ಮಲೆಗಳಲ್ಲಿ ಮದುಮಗಳು; ಮರಳಿ ಓದಿದಾಗ

“ಗದ್ಯಂ ಕವಿನಾಂ ನಿಕಷಂ ವದಂತಿ” (ಗದ್ಯ ನಿರ್ಮಿತಿಯೇ ಕವಿಯಾದವನ ಒರೆಗಲ್ಲು)ಎಂಬುದು ಸಂಸ್ಕೃತ ಗಾದೆ. “ಕವಿ ಎನ್ನುವವ ಕೇವಲ ಕಾವ್ಯ ರಚನಾಕಾರನಾಗಿರದೇ, ಸಮಕಾಲೀನ ಎಲ್ಲ ಪ್ರಕಾರದ ಸಾಹಿತ್ಯ, ಶಾಸ್ತ್ರ ಕುರಿತ ಲಭ್ಯ ಗದ್ಯ ಮಾಹಿತಿಯನ್ನು ಬಲ್ಲವನಾಗಿದ್ದು ದೃಷ್ಟಾರನಾಗಲು ಸಾಧ್ಯ”! ಎಂದು ನಂಬಿದ ಯುಗದ ಗಾದೆ ಇದು. ಶಾಸ್ತ್ರಾದಿಗಳು ಅಂದರೆ ಯುದ್ಧಶಾಸ್ತ್ರ,ಪಾಕಶಾಸ್ತ್ರ, ಗೋ ವೈದ್ಯ, ವೃಕ್ಷಾಯುರ್ವೇದಗಳಂತಹ ವಿಜ್ಞಾನಪ್ರಕಾರಗಳೆಲ್ಲ ಪದ್ಯರೂಪೇಣ ಬರೆಯುತ್ತಿದ್ದ ದಿನಗಳಲ್ಲಿ ಎಲ್ಲರೂ, ‘ಕವಿ’ಯಾಗಲು ಹೆಣಗಬೇಕಾಗಿತ್ತು! ಹೀಗಿದ್ದಾಗ ನಿಜವಾದ ವಿದ್ವಾಂಸನ ವಿದ್ವತ್ತೆಯ ಆಳ ಮತ್ತು ಹರಹುಗಳನ್ನು ಪರೀಕ್ಷಿಸುವದು ಹೇಗೆ? ಗದ್ಯ ರೂಪವೇ ನಿಜವಾದ ಒರೆಗಲ್ಲು! (ನಿಕಷ) ಎಂದು ನಮ್ಮ ಹಿರಿಯರು ನಂಬಿದ ಕಾಲವಿತ್ತು. ಅದು ಬಹುಮಟ್ಟಿಗೆ ನಿಜವೆಂದು ಮಹಾಕವಿ ಕುವೆಂಪು ಅವರ ಎರಡು ಮಹಾಕೃತಿಗಳಾದ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಮತ್ತು, “ಮಲೆಗಳಲ್ಲಿ ಮದುಮಗಳು” ಓದಿದಾಗ ಅನಿಸಿದ್ದು ಇದೆ. ನನ್ನ ಇತ್ತೀಚಿನ ಅಮೇರಿಕೆಯ ವಾಸ್ತವ್ಯದಲ್ಲಿ “ಮಲೆಗಳಲ್ಲಿ ಮದುಮಗಳು” ಕಾದಂಬರಿಯನ್ನು ನಾಲವತ್ತೈದು ವರ್ಷಗಳ ಬಳಿಕ ಮರಳಿ ಓದಿದಾಗ ಆದ ಅನುಭವವೇ ಬೇರೆ! ಕವಿ ಸಹಜ ವರ್ಣನೆಗಳನ್ನು ಇನ್ನೊಮ್ಮೆ ನಿಧಾನವಾಗಿ ಓದಿ, ಆನಂದಿಸಿ visualize ಮಾಡಿಕೊಂಡರೂ ಹಿಂದೆ ಗಮನಿಸದ , ’ಮಹಿಳಾಮಾನಸ’ದ ಆಯಾಮಗಳು ಈ ಬಾರಿ ಹೆಚ್ಚು ಸ್ಫುಟವಾಗಿ ಗಮನಕ್ಕೆ ಬಂದವು.
Kuvampu with jyotsna kamat - kamat.com

ಹೆಸರೇ ಸೂಚಿಸುವಂತೆ ಇದು ಮದುಮಗಳ ಕತೆ. ಮೂವರು ಮದುಮಗಳಂದಿರ ವಿವಾಹ ಪ್ರಸಂಗಗಳ ಕತೆಯಾದ ಈ ದೀರ್ಘ ಕಾದಂಬರಿಯಲ್ಲಿ ಮದುಮಗಳಾಗಬಹುದಾಗಿದ್ದ ನಾಲ್ಕನೇಯ ತರುಣಿಯ ದುರಂತವೂ ಸೇರಿಕೊಂಡಂತೆ ಕೆಚ್ಚು, ದೂರದೃಷ್ಟಿ, ವ್ಯಾವಹಾರಿಕತೆಗಳೊಂದಿಗೆ ಮಾತೃತ್ವ, ಮಮತೆಗಳಂತಹ ಸ್ರೀ ಸಹಜ ಭಾವನೆಗಳನ್ನೂ ಹೊತ್ತ ಹೆಂಗಳೆಯರನ್ನು ಕಾಣುತ್ತೇವೆ. ಆ ಪಾತ್ರಗಳಾದರೋ, ಸಾಮಯಿಕವಾಗಿ ನೋಡಿದರೆ, ಮೇಲ್ನೋಟಕ್ಕೆ ನಿರಕ್ಷರಿಗಳು! ಕನಸಿನಲ್ಲೂ ಸ್ತ್ರೀ ವಾದದ ಹೊಳಹು ಕಾಣದವರು. ತಮ್ಮಲ್ಲಿಯ ಸುಪ್ತಚೇತನದ ಕಿಂಚಿತ್ ಅರಿವೂ ಇಲ್ಲದವರು. ಪುರುಷಪ್ರಧಾನವಾದ ಭಾರತೀಯ ಸಮಾಜದಲ್ಲಿ ಕೇವಲ ಅಸ್ತಿತ್ವಕ್ಕಾಗಿ ನಿರಂತರ ಹೋರಾಟವನ್ನು ಕೈಗೊಳ್ಳಬೇಕಾಗಿ ಬಂದ “ಅರ್ಧಾಂಗಿ”, ಪ್ರತಿನಿಧಿಗಳು. ಆದರೆ ಮಹಿಳಾ ಜಾಗೃತಿಯೆಂಬ ಚಳುವಳಿ ವಿಶ್ವದಾದ್ಯಂತ ಅಸಂಖ್ಯ ಆಯಾಮಗಳಲ್ಲಿ ಹತ್ತು ಹಲವು ರೂಪಗಳಲ್ಲಿ ಕಂಡು ಬರುತ್ತಿರುವ ಈ ಇಪ್ಪತ್ತೊಂದನೇಯ ಶತಮಾನದಲ್ಲಿ, ಒಂದು ಶತಮಾನಕ್ಕೂ ಹಿಂದಿನ , ’ಹಿಂದುಳಿದ’ ಸಮಾಜದ ಸ್ತ್ರೀ ಪಾತ್ರಗಳನ್ನು ಕುವೆಂಪು ಚಿತ್ರಿಸಿದ ರೀತಿ ಅನನ್ಯವಾದದ್ದು.

ಗುತ್ತಿ,-ತಿಮ್ಮಿ, ಐತ- ಪೀಂಚಲು, ಮುಕುಂದಯ್ಯ- ಚಿನ್ನಮ್ಮರ ಜೋಡಿಗಳಲ್ಲಿ ಪರಸ್ಪರ ಪ್ರಣಯದ ಬಗೆಗಳು ರಂಜಕವಾಗಿದ್ದಷ್ಟೇ ಕುತೂಹಲಕಾರಿಯೂ ಆಗಿವೆ. ಕಷ್ಟ ಪಡಲೆಂದೇ ಹುಟ್ಟಿಬಂದ ಕೆಳಜಾತಿಯವರೆಂದು ಭಾವಿಸಲಾದ ತಿಮ್ಮಿ, ಪಿಂಚಲು ಅವರಲ್ಲಿ ಒರಟುತನವೇ ಜೀವಾಳವಾದ, ಮೃದು-ಮಧುರ ಪ್ರಣಯ ಕಾಣುತ್ತೇವೆ. ಜಮೀನುದಾರ ಮನೆತನದಲ್ಲಿ ಜನ್ಮವೆತ್ತಿ, ಸುಖಜೀವನವೇ ರೂಢಿಯಾದ ಚಿನ್ನಮ್ಮ, ತಾನು ಒಲಿದಾತನನ್ನು ಸೇರಲು, ಊಹಿಸಲಸಾಧ್ಯ ತೊಂದರೆಗಳನ್ನು ಎದುರಿಸುತ್ತ ಮೀರಿದ ಧೈರ್ಯ ಮೆರೆದಿದ್ದಾಳೆ. ಈ ಮೂವರ ಉಪಕತೆಗಳೆಲ್ಲ ಒಂದೊಂದೂ ಸ್ವತಂತ್ರ ಕೃತಿಯಾಗಿ ಬೆಳೆದಿರಬಹುದಾದ ಬಲವನ್ನು ಪಡೆದಿವೆ. ಮಲೆನಾಡಿನ ಮಣ್ಣಿನ ನೆಲದ ಸಾಮರ್ಥ್ಯವನ್ನು ಹೀರಿಕೊಂಡಿವೆ ಅನಿಸುತ್ತದೆ, ಈ ಪಾತ್ರಗಳ ತೀರ ಭಿನ್ನ ಹಿನ್ನೆಲೆ ಸ್ವಾಭಾವಿಕವಾಗಿದ್ದಂತೆ, ವೈಶಿಷ್ಟ್ಯ ತಂತನ್ನ ಒಡನಾಡಿಗೆ ಪೂರಕವಾಗಿವೆ. ಅವರ ವೈಚಾರಿಕತ್ವ , ನಂಬಿಕೆಗಳು, ಊಟ, ಉಡಿಗೆಯ ವಿವರಗಳು, ಧೈರ್ಯ, ಅಪಾಯದ ಮುನ್ಸೂಚನೆ ಅರಿಯುವ ಸಾಮರ್ಥ್ಯ, ಇತ್ಯಾದಿಗಳನ್ನು ಕೃತಿಯನ್ನು ಒದಿಯೇ ಸವಿಯಬೇಕು!

ಮದುಮಗಳಾಗ ಬಹುದಾಗಿದ್ದ ಕಾವೇರಿಯ ಪ್ರಸಂಗವಂತೂ ಎಂದಿಲ್ಲದಷ್ಟು ಸಾಮಯೀಕವಾಗಿದೆ. ದೇವಯ್ಯನು ದೇಹಸುಖ ಪಡೆದು ಬಹುಮಾನವಾಗಿತ್ತ ಕಾವೇರಿಯ ಉಂಗುರ ಕಳವಾಗಿ ಹತ್ತೆಂಟು ಕೈಗಳನ್ನು ದಾಟಿ ಹೋಗಿ ಕೊನೆಗೆ ಅವಳಿಗೆ ಸಿಗುವಂತಾದದ್ದು, ಅದು ಘೋರ ದುರಂತದಲ್ಲಿ ಕೊನೆಗೊಳ್ಳುವಂತೆ ಆದದ್ದು, ಯಾವುದೇ ನಾಟಕ ಅಥವಾ ಚಲಚಿತ್ರಕ್ಕೆ ವಸ್ತುವಾಗಬಹುದಾದ, ಕುತೂಹಲ ಬೆಳೆಸುತ್ತ ಹೊಗುವ ಪ್ರಸಂಗಗಳನ್ನು ಹೊಂದಿದೆ.

ಇನ್ನೊಂದು ವಿಚಾರದಲ್ಲಿ ಕಾವೇರಿಯ ಸಾವಿನ ಘಟನೆ ಎಂದಿಲ್ಲದಷ್ಟು ಪ್ರಸ್ತುತವಾಗಿದೆ. ನಮ್ಮ ಸಮಾಜ ಭರದಿಂದ ಬದಲಾಗುತ್ತಲಿದೆ. ಹಿಂದೆಂದಿಗಿಂತಲೂ ಶಿಕ್ಷಣ ಪ್ರಸಾರ ಹೆಚ್ಚುತ್ತಲಿದೆ. ಸಾಮಾಜಿಕ ಸಮಾನತೆಯನ್ನು ಸಂವಿಧಾನ ಸಾರಿದಂತೆ ಆಡಳಿತ ವರ್ಗ, ತೀರ ಹಿಂದುಳಿದವರೆನಿಸಿಕೊಳ್ಳುವ ವರ್ಗಗಳ ಹಿತಕ್ಕಾಗಿ ಅಪಾರ ಧನ ವ್ಯಯಿಸುತ್ತಲಿದೆ. ಅದು ತಲುಪಬೇಕಾದವರಿಗೆ ತಲುಪುತ್ತಿಲ್ಲವೆಂಬುದು ಬೇರೆ ವಿಚಾರ! ಆದರೆ ಮೇಲು ವರ್ಗದವರೆನಿಸಿಕೊಳ್ಳುವವರಲ್ಲಿ, ವೈಯಕ್ತಿಕವಾಗಿ ಕೆಲವರಲ್ಲಿ, ಜಾತಿಬೇಧದ ಕಲ್ಪನೆ ಮುಂದರಿದರೂ ಬಾಹ್ಯಾಚರಣೆಯಲ್ಲಿ ಕಂಡುಬರುವದಿಲ್ಲ. ಸಾರ್ವಜನಿಕವಾಗಿ ಅದು ದಂಡನೀಯವೆಂಬ ನಿಯಮ ಬಂದಿದ್ದು, ಆ ಕುರಿತ ಪ್ರಜ್ಞೆ ಬೆಳೆಯುತ್ತಲಿದೆ.

ಆದರೆ ಸ್ತ್ರೀ ಶೋಷಣೆ ನಾನಾರೂಪದಲ್ಲಿಉಳಿದುಕೊಂಡಿದೆ! ಬೆಳೆಯುತ್ತಲಿದೆಯೇನೋ! ಎಂಬ ಸಂದೇಹಕ್ಕೂ ಕಾರಣವಾಗಿದೆ. ರೇಪ್ ಎನ್ನುವದರ ಬಗ್ಗೆ ಜನಜಾಗೃತಿ ಹೆಚ್ಚಿದರೂ ಸಾಮಾನ್ಯ್ರ ಆಸಕ್ತಿ ಕೆರಳಿಸುವಂತಹ ವಿಷಯವಾಗಿದ್ದರಿಂದ, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡದ ವರದಿಗಳು ಪ್ರಕಟವಾಗುತ್ತಿವೆ. ಬೆಳಕಿಗೆ ಬಾರದ ಎಷ್ಟೋ ಘಟನೆಗಳು ಗ್ರಾಮಾಂತರದಲ್ಲಿ ನಡೆಯುತ್ತಲಿವೆ. ಸಾಮಾಯಿಕ ಅಪರಾಧಗಳಲ್ಲಿ ಕೊಲೆ, ಸುಲಿಗೆಗಳೊಂದಿಗೆ ರೇಪ್ ಪ್ರಕರಣಗಳು ಸೇರಿಕೊಂಡದ್ದು ಹೆಚ್ಚಿನ ಕಳವಳಕ್ಕೆ ಕಾರಣವಾಗಿದೆ.

ಜ್ಯೋತ್ಸ್ನಾ ಕಾಮತ್ ಮತ್ತು ಕುವೆಂಪು

 

ಐವತ್ತು ವರ್ಷಗಳ ಹಿಂದೆಯೇ ಬರೆದಿರಬಹುದಾದ ಈ “ಮಲೆಗಳಲ್ಲಿ ಮದುಮಗಳು” ಕೃತಿಯಲ್ಲಿ ಅತ್ಯಾಚಾರವನ್ನು ಪ್ರಾಸಂಗಿಕವಾಗಿ ತಂದು ಕುವೆಂಪು ಅದನ್ನು ಸಾಮಯಿಕವಾಗಿಸಿದ್ದಾರೆ. ಪೂರ್ತಿ ಕಣ್ಮರೆಯಾದ ಮಲೆನಾಡಿನ ಸೌಂದರ್ಯ ಚಿತ್ರಗಳನ್ನು ಒದಗಿಸಿ ಕುವೆಂಪು ಚರಿತ್ರಕಾರರೂ ಆಗಿದ್ದಾರೆ! ಜೊತೆಗೆ ನಮಗೆಲ್ಲ ಅತಿಪ್ರಸ್ತುತವೆನಿಸುವ ಕಾವೇರಿ ಪ್ರಸಂಗವನ್ನು ಹೊಂದಿಸಿ; ’ಮಲೆಗಳಲ್ಲಿ ಮದುಮಗಳು’ ಕೃತಿಯಲ್ಲಿ ನಿತ್ಯ ನೂತನವಾಗಬಹುದಾದ ಹೃದಯವಿದಾರಕ ಘಟನೆಗೂ ಅವಕಾಶ ಕಲ್ಪಿಸಿ, ವಿಶ್ವ ಸಾಹಿತ್ಯದ ಭಾಗವಾಗಿಸಿದ್ದಾರೆ.

ಜ್ಯೋತ್ಸ್ನಾ ಕಾಮತ್