ಕಣ್ಣಿನ ಪರೀಕ್ಷೆ

“ನಿನ್ನ ಕಣ್ಣಿನ ತಪಾಸಣೆಯ ದಾಖಲೆ ಇಲ್ಲದ್ದರಿಂದ ಕೂಡಲೇ ಪರೀಕ್ಷಿಸಿಕೊಳ್ಳಬೇಕು” ಎಂದು `ವಿದ್ಯಾರ್ಥಿ-ಆರೋಗ್ಯಕೇಂದ್ರ’ದಿಂದ ಅದೇಶ ಬಂದಿತು. ಮರುದಿನವೇ ಧಾವಿಸಿದೆ. ನಿರ್ದಿಷ್ಟಪಡಿಸಿದ ಸಮಯಕ್ಕೆ, ನರ್ಸ ಒಬ್ಬಳು ನನ್ನ ಹೆಸರು ಕೇಳಿಕೊಂಡು ನನ್ನ ಆರೋಗ್ಯಚರಿತ್ರೆಯ ಫಾಯಿಲ್ ಎಳೆದಳು. ಇನ್ನೊಬ್ಬಳು ಬಂದು ಬಾಯಲ್ಲೊಂದು ಉಷ್ಣತಾಮಾಪಕಯಂತ್ರವನ್ನು ಇಟ್ಟಳು.

ಕಣ್ಣಿನ ತಪಾಸಣೆಗೂ ಎಷ್ಟೊಂದು ಕಾಳಜಿ ವಹಿಸುತ್ತಾರೆ ಈ ಡಾಕ್ಟರರು! ಶರೀರದ ಉಷ್ಣತೆಗೂ ಕಣ್ಣಿಗೂ ದೃಷ್ಟಿಗೂ ಇರುವ ಸಂಬಂಧವನ್ನು ಸಹ ಪರಿಶೀಲಿಸುತ್ತಾರೆ. ಇದಕ್ಕೇ ಅನ್ನಬೇಕು ಮುಂದುವರಿದ ರಾಷ್ಟ್ರವೆಂದು, ಎಂದು ಮನಸ್ಸಿಲ್ಲಿಯೇ ಅಂದುಕೊಂಡೆ. ಅದೇ ಭಾರತೀಯ ಕಣ್ಣಿನ ಡಾಕ್ಟರರಾದರೂ ಅಜ್ಜನ ಕಾಲದ ಅಕ್ಷರಪಟವನ್ನೇ ಓದಿಸಿ ಮನೆಗೆ ಕಳಿಸುತ್ತಾರೆ ಎಂದು ಭಾರತೀಯ ಡಾಕ್ಟರರನ್ನು ನನ್ನಷ್ಟಕ್ಕೇ ಮೂದಲಿಸಿದೆ. ನನ್ನ ಪಾಳಿ ಬಂದಿತು. ಡಾಕ್ಟರರು ಕುಶಲೋಪಚಾರದ ನಂತರ ಬಾಯಿ ತೆರಸಿ, ನಾಲಿಗೆ, ನಾಳಗಳನ್ನು ತಪಾಶಿಸಿದರು. ಮರುಕ್ಷಣದಲ್ಲಿ ನನ್ನ ಕೈಯಲ್ಲಿ ಒಂದು ಕೆಂಪು ಔಷಧದ ಬಾಟ್ಲಿ ಮತ್ತು ಗುಳಿಗೆಯ ಪೊಟ್ಟಣವೊಂದನ್ನು ಕೊಟ್ಟು ಮುಂದಿನ ಪೇಶಂಟನ್ನು ಕಳಿಸುವಂತೆ ಹೇಳಿದರು. ಇದರ ಅರ್ಥವಾಗದೇ ಡಾಕ್ಟರರ ಕೋಣೆಯಿಂದ ಹೊರಗೆ ಬಂದೆ. ಅನುಮಾನಿಸುತ್ತ ಹೊರಗೆ ನಿಂತಿದ್ದರಿಂದ ನರ್ಸ ಒಬ್ಬಳು “ಇನ್ನೇನಾದರೂ ಕೆಲಸವಾಗಬೇಕಿತ್ತೆ?” ಎಂದು ವಿಚಾರಿಸಿದಳು. ಕಿಸೆಯಿಂದ ಹಿಂದಿನ ದಿನ ಬಂದ ಕಾರ್ಡನ್ನು ತೆಗೆದು ಅವಳಿಗೆ ತೋರಿಸಿದೆ. ಅದನ್ನು ಓದಿ, ನನ್ನ ಕೈಯಲ್ಲಿದ್ದ ಔಷಧದ ಬಾಟ್ಲಿ ನೋಡಿ, ನಗೆಗಡಲಲ್ಲಿ ತೇಲುತ್ತ “ಡಾಕ್ಟರ್!ಡಾಕರ್! ಇಂದು ನಿಮ್ಮವಳು ನಿಮಗೆ ನಾಷ್ಟಾ ಸರಿಯಾಗಿ ಕೊಟ್ಟಿಲ್ಲವೇ? ಕಣ್ಣಿನ ತಪಾಸಣೆಗೆ ಬಂದವರಿಗೆ ನೆಗಡಿಯ ಔಷಧ ಕೊಟ್ಟು ಕಳಿಸುತ್ತಿದ್ದೀರಲ್ರಿ!” ಎಂದು ಗಟ್ಟಿಸಿ ಅಂದಳು. ಡಾಕ್ಟರರು ಕೋಣೆಯಿಂದ ಹೊರಗೆ ಬಂದು ಪತ್ರವನ್ನು ಓದಿ, “ಕ್ಷಮಿಸಬೇಕು. ನೀವು ಮೊದಲೇ ಈ ಪತ್ರ ತೋರಿಸಬಾರದಾಗಿತ್ತೇ?” ಎಂದರು ಆಸ್ಪತ್ರೆಯ ತುಂಬ ಈ ಸುದ್ದಿ ಬಲು ಬೇಗ ಹರಡಿತು. ಎಲ್ಲರೂ ಹೊರಗೆ ಓಡಿಬಂದು ಡಾಕ್ಟರರನ್ನು ಅಭಿನಂದಿಸಿ ಹೊಟ್ಟೆ ತುಂಬ ನಕ್ಕರು. ಅಮೇರಿಕನ್ನರು ಆಸ್ಪತ್ರೆಗಳೆಂದರೆ ರೋಗಪೀಡಿತರಿಗೆ ಆಶ್ರಮಸ್ಥಾನವೆಂದು ಬಗೆಯುವುದಿಲ್ಲ. ಬದಲಾಗಿ ಮನೆಗಿಂತ ಯೋಗ್ಯ ವಿಶ್ರಾಂತಿಯ ಸ್ಥಾನವೆಂದು ನಂಬುತ್ತಾರೆ. ಅಂತೆಯೇ ಒಂದು ನೆಗಡಿಯಾದರೂ ಆಸ್ಪತ್ರೆಗೆ `Admit’ ಆಗುತ್ತಾರೆ! ಆದರೆ ಆಸ್ಪತ್ರೆಯ ಬಿಲ್ಲು ಸಾಕಷ್ಟು ಆಗುವದರಿಂದ ಸರ್ವಸಾಧಾರಣ ನಾಗರಿಕನಿಗೆ ಸಾಧ್ಯವಿಲ್ಲ. ಬಹುಶಃ ಎಲ್ಲರೂ ಆರೋಗ್ಯದ ವಿಮೆ ಇಡಿಸುತ್ತಾರೆ. ಹೀಗಾಗಿ ಯಾವನೇ ಆಗಲಿ ಕಾಯಿಲೆ ಬಿದ್ದು ಆಸ್ಪತ್ರೆಗೆ ಸೇರಿದರೆ ಬಿಲ್ಲಿನ ಬಹಳಷ್ಟು ಭಾಗವನ್ನು ವಿಮಾಕಂಪನಿಯವರೇ ಕೊಡುತ್ತಾರೆ. ಪ್ರತಿಯೊಬ್ಬ ನಾಗರಿಕನು ವರ್ಷಕ್ಕೆ ಒಮ್ಮೆಯಾದರೂ ಶರೀರಪರೀಕ್ಷೆ ಮಾಡಿಸಿಕೊಳ್ಳುತ್ತಾನೆ. ಕೆಲವರಿಗಂತೂ ಆಸ್ಪತ್ರೆಗೆ ಹೋಗುವದೆಂದರೆ ಮಾವನ ಮನೆಗೆ ಹೋಗುವಷ್ಟು ಸಂತಸ. ಇಂತವರ ಪತ್ನಿ “ಏನು ಆಸ್ಪತ್ರೆಯಲ್ಲಿ ಬ್ಲಾಂಡ್ (blonde) ನರ್ಸ ಇದ್ದಾಳೆಯೇ?” ಎಂದೂ ಕೇಳುವುದುಂಟು. ಪತ್ನಿ ಆಸ್ಪತ್ರೆಗೆ ಎಡತಾಕುತ್ತಿದ್ದರೆ “ಏನು ಅಲ್ಲೊಬ್ಬ ತರುಣ ಡಾಕ್ಟರ್ ಬಂದಿದ್ದಾನೆಯೇ?” ಎಂದು ಪತಿಯಾದವನು ಪೀಡಿಸುವದುಂಟು. ಆರೋಗ್ಯದ ಬಗ್ಗೆ ಅತೀ ಕಾಳಜಿವಹಿಸುವ ಅಮೇರಿಕನ್ನರು ಹೆಚ್ಚು ಬೇಯಿಸಿದ ಆಹಾರವನ್ನಾಗಲೀ, ಹೆಚ್ಚು ಮಸಾಲೆಯನ್ನಾಗಲೀ ತಿನ್ನುವುದಿಲ್ಲ. ಅಮೇರಿಕನ್ನರು ನುಂಗುವಷ್ಟು ಗುಳಿಗೆಗಳನ್ನು ಜಗತ್ತಿನ ಇನ್ನಾವ ರಾಷ್ಟ್ರದವರೂ ನುಂಗುವುದಿಲ್ಲವಂತೆ. ಇಷ್ಟೆಲ್ಲ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವವರು ಸಿಗರೇಟು ಮತ್ತು ಸೆರೆಯನ್ನು ಅಷ್ಟೊಂದು ಏಕೆ ಪ್ರೀತಿಸುವರೋ ತಿಳಿಯದಾಗಿದೆ. ಬಹುಸಂಖ್ಯಾತ ಅಮೇರಿಕನ್ನರು ಸೆರೆ ಕುಡಿದು ಕಾರು ನಡೆಸುವಾಗ ಅನಾಹುತಕ್ಕೆ ಬಲಿಯಾಗಿಯೋ, ಹೆಚ್ಚು ಸಿಗರೇಟು ಸೇದಿ ಪುಪ್ಫಸರೋಗಕ್ಕೆ ಬಲಿಯಾಗಿಯೋ ಸಾಯುತ್ತಾರೆ. ಹಬ್ಬಹುಣ್ಣಿಮೆಗಳಿರುವ ವಾರಾಂತ್ಯದಲ್ಲಿ ಸಾಯರೆಕ್ಯೂಸದಂತಹ ಚಿಕ್ಕ ಪಟ್ಟಣಗಳಲ್ಲಿ ೬೦೦–೭೦೦ ಜನ ಅಮೇರಿಕನ್ನರು ಕಾರಿನ ಅಪಘಾತಗಳಿಂದ ಸಾಯುತ್ತಾರೆಂದರೆ ಆಶ್ಚರ್ಯಪಡಬೇಕಾಗಿಲ್ಲ.

ಮಹಿಳೆಯರಿಗಂತೂ ಆಸ್ಪತ್ರೆಗಳೆಂದರೆ ತೌರುಮನೆ ಇದ್ದಂತೆ. ಗರ್ಭವತಿಯಾದ ಲಕ್ಷಣ ಕಾಣುತ್ತಲೆ ಆಸ್ಪತ್ರೆಯ ದರ್ಶನಕ್ಕೆ ಪ್ರಾರಂಭ. ಮೊದಲು ತಿಂಗಳಿಗೊಮ್ಮೆ ಭೆಟ್ಟಿಕೊಟ್ಟರೆ ನಂತರ ವಾರಕ್ಕೊಮ್ಮೆ, ಕೊನೆಕೊನೆಗೆ ದಿನಕ್ಕೊಮ್ಮೆ ಆಸ್ಪತ್ರೆಗೆ ಎಡತಾಕುತ್ತಿರುತ್ತಾರೆ. ಪ್ರಸೂತಿಗಾಗಿ ಐದು ದಿನ ಆಸ್ಪತ್ರೆಯಲ್ಲಿ ಇರುವುದು ವಾಡಿಕೆ. ಈ ಐದು ದಿನಕ್ಕೆ ೫೦೦ ಡಾಲರು (೨{,}೫೦೦ ರೂ) ತೆರಬೇಕು. ಈ ಹಣವನ್ನು ವಿಮಾಕಂಪನಿಯವರೇ ಕೊಡುವದರಿಂದ ಮಾತಾಪಿತೃಗಳು ಅಷ್ಟೊಂದು ವಿಚಾರಕ್ರಾಂತರಾಗಬೇಕಾಗಿಲ್ಲ. ಅಮೇರಿಕೆಯಲ್ಲಿ ಒಂದು ವಿನೋದ ಸಾಮಾನ್ಯವಾಗಿದೆ. ವಿದೇಶಿಯನೊಬ್ಬ ಅಮೇರಿಕನ್ ಮಹಿಳೆಗೆ ಆಕೆಯ ಮನೆ, ಹುಟ್ಟಿದ ಊರು ಇತ್ಯಾದಿಗಳ ಬಗ್ಗೆ ವಿವರ ಕೇಳಿದನಂತೆ. ಆಕೆ ಕೊಟ್ಟ ಉತ್ತರ; “ನಾನು ರೂಪಗೊಂಡಿದ್ದು ಕಾರಿನಲ್ಲಿ, ಹುಟ್ಟಿದ್ದು ಆಸ್ಪತ್ರೆಯಲ್ಲಿ, ಬೆಳೆದದ್ದು ಮಕ್ಕಳಾಡಿಸುವವರ (Baby Sitter) ಆರೈಕೆಯಲ್ಲಿ, ಆಟವಾಡಿದ್ದು ಕಿಂಡರ್ ಗಾರ್ಟನ್ನಿನಲ್ಲಿ, ವಿದ್ಯಾಭ್ಯಾಸ ನಡೆದದ್ದು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ, ಮದುವೆಯಾದದ್ದು ಚರ್ಚಿನಲ್ಲಿ, ಈಗ ವಾಸಿಸುತ್ತಿರುವುದು ಟ್ರೇಲರ್ ಬಸ್ಸಿನಲ್ಲಿ … … ನನಗೆ ಮನೆ, ಊರು ಎಲ್ಲಿವೆ?” ಎಂದು ಮರುಸವಾಲು ಹಾಕಿದಳಂತೆ!”

ನವ್ಯಭೂತಗಳು