್ದಾರೆ. ಅಲ್ಲಿ ಅನೇಕರ ಪರಿಚಯವಾಯಿತು. ನಾನು ಸಂದರ್ಶಿಸಿದ ಅನೇಕ ಸಂಸ್ಥೆಗಳಲ್ಲಿ ಭಾರತೀಯರ ಸಂಖ್ಯೆ ಸಾಕಷ್ಟು ಇರುತ್ತಿತ್ತು. ಉತ್ತರ ಕೆರೊಲಿಯನ್ದಲ್ಲಿ ರ್ಯಾಲೇದಲ್ಲಿ ದೊಡ್ಡ ವಿಶ್ವವಿದ್ಯಾಲಯವಿದೆ. ಅಲ್ಲೂ ನೂರಾರು ಭಾರತೀಯರ ಪರಿಚಯವಾಯಿತು.

“ಏಶ್ವಿಲ್ (ಉತ್ತರ ಕೆಲೊಲಿಯನ್) ವನಸಿರಿಯಿಂದ ತುಂಬಿತುಳುಕುವ ಪರ್ವತಶ್ರೇಣಿಗಳುಳ್ಳ ಸುಂದರ ಊರು. ಇಲ್ಲಿಯ ಪ್ರಸಿದ್ಧವಾದ `ನೀಲಿ ಅಂಚಿನ ಹೆದ್ದಾರಿ’ (blue-ridge-highway) ಯಿಂದ ಪ್ರವಾಸ ಮಾಡಿದರೆ ನಿಸರ್ಗದೇವಿಯ ಮಡಿಲ ಸಾನ್ನಿಧ್ಯ ದೊರೆಯುತ್ತದೆ. ಇಲ್ಲಿಂದ ಪ್ರಸಿದ್ಧ ವಿಶ್ರಾಂತಿಸ್ಥಳವಾದ `ಗ್ರೇಟರ್ ಸ್ಮೋಕೀಸ್’ ನಾಶನಲ್ಪಾರ್ಕಿಗೆ ಮುಟ್ಟುತ್ತೇವೆ. ಅಲ್ಲಲ್ಲಿ ಡೇರೆಗಳನ್ನು ಹೂಡಿ ವಿಶ್ರಾಂತಿ ಪಡೆಯುತ್ತಿರುವ ಅಮೇರಿಕನ್ನರು ಗೋಚರಿಸುತ್ತಾರೆ. ಸಂಜೆಯಾಯಿತೆಂದರೆ ಕರಡಿಗಳು ಜನರ ನಿವಾಸದ ಅಕ್ಕಪಕ್ಕದಲ್ಲಿ ಸಂಚರಿಸುತ್ತವೆ. ಜನರ ಚಲನವಲನ ಇವಕ್ಕೆ ಅಭ್ಯಾಸವಾಗಿದೆಯಂತೆ. ಹೀಗಾಗಿ ಅವು ಹೆದರುವುದಿಲ್ಲ. ಆದರೆ ಒಮ್ಮೆ ಈ ಕರಡಿ ಆಕ್ರಮಣ ಮಾಡಿತೆಂದರೆ ಅದರಿಂದ ತಪ್ಪಿಸಿಕೊಳ್ಳುವುದು ದುಸ್ಸಾಧ್ಯ.

ಉತ್ತರ ಅಮೇರಿಕವು ಹಿಮದಿಂದ ತುಂಬಿದರೂ ದಕ್ಷಿಣಕ್ಕೆ ಹೋದಂತೆ ಹಿಮದ ಹೆಸರೇ ಇಲ್ಲ. ಆದರೆ ಉತ್ತರದಿಂದ ಬರುವ ಪ್ರವಾಸಿಗಳು ಇಲ್ಲೂ ಹಿಮದ ಆಟಗಳನ್ನು ಬಯಸುತ್ತಾರೆ. ಅಲ್ಲಲ್ಲಿ ಇಂಥ ಹಿಮದ ಆಟಗಳ ವ್ಯವಸ್ಥೆಯಿದೆ, `ಮಯಾಮಿ’ (ಫ್ಲೊರಿಡಾ)ದಲ್ಲಿ ಹನ್ನೆರಡೂ ತಿಂಗಳು ಸೂರ್ಯ ಪ್ರಕಾಶವಿರುವುದರಿಂದ ಅಮೇರಿಕನ್ನರು ಅದನ್ನು ನಂದನವನವನ್ನಾಗಿ ಪರಿವರ್ತಿಸಿದ್ದಾರೆ. `ಮಯಾಮಿ’ ಸಮುದ್ರ ದಂಡೆಯಂತೂ ರಂಭೆಯರ ನಾಡೇ. ಇಂದ್ರಲೋಕವೆಂದರೆ ಹೀಗೇ ಇರಬಹುದೇನೋ ಅನಿಸುತ್ತದೆ. ಇದು ಅತ್ಯಂತ ಜನಪ್ರಿಯ ಪ್ರವಾಸಿ–ಕೇಂದ್ರವಾಗಿದೆ. ಭವ್ಯವಾದ ಹೋಟೆಲುಗಳು. ಸುಂದರ ಉದ್ಯಾನಗಳು, ಕೃತ್ರಿಮ–ಸರೋವರಗಳು ಎಲ್ಲೆಲ್ಲೂ ಕಂಗೊಳಿಸುತ್ತವೆ. ಅಲ್ಲಲ್ಲಿ ಸರೋವರದ ದಂಡೆಯಲ್ಲಿ ಕುರ್ಚಿಗಳನ್ನು ಹಾಕಿಯೋ ಮರಳಿನ ರಾಶಿಯ ಮೇಲೋ ಅರೆನಗ್ನ ಯುವಕ–ಯುವತಿಯರು ಬಿಸಿಲು ಕಾಯಿಸುತ್ತ ಬಿದ್ದಿರುತ್ತಾರೆ. ಹೋಟೆಲಿಗೆ ಹೊಂದಿದ್ದ ಸಮುದ್ರದಂತೆ ಕೇವಲ ಆ ಹೋಟೆಲನವರಿಗೆ ಮೀಸಲು. ಜನಸಾಮಾನ್ಯರಿಗೆ ಕೆಲ ಭಾಗ ಬೇರೆಯೇ ಮೀಸಲಾಗಿದೆ. ಅಲ್ಲಿ ದೊಡ್ಡ ಜಾತ್ರೆಯೇ ಸೇರುತ್ತದೆ. ಅಮೇರಿಕನ್ನರ ಅಂಗಸೌಷ್ಠವದ ಪೂರ್ಣಪರಿಚಯ ಇಲ್ಲಿ ಆಗುತ್ತದೆ. ಒಬ್ಬರ ಪರಿವೆ ಇನ್ನೊಬ್ಬರಿಗೆ ಇರುವುದಿಲ್ಲ. ಎಲ್ಲರೂ ತಮ್ಮ ತಮ್ಮ ಗುಂಗಿನಲ್ಲಿ ಇರುತ್ತಾರೆ.

ಇಲ್ಲಿಯ ಜನಸಮುದಾಯವನ್ನು ನೋಡಿ ಲಾಭವಾದೀತೆಂದು ಬಟ್ಟೆಯ ವ್ಯಾಪಾರಿಗಳೇನಾದರೂ ಇಲ್ಲಿ ಆಸೆಯಿಂದ ವ್ಯಾಪಾರ ಸುರುವು ಮಾಡಿದರೆ ತೀರ ಬೇಗ ದಿವಾಳಿಯಾಗುವುದಿಲ್ಲ ಸಂದೇಹವಿಲ್ಲ. ಬಟ್ಟೆಯ ಬಗ್ಗೆ ಅಷ್ಟು ಆದರವಿದೆ ಪಾಪ, ಇಲ್ಲಿ ಬರುವವರಿಗೆ! ಆದರೆ ಎಲ್ಲರೂ ಸಾಮಾನ್ಯ ಅಷ್ಟೆ ಪ್ರಮಾಣದ ಬಟ್ಟೆ ಧರಿಸುವುದರಿಂದ ಯಾರಿಗೂ ಸಂಕೋಚವೆನಿಸಲಾರದು. ಹೀಗಾಗಿ ಪೂರ್ಣ ಬಟ್ಟೆ ಧರಿಸಿದ ನಾನು ಅನೇಕ ಫೋಟೋಗಳನ್ನು ತೆಗೆದರೂ ಯಾರೂ ಆಕ್ಷೇಪವೆತ್ತಲಿಲ್ಲ. ಅಷ್ಟರಲ್ಲಿ ಒಮ್ಮಿಂದೊಮ್ಮೆ ಮಳೆ ಬಂದಿತು. ಆ ಸಮುದ್ರದ ದಂಡೆಯ ಮೇಲೆ ಒಂದೇ ಶೆಡ್ ಇತ್ತು. ಬಟ್ಟೆ ಬದಲಾಯಿಸುವ ಸ್ಥಳ ಅದು. ಎಲ್ಲರೂ ಅಲ್ಲಿಗೆ ಓಡಿದೆವು. ಅರೆ–ನಗ್ನ, ಮುಕ್ಕಾಲು–ನಗ್ನ ಜನರಿದ್ದೂ ಎಷ್ಟು ಜನ ಹಿಡಿದಾರು? ಆದರೂ ಜನ ಬಂದು ತುಂಬುತ್ತಲೇ ಇದ್ದರು. ಪೆಟ್ಟಿಗೆಯಲ್ಲಿ ಕಪ್ಪೆಗಳನ್ನು ತುಂಬಿದಂತೆ, ನನ್ನ ಸುತ್ತ ನೂರಾರು ಮಹಿಳೆಯರಿದ್ದರು. ಶ್ರೀಕೃಷ್ಣನ ರಾಸಕ್ರೀಡೆಯ ನೆನಪಾಗಿ ಹದಿನಾರು ಸಾವಿರ ಗೋಪಿಯರಿಂದ ಸುತ್ತುವರಿಯಲ್ಪಟ್ಟ ಆ ಧೀರನನ್ನು ಮನಸ್ಸಿನಲ್ಲೇ ಆಭಿನಂಧಿಸಿದೆ.

`ಮಯಾಮಿ’ಯಲ್ಲಿ ಇನ್ನೂ ಒಂದು ಆಕರ್ಷಣೆಯಿದೆ. ಅಲ್ಲಿಯ ಸಮುದ್ರ ಜಲಾಶಯದಲ್ಲಿ ನೀರ–ನಾಯಿ (dolphins) ಗಳನ್ನು ಸಾಕಿದ್ದಾರೆ. ಅವು ತರಬೇತಿ ಹೊಂದಿವೆ. ಎಲ್ಲ ತರಹದ ಸರ್ಕಸ್ಸುಗಳನ್ನು ಮಾಡಿ ತೋರಿಸುತ್ತವೆ. ಪುಪ್ಪುಸಗಳಿಂದ, ಶ್ವಾಸೋಚ್ಚ್ವಾಸ ಮಾಡುವ ಜಲಚರವಾದ್ದರಿಂದ ನೀರಿನಿಂದ ಹೊರಗೆ ಇವು ಬೇಕಾದಷ್ಟು ಸಮಯ ಇರಬಲ್ಲವು. ಹೀಗಾಗಿ ಬಹುವೇಗದಿಂದ ನೀರ ಮೇಲೆ ಎತ್ತರಕ್ಕೆ ಜಿಗಿಯುವುದು, ಜನರ ಕೈಯಲ್ಲಿ ಹಿಡಿದ ತಿಂಡಿ ತಿನ್ನುವುದು, ಗಂಟೆಯನ್ನು ಬಾರಿಸುವುದು, ಚಕ್ರಾಕಾರವಾಗಿ ಜಿಗಿಯುವುದು ಮುಂತಾದ ತಮಾಷೆಯಾಟಗಳನ್ನು ಮಾಡಿ ತೋರಿಸಿ ಇವು ಸಾವಿರಾರು ಡಾಲರಗಳನ್ನು ಗಳಿಸುತ್ತವೆ. ಇವಲ್ಲದೇ ಬಗೆಬಗೆಯ ಮೀನುಗಳು, ಆಮೆಗಳು ಮಕ್ಕಳಿಗಷ್ಟೇ ಅಲ್ಲದೆ ಎಲ್ಲರಿಗೂ ಆಕರ್ಷಣಿಯ ವಸ್ತುಗಳಾಗಿವೆ. ಇದಲ್ಲದೇ ಜಲವಿಹಾರಕ್ಕಾಗಿ ಹೋಗಲು ಎಲ್ಲ ಪ್ರಕಾರದ ನೌಕೆಗಳು ಬಾಡಿಗೆಗೆ ದೊರೆಯುತ್ತವೆ.

`ಮಯಾಮಿ’ ಕ್ಯೂಬಾದಿಂದ ಬಂದ ನಿರಾಶ್ರಿತರಿಂದ ತುಂಬಿಹೋಗಿದೆ. ಇವರು ವ್ಯಾಪಾರದಲ್ಲಿ ಸ್ಥಾನೀಯರೊಡನೆ ಸ್ಪರ್ಧೆಗೆ ನಿಂತಿದ್ದಾರೆ. ಒಂದು ಡಾಲರ್ಕೊಟ್ಟರೆ ಒಳ್ಳೆಯ ಸ್ಪಾನಿಶ್ ಅಥವಾ ಚೀನಿ ಊಟ ದೊರೆಯುತ್ತದೆ. ಇದು ಸುಮಾರು ಭಾರತೀಯ ಭೋಜನವನ್ನು ಹೋಲುತ್ತದೆ. (ಹೋಟೇಲಿನ ಅಮೇರಿಕನ್ ಪದ್ಧತಿಯ ಊಟಕ್ಕೆ ಕಡಿಮೆಯೆಂದರೆ ಐದು ಡಾಲರು ತೆರಬೇಕಾಗುತ್ತದೆ. ಸರ್ವಿಸ್ (ಬಡಿಸಿದ್ದಕ್ಕೆ) ಕಾಣಿಕೆಯೆಂದು ಬೇರೆ ೭೫ ಸೆಂಟ್ಸ್ ತೆತ್ತಬೇಕು) ಈ ದಕ್ಷಿಣ-ಅಮೇರಿಕನ್ನರು ನಮ್ಮಂತೆ ಕಂದು–ಬಣ್ಣದವರು. ಮೀಸೆ ಇಡುವ ಧೀರರಾದ್ದರಿಂದ ನನ್ನನ್ನು ಬಹಳಷ್ಟು ಜನ ತಮ್ಮವನೇ ಎಂದು ನಂಬಿ ಸ್ಪ್ಯಾನಿಶ್ದಲ್ಲಿ ಮಾತನಾಡಿಸುತ್ತಿದ್ದರು. ಇನ್ನೂ ಕೆಲವರು ನಾನು ಇಟಾಲಿಯನ್ನನೇ ಎಂದು ಕೇಳುತ್ತಿದ್ದರು. ನಾನು ಭಾರತೀಯನೆಂದಾಗ ಅವರಿಗಾದ ಅಚ್ಚರಿ ಅಷ್ಟಿಷ್ಟಲ್ಲ!

ಗಲ್ಫ್–ಪೋರ್ಟ (ಮಿಸಿಸಿಪಿ)ದಲ್ಲಿ ಸಮುದ್ರ ನೆಲದೊಳಗೆ ದೂರದ ತನಕ ಬಂದಿದೆ. ಹೀಗಾಗಿ ಆಳವಿಲ್ಲದ ಉಪ್ಪುನೀರಿನ ಮೀನುಗಾರಿಕೆಗೆ ಇದು ಅತ್ಯುತ್ತಮ ಸ್ಥಳವಾಗಿದೆ. ನಿಶ್ಚಿಯಿಸಿದ್ದಕ್ಕಿಂತ ಒಂದು ದಿನ ಮೊದಲೇ ಈ ಚಿಕ್ಕ ಊರಿಗೆ ತಲುಪಿದ್ದರಿಂದ ಈ ಜನರ ಮೀನುಗಾರಿಕೆಯ ಪ್ರಕಾರಗಳನ್ನು ನೋಡುವದೆಂದು ನಿರ್ಧರಿಸಿದೆ. ಮನರಂಜನೆಗೆಂದು ಸ್ತ್ರೀಯರು, ಪುರುಷರು, ಮಕ್ಕಳು, ಮುದುಕರು ಎಲ್ಲರೂ ಮೀನು ಹಿಡಿಯುತ್ತಿದ್ದರು. ಹಾಗೆಯೇ ಸುತ್ತಾಡುತ್ತಿದ್ದಾಗ, ಗರಿ ಹಚ್ಚಿದ ಹ್ಯಾಟು ಧರಿಸಿದ ಮುದುಕನೊಬ್ಬ `ಹಾಯ್’ ಎಂದು ಸ್ವಾಗತಿಸಿದ. ಮಾತನಾಡುತ್ತಿದ್ದಂತೆ ಇವು ಒಳ್ಳೆಯ ಬಿಸಿಲಿನ ದಿನಗಳಾಗಿದ್ದರಿಂದ ಮೀನು ಹಿಡಿಯಲು ಅನುಕೂಲವೆಂದು, ರಜೆ ಪಡೆದು ತಾನು ಇಲ್ಲಿ ಬಂದದ್ದಾಗಿ ಹೇಳಿದ. ಅಷ್ಟರಲ್ಲಿ ಆತ ಹಾಕಿದ ಮೀನೊಂದು ಸಿಕ್ಕಿಕೊಂಡಿತು. ಮಾತು ನಿಲ್ಲಿಸಿ ಬಹಳ ಜಾಗೃತೆಯಿಂದ ಅದನ್ನು ದಂಡೆಗೆ ಎಳೆದ. ಆಚೆ ಈಚೆ ಜನರಿಗೆ ಮೀನು ಬೇಕೇ ಎಂದು ಕೇಳಿದ. ಒಬ್ಬಿಬ್ಬರು ಬೇಡವೆಂದರೂ ಕೊನೆಗೆ ಒಬ್ಬ ಅದನ್ನು ಸ್ವೀಕರಿಸಿದ. ತಾನು ಮುಂಜಾವಿನಿಂದ ಬಹಳ ಮೀನು ಹಿಡಿದಿರುವದಾಗಿ ಮುದುಕ ಹೇಳಿದ. ಅದಕ್ಕೇ ಆತನಲ್ಲಿ ದಾಸಪ್ರವೃತ್ತಿ ಹೀಗೆ ಜಾಗೃತವಾಗಿರಬೇಕು ಎಂದುಕೊಂಡೆ. ಅಷ್ಟರಲ್ಲಿ ಇನ್ನೊಂದು ಮೀನು ಸಿಕ್ಕಿಕೊಂಡಿತು. ಅದನ್ನು ಯಾರೂ ತೆಗೆದುಕೊಳ್ಳದ್ದರಿಂದ ತಿರುಗಿ ಸಮುದ್ರದೊಳೆಗೇ ಒಗೆದ!

“ಏನು ನಿನಗೆ ಬಹಳಷ್ಟು ಮೀನು ದೊರೆತಂತೆ ತೋರುತ್ತದೆ?” ಎಂದಾಗ,

“ಹೂಂ, ಆದರೂ ನಾನು ಒಂದನ್ನು ಇಟ್ಟುಕೊಳ್ಳಲಿಲ್ಲ. ಹಿಡಿದ ಎಲ್ಲ ಮೀನನ್ನೂ ಕೊಟ್ಟುಬಿಟ್ಟೆ. ಇಲ್ಲವೇ ತಿರುಗಿ ಒಗೆದೆ. ನನ್ನ ನೌಕರಿಯಿಂದ ಬೇಸರವಾದಾಗಲೆಲ್ಲ ರಜೆ ತೆಗೆದುಕೊಂಡು ಇಲ್ಲಿ ಬರುತ್ತೇನೆ ಮತ್ತು ಮೀನು ಹಿಡಿಯುತ್ತ ವಿಶ್ರಾಂತಿ ಪಡೆಯುತ್ತೇನೆ” ಎಂದ.

ಅವನ ವಿಶ್ರಾಂತಿ ಈ ಪದ್ಧತಿಯನ್ನು ನೋಡಿ ನಗು ಬಂತು. ರಜೆ ತೆಗೆದುಕೊಂಡು ದೂರದಿಂದ ಬಂದು ಆಮಿಷದ ಹುಳುಗಳಿಗಾಗಿ ಹಣ ಸುರಿದು, ಉರಿಬಿಸಿಲಿನಲ್ಲಿ ದಿನವಿಡೀ ಮೀನು ಹಿಡಿಯುತ್ತ ಸಿಕ್ಕಿದ ಮೀನುಗಳನ್ನೆಲ್ಲ ಬಿಟ್ಟುಕೊಟ್ಟು ವಿಶ್ರಾಂತಿ ಪಡೆಯುತ್ತಾನಂತೆ! ಶ್ರೀಮಂತರ ಕೆಲಸ, ವಿಶ್ರಾಂತಿಗಳೇ ಹೀಗೇನೋ ಬೇಸಾಯಗಾರರು ಹೆಚ್ಚು ಗೋದಿ ಬೆಳೆದು ಸುಡುತ್ತಾರೆ. ಕಾರಖಾನೆದಾರರು ಹೆಚ್ಚಿನ ಉತ್ಪಾದನೆ ಮಾಡಿ ಹಾಳುಮಾಡುತ್ತಾರೆ; ಈ ಮೀನುಗಳನ್ನು ಹಿಡಿದು ಹಿಡಿದು ಜೀವದಾನಮಾಡುತ್ತಾನೆ.

ನನ್ನ ಪ್ರವಾಸ ಮುಂದುವರಿಯಿತು. ಫ್ಲೆಗ್ಪೋಸ್ಟ (ಅರಿಝೂನಾ)ಗೆ ಬಂದಾಗ ನನ್ನ ನಿರೀಕ್ಷೆ ಮೀರಿ ಹಣ ಖರ್ಚಾದ್ದರಿಂದ ಯೋಚನೆಗಿಟ್ಟುಕೊಂಡಿತು. ಅಲ್ಲಿಂದ ಜಗತ್ಪ್ರಸಿದ್ಧವಾದ `ಗ್ರ್ಯಾಂಡ್ಕೆನಿಯನ್’ ನೋಡಲು ಹೋಗುವ ಮನಸ್ಸಿತ್ತು. ಆದರೆ ಇದಕ್ಕೆ ಕಡಿಮೆಯೆಂದರೆ ಇಪ್ಪತ್ತು ಡಾಲರಗಳನ್ನಾದರೂ ಸುರಿಯಬೇಕಾಗಿತ್ತು, ನನ್ನಂತೆ ಹಣದ ತೊಂದರೆಗೀಡಾದ ಇನ್ನೂ ನಾಲ್ಕೈದು ಪ್ರವಾಸಿಕರಿದ್ದರು. ನಾವೆಲ್ಲ ಕೂಡಿ ಧೀರ್ಘಾಲೋಚನೆ ಮಾಡಿ ಕಾರೊಂದನ್ನು ಬಾಡಿಗೆಗೆ ಕೊಂಡುಕೊಂಡೆವು. ನಮ್ಮಲ್ಲಿಯ ಫ್ರೆಂಚ್ ವಿದ್ಯಾರ್ಥಿಯೊಬ್ಬನಿಗೆ ಅಂತರ್ರಾಷ್ಟ್ರೀಯ ಡ್ರಾಯವ್ಹರನ `ಲೈಸನ್ಸ್’ ಇತ್ತು. ಡ್ರಾಯವ್ಹರನ ಸಂಪೂರ್ಣ ಜವಾಬ್ದಾರಿಯನ್ನು ಆತ ಹೊತ್ತ. ಆತನಲ್ಲದೇ ಮೂವರು ಬ್ರಿಟಿಶರು, ಒಬ್ಬನು ಬೆಲ್ಜಿಯನ್ ಮತ್ತು ನಾನು ಕೂಡಿ ಹೊರಟೆವು. ಮೂರು ಗಂಟೆಗಳ ನಂತರ ಆ ಸ್ಥಳ ಮುಟ್ಟಿದಾಗ, ನನ್ನ ಕಣ್ಣುಗಳನ್ನು ನಾನೇ ನಂಬದಾದೆ. ಸಣ್ಣ ಪ್ರವಾಹದಂತೆ ಕಾಣುವ `ಕೊಲರೆಡೂ’ ನದಿ, ಯುಗಗಳಿಂದ ಹರಿದು ಬಣ್ಣಬಣ್ಣದ ಕೊರಕಲುಗಳನ್ನು ನಿರ್ಮಿಸಿದೆ. ಯಾವ ಕಲಾಕಾರನೂ ನಿರ್ಮಿಸಲಾಗದ ಸುಂದರ ಬಣ್ಣಗಳೆಲ್ಲ ಅಲ್ಲಿದ್ದವು. ಕೆಲವರು ಕುದುರೆಗಳನ್ನು ಹತ್ತಿ ಕೊರಕಲುಗಳಲ್ಲಿ ಇಳಿಯಲಾರಂಭಿಸಿದರು. ನಾನು ನಡೆದೇ ಅರ್ಧದಾರಿಯ ತನಕ ಹೋಗಿ ಮರಳಿ ಬಂದೆ. ಹಲವಾರು ಕಡೆ ಕಾರನ್ನು ನಿಲ್ಲಿಸಿ. ಅಪ್ರತಿಮವಾದ ಸೃಷ್ಟಿ ಸೌಂದರ್ಯವನ್ನು ಕಣ್ತುಂಬ ನೋಡಿದೆವು. ಮೈಲುಗಟ್ಟಲೆ ಮರುಭೂಮಿಯಲ್ಲಿ ನಡೆದು ಚಿತ್ರವಿಚಿತ್ರವಾದ ಮುಳ್ಳುಗಿಡಗಳನ್ನು ಕೂಡಿಹಾಕಿದೆವು. ಒಂದೇ ದಿನದಲ್ಲಿ ನಮ್ಮಲ್ಲರ ವಿದೇಶಿಯತ್ವ ಮಾಯವಾಗಿ ನಾವೆಲ್ಲ ಬಹಳ ಆತ್ಮೀಯರಾಗಿಬಿಟ್ಟಿದ್ದೆವು. ತಿರುಗಿ `ಫ್ಲೆಗ್ಪೋಸ್ಟಿ’ಗೆ ಬಂದು ಒಬ್ಬರನ್ನೊಬ್ಬರು ಬೀಳ್ಕೊಟ್ಟಾಗ ನಮ್ಮೆಲ್ಲರ ಹೃದಯ ಭಾರವಾಗಿತ್ತು. ನಮಗೆ ತಲಾ ನಾಲ್ಕು ಡಾಲರಷ್ಟು ಮಾತ್ರ ಖರ್ಚು ಬಂದಿತು!

ಅಲ್ಲಿಂದ `ಲಾಸ್ಏಂಜಲಿಸ್’ ಪಟ್ಟಣಕ್ಕೆ ಹೋದೆ ಇದು ಬಹಳ ವಿಸ್ತಾರವಾದ ಪಟ್ಟಣ. ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಐವತ್ತು ಮೈಲುಗಳಷ್ಟು ಅಂತರವಿದೆ. ರಸ್ತೆಗಳು ಬಹಳ ಅಗಲವಾಗಿದೆ. ಆದರೂ ವಾಹನಗಳ ಸಂಖ್ಯೆ ವಿಪರೀತ ಹೆಚ್ಚಾಗಿರುವುದರಿಂದ ಬಯಸಿದಷ್ಟು ವೇಗದಿಂದ ಸಾಗಲಾಗುವುದಿಲ್ಲ. ಪಟ್ಟಣದಲ್ಲೆಲ್ಲ ಒಂದು ಪ್ರಕಾರದ ಹೊಗೆ ತುಂಬಿದೆ. ಬಹಳ ಹೊತ್ತಿನ ತನಕ ಕಣ್ಣು ಬಿಟ್ಟು ನೋಡಿದರೆ ಕಣ್ಣೀರು ಸುರಿಯಲಾರಂಭಿಸುತ್ತದೆ. ತಲೆ-ನೋವೂ ಪ್ರಾರಂಭವಾಗುತ್ತದೆ. ಆದ್ದರಿಂದ ಇಲ್ಲೆಲ್ಲ ಏಯರ್-ಕಂಡಿಷನ್’ ಕಾರುಗಳನ್ನೇ ಹೆಚ್ಚಾಗಿ ಉಪಯೋಗಿಸುತ್ತಾರೆ. `ಲಾಸ್-ಏಂಜೆಲಿಸ್’ದ ಚಲನಚಿತ್ರ ಪ್ರಪಂಚವಾದ `ಹಾಲಿವುಡ್’ ಜಗತ್ಪ್ರಸಿದ್ಧ ಸ್ಥಳವಾದ್ದರಿಂದ ಪ್ರವಾಸಿಗಳು ಇಲ್ಲಿ ಕಿಕ್ಕಿರಿದಿರುತ್ತಾರೆ. ಅವರಿಗಾಗಿ ಬಹಳಷ್ಟು ಆಕರ್ಷಣೆಗಳ ಏರ್ಪಾಡಿದೆ. `ಹಾಲಿವುಡ್’ ನೋಡಬೇಕೆಂದು ಯುವಜನಾಂಗದ ಕನಸಿದ್ದರೂ ಅದನ್ನು ನೋಡಬೇಕೆಂದು ಹಾಲಿವುಡ್ಗೆ ಹೋದರೆ ವೈಜಂಯತಿಮಾಲಾಳನ್ನು ನೋಡಲು ಮುಂಬೈಗೆ ಹೋದಂತೆಯೇ. ಈ ಪ್ರದೇಶವೆಲ್ಲ ಗುಡ್ಡಗಾಡಾದ್ದರಿಂದ ರಸ್ತೆಗಳು ಅಂಕುಡೊಂಕಾಗಿ ಹರಡಿಕೊಂಡಿವೆ. ಕುಡಿದು ಮತ್ತರಾಗಿ ಡ್ರಾಯ್ವ್ಹ ಮಾಡುತ್ತಿದ್ದ ಅನೇಕ ಚಲನಚಿತ್ರ–ನಾಯಕರನ್ನು ಈ ರಸ್ತೆಗಳು ಬಲಿ ತೆಗೆದುಕೊಂಡಿವೆಯಂತೆ. ನಟನಟಿಯರೆಲ್ಲ ಹೇರಳ ಹಣ ವೆಚ್ಚ ಮಾಡಿ ತಮ್ಮ ಮನಸ್ಸಿಗೆ ಒಪ್ಪುವ ಭವ್ಯ ಭವನಗಳನ್ನು ಕಟ್ಟಿಸಿದ್ದಾರೆ. ಅವುಗಳಲ್ಲಿ ಎಲ್ಲ ಪ್ರಕಾರದ ವಿಹಾರ-ಸಾಮಗ್ರಿಗಳ ಏರ್ಪಾಡಿದೆ.

ಪಾಸಡಿನಾ (ಕೆಲಿಫೋರ್ನಿಯಾ)ದಲ್ಲಿನ ನಕ್ಷತ್ರಗಳಿಗೆ ಮುಟ್ಟುವ ಮಾನವನ ಕನಸನ್ನು ನನಸು ಮಾಡುವ ಕಾರ್ಯಾಚರಣೆಯನ್ನು ಯೋಜಿಸಲಾಗುತ್ತಿದೆ. ಅಲ್ಲಿ ಹತ್ತಾರು ವಸ್ತುಸಂಗ್ರಹಾಲಯಗಳಿವೆ. ಸುಂದರ ಉದ್ಯಾನಗಳಿವೆ. ಒಂದು ಸ್ಥಳದಲ್ಲಿ ಎರಡು ನೂರು ವರ್ಷಗಳ ಹಿಂದಿನ ಅಮೇರಿಕನ್ ಜನಜೀವನವನ್ನು ಚಿತ್ರಿಸುವ ಪ್ರತಿರೂಪಗಳನ್ನು (models) ನಿರ್ಮಿಸಿದ್ದಾರೆ. ಅಲ್ಲಿರುವ ಜನರು, ಪ್ರಖ್ಯಾತವಾದ `ಡಿಝನಿ-ಲ್ಯಾಂಡ್’ ಇದೇ ಪಟ್ಟಣದಲ್ಲಿದೆ. ಇದು ಐಂದ್ರಜಾಲಿಕ ಪ್ರಪಂಚದಂತೆ ಭಾಸವಾಗುತ್ತಿದ್ದರೂ ಒಮ್ಮೆ ಒಳಹೊಕ್ಕರೆ ನೀರಿನಂತೆ ಹಣ ಖರ್ಚುಮಾಡಬೇಕಾಗುವುದು. ಕಾರು ನಿಲ್ಲಿಸುವುದರಿಂದ ಹಿಡಿದು `ಮೊನೋಟ್ರೇನ್’ (ಒಂದೇ ಹಳಿಯ ಮೇಲೆ ಚಲಿಸುವ ಟ್ರೇನು)ನಲ್ಲಿ ಸುತ್ತಾಡುವವರೆಗೆ ಎಲ್ಲದ್ದಕ್ಕೂ ಹಣ ಧಾರಾಳವಾಗಿ ತೆತ್ತಬೇಕಾಗುವುದು.

ಮುಂದೆ `ಸಾನ್ಫ್ರಾನ್ಸಿಸ್ಕೋ’ ಕ್ಕೆ ಹೋದೆ. ಇದೂ ಗುಡ್ಡಗಾಡಿನ ಪಟ್ಟಣವಾದ್ದರಿಂದ ಇತರ ವಾಹನಗಳಿಗೆ ಸರಾಗವಾಗಿ ಚಲಿಸಲು ಅಷ್ಟೊಂದು ಅನುಕೂಲವಾಗಿಲ್ಲ. ಅಲ್ಲಿನ್ನೂ ಟ್ರಾಮಗಾಡಿಗಳೇ ಬಳಕೆಯಲ್ಲಿವೆ. ಈ ಹಳೇ ವಾಹನವನ್ನು ನೋಡಿದಾಗ ಕೆಲ ವರ್ಷಗಳ ಹಿಂದಿನ ಮುಂಬೈ ಮತ್ತು ಕಲಕತ್ತ ನಗರಗಳ ನೆನಪಾಗುತ್ತದೆ. ಟ್ರಾಮು ನಿಲ್ಲುವ ಸ್ಥಳಕ್ಕೆ ಬಂದೊಡನೆ ಜನರು ಅದನ್ನು ತಿರುವಲು ಸಹಾಯ ಮಾಡುತ್ತಾರೆ. ಆಗೊಮ್ಮೆ ಈಗೊಮ್ಮೆ ಟ್ರಾಮನ್ನು ನಿಲ್ಲಿಸುವ ಗೊಡುವೆಗೇ ಹೋಗದೇ ಹತ್ತುತ್ತಾರೆ, ಇಳಿಯುತ್ತಾರೆ. ಟ್ರಾಮು ತನ್ನಷ್ಟಕ್ಕೆ ತಾನು ಚಲಿಸುತ್ತಲೇ ಇರುತ್ತದೆ. ಈ ಟ್ರಾಮುಗಾಡಿಗಳನ್ನು ತೆಗೆದುಹಾಕಬೇಕೆಂದು ನಗರಸಭೆಯವರು ಒಂದೆರಡು ಬಾರಿ ಪ್ರಯತ್ನಿಸಿದಾಗ ನಗರದವರೆಲ್ಲ ಆಂದೋಲನ ಮಾಡಿ ನಗರದ ಅಭಿಮಾನಸೂಚಕವಾದ ಈ ವಾಹನವನ್ನು ಇಡಲೇಬೇಕೆಂಬ ಒತ್ತಾಯ ತರುವುದರಲ್ಲಿ ಯಶಸ್ವಿಯಾದರೂ ಇಂದಿಗೂ ಅಮೇರಿಕೆಯಲ್ಲಿ ಎಲ್ಲೂ ಪ್ರಚಾರದಲ್ಲಿಲ್ಲದ ಟ್ರಾಮು ಸಾನ್ಫ್ರಾನ್ಸಿಸ್ಕೋದವರೆಗೆ ಹೆಮ್ಮೆಯ ವಿಷಯವಾಗಿದೆ.

ಈ ನಗರದಲ್ಲಿ ಚೀನಿಯರು ದೊಡ್ಡ ಪ್ರಮಾಣದಲ್ಲಿದ್ದಾರೆ. ಅವರ ಅಂಗಡಿಗಳಲ್ಲಿ ಏಶಿಯಾದ ಎಲ್ಲ ದೇಶಗಳ ಸಾಮಾಗ್ರಿಗಳು ದೊರೆಯುತ್ತವೆ. ಈ ಚೀನಿಯರು ವಾಸಿಸುವ ಕೇರಿಗಳೇ ಬೇರೆ ಇವೆ. ಸಂಜೆ ಇವರ ಕೇರಿಗಳಲ್ಲಾಗಲಿ, ಪೇಟೆಗಳಲ್ಲಾಗಲಿ ಹೋದರೆ, ಕ್ಯಾಂಟನ್ ನಗರಕ್ಕೆ ಹೋದಂತಾಗುತ್ತದೆ. ಬಣ್ಣ ಬಣ್ಣದ ದೀಪಗಳು ಚಿತ್ರ–ವಿಚಿತ್ರವಾಗಿ ರಚಿಸಲ್ಪಟ್ಟ ಮನೆಗಳ ಮುಂದೆ ಕಂಗೊಳಿಸುತ್ತವೆ. ಹಲವಾರು ದಶಕಗಳಿಂದ ಅಮೇರಿಕೆಯಲ್ಲಿ ವಾಸಿಸಿದರೂ ಇವರ ಉಡುಪು, ಆಹಾರಗಳು ಚೀನಿಯಾಗಿಯೇ ಉಳಿದಿವೆ. ಇವರ ವಸತಿಗಳನ್ನೆಲ್ಲ ದಾಟಿ ಗುಡ್ಡವನ್ನು ಸುತ್ತುವರಿದ ಮಾರ್ಗದಿಂದ ಹೋದರೆ ಅನೇಕ ಏರಿಳಿತಗಳ ತರುವಾಯ ಪ್ಯಾಸಿಪಿಕ್ ಮಹಾಸಾಗರದ ದರ್ಶನ ಲಭಿಸುವುದು. ಸಾಗರದ ದಂಡೆಯ ಗುಂಟ ನೂರಾರು ಮೀನುಗಾರರು ಹಲವಾರು ಜಾತೀಯ ಮೀನುಗಳನ್ನು ಹುರಿದೋ. ಒಣಗಿಸಿಯೋ, ಅನೇಕ ತಿಂಡಿಗಳ ರೂಪದಲ್ಲಿ ಮಾರುತ್ತಿರುತ್ತಾರೆ. ನಾವು ಶೇಂಗಾ, ಹುರಿಗಡಲೆ ಕೊಂಡು ತಿನ್ನುವಂತೆ ಇಲ್ಲಿ ಪ್ರವಾಸಿಗರು ಮೀನುಗಳನ್ನು ಕೊಂಡು ತಿನ್ನುತ್ತಾರೆ. ನೌಕಾವಿಹಾರಕ್ಕೂ ಉತ್ತಮ ವ್ಯವಸ್ಥೆ ಇಲ್ಲಿದೆ. ವಿಹಾರ–ನೌಕೆಗಳಲ್ಲಿ ಸಂಗೀತ, ನೃತ್ಯ, ಕುಡಿತಗಳಿಗೆ ಏರ್ಪಾಡಿದೆ. ಅಲ್ಲಿಂದ ಕೊಂಚ ಮುಂದೆ ಹೋದರೆ ಅದ್ಭುತವಾದ ಜಗತ್ಪ್ರಸಿದ್ಧವಾದ ಸುವರ್ಣದ್ವಾರದ ಬ್ರಿಜ್ ಇದೆ. ಸಾನ್ಫ್ರಾನ್ಸಿಸ್ಕೋ ನಗರದ ಹೊರಗಡೆ ಪ್ರಪಂಚದಲ್ಲಿಯೇ ಎತ್ತರವಾದ ಚಂದನ–ವೃಕ್ಷಗಳ (red-wood) ಅರಣ್ಯವನ್ನು ನೋಡಬಹುದು. ಅಮೇರಿಕನ್ನರು ಕಣ್ಣುಬಿಡುವುದಕ್ಕೂ ಮೊದಲಿನ ಎರಡು ಸಾವಿರ ವರ್ಷಕ್ಕಿಂತ ಹಿಂದಿನ ಇತಿಹಾಸವನ್ನು ಈ ವೃಕ್ಷಗಳು ಕಂಡಿವೆ. ಕೆಲವು ವೃಕ್ಷಗಳನ್ನು ಕೊರೆದು ಕಾರು ಹೋಗಲು ಮಾರ್ಗವನ್ನು ಮಾಡಿದ್ದಾರೆ.

`ಕೆಲಿಫೋರ್ನಿಯ’ದಿಂದ `ಓರೆಗೊನ್’ ರಾಜ್ಯಕ್ಕೆ ಹೋಗುವ ಹೆದ್ದಾರಿ ವನಸಿರಿಯಿಂದ ಸುತ್ತುವರಿದಿದೆ. ಹನ್ನೆರಡೂ ತಿಂಗಳು ಜುಳುಜುಳು ಹರಿಯುವ ನದಿಗಳು, ಉನ್ನತವಾದ ಪರ್ವತಾವಳಿಗಳು, ಆಳವಾದ ಕಂದರಗಳು, ಗಗನಚುಂಬಿ ಸೂಚಿಪರ್ಣವೃಕ್ಷಗಳು, ಬಹಳ ರಮಣೀಯವಾಗಿವೆ. ವರ್ಷವರ್ಷಕ್ಕು ಈ ಅರಣ್ಯ ಧನಪಿಶಾಚಿ ಮಾನವನಿಗೆ ಕ್ರಮೇಣ ಅಹುತಿಯಾಗುತ್ತಿದೆ. `ಸ್ವೀಟ್–ಹೋಮ್’ದಲ್ಲಿ ಕಟ್ಟಿಗೆಯ ವ್ಯಾಪಾರವೇ ಮುಖ್ಯ. ದೊಡ್ಡ ದೊಡ್ಡ ಮರಗಳನ್ನು ಯಂತ್ರದ ಸಹಾಯದಿಂದ ಎಳೆದು ತಂದು ಅವುಗಳನ್ನು ತೀರ ತೆಳ್ಳಗಿನ ಹಾಳೆಯಂತೆ ಕೊರೆದು ಒಂದು ಹಾಳೆಗೆ ಇನ್ನೊಂದು ಹಾಳೆ ಅಂಟಿಸಿ `ಪ್ಲಾಯುವುಡ್’ ತಯಾರಿಸುವರು. ಅಮೇರಿಕೆಯಲ್ಲಿ ಬಹಳ ಮನೆಗಳೆಲ್ಲ ಕಟ್ಟಿಗೆಯವೇ ಇರುವುದರಿಂದ ಕಟ್ಟಿಗೆಯ ವ್ಯಾಪಾರದಿಂದ ತುಂಬ ಹಣ ಗಳಿಸಲಾಗುತ್ತಿದೆ. ಅಮೇರಿಕೆಯ ಪಶ್ಚಿಮ ಕರಾವಳಿಯಲ್ಲಿ ಇನ್ನೂ ಅಷ್ಟಾಗಿ ಜನವಸತಿ ಬೆಳದಿಲ್ಲವಾದ್ದರಿಂದ ಅಲ್ಲಿ ಇನ್ನೂ ಅರಣ್ಯ ಸಂಪತ್ತು ಸಾಕಷ್ಟು ಉಳಿದುಕೊಂಡಿದೆ.

ವಾಶಿಂಗ್ಟನ್ ರಾಜ್ಯ ಸದಾ ಹಸಿರು ರಾಜ್ಯ ಎಂದು ಕರೆಯಲ್ಪಡುತ್ತದೆ. ಅದರ ರಾಜಧಾನಿಯಿಂದ ಸಿಯಾಟಲ್ಗೆ ಹೋಗಬೇಕಾದರೆ ಎಷ್ಟೋ ಸರೋವರಗಳನ್ನು ದಾಟಬೇಕು. ಎಷ್ಟೋ ಕಾಲುವೆಗಳಿಂದ ಹಾಯಬೇಕು, ಸಾಕಷ್ಟು ಮಳೆಯಾಗುವುದರಿಂದ ಎಲ್ಲೆಲ್ಲೂ ನೀರೆ ನೀರು. ಇಲ್ಲಿಯ ಎತ್ತರವಾದ ಪರ್ವತಶಿಖರಗಳು ಸದಾ ಹಿಮಾಚ್ಛಾದಿತವಾಗಿರುತ್ತವೆ. ಹತ್ತಿರ ಹೋದಾಗಲೇ ಅವುಗಳ ಶೀತದ ಪರಿಚಯವಾಗುತ್ತದೆ. ಸಿಯಟಲ್ ಆರೇಳು ಗುಡ್ಡಗಳ ಮೇಲೆ ಪಸರಿಸಿದೆ. ಇದು ಉತ್ತಮವಾದ ಬಂದರವಿದ್ದು ಬಹಳಷ್ಟು ಬೆಳವಣಿಗೆ ಹೊಂದಿದೆ. ನಾಲ್ಕೈದು ವರ್ಷಗಳ ಹಿಂದೆ ಅಂತರ್ರಾಷ್ಟ್ರೀಯ ಜಾತ್ರೆ ಇದೇ ಪಟ್ಟಣದಲ್ಲಿ ಜರಗಿತ್ತು. ಇಂದಿಗೂ ಆ ಜಾತ್ರೆಯ ಬಹ್ವಂಶವನ್ನು ಇದ್ದಕ್ಕಿದ್ದಂತೆ ಇಟ್ಟಿದ್ದನ್ನು ನೋಡಬಹುದು. ಗಗನಸೂಚಿ (space-needle) ಸ್ತಂಭವೊಂದು ನಿಂತಿದೆ ಇಲ್ಲಿ. `ಟ್ರಾಲಿ’ಯಿಂದ ಅದರ ಮೇಲೆ ಏರಿದರೆ ಪರಿಸರದ ದೃಶ್ಯಗಳೆಲ್ಲ ಕಾಣುತ್ತವೆ. ಈ ಅಂತರ್ರಾಷ್ಟ್ರೀಯ ಪ್ರದರ್ಶನದಲ್ಲಿ ಇಟ್ಟ ಯಾಂತ್ರಿಕ, ವೈಜ್ಞಾನಿಕ ಭಾಗವೆಲ್ಲ ಅತ್ಯಂತ ಉದ್ಬೋಧಕವಾಗಿದೆ.

ಸಿಯಾಟಲ್ದಿಂದ ಉತ್ತರ–ರಾಜ್ಯಗಳೊಳಗಿಂದ ಸಾಯಿರೆಕ್ಯೂಸಿಗೆ ಹೋಗುವಾಗ ಚಳಿಗಾಲ ನರ್ತಿಸುತ್ತ ಭೂಮಿಗೆ ಇಳಿಯುವದರಲ್ಲಿತ್ತು. ಗಿಡಮರಗಳೆಲ್ಲ ಹಸಿರು, ತಿಳಿಹಸಿರು ಕಂದು, ಕೆಂಪು ಬಣ್ಣಗಳನ್ನು ತಳೆದು ನಿಂತಿದ್ದವು. ಒಂದರ ಹಿಂದೊಂದು ಉತ್ತರ–ಡೆಕೋಟ, ದಕ್ಷಿಣ–ಡೆಕೋಟ, ಐಹಾಡೋ ರಾಜ್ಯಗಳು ಬಂದವು. ಹಿಂದುಳಿದವು. ನಮ್ಮ ಬಸ್ಸು ಚಲಿಸುತ್ತಲೇ ಇತ್ತು. ಶಿಕಾಗೋ ಪಟ್ಟಣ ಬಂದಾಗ ಅದು ನಿಂತಿತು. ಶಿಕಾಗೋ ಅಸಂಖ್ಯ ಉನ್ನತ ಕಟ್ಟಡಗಳ ಪಟ್ಟಣ. ವರ್ಷ ವರ್ಷ ಬೆಳೆಯುತ್ತಲೇ ಇದೆ. ಬಹಳಷ್ಟು ರಾಜಮಾರ್ಗಗಳು ನೆಲದ ಒಳಗಿಂದ ಹೋಗುತ್ತವೆ. ಶಿಕಾಗೋದಿಂದ ಕ್ಲೀವ್ಲಂಡ್ ಮಾರ್ಗವಾಗಿ ಬಫೆಲೋಕ್ಕೆ ಬಂದಿತು ಬಸ್ಸು. `ಇರಿ’ ಸರೋವರದ ಮೇಲಿದ್ದ ಈ ಪಟ್ಟಣ ಸಾಕಷ್ಟು ಹಳೆಯದು. ಬಹಳಷ್ಟು ಕಾರಖಾನೆಗಳಿದ್ದು ಪಟ್ಟಣ ಹೊಗೆಯಿಂದ ತುಂಬಿದಂತಿದೆ. ಇಲ್ಲಿಂದ ಹೆಸಿರುವಾಸಿಯಾದ ನಾಯಗರಾ ಧಬಧಬಿ (ತಡಸಲು) ಬಹಳ ಸಮೀಪದಲ್ಲಿದೆ.

ಸಾಯರೆಕ್ಯುಸೇ ಅಲ್ಲಿಂದ ನನ್ನ ಕೊನೆಯ ನಿಲ್ದಾಣದ ಸ್ಥಳವಾಗಿತ್ತು.

ಪ್ರವಾಸದ ದಣುವಾರಿಸಿಕೊಳ್ಳಲು ಹದಿನೈದು ದಿನಗಳು ಹಿಡಿದವು. ನನ್ನ ಟಿಕೆಟಿನ ಮೇಲೆ ಇನ್ನೂ ಒಂದು ತಿಂಗಳು ಪ್ರವಾಸಮಾಡಲು ಬರುವಂತಿದ್ದರೂ ಮೈಮನಗಳೆರಡೂ ವಿಪರೀತ ದಣಿದಿದ್ದವು.

`ಗ್ರೇಹೌಂಡ್ ಕಂಪನಿಯೊಡನೆ ಪ್ರವಾಸಮಾಡುವುದು ಮುಗಿದಿದ್ದರೂ ಅವರ ಘೋಷಣೆ ಮಾತ್ರ ಇನ್ನೂ ಮರೆತಿರಲಿಲ್ಲ:

” Go Greyhound and leave driving to us”

“ನಮ್ಮೊಂದಿಗೆ ಪ್ರಯಾಣದ ಸುಖ ನಿಮಗಿರಲಿ–ಅದರ ತಾಪತ್ರಯ ನಮಗಿರಲಿ”

ಇದೇ ಆ ಘೋಷಣೆಯಾಗಿತ್ತು.

ಈ ಭಾರ ಅವರು ಹೊರದಿದ್ದರೆ ಈ ಅಪೂರ್ವ ಪ್ರವಾಸದ ಭಾಗ್ಯ ನನ್ನ ಪಾಲಿಗಿರುತ್ತಿತ್ತೋ ಇಲ್ಲವೋ … …

ಈ ಕಂಪನಿಯಂತೆಯೆ ನಾನೂ ನನ್ನ ಈ ಪ್ರವಾಸಕಥನದ ಬೆನ್ನುಹತ್ತಿ ಬಂದ ವಾಚಕರಿಗೆ “ಪ್ರವಾಸ-ಕಥಾ-ಶ್ರವಣದ ಸುಖ ನಿಮಗಿರಲಿ, ಪ್ರವಾಸನುಭವ ದುಃಖ ನನಗಿರಲಿ” ಎಂದು ಹಾರೈಸಬಹುದೇ?