ಪಶು ಪಕ್ಷಿಗಳಲ್ಲಿ ಪರಿಸರ ಪ್ರಜ್ಞೆ- ಡಾ. ಕೃಷ್ಣಾನಂದ ಕಾಮತ

(ಕಾಮತರ ಪರಿಸರ ಪ್ರಜ್ಞೆ ಮಿಗಿಲಾಗಿತ್ತು. ಬುದ್ಧಿಶಾಲಿಯೆಂದು ಬೀಗುವ ಮಾನವನ ಸ್ವಾರ್ಥ ಕ್ರೌರ್ಯಗಳೊಂದಿಗೆ ಆತನ ಪರಿಸರ ಕುರಿತ ಅವನ ಅಜ್ಞಾನವನ್ನೂ ಈ ಕಿರಿ ಲೇಖನದಲ್ಲಿ ತೋರಿಸಿಕೊಟ್ಟಿದ್ದಾರೆ.ಬರಲಿರುವ ವಿನಾಶದ ಎಚ್ಚರಿಕೆಯ ಗಂಟೆಯೂ ಇಲ್ಲಿದೆ.) ಬೆಂಗಳೂರಿನ ಅಭಿನವ ಸಂಸ್ಥೆಯ ’ಕದಳಿವನ ಕರ್ಪೂರ’ (೧೯೯೬) ಸಂಕಲನದಿಂದ ಇದನ್ನು ಆಯ್ದುಕೊಳ್ಳಲಾಗಿದೆ.

ಲೇಸರ್, ಕಂಪ್ಯೂಟರ್, ಸೆಟೆಲೈಟ್ ಬಾಹ್ಯಾಕಾಶ ಉಡ್ಡಾಣಗಳೆಲ್ಲ ಎಂಥ ಅದ್ಭುತ ಆಧುನಿಕ ಮಾನವ ಸಾಧನಗಳೆಂದು ಅಭಿಮಾನ ಪಡುತ್ತಿರುವ ಮರುಕ್ಷಣದಲ್ಲಿಯೇ ಇದೇ ಅಪೂರ್ವ ಸಂಶೋಧಕನು ಮಿತಿ ಮೀರಿದ ಸುರಾಪಾನ, ಮೋಜಿಗಾಗಿಯೇ ಮಾದಕದ್ರವ್ಯಗಳ ಸೇವನೆ, ಹೆಚ್ಚುತ್ತಿರುವ ಕಾಮುಕ ವೃತ್ತಿಗಳು, ಹರಡುತ್ತಿರುವ ಏಡ್ಸ್ ಪಿಡುಗು, ಕಿಕ್ಕಿರಿದು ತುಂಬುತ್ತಿರುವ ಜನಜಂಗುಳಿ, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳ ಮೂಲಕ ಸರ್ವನಾಶದ ಹಾದಿಯನ್ನು ತುಳಿಯುತ್ತಿರುವದು ದುರಂತವೇ ಸರಿ. ಈ ಭೂಮಂಡಲದಲ್ಲಿ ಅತೃಪ್ತ ಜೀವಿಯೆಂದರೆ ಮಾನವನೊಬ್ಬನೇ ಏನೋ! ಮಾನವನ ಎಲ್ಲ ಸಮಸ್ಯೆಗಳೂ ಇಡೀ ವಿಶ್ವವನ್ನು ತನ್ನ ಪೀಳಿಗೆಗಳಿಂದಲೇ ತುಂಬಿಸುವ ಅತಿಯಾಸೆಯ ಹಂಬಲದಿಂದ ಉತ್ಪನ್ನವಾದವುಗಳು. ಕಾಲುಗಳನ್ನು ನಡೆಸಿ, ದೇಹಕ್ಕೆ ಆರೋಗ್ಯ ತಂದುಕೊಳ್ಳುವ ಬದಲಾಗಿ ವಾಹನಗಳಲ್ಲಿ ಓಡಾಡುವುದರಿಂದ, ಮೇರೆಯರಿಯದ ಲಾಭಕ್ಕಾಗಿ ಕಾರ್ಖಾನೆಗಳನ್ನು ಬೆಳೆಸಿರುವದರಿಂದ ಈ ವಾಹನ ಮತ್ತು ಕಾರ್ಖಾನೆಗಳಿಂದ ಏಕ ಪ್ರಕಾರವಾದ ವಿಷವಾಯು ಹೊರಹೊಮ್ಮುತ್ತ ಪರಿಸರವೆಲ್ಲ ಕಲುಷಿತವಾಗುತ್ತಿದೆ.ಇದರಿಂದಾಗಿ ಕ್ಷಯ, ಪ್ಲೂರಸಿ, ಕ್ಯಾನ್ಸರ್ ಮುಂತಾದ ರೋಗಗಳು ಹರಡುತ್ತಿವೆ. ಅತ್ಯಂತ ವಿಷಕಾರಿ ಕೀಟನಾಶಕ ರಾಸಾಯನಿಕ ಗಳನ್ನು ಎಗ್ಗಿಲ್ಲದೇ ಎಲ್ಲೆಡೆ ಬಳಸಲಾಗುತ್ತಿದೆ. ಇಷ್ಟಾದರೂ ಮಾನವನಿಗೆ ಇನ್ನಷ್ಟು ಆರಾಮ-ವಿರಾಮದ ಹಂಬಲ ಹೋಗಿಲ್ಲ.ಈ ಭೂಮಿಯ ಮೇಲೆ ಬದುಕಿನ ಅಧಿಕಾರ ಕೇವಲ ಮಾನವನಿಗೇ ಸೀಮಿತವಾಗಿಲ್ಲ. ಅಸಂಖ್ಯ ಸಹಜೀವಿಗಳೂ ಬಾಳಿ ಬದುಕಲೂ ಬಾಧ್ಯಸ್ಥರು. ಅವೆಲ್ಲವೂ ತಮ್ಮ ಪರಿಸರದ ನಿಯಮಾವಳಿಗಳನ್ನು ಚಾಚುತಪ್ಪದೇ ಪಾಲಿಸುತ್ತವೆ! ಎಂಬುದನ್ನು ಅರಿಯುವ ಪ್ರಯತ್ನವನ್ನು ಮಾಡಿದಲ್ಲಿ ಮನುಷ್ಯನೂ ಆರ್ಥಪೂರ್ಣ ಜೀವನ ನಡೆಸಲು ಸಾಧ್ಯವಾಗಬಹುದು.

ಶಕ್ತಿ ಸಾಮರ್ಥ್ಯಗಳೊಂದಿಗೆ ಬುದ್ಧಿಗೂ ಹೆಸರಾದ ಕಾಡಾನೆ , ಪ್ರಕೃತಿಯೊಂದಿಗೆ ಹಾಸುಹೊಕ್ಕಾಗಿ ಜೀವಿಸುತ್ತದೆ. ಕಾಡಿನಲ್ಲಿ ಹೇರಳವಾಗಿ ಲಭ್ಯವಿರುವ ಸೊಪ್ಪು, ಎಲೆ, ದಂಟುಗಳೇ ಅದರ ಮೃಷ್ಟಾನ್ನ. ಎಂದೂ ಮಾಂಸಾಹಾರಕ್ಕೆ ಎಳಸದ ಅದು ವರ್ಷದುದ್ದಕ್ಕೂ ಆಹಾರ ಒದಗುವಂತೆ ಮುನ್ನೆಚ್ಚರಿಕೆ ವಹಿಸುತ್ತದೆ. ಆನೆ ಒಂದೆಡೆ ಸ್ಥಾಯಿಯಾಗಿ ನೆಲೆಸಿ, ಅಲ್ಲಿಯ ಕಾಡನ್ನು ಮೆದ್ದು ಬರಿದೋ, ಬರಿದು ಮಾಡುವ ಬದಲು, ನೂರಾರು ಕಿಲೋಮೀಟರ್ ದೂರದ ಕಾಡುಗಳಲ್ಲಿ ಸಂಚರಿಸುತ್ತ ಉದರ ನಿರ್ವಹಣೆ ಮಾಡುವ ಜಾಣ. ಇದರಿಂದ ಮೊದಲು, ಮೆದ್ದು ಬರಿದಾದ ವೃಕ್ಷಗಳೆಲ್ಲ ಪುನಃ ಚಿಗಿತು ಆಹಾರ ಒದಗಿಸುತ್ತವೆ. ಆನೆ ಮಿತ ಸಂತಾನಿ, ಇಷ್ಟಾದರೂ ಹುಟ್ಟಿದ ಅದರ ಮರಿಗಳೆಲ್ಲ ಬದುಕಿ ಇರುವಂತಾಗಿದ್ದರೆ, ಅವುಗಳ ಆಹಾರ ಪೂರೈಕೆಗೆ ಅಸ್ತಿತ್ವದಲ್ಲಿರುವ ಯಾವತ್ತೂ ಕಾಡು, ವಾಸಕ್ಕಾಗಿ ಇಡೀಭೂಮಂಡಲವೂ ಸಾಲುತ್ತಿರಲಿಲ್ಲ! ಆನೆಯ ಬಳಗ ಹುಟ್ಟು ಸಾವುಗಳನ್ನು ಸಮತೋಲನ ದೃಷ್ಟಿಯಿಂದ ಸ್ವಾಗತಿಸುತ್ತದೆ. ಗಂಡೂ ಹೆಣ್ಣುಗಳಲ್ಲಿ ತಾರತಮ್ಯ ತೋರದೇ ಮರಿಗಳನ್ನು ಅತ್ಯಂತ ದಕ್ಷ ರೀತಿಯಿಂದ ಬೆಳೆಸುತ್ತವೆ.. ಆದರೆ ಕೋರೆಗಳಿಗಾಗಿ ಕೈಕೊಳ್ಳುವ ಹತ್ಯಾಕಾಂಡದಿಂದಾಗಿ ಹೆಣ್ಣಾನೆಗಳಿಗೆ ಗಂಡಾನೆಗಳ ಸಹವಾಸ ಒದಗದೇ ಆನೆಗಳ ಸಮಾಜದಲ್ಲಿ ದಾರುಣ ಅಲ್ಲೋಲ ಕಲ್ಲೋಲವನ್ನು ಉಂಟು ಮಾಡಿದ ಶ್ರೇಯಸ್ಸು ದಂತಚೋರ ಮಾನವನದ್ದು.

ಕ್ರೌರ್ಯಕ್ಕೆ ಹೆಸರಾದ ಹೆಬ್ಬುಲಿಯೂ ಮಾನವನೊಡನೆ ಹೋಲಿಸಿದರೆ ಸೌಮ್ಯಜೀವಿ. ಉದರನಿಮಿತ್ತ ಮಾತ್ರ ಇತರ ಜೀವಿಗಳನ್ನು ಬೇಟೆಯಾಡುವ ಅದು ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶನ ಅಥವಾ ಆಟಕ್ಕಾಗಿ ಎಂದೂ ಶಿಕಾರಿ ಮಾಡುವದಿಲ್ಲ. ತನ್ನ ವಾಸಸ್ಥಳವನ್ನು ಚಿಗರೆಕೊಂಬು, ಕಾಡೆಮ್ಮೆಗಳ ಶಿರದಿಂದ ಅಲಂಕರಿಸಿ ಬೀಗುವದಿಲ್ಲ. ಒಮ್ಮೆ ಮನಸ್ವೀ ಭೋಜನ ಮುಗಿಯಿತೆಂದರೆ ಎದುರಿಗೆ ಹುಲ್ಲೆ ಮೇಯುತ್ತಿದ್ದರೂ ಅದರ ಗೋಜಿಗೆ ಹೋಗದ ಅದು ತಾನಾಡಿದ ಬೇಟೆಯ ಮೇಲೆ ನರಿ, ನಾಯಿ, ತೋಳ ಹದ್ದುಗಳು ಭೋಜನ ಕೂಟ ನಡೆಯಿಸುತ್ತಿದ್ದರೂ ಎಂದೂ ಆಕ್ಷೇಪ ಎತ್ತುವುದಿಲ್ಲ . ಮಾನವನಿಗೆ ಎಂದಾದರೂ ಇಂಥ ಹೃದಯವಂತಿಕೆ ಸಾಧ್ಯವೇ?

ತಿಮಿಂಗಲವು ಭಾರೀ ಭಾರದ ಜಲಜೀವಿಯಾಗಿದ್ದರೂ ನೀರಿನಲ್ಲಿ ತೇಲಿಬರುವ ಅತಿ ಸೂಕ್ಷ್ಮ ಸಸ್ಯ ಪ್ರಾಣಿಗಳನ್ನು ಬೇರ್ಪಡಿಸಿ, ಅವುಗಳನ್ನೇ ಆಹಾರವಾಗಿ ಬಳಸುತ್ತದೆ. ಇದರಿಂದಾಗಿ ತಿಮಿಂಗಿಲಗಳು ಹೊಟ್ಟೆಯ ವ್ಯವಸ್ಥೆ ಮಾಡಿಕೊಳ್ಳುವದರ ಜೊತೆಗೆ ತಮ್ಮ ಪರಿಸರದ ನೈರ್ಮಲ್ಯವನ್ನು ಕಾಪಾಡುವದಕ್ಕೆ ನೆರವಾಗುತ್ತವೆ.. ಅಲ್ಲದೇ ಅವುಗಳ ಸಮಾಜದಲ್ಲಿ ಕಸದ ತೊಟ್ಟಿಗಳ ಅಥವಾ ಪೌರ ಕಾರ್ಮಿಕರ ಅವಶ್ಯಕತೆಯೇ ಇಲ್ಲ ! ಅವು ತುಂಬ ಸಾಧು ಪ್ರಾಣಿಗಳಾದ್ದರಿಂದ ವಿವಿಧ ವರ್ಗದ ಅಸಂಖ್ಯ ಮೀನುಗಳೊಂದಿಗೆ ತೇಲಾಡಿ ಸಹಬೋಜನ ನಡೆಸುತ್ತವೆ.ತನ್ನೊಂದಿಗೆ ಇತರ ಜಲಜೀವಿಗಳಿಗೂ ಜೀವಿಸುವ ಅನುಕೂಲತೆಗಳನ್ನು ಕಲ್ಪಿಸಿಕೊಡುವ ಉದಾರಜೀವಿ ಅದು.

ಕರ್ಣಕರ್ಕಶರೆಂದು ಖ್ಯಾತಿ ಪಡೆದ ಕಾಕರಾಜ ಸಮಾಜಕ್ಕೆ, ’ಪಂಚಾಯತ ರಾಜ್ಯ’ ವನ್ನು ಮೊಟ್ಟ ಮೊದಲು ಆಚರಣೆಯಲ್ಲಿ ತಂದ ಶ್ರೇಯಸ್ಸು ಸಲ್ಲಬೇಕು. ಸ್ಥಳೀಯವಾಗಿ ಏನಾದರೂ ಆಕ್ರಮ, ಅತ್ಯಾಚಾರಗಳು ನಡೆದರೆ, ತಂಡದ ಮುಖ್ಯಸ್ಥನು ಕಹಳೆಯೂದಿ ಪಂಚರನ್ನು ಆಮಂತ್ರಿಸಿ, ಸಭೆಯನ್ನು ಸೇರಿಸಿಯೇ ಬಿಡುತ್ತಾನೆ. ಅತಿಕ್ರಮ ಮಾಡಿದವರು, ವಂಚನೆ, ಮೋಸ ಕೈಕೊಂಡವರು ತಮ್ಮ ತಪ್ಪನ್ನು ಒಪ್ಪಿಕೊಂಡಾಗ, ಅವುಗಳನ್ನು ಕುಕ್ಕಿ ಒಂದೆರಡು ಗರಿ ಕಿತ್ತು ಬರುವಂತಾದರೆ ಶಿಕ್ಷಿಸಿ ನ್ಯಾಯ ದೊರಕಿಸಿ ಕೊಂಡಂತೆ ಅಪರಾಧಿಗಳ ಸುಳ್ಳನ್ನು ಸತ್ಯವೆಂದು ಸಾಧಿಸುವ ವಕೀಲರಿಲ್ಲದ, ಜೈಲು ಸೇರಬೇಕಾಗಿಲ್ಲದ ಮರಣದಂಡನೆ ಇಲ್ಲದ ಸಮಾಜ ಅದು.ಮಾನವನು ಇಷ್ಟಾದರೂ ಸತ್ಯವಂತನಾಗಿ ಬದುಕುವಂತಿದ್ದರೆ…….!

ಮಂದಮತಿಯಾದ ಮಂಡೂಕರಾಯನಿಗೂ ಮಳೆಯ ನೀರಿನ ಮಡುವಿನಲ್ಲಿ ಎಷ್ಟು ಮರಿಗಳನ್ನು ಹಿತಮಿತವಾಗಿ ಬೆಳೆಸಬೇಕೆಂದು ಗೊತ್ತು. ಅತಿ ಸಂತಾನವಾದರೆ ತಮ್ಮ ವರ್ಗವೆಲ್ಲ ಹಸಿವಿನಿಂದ ಬಳಲಬೇಕಾಗುವದೆಂದು ಸ್ವ ಸಂರಕ್ಷಣೆಗಾಗಿ ಮಿತಸಂತಾನದ ಸೂತ್ರವನ್ನು ಪಶು-ಪಕ್ಷಿಗಳೂ ತಪ್ಪದೇ ಪಾಲಿಸಿಕೊಂಡು ಬರುತ್ತವೆ. ಕಷ್ಟಪಟ್ಟು ಗಿಡ- ಗಂಟಿಗಳಲ್ಲಿ ಗೂಡು ಕಟ್ಟಿ, ನಾಲ್ಕು ಮೊಟ್ಟೆಗಳನ್ನು ಇಡುವ ಪುಟ್ಟ ಸೂರಕ್ಕಿ ಕಾವು ಕೊಡುವಾಗ, ಮರಿ ಬೆಳೆಯುವಾಗ, ಬೀಸುಗಾಳಿಯಿಂದ, ಕಾಗೆ-ಹಾವುಗಳಂತಹ ವೈರಿಗಳಿಂದ ಒಂದೆರಡು ಮರಿಗಳು ಮೃತಪಟ್ಟರೂ, ಮತ್ತೆ ತಿರುಗಿ ಮರಿ ಮಾಡುವುದರತ್ತ ಮನಸ್ಸು ಹಾಕುವದಿಲ್ಲ.

ವಿವಿಧ ಕಾರಣಗಳಿಗಾಗಿ ಕಾದಾಡುವದು ಪ್ರಾಣಿಗಳಲ್ಲಿ ಸಾಮಾನ್ಯ. ಹುಲಿಗಳು ಪರಚಿಕೊಂಡರೆ, ನಾಯಿಗಳು ಕಚ್ಚಿಕೊಳ್ಳು ತ್ತವೆ. ಗೋವುಗಳು ಕೋಡುಗಳಿಂದ ಹಣಿದುಕೊಂಡರೆ, ಆನೆಗಳು ಸೊಂಡಿಲಿನಿಂದ ಸದೆಬಡೆಯಲು ಯತ್ನಿಸುತ್ತವೆ.ಕೋಳಿಯು ಪ್ರತಿಸ್ಪರ್ಧಿಯ ಗೋಣು ಮುರಿಯಲು ಯತ್ನಿಸಿದರೆ ಹೆಬ್ಬಾವು ವೈರಿಯನ್ನು ನುಂಗಿಬಿಡಬಹುದು. ಅದರೆ ತನ್ನವರನ್ನೇ ಕೊಂದು ಯುದ್ಧದಲ್ಲಿ ವಿಜಯಿಯಾಗ ಬಯಸುವ ಮಾನವನಷ್ಟು ಕ್ರೌರ್ಯ ಯಾವ ಪ್ರಾಣಿಯಲ್ಲೂ ಇಲ್ಲ. ಅವನ ಇದೇ ಧೋರಣೆ ಮುಂದುವರಿದಲ್ಲಿ ಕೊನೆಗೆ ಆತ ಪೆಡಂಭೂತಗಳಂತೆ ತಾನೂ ನಶಿಸಿ ಹೋಗುತ್ತಾನೆ. ಇನ್ನಿತರ ಪಶು-ಪಕ್ಷಿಗಳು ಪರಿಸರ ದೊಂದಿಗೆ ಒಂದಾಗಿ ತಮ್ಮ ಸಮಸ್ಯೆಗಳಿಗೆಲ್ಲ ತಾವೇ ಪರಿಹಾರ ಕಂಡುಕೊಂಡಿವೆ ಎಂಬುದನ್ನು ಅರಿತು ತನ್ನ ದುಡುಕುತನವನ್ನು ಆತ ಕೈಬಿಟ್ಟರೆ ಸಕಲ ಜೀವಿಗಳು ಈ ಭೂಮಿಯ ಮೇಲೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.