ಅಮೇರಿಕೆಯಲ್ಲಿ ಭಾರತೀಯರು

ಅಮೇರಿಕೆಯಲ್ಲಿ ಭಾರತೀಯರು

ಬಹಳಷ್ಟು ಭಾರತೀಯ ತಂದೆ–ತಾಯಿಗಳು ತಮ್ಮ ಮಕ್ಕಳನ್ನು ವಿದೇಶಕ್ಕೆ (ಇತ್ತೀಚೆಗೆ ಅಮೇರಿಕಕ್ಕೆ ಹೋಗುವವರ ಸಂಖ್ಯೆ ಹೆಚ್ಚಿದೆ) ಕಳಿಸಲು ಒಪ್ಪುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಅಮೇರಿಕೆಗೆ ಹೋದವರು ಭಾರತಕ್ಕೆ ತಿರುಗಿ ಬರುವುದೇ ಇಲ್ಲ, ಬಂದರೂ ಭಾರತದಲ್ಲಿರಲು ಅವರ ಮನಸ್ಸು ಒಪ್ಪದೇ ತಿರುಗಿ ಅಮೇರಿಕೆಗೇ ಧಾವಿಸುತ್ತಾರೆ. ಎಂದು ಅವರ ಕಲ್ಪನೆ. ಈ ಮಾತಿನಲ್ಲಿ ಬಹಳ ಸತ್ಯಾಂಶವಿದೆ ಎಂದು ಭಾರತೀಯ ಮತ್ತು ಅಮೇರಿಕನ್ ಸರಕಾರದ ಅಂಕಿಸಂಖ್ಯೆಗಳಿಂದ ಕಂಡುಕೊಳ್ಳಬಹುದು. ಆದರೆ ಅಮೇರಿಕದಲ್ಲಿ ಶಿಕ್ಷಣ ಪಡೆದ ಅನೇಕ ಭಾರತೀಯರು ಮರಳಿ ಅಮೇರಿಕೆಗೆ ಹೋಗಲು ಹಾತೊರೆಯವದಕ್ಕೆ ಊಹಾಪೋಹಗಳು ಅನೇಕ. ಪಾಲಕರು ಶ್ವೇತ ಯಾಂಕಿ ಕುಮಾರಿಗೆ ಮಗ ಮನಸೋತಿದ್ದಾನೆಂದು ನಂಬುತ್ತಾರೆ. ಗಾಂಧಿ–ಟೊಪ್ಪಿಗೆಯ ದೇಶಭಕ್ತರು, ಇಂದಿನ ಜನಾಂಗದಲ್ಲಿ ದೇಶಾಭಿಮಾನ ಕಡಿಮೆಯಾಗಿದೆಯೆಂದು ಸಾರುತ್ತಾರೆ. ಅಮೇರಿಕೆಯಲ್ಲಿ ಕಡಿಮೆ ಕೆಲಸಕ್ಕೆ ದೊರೆಯುವ ಹೇರಳ ಪಗಾರಕ್ಕಾಗಿ ಭಾರತೀಯರು ಅಲ್ಲಿ ಧಾವಿಸುತ್ತಾರೆಂದು ವ್ಯಾಪಾರಿ–ಬುದ್ಧಿಯವರು ನಂಬುತ್ತಾರೆ. ಅಲ್ಲಿಯ ಸುಖಜೀವನಕ್ಕಾಗಿ ಓಡಿಹೋಗುತ್ತಾರೆಂದು ಸಾಮಾನ್ಯರು ಭಾವಿಸುತ್ತಾರೆ. ಆ ದೇಶದಲ್ಲಿ ನಾಲ್ಕು ವರ್ಷಗಳನ್ನು ಕಳೆದ ತರುವಾಯ, ನಾನು ಇವಾವ ಊಹೆಗಳಲ್ಲೂ ಹೆಚ್ಚಿನ ಹುರುಳು ಇಲ್ಲವೆಂದು ಹೇಳಬಲ್ಲೆ.

ಅಮೇರಿಕೆಗೆ ಹೋಗುವ ವಿದ್ಯಾರ್ಥಿಗಳನ್ನು ಸಾಮಾನ್ಯವಾಗಿ ಎರಡು ಭಾಗವಾಗಿ ವಿಂಗಡಿಸಬಹುದು. ಮೊದಲನೇ ಗುಂಪು ನವಯುವಕರದು, ಇವರು ಅಮೇರಿಕೆಯ `ಹಾಲಿವುಡ್’ ಜಗತ್ತು, ಅಲ್ಲಿಯ ಸುಕೋಮಲೆಯರ ಜಗತ್ತು, ಅಲ್ಲಿಯ ಐಶ್ವರ್ಯ, ಅಲ್ಲಿಯ ಸುಖ–ಸೌಕರ್ಯಗಳ ಕತೆ ಕೇಳಿ, ಅವನ್ನು ಕಣ್ಣಾರೆ ಕಂಡು ಅನುಭವಿಸಲು ತವಕಿಸಿ ಹೋದವರದು. ಅಮೇರಿಕೆ ಜಗತ್ತಿನಲ್ಲಿ ಇಂದು ಮುಂದುವರಿದ ರಾಷ್ಟ್ರವಾಗಿದ್ದರೆ, ಅದರೆ ಏಳ್ಗೆಗೆ ಕಾರಣವೇನೆಂದು ಅರಿಯಲು ಹೋದವರದು ಎರಡನೇ ಗುಂಪು. ಇವರಲ್ಲಿ ಹೆಚ್ಚಿನ ಜನ ವಿದ್ಯಾಭಿಲಾಷಿಗಳಾಗಿ ತಮ್ಮ ದೇಶದಲ್ಲಿಲ್ಲದ, ದೊರೆಯದು ವಿಶೇಷ ತರಬೇತಿಗೆಂದು ಇಲ್ಲಿ ಬಂದವರು; ತಿರುಗಿ ತಮ್ಮ ದೇಶಕ್ಕೆ ಹೋಗಿ ಕೈಲಾದ ಸೇವೆ ಸಲ್ಲಿಸಬೇಕು ಎನ್ನುವ ವಿಚಾರದವರು. ಇವರು ಅಮೇರಿಕೆಗೆ ಬಂದರೂ ತಮ್ಮ ಭಾರತೀಯ ಸಂಸ್ಕಾರವನ್ನು ಮರೆಯುವುದಿಲ್ಲ. ಅಲ್ಲಿಯ ಕುಡಿತ, ಕುಣಿತಗಳಿಗೆ ಬಲಿಯಾಗದೇ ಸಂಯಮದಿಂದಲೇ ತಮ್ಮ ಓದು ನಡೆಸುತ್ತಾರೆ. ವಿದ್ಯಾಭ್ಯಾಸದಲ್ಲಾಗಲೀ, ಸಂಶೋಧನೆಯಲ್ಲಾಗಲೀ ಅಮೇರಿಕನ್ನರನ್ನು ಇವರು ಸಹಜವಾಗಿ ಮೀರಿಸುತ್ತಾರೆ. ಇಂಥವರ ಬಗ್ಗೆ ಅವರ ದೇಶಕ್ಕೆ ಇರುವ ಅಭಿಮಾನಕ್ಕಿಂತ ಇವರಿಗೇ ತಮ್ಮ ದೇಶಾಭಿಮಾನ ತುಂಬಿತುಳುಕುತ್ತಿರುತ್ತದೆ. ಅಮೇರಿಕೆಯಲ್ಲಿ ಯಾವ ವಿಜ್ಞಾನಿ, ಅಥವಾ ಸಂಶೋಧಕರನ್ನೂ ಇವರು ಸರಿಗಟ್ಟಬಲ್ಲರು, ಅಮೇರಿಕೆಯಲ್ಲಿ ಎಷ್ಟೋ ಭಾರತೀಯರು ಉಚ್ಚ ಸ್ಥಾನದಲ್ಲಿದ್ದಾರೆ. ನಾನಿದ್ದ ವಿಶ್ವವಿದ್ಯಾಲಯದಲ್ಲಿ ಎಂಟು ಹತ್ತು ಭಾರತೀಯರಿದ್ದರು. (ವಿಶ್ವವಿದ್ಯಾಲಯದಲ್ಲೇ ಹೆಚ್ಚಿನ ಸಂಬಳ ಪಡೆಯುತ್ತಿದ್ದವರು ಮೈಸೂರಿನ ಡಾ|| ಸುದರ್ಶನರು, ಖ್ಯಾತಿವೆತ್ತ ವಿಜ್ಞಾನಿಗಳವರು) ಹೊಸ ಭಾರತ ಕಟ್ಟಬೇಕೆಂದು ಈ ಎರಡನೇ ಗುಂಪು ತುಂಬ ಕನಸು ಕಾಣುವುದು. ಅಂತೆಯೇ ಅಮೇರಿಕೆಯಲ್ಲಿ ವಾಸಿಸಲು ಹಲವು ಆಕರ್ಷಣೆಗಳಿದ್ದರೂ ಅವುಗಳನ್ನೆಲ್ಲ ತುಳಿದು ತನ್ನ ದೇಶ, ತಮ್ಮ ಜನರೆಂದು ಮಾತೃಭೂಮಿಗೆ ಮರಳುತ್ತಾರೆ. ಧನಸಂಗ್ರಹವಾಗಲಿ, ಅಧಿಕಾರದಾಹವಾಗಲಿ ಇವರಲ್ಲಿ ಹಲವರಿಗೆ ಇಲ್ಲ. ತಾನು ಕಲಿತದ್ದರ ಪೂರ್ಣ ಲಾಭ ತನ್ನ ದೇಶಕ್ಕೆ ಆಗಬೇಕೆಂದು ಹಂಬಲವಿರುತ್ತದೆ ಮತ್ತು ಇದಕ್ಕಾಗಿ ಯಾವ ಅಡತಡೆಯೂ ಇರಬಾರದು ಎಂಬ ನಿರೀಕ್ಷೆಯೂ ಇರುತ್ತದೆ. ತನ್ನ ಶ್ರಮ ಮತ್ತು ತ್ಯಾಗಗಳಿಗೆ ಯೋಗ್ಯ ಅವಕಾಶವನ್ನು ಮಾತ್ರ ಇವರು ಬಯಸುವರು.

ಕನಸು ಕಾಣುತ್ತಿದ್ದವರು ಕಣ್ಣನ್ನು ತೆರೆದಾಗ ಭಾರತದಲ್ಲಿರುತ್ತಾರೆ. ತಾವು ನೋಡಿದ ಮೂರು ನಾಲ್ಕು ವರ್ಷಗಳ ಹಿಂದಿನ ಭಾರತಕ್ಕೂ ಈಗಿನ ಭಾರತಕ್ಕೂ ಯಾವ ವ್ಯತ್ಯಾಸವಿಲ್ಲ. ಅದೇ ಬಡತನ, ಅದೇ ನಿರಕ್ಷರತೆ, ಅದೇ ಅಜ್ಞಾನ, ಅದೇ ಪಕ್ಷಪಾತ, ಅದೇ ಜಾತೀಯತೆ, ಸರಕಾರ, ಜನತೆ, ಸಮಾಜ ಎತ್ತ ಹೊರಟಿದೆಯೆಂದು ಯಾರಿಗೂ ತಿಳಿಯದು. ಸಾಹುಕಾರರು ಲಕ್ಷ್ಮೀದೇವಿಯನ್ನು ಸೆರೆಹಿಡಿದಿದ್ದಾರೆ. ಬಡವರು ಕಡು ಬಡವರಾಗುತ್ತಿದ್ದಾರೆ. ಈ ಜನಕೋಟಿಯಲ್ಲಿ ಅಮೇರಿಕೆಯಲ್ಲಿ ಅಮೇರಿಕೆಯಿಂದ ಕಲಿತು ಬಂದ ತರುಣನೂ ಒಬ್ಬನಾಗುತ್ತಾನೆ. ನೌಕರಿ ಹುಡುಕುತ್ತಿರುವ ಲಕ್ಷಗಟ್ಟಲೆ ತರುಣರಲ್ಲಿ ಈತನೂ ಒಬ್ಬ. ಇವನಿಗೆ ಯೋಗ್ಯವೆನಿಸುವ ನೌಕರಿ ಎಲ್ಲಿಂದ ಬರಬೇಕು? ಇಂಥ ವಿದೇಶಿ ಶಿಕ್ಷಣ ಪಡೆದವರಿಗೆಂದು ದೊಡ್ಡ ಮನಸ್ಸು ಮಾಡಿ ನಮ್ಮ ಸರಕಾರ (scientists pool) ವಿಜ್ಞಾನಿಗಳ ಕೇಂದ್ರವೆಂಬ ಧರ್ಮಸತ್ರವನ್ನು ತೆರೆದಿದ್ದಾರೆ. ಇದರಲ್ಲಿ ಸೇರ್ಪಡೆಯಾದವರಿಗೆ ಅವರವರ ಶೈಕ್ಷಣಿಕ ಅರ್ಹತೆಗನುಸಾರವಾಗಿ ನಾಲ್ಕನೂರೋ ಐದುನೂರೋ `ಅಶನಾರ್ಥ’ ದಯಪಾಲಿಸುತ್ತಾರೆ. ಸಾಲದ್ದಕ್ಕೆ ಆತ ವಿಶೇಷ ತರಬೇತಿ ಪಡೆದ ವಿಷಯಕ್ಕೆ ಯಾವ ರೀತಿಯಿಂದಲೂ ಸಂಬಂಧವಿಲ್ಲದ ಸಂಸ್ಥೆಯೊಂದರಲ್ಲಿ ಯಾವದೋ ಕೆಲಸ ಕೊಡಿಸುತ್ತಾರೆ. ಆತನ ಮೇಲಧಿಕಾರಿ ಕೆಳದರ್ಜೆಯಿಂದ ಮೇಲೆರುತ್ತ ಏರುತ್ತ ಈಗಷ್ಟೆ ಉಚ್ಚಸ್ಥಾನ ಪಡೆದಿರುತ್ತಾನೆ. ಅಧುನಿಕ ವಿಜ್ಞಾನದ ಪ್ರಗತಿಯ ಬಗ್ಗೆ ಆತನಿಗೆ ಏನೇನೂ ಗೊತ್ತಿಲ್ಲ (ಗೊತ್ತಿರಬೇಕಾದ ಕಾರಣವೂ ಇಲ್ಲ). ವಯಸ್ಸು ಸಿನಿಯಾರಿಟಿಗಳಷ್ಟೆ ಮಹತ್ವದವು. ಮುದಿಕತ್ತೆ ಎಂದೂ ಕುದುರೆಯಾಗದು ಎಂಬ ತಿಳುವಳಿಕೆ ನಮ್ಮ ಸರಕಾರಕ್ಕಿಲ್ಲ. ಇಂತಹ ಮೇಲಧಿಕಾರಿಗಳು ಈ ಇಪ್ಪತ್ತು ವರ್ಷಗಳಲ್ಲಿ ಒಂದು ಚಿಕ್ಕ ವಿಷಯ ತಿಳಿಯುವ ಪ್ರಯತ್ನ ಮಾಡಿರುವುದಿಲ್ಲ, ಆದರೆ ಅರವತ್ತು ರೂಪಾಯಿಯಿಂದ ನೌಕರಿ ಪ್ರಾರಂಭಿಸಿದ ಅವರಿಗೆ ಈ `ಚೋಟುದ್ದದ ಹುಡುಗ’ನಿಗೆ ಅಮೇರಿಕೆಯಲ್ಲಿ ಮೂರು ನಾಲ್ಕು ವರ್ಷ ಇದ್ದು ಮಜಾ ಮಾಡಿ, ಯಾವದೋ `ಸರ್ಟಿಫಿಕೇಟ’ (ಅದು `Doctorate’ ಇರಬಹುದು) ಪಡೆದು ಬಂದದ್ದಕ್ಕೆ ಸರಕಾರ ಐದು ನೂರೋ ಆರು ನೂರೋ ಮಾಸಾಶನ ಕೊಡುವುದು ಎಳ್ಳಷ್ಟೂ ಒಪ್ಪಿಗೆಯಿಲ್ಲ. ಆದರಿಂದ ತಮಗೆಲ್ಲ ಅನ್ಯಾಯವಾಗುತ್ತದೆ ಎಂಬ ಮತ್ಸರ ಬೇರೆ. ಹೀಗಾಗಿ ಈ ಅಗುಂತುಕನಿಗೆ ಯಾವುದೇ ಸೌಕರ್ಯವಾಗಲಿ ಸಹಕಾರವಾಗಲಿ ದೊರೆಯದು. ಬೆಳಿಗ್ಗೆ ವೇಳೆಗೆ ಸರಿಯಾಗಿ ಆಫೀಸಿಗೊ, ಸಂಸ್ಥೆಗೊ ಬಂದು ಸಹಿ ಹಾಕಿ ಸಂಜೆ ವೇಳೆ ಸರಿಯಾಗಿ ಮನೆಗೆ ಹೋಗುವುದರಲ್ಲೇ ತೃಪ್ತಿ ಪಡೆಯಬೇಕು ಈತ.

ಈ ನರಕವೇದನೆಯಿಂದ ಮುಕ್ತಿ ಪಡೆಯೋಣವೆಂದು ಇನ್ನೂ ಹಲವಾರು ಕಡೆ ಅರ್ಜಿ ಸಲ್ಲಿಸುತ್ತಾನೆ. ಆದರೆ ಪರಿಚಯ, ವಶೀಲಿಗಳಿಲ್ಲದೇ ಎಲ್ಲೂ ನೌಕರಿ ಸಿಗದೆಂದು ಶೀಘ್ರದಲ್ಲಿಯೇ ಕಂಡುಕೊಳ್ಳುತ್ತಾನೆ. ದೊಡ್ಡ ಅಧಿಕಾರಿಯೊಬ್ಬನನ್ನು ಮಾವನನ್ನಾಗಿ ಪಡೆದರೆ ಒಳ್ಳೆಯ ಸ್ಥಾನ ದೊರೆಯುತ್ತಿತ್ತೊ ಏನೋ! ಆದರೆ ಈಗಾಗಲೇ ಸಂಸಾರ ಕಟ್ಟಿಕೊಂಡಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹಿಂದಿರುಗಿ ಬರುವಾಗ ಉತ್ಸಾಹದಿಂದ ಪುಟಿಯುತ್ತಿದ್ದ ಕಾರಂಜಿ ಒಂದು ವರ್ಷದೊಳಗೆ ಮಾಯವಾಗಿಬಿಡುತ್ತದೆ. ಇದೆಲ್ಲ ಸಮಸ್ಯೆಗಳನ್ನು ನಿರ್ಲಕ್ಷಿಸಿದವ ಭಾರತದಲ್ಲೆ ಉಳಿದುಕೊಳ್ಳುತ್ತಾನೆ. ತನ್ನ ವಿದ್ಯೆ ಬುದ್ಧಿ ಮತ್ತು ಗಳಿಕೆಗೆ ಹೆಚ್ಚಿನ ಅವಕಾಶ ಬಯಸುವವ ಮರಳಿ ಯಾಂಕಿ–ದೇಶಕ್ಕೆ ಹೋಗಿಬಿಡುತ್ತಾನೆ. ಬುದ್ಧಿಮತ್ತೆಗೆ ವಿಶೇಷ ಸ್ಥಾನ ಕೊಡುವ ಅಮೇರಿಕನ್ನರು ಇಂತಹ ವಿಜ್ಞಾನಿಗಳು ಬರುತ್ತಾರೆಂದರೆ ಎಲ್ಲಿಲ್ಲದ ಹಿಗ್ಗಿನಿಂದ ಬರಮಾಡಿಕೊಳ್ಳುತ್ತಾರೆ. ಇವರಿಗೆ ಎಲ್ಲ ತರದ ಸೌಕರ್ಯಗಳನ್ನು ಕೊಡಮಾಡುತ್ತಾರೆ. ನೌಕರಿ ಪ್ರಾರಂಭಿಸುವ ಮೊದಲೇ ಒಂದು ತಿಂಗಳ ಸಂಬಳವನ್ನು ಮುಂಗಡವಾಗಿ ಒದಗಿಸುತ್ತಾರೆ. ಎಷ್ಟೊಂದು ಅಂತರ–ತಾನು ಬಯಸಿ ಬಯಸಿ ಮರಳಿ ಹೋದ ತನ್ನ ದೇಶಕ್ಕೆ ಮತ್ತು ನಿರುಪಾಯನಾಗಿ ಮರಳಿದ ಈ ಸಾಕುದೇಶಕ್ಕೆ!

ಹೀಗೆ ಅಮೇರಿಕೆಗೆ ತಿರುಗಿ ಹೋದ ಎಷ್ಟೋ ಜನ ಅಮೇರಿಕನ್ ಸಂಸ್ಕೃತಿಯನ್ನು ಮನಸಾ ಸ್ವೀಕರಿಸುವದಿಲ್ಲ. ಆದರೆ ಪ್ರತಿಯೊಂದು ವಿಧದಲ್ಲೂ ಭಿನ್ನವಾದ ವಾತಾವರಣದಲ್ಲಿ ಯಾವಾಗಲೂ ಭಾರತೀಯನಾಗಿರುವುದು ಸಾಧ್ಯವಿಲ್ಲ. ಈ ವಾತಾವರಣದಲ್ಲಿ ಬೆಳೆಯುತ್ತಿರುವ ಮಕ್ಕಳು ಸ್ವಾಭಾವಿಕವಾಗಿಯೇ ಅಮೇರಿಕನ್ ಸಂಸ್ಕೃತಿಯನ್ನು ಸ್ವೀಕರಿಸುತ್ತಾರೆ. ಅಮೇರಿಕನ್ ವಿದ್ಯಾರ್ಥಿಗಳ ಸ್ನೇಹ ಬೆಳೆಸುತ್ತಾರೆ. `ಡೇಟಿಂಗ್’ ಪಾರ್ಟಿಗಳಲ್ಲಿ ಭಾಗವಹಿಸುತ್ತಾರೆ. ಅವರ ತಂದೆ–ತಾಯಿಗಳೇನೋ ಇದನ್ನು ವಿರೋಧಿಸಬಹುದು, ಆಗ ಜೊತೆಯ ಸಂಗಡಿಗರಿಲ್ಲದೇ ಮಕ್ಕಳು ಚಡಪಡಿಸಬಹುದು. ಮಕ್ಕಳು ಬೆಳೆದಂತೆ ಸಮಸ್ಯೆಗಳೂ ಬೆಳೆಯುತ್ತವೆ. ಅತ್ತ ಅಮೇರಿಕನ್ರೂ ಆಗುವಂತಿಲ್ಲ. ಇತ್ತ ಭಾರತೀಯರಂತೆ ಬಾಳುವ ಅವಕಾಶವೂ ಇಲ್ಲ. ಬೆಳೆದ ಮಗಳಿದ್ದರಂತೂ ತೀರಿಹೋಯಿತು. ಅಮೇರಿಕನ್ ಕುಮಾರಿಯರಂತೆ ತನ್ನ ಪ್ರಿಯತಮನನ್ನು ಆರಿಸಿಕೊಳ್ಳುವ ಅಧಿಕಾರವಿಲ್ಲ ಆಕೆಗೆ. ಭಾರತೀಯ ಪದ್ಧತಿಯಂತೆ ಆಕೆಗೆ ವರವನ್ನು ದೊರಕಿಸಿಕೊಡುವ ಸಾಮರ್ಥವಿಲ್ಲ ಆಕೆಯ ತಂದೆಗೆ. ಇದು ಹೆಚ್ಚಿನ ಅಸಂತೋಷಕ್ಕೆ ಕಾರಣವಾಗುತ್ತದೆ. ಮದುವೆಯಾಗದ ಅಮೇರಿಕನ್ ಯುವತಿಯನ್ನು ಮೆಚ್ಚದ ಭಾರತೀಯನ ಗೋಳಂತೂ ಹೇಳತೀರದು. ತನ್ನ ಹತ್ತಾರು ಗೆಳೆಯರಿಗೆ ಪತ್ರ ಬರೆದು, ಕಾಡಿಸಿ, ಪೀಡಿಸಿ, ತನಗಾಗಿ ಕನ್ಯೆಯೊಬ್ಬಳನ್ನು ಹುಡುಕಲು ಹೇಳುತ್ತಾನೆ. ಕನ್ಯೆ ಒಪ್ಪಿದರೆ ಹೇಗೋ ತಂದೆ–ತಾಯಿಗಳಿಗೆ ಮನವೊಲಿಸಿ ಆಕೆಯನ್ನು ಅಮೇರಿಕೆಗೆ ಕಳಿಸುವಂತೆ ಪ್ರೋತ್ಸಾಹಿಸಿ ಅಲ್ಲಿಯೇ ಮದುವೆಯಾಗುತ್ತಾನೆ. ಇಲ್ಲವೇ ಕೈಯಲ್ಲಿ ನಾಲ್ಕು ಕಾಸು ಉಳಿದರೆ ಒಂದೆರಡು ತಿಂಗಳಿಗಾಗಿ ಭಾರತಕ್ಕೆ ಬಂದು ಮದುವೆಯಾಗಿ ಪತ್ನಿಯೊಡನೆ ಮತ್ತೆ ಮರಳಿ ಅಮೇರಿಕೆಗೆ ಹೋಗುತ್ತಾನೆ.

ಇವೆಲ್ಲ ಕಾಲ್ಪನಿಕ ವಿಚಾರಗಳಲ್ಲ. ಅಮೇರಿಕೆಯಲ್ಲಿರುವ ಅಲ್ಲಿಂದ ಬಂದು, ತಿರುಗಿ ಹೋಗಿರುವ ಅನೇಕ ಭಾರತೀಯರನ್ನು ಭೆಟ್ಟಿಯಾಗಿ, ಚರ್ಚಿಸಿ ಕಂಡುಕೊಂಡ ಸತ್ಯಾಂಶಗಳು.

ಕೆಲವು ಭಾರತೀಯರ ಅನುಭವ–ಕಥನಗಳನ್ನು ಕೇಳಿದರೆ ಕಳವಳವೆನಿಸದೇ ಇರದು. ಸಕ್ಸೇನಾ ದಂಪತಿಗಳಿಬ್ಬರೂ ಡಾಕ್ಟರರು. ಉಚ್ಚಪದವಿ ಪಡೆದ ವಿದ್ವಾಂಸರಲ್ಲದೇ ತಮ್ಮ ವೃತ್ತಿಯಲ್ಲಿ ಒಳ್ಳೇ ಪರಿಶ್ರಮವಿದ್ದವರು. ವಿದೇಶೀಯ ಶಿಕ್ಷಣ ಪಡೆದ ನಂತರ ತಮ್ಮ ದೇಶಕ್ಕೆ ಮರಳಿ ಇಲ್ಲಿಯೇ ವೃತ್ತಿಯನ್ನು ಮುಂದುವರಿಸುವ ವಿಚಾರ ಇಟ್ಟುಕೊಂಡಿದ್ದರು. ಎರಡು ವರ್ಷಗಳ ವರೆಗೆ ವಿಶ್ವಪ್ರಯತ್ನ ಮಾಡಿದರೂ “ಸಾಯಿಂಟಿಸ್ಟ್ ಪೂಲಿ’ನ `ಪೋಟಿಗಿ’ಯ ಹೊರತು ಬೇರೆ ಇನ್ನಾವ ಅವಕಾಶವೂ ದೊರೆಯಲಿಲ್ಲ ಅವರಿಗೆ. ಹತಾಶರಾಗಿ ಪತಿ ಮೊದಲು ಅಮೇರಿಕೆಗೆ ಮರಳಿದರು. ಒಂದು ವರ್ಷದ ನಂತರ ಪತ್ನಿಯನ್ನು ಕರೆಸಿಕೊಂಡರು. ತಮ್ಮ ದೇಶದಲ್ಲಿ ದೊರೆಯದ ಮನ್ನಣೆ, ಗೌರವ, ಧನ ಅವರಿಗೆ ವಿದೇಶದಲ್ಲಿ ದೊರೆಯುತ್ತದೆ. ಇಬ್ಬರೂ ಕೈತುಂಬ ಗಳಿಸುತ್ತಿದ್ದಾರಲ್ಲದೇ, ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಅವರಿಗೆ ಇಬ್ಬರು ಮಕ್ಕಳು. ಮಕ್ಕಳ ಸಲುವಾಗಿಯಾದರೂ ಭಾರತಕ್ಕೆ ಬರಲು ಅವರು ಹಂಬಲಿಸುತ್ತಾರೆ. ಆದರೆ ತಮ್ಮ ಹಿಂದಿನ ಕಹಿ ಅನುಭವಗಳನ್ನು ನೆನೆದು ಹಿಂದೆಗೆಯುತ್ತಾರೆ ಅಷ್ಟೆ.

ಡಾ|| ರಾನಡೆಯವರು ಮೊದಲಿನಿಂದಲೂ ಉತ್ತಮ ವಿದ್ಯಾರ್ಥಿ ಎಂದೂ ಪ್ರಥಮ ಸ್ಥಾನವನ್ನು ಬಿಟ್ಟುಕೊಟ್ಟವರಲ್ಲ. ಅಮೇರಿಕೆಯಲ್ಲೂ ಉಚ್ಚವ್ಯಾಸಂಗ ಕೈಕೊಂಡು ಪಿಎಚ್.ಡಿ. ಡಿಗ್ರಿ ಪಡೆದರು. ಭಾರತಕ್ಕೆ ಹಿಂದಿರುಗುವ ಹೆಚ್ಚಿನ ಆತುರ ಅವರಲ್ಲಿತ್ತು. ಆದರೆ ಒಳ್ಳೇ ನೌಕರಿ ಸಿಗದಿದ್ದರೆ ಎಂದೂ ಆಧೈರ್ಯವಿತ್ತು. ಅಂತೆಯೇ ತನ್ನದೆಂದು ಅಭಿಮಾನ ಪಡುತ್ತಿದ್ದ, ತಾನು ಕಲಿತ ವಿಶ್ವವಿದ್ಯಾಲಯದಲ್ಲಿ ಒಂದು ಲೆಕ್ಚರರ ಸ್ಥಾನಕ್ಕೆ ಅರ್ಜಿ ಹಾಕಿದರು. ನೌಕರಿ ಕೊಡುವುದಂತೂ ಇರಲಿ, ಬರೆದ ಪತ್ರಕ್ಕೆ ಉತ್ತರವನ್ನು ಕೊಡುವಷ್ಟು ಕೂಡ ಸೌಜನ್ಯವಿರಲಿಲ್ಲ. ಆ ವಿದ್ಯಾಲಯದ ಅಧಿಕಾರಿಗಳಿಗೆ! ಅಲ್ಲಿ ಇಲ್ಲಿ ಭಾರತದ ಅನೇಕ ವಿಶ್ವವಿದ್ಯಾಲಯಗಳಿಗೂ ಸಂಸ್ಥೆಗಳಿಗೂ ಅರ್ಜಿ ಸಲ್ಲಿಸಿ ಬೇಸತ್ತರು. ಕೊನೆಗೆ ಅಮೇರಿಕೆಯ ಒಳ್ಳೆಯ ವಿಶ್ವವಿದ್ಯಾಲಯದಲ್ಲೆ ಉತ್ತಮ ನೌಕರಿಯೊಂದು ದೊರಕಿತು. ಇಂದು ಅಲ್ಲಿಯ ಹಳಬ ಅಮೇರಿಕನ್ನರನ್ನೆಲ್ಲ ಹಿಂದೆ ಹಾಕುವಷ್ಟು ಹೆಸರು ಗಳಿಸಿದ್ದಾರೆ. ಮೂರು ವರ್ಷ ಅಮೇರಿಕೆಯಲ್ಲಿದ್ದು ಭಾರತಕ್ಕೆ ಬಂದು ಮದುವೆಯಾಗಿ ಮತ್ತೆ ಅಮೇರಿಕೆಗೆ ಮರಳಿದರು.

ಶ್ರೀ. ಕಾಳೆಯವರು ಕೃಷಿ ಕಾಲೇಜಿನಲ್ಲಿ ಅನೇಕ ವರ್ಷ ಕೆಲಸ ಮಾಡಿ, ಸರಕಾರಿ ರಜೆ ಪಡೆದು ಅಮೇರಿಕೆಗೆ ಹೋಗಿ ಹೆಚ್ಚಿನ ವ್ಯಾಸಂಗ ಮುಗಿಸಿಕೊಂಡು ಬಂದರು. ಭಾರತೀಯ ಅಧಿಕಾರಿಗಳು ಅವರಿಗೆ ಹೆಚ್ಚಿನ ನೌಕರಿ ಕೊಡಲೊಲ್ಲರು. ಬೇರೆ ಕಡೆಗೆ ಹೋಗಲೂ ಬಿಡಲೊಲ್ಲರು. ಕಾಳೆಯವರು ಅಷ್ಟಕ್ಕೆ ಬಿಡದೇ ವಿದ್ಯಾಮಂತ್ರಿಗಳ ವರೆಗೂ ದೂರನ್ನೊಯ್ದರು. ಅವರಾದರೂ `ಏನು? ಒಂದು ಅಮೇರಿಕನ್ ಪದವಿ ಪಡೆದು ಬಂದಾಕ್ಷಣ ಇಂದ್ರಲೋಕ ಜಯಿಸಿ ಬಂದಂತೆ ಮಾಡುತ್ತೀಯಲ್ಲ? ಡಿಗ್ರಿ ತಂದದ್ದು ಸಂತೋಷ. ಆದರೆ ಅದನ್ನೇ ದೊಡ್ಡದನ್ನಾಗಿ ಯಾಕೆ ಮಾಡಬೇಕು?” ಎಂದು ದಬಾಯಿಸಿದರಂತೆ! ಕೊನೆಗೂ ಹತಾಶರಾಗಿ ಆಫ್ರಿಕೆಗೆ ಹೋಗುವುದನ್ನು ನಿಶ್ಚಯಿಸಿದರು. ಇಂದು ನೈಜೀರಿಯದಲ್ಲಿ ಉಚ್ಚಪದವಿಯಲ್ಲಿದ್ದಾರೆ. ಇರಲು ಮನೆ, ಕಾರು, ವರ್ಷಕೊಮ್ಮೆ ಭಾರತಕ್ಕೆ ಹೋಗಿ ಬರುವ ರಜೆ ಮತ್ತು ಭತ್ತೆ ಮತ್ತು ಧಾರಾಳ ಸಂಬಳವನ್ನು ಪಡೆಯುತ್ತಿದ್ದಾರೆ.

ಡಾಕ್ಟರ್ ದಾಸ್ರವರು ಆರೇಳು ವರ್ಷಗಳಿಂದ ಅಮೇರಿಕೆಯಲ್ಲಿದ್ದರು. ಇಂಜನಿಯರಿಂಗ್ದಲ್ಲಿ ಡಾಕ್ಟರೇಟ ಗಳಿಸಿ, ಅಲ್ಲಿಯೆ ಕೆಲ ಕಾಲ ನೌಕರಿ ಮಾಡಿ ಸಾಕಷ್ಟು ಹಣ ಗಳಿಸಿದರು. ಆದರೆ ಮನಶ್ಯಾಂತಿ ಇರದ್ದರಿಂದ ಭಾರತದಲ್ಲಿಯೇ ನೆಲೆಸಲು ನಿಶ್ಚಯಿಸಿ, ಇಂಜನಿಯರಿಂಗ್ ಸಲಹೆಗಾರನೆಂದು ಕೆಲಸವನ್ನು ಪ್ರಾರಂಭಿಸಿದರು. ಆದರೆ ಇಲ್ಲಿಯ ಪಳಗಿದ ವ್ಯಾಪಾರಿವೃಂದ ಎರಡೇ ವರ್ಷದಲ್ಲಿ ಅವರು ದಿವಾಳಿಯಾಗುವಂತೆ ಮಾಡಿ ಅವರನ್ನು ತಿರುಗಿ ಅಮೇರಿಕೆಗೆ ಕಂಬಿಕೀಳುವಂತೆ ಮಾಡಿಬಿಟ್ಟಿತು.

ಇಂತಹ ನೂರಾರು ಉದಾಹರಣೆಗಳನ್ನು ಕೊಡಬಹುದು. ಭಾರತದಲ್ಲಿ ಸಿಗದ ಉಚ್ಚವ್ಯಾಸಂಗಕ್ಕೆ ವಿದೇಶಗಳಿಗೆ ಹೋಗಿ ಕಷ್ಟಪಟ್ಟು ಗಳಿಸಿದ ವೈಜ್ಞಾನಿಕ ಲಾಭವನ್ನು ತನಗಾಗಿ, ತನ್ನ ಜನರಿಗಾಗಿ ಮಾಡಿಕೊಳ್ಳುವ ಯೋಗ್ಯತೆ ನಮ್ಮ ದೇಶಕ್ಕೆ ಇಲ್ಲವಾಯಿತೇ ಎಂದು ಕಳವಳವಾಗುತ್ತದೆ. ಸರಕಾರ ಮತ್ತು ಸಂಸ್ಥೆಗಳು ಈ ದಿಕ್ಕಿನಲ್ಲಿ ಸ್ವಲ್ಪ ಹೆಚ್ಚು ಲಕ್ಷ್ಯ ಪೂರೈಸಿದರೆ ಭಾರತೀಯ ಬುದ್ಧಿಮತ್ತೆ ಭಾರತದಲ್ಲೇ ಉಳಿದೀತು. ಈ ಬಗ್ಗೆ ನನಗನಿಸಿದ ವಿಚಾರಗಳು ಇಷ್ಟು:

ವಿದೇಶದಿಂದ ಮರಳಿದವರನ್ನು ಬೇರೆಯೇ `ಪಂಗಡ’ವೆಂದು ನಡೆಸಿಕೊಳ್ಳಕೂಡದು. ನವಜನಾಂಗಕ್ಕೆ ಕೆಲ ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಡಬೇಕು. ಸಂಶೋಧನೆಯ ಬೆಲೆಯನ್ನು ಪ್ರಸಿದ್ಧವಾದ ಪೇಪರುಗಳ ಮೇಲಿನಿಂದ ಕಟ್ಟಲಾಗುತ್ತಿದೆ. ಬೇರೆ ಬೇರೆ ಹುದ್ದೆಗಳಿಗೆ ವಿಜ್ಞಾನಿಗಳನ್ನಾಗಲಿ, ಶಾಸ್ತ್ರಜ್ಞರನ್ನಾಗಲಿ ನೇಮಿಸುವಾಗ ಅವರೆಷ್ಟು ಪೇಪರುಗಳನ್ನು ಪ್ರಸಿದ್ಧಿಸಿದ್ದಾರೆಂದು ನೋಡಲಾಗುತ್ತದೆಯೇ ಹೊರತು, ವ್ಯಾವಹಾರಿಕ–ಪ್ರಯೋಗಗಳನ್ನು ಎಷ್ಟು ಮಾಡಬಲ್ಲರು ಎಂಬುದರ ಕಡೆಗೆ ಲಕ್ಷ್ಯವೀಯಲಾಗುವುದಿಲ್ಲ. ಎಲ್ಲೆಡೆಯಲ್ಲೂ ಪ್ರಸಿದ್ಧಿ ಪೇಪರುಗಳಿಗೆ ಬೆಲೆಯಿಲ್ಲದಿದ್ದರೂ ಮಹತ್ವವಿದ್ದುದ್ದರಿಂದ ಒಳ್ಳೆಯ ನೌಕರಿ ಬಯಸುವವರು ಹಾತೊರೆದು ಹಾತೊರೆದು ಎಂಥವನ್ನೊ ಹತ್ತಾರು ಸಂಶೋಧನೆಯ ಪೇಪರುಗಳನ್ನು ಪ್ರಸಿದ್ಧಿಸಲು ಹವಣಿಸಿ ಶೇಂಗ, ಕಡಲೆ, ಅವಲಕ್ಕಿ ಮಾರುವವರಿಗೆ ಸಹಾಯಮಾಡುತ್ತಾರೆ! ಇಂಥ ಔಪಚಾರಿಕ ಕೆಲಸದ ಬದಲಾಗಿ ದೈನಂದಿನ ಕೆಲಸಕ್ಕೆ ಮೇಲ್ವಿಚಾರಣೆ ಮೀರಲಾರದೆ ನಿಷ್ಪ್ರಯೋಜಕ–ವೃತ್ತಿ ನಿಲ್ಲಬಹುದು. ಇಂದು ಮೇಲಧಿಕಾರಿ ಉಳಿದವರೊಂದಿಗೆ ಸಂಧಾನ ಮಾಡಿ ಸರಕಾರದೊಂದಿಗೆ ಯುದ್ಧಹೂಡಿದ್ದಾನೆ. ತನ್ನ ಕೈಕೆಳಗಿನ ಅಧಿಕಾರಿಗಳು ಉಪಯೋಗವಿಲ್ಲದ ಲೇಖನಗಳನ್ನು ಪ್ರಸಿದ್ಧಿಗೆ ಕಳಿಸುವಾಗ ತಡೆಹಿಡಿಯುವ ಬದಲು ಈ ಮೇಲಾಧಿಕಾರಿ ತನ್ನ ಹೆಸರನ್ನೂ ಆ ಲೇಖನದಲ್ಲಿ ಸೇರಿರುವ ಹವಣಿಕೆಯಲ್ಲಿರುತ್ತಾನೆ.

ಇಂದು ಸರಕಾರಿ ನೌಕರಿಯಲ್ಲಿ ಸೇರುವವನಿಗೆ ತನಗೆ ಯಾರೂ ಏನೂ ಮಾಡುವಂತಿಲ್ಲ ಎಂಬ ಆತ್ಮವಿಶ್ವಾಸ ಬಲವಾಗಿರುತ್ತದೆ. ನಮ್ಮ ಸರಕಾರದ ಎಲ್ಲ ವಿಭಾಗಳಲ್ಲಿ ಕತ್ತೆ ಮುದಿಯಾದರೆ ಕುದುರೆಯೆನಿಸಿಕೊಳ್ಳಲು ಅವಕಾಶವಿದೆ! ಕೆಲವು ಖಾತೆಗಳಲ್ಲಂತೂ ಉಚ್ಚ–ಅಧಿಕಾರಿ–ಪದಗಳಿಗೆ ನೇರ (direct) ಸೇರ್ಪಡೆ ಇಲ್ಲವೇ ಇಲ್ಲ. ಇಂತಹ ಖಾತೆಗಳಲ್ಲಿ ನೌಕರಿಗೆ ಸೇರುವವರಿಗೆ ಕೆಲಸ ಮಾಡಲಿ ಮಾಡದಿರಲಿ ಸೀನಿಯಾರಿಟಿಯ ಪ್ರಕಾರದಲ್ಲಿ ಬಡ್ತಿ (promotion) ದೊರೆತೇ ದೊರೆಯುವುದೆಂಬ ವಿಶ್ವಾಸವಿರುತ್ತದೆ. ಹೀಗಾಗಿ ಕೆಲಸದತ್ತ ಲಕ್ಷ್ಯ ತಾನಾಗಿ ಕಡಿಮೆಯಾಗುತ್ತದೆ. ಇಂಥದಲ್ಲಿ ವಯಸ್ಸಿನ ಬದಲಾಗಿ ಬುದ್ಧಿಮತ್ತೆಗೆ ಬೆಲೆಕೊಟ್ಟರೆ ದೇಶಕ್ಕೂ ಜನಾಂಗಕ್ಕೂ ಕೂಡಿಯೇ ಲಾಭವಾಗುತ್ತದೆ.

ಇಂದು ಯಾವದೇ ಕಾಲೇಜು, ವಿಶ್ವವಿದ್ಯಾಲಯ, ಸಂಶೋಧನ–ಸಂಸ್ಥೆಗಳಿಗೆ ಹೋಗಿ ನೋಡಿದರೆ ಹೆಚ್ಚಿನ ಸಂಶೋಧಕರು ಹತ್ತು ರೂಪಾಯಿ ಡಿ.ಎ. ಹೇಗೆ ಗಿಟ್ಟಿಸಬೇಕೆಂದು ವಿಚಾರದಲ್ಲಿರುತ್ತಾರೆಯೇ ಹೊರತು, ತನ್ನ ಕ್ಷೇತ್ರದಲ್ಲಿ ತನ್ನ ಕೊಡುಗೆ ಏನು? ಅದು ಹೇಗಿರಬೇಕು? ಎನ್ನುವುದರ ಕಡೆಗೆ ಲಕ್ಷ್ಯ ಕೊಡುವುದು ತೀರ ಕಡಿಮೆ.

ನಮ್ಮಲ್ಲಿ ತನಗೆ ಲಾಭವಿಲ್ಲವೆಂದು ಸರಕಾರ ಕಂಡುಕೊಂಡ ಕೆಲವು ಸಂಶೋಧನೆಯ ಕಾರ್ಯಗಳನ್ನು ಖಾಸಗಿ ಉದ್ದಿಮೆಗಳಿಗೂ ಇತರ ಸಂಸ್ಥೆಗಳಿಗೂ ಒಪ್ಪಿಸಲಿ, ನಿಷ್ಕಾರಣವಾಗಿ ಖರ್ಚಾಗುತ್ತಿರುವ ಹೊನ್ನಿನ ಹೊಳೆಯ ಒಂದು ಭಾಗ ಇಂಥ ಖಾಸಗಿ ಸಂಸ್ಥೆಗಳಿಗೆ ಕೊಟ್ಟರೆ, ಅತ್ಯಲ್ಪ ಅವಧಿಯಲ್ಲಿ ಸಂಶೋಧನೆಯ ಲಾಭ ದೊರೆಯಬಲ್ಲದು. ಇದಲ್ಲದೇ ಪ್ರತಿಯೊಬ್ಬ ಉದ್ದಿಮೆದಾರ ತನ್ನ ಉತ್ಪನ್ನದ, ಲಾಭದ ಶೇಕಡಾ ಹತ್ತರಷ್ಟನ್ನು ಸಂಶೋಧನೆಗೆ ಮೀಸಲಿಡಬೇಕೆಂದು ಕಡ್ಡಾಯ ಮಾಡಬೇಕು. ಅಂದಲ್ಲಿ ಯೋಗ್ಯತಾವಂತರಿಗೆ, ಸಂಶೋಧಕರಿಗೆ ಅವಕಾಶ ದೊರೆತು ದೇಶದ ಉನ್ನತಿಗೆ ಸಹಾಯವಾದೀತು.