ಮ್ಯಾಡಂ ಭಿಕಾಜಿ ಕಾಮಾ (೧೮೬೧-೧೯೩೬)

“ಇದು ಇಂಡಿಯದ ಸ್ವಾತಂತ್ರ್ಯ ಪತಾಕೆ! ಇದಕ್ಕಾಗಿ ಪ್ರಾಣ ತೆತ್ತ ಎಳೆಯ ಭಾರತೀಯರ ರಕ್ತದಿಂದ ಪವಿತ್ರವಾಗಿದೆ! ಈ ಬಾವುಟದ ಹೆಸರಿನಲ್ಲಿ ಇಲ್ಲಿರುವ ಸ್ವಾತಂತ್ರ್ಯದೇವಿಯ ಆರಾಧಕರಿಗೆಲ್ಲಾ ವಿನಂತಿಸಿಕೊಳ್ಳುತ್ತೇನೆ-  ದಯವಿಟ್ಟು ಎದ್ದೇಳಿ! ಭಾರತ ಸ್ವಾತಂತ್ರ್ಯ ಬಾವುಟಕ್ಕೆ ಸೆಲ್ಯೂಟ್ ಮಾಡಿ! ” ವೇದಿಕೆಯ ಮೇಲಿದ್ದ ಭಾರತೀಯ ಉಡುಗೆಯಲ್ಲಿದ್ದ  ಮಹಿಳೆಯೋರ್ವಳು, ನೂರಾರು ದೇಶಗಳ ಪ್ರತಿನಿಧಿಗಳಿಗೆ ಗಂಭೀರವಾದ  ಮೆಲುದನಿಯಲ್ಲಿ ವಿನಂತಿಸಿಕೊಂಡಳು. ಮೂಕವಿಸ್ಮಿತರಾದ ಜನ ಎದ್ದು ನಿಂತು ವಂದಿಸಿದರು. ವಿದೇಶಿ ನೆಲದಲ್ಲಿ ಮೊದಲ ಬಾರಿ ವಂದಿಸಲ್ಪಟ್ಟ ಭಾರತೀಯ ಧ್ವಜವಾಗಿತ್ತು, ಅದು. ಮಹಿಳೆಯಾಗಿದ್ದರು , -ಮ್ಯಾಡಂ ಭಿಕಾಜಿ ಕಾಮಾ. ಸಂದರ್ಭ- ೧೯೦೭ ನೇ ವರ್ಷದ ಅಗಸ್ಟ್ ತಿಂಗಳಿನಲ್ಲಿ ಜರ್ಮನಿಯ ಸ್ಟಟ್ ಗಾರ್ಟ್ ದಲ್ಲಿ ನಡೆದ ಪ್ರಥಮ ಅಂತರ್ರಾಷ್ಟ್ರೀಯ  ಸಮಾಜವಾದಿ ಸಮ್ಮೇಳನ.

ಮ್ಯಾಡಂ ಭಿಕಾಜಿ ಕಾಮಾ

ಭಾರತದ ಸ್ವಾತಂತ್ರ್ಯ ಪ್ರಾಪ್ತಿಯ ನಾಲವತ್ತು ವರ್ಷಗಳ ಪೂರ್ವದ ಘಟನೆ . ಅದಾಗಲೆ ಭಾರತದ ಹಲವಾರು ರಾಜ್ಯಗಳಲ್ಲಿ ಹೊತ್ತಿ ಹೊಗೆಯಾಡುತ್ತಿದ್ದ ಸ್ವಾತಂತ್ರ್ಯ ಆಂದೋಲನದ ವಿಚಾರದ ಸ್ಪಷ್ಟವಾದ ಕಲ್ಪನೆ ಯೂರೋಪಿನ ರಾಷ್ಟ್ರಗಳಲ್ಲಿ ಇರಲಿಲ್ಲ . ರಾಜದ್ರೋಹದ ಆರೋಪದ ಮೇಲೆ ಬ್ರಿಟಿಶ್ ಸರಕಾರ ಅದೆಷ್ಟೋ ಕ್ರಾಂತಿಕಾರಿಗಳನ್ನು ಬಂಧಿಸಿ ಕಾಳಾಪಾಣಿ ರುಚಿ ತೋರಿಸಿದರೂ ಅದು ಆ ಸಾಮ್ರಾಜ್ಯದ ಆಂತರಿಕ ಸಮಸ್ಯೆಯೆಂದೇ ಹಲವಾರು ಧೀಮಂತರು ನಂಬಿದ್ದರು. ಭಾರತೀಯ ಪ್ರಜೆಗಳಿಗೆ ಸ್ವತಂತ್ರವಾಗಿ ಸಾಮ್ರಾಜ್ಯದ ವಿರುದ್ಧ ಬರೆಯುವ, ಭಾಷಣ ಮಾಡುವ ಸ್ವಾತಂತ್ರ್ಯಕ್ಕೆ ಬ್ರಿಟಿಶ್ ಸರಕಾರ, ಸರ್ವವಿಧದಲ್ಲಿ ಕಡಿವಾಣ ಹಾಕಲು ನಿರತವಾಗಿತ್ತು. ಅಂಥಲ್ಲಿ, ಅಂತರ್ರಾಷ್ಟ್ರೀಯ ಸಮ್ಮೇಳನದಲ್ಲಿ ಅದು ಹೇಗೋ ಪ್ರವೇಶ ದೊರಕಿಸಿ ಮ್ಯಾಡಂ ಕಾಮಾ, ಬ್ರಿಟಿಶ್ ವಸಾಹತುವಾದದ ಕರಾಳ ರೂಪದ ಪರಿಚಯವನ್ನು ಸಭೆಗೆ ಮಾಡಿಕೊಟ್ಟರು. ಜಗತ್ತಿನ ಮಾನವ ಜನಾಂಗದ ( ೧/೫) ಐದರಲ್ಲಿ ಒಂದು ಭಾಗದಷ್ಟಿದ್ದ  ಜನತೆ ಸಾಮ್ರಾಜ್ಯವಾದದ ದಾಸ್ಯದಲ್ಲಿ ತೊಳಲಾಡುತ್ತಿರುವಾಗ , ವಿಶ್ವಸಮಾಜವಾದಕ್ಕೇನು ಅರ್ಥ? ಎಂದು ವಾದಿಸಿದಳು.

ನೆರೆದ ಜನ ಬೆರಗಾದರು. ಈಕೆ ಮಹಾರಾಣಿಯೋ, ರಾಜಕುಮಾರಿಯೋ ಇರಬೇಕು ಎಂದುಕೊಂಡರು. ಇಂಡಿಯ ಆಗ  ಮಹಾರಾಜರ ಬೀಡಾಗಿತ್ತು ತಾನೇ? ಆದರೆ ಯಾವ ಮಹಾರಾಣಿಗೂ ಮೀರಿದ ಗತ್ತು, ಗಾಂಭೀರ್ಯ, ಕೆಚ್ಚೆದೆಗಳು ಕಾಮಾಳಲ್ಲಿದ್ದವು.

೧೮೬೧ ನೇ ಇಸ್ವಿಯಲ್ಲಿ ಸೆಪ್ಟಂಬರ್ ೨೪ನೇ ತಾರೀಕಿಗೆ ಶ್ರೀಮಂತ ಫಾರಸಿ  ಕುಟುಂಬದಲ್ಲಿ ಕಾಮಾ ಜನ್ಮವೆತ್ತಿದಳು. ತಂದೆ ಸೋರಾಬ್ಜಿ ಫ್ರಾಮಜಿ ಪಟೆಲ್ ದೊಡ್ಡ ವ್ಯಾಪಾರಿಯಾಗಿದ್ದರು. ಅದಾಗಲೇ ಇಂಗ್ಲಿಶ್ ಶಿಕ್ಷಣ ಪಡೆದು ಉದ್ಯೋಗ , ವ್ಯಾಪಾರ, ಸಮಾಜಸೇವೆಗಳಲ್ಲಿ ಮುಂದುವರಿದ ಫಾರಸಿಗಳಲ್ಲಿ ಹೆಚ್ಚಿನವರು ಬ್ರಿಟಿಶರ ಕೃಪಾ ಪೋಷಿತರಾಗಿದ್ದರು. ಆದರೆ ಭಿಕಾಜಿ  ಇಂಗ್ಲಿಷ್ ಉಚ್ಚ ಶಿಕ್ಷಣ ಹೊಂದಿ , ಚಿಕ್ಕಂದಿನಿಂದಲೇ ಬ್ರಿಟಿಶ ವಿರೋಧಿ ನಿಲುವು ತಾಳಿದ್ದಳು. ರಾಜನೀತಿ, ಹಾಗೂ ಅನೇಕ ಭಾಷೆಗಳನ್ನು ಕಲಿಯುವದರಲ್ಲಿ ವಿಶೇಷ ಒಲವು ಹೊಂದಿದ್ದಳು. ಶ್ರೀಮಂತ ನ್ಯಾಯವಾದಿಯಾಗಿದ್ದ ರುಸ್ತುಂ ಕೆ.ಆರ್ ಕಾಮಾ ಅವರೊಂದಿಗೆ ನಡೆದ ವಿವಾಹ ಬಹು ಕಾಲ ಬಾಳಲಿಲ್ಲ. ಕಾಮಾ ಕಟ್ಟಾ ಬ್ರಿಟಿಶ್ ಬೆಂಬಲಿಗರಾಗಿದ್ದರು. ಭಿಕಾಜಿ ಸಾಮ್ರಾಜ್ಯವಾದಿ ಬ್ರಿಟಿಶರ ಕಡು ವಿರೋಧಿ!

ಭಿಕಾಜಿ ಕಾಮಾ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದಳು. ಮುಂಬೈಯಲ್ಲಿ ಕಾಣಿಸಿಕೊಂದ ಪ್ಲೇಗ್ ಪಿಡುಗಿನ ಕಾಲಕ್ಕೆ  ಸ್ವಯಂ ಸೇವಿಕೆಯಾಗಿ ರೋಗಿಗಳ ಶುಶ್ರೂಷಾ ಪಥಕವನ್ನು ನಡೆಸಿದಳು. ಕೊನೆಗೆ ಸ್ವತಃ ರೋಗ ತಗಲಿ ಬದುಕುಳಿದರೂ ತುಂಬ ನಿಶ್ಯಕ್ತಳಾದ ಕಾರಣ ವೈದ್ಯರ ಸಲಹೆಯಂತೆ ಯೂರೋಪಿಗೆ ತೆರಳಿದಳು. ಮುಂದೆ ಅದೇ ಅವಳ ಕರ್ಮಭೂಮಿಯಾಯಿತು.

 ಲಂಡನ್ನಿನಲ್ಲಿ ಕೆಲಕಾಲ ಸ್ವಾತಂತ್ರ್ಯ ಚಳುವಳಿಯ ಪಿತಾಮಹರೆಂದು ಗುರುತಿಸಲ್ಪಡುವ ದಾದಾಭಾಯಿ ನವರೋಜಿಯವರ ಕಾರ್ಯದರ್ಶಿಯಾಗಿದ್ದಳು. ಯೂರೋಪಿಗೆ ಬರುತ್ತಿದ್ದ ಅನೇಕ ಭಾರತೀಯ ಕ್ರಾಂತಿಕಾರಿಗಳಿಗೆ ಅವಳ ಮನೆ ಆಶ್ರಯ ಸ್ಥಾನವಾಗಿತ್ತು. ಸ್ಟಟ್ ಗಾರ್ಟ್ ಸಾಹಸದ ಬಳಿಕ  ಕಾಮಾ, ಅಮೇರಿಕನ್ ಯಾತ್ರೆ ಕೈಕೊಂಡಳು. ಅಮೇರಿಕನ್ನರಲ್ಲಿ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಕುರಿತು ಜಾಗ್ರತೆ  ಮಾಡಿಸಲು ಹೆಣಗಿದಳು. ’ಪಾರ್ಲಿಮೆಂಟ್ ವ್ಯವಸ್ಥೆಯ ತಾಯಿ’ ( mother of parliamentary democracy ) ಎಂದು ಮೆರೆಯುವ  ಬ್ರಿಟನ್ ಸ್ವತಃ ಕೈಕೊಳ್ಳುತ್ತಿದ್ದ  ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕುವ ಕ್ರಮಗಳನ್ನು  ಅಮೇರಿಕನ್ ರಿಗೆ ಪರಿಚಯಿಸುವ ಅನೇಕ ಭಾಷಣಗಳನ್ನು ಮಾಡಿದಳು.

ಲಂಡನ್ನಿಗೆ ಹಿಂತಿರುಗಿದ  ಬಳಿಕ ದೇಶಭಕ್ತಿಗೆ ಮೀಸಲಾದ ಪುಸ್ತಕ ಪ್ರಕಟಣೆ ಕೈಕೊಂಡಳು. ಅನೇಕ ಕ್ರಾಂತಿಕಾರರಿಗೆ ಗುಪ್ತ ಧನಸಹಾಯ ಒದಗಿಸುತ್ತಿದ್ದಳು  ಬ್ರಿಟಿಶರು ಬಂಧಿಸಿ ಭಾರತಕ್ಕೆ ಅವಳನ್ನು ಸಾಗಿಸಲಿದ್ದಾರೆಂಬ ಸುಳಿವು ಸಿಕ್ಕೊಡನೆ ಪ್ಯಾರಿಸಿಗೆ ಹೋಗಿ ನೆಲೆಸಿದಳು. ಪ್ಯಾರಿಸ್ ಆ ದಿನಗಳಲ್ಲಿ ವಿಶ್ವದ ಕ್ರಾಂತಿಕಾರರಿಗೆಲ್ಲ ತವರುಮನೆಯಾಗಿತ್ತು. ಲೆನಿನ್ ಕೂಡ ಕಾಮಾ ಮನೆಯಲ್ಲಿ ಭಾರತೀಯ ಕ್ರಾಂತಿಕಾರರನ್ನು ಭೇಟಿ ಮಾಡಿದ್ದರು. ಸರೋಜಿನಿ ನಾಯ್ಡು ಅವರ ಸೋದರ  ಬೀರೇಂದ್ರ ಚಟ್ಟೋಪಾಧ್ಯಾಯರು ಗಡಿ ಪಾರು ಮಾಡಲ್ಪಟ್ಟು ಪ್ಯಾರಿಸಿನಲ್ಲಿದ್ದರು. ವೀರ ಸಾವರಕರರು ಬರೆದ ೧೮೫೭ ರ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಬ್ರಿಟಿಶ್ ಪ್ರಕಾಶಕರಿಂದ ಮುದ್ರಿಸುವದು ಅಸಾಧ್ಯವಾಗಿತ್ತು. ಮ್ಯಾಡಂ ಕಾಮಾ ಯುಕ್ತಿಯಿಂದ ಅದು ಹಾಲಂಡಿನಲ್ಲಿ ಮುದ್ರಣವಾಗುವಂತೆ ನೋಡಿಕೊಂಡಳು. ಬಳಿಕ ಭಾರತಕ್ಕೆ ಅದರ, ’ ಕಳ್ಳ ಸಾಗಾಟ’ ಮಾಡುವದರಲ್ಲೂ ಪ್ರಮುಖ ಪಾತ್ರ ವಹಿಸಿದಳು.

ಬ್ರಿಟಿಶರಿಂದ ಬಹಿಸ್ಕರಿಸಲ್ಪಟ್ಟ, ‘’ವಂದೆ ಮಾತರಂ’’ ಪತ್ರಿಕೆಯನ್ನು ಕೆಲ ಕಾಲ ಸಂಪಾದಿಸಿದಳು. ೧೯೧೦ ರಲ್ಲಿ ಇಜಿಪ್ತಿನ ಕಾಯರೋದಲ್ಲಿ  ನಡೆದ ಅಂತರ್ರಾಷ್ಟ್ರೀಯ  ಸಮ್ಮೇಳನದಲ್ಲಿ ಭಾಗವಹಿಸಿದಾಗ ಒಬ್ಬ ಮಹಿಳೆಯೂ ಕಣ್ಣಿಗೆ ಬೀಳಲಿಲ್ಲವಂತೆ! ಆಗ ಆ ಸಭೆಯಲ್ಲಿ ಆಕೆ ಎತ್ತಿದ ಪ್ರಶ್ನೆ, ” ಇಜಿಪ್ತ ದೇಶದ ಇನ್ನರ್ಧ ಭಾಗ ಎಲ್ಲಿದೆ? ಇಲ್ಲಿ ಕೇವಲ ಪುರುಷರನ್ನು ಮಾತ್ರ ಕಾಣುತ್ತಿರುವೆನಲ್ಲ?”

೧೯೧೪ರಲ್ಲಿ ಪ್ರಥಮ ಮಹಾಯುದ್ಧ ನಡೆದಾಗ ಮ್ಯಾಡಂ ಕಾಮಾ, ಬ್ರಿಟಿಶ್ ಸಮರ ನೀತಿಯನ್ನು ತೀವ್ರ ವಿರೋಧಿಸಿದಳು. ಯುದ್ಧದ ನಿಮಿತ್ತ ಅವ್ಯಾಹತವಾಗಿ ನಡೆಯುತ್ತಿದ್ದ ಭಾರತದ ಆರ್ಥಿಕ ಶೋಷಣೆಯನ್ನು ಪ್ರಬಲವಾಗಿ ಟೀಕಿಸಿದಳು. ಎರಡು ಸಾಮ್ರಾಜ್ಯಗಳ ಹಣಾಹಣಿಯಲ್ಲಿ ಬಡ ಭಾರತದ ಲೂಟಿ ಅವಳನ್ನು ತುಂಬ ಕಂಗೆಡಿಸಿತ್ತು.

ಅವಳಿಗೆ ಭಾರತಕ್ಕೆ ಬರಗೊಡದಂತೆ ಮಾಡುವದರಲ್ಲಿ ಬ್ರಿಟಿಶರು ಯಶಸ್ವಿಯಾಗಿದ್ದರು. ಅವಳ ಕೆಚ್ಚೆದೆ ಹಾಗೂ ಕ್ರಾಂತಿಕಾರಿ ಧೋರಣೆಗಳು ಒಡ್ಡಬಹುದಾದ ಅಪಾಯದ ಅರಿವು ಅವರಿಗಿತ್ತು. ಆದರೆ ಕಾಮಾ ಈಗ ಹಣ್ಣಾಗಿದ್ದಳು. ವಿದೇಶದಲ್ಲಿ ನಡೆದ ಮೂವತ್ತೈದು ವರ್ಷಗಳ ಹೋರಾಟ ಸಾಕಾಗಿತ್ತು. ಕೊನೆಯ ದಿನಗಳಲ್ಲಿ ತಾಯ್ನಾಡಿಗೆ ಬರಲು ನಿರ್ಧರಿಸಿದಳು.

ಭಾರತಕ್ಕೆ ಬಂದರೂ ನೇರ ಆಸ್ಪತ್ರೆಗೇ ಸೇರಿಕೊಳ್ಳುವಷ್ಟು ಆರೋಗ್ಯ ಕೆಟ್ಟಿತ್ತು. ೧೯೩೬ರ ಅಗಸ್ಟ ೧೩ಕ್ಕೆ ಕೊನೆಯುಸಿರೆಳೆದಳು. ಯೂರೋಪ್ ಮತ್ತು ಅಮೇರಿಕೆಗಳಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದ ಕುರಿತ ಜಾಗೃತಿ ಬಿತ್ತಿದ ಮೊದಲಿಗರಲ್ಲಿ ಕಾಮಾ ಒಬ್ಬಳು.

—————————————————————————————————————————

ಕಾಮಾ ಸ್ಟಟ್ ಗಾರ್ಟ್ ದಲ್ಲಿ ಹಾರಿಸಿದ ಭಾರತೀಯ ರಾಷ್ಟ್ರಧ್ವಜ ಈಗಿನಂತಿರಲಿಲ್ಲ. ಅದರ ತ್ರಿವರ್ಣಗಳಲ್ಲಿ  ಹಸಿರು, ಕೇಸರಿ ಕೆಂಪು ಬಣ್ಣಗಳಿದ್ದವು . ಶಕ್ತಿ, ವಿಜಯ ಉತ್ಸಾಹಗಳನ್ನು ಅವು ಪ್ರತಿನಿಧಿಸುತ್ತಿದ್ದವು. ಸೂರ್ಯ ಹಾಗೂ ಚಂದ್ರರ ( ಹಿಂದು+ ಮುಸ್ಲಿಂ) ಚಿತ್ರಗಳು ತುದಿಯಲ್ಲಿದ್ದರೆ, ’ವಂದೇ ಮಾತರಂ’ ಅಕ್ಷರಗಳನ್ನು ನಟ್ಟನಡುವೆ  ಮೂಡಿಸಲಾಗಿತ್ತು. ವೀರ ಸಾವರಕರರು ಹಾಕಿಕೊಟ್ಟ ಬಾವುಟ ಚಿತ್ರವನ್ನು , ಧ್ವಜ ರೂಪದಲ್ಲಿ ಸ್ವತಃ ಭಿಕಾಜಿ ಕಾಮಾ, ಸಹಾಯಕರೊಂದಿಗೆ ಹೊಲಿದು ಸಿದ್ಧಪಡಿಸಿದರೆಂದು ಪ್ರತೀತಿ!

ಜ್ಯೋತ್ಸ್ನಾ ಕಾಮತ್