ಗೃಹವಿಜ್ಞಾನ

ಗೃಹವಿಜ್ಞಾನ ಮಹಿಳೆಯರಿಗೆ ಮೀಸಲು ಎಂಬ ನಂಬಿಕೆಯುಳ್ಳ ದೇಶದಿಂದ ಬಂದವನಿಗೆ ಅಮೇರಿಕೆಯಲ್ಲಿ ಬಹಳ ತೊಂದರೆಗೆ ಇಟ್ಟುಕೊಳ್ಳುತ್ತದೆ. ಗೃಹಸ್ಥನೂ ಗೃಹಿಣಿಯಾಗಲು ಕಲಿಯಬೇಕು. ಈ ದೇಶದಲ್ಲಿ ಮೊದಲು `ಅಡಿಗೆ-ಭಟ್ಟ’ನಾಗಬೇಕು. ಇಲ್ಲವೇ ಅರೆಹೊಟ್ಟೆಯಿಂದ ಇರಲು ಕಲಿಯಬೇಕು. ಅಥವಾ ಅಮೇರಿಕನ್ನರ ರುಚಿ, ವಾಸನೆ ಎರಡೂ ಇಲ್ಲದ ಊಟ ಮಾಡಲು ಕಲಿಯಬೇಕು. ಹೋಟೆಲ್ ಊಟವಾದರೂ ಹೊಟ್ಟೆ ತುಂಬುವುದಿಲ್ಲ. ನಾಲಿಗೆಗೆ ರುಚಿಯಾಗುವುದಿಲ್ಲ. ಮೇಲಾಗಿ ಒಂದಕ್ಕೆ ಹತ್ತು ಖರ್ಚು. ನಾನು ಅಮೇರಿಕೆಯಲ್ಲಿ ವಿದ್ಯಾಭ್ಯಾಸಕ್ಕೂ ಮುಂಚಿತವಾಗಿ ಅಡಿಗೆಯ ಕೆಲಸಕ್ಕೆ ಪ್ರಾರಂಭಿಸಿದೆ. ಒಳ್ಳೆ ಅಡಿಗೆ ಉಂಡು ನಾಲಿಗೆಗೆ ರುಚಿ ಇದ್ದರೂ ಆ ರುಚಿ ಕೈಗೆ ಇಳಿದು ಬರುವುದು ಸಾಧ್ಯವಿರಲಿಲ್ಲ. ಅಡಿಗೆಯ ಯಾವ ಯಾವ ಸಾಮಾನು ಬೇಕೆಂದು ನನಗೆ ಗೊತ್ತಿರಲಿಲ್ಲ. ಅಂಗಡಿಗೆ ಹೋಗಿ ಮನಸ್ಸಿಗೆ ತೋಚಿದ್ದನ್ನು ಕೊಂಡು ತಂದೆ. ಮೊದಲನೇ ದಿನ ಅನ್ನ ಸಾರು ಸಾಕೆಂದು ಅಕ್ಕಿ-ಬೇಳೆಗಳನ್ನು ಹೆಚ್ಚಿನ ಜಾಗ್ರತೆಯಿಂದ ಬೇಯಲು ಇಟ್ಟೆ. ಎರಡು ತಾಸಿನಲ್ಲಿ ಊಟ ಸಿದ್ಧವಾಗಿತ್ತು. ಮೊದಲನೆಯ ಕಲ್ಲನ್ನ, ಗಟ್ಟಿಮುಟ್ಟಾದ ಹಲ್ಲುಳ್ಳ ಯುವಕರು ಉಣ್ಣುವಂತಹದು. ಮಧ್ಯದಲ್ಲಿಯದು ವಯಸ್ಕರು ಉಣ್ಣುವಂತಹ ಮೆತ್ತಗಿನ ಅನ್ನ, ಮತ್ತು ತೀರ ಕೆಳಗಿನದು ಹಂದಿಯೂ ತಿನ್ನಲಾಗದ ಕರಿಯನ್ನವಾಗಿತ್ತು. ಹೀಗಾಗಿ ಗಂಟಲ ಕೆಳಕ್ಕೆ ಅದು ಇಳಿಯಲು ನಿರಾಕರಿಸಿತು. ಊಟ ಮುಗಿದರೂ ಹಸಿದ ಹೊಟ್ಟೆ ಹಸಿದಂತೆ ಇತ್ತು.

“ಮರುದಿನ ಮೊದಲ ದಿನದ ಅಪಯಶಸ್ಸನ್ನು ಕುರಿತು ಆಲೋಚಿಸಲೇ ಬೇಕಾಯಿತು. ತಿರುಗಿ ಹೊಟ್ಟೆ ಹಸಿದಾಗ, ನನ್ನ ಕೀಟಶಾಸ್ತ್ರ–ಸಂಶೋಧನೆಯ ಜೊತೆಗೆ ಪಾಕಶಾಸ್ತ್ರ–ಸಂಶೋಧನೆಯೂ ಸೇರಿತು. ಉರಿಯುವ ಬೆಂಕಿ ಹದವಾಗಿ ಕಡಿಮೆಯಾದರೆ ಮಲ್ಲಿಗೆಹೂವಿನಂತೆ ಅನ್ನವಾಗುವದೆಂದು ಕಂಡುಕೊಂಡೆ. ಸಾವಕಾಶವಾಗಿ ಅನ್ನ-ಸಾರಿನ ಸಂಗಡ ಪಲ್ಯವೂ ಸೇರಿಕೊಂಡಿತು. ನಿಂಬೆಹಣ್ಣು, ಉಪ್ಪಿನಲ್ಲಿ ಸೇರಿ ಉಪ್ಪಿನಕಾಯಿಯಾಗಲು ಪ್ರಾರಂಭಿಸಿತು. ನೋಡಿದ್ದೇ ನೋಡಿದರೆ ನೋಟಕ್ಕೆ ರಮ್ಯತೆಯಿಲ್ಲ. ತಿಂದದ್ದೇ ತಿಂದರೆ ತಿಂಡಿಗೆ ರುಚಿಯಿಲ್ಲ. ಅಂತೆಯೇ ಊಟಕ್ಕೊಮ್ಮೆ ಹೊಸ ತರದ ಅಡಿಗೆ ಮಾಡುವ ಹುಮ್ಮಸ್ಸು ಸ್ವಪ್ರಾರಂಭವಾಯಿತು. ಆದರೆ ಭಾರತೀಯರಿಗೆ ಬೇಕಾಗುವ ಸಾಮಾನುಗಳು ಅಮೇರಿಕೆಯಲ್ಲಿ ಸುಲಭವಾಗಿ ಸಿಗುವಂತಿಲ್ಲ. ಅಲ್ಲದೇ ಅಮೇರಿಕನ್ನರು ನಮ್ಮ ಇಂಗ್ಲೀಷ ಬಳಸದ್ದರಿಂದ ನಮಗೆ ಬೇಕಾದ ಸಾಮಾನಿಗೆ ಅವರು ಏನೆಂದು ಕರೆಯುತ್ತಾರೆಂದು ಪತ್ತೆ ಹಚ್ಚಬೇಕಾಯಿತು. ಅವರು `ladies-finger ಗೆ (ನಾರೀ-ಬೆರಳು-ಬೆಂಡೆಕಾಯಿ), `baby-okra’ (ಮಗು-ಓಕ್ರಾ) ಎಂದೂ, `brinijal’ (ಬದನೆಕಾಯಿ) `egg-plant’ (ತತ್ತಿಗಿಡ) ಎಂದೂ ಕರೆಯುತ್ತಾರೆ. ಕಡಲೆಗೆ `ಕೋಳಿ-ವಠಾಣೆ’ (chick-pea) ಎಂದೂ ಮೊಸರಿಗೆ `ಯೋಗರ್ಟ’ (yogert) ಎಂದು ಅನ್ನುತ್ತಾರೆ. ಬರಬರುತ್ತ ಅಮೇರಿಕನ್ ಜೀನಸುಗಳಿಗೆ ಭಾರತೀಯ ರುಚಿ ಬರಲಾರಂಭಿಸಿತು. ಕಢಿ, ಕೋಸಂಬ್ರಿ, ಭಜ್ಜಿ-ಹುಳಿ, ಸಾಂಬಾರು, ದೋಸೆ-ಚಟ್ನಿ, ಬಾಸುಂದಿ-ಪುರಿ, ಶ್ರೀಖಂಡಗಳು ಊಟದ ಟೇಬಲ್ಲಿನ ಮೇಲೆ ಬರಲಾರಂಭಿಸಿದವು.

ನಾನು ಮೊದಲು ಮಾಂಸಾಹಾರಿಯಲ್ಲದಿದ್ದರೂ ಪೂರ್ಣ ಶಾಖಾಹಾರಿಯಾಗಿರಲಿಲ್ಲ. ಕಾರವಾರಿಯಾದ ನಾನು ಮೀನು ತಿನ್ನುವ ಶಾಖಾಹಾರಿಯಾಗಿದ್ದೆ. (ಅಮೇರಿಕೆಯಲ್ಲಿ ಮೀನು ಶಾಖಾಹಾರದಲ್ಲಿ ಬರುತ್ತದೆ. ಅದನ್ನು `sea-food’ ಎಂದು ಕರೆಯುತ್ತಾರೆ). ಅಮೇರಿಕೆಯಲ್ಲಿ ಶಾಖಾಹಾರಿಯಾಗಿರುವುದು ಅಸಾಧ್ಯವಲ್ಲದಿದ್ದರೂ ಅಷ್ಟೇನು ಸುಲಭವಾಗಿರಲಿಲ್ಲ. ನನ್ನ ಸಹವಾಸಿ ಆನಂದಮೋಹನನೆಂಬ ಬಿಹಾರಿ ಶಾಕಾಹಾರವನ್ನೇ ಸೇವಿಸಬೇಕೆಂಬ ಹಟದವನು. ತಿನ್ನುವ ಪ್ರತಿಯೊಂದು ಸಾಮಾನನ್ನೂ ಮೂಸಿ ನೋಡಿ, ಪರೀಕ್ಷಿಸುತ್ತ ಸಂಶಯದಿಂದಲೇ ತಿನ್ನುತ್ತ ತೇಗುವನು. ನಾವು ಕೂಡಿಯೇ ಕೆಲ ದಿನ ಅಡಿಗೆ ಮಾಡುತ್ತಿದ್ದೆವು. ಒಂದು ದಿನ ಅಡಿಗೆ ಮಾಡುವುದು ಬೇಜಾರೆನಿಸಿ ಕಾಲೇಜಿನ ಕೆಫಿಟೇರಿಯದಲ್ಲೆ ರೊಕ್ಕ ಹಾಕಿ ಏನಾದರೂ ಕೊಂಡು ತಿನ್ನುವುದೆಂದು ನಿರ್ಧರಿಸಿದೆವು. ಆತ ಏನು ತಿನ್ನುವುದೆಂದು ಯೋಚಿಸಿ, ಯಂತ್ರಗಳ ಮೇಲೆ ಬರೆದದ್ದನ್ನೆಲ್ಲ ಮತ್ತೆ ಮತ್ತೆ ಓದಿ ಪರೀಕ್ಷಿಸಿ ಕೊನೆಗೊಮ್ಮೆ ತರಕಾರಿ-ರಸಂ `ಸಾರು’ (vegetable soup) ಎಂದು ಬರೆದಿದ್ದ ಯಂತ್ರದಿಂದ ಟಿನ್ ಒಂದನ್ನು ಕೊಂಡು, ತೆರೆದು ಎರಡು ಬಾರಿ ಮೂಸಿ ನೋಡಿ ಸೇವಿಸಿದ `ಚೆನ್ನಾಗಿದೆ’ ಎಂದು ಬಾಯಿ ಚಪ್ಪರಿಸಿದ. ಮರುದಿನವೂ ಅದನ್ನೆ ಕೊಂಡು ಸೇವಿಸಿದ. ಅಮೇರಿಕೆಯ ಕಾನೂನಿನ ಪ್ರಕಾರ ಸಿದ್ಧ ಆಹಾರದ ಪ್ರತಿಟನ್, ಬಾಟ್ಲಿ, ಪೊಟ್ಟಣಗಳ ಮೇಲೆ ಆಯಾ ಪದಾರ್ಥಕ್ಕೆ ಉಪಯೋಗಿಸಿದ ಜೀನಸುಗಳನ್ನು ತಪ್ಪದೇ ಕಾಣಿಸಬೇಕಾಗುತ್ತದೆ. ನನ್ನ ಗೆಳೆಯ ಸಹಜವಾಗಿ ತಿಂದು ಖಾಲಿಯಾದ ಟಿನ್ನಿನ ಮೇಲಿನ ಬರಹವನ್ನು ಓದಲಾರಂಭಿಸಿದ. ಎಲ್ಲ ಸಾಮಾನುಗಳ ಕೊನೆಯಲ್ಲಿ `ಸೂಪ್’ದಲ್ಲಿ `ಬೀಫ್ ಬ್ರೊತ್’ (broth) `ದನದ ಮಾಂಸದ ರಸ’ ಸೇರಿಸಿದೆ ಎಂದು ಬರೆಯಲಾಗಿತ್ತು! ಆತನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಪ್ರಯತ್ನಪಟ್ಟು ಸೇವಿಸಿದ `ಸೂಪ್’ ಎಲ್ಲಾ ವಾಂತಿಮಾಡಿದ. ಆದರೆ ಈ ಮೊದಲು ತಿಂದಾಗಿದ್ದಕ್ಕೆ ಉಪಾಯವಿರಲಿಲ್ಲ. ಇಂತಹವರ ಜಾತಿಗೆ ಸೇರಲು ನಾನು ಒಪ್ಪದ್ದರಿಂದ ಮೊದಲಿನಿಂದಲೂ ಮಾಂಸಾಹಾರಕ್ಕೆ ನನ್ನ ಆಕ್ಷೇಪ ತೆಗೆದುಹಾಕಿದೆ. ಬರಬರುತ್ತ ರೂಢಿಯಾಯಿತು. ಅಮೇರಿಕೆಯಲ್ಲಿ ಒಳ್ಳೆಯ ಮಾಂಸ ಅಗ್ಗದಲ್ಲಿ ದೊರೆಯುವದರಿಂದ “ಶಾಖಾಹಾರಕ್ಕಿಂತ ಅದೇ ಕಡಿಮೆ ವೆಚ್ಚದಲ್ಲಿ ಹೆಚ್ಚು ಪೌಷ್ಟಿಕವಾಗಿರುತ್ತದೆಂದು ಕಂಡುಕೊಂಡೆ.

ನನ್ನ ಸಹಪಾಠಿ ಜಿಮ್ ಮತ್ತು ಆತನ ಪತ್ನಿ ಕೆರಲ್ಳಿಗೆ ಅನ್ನದ ಮೇಲೆ ಬಹಳ ಪ್ರೀತಿಯಂತೆ. ಆದರೆ ಮಾಡಿದ ಅನ್ನವೆಲ್ಲ ಗಂಜಿಯಾಗುತ್ತಿತ್ತಂತೆ. ಒಮ್ಮೆ ನನ್ನನ್ನು ತನ್ನ ಕಾರಿನಲ್ಲಿ ಮನೆಯ ತನಕ ಮುಟ್ಟಿಸ ಬಂದ ಜಿಮ್ನಿಗೆ `ಸ್ವಲ್ಪ ಕಾಫಿ ಸೇವಿಸಿ ಹೋಗು’ ಎಂದೆ. ಭಾರತೀಯ ಅತಿಥ್ಯದ ಪರಿಚಯ ಅವನಿಗೆ ಈಗಾಗಲೇ ಆಗಿತ್ತು. ಆದ್ದರಿಂದ ಒಲ್ಲೆ ಎನ್ನಲಾರದೇ ಮನೆಯೊಳಗೆ ಬಂದ. ನನ್ನ ಅಡಿಗೆ ತಯಾರಾಗುತ್ತ ಇತ್ತು. ಗಮಗಮ ವಾಸನೆಗೆ ಆತನ ಬಾಯಲ್ಲಿ ನೀರೂರಿಬೇಕು. ಸೊಂಟದ ಮೇಲೆ ಕೈಯಿಟ್ಟುಕೊಂಡು, ನಾನು ಹೇಗೆ ಮಾಡುತ್ತೇನೆಂದು ನೋಡುತ್ತ ನಿಂತ. “ನಿಮ್ಮ ಅಡಿಗೆ ಮೋಜಿನದಾಗಿದೆ!” ಎಂದು ಉದ್ಗರಿಸಿದ. ಸಣ್ಣಕ್ಕಿಯ ಅರಳಿದ ಅನ್ನವನ್ನು ನೋಡಿದಾಗಲಂತೂ ಆತನಿಗೆ ಬಹಳ ಆಶ್ಚರ್ಯವಾಯಿತು. ಊಟ ಮಾಡಿಯೇ ಹೋಗೆಂದು ಆತನಿಗೆ ಹೇಳಿದೆ. ಅರೆಮನಸ್ಸಿನಿಂದ ಗೊಂಯ್ಗೊಂಯ್ ಮಾಡುತ್ತ “ನನ್ನ ಹೆಂಡತಿ ನನ್ನನ್ನು ಕೊಂದುಬಿಟ್ಟಾಳು, ಕೇಳಿ ನೋಡುತ್ತೇನೆ” ಎಂದು ಅಧೈರ್ಯದಿಂದಲೇ ಪೋನು ಎತ್ತಿದ. “ನನ್ನನ್ನು ಬಿಟ್ಟು ನೀನೊಬ್ಬನೇ ಊಟ ಮಾಡುತ್ತೀಯಾ?” ಎಂದು ಹೆಂಡತಿ ಆಕ್ಷೇಪಿಸಿರಬೇಕು. ಆದರೆ ಈಗಾಗಲೇ ಅಡಿಗೆಯ ಸುವಾಸನೆ ಆತನ ಮೂಗು ಸವಿದಿತ್ತಾದ್ದರಿಂದ ಊಟವನ್ನು ಮಾಡದೇ ಹೋಗುವದೂ ಅವನ ಮನಸ್ಸಿರಲಿಲ್ಲ. ಅಂತೆಯೇ “ಡಾರ್ಲಿಂಗ್, ಭಾರತೀಯ ಶಿಷ್ಟಾಚಾರದ ಪ್ರಕಾರ ಅವರ ಆತ್ಮೀಯ ಆಮಂತ್ರಣವನ್ನು ಒಪ್ಪಿಕೊಳ್ಳದಿದ್ದರೆ ಕರೆದವರಿಗೆ ಅಪಮಾನ ಮಾಡಿದಂತೆ ಎಂದು ತಿಳಿಯಲಾಗುತ್ತದಂತೆ. ಸಾಧ್ಯವಾದರೆ ನೀನೂ ಬಂದುಬಿಡಲ್ಲ” ಎಂದು ಮನ ಒಲಿಸಿದ. ಈ ಮಾತಿನಿಂದ ಅವಳಿಗೆ ಸಮಾಧಾನವಾಗಿರಬೇಕು. ಆದರೆ ಪಾರ್ಟಿಗೆ ಹೋಗುವ ಅಲಂಕಾರದಲ್ಲಿ ಆಕೆ ಇಲ್ಲದ್ದರಿಂದ ತಾನು ಬರದೇ ಗಂಡನಿಗೆ ಊಟ ಮಾಡಿ ಬರಲು ಒಪ್ಪಿಗೆಯಿತ್ತಳು. ಅಂದು ಜಿಮ್ ತುಂಬಾ ಊಟ ಮಾಡಿದ. “ನನಗೆ ಖಾರ ಬಹಳ ಸೇರುತ್ತದೆ. ಆದರೆ ಕೆರಲ್ ಕರುಳಿನ ಅಲ್ಸರ್ ಆದೀತೆಂದು ಹೆದರಿ ಯಾವಾಗಲೂ ಸಪ್ಪಗಿನ ಊಟವನ್ನೇ ಹಾಕುತ್ತಾಳೆ. ನಾನು ಅಡಿಗೆ ಮಾಡಿದರೆ ಖಾರ ಹಾಕುತ್ತೇನೆಂದು ನನಗೂ ಅಡಿಗೆ ಮಾಡಲು ಬಿಡುವುದಿಲ್ಲ. ನಾನು ಅಮೇರಿಕನ್ ಆದರೂ ಈ ವಿಷಯದಲ್ಲಿ ಭಾರತೀಯ ರುಚಿಯುಳ್ಳವನು. ನಿನ್ನ ಅಡಿಗೆಗೆ ಖಾರ-ಹೆಚ್ಚಾದರೂ ಬಹು-ಸ್ವಾದಿಷ್ಟವಾಗಿದೆ!” ಎಂದು ಬಾಯಿ ಚಪ್ಪರಿಸುತ್ತ ಚೆನ್ನಾಗಿ ಹೊಡೆದ. “ಊಟ ಹೊಟ್ಟೆಯಲ್ಲಿ ಇಳಿದಾಗ ಖಾರ ತನ್ನ ಪ್ರಭಾವ ಬೀರಲಾರಂಭಿಸಿತು. ಒಂದೇ ಸವನೇ ನೀರು ಕುಡಿಯಲಾರಂಭಿಸಿದ. ಕುಡಿದ ನೀರು ಕಣ್ಣುಗಳಿಂದ ಹೊರಬರಲಾರಂಭಿಸಿತು. ಆತನಿಗೆ ಹೊಟ್ಟೆಯಲ್ಲಿ ಏನೇನೂ ಸ್ಥಳವಿಲ್ಲದಿದ್ದರೂ ತಂಪಾಗಲೆಂದು ಇಷ್ಟು ಹಾಲನ್ನು ಬಲತ್ಕಾರದಿಂದ ಕುಡಿಸಿದೆ. ಅವನು ಸುಧಾರಿಸಿಕೊಂಡು ಮನೆಗೆ ಹೋಗುವಂತಾಗಬೇಕಾದರೆ ನನಗೆ ಸಾಕು ಸಾಕಾಯಿತು. ಅಂದಿನಿಂದ ಎಂದೂ ಅಮೇರಿಕನ್ನರಿಗೆ ಖಾರ ತಿನ್ನಿಸುವ ಹವ್ಯಾಸಕ್ಕೆ ಹೋಗಲಿಲ್ಲ. ಜಿಮ್ ಅಂದಿನ ಊಟದ ವರ್ಣನೆಯನ್ನು ಹೆಂಡತಿಯೆದುರು ಮಾಡಿರಬೇಕು. ಕೆರಲ್ ನನ್ನ ಮನೆಗೆ ಎಂದೂ ಊಟಕ್ಕೆ ಬರಲಿಲ್ಲ. ಜಿಮ್ ಮಾತ್ರ ಮಸಾಲೆಯ ಅಡಿಗೆ ಊಟ ಮಾಡುವ ಚಪಲವಾದರೆ ತಪ್ಪದೇ ಬರುತ್ತಿದ್ದ.

ಭಾರತೀಯ ಸೀರೆ, ಭಾರತೀಯ ಮಾಯಾಜಾಲ. ಅದರಂತೆ ಭಾರತೀಯ ಅಡಿಗೆಯ ಪರಿಚಯವನ್ನು ಅಮೇರಿಕನ್ನರು ಚೆನ್ನಾಗಿ ಮಾಡಿಕೊಂಡಿದ್ದಾರೆ. ಅಂತೆಯೇ ಭಾರತೀಯ ಊಟವಿದೆಯೆಂದರೆ ತಪ್ಪದೇ ಓಡಿ ಬರುತ್ತಾರೆ. ಬಹಳ ಸಾರೆ ನಾನು ಕರೆಯುವದಕ್ಕಿಂತ ತಾವೇ ಕರೆಸಿಕೊಂಡಿದ್ದಾರೆ. ಅಮೇರಿಕೆಯಲ್ಲಿ ಕಲಿತ ಭಾರತೀಯ ಪಾಕಶಾಸ್ತ್ರದ ಪ್ರಯೋಗಗಳು ಉಪಯೋಗಕ್ಕೆ ಬಂದವು. ಅಗಾಗ್ಗೆ ಅಡಿಗೆ ಮಾಡಿ ಅವರನ್ನು ಊಟಕ್ಕೆ

“ಕರೆಯುತ್ತಿದ್ದೆ. ಒಣ ಶಾಭಾಷ್ಗಿರಿ ಕೊಡುವುದರಲ್ಲಿ ಅಮೇರಿಕನ್ನರನ್ನು ಹಿಂದೆ ಹಾಕುವ ಜನಾಂಗ ಇನ್ನೆಂದೂ ಇರಲಿಕ್ಕಿಲ್ಲ. ತುಂಬ ಪ್ರಶಂಸೆ ಮಾಡುವುದು ಸೌಜನ್ಯ ಮತ್ತು ಸಂಸ್ಕೃತಿಯ ಲಕ್ಷಣವೆಂದು ಅವರು ನಂಬುತ್ತಾರೆ. ಅಂತೆಯೇ ಊಟಕ್ಕೆ ಆಮಂತ್ರಿತವಾಗಿ ಬಂದವರು “ಕ್ರಿಸ್ ನಮಗೆ ಬರುವಾಗ ಹಾದಿ ತಪ್ಪಿಬಿಟ್ಟಿತು. ಆದರೆ ಯಾರನ್ನೂ ಕೇಳುವ ಗೋಜಿಗೆ ಹೋಗದೇ ನಿನ್ನ ಅಡಿಗೆಯ ಸುವಾಸನೆಯ ಜಾಡನ್ನೇ ಹಿಡಿದು ತಪ್ಪದೇ ಇಲ್ಲಿ ಬಂದೆವು” ಎನ್ನುವರು. ಅಧಿಕಬಟ್ಟೆ (cover-coat) ಮುಂತಾದವುಗಳನ್ನು ಕೂಡ ತೆಗೆದಿಡುವ ಮೊದಲು “ಏನೇನು ಅಡಿಗೆ ಮಾಡಿದ್ದೀ?” ಎಂದು ಅಡಿಗೆ ಮನೆಗೇ ಧುಮುಕುವರು. “ಎಷ್ಟೊಂದು ಸೌಂದರ್ಯಪೂರ್ಣವಾಗಿದೆ ನಿನ್ನ ಅಡಿಗೆ! ನೋಡಿಯೇ ಬಾಯಲ್ಲಿ ನೀರೂರಲಾರಂಭಿಸಿದೆ. ಏನೇನು ಮಸಾಲೆ ಹಾಕಿದ್ದೀ? ಘೀ (ತುಪ್ಪ) ಹಾಕಿದ್ದೀಯಾ?” ಎಂದು ಕೇಳುವರು. ಬಹುಸಂಖ್ಯಾತ ಅಮೇರಿಕನ್ನರಿಗೆ ತುಪ್ಪದ ಬಗ್ಗೆ ಬಹಳ ಉತ್ಸುಕತೆ. ಅವರು ಚಿಕ್ಕ ಮಗುವಿದ್ದಾಗ ಭಾರತೀಯ ಆನೆ, ಹುಲಿ, ಸಿಂಹಗಳ ಜೊತೆಗೆ ತುಪ್ಪದ ಕತೆಯನ್ನೂ ಕೇಳಿದ್ದಾರಂತೆ. ಒಬ್ಬ ಚತುರ ಭಾರತೀಯ ಹುಡುಗನು ಬುತ್ತಿಯನ್ನು ಕಟ್ಟಿಕೊಂಡು ಒಂದು ಊರಿನಿಂದ ಇನ್ನೊಂದು ಊರಿಗೆ ಹೊರಟಿದ್ದನಂತೆ. ದಾರಿಯಲ್ಲಿ ಒಂದು ಹುಲಿ ಅಡ್ಡಗಟ್ಟಿ ಆತನ ಊಟವನ್ನು ಕೇಳಿತಂತೆ. ಅದಕ್ಕೆ ಹುಡುಗ “ಒಂದು ಹುಲಿ ಈಗಾಗಲೇ ನನ್ನ ಬೆನ್ನಟ್ಟಿ ಬಂದಿದೆ. ಅದನ್ನು ತಪ್ಪಿಸಿಕೊಂಡು ಬಂದಿದ್ದೇನೆ” ಎಂದು ಹಿಂದೆ ಹಿಂದೆ ನೋಡುತ್ತ ಓಡಲಾರಂಭಿಸಿದನಂತೆ. ಹುಲಿಯೂ ಅವನನ್ನು ಹಿಂಬಾಲಿಸಿತಂತೆ. ಅಷ್ಟರಲ್ಲಿ ಇನ್ನೊಂದು ಹುಲಿ ಅಡ್ಡಗಟ್ಟಿತಂತೆ. ಅದಕ್ಕೂ ಮೊದಲಿನ ಉತ್ತರವನ್ನೇ ಕೊಟ್ಟನಂತೆ. ಹೀಗೆ ಒಂದರ ಹಿಂದೆ ಒಂದು ಆರು ಹುಲಿಗಳು ಬೆನ್ನಟ್ಟಿದವಂತೆ. ಹುಡುಗನು ಓಡಿ ಸೋತಾಗ, ಅರಣ್ಯದ ಮಧ್ಯದಲ್ಲಿ ಕುಳಿತುಬಿಟ್ಟನಂತೆ. ಆರೂ ಹುಲಿಗಳು ಯಾರು ಮೊದಲು ಊಟ ಮಾಡಬೇಕೆಂದು ತಮ್ಮ ತಮ್ಮಲ್ಲಿ ಜಗಳವಾಡಿದವಂತೆ. ಒಂದೂ ಸೋಲೊಪ್ಪಿಕೊಳ್ಳದೇ ತಿರುಗಿ ಹುಡುಗನನ್ನು ಸುತ್ತುಗಟ್ಟಿ-ಅವನು ಓಡಿದಾಗ ತಾವೂ ಓಡಿದವಂತೆ. ದಿನವೆಲ್ಲ ಅವು ಹಾಗೆ ಓಡಿದ್ದರಿಂದ ಒಂದೊಂದೇ ಹುಲಿ ಕರಗಿ ತುಪ್ಪವಾಗಲಾರಂಭಿಸಿದವಂತೆ. ಹುಡುಗ ತನ್ನ ಬಟ್ಟೆಗಳಲ್ಲಿ ಆ ತುಪ್ಪವನ್ನು ತುಂಬಿ ತುಂಬಿ ತಂದು ಜೀವನದುದ್ದಕ್ಕೂ ತಿಂದನಂತೆ.

“ಇಲ್ಲಿ ಎಲ್ಲರೂ-ಅತಿಥಿಗಳು ಮತ್ತು ಮನೆಯವರು-ಒಟ್ಟು ಕೂಡಿಯೇ ಊಟಕ್ಕೆ ಕೂಡುವುದು ಪದ್ಧತಿ. ಆದ್ದರಿಂದ ಬಡಿಸುವ ಪ್ರಶ್ನೆಯಿಲ್ಲ. ಊಟದಲ್ಲಿ `ಭಿಡೆ’ ಎಂಬ ಶಬ್ದ ಅಮೇರಿಕನ್ನರಿಗೆ ಅಪರಿಚಿತವಾದದ್ದು. ಹೀಗಾಗಿ ತಮಗೆ ಬೇಕಾದ ರುಚಿಯೆನಿಸಿದ ಪದಾರ್ಥವನ್ನು ಬೇಕಾದಷ್ಟು ಸಲ ತಾವೇ ಬಡಿಸಿಕೊಳ್ಳುತ್ತಾರೆ. ಬರಬರುತ್ತ ಅಮೇರಿಕನ್ನರು ಸಾಮಾನ್ಯವಾಗಿ ಮೆಚ್ಚಿಕೊಳುವ ತಿಂಡಿಗಳು ಯಾವವೆಂದು ಕಂಡುಕೊಂಡೆ. ಅವಕಾಶ ಸಿಕ್ಕಾಗಲೆಲ್ಲಾ ಅವನ್ನು ಮಾಡಿ ಅವರಿಗೆ ಬಡಿಸುತ್ತಿದ್ದೆ.

ಅಮೇರಿಕೆಯಲ್ಲಿ ಸಿಗುತ್ತಿದ್ದ ಸಾಮಾನುಗಳಿಂದಲೇ ಉತ್ತಮ ಭಾರತೀಯ ಅಡಿಗೆ ಮಾಡಲು ಸಾಧ್ಯವಿದೆಯೆಂದು ಬೇಗ ತಿಳಿದುಕೊಂಡೆ. ಅವರಲ್ಲಿ ಸಿಗುತ್ತಿದ್ದ ಸಾಮಾನುಗಳಿಂದ ಯಾವ ಯಾವ ತಿಂಡಿಗಳು ಆಗಬಹುದೆಂಬುದನ್ನು ಕಾಣಿಸಬಹುದು:

Cream of Wheat (ಗೋದಿಯ ಸಜ್ಜಿಗೆ): ಇದರಿಂದ ಉಪ್ಪಿಟ್ಟು, ಶಿರಾ, ರವೆಯ ಉಂಡಿಗಳನ್ನು ತಯಾರಿಸಬಹುದು.

Heavy-Cream (ಹಾಲಿನ ದಪ್ಪ ಕೆನೆ): ಇದರಿಂದ ಬಾಸುಂದಿ ಮಾಡಬಹುದು.

“Light-Cream (ತೆಳುವಾದ ಕೆನೆ): ಇದನ್ನು ಹಣ್ಣಿನ ಸೀಕರಣೆ, ಫ್ರುಟ್ ಸೆಲಡ್’ಗಳಿಗೆ ಬಳಸಬಹುದು

All purpose Flour: ಇದು ನಮ್ಮ ಮೈದಾ ಇದ್ದಹಾಗಿರುತ್ತದೆ. ಎಲ್ಲ ಕರಿದ ತಿಂಡಿಗಳನ್ನು ಮಾಡಬಹುದು.

Whole-Wheat-Flour (ಇಡಿ ಗೋದಿಯ ಹಿಟ್ಟು): ಚಪಾತಿ, ಪುರಿಗಳನ್ನು ಇದರಿಂದ ತಯಾರಿಸಬಹುದು.

Pancake mix-Flour: ಇದರಿಂದ ದೋಸೆಗಳನ್ನು ಮಾಡಬಹುದು.

Uncle-Ben’s Rice: ಬೇರೆ ಬೇರೆ ತರದ ಭಾತ್, ಬಿರಿಯಾನಿಗಳನ್ನು ತಯಾರಿಸಬಹುದು.

Lentits-tomatoes: Onion-soup: ಇವುಗಳಿಂದ ಸಾರು, ಹುಳಿ, ಸಾಂಬಾರುಗಳನ್ನು ಮಾಡಬಹುದು.

Butter-milk (ಮಜ್ಜಿಗೆ): ಕಡಲೆಹಿಟ್ಟು ಬೆರಸಿ ಕಡಿ, ಪಳದ್ಯಗಳನ್ನು ಮಾಡಬಹುದು.

Yogurt (ಮೊಸರು): ಮೊಸರನ್ನ, ಮೊಸರೊಡೆ ಮಾಡಬಹುದು

Sour-cream (ಹುಳಿ ಕೆನೆ): ಶ್ರೀಖಂಡಕ್ಕೆ ಉತ್ತಮವಾಗಿದೆ.

Milk-Powder (ಹಾಲಿನ ಪುಡಿ): ಇವುಗಳಿಂದ ಗುಲಾಬ ಜಾಮೂನು

Heavy-cream (ಗಟ್ಟಿ ಕೆನೆ): ಮಾಡಬಹುದು.

Ground-Meat (ಕುಟ್ಟಿದ ಮಾಂಸ): ಖೀಮ, ಸಾಮೋಸಗಳನ್ನು ತಯಾರಿಸಬಹುದು.

ಇದಲ್ಲದೇ Red-pepper (ಮೆಣಸಿನಕಾಯಿ) turmeric (ಅರಿಸಿನ) paprika (ಮೆಣಸಿನಪುಡಿ) bay-leaves (ಕರಿಬೇವು) ಇವುಗಳೂ ಯಾಲಕ್ಕಿ, ಗೋಡಂಬಿ, ಕೇಸರಿ ಮತ್ತು ಮಸಾಲೆಯ ಇತರ ಸಾಮಾನುಗಳೂ ಸಿಗುವುದರಿಂದ ಬೇಕಾದ ಅಡಿಗೆಯನ್ನು ತಯಾರಿಸಬಹುದು.

ನನ್ನ ಮೂರು ವರ್ಷದ ಪಾಕಶಾಸ್ತ್ರದ ಅನುಭವ ಅಮೇರಿಕ ಬಿಡುವ ಮೊದಲು ಕೈಕೊಂಡ ದೀರ್ಘ ಪ್ರವಾಸದಲ್ಲಿ ತುಂಬ ಪ್ರಯೋಜನಕಾರಿಯಾಯಿತು. ಆಗ ಅಲ್ಲಲ್ಲಿ ನನ್ನ ಪರಿಚಿತರಲ್ಲಿ ಇಳಿದುಕೊಳ್ಳುತ್ತಿದ್ದೆ. (ಸಾಮಾನ್ಯವಾಗಿ ಇಂಥ ಅತಿಥ್ಯ ಅಮೇರಿಕೆಯಲ್ಲಿ ಇಲ್ಲ) ಸಲಿಗೆಯಿದ್ದ ಮನೆಗಳಲ್ಲಿ ನೇರ ಅಡಿಗೆಮನೆಗೇ ಇಳಿಯುತ್ತಿದ್ದೆ. ಇದರಲ್ಲಿ ಪದಾರ್ಥಕ್ಕಿಂತ ತನ್ನ ಸ್ವಾರ್ಥವೇ ಹೆಚ್ಚು ಇತ್ತು ಎನ್ನಿ. ಅಮೇರಿಕನ್ನರಿಗೆ ಅತಿ ಪ್ರಿಯವಾದ ಭಾರತೀಯ ಊಟ ಸಿಗುತ್ತಿತ್ತಲ್ಲದೆ ನನ್ನ ನಾಲಗೆಗೂ ತೃಪ್ತಿಯಾಗುತ್ತಿತ್ತು. ಅಂದು ಮನೆಯಲ್ಲಿ ಹಬ್ಬದ ವಾತಾವರಣ. ಅಕ್ಕಪಕ್ಕದ ಕೆಲ ಗುರುತಿವರೂ ಊಟಕ್ಕೆ ಬರುವರು. ಮನೆಯ ಯಜಮಾನಿಗಾದರೂ-ವಿಶಿಷ್ಟ ಅಡಿಗೆ ಸಿಗುವುದರ ಜೊತೆಗೆ ತನಗೆ ಅಡಿಗೆಯ ಜವಾಬ್ದಾರಿ ತಪ್ಪಿತೆಂಬ ಉಬ್ಬು, ನಾನು ಇಳಿದುಕೊಂಡ ಎಂಟ{}ತ್ತು ಬೇರೆ ಬೇರೆ ಮನೆಗಳಲ್ಲಿ ಕಂಡು ಬಂದ ಸಡಗರ-ಸಂಭ್ರಮಗಳು ಒಂದೇ ವಿಧವಾಗಿದ್ದವು. ಅವನ್ನಿಲ್ಲಿ ಸಂಗ್ರಹಿಸಿದ್ದೇನೆ.

ಮುಂಜಾನೆ ಇಂದಿನ ಅಡಿಗೆ ನನ್ನದು ಎಂದು ಯಜಮಾನಿಗೆ ಹೇಳುವದೇ ತಡ. ಮನೆಯಲ್ಲಿದ್ದ ಎಲ್ಲಾ ಸಾಮಾನುಗಳನ್ನು ತೋರಿಸಿ, ಇನ್ನೇನೇನು ಬೇಕಾಗುವದೆಂದು ಕೇಳಿ ಬರೆದುಕೊಂಡು ತನ್ನೊಂದಿಗೆ ಸೂಪರ್ ಮಾರ್ಕೆಟ್ಟಿಗೆ ನನ್ನನ್ನೂ ಕರೆದುಕೊಂಡು ಹೋಗಿ ಬೇಕಾದ ಸಾಮಾನುಗಳನ್ನು ಕೊಳ್ಳುವಳು. ಬಿಲ್ ಆರೇಳು ಡಾಲರುಗಳಾದಾಗ ಇಷ್ಟು ಕಡಿಮೆಯಲ್ಲಿ ಆಗುವುದೇ ಎಂದು ವಿಸ್ಮಯಗೊಳ್ಳುವಳು. ಸರಿ, ಮನೆಗೆ ಬಂದು ತೋಳೇರಿಸಿ ನಾನು ಬಾಣಸಿಗನ ಅವತಾರ ತಾಳುವೆ. ಮನೆಯವರೆಲ್ಲ ಕುತೂಹಲದಿಂದ ಸುತ್ತುವರೆದು ನಿಲ್ಲುವರು. ಮುದುಕಿಯೊಬ್ಬಳು ಕಾಗದ, ಪೆನ್ಸಿಲ್ ತೆಗೆದುಕೊಂಡೇ ಬರುವಳು. ನನಗೆ ಬೇಕಾದ ಪಾತೇಲಿ, ಪಾತ್ರೆಗಳನ್ನು ತೆಗೆಯುತ್ತಿದ್ದಂತೆ ಹುಡುಗನೊಬ್ಬ `ಮೊಮ್’ ಅವನು ಸಾಂಟಾಕ್ಲೊಸನೇ? ಎಂದು ದಿಙ್ಮೂಢನಾಗಿ ಕೇಳಿದ. “ಅಕೋ ಅದು ನೋಡು, ಭಾರತೀಯ ಜಾದೂಗಾರನಂತೆ ಅಲ್ಲಿಂದಿಷ್ಟು ಇಲ್ಲಿಂದಿಷ್ಟು ಸಾಮಾನು ಹಾಕಿ ಏನೇನೋ ಮಾಡುತ್ತಿದ್ದಾನೆ” ಎಂದು ಮಧ್ಯ ವಯಸ್ಕಳೊಬ್ಬಳು ಅಂದರೆ “ನೀನು ತಕ್ಕಡಿ, ಚಮಚ, ಏನನ್ನೂ ಬಳಸದೇ ಸಾಮಾನುಗಳನ್ನು ಹಾಕುತ್ತೀಯಲ್ಲ ಕ್ರಿಶ್? ಅಂದಾಜಿನಿಂದ ಹಾಕಿದರೆ ಪ್ರಮಾಣ ತಪ್ಪುವದಿಲ್ಲವೇ?” ಎಂದು ತರುಣಿಯೊಬ್ಬಳು ಕೇಳಿದಳು. “ಭಾರತೀಯ ಮಹಿಳೆಯರೆಲ್ಲ ಇವನ್ನು ಉಪಯೋಗಿಸುವುದಿಲ್ಲ. ಎಲ್ಲ ಕಣ್ಣಿನ ಅಂದಾಜಿನಿಂದಲೇ ಮಾಡುತ್ತಾರೆ.” ಎಂದಾಗ ಅವರಿಗೆ ಅಚ್ಚರಿ. ಪುರಿಗಳ ಹಿಟ್ಟನ್ನು ನಾದುತ್ತಿದ್ದಂತೆ ಪ್ರೌಢೆಯೊಬ್ಬಳು ತಯಾರಿಸಿದ ಅಡುಗೆಯ ಒಂದೊಂದೇ ಹೆಸರುಗಳನ್ನು ಬರೆದುಕೊಳ್ಳಲಾರಂಭಿಸಿದಳು. ಪುರಿಗಳು ಒಂದೊಂದಾಗಿ ಎಣ್ಣೆಯಲ್ಲಿ ಉಬ್ಬತೊಡಗಿದಾಗ “ಹೇ ಮೊಮ್, ಮೊಮ್! ನೋಡಿಲ್ಲಿ ಹಿಟ್ಟನ್ನು ಚೆಂಡಿನಂತೆ ಉಬ್ಬಿಸಿಬಿಟ್ಟಿದ್ದಾನೆ ಕ್ರಿಶ್!” ಎಂದು ಮಕ್ಕಳು ಕೂಗಿಕೊಂಡವು. ಯಜಮಾನಿ ಓಡಿ ಬಂದು ನೋಡಿ, ಅಚ್ಚರಿಯಿಂದ “ಅದರಲ್ಲಿ ಹವೆ ಹೇಗೆ ತುಂಬಿದೆ ಕ್ರಿಶ್?” ಎಂದು ಕೇಳಿದಳು. ಇದನ್ನು ಕೇಳಿ ಅಮೇರಿಕನ್ ಮಹಿಳೆಯೊಬ್ಬಳು “ಜಿಲೇಬಿಯಲ್ಲಿ ಸಕ್ಕರೆಯ ಪಾಕವನ್ನು ಪಂಪಿನಿಂದ ತುಂಬುತ್ತಾರೆಯೇ?” ಎಂದು ಉದ್ಗರಿಸಿದ್ದು ನೆನಪಿಗೆ ಬಂದಿತು. ಸೋಡಾ ವಗೈರೆ ಹಾಕದೇ ಪುರಿ ಉಬ್ಬುತ್ತದೆ ಎಂದಾಗ ಆಕೆ ನಂಬಲಿಲ್ಲ. ಕೊನೆಗೆ ಅವಳಿಂದಲೇ ಒಂದು ಪುರಿ ಲಟ್ಟಿಸಿ ಕರಿಯಲು ಹಚ್ಚಿದೆ. ಅದು ಉಬ್ಬಿದಾಗ ಅವಳು ನಂಬಲೇ ಬೇಕಾಯಿತು.

ಹೊತ್ತಿಗೆ ಸರಿಯಾಗಿ ಮಸಾಲೆ-ಅನ್ನ, ಬಟಾಟೆಯ ಪಲ್ಯೆ, ಪುರಿ, ಸೀಕರಣೆ, ಟೊಮೆಟೊ ಭಜ್ಜಿ ಮುಂತಾದವುಗಳೂ ತಯಾರಾದವು. “ನಿನ್ನ ಗಮಗಮಿಸುವ ಅಡಿಗೆ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದೆ ಕ್ರಿಶ್! ಬೇಗನೇ ಊಟ ಮಾಡೋಣ” ಎಂದು ಎಲ್ಲರೂ ಅವಸರ ಮಾಡುತ್ತಿದ್ದರು. ಇಷ್ಟರಲ್ಲಿ ಕೆಲವರು ಬಂದು ಪುರಿ, ಭಾಜಿಗಳ ರುಚಿ ನೋಡಿಯೂ ಆಗಿತ್ತು. ಊಟಕ್ಕೆ ಅಣಿಮಾಡುತ್ತಿದ್ದಂತೆ ಯಜಮಾನಿಗೆ ತಟ್ಟನೇ ಏನೋ ವಿಚಾರ ಬಂದಿತು. “ಕ್ರಿಶ್, ನಿಮ್ಮಲ್ಲಿ ಊಟ ಮಾಡುವ ಪದ್ಧತಿ ಎಂತಹದು?” ಎಂದು ಕೇಳಿದಳು. “ಪಟ್ಟಣಗಳಲ್ಲಿ ಟೇಬಲ್ ಮೇಲೆ, ಚಾಕು, ಮುಳ್ಳು-ಚಮಚಗಳಿಂದ ಊಟ ಮಾಡಿದರೂ ಹಳ್ಳಿಗಳಲ್ಲಿ, ದೊಡ್ಡೂರುಗಳಲ್ಲಿ ನೆಲದ ಮೇಲೆಯೇ ಕುಳಿತು ಕೈಬೆರಳುಗಳಿಂದ ಊಟ ಮಾಡುತ್ತಾರೆ ಎಂದೆ. ಸರಿ ನೆರೆದವರಿಗೆಲ್ಲ ದೊಡ್ಡ ಕಾರ್ಪೆಟ್ ಒಂದನ್ನು ತಂದಳು. ಅದರ ಮೇಲೆ ಅಡಿಗೆಯನ್ನು-ಪ್ಲೇಟುಗಳನ್ನು ಜೋಡಿಸಲಾಯಿತು. ಆದರೆ ಅವರು ಎಣಿಸಿದಷ್ಟು ಸುಲಭವಾಗಿ ಕೆಳಗೆ ಕುಳಿತು ಊಟ ಮಾಡುವುದು ಶಕ್ಯವಿರಲಿಲ್ಲ. ಪದ್ಮಾಸನ ಹಾಕಿ ಕುಳಿತ ನನ್ನನ್ನು ಅನುಕರಿಸಲು ಹೋಗಿ ಸ್ಥೂಲಕಾಯದವನೊಬ್ಬ ಬೋರಲು ಬಿದ್ದು ನಗಿಸಿಕೊಂಡ. ಇನ್ನೊಬ್ಬ ನಮಾಜು ಮಾಡಲು ಕೂಡ್ರುವಂತೆ ಕುಳಿತ. ಮೊಣಕಾಲ ಮೇಲೆ ಲಂಗ ತೊಟ್ಟ ಮಹಿಳೆಯೊಬ್ಬಳು ಹೇಗೆ ಕೂಡಬೇಕೆಂದು ತಿಳಿಯದೇ ಬಸುರಿಯಂತೆ ಎರಡೂ ಕಾಲು ಬಿಟ್ಟು ಕುಳಿತಳು. ಮಗುದೊಬ್ಬ ಯಾವ ಆಸನವೂ ಬಗೆಹರಿಯದೇ ಕಪ್ಪೆಯ ಆಸನವನ್ನು ಕೈಕೊಂಡ. ಅಂತೂ ಊಟಕ್ಕೆ ಕುಳಿತವರ ಭಂಗಿಗಳು ನಾನಾವಿಧವಾಗಿದ್ದವು.

ಅಮೇರಿಕನ್ನರಿಗೆ ಬೇರಾವ ಧಾರ್ಮಿಕತೆಯಿಲ್ಲದಿದ್ದರೂ ಅಂದಿನ ಬ್ರೆಡ್-ಬೆಣ್ಣೆಗಳನ್ನು ಕೊಡಮಾಡಿದ್ದಕಾಗಿ ದೇವರಿಗೆ ಧನ್ಯವಾದ ಅರ್ಪಿಸದೇ ಯಾರೂ ಊಟಕ್ಕೆ ಕೊಡುವದಿಲ್ಲ. ಅಂದು ಭಾರತೀಯ ಪ್ರಾರ್ಥನೆಯಾಗಬೇಕು ಎಂದು ಯಾರ ತಲೆಯಲೋ ವಿಚಾರ ಬಂದಿತು. ಸರಿ ನನಗೆ ಪ್ರಾರ್ಥನೆ ಹೇಳೆಂದರು. ನಮ್ಮಲ್ಲಿ ಬ್ರೆಡ್-ಬೆಣ್ಣೆಯ ಪ್ರಾರ್ಥನೆ ಇಲ್ಲದ್ದರಿಂದ “ಸಹನಾವವತು. ಸಹನೌ ಭುನಕ್ತು … … ” ಹೇಳಿದೆ. ಅದರ ಭಾಷೆ-ಅರ್ಥಗಳನ್ನು ಕೇಳಿತಿಳಿದುಕೊಂಡರು. ನಾನಿನ್ನೂ ಅರ್ಥ ಹೇಳುತ್ತಿರುವಾಗಲೇ ಯಜಮಾನಿ ಊಟ ಪ್ರಾರಂಭಿಸಿ ತನ್ನ ಹೊಸ ಬಟ್ಟೆಯ ಮೇಲೆ ಮಸಾಲೆ-ಅನ್ನ ಕೆಡವಿಕೊಂಡಿದ್ದಳು. ಇನ್ನೊಬ್ಬನು ಅವಳ ಫಜೀತಿಗೆ ನಗುತ್ತಿದ್ದಂತೆ ಬೆರಳುಗಳಿಂದ ಎತ್ತಿದ ಭಜ್ಜಿಯನ್ನು ಮೊಳಕೈ ತನಕ ಬರುವಂತೆ ಇಳಿಬಿಟ್ಟಿದ್ದ. ಅತಿಥಿ-ಮಹಿಳೆಯೊಬ್ಬಳು ಸ್ವಲ್ಪ ಹೊತ್ತು ಯೋಚಿಸಿ ತಾನು ಭಾರತೀಯ ಅಡಿಗೆಯ ರುಚಿ ನೋಡಲು ಬಂದಿದ್ದೇನೆಯೇ ಹೊರತು ಬಟ್ಟೆ ಕೆಡಿಸಿಕೊಳ್ಳಲಿಕ್ಕಲ್ಲ. ಅಲ್ಲದೇ ಕೈಯಿಂದ ಊಟ ಮಾಡಿದರೆ ಅಡಿಗೆಯ ರುಚಿಯೂ ತಿಳಿಯಲಿಕ್ಕಿಲ್ಲ ಎಂದು ಸ್ಪಷ್ಟವಾಗಿ ಹೇಳಿ, ಎದ್ದು ಹೋಗಿ ಚಮಚ, ಮುಳ್ಳು–ಚಮಚಗಳನ್ನು ತಂದಳು. ಸರಿ ಎಲ್ಲರೂ, ಎದ್ದು ಹೋಗಿ ತಾವೂ ತಂದರು. `ನಮಾಜಾಸನ’, `ಮಂಡೂಕಾಸನ’ಗಳಲ್ಲಿ ಕುಳಿತವರು ತಮಗೂ ತರುವಂತೆ ಕೂಗಿ ಕೇಳಿಕೊಂಡರು.

ಮಾತಾಡುತ್ತಾಡುತ್ತ ಊಟ ಮಾಡುವ ರೂಢಿಯುಳ್ಳ ಅಮೇರಿಕನ್ನರು ಅಂದೇಕೋ ಮೌನವಾಗಿಯೇ ಊಟ ಮಾಡಹತ್ತಿದರು. ಅರ್ಧ ಊಟವಾದಾಗ ಮೊದಲಿಗೆ ಮಾತನಾಡಿದವ ಐದು ವರ್ಷದ ಹುಡುಗ. “ಕ್ರಿಶ್, ನೀನು ಚೆಫ್ನೇ? (`Chef’ ಎಂದರೆ ಅಮೇರಿಕೆಯಲ್ಲಿ ದೊಡ್ಡ ದೊಡ್ಡ ಹೋಟೆಲ್ಗಳಲ್ಲಿ ಕೆಲಸ ಮಾಡುವ ಪಾಕ-ಪ್ರಮುಖ. ಈತನಿಗೆ ಅಲ್ಲಿ ತುಂಬ ಗೌರವವಿದೆ) ಇರಲೇಬೇಕು. ತನ್ನ ಮೊಮ್ ಎಷ್ಟೊ ವರ್ಷಗಳಿಂದ ಅಡಿಗೆ ಮಾಡುತ್ತಿದ್ದರೂ `ಹೆಂಬರಗರ್’ ಮತ್ತು `ಸ್ಟೇಕ’ಗಳನ್ನೇ ಹೆಚ್ಚಾಗಿ ಮಾಡುತ್ತಾಳೆ … ಮೊಮ್, ನೀನೇಕೆ ಕ್ರಿಶ್ನಿಂದ ಈ ಅಡಿಗೆ ಕಲಿಯಬಾರದು? ನನಗೆ ಇದು ಬಹಳ ಸೇರುತ್ತದೆ” ಎಂದ. ಮಗನ ಮಾತಿನಿಂದ ತಾಯಿಗೆ ಬಹಳ ಸಂಕೋಚವೆನಿಸಿತು. ಸ್ವರ ತಗ್ಗಿಸಿ ಆಕೆ “ಹಾಗೆಲ್ಲ ಅನ್ನಬಾರದು ಮಗು. ಕ್ರಿಶ್ ನಮ್ಮ ದೇಶಕ್ಕೆ ಬೇರೆ ವಿಷಯ ಕಲಿಯಲು ಬಂದಿದ್ದಾನೆ. ಅವನು ಡಾಕ್ಟರ್ ಪದವಿ ಪಡೆಯಲಿದ್ದಾನೆ. ನಮ್ಮ ದೇಶದಲ್ಲಿ `ಚೆಫ್’ಗೆ ಬಹಳ ಮನ್ನಣೆ ಇದೆ. ಆದರೆ ಅವರ ದೇಶದಲ್ಲಿ ಈ ಬಿರುದು ಅಪಮಾನ ಮಾಡಿದಂತೆ ಆಗುವದಂತೆ. ಕ್ರಿಶ್ನು ಕಲಿಯಲು ಜಾಣನಿದ್ದಂತೆ, ಅಡಿಗೆಯಲ್ಲೂ ಜಾಣನಿದ್ದಾನೆ. ಜಾಣರಿದ್ದವರಿಗೆ ಎಲ್ಲ ವಿದ್ಯೆಯೂ ಬಲು ಬೇಗ ಬಂದುಬಿಡುತ್ತದೆ. ನೀನೂ ಕಲಿತು ಜಾಣನಾಗು … ಅಂದರೆ ನಿನಗೂ ಎಲ್ಲ ಬರುತ್ತದೆ” ಎಂದು ಹೇಳಿದಳು. ತಾಯಿಯ ಮಾತಿಗೆ ಹುಡುಗನ ಪೂರ್ಣ ಸಮ್ಮತಿಯಿಲ್ಲದಿದ್ದರೂ, ಅತಿಥಿಗಳ ಎದುರು ತಾನು ಹೇಗೆ ಮಾತನಾಡಿದ್ದು ತಾಯಿಗೆ ಸರಿಬರಲಿಲ್ಲವೆಂದು ತಿಳಿದು ಸುಮ್ಮನಾದ.

“ಮನೆಯ ಯಜಮಾನ, ಯಜಮಾನಿಯನ್ನು ಕುರಿತು “ನನಗೆ ಬಟಾಟಿ ಬಹಳ ಸೇರುತ್ತದೆ. ಆದರೆ ನಿನ್ನ ಬಟಾಟೆ-ಹಿಟ್ಟು (mashed-potato) ತಿಂದು ಸಾಕಾಗಿ ಹೋಗಿದೆ. ನೀನು ಈ ಕರದ ಪಲ್ಯ ಮಾಡಲು ಕಲಿಯಲ್ಲ?” ಎಂದು ಒಲಿಸುವ ಧ್ವನಿಯಲ್ಲಿ ಹೇಳಿದ. ಅತಿಥಿಯೊಬ್ಬ `ನನಗೆ ಅನ್ನ ಬಹಳ ಸೇರುತ್ತದೆ. ಆದರೆ ಅದು ಇಷ್ಟು ಮಧುರವಾಗಿ ಬಿಡಿಬಿಡಿಯಾಗಿ ಬೇಯಲು ಸಾಧ್ಯವಿದೆಯೆಂದು ಎಂದೂ ಅನಿಸಿರಲಿಲ್ಲ.’ ಎಂದು ನಾಲಿಗೆ ಚಪ್ಪರಿಸುತ್ತ ಹೇಳಿದ. ಮನೆಯ ಯಜಮಾನಿ `ಕ್ರಿಶ್’ ನೀನು ನಮ್ಮವೇ ಪಾತ್ರೆ ನಮ್ಮವೇ ಸಾಮಾನು, ಮಸಾಲೆಗಳನ್ನು ಹಾಕಿ ಇಷ್ಟು ಸ್ವಾದಿಷ್ಟ ಅಡಿಗೆ ತಯಾರಿಸಿದ್ದಿ. ಅಲ್ಲದೆ ೨-೩ ಅಡಿಗೆಗೆ ಒಂದೇ ಮಸಾಲೆ ಹಾಕಿದರೂ ಅವುಗಳ ರುಚಿ ಭಿನ್ನವಾಗಿದೆಯಲ್ಲ? ನಿನಗೆ ಯಕ್ಷಿಣೀ ವಿದ್ಯೆ ಬರುತ್ತಿರಬೇಕು. ಇಲ್ಲವೇ ನೀನು ಹುಟ್ಟಾ ಕಲಾಕಾರನಿರಬೇಕು” ಎಂದು ಬಾಯ್ತುಂಬ ಹೊಗಳಿದಳು. ಮುದುಕಿ “ನೀನು ಕಲಿತು ಡಿಗ್ರಿ ಪಡೆದು ಗಳಿಸುವ ಹಣಕ್ಕಿಂತ ನಮ್ಮ ದೇಶದಲ್ಲಿ ಒಂದು ಹೋಟೆಲ್ ತೆಗೆದರೆ ಹೆಚ್ಚು ಹಣಗಳಿಸುವಿ. ನಮ್ಮ ಜನರಿಗೆ ತಿನ್ನುವ ಚಪಲ ಬಹಳ; ತಿಂಡಿಗೆ ರೊಕ್ಕ ಸುರಿಯುತ್ತಾರೆ. … ಮೊನ್ನೆ ಒಂದು ಹೋಟೆಲಿಗೆ ಹೋಗಿದ್ದೆವು. ಮೂರು ನಾಲ್ಕು ಪಕ್ವಾನ್ನಗಳಿಗೆ `ಅರ್ಡರ್’ ಕೊಟ್ಟೆವು. ಎಲ್ಲದಕ್ಕೂ ಒಂದೇ ರುಚಿ ಇರಬೇಕೇ? ನೀನೊಂದು ಭೋಜನಾಲಯ ತೆರೆದರೆ ಇಂತಹ ಹೋಟೆಲ್ಗಳೆಲ್ಲ ದಿವಾಳಿ ತೆಗೆಯುವುದು ಖಂಡಿತ” ಎಂದಳು. ಎಲ್ಲರೂ ಆಕೆಯ ಮಾತನ್ನು ಅನುಮೋದಿಸಿದರು.

ಭಾರತೀಯ ದೃಷ್ಟಿಯಿಂದ ಒಂದು ಊಟದ ಹೊತ್ತಿಗೆ ಅಮೇರಿಕನ್ನರು ಬಹಳ ಕಡಿಮೆ ಊಟ ಮಾಡುತ್ತಾರೆ. ಆದರೆ ಅಡಿಗೆ ರುಚಿಯಾದರೆ ಅವರೂ ಭಾರತೀಯರನ್ನು ಹಿಂದೆ ಹಾಕುತ್ತಾರೆಂದು ಮೊದಲನೇ ಬಾರಿ ಕಂಡುಕೊಂಡೆ. ಕಂಠಮಟ ಊಟ ಮಾಡಿದ್ದರಿಂದ ಊಟ ಮುಗಿದರೂ ಏಳಲಿಕ್ಕಾಗದೇ ಕುಳಿತಲ್ಲಿಯೇ ಕುಳಿತಿದ್ದರು. ಮೆಲ್ಲನೆ ಎದ್ದು ಹೋಗಿ `ರಿಫ್ರಿಜಿರೇಟರ್’ನೊಳಗಿಂದ `ಸೀಕರಣಿ’ (ಫ್ರುಟ್ ಸೆಲೆಡ್) ತಂದೆ. ಎಲ್ಲರೂ “ನಿನ್ನ ಊಟ ಮುಗಿದಿಲ್ಲವೇ?” ಎಂದು ಪರಮಾಶ್ಚರ್ಯ ಸೂಚಿಸಿ ತಮಗೇನು ಈ ತಿಂಡಿಯಲ್ಲಿ ಆಸಕ್ತಿಯಿಲ್ಲವೆಂದು ತೋರಿಸಿದರು.

“ಅಯ್ಯೋ! ಇಷ್ಟೊಂದು `ಫ್ರುಟ್ಸೆಲೆಡ್’ ತಯಾರಿಸಿಬಿಟ್ಟೆನಲ್ಲ” ಎಂದು ಒಂದು ಕ್ಷಣ ನೊಂದುಕೊಂಡೆ. ಆದರೂ ರುಚಿ ನೋಡಿರೆಂದು ಬಲತ್ಕಾರದಿಂದ ಎಲ್ಲರಿಗೂ ಸ್ವಲ್ಪಸ್ವಲ್ಪ ಹಾಕಿದೆ. ಕೆನೆ, ಹಣ್ಣು–ಹಂಪಲು, ಬಾದಾಮು, ಗೋಡಂಬಿ, ಕೇಶರ, ಯಾಲಕ್ಕಿಗಳನ್ನು ಹಾಕಿದ ಪದಾರ್ಥ ಯಾರಿಗೆ ತಾನೇ ಸೇರದು? ಐದೇ ನಿಮಿಷಗಳಲ್ಲಿ ಇನ್ನೊಂದಿಷ್ಟು ಮಾಡಬೇಕಿತ್ತು ಎನಿಸುವಂತಾಯಿತು. “ಇಂಥ ಫ್ರುಟ್ಸೆಲೆಡ್ ನಾವು ಹೆಚ್ಚು ತಿನ್ನದಿರಲಿ ಎಂದು ಇತರ ಪದಾರ್ಥಗಳಿಂದಲೇ ಹೊಟ್ಟೆ ತುಂಬಿಸಿಕೊಳ್ಳುವಂತೆ ಮಾಡಿದಿಯಾ?” ಎಂದು ಮನೆಯೊಡತಿಯನ್ನು ಆಕ್ಷೇಪಿಸಿದರು. “ಕ್ರಿಶ್, ಯಾವಾಗ ಅದನ್ನು ತಯಾರಿಸಿ `ಫ್ರಿಜ್’ದಲ್ಲಿ ಇಟ್ಟಿದ್ದನೊ ಏನೊ! ನಾನು ಎಲ್ಲ ಅಡಿಗೆಯ ರುಚಿ ನೋಡಿದೆ. ಆದರೆ ಇದು ಮಾಡಿದ್ದು ಗೊತ್ತೇ ಇರಲಿಲ್ಲ.” ಎಂದು ಆಕೆ ತನ್ನನ್ನು ಸಮರ್ಥಿಸಿಕೊಂಡಳು. ಯಾರಿಗೂ ಎದ್ದು ಹೊರಮನೆಯಲ್ಲಿ ಬಂದು ಕೊಡುವ ಧೈರ್ಯವಿರಲಿಲ್ಲ. ಎಲ್ಲರೂ ತೇಗುತ್ತ ಕುಳಿತಲ್ಲಿಯೇ ಕುಳಿತುಬಿಟ್ಟಿದ್ದರು. ಆದರೂ ಅಜೀರ್ಣವಾಗಬಹುದೆಂದು ಹೆದರಿದ ವಯಸ್ಕರಿಬ್ಬರು ಈಗಾಗಲೇ ಮನೆಯ ಯಜಮಾನಿಯ ಹತ್ತಿರ ಫ್ರುಟ್ಸೆಲೆಡ್ಡ ಕೇಳಿ ತೆಗೆದುಕೊಂಡು ಬಿಟ್ಟಿದ್ದರು! “ಸೆರೆ ಕುಡಿದ ಅಮಲು ಊಟದಲ್ಲಿಯೂ ಬರುತ್ತದಲ್ಲ!” ಎಂದು ರಸಿಕ ಅತಿಥಿಯೊಬ್ಬ ನುಡಿದ. ಮನೆಯೊಡತಿ ತನ್ನ ಪಾಕ ಮಾಹಿತಿಯ ಪುಸ್ತಕ ತಂದು ಅಡಿಗೆ, ಅವುಗಳ ವಿಧಾನ ಒಂದೊಂದಾಗಿ ಬರೆದುಕೊಂಡಳು. `ಚಪಾಟಿ’ (ಚಪಾತಿ) `ಭರಟ್’ (ಭರತ) ಮುಂತಾದವೆಲ್ಲ ಆಕೆಯ ಟಿಪ್ಪಣಿ-ಪುಸ್ತಕದಲ್ಲಿ ಬರಹರೂಪದಲ್ಲಿ ನಿಂತವು.

“ಮಾತನಾಡುತ್ತ ಊಟ ಸ್ವಲ್ಪ `ತಗ್ಗುತ್ತಲೇ’ ಅತಿಥಿಗಳು ಹೊರಟು ನಿಂತರು. “ಕ್ರಿಶ್ ನಾವು ಊಟಕ್ಕೆಂದೇ ಬಂದರೂ ಇಷ್ಟು ಉತ್ಕೃಷ್ಟ ಭೋಜನ ನಮಗೆ ದೊರೆಯುತ್ತದೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ” ಎಂದರು. ಧನ್ಯವಾದಗಳು ಹೊರೆಹೊರೆಯಾಗಿ ಬಂದವು. ಮನೆಯೊಡತಿ “ನೀನು ಅಡಿಗೆಯಲ್ಲಿ ಇಷ್ಟು ನಿಪುಣನೆಂದು ಗೊತ್ತಿದ್ದರೆ ನನ್ನ ಇನ್ನೂ ಕೆಲವು ಆತ್ಮೀಯರನ್ನು ಬರಮಾಡಿಕೊಳ್ಳುತ್ತಿದ್ದೆನಲ್ಲ” ಎಂದು ಹಳಹಳಿಸಿದಳು. “ನೀನು ಇನ್ನೊಮ್ಮೆ ನಿನ್ನ ಪತ್ನಿಯೊಂದಿಗೆ ನಮ್ಮ ದೇಶಕ್ಕೆ ಬಂದಾಗ ಅರ್ಧ ಊರನ್ನೇ ಊಟಕ್ಕೇ ಕರೆಯುತ್ತೇನಂತೆ” ಎಂದು ಮುಗುಳು ನಕ್ಕಳು. ಚೂರು ಚಾರು ಉಳಿದ ಅಡಿಗೆಯನ್ನು ಜಾಗ್ರತೆಯಾಗಿ `ಫ್ರಿಜ್’ನಲ್ಲಿ ತೆಗೆದಿಟ್ಟಳು. ಸಾಮಾನ್ಯವಾಗಿ ಅಮೇರಿಕನ್ನರು ರವಿವಾರ ರಾತ್ರಿ ಊಟ ಮಾಡುವುದಿಲ್ಲ. ಆದರೂ ಅಂದು ರಾತ್ರಿ ಇನ್ನೊಮ್ಮೆ ಕುಳಿತು ಉಳಿದದ್ದೆಲ್ಲ ಮುಗಿಸಿದರು.

ಬೇರೆ ಬೇರೆ ಪಟ್ಟಣಗಳಲ್ಲಿ ಅನೇಕ ಅಮೇರಿಕನ್ ಕುಟುಂಬಗಳೊಡನೆ ಉಳಿದುಕೊಳ್ಳುವ ಸಂದರ್ಭ ಬಂದಿತ್ತಷ್ಟೆ. ಅಲ್ಲಲ್ಲಿ ಅವರಿಗೆ ಪ್ರಿಯವಾದ ವಸ್ತುವನ್ನು ಭಾರತೀಯ ಪದ್ಧತಿಯಂತೆ ಮಾಡಿ ಬಡಿಸುತ್ತಿದ್ದೆ. ಹೆಮಲಿನ್ ಕುಟುಂಬದವರಿಗೆ ಮೀನು ಎಂದರೆ ಪಂಚಪ್ರಾಣವಂತೆ. ಅದರೆ ಹೆಲನ್ಳಿಗೆ ಅದನ್ನು ಮಾಡಲು ಬಾರದ್ದರಿಂದ ಸಿದ್ಧವಾದ ಡಬ್ಬಿಯ (canned) ಮೀನು ತಂದು ತಿನ್ನುತ್ತಿದ್ದರಂತೆ. ಅದು ಡಿಕ್ರ ಸಂಗಡ ಮೀನಿನ ಮಾರ್ಕೆಟ್ಗೆ ಹೋಗಿ ಒಳ್ಳೆಯ ಮೀನು ತಂದು ಹುರಿದು (fish-fry) ಬಡಿಸಿದೆ. ನಾವು ಊಟಕ್ಕೆ ಕುಳಿತಾಗ ತಿನ್ನುವ ಆತುರದಲ್ಲಿ ಹೆಮಲಿನ್ನರ ಹಿರಿಯ ಮಗಳಿಗೆ ಮೀನಿನ ಮುಳ್ಳೊಂದು ಗಂಟಲಲ್ಲಿ ಸಿಕ್ಕಿಕೊಂಡಿತು. ಮೀನಿನ ಚಿರಪರಿಚಿತನಾದ ನಾನು ಅವಳಿಗೆ ಬಾಯಿ ತೆರೆಯುವಂತೆ ಹೇಳಿ ಬೆರಳು ಹಾಕಿ ಮುಳ್ಳುನ್ನು ಅನಾಯಸವಾಗಿ ಹೊರತೆಗೆದೆ. ವಿಸ್ಮಯಪಡುತ್ತ ಹೆಮಲಿನ್ನರು `ಕ್ರಿಶ್, ನೀನಿಲ್ಲದಿದ್ದರೆ ನಾವು ಡಾಕ್ಟರರ ಹತ್ತಿರ ಹೋಗುವಂತಾಗಿ ದೊಡ್ಡ ಪ್ರಕರಣವೇ ಆಗುತ್ತಿತ್ತು” ಎಂದರು. ಮಾಂಸಪ್ರಿಯ ಅಮೇರಿಕನ್ನರಿಗೆ ಬಿರಿಯಾನಿ, ಖೇಮಾ, ಬೀಫ್ ಸಮೋಸಾ ಮಾಡಿ ಬಡಿಸುತ್ತಿದ್ದೆ.

ತಿರುಗಿ ಬಂದ ಮೇಲೂ ಇವರೊಂದಿಗೆ ಪತ್ರವ್ಯವಹಾರ ನಡೆದೇ ಇತ್ತು. ಬರೆದಾಗೊಮ್ಮೆ ಭಾರತೀಯ ಭೋಜನ ಸ್ಮರಣೆಯಿರುತ್ತಿತ್ತು. ಒಬ್ಬ ಮಹಿಳೆ “ಮಕ್ಕಳೆಲ್ಲ ಚಪಾತಿ ಮಾಡೆಂದು ಪೀಡಿಸುತ್ತಾರೆ. ಒಂದೆರಡು ಸಲ ಮಾಡಿಯೂ ಇದ್ದೆ. ಆದರೆ ಅವು ನಾನು ಮಾಡಿದ ಚಪಾತಿಯನ್ನು ಸ್ವೀಕರಿಸಲು ನಿರಾಕರಿಸಿದವು. ನನ್ನ ಭಾರತೀಯ ಅಡಿಗೆಯಿಂದ ನನಗೇ ನಿರಾಶೆಯಾಗಿದೆ” ಎಂದು ಬರೆದಿದ್ದಳು. ಅಮೇರಿಕೆಯಲ್ಲಿ ಭಾರತೀಯ ಅಡಿಗೆಯ ನೈಪುಣ್ಯ ಪಡೆದಿದ್ದರೂ ಅದನ್ನೆಲ್ಲ ಬರುವಾಗ ಸಾಗರದಾಚೆಯೇ ಬಿಟ್ಟುಬರಲು ಮರೆಯಲಿಲ್ಲ.

ಅಡಿ ಟಿಪ್ಪಣಿಗಳು

ಅಮೇರಿಕೆಯಲ್ಲಿ ಜನಪ್ರಿಯವಾದ ಪ್ರಣಯಗೀತವೊಂದು
`ನ್ಯೂಯಾರ್ಕ್ ಟೈಮ್ಸ್’ ಮತ್ತು `ಸಾಯರೆಕ್ಯೂಸ್ ಓರೆಂಜ್’ ಪತ್ರಿಕೆಗಳಲ್ಲಿಯ ಅಂಕೆ-ಸಂಖ್ಯೆಗಳಿವು.