ಮಕ್ಕಳ ಬೆಳವಣಿಗೆ: ತಂದೆ ತಾಯಿಗಳ ಪಾತ್ರವೇನು? ಭಾಗ ೨ – ಡಾ. ಕೃಷ್ಣಾನಂದ ಕಾಮತ

ಪುರುಷರು ಮಕ್ಕಳ ಲಾಲನ-ಪಾಲನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಕಾರಿನ ರಿಪೇರಿ ಮಾಡುವಾಗ , ಬಡಿಗತನ, ಕಮ್ಮಾರಿಕೆ ಮಾಡುವಾಗ, ಮಗುವನ್ನು ಪಕ್ಕದಲ್ಲಿ ಕೂಡಿಸಿಕೊಂಡು ಮಾತನಾಡಿಸುತ್ತ, ರಮಿಸುತ್ತ ಇರುತ್ತಾರೆ. ಪತ್ನಿ ನೌಕರಿ ಮಾಡುತ್ತಿದ್ದರೆ, ಕಲಿಯುತ್ತಿದ್ದರೆ, ವಿಶೇಷ ತರಬೇತಿ ಪಡೆಯುತ್ತಿದ್ದರೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರೆ ಒಳ-ಹೊರಗಿನ ಮಕ್ಕಳ ಆರೈಕೆಯ ಹೊಣೆ ಪತಿಯದೇ.

ಮಕ್ಕಳಿಗೆ ನೀರಾಟವೆಂದರೆ ಪಂಚಪ್ರಾಣ. ಆದರೆ ನೀರು ಬೆಂಕಿಯಷ್ಟೇ ಅನಾಹುತಕಾರಿ ಎಂದು ನಾವು ಮಕ್ಕಳನ್ನು ಸದಾ ನೀರಿನಿಂದ ದೂರ ಇಡುತ್ತೇವೆ. ಮಳೆ ನೀರಿಗೆ ಕೈ ಒಡ್ಡಿ ನಿಂತರೂ, ಮಕ್ಕಳನ್ನು ಒಳಗೆಳೆದು ಬಂಧಿಸಿರುವರು ಇದ್ದಾರೆ. ಅಮೇರಿಕನ್ನರು ದೊಡ್ಡ ಪ್ಲಾಸ್ಟಿಕ್ ಮರಗೆಗಳಲ್ಲಿ ನೀರು ತುಂಬಿ, ಮಕ್ಕಳನ್ನು ಆಡಲು ಬಿಡುತ್ತಾರೆ. ಸ್ವಲ್ಪ ದೊಡ್ಡವರಾದ ಮೇಲೆ

ಮನೆಯ ಹೋರಗೂ ನೀರಾಟಕ್ಕೆ ಒಯ್ಯುತ್ತಾರೆ. ನಡುವಿಗೊಂದು ತೇಲುವ ರಿಂಗ ಸಿಕ್ಕಿಸಿ, ಸರೋವರ , ಸಮುದ್ರಗಳಲ್ಲೂ ಹೋಗಗೊಡುತ್ತಾರೆ. ನದಿ ಕಡಲ ತೀರಗಳಲ್ಲೆಲ್ಲ ಹೇಸಿಗೆ ಮಾಡಿ, ಈಸಲೂ ಕಲಿಯದ ಭಾರತೀಯ ಮತ್ತು ಅಮೇರಿಕನ್ ಮಕ್ಕಳಿಗೆ ಎಲ್ಲಿಯ ಹೋಲಿಕೆ.ಇನ್ನೂ ಸ್ವಲ್ಪ ದೊಡ್ಡವರಾದರೆಂದರೆ, ಅವರು ಎಲ್ಯೂಮಿನಿಯಮ್ ನಾವೆಗಳಲ್ಲಿ ಹುಟ್ಟು ಹಾಕುತ್ತ ದೂರ ದೂರ ಹೋಗಿ ಬರುವರು. ಹಿಮವೆಂದರೆ ಅಲ್ಲಿಯವರಿಗೆ ಪ್ರಾಣ. ಹಿಮದಲ್ಲಿ ಹಕ್ಕಿಗೂಡು, ಮನೆ ಕಟ್ಟಡ, ಕೋಟೆ ಕೊತ್ತಳಗಳನ್ನು ಮಾಡುತ್ತಾರೆ. ಹಿಮ ಶಿಲ್ಪಗಳನ್ನು ನಿರ್ಮಿಸುತ್ತಾರೆ. ಜಾರುಬಂಡೆಯಾದುತ್ತಾರೆ. ಹಿಮದುಂಡೆ ಮಾಡಿ ಆಡುತ್ತಾರೆ. ದೊಡ್ಡವರಾದ ಮೇಲೆ ಎತ್ತರ ಪ್ರದೇಶಗಳಿಂದ ಜಾರುತ್ತ ಶೀಯಿಂಗ ಮಾಡುತ್ತಾರೆ.ಇವನ್ನು ಆಡುವಾಗ ಕಾಲು ನೋವು ಮಾಡಿಕೊಳ್ಳುವುದು , ಮುರಿದುಕೊಳ್ಳುವುದು, ಪ್ಲಾಸ್ಟರ್ ಹಾಕಿಸಿ ಕೊಳ್ಳುವುದು ಸಾಮಾನ್ಯವಾದರೂ, ಮಕ್ಕಳ ಉತ್ಸಾಹ ಇದರಿಂದ ಕುಗ್ಗುವದಿಲ್ಲ. ಪಾಲಕರೂ ವಿರೋಧಿಸುವದಿಲ್ಲ. ಅಪೂರ್ವ ತಿಳುವಳಿಕೆ- ಸಹನೆಗಳಿಂದ ನಡೆದುಕೊಳ್ಳುತ್ತಾರೆ.

ಸ್ವತಂತ್ರ ಪ್ರವೃತ್ತಿ – ಆರ್ಥಿಕವಾಗಿಯೂ ಸ್ವತಂತ್ರವಾಗುವಂತೆ ಬಾಲಕರು ಸದಾ ಯತ್ನಿಸುತ್ತಾರೆ. ಅವರಿಗೆ ಬೇಕಾದ ಆಟಿಗೆ ಬಟ್ಟೆಬರೆಗಳಿಗಾಗಿ ತಾಯಿಯನ್ನು ಪೀಡಿಸಿ, ಆಕೆ ಪತಿಯನ್ನು ಹಂಗಿಸಿ ಅವನ್ನು ಕೊಡಿಸುವ ವಿಧಾನಗಳಿಲ್ಲ .ಸ್ವಸಂಪಾದನೆಯಿಂದ ಲೇ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಅಮೇರಿಕನ್ ಪಾಲಕರು ಪ್ರೋತ್ಸಾಹಿಸುತ್ತಾರೆ. ತಮ್ಮ ಮಕ್ಕಳು ವೃತ್ತಪತ್ರಿಕೆ ಹಂಚಿ, ಬೂಟ್ ಪಾಲೀಶ್ ಮಾಡಿ, ಕಾರು ತೊಳೆದು ಹಣ ಸಂಪಾದಿಸುವುದು ತಮಗೆ ಅವಮಾನವೆಂದು ತಿಳಿಯುವ ಬದಲಾಗಿ ಅಭಿಮಾನ ಪಡುತ್ತಾರೆ.ಈ ಹಣದಿಂದ ತಮಗೆ ಬೇಕಾದ ಚಿಕ್ಕ ಪುಟ್ಟ ಸಾಮಾನು ಗಳನ್ನು ಪಾಲಕರ ಮೇಲ್ವಿಚಾರಣೆಯಿಲ್ಲದೇ ಅವರೇ ಕೊಳ್ಳುತ್ತಾರೆ. ಒಮ್ಮೆ ಮೋಸಹೋದರೆ ಇನ್ನೊಮ್ಮೆ ಜಾಣರಾಗುತ್ತಾರೆಂದು ಪಾಲಕರ ತಿಳುವಳಿಕೆ. ನಾವು ನಮ್ಮ ಎಳೆಯರಿಗೆ ಮೂರು ಚಕ್ರದ ಟ್ರಾಯಸಿಕಲ್ ತರಬೇಕು ಎನ್ನುತ್ತಿರುವಾಗಲೇ ಅಲ್ಲಿಯವು ಬೈಸಿಕಲ್ ತರುವ ಹವಣಿಕೆಯಲ್ಲಿ ಇರುತ್ತವೆ! ಮಕ್ಕಳ ಗಳಿಕೆಯ ಒಂದು ಪಾಲು ಪ್ರತಿ ರವಿವಾರ ಧರ್ಮದ ನಿಧಿಗೆ ಸೇರುತ್ತದೆಯಲ್ಲದೇ ಪರ ರಾಷ್ಟ್ರಗಳು ವಿವಿಧ ನೈಸರ್ಗಿಕ ಅನಾಹುತಗಳಿಗೆ ಈಡಾದಾಗ ಮಕ್ಕಳೂ ದಾನ ಧರ್ಮ ಮಾಡುತ್ತವೆ. ಮಗ- ಮಗಳು ಎಂದು ಭೇದಭಾವ ಮಾಡದೇ ಅಲ್ಲಿಯವರು ಸರಿಸಮಾನತೆಯಿಂದ ಅವನ್ನು ಬೆಳೆಸುತ್ತಾರೆ. ಹುಡುಗರಿಗೆ ಇದ್ದ ಎಲ್ಲ ಅವಕಾಶಗಳೂ ಹುಡುಗಿಯರಿಗೆ ದೊರೆಯುತ್ತವೆ. ಅಂತೆಯೇ ಮಕ್ಕಳು ಸಂಗಾತಿಗಳನ್ನು ಆರಿಸುವಾಗ ಲಿಂಗಬೇಧವನ್ನು ಗಣಿಸುವದಿಲ್ಲ. ಬೆಳೆಯುತ್ತ ಹೋದಂತೆ ನಿಸರ್ಗವೇ ಆ ಭೇದಭಾವ ಕಲ್ಪಿಸಿಕೊಡುತ್ತದೆ. ಆ ಮಾತು ಬೇರೆ.

ನಿಸರ್ಗ ಪ್ರೇಮ- ಮಕ್ಕಳಲ್ಲಿ ನಿಸರ್ಗ ಪ್ರೇಮ ಬೆಳೆಸಲು ಅವನ್ನು ಕಾಡುಗಳಿಗೆ ಕರೆದೊಯ್ಯುವದು, ಗುಡ್ಡಬೆಟ್ಟಗಳನ್ನು ಏರಲು ಕಲಿಸುವದು ಮಾಡುತ್ತಾರೆ. ಮೀನು ಹಿಡಿಯುವದು, ಬೇಟೆಯಾಡುವದು ಅವರ ಮನರಂಜನಾ ವಿಧಾನಗಳು. ಹೀಗಾಗಿ ತಮ್ಮ ಪರಿಸರ, ಪಶು ಪಕ್ಷಿಗಳ ಬಗೆಗಿನ ಪ್ರತ್ಯಕ್ಷ ಜ್ಞಾನ ಮಕ್ಕಳಿಗೆ ದೊರೆಯುತ್ತದೆ. ಮನೆಯಲ್ಲಿ ನಾಯಿ ಬೆಕ್ಕು ಸಾಕುವದು ತೀರ ಸಾಮಾನ್ಯವಾದರೆ, ಹಿತ್ತಲಲ್ಲಿ ಗೂಡುಮಾಡಿ ಹಕ್ಕಿಗಳನ್ನುಸಾಕುವದು, ಮೀನು ಸಾಕುವದು ಮಾಡುತ್ತಾರೆ. ವಿರಳವಾದ ಪ್ರಾಣಿಗಳನ್ನು ಸಾಕುವವರೂ ಇದ್ದಾರೆ.ಹುಲಿಮರಿಗಳೊಂದಿಗೆ ಆಡುವ ಎಳೆಯರು, ಮೀನಿನಂತೆ ಮೊಸಳೆ ಮರಿಗಳನ್ನು ಸಾಕುವವರು, ಹಾವುಗಳನ್ನು ಪೋಷಿಸುವವರು, ಕೋತಿಗಳನ್ನು ಪಾಲಿಸುವವರೂ ಅವರಲ್ಲಿದ್ದಾರೆ. ಕೀಟಗಳನ್ನು ಕುತೂಹಲಪೂರ್ವಕವಾಗಿ ಅಭ್ಯಸಿಸುತ್ತಾರೆ. ನಮ್ಮ ಅದೇಷ್ಟೋ ಪ್ರಾಣಿಶಾಸ್ತ್ರ ಪಧವೀಧರರಿಗಿಂತ ಅಲ್ಲಿಯ ಮಕ್ಕಳಿಗೆ ಪ್ರಾಣಿಗಳ ಬಗ್ಗೆ ವ್ಯಾವಹಾರಿಕ ಜ್ಞಾನವಿರುತ್ತದೆಯೆಂದರೆ ಅತಿಶಯೋಕ್ತಿಯಾಗಲಾರದು. ಬಾಲ್ಯದಿಂದ ಕಪ್ಪೆಯಿಂದ ಕಜ್ಜಿ ಬರುತ್ತದೆ, ಹಲ್ಲಿ ವಿಷಾರಿ, ಓತಿಕಾಟ ದೇವರನ್ನು ಬಯ್ಯುತ್ತದೆ, ಬೆಕ್ಕು ಹಾಯ್ದರೆ, ಹಲ್ಲಿ ಲೊಚಗುಟ್ಟಿದರೆ ಅಪಶಕುನ. ಜೊಂಡಿಗ ಕಿವಿಯೊಳಗೆ ಹೊಕ್ಕು ಮಿದುಳು ತಿಂದು ಬಿಡುತ್ತದೆ… ಇತ್ಯಾದಿ ಮಾತುಗಳನ್ನು ಸ್ವತಃ ನಂಬುವದರ ಜೊತೆಗೆ, ಮಕ್ಕಳಿಗೆ ಹೇಳಿಕೊಡುವದರಿಂದ ನಮ್ಮಲ್ಲಿ ಪ್ರಾಣಿಗಳ ಬಗ್ಗೆ ಸಹಜವಾಗಿಯೇ ಪ್ರೀತಿ ಸಾಧ್ಯವಾಗುವುದಿಲ್ಲ. ಭೂತಪಿಶಾಚಿಗಳಿಗೆ ಹೆದರುವಂತೆ ಗುಡುಗು ಸಿಡಿಲುಗಳಿಗೆ ಮಕ್ಕಳು ಹೆದರಲು ನಾವೇ ಕಾರಣ.
ಈ ದೇಶದಲ್ಲಿ ಆಟವು ಪಾಠವೆಂಬಂತೆ, ಪಾಠವು ಕಾಟವೆಂಬಂತೆ ಕಲಿಸಲ್ಪಡುವದರಿಂದ ಅವುಗಳಲ್ಲಿ ಆಸಕ್ತಿ ಹುಟ್ಟುವದು ವಿರಳ ಅಮೇರಿಕನ್ನರಲ್ಲಿ ಪಾಠವನ್ನು ಆಟದಂತೆ ರಂಜಕವಾಗಿ ಮಾರ್ಪಡಿಸಿದ್ದರಿಂದ ಮಕ್ಕಳು ಶಾಲೆಯನ್ನು ಮನೆಯಂತೆಯೇ ಪ್ರೀತಿಸುತ್ತವೆ. ಶಿಕ್ಷಕರು ವಿದ್ಯಾರ್ಥಿಗಳ ಆಸಕ್ತಿಯ ಚಟುವಟಿಕೆಗಳತ್ತ ಲಕ್ಷ್ಯ ಕೊಡುವದರಿಂದ ಎಳೆಯರ ಗೆಳೆಯರಾಗಿಯೇ ಪರಿಣಮಿಸುತ್ತಾರೆ. ವಿದ್ಯಾರ್ಥಿಗಳು, ಸ್ವತಃ ಪಾಲನೆ-ಪೋಷಣೆ ಕೈಕೊಂಡು ಪ್ರಾಣಿ ಪ್ರಪಂಚದ ಗುಟ್ಟುಗಳನ್ನು ಅರಿಯಲು ಯತ್ನಿಸುತ್ತಾರೆ. ಇಂತಹ ಸಮಯದಲ್ಲಿ ಮಕ್ಕಳು ಎದುರಿಸಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವ ಪುಸ್ತಕಗಳು ಅವರ ವಾಚನಾಲಯಗಳಲ್ಲಿ ತುಂಬಿ ತುಳುಕುತ್ತಿರುತ್ತವೆ. ಬಡಿಗ, ಕಮ್ಮಾರರು ಬಳಸುವ ಸಲಕರಣೆಗಳು ಮಕ್ಕಳ ಬಳಕೆಗಾಗಿ ಇರುತ್ತವೆ. ಶಾಲೆಗೊಂದು ಇಜುಗೊಳ, ಒಳ ಹೊರಗೆ ಆಟದ ಬಯಲುಗಳು ಇದ್ದೇ ಇರುತ್ತವೆ. ನೃತ್ಯ ನಾಟಕಗಳಿಗೂ ಪ್ರೋತ್ಸಾಹ ಸಿಗುತ್ತದೆ. ಹೆಣ್ಣು ಪಾತ್ರ ವಹಿಸಲು ಪ್ರಮೇಯವೇ ಇಲ್ಲ, ಇಂಥ ಆಟಗಳಲ್ಲಿ ಭಾಗವಹಿಸಿದ್ದಕ್ಕೆಲ್ಲ ಗುಣಗಳು ಸಿಗುವದರಿಂದ ಯಾವದೇ ಪಾಠ, ಯಾವದು ಆಟವೆಂದು ಭೇದ ಕಲ್ಪಿಸುವದು ಕಷ್ಟ.
ಪೊಳ್ಳು ಆದರ್ಶ ಬೇಡ – ಅಮೇರಿಕನ್ ಮಕ್ಕಳ ಪಾಲನೆ ಪೋಷಣೆಗಳು ಜಗತ್ತಿನಲ್ಲಿ ಅತ್ಯುತ್ತಮ ಎಂದು ಯಾರೂ ತಿಳಿಯಬೇಕಾಗಿಲ್ಲ. ಅತಿ ಹೆಚ್ಚಿನ ಸ್ವಾತಂತ್ರ್ಯದಿಂದಾಗಿ, ದುಷ್ಟ ಚಟಗಳಿಗೆ ಬಲಿಯಾಗಿ, ಕವಲುದಾರಿ ಹಿಡಿಯುವವರೂ ಇದ್ದಾರೆ. ಇವರಲ್ಲಿ ಎಷ್ಟೋ ಜನ ದರೋಡೆ ಕೊಲೆ-ಸುಲಿಗೆಗಳ ತಂಡಕ್ಕೆ ಸೇರಿಕೊಳ್ಳುತ್ತಾರೆ. ಇಂಥ ಅಪವಾದಗಳು ನಮ್ಮಲ್ಲೂ ಇವೆ. ಬಹುಸಂಖ್ಯಾತರು ಕಳ್ಳ ಕಾಕರಿಗೆ, ದರೋಡೆಕೋರರಿಗೆ, ಸುಲಿಗೆಗಾರರಿಗೆ ಹೆದರುವ ಟೋಳ್ಳು ವ್ಯಕ್ತಿತ್ವ ಉಳ್ಳವರಾಗಿದ್ದರೂ ಎಲ್ಲ ಸನ್ನಿವೇಶಗಳನ್ನೂ ಎದುರಿಸುವ ಸಾಹಸಿಗಳು ನಮ್ಮಲ್ಲಿಯೂ ಬೆಳೆಯುತ್ತಾರೆ. ಆದರೆ ಅಂತರವಿಷ್ಟೇ: ನಮ್ಮಲ್ಲಿ ಗಟ್ಟಿತನ ಕಡಿಮೆ,ಟೊಳ್ಳುತನ ಹೆಚ್ಚು ಪ್ರಮಾಣದಲ್ಲಿ ಇದ್ದಾರೆ. ನಮ್ಮಲ್ಲಿಯ ಒಳ್ಳೇತನ ಬಿಟ್ಟುಕೊಡದೇ ಅಮೇರಿಕನ್ ಸುಸಂಸ್ಕೃತಿಯ ದುರ್ಬಲ ಅಂಶಗಳನ್ನು ನಮ್ಮದಾಗಿಸದೇ, ಧೈರ್ಯ, ಸ್ವಾತಂತ್ರ್ಯ, ಸಾಹಸ ವೃತ್ತಿಗಳನ್ನು ಮಕ್ಕಳಲ್ಲಿ ಬೆಳೆಸಲು ಉದ್ದೇಶಪೂರ್ವಕ ಯತ್ನಿಸಿದರೆ ನಮ್ಮದೂ ಉತ್ತಮ ಜನಾಂಗವಾದೀತು; ಟೊಳ್ಳು ಆದರ್ಶ, ಟೊಳ್ಳು ನಾಯಕರನ್ನು ಓಡಿಸಿ ರಾಷ್ಟ್ರವನ್ನು ಕಟ್ಟುವ ಕಳಕಳಿಯುಳ್ಳವರಿಗೆ ಅವಕಾಶವಾದೀತು.!