ಮಾಸ್ತಿಯವರನ್ನು ( ಕ್ಯಾಮರಾದಲ್ಲಿ ) ಹಿಡಿಯ ಹೋದಾಗ !

(ನಾನು  ಕೊಲಕೊತ್ತಾ ಆಕಾಶವಾಣಿಯಲ್ಲಿದ್ದಾಗ ಕೃಷ್ಣಾನಂದ ಕಾಮತರು ಬೆಂಗಳೂರಲ್ಲಿದ್ದರು.ಆಗ ಕೆಲವು ಸಾಹಿತಿಗಳನ್ನು ಅವರು ಕ್ಲಿಕ್ಕಿಸಿದ ೧೯೭೮-೮೦ ರ ಅವಧಿ ತುಂಬ ಮಹತ್ವದ್ದು. ಕೆ.ಎಸ್.ನರಸಿಂಹಸ್ವಾಮಿ , ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ.ಜಿ ಎಲ್ ಸ್ವಾಮಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ , ಎ.ಎನ್ ಮೂರ್ತಿರಾವ್, ಎಮ್.ವಿ ಸೀತಾರಾಮಯ್ಯ, ಅನುಪಮಾ ನಿರಂಜನ್ ಮೊದಲಾದವರ ಅಪೂರ್ವ ಛಾಯಾಚಿತ್ರಗಳು ನಮ್ಮೊಂದಿಗೆ ಉಳಿದವು. ಅಜ್ಞಾತರಾಗಿಯೇ ಉಳಿದು ಅವರವರ ಮನೆಗೆ ಹೋಗಿ ಅನೌಪಚಾರಿಕ  ರೀತಿಯಲ್ಲಿ ಕ್ಲಿಕ್ಕಿಸುವದು ಕಾಮತರ ಹಾಬಿ ಆಗಿತ್ತು. ಎಷ್ಟೋ ಪರಿಚಿತರು ಈ ಕೆಲಸದಲ್ಲಿ ಅವರಿಗೆ ಸಹಾಯ ಮಾಡಿದ್ದಾರೆ. ಎಸ್ ದಿವಾಕರ್, ಶೇಷಶಾಸ್ತ್ರಿ ಅವರಲ್ಲಿ ಪ್ರಮುಖರು.)

ಮಾಸ್ತಿಯವರನ್ನು ಅವರ ಮನೆಯಲ್ಲಿ ’ಸೆರೆಹಿಡಿದ’  ವಿಚಾರವನ್ನು ನನಗೆ ಪತ್ರಮುಖೇನ ತಿಳಿಸಿದರು.ದೈನಂದಿನ ಪತ್ರ ವಿನಿಮಯವೊಂದೇ (ಖಾಸಗಿ) ಫೋನ್ ಇಲ್ಲದ ದಿನಗಳಲ್ಲಿ ಸಂಪರ್ಕ ಸಾಧನವಾಗಿತ್ತು. ೬/೮/೧೯೭೯ ರ ಕಾಮತರ ಇಡಿಯ ಪತ್ರವನ್ನು ಇಲ್ಲಿ ಕೊಡಲಾಗಿದೆ. —-)

ಸೋಮವಾರ ೦೬/೦೮/೧೯೭೯ ರಂದು ಪೂರ್ವನಿರ್ಧಾರಿತ ಎಂಟುಗಂಟೆಗೆ ಐದು ನಿಮಿಷಗಳಿರಬೇಕಾದರೆ ನಾನು ಮಲ್ಲೇಶ್ವರದಿಂದ ಗಾಂಧಿ ಬಜಾರ್ ತಲುಪಿದರೂ ಹತ್ತಿರದಲ್ಲೇ ವಾಸಿಸುತ್ತಿದ್ದವರು ಇನ್ನೂ ಬಂದಿರಲಿಲ್ಲ. ಬೇರೆ ಎಲ್ಲಾದರೂ ನಿಲ್ದಾಣದ ಮೂಲೆಯಲ್ಲಿರಬಹುದೇ? ಎಂದು ಶೋಧಿಸಲು ಅತ್ತಿಂದಿತ್ತ ಓಡಾಡುವಾಗ ಇನ್ನೊಬ್ಬರು ಸಾದುಗಪ್ಪು ವರ್ಣದ ಸದ್ಗೃಹಸ್ಥರು ಬೇರೆ ಯಾರನ್ನೋ ನಿರೀಕ್ಷಿಸುತ್ತಿರುವಂತೆ ಅತ್ತಿತ್ತ ಹುಡುಕುತ್ತಿದ್ದರು. ಎಂಟೂ ಕಾಲಾಯಿತು. ಕೂಡಲೇ ಕಾಯುತ್ತಿದ್ದವರು ಮಾಸ್ತಿಯವರ ಮನೆಯ ವಿಳಾಸ ಹೇಳಿ ಅವರ ಮನೆಗೆ ಒಯ್ಯಲು ರಿಕ್ಷಾದವನಿಗೆ ಹೇಳಿದ್ದರಿಂದ, ಎಸ್ ದಿವಾಕರರನ್ನು ಕಾಯುತ್ತಿದ್ದ ಅವರು ಇರಲು ಸಾಕು! ಎಂದು ಊಹಿಸಿ, ನಾನೇ ಪರಿಚಯಿಸಿಕೊಂಡೆ. ಅವರು ಬಸವರಾಜ್ ಆಗಿದ್ದರು. ಅಷ್ಟರಲ್ಲಿ ಇನ್ನೋರ್ವರು ನಾವಿದ್ದಲ್ಲಿ ತಲುಪಿದ್ದರಿಂದ, ಬಸವರಾಜ್ ಅವರು, ” ಇವರು ಎಸ್. ರಾಮಸ್ವಾಮಿ” ಎಂದು ಪರಿಚಯಮಾಡಿಕೊಟ್ಟರು. ಇತ್ತೀಚೆಗೆ  ಪ್ರಾರಂಭವಾದ ,”ಕಾದಂಬರಿ” ಪತ್ರಿಕೆಯ ಎರಡು ಸಂಚಿಕೆಗಳ ಪ್ರತಿಗಳು ಕೈಸೇರಿದ್ದರಿಂದ, ಇವರು ಆ ಪತ್ರಿಕೆಯ ಸಂಪಾದಕರು, ಎಂದು ತಿಳಿಯಲು ಹೆಚ್ಚು ಸಮಯ ಹತ್ತಲಿಲ್ಲ. ” ದಿವಾಕರರೊಂದಿಗೆ ನಿಮ್ಮ ಲ್ಯಾಬಿಗೇ ಬರಬೇಕೆಂದಿದ್ದೆ ಸಾರ್! ಅಕಸ್ಮಾತ್ತಾಗಿ ನೀವೇ ಈ ಕಡೆ ಬರುವವರಿದ್ದೀರಿ! ಎಂದು ತಿಳಿದಿದ್ದರಿಂದ ಭೇಟಿಗೆ ಬಂದೆ. ಎಂಟು ಗಂಟೆಗೆ ಸರಿಯಾಗಿ ಬಾರದಿದ್ದರೇ  ನಿಮ್ಮ ಭೇಟಿಯೇ ಅಗಲಿಕ್ಕಿಲ್ಲ! ಎಂದು ಹೆದರಿಸಿದ ದಿವಾಕರರೇ ಇನ್ನೂ ಬಂದಿಲ್ಲವಲ್ಲ? “ಎಂದು ಉದ್ಗರಿಸಿದರು.

” ಸಾರಿ! ಎಚ್ಚರವಾಗಲು ತಡವಾಯಿತು” ಎಂದು ಎಸ್. ದಿವಾಕರ ಬಂದು ಕೂಡಿಕೊಂಡಾಗ ಸಮಯ ಎಂಟೂ ಮುಕ್ಕಾಲು ಆಗಿತ್ತು.” ಗಡಿಯಾರ ಕೈ ಕೊಟ್ಟು ಬಿಟ್ಟಿತು! ಎಂದು ಹೇಳಿದ್ದರೆ ಚೆನ್ನಾಗಿ ಇರುತ್ತಿರಲಿಲ್ಲವೇ? ಎಂದು ನಾನೆಂದಾಗ ಎಲ್ಲರೂ ನಕ್ಕರು. ಇನ್ನೂ ದಿವಾಕರರ ಕಾಫಿ  ಆಗದ್ದರಿಂದ, ಹತ್ತಿರದ ಕಾಫಿಯಂಗಡಿ ಹೊಕ್ಕು ಒಂದೊಂದು ಲೋಟ ಸುರಿದುಕೊಂಡು ಮಾಸ್ತಿಯವರ ಮನೆಗೆ ಹೊರಟೆವು.

ಶಾಂತ ವಾತಾವರಣದಲ್ಲಿ, ಎತ್ತರವಾಗಿ ನಿಂತ ಹಳೆಯ ಆದರೆ ಗಟ್ಟಿ ಮುಟ್ಟಾದ ಕಟ್ಟಡ ಮಾಸ್ತಿಯವರ ನಿವಾಸ. ಅವರ ಸಾಂಪ್ರದಾಯಿಕತೆ, ನಿಷ್ಟ ವ್ಯಕ್ತಿತ್ವವನ್ನು ತೋರಿಸುತ್ತಿರುವಂತೆ ಕಂಡಿತು. ಈ ಮನೆಯ ಮುಂದಿನ, ಹಿತ್ತಲಿನ ಪ್ರತಿಯೊಂದು ಗಿಡಮರಗಳು, ಮಾಸ್ತಿಯವರ ಜೀವನದ ಒಂದೊಂದು ಹಂತಗಳನ್ನು  ಅವರ ಏಳು ಬೀಳುಗಳಿಗೆಲ್ಲ ಮೂಕ ಸಾಕ್ಷಿಗಳಾಗಿರಬೇಕು! ಎಂದೆನಿಸಿತು. ಮಾಸ್ತಿಯವರಾಗಲೇ ಇನ್ನಾರೋ ಆಗಂತುಕರೊಂದಿಗೆ ಮಾತುಕತೆ ನಡೆಸಿದ್ದರು. ನಾವು ಹೊರಗಿನ ಪಡಸಾಲೆಯಲ್ಲಿ ಕಾದು ಕೂಡ್ರ ಬೇಕಾಯಿತು. ಅಲ್ಲಿದ್ದ ಮೂರು ಖುರ್ಚಿಗಳು ಅವರ ವಿವಾಹ ಕಾಲದದಲ್ಲಿ ಹೊಸವಿರಬೇಕು! ಮತ್ತು ಬೆಂಚು ಮಗಳು ಹುಟ್ಟಿದಾಗ ಮಾಡಿಸಿರಬೇಕು ಅನಿಸಿತು. ಈ ರೂಮಿನ ನೆಲ ತೀರ ಹುರುಬರುಕಾದ್ದರಿಂದ ತನ್ನ ಪ್ರಾಚೀನತೆ ಸಾರಿ ಹೇಳುತ್ತಿತ್ತು.

ಮಾಸ್ತಿ ವೆಂಕಟೇಶ್ ಅಯ್ಯಂಗಾರ್

ಮಾತನಾಡಲು ಬಂದವರು ಹೊರಟು ಹೋದ ನಂತರ ನಮಗೆ ಒಳಗೆ ಬರಲು ಅಪ್ಪಣೆ ಆಯಿತು. ಎಡ ಬಲದಲ್ಲಿ ದೊಡ್ಡ ಕಿಟಕಿಗಳು ಇರುವ ರಾಜಪೀಠದಂತಹ ಆಸನದ ಮೇಲೆ ಆರೂಢರಾಗಿದ್ದರು ಮಾಸ್ತಿಯವರು. ನಾವು ಮೂವರು ಪ್ರಜೆಗಳಂತೆ ಅವರ ಮುಂದೆ ಅಸನಾರೂಢರಾದೆವು. ಗೋಡೆಗೆ ತೂಗುಹಾಕಿದ ವರ್ಣಭಾವಚಿತ್ರ ನನ್ನ ಲಕ್ಷ್ಯ ಸೆಳೆಯಿತು. ” ಅವರು ನನ್ನ ಮನೆಯವರು. ನನ್ನ ಬರವಣಿಗೆಗೆ ಹಲವು ವಿಧದಲ್ಲಿ ಸಹಾಯ ಮಾಡಿದ್ದಾರೆ!”  ಎಂದರು. ಪತ್ನಿಯ ಬಗ್ಗೆ ಬಹುವಚನ ಸೂಚಿಸುವದರ ಜೊತೆ , ಅವರ ಕುರಿತು ಕೆಲವು  ಲೇಖನಗಳನ್ನು ಒದಿದ್ದರಿಂದ ಪತ್ನಿಯನ್ನು ಅದೆಷ್ಟು ಗೌರವ ಭಾವದಿಂದ ಅವರು ಕಾಣುತ್ತಿದ್ದರು, ಅನಿಸಿತು. ವರ್ಣ ಭಾವಚಿತ್ರದ ಛಾಯಾಚಿತ್ರ ತೆಗೆಯಲು ಯತ್ನಿಸುವಾಗ, ಅಡ್ಡ ಬಂದ ಗಂಧದ ಹಾರವನ್ನು  ತೆಗೆಸಿದರು. ಹೆಚ್ಚಿನ ಬೆಳಕಿಗೆ ಕಿಡಕಿಯನ್ನು ತೆಗೆಯಿಸಿದರು. ” ಈ ಫೋಟೊ, ವೆಲ್ಲಿಂಗರು ಮಾಡಿಕೊಟ್ಟಿದ್ದಾರೆ. ಇದರ ಮೂಲ ಪ್ರತಿ ಮನೆಯಲ್ಲಿ ಎಲ್ಲೊ ಇದ್ದಿರಬೇಕು, ನೀವು ತೆಗೆದ ಫೋಟೊ ಹೇಗೆ ಬಂದಿದೆ ಎಂದು ತೋರಿಸಿ! “ಎಂದರು. ” ಕಾಮತರ ಊರು ಯಾವದು?” ಎಂದು ನನ್ನನ್ನು ಪರಿಚಯಿಸಿದಾಗ ಕೇಳಿದರು. ತಾವು ಒಮ್ಮೆ ಹೊನ್ನಾವರಕ್ಕೆ ಹೋಗಿದ್ದಾಗಿ ಹೇಳಿದರು.

ಮಾಸ್ತಿಯವರ ಪತ್ನಿ

ಅವರ ಮನೆಯೊಳಗೆ ಕತ್ತಲಾದ್ದರಿಂದ ‘ಫ್ಲ್ಯಾಶ್ ‘ಬಳಸಲೇ ಬೇಕಾಗಿತ್ತು. ಹೀಗಾಗಿ ಪ್ರತಿಯೊಂದು ಕ್ಲಿಕ್ ಅವರ ಮುಖದ ಮೇಲೆ ‘ ಬೆಳಕು ಚೆಲ್ಲುವದು’ ಅನಿವಾರ್ಯವಾಗಿತ್ತು. ಅವರೋ! ಸ್ಟುಡಿಯೋ ಫೋಟೋದಂತೆ ಶಿಲಾಮೂರ್ತಿಯ, ’ಪೋಸ್’ ‘ಕೊಟ್ಟು ಕುಳಿತಿದ್ದರು. ಅಂತಹ ಛಾಯಾಗ್ರಹಣ ನನಗೆ ಬೇಡವಾಗಿತ್ತು. ಹೀಗಾಗಿ ಮುನ್ಸೂಚನೆಯಂತೆ ಮಾತಿನಲ್ಲಿ ಅವರನ್ನು ತೊಡಗಿಸಲು ಸಂಗಡಿಗರಿಗೆ ಕಣ್ಸನ್ನೆ ಯಿಂದ ಸೂಚಿಸಿದೆ. ಸಂದರ್ಶಕರ ಮಾಮೂಲು ಪ್ರಶ್ನೆಗಳು ಪ್ರಾರಂಭವಾದವು

ಸರ್ವಸಾಧಾರಣವಾಗಿ ಯಾವಾಗ ಬರೀತಿರಾ? ಕತೆ  ಬರೆಯಲು ನಿಮಗೆ ಸ್ಫೂರ್ತಿ ಕೊಡುವ  ಸಂದರ್ಭ ಯಾವದು? ಒಂದು ಕತೆ ಬರೆಯಲು ಎಷ್ಟು ಕಾಲಾವಕಾಶ ಬೇಕು? ಸದ್ಯಕ್ಕೆ ನೀವು ಕತೆಯನ್ನು ಬಾಯಿಂದ ಹೇಳುತ್ತ ಇತರರಿಂದ ಬರೆಸುವದಕ್ಕೂ, ನೀವೇ ಸ್ವತಃ ಬರೆಯುತ್ತಿದುದಕ್ಕೂ ಹೆಚ್ಚಿನ ಅಂತರ ಏನಾದರೂ ಕಂಡು ಬರುತ್ತದೆಯೋ? ಇತ್ಯಾದಿ. ಮಾತುಕತೆ ಅಥವಾ ಪ್ರಶ್ನೋತ್ತರಗಳು ನಡೆದಾಗ ಮಾಸ್ತಿಯವರ ವಿವಿಧ ಭಾವಚಿತ್ರಗಳನ್ನು ಕ್ಲಿಕ್ಕಿಸುತ್ತಲೇ ಇದ್ದುದರಿಂದ ಈ ಫೋಟೋಗ್ರಾಫರ್, ತಮ್ಮ ಭಾವಗಳ ’ದುರುಪಯೋಗ’ ಮಾಡಿಕೊಳ್ಳುತ್ತಿರಬೇಕು! ಎಂಬ ಚಿಕಿತ್ಸಕ ಬುದ್ಧಿ ಜಾಗೃತವಾಗಿರಬೇಕು, ಅಂತೆಯೇ , ” ಎಷ್ಟೊಂದು ಫೋಟೊ ತೇಗಿತಾ ಇದ್ದೀರಾ?  ಪ್ರತಿಯೊಂದು ಫೋಟೊಗೂ ನೀವು ಹತ್ತು ರೂಪಾಯಿ ಕೊಡಬೇಕು ಎಂದು ನಾನು ಕೇಳಿದ್ದರೆ, ಒಂದೆರಡು ಫೋಟೊಗೇ ಮುಗಿಸಿ ಬಿಡುತ್ತಿದ್ದಿರಿ!”  ಎಂದು ನಗಲು ಯತ್ನಿಸಿದರು. ನಾನು ಯಾವ ಪತ್ರಿಕೆ, ಪುಸ್ತಕದ ಪ್ರತಿನಿಧಿಯಾಗಿ ಹೋಗಿರಲಿಲ್ಲ! ನನ್ನ ಕ್ಯಾಮರಾ, ನನ್ನ ಫಿಲ್ಮ್, ನನ್ನ ಸಮಯ ಬಳಸಿ ಅವರ ಬಿಡುವು ನೋಡಿ ಮನೆಗೇ ಹೋಗಿ ಕ್ಲಿಕ್ಕಿಸುವ ತೊಂದರೆ ತೆಗೆದು ಕೊಂಡಿದ್ದೆ. ಅದು ಅವರ ವಿನೋದ ಪ್ರಜ್ಞೆಯೋ, ವ್ಯವಹಾರ ಕುಶಲತೆಯೋ ಎಂದು ಗೊತ್ತಾಗದೇ ದಿಗಿಲು ಬಿದ್ದೆ ! ನಟ- ನಟಿಯರಂತೆ ಅವರ ಭಾವಚಿತ್ರಗಳಿಗೆ ಬೇಡಿಕೆ ಇದ್ದರೆ, ಏನು ಮಾಡುತ್ತಿದರೋ! ಎಂದು ಮನಸ್ಸಿನಲ್ಲೆ ನಕ್ಕೆ.

ಅವರು ಹೇಳಿದ ಕೆಲ ವಿಚಾರಗಳು ಸ್ಥೂಲವಾಗಿ ಇಲ್ಲಿವೆ . ಕತೆ ಹೇಳಿ, ಬರೆಸುವದಕ್ಕೂ ಸ್ವತಃ ಬರೆಯುವದಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಂದು ಕತೆ ಬರೆಯುವದಕ್ಕೆ ತುಂಬ ಕಾಲದ ವರೆಗೆ ಯೋಚಿಸಬೇಕಾಗುತ್ತದೆ. ವಿಚಾರ ಹೊಳೆಯುವದಕ್ಕೂ, ಕತೆಯೊಂದು ಮೂಡಿ ಬರುವದಕ್ಕೂ ನಡುವೆ ವರ್ಷಗಳೇ  ಉರುಳಿ ಹೋಗಬಹುದು. ನನ್ನ ಎಷ್ಟೋ ಕತೆಗಳು ಇನ್ನೊಬ್ಬರು ಹೇಳಿದಂತೆ ಬರೆಯಲು ಕಾರಣ , ಬರೆದವನು ನಾನಾದರೂ , ಹೇಳಿದವರು ಬೇರೆಯವರು. ಆದ್ದರಿಂದ, ನನ್ನ ಕತೆಗಳಲ್ಲಿ ಯಾವ ನೀತಿ ಬೋಧೆ ಇಲ್ಲದಿದ್ದರೂ ಓದುಗರು ಅದರಲ್ಲಿ ನೀತಿ ಕಾಣಬಹುದಾಗಿದೆ. ಈ ತಿಂಗಳ ’ಮಲ್ಲಿಗೆ’ಯಲ್ಲಿ ಪ್ರಕಟವಾದ ಕತೆಯಲ್ಲಿ ಬಡತನದ ಕುಟುಂಬದಲ್ಲಿ ಬೆಳೆದ ಹುಡುಗಿ, ತಂದೆಗೆ ಕನ್ಯಾಭಾರ ಇಳಿಸುವ ಏಕಮಾತ್ರ ಉದ್ದೇಶದಿಂದ ಅವಳನ್ನು ಮದುವೆಯಾಗಲು ಬಂದ ಅಪರಿಚಿತನನ್ನು ವರಿಸಲು ಕೂಡಲೇ ಒಪ್ಪಿಕೊಂಡು ಬಿಡುತ್ತಾಳೆ. ಅವನು ನಪುಂಸಕನೆಂದು ಆ ಬಳಿಕ ಅವಳಿಗೆ ತಿಳಿಯುತ್ತದೆ.. ಈ ಕತೆಯಲ್ಲಿ ಯಾವುದೇ ನೀತಿ ಬೋಧೆ ಇರಲಿಲ್ಲ. ಓದುಗರು ತೀರ ಅಪರಿಚಿತರೊಡನೆ ವಿವಾಹವಾಗಲು ಕೂಡಲೇ ಒಪ್ಪಿಕೊಳ್ಳಬಾರದು, ಎಂಬ ಪಾಠ ಕಲಿಯಬಹುದಷ್ಟೆ! ಹಿಂದೊಮ್ಮೆ ಓರ್ವ ಓದುಗರು, ಸುಬ್ಬಣ್ಣ ಕತೆಯಲ್ಲಿ  ನೀವು ಹೀಗೆ ಹೇಳಿದ್ದಿರಾ? ಹಾಗೆ ಪ್ರತಿಪಾದಿಸಿದ್ದೀರಾ? ಎಂದೆಲ್ಲ ಹೇಳಿದಾಗ, ಕತೆ ಬರೆದವನು ನಾನಾದರೂ ಆ ಮಾತು, ಆ ವಾದ ನನ್ನದಲ್ಲಯ್ಯ! ಆ ಪಾತ್ರದ್ದು’ ಎಂದು ತಿಳಿಸಿ ಹೇಳಬೇಕಾದರೆ ಸಾಕುಸಾಕಾಗಿತ್ತು.. ಪ್ರೌಢಾವಸ್ಥೆಯಲ್ಲಿದ್ದಾಗ, ಘನವಿದ್ವಾಂಸರೋರ್ವರು ಕಾವ್ಯ -ನಾಟಕಗಳ ರಚನೆಯಲ್ಲಿ ತೊಡಗಿದವರು, ,” ಅದೇನಯ್ಯ! ಬರೀ ಸಣ್ಣ ಕತೆಗಳನ್ನೆ ಬರೆಯುತ್ತಿದ್ದಿರಲ್ಲ? ಕವಿತೆ- ಕಾವ್ಯವನ್ನು ಬರೆದರೆ ಶಾಶ್ವತ ಸಾಹಿತ್ಯ ಆಗುತ್ತಿರಲಿಲ್ಲವೇ? ಎಂದು ಉದ್ಗರಿಸಿದಾಗ ,, ” ಹೌದು ನಾನು ಬರೆಯುವದು ಕತೆಗಳನ್ನೇ! ನೀವು ಕಾವ್ಯ ಬರೆಯುತ್ತಿರಿ!  ಎಂದರಂತೆ. ಅವರು ಕಾವ್ಯ ಬರೆಯುವದು ನಿಲ್ಲಿಸಿ ದಶಕಗಳೇ ಜಾರಿಕೊಂಡವು. ನಾನು ಮಾತ್ರ ಕತೆಗಳನ್ನು ಬರೆಯುತ್ತಲೇ ಇದ್ದೇನೆ” ಅಂದರು

ಅವರ ಸಮಕಾಲೀನ ಲೇಖಕರ ಬಗ್ಗೆ ವಿಚಾರಿಸಿದಾಗ , ಅವರೆಲ್ಲರ ಯೋಗ್ಯತೆಯನ್ನು ಒಂದೊಂದೇ ಶಬ್ದಗಳಲ್ಲಿ ಹೇಳಿದ್ದು ತಮಾಷೆಯದಾಗಿತ್ತು.. ಒಬ್ಬನು ‘ಜಾಣ’, ಇನ್ನೊಬ್ಬ ‘ವಿದ್ವಾಂಸ’, ಮಗುದೊಬ್ಬ ‘ಮುಂಗೋಪಿ’, ಬೇರೊಬ್ಬಾತ ‘ಹಸುಳೆ’ ಇತ್ಯಾದಿ.

ನಂತರ ಅವರ ಮಾತುಕತೆ , ನನ್ನ ಕ್ಯಾಮರಾದತ್ತ ಹೊರಳಿತು. ಕ್ಯಾಮರಾಕ್ಕೆ ಪಿಸ್ತೂಲಿಗಿಂತ ಹೆಚ್ಚು ಭಯ ಪಡಬೇಕು, ಏಕೆಂದರೆ ಪಿಸ್ತೂಲು ಒಂದೇ ಪ್ರಾಣ ತೆಗೆಯುತ್ತದೆ. ಕ್ಯಾಮರಾ ಹಲಬಗೆಯ ಛಾಯಾಚಿತ್ರ ತೆಗೆಯುತ್ತದೆ. ಓದುಗರು ನನ್ನ ಚಿತ್ರ ನೋಡಿ , ಕತೆ  ಬರೆಯೋ ಮೂತಿನಾ ಇದು ಎಂದು  ಆಶ್ಚರ್ಯ ಪಟ್ಟಾರು? ತಾವು ಹಿಂದೆ ಅಮಲ್ದಾರರೊಂದಿಗೆ ಸೇರಿ ಪಿಸ್ತೂಲು ಹೊಡೆಯುವದನ್ನು ಹೇಗೆ ಕಲಿತೆ, ಎಂದು ವಿವರಿಸಿದರು. ಪಿಸ್ತೂಲನ್ನು ಸರಿಯಾಗಿ ಬಳಸದಿದ್ದರೆ ಗುರಿ ತಪ್ಪಿ ಕಾಲಿಗೆ ಅಪ್ಪಳಿಸುವ ಸಾಧ್ಯತೆ ಇದ್ದಂತೆ ಕ್ಯಾಮರಾ ಕೂಡ ! ಅನ್ನಬೇಕೇ? ಛಾಯಾಗ್ರಹಣಕ್ಕೆ ಮಾಸ್ತಿಯವರು ಬೇಕಾದಂತೆ ಸಹಕರಿಸುತ್ತಾರೆ ಎಂದು ದಿವಾಕರ ಹೇಳಿದ್ದರೂ, ಅವರು ಓದುವಂತೆ, ಬರೆಯುವಂತೆ, ಅಥವಾ ತಮ್ಮ ವಾಚನಾಲಯದ ಮುಂದೆ ನಿಂತು ಛಾಯಾಚಿತ್ರಗಳನ್ನು ತೆಗೆಸಿಕೊಳ್ಳಲು ನಿರಾಕರಿಸಿಬಿಟ್ಟರು.!

ಕಾಫಿ ಬಂದಿತು. ಮಗಳು ಬಂದು ಚಿಕ್ಕ ಲೋಟಗಳಲ್ಲಿ ಕಾಫಿ ಕೊಟ್ಟಳು. ಮಾಸ್ತಿಯವರು ತಮ್ಮ ವಯಸ್ಸಿನ ಅರ್ಧದಷ್ಟು ತರುಣರಾಗಿ ಕಂಡರೆ, ಮಗಳು ಕಾಲಿನಷ್ಟು ಕಂಡಳು. ಅವರದು’ ಅಳಿಯಸಂತಾನ’ದ ಸಂಸಾರವೆಂದು ಕೇಳಿದ್ದೆ. ಹೀಗಾಗಿ ಮನೆಯಲ್ಲಿರುವ ಅಳಿಯ ಮಗಳಂದಿರೊಡನೆ ಫೋಟೊ ಒಂದನ್ನು ತೆಗೆಯೋಣವೆಂದು ಸೂಚಿಸಿದಾಗ, ” ಅವರು ವಿವಿಧ ಕೆಲಸಗಳಲ್ಲಿ ತೊಡಗಿದ್ದಾರೆ ! ಇಂದು ಬೇಡ. ಇನ್ನೊಂದು ದಿನ ನಾಲ್ಕು ಗಂಟೆಗೆ ಬನ್ನಿ” ಎಂದರು. ನಾನು ಛಾಯಾಗ್ರಹಣದ ಸಾಮಾನುಗಳನ್ನೆಲ್ಲ ಒಟ್ಟು ಮಾಡಿ ಕೈ ಚೀಲದಲ್ಲಿ ಸೇರಿಸಿ ಹೊರಗೆ ಬಂದಾಗ , ಅವರ ಓರ್ವ ಅಳಿಯದೇವರು ಬಂದು, ” ನೀವು ಬೆಂಗಳೂರು ಪ್ರೆಸ್ಸಿನ ಸ್ಟಾಫ್ ಫೋಟೊಗ್ರಾಫರಾ?” ಎಂದು ವಿಚಾರಿಸಿದಾಗ, ಅವರೊಡನೆ ಮಾತು ಬೆಳೆಸುವ ಮನಸ್ಸಾಗದೇ ಸುಮ್ಮನೆ ಗೋಣು ಹಾಕಿದೆ. ನನ್ನ ಬಗ್ಗೆ , ಮಾಸ್ತಿಯವರಿಗೆ ಏನೂ ಹೇಳಬಾರದು! ಎಂದು ಮೊದಲೇ ದಿವಾಕರ ಗುಂಪಿಗೆ ಕರಾರು ಹಾಕಿದ್ದೆ. ಹೀಗಾಗಿ ಅವರೆಲ್ಲ ನಾನೊಬ್ಬ ವ್ಯಕ್ತಿ ಛಾಯಾಗ್ರಾಹಕ! ಎಂದು ಭಾವಿಸಿದಂತೆ ಇತ್ತು. ಇನ್ನು ನಾನು ನಿನ್ನ ಪತಿ, ಅಥವಾ ನೀನು ನನ್ನ ಪತ್ನಿ ಎಂದು ಹೇಳುವ ಮಾತಂತೂ ದೂರವೇ ಉಳಿಯಿತು.

 ಈಗ ಓರ್ವ ಕನ್ನಡದ ಅತ್ಯಂತ ಖ್ಯಾತ ಲೇಖಕರ ಮನಸೋ ಛಾಯಾಗ್ರಹಣ ಮಾಡುವಂತೆ ಆದದ್ದಕ್ಕೆ ಹರ್ಷವಾಗಿದೆ. ಬಿ.ಜಿ ಎಲ್ ಸ್ವಾಮಿ ಅವರವು, ನಾನು ಕ್ಲಿಕ್ಕಿಸಿದ ಚಿತ್ರಗಳು ಎಲ್ಲರಿಂದ ತಲೆತೂಗಿಸಿಕೊಂಡಿವೆ. ಮಾಸ್ತಿ ಅವರ ಚಿತ್ರಗಳಲ್ಲಿ ವೈವಿಧ್ಯವಿಲ್ಲದಿದ್ದರೂ, ಭಾವಗಳನ್ನು ಸ್ಫುಟವಾಗಿ ಸೆರೆಹಿಡಿಯುವಲ್ಲಿ ಯಶಸ್ವಿ ಆಗಿದ್ದೇನೆಂದು ಅಭಿಮಾನದಿಂದ ಹೇಳಬಲ್ಲೆ. ” ಕಾಮತರಿಂದ ಈ ಪರಿ ಕ್ಲಿಕ್ಕಿಸಿಕೊಳ್ಳಲು ನಾವುಗಳು ಎಷ್ಟು ಬರೆಯಬೇಕೋ, ಎಷ್ಟೊಂದು ಶ್ರಮ ವಹಿಸಬೇಕಾದೀತು! ಎಂದು ಬಸವರಾಜ್ ಉದ್ಗರಿಸಿದಾಗ, “ನೀನು ಮೊದಲು ನಿನ್ನ ಪತ್ರಿಕಾಕರ್ತತನ ಬಿಡಬೇಕಾದೀತು, ಸಾಹಿತಿಯಾಗಿ ಹೆಸರು ಮಾಡು” ಎಂದು ದಿವಾಕರ ಎಚ್ಚರಿಸಿದರು. ಇದೇ ರೀತಿ ನಾವು ನಾಲ್ವರೂ ಸೇರಿ ಕನ್ನಡದ ಖ್ಯಾತ ಲೇಖಕರ ಭಾವಚಿತ್ರಗಳನ್ನು ತೆಗೆದು ಇಡುವದು, ಎಂದು ಸರ್ವಾನುಮತದಿಂದ ನಿರ್ಧಾರವಾಯಿತು. ಮೇಧಾವಿಗಳ ಫೋಟೊಗ್ರಫಿಗೆ ಇದಕ್ಕಿಂತ ಉತ್ತಮ ಏರ್ಪಾಟು ಮಾಡಬಹುದು ಎಂದು ನನಗೆ ಅನಿಸುವದೇ ಇಲ್ಲ! ಹೆಚ್ಚಿನ ಸಾಹಿತಿಗಳೆಲ್ಲ ದಿವಾಕರರಿಗೆ ಪರಿಚಿತರು. ಆದ್ದರಿಂದ ಅವರೆಲ್ಲರ ಸಂಪರ್ಕ ಬೆಳೆಸಿ, ಭೇಟಿಯ ದಿನ, ವೇಳೆ ನಿಶ್ಚಯಿಸಿ ಕರೆದೊಯ್ಯುವ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ದಿವಾಕರ- ಬಸವರಾಜರು ಸಾಹಿತಿಗಳನ್ನು ಮಾತಿನಲ್ಲಿ ತೊಡಗಿಸುವ ಜವಾಬ್ದಾರಿ ಹೊತ್ತಿದ್ದಾರೆ , ಅಲ್ಲದೇ ಆಗೀಗ ಹಿಂದೆ ಕರಿಪರದೆ ಹಿಡಿಯಲು ಸಿದ್ಧರಾಗುತ್ತಾರೆ! ಇಂಥ ಅವಕಾಶಗಳಿಗಾಗಿ ಕಾದು ಕುಳಿತು, ಅದು ಆಕಸ್ಮಿಕವಾಗಿ ಒದಗಿದಾಗ ಅದರ ಲಾಭ ಪಡೆಯಲೇ ಬೇಕು. ಬರಹಗಾರರ  ಕೃತಿಗಳಷ್ಟೆ ಅವರ ಛಾಯಾಚಿತ್ರ ಸಂಗ್ರಹವೂ ಮಹತ್ವದ್ದು ಎಂಬುದರಲ್ಲಿ ನನಗೆ ಸಂದೇಹವೇ ಇಲ್ಲ. ಸಾಹಿತಿಗಳೆಲ್ಲರ ಛಾಯಾಚಿತ್ರಗ್ರಹಣ, ಸಂಗ್ರಹದಿಂದ ನಾನೇಷ್ಟು ಧನಿಕನಾಗುತ್ತಿದ್ದೇನೆ ! ಎಂದು ವಿಸ್ಮಯ ಪಡುತ್ತಿದ್ದೇನೆ. ಈ ವರ್ಷ ೧೯೭೯ ಸಾಧನೆಯ ವರ್ಷವೆಂದು ತಿಳಿದಿದ್ದೇನೆ.

ಕೃಷ್ಣಾನಂದ ಕಾಮತ್