ತಾನಸೇನನಿಂದ ಭೀಮಸೇನನವರೆಗೆ ಉತ್ತರಾದಿ ಸಂಗೀತವು ನಡೆದುಬಂದ ಹಾದಿ ಭಾಗ ೨

ಗೋಸ್ವಾಮಿ ಪರಂಪರೆಯ ಶ್ರೇಷ್ಠ ಸಂಗೀತ ಸಾಧಕ ವೃಂದಾವನದ ಸ್ವಾಮಿ ಹರಿದಾಸರು ಇದರಲ್ಲಿ ಅಗ್ರಗಣ್ಯರು. (೧೬ನೆಯ ಶತಮಾನ). ಇವರ ಸಮಾಧಿ ವೃಂದಾವನದಲ್ಲಿದೆ. ಈಗಲೂ ಅಲ್ಲಿ ಪ್ರತಿವರ್ಷ ಹರಿದಾಸ ಸ್ವಾಮಿಗಳ ಹೆಸರಿನಲ್ಲಿ ಸಂಗೀತ ಸಮಾರಾಧನೆ ನಡೆಯುತ್ತದೆ. ಕರ್ನಾಟಕದ ಸಂಗೀತದಲ್ಲಿ ಪುರಂದರದಾಸರ ಪದಗಳಿಗೆ ಸ್ಥಾನವಿದ್ದಂತೆ ಉತ್ತರಾದಿಯಲ್ಲಿ ಸ್ವಾಮಿ ಹರಿದಾಸರ ಧ್ರುವಪದಗಳನ್ನು ಈಗಲೂ ಜನ ತನ್ಮಯತೆಯಿಂದ ಹಾಡುತ್ತಾರೆ. ಬ್ರಜಭಾಷೆಯನ್ನು ರಾಜಾಶ್ರಯದಿಂದ ಲೋಕಾಶ್ರಯದೆಡೆಗೆ ಒಯ್ಯಲು ಬೈಜು, ಅವನ ಮಗ ಬಕ್ಷು, ಮತ್ತು ಹರಿದಾಸರು ತುಂಬಾ ಸಹಾಯ ಮಾಡಿದ್ದಾರೆ. ಅವರು ಪಂಜಾಬ್‌ದ ಸಾರಸ್ವತ ಸಮಾಜಕ್ಕೆ ಸೇರಿದ ಹರಿದಾಸ ಸ್ವಾಮಿಗಳ ಆಧ್ಯಾತ್ಮಿಕ ದೃಷ್ಟಿಕೋನವನ್ನಿಟ್ಟುಕೊಂಡೇ ಈ ಸಂಗೀತ ಪ್ರವೃತ್ತಿಯನ್ನು ಹುಲುಸಾಗಿ ಬೆಳೆಸಿದರು.
ಇನ್ನು ತಾನಸೇನ್‌ನ ಬಗ್ಗೆ ನೋಡುವ. ಅಕಬರ್‌ನು ತಾನಸೇನನನ್ನು ಕರತಂದಿದ್ದು ಗ್ವಾಲಿಯರದಿಂದ. ತಾನಸೇನನು ಆಗ್ರಾದ ಅಕಬರ್‌ನ ದರ್ಬಾರಿಗೆ ರೇವಾ ಮಾರ್ಗವಾಗಿ ಗ್ವಾಲಿಯರ್‌ನಿಂದ ಬಂದಾಗ ಮಧ್ಯವಯಸ್ಕನಾಗಿದ್ದ. ಅಕ್ಬರನು ತಾನಸೇನನಿಗೆ ಕೊಟ್ಟ ಬಿರುದು ‘ಕಂಠಾಭರಣ ವಾಣೀವಿಲಾಸ’ನೆಂದು. ತಾನಸೇನ್ ತೀರಿಕೊಂಡಾಗ ಅಕ್ಬರ್ ದುಃಖಾತಿರೇಕದಿಂದ ರೋದಿಸುತ್ತಾ ‘ಕಳೆದ ಸಾವಿರ ವರ್ಷಗಳಲ್ಲಿ ತಾನಸೇನನಂತಹ ಗಾಯಕ ಹುಟ್ಟಿರಲಿಲ್ಲ’ ಎಂದು ಹೇಳಿದ ಮಾತು ‘ಅಕಬರ್‌ನಾಮಾ’ ಪುಸ್ತಕದಲ್ಲಿ ಅಂಕಿತವಾಗಿದೆ. ಪ್ರಸಾರ ಮಾಧ್ಯಮಗಳಿಲ್ಲದ ಆ ಕಾಲದಲ್ಲಿ ನಿಜಕ್ಕೂ ತಾನಸೇನನ ಸಾವು ಸಾಂಸ್ಕೃತಿಕ ದೃಷ್ಟಿಯಿಂದ ಬಾದಶಹನಿಗೆ ಒಂದು ಆಘಾತವಾಗಿರಬೇಕು. ಜಹಾಂಗೀರನಾಮಾ, ಇಕ್ಬಾಲ್‌ನಾಮಾಗಳು ಜಹಾಂಗಿರ್ ಮತ್ತು ಶಾಹಜಹಾನನ ಆಳಿಕೆಯಲ್ಲಿ, ಪ್ರಸಿದ್ಧಿ ಪಡೆದ ಬೈಜು-ಬಕ್ಷುಗಳ ಸಾವಿರ ಧ್ರುವಪದಗಳ ‘ಸಹಸರಸ’ ಇವೆಲ್ಲ ಪ್ರಮಾಣವೆಂದು ತಿಳಿದುಕೊಂಡರೆ ತಾನಸೇನ ಹುಟ್ಟಿದ್ದು ೧೪೮೦-೧೪೯೦ರಲ್ಲಿ ಎಂಬುದು ಇತಿಹಾಸಕಾರರ ಹೇಳಿಕೆ. ತೇಲಂಗ ಅಥವಾ ಬ್ರಾಹ್ಮಣ ಕುಲೋತ್ಪನ್ನ ತಾನಸೇನ ಹುಟ್ಟಿಬೆಳೆದು ಬೈಜು, ಬಕ್ಷು ಹಾಗೂ ಶೇಖ ಮಹಮ್ಮದರಲ್ಲಿ ಸಂಗೀತವನ್ನು ಕಲಿತ. ಸಾಯುವಾಗ ಅವನ ವಯಸ್ಸು ೯೫. ಈತನ ಧರ್ಮಪರಿತ್ಯಾಗದ ವಿಷಯ ಇತಿಹಾಸಕಾರರಿಗೆ ಬಿಟ್ಟದ್ದು. ತಾತ್ಪರ್ಯ ಇಷ್ಟೆ. ತಾನಸೇನ, ತಾನಸೇನನಾಗಿ ಉಳಿದ, ಮಗ ಬಿಲಾಸಖಾನನಾದ (ಬಿಲಾಸ್ ಖಾನಿ ತೋಡಿ – ಬಿಲಾಸ್ ಖಾನನ ಹೆಸರನ್ನು ಅಜರಾಮರ ಮಾಡಿದ ಉತ್ತರಾದಿ ರಾಗ). ತಾನಸೇನನ ಮತ್ತೊಬ್ಬ ಮಗ ತಾನತರಂಗ್ ಖಾನನಾದ. ಮೊಮ್ಮಕ್ಕಳೆಂದರೆ ಸೌಹಿಲ್ ಸೇನ್ ಮತ್ತು ಸುಧೀನ್ ಸೇನ್. ತಾನಸೇನನ ಅಳಿಯ ಲಾಲಖಾನ್, ಶಾಹಜಹಾನನ ಕಾಲದಲ್ಲಿ ಒಬ್ಬ ಉತ್ತಮ ಹಾಡುಗಾರನೆಂದು ಹೆಸರು ಗಳಿಸಿದ. ಮುಂದೆ ಈ ವಂಶದಲ್ಲಿ ಗಂಡು ಮಕ್ಕಳಿಲ್ಲದ್ದರಿಂದ ಈ ಸೇನಿಯಾ ಪರಂಪರೆ ಅಂದರೆ ತಾನಸೇನನ ವಂಶಾವಳಿ ರಾಮಪುರ-ಸೆಹಸ್ವಾನ ಘರಾಣೆಯ ಈಗಿನ ಹಾಡುಗಾರ ಗುಲಾಮ ಮುಸ್ತಾಫಾ ಖಾನನ ತನಕ ಮುಟ್ಟುತ್ತದೆ. ತಾನಸೇನನ ಶಿಷ್ಯೋತ್ತಮರಿಂದ ಮೈಹರ್ ಘರಾಣೆಯು ಅಲ್ಲಾವುದ್ದೀನ ಖಾನನ ತನಕ ನಡೆದು ಬಂದು ಅನ್ನಪೂರ್ಣಾದೇವಿಯ ತನಕ ಮುಂದುವರಿಯುತ್ತದೆ. ತಾನಸೇನನ ಸಮಾಧಿ ಗ್ವಾಲಿಯರ್‌ನಲ್ಲಿದ್ದು ಪ್ರತಿವರ್ಷ ತಾನಸೇನ ಸಮಾರೋಹವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ.

ಜಹಾಂಗೀರನ ಕಾಲದಲ್ಲಿ ಲಾಲ್ ಖಾನ್, ಖ್ಯಾತ ಹಾಡುಗಾರ. ಶಾಹಜಹಾನನ ಕಾಲದಲ್ಲಿ ಕೂಡ ಲಾಲ್ ಖಾನನು ತನ್ನ ಮೊಮ್ಮಕ್ಕಳೊಂದಿಗೆ ಕಚೇರಿ ನಡೆಸುತ್ತಿದ್ದನಂತೆ. ಆಗ ಅವನಿಗೆ ೯೦ ವರ್ಷ ವಯಸ್ಸು. ತಾನಸೇನನ ಮತ್ತೊಬ್ಬ ಮರಿಮಗ ಖುಶಾಲ್ ಖಾನನು ಈಗಿನ ಕೆಲ ಕಲಾವಿದರಂತೆ ರಾಜಕೀಯ ಧುರೀಣರೊಂದಿಗೆ ನಿಕಟ ಸಂಬಂಧವನ್ನಿಟ್ಟುಕೊಂಡಿದ್ದ. ಔರಂಗಜೇಬನ ಕಾಲದಲ್ಲಿ ಈತ ಆಸ್ಥಾನ ಗಾಯಕನಾಗಿದ್ದ. ಅಂದರೆ, ಔರಂಗಜೇಬನು ತನ್ನ ಆಸ್ಥಾನದಲ್ಲಿ ಸಂಗೀತಕ್ಕೆ ಪೂರ್ಣವಿರಾಮ ಕೊಡುವವರೆಗೆ ಅಷ್ಟೆ!

ಗಜ಼ಲ್, ಕವ್ವಾಲಿ, ಧ್ರುವಪದಗಳೊಂದಿಗೆ ಈಗ ತುಂಬಾ ಪ್ರಚಾರದಲ್ಲಿದ್ದ ಖಯಾಲ್ ಪ್ರಕಾರದ ಪ್ರಸಿದ್ಧಿ ರಾಜಧಾನಿ ಆಗ್ರಾದಿಂದ ಸುತ್ತಮುತ್ತಲೂ ಹರಡಲು ಪ್ರಾರಂಭವಾದದ್ದು ಔರಂಗಜೇಬನ ಅಂತ್ಯಕಾಲದಲ್ಲಿ. ನಿಯಾಮತ್ ಖಾನ ಊರ್ಫ ಸದಾರಂಗನು ಹುಟ್ಟಿ ಬೆಳೆದದ್ದು ಔರಂಗಜೇಬನ ಮಗ ಬಹಾದೂರ್ ಖಾನನ ಆಳ್ವಿಕೆಯಲ್ಲಿ. ಬಹಾದೂರ್ ಖಾನನ ಮಗ ಮಹಮ್ಮದ್ ಶಾಹ ರಂಗಿಲೆಯ (೧೭೧೯-೧೭೪೮) ಕಾಲದಲ್ಲಿ ಸದಾರಂಗನು ಬಹಳ ಪ್ರಸಿದ್ಧಿಯನ್ನು ಪಡೆದ. ಈತನ ಅಂಕಿತವಿರುವ ಖಯಾಲಿನ ಬಂದಿಶ್‌ಗಳು (ಪದಗಳು) ಈಗಲೂ ಉತ್ತರಾದಿ ಪ್ರಣಾಲಿಯ ಹಾಡುಗಾರರು ಭಾವಪೂರ್ಣತೆಯಿಂದ ಪ್ರಸ್ತುತಪಡಿಸುತ್ತಾರೆ. ಸದಾರಂಗನ ಸೋದರಳಿಯ ಅದಾರಂಗನು ಅವನ ಶಿಷ್ಯೋತ್ತಮನು ಕೂಡ. ಬೀನ್‌ವಾದ್ಯವನ್ನು ಕೂಡ ಈತ ಅತ್ಯಂತ ಸಲೀಸಾಗಿ ನುಡಿಸುತ್ತಿದ್ದ. “ಮೂರು ತಂತಿಗಳ ಒಂದು ಅದ್ಭುತ ವಾದ್ಯ (ಸಿತಾರ್?) ಮೇಲೆ ಯಾವುದೇ ರಾಗ ರಾಗಿಣಿಗಳನ್ನು ಇತರರು ಹಾಡುವಂತೆ ಬಾರಿಸುತ್ತಿದ್ದ” .
೧೭೬೧ರ ಸುಮಾರಿಗೆ ನಾದಿರಶಾಹನ ದಾಳಿಯ ಬಳಿಕ ಮಹಮ್ಮದ ಶಾಹ ರಂಗೀಲೆಯ ಮನಸ್ಸು ಮೊದಲಿನಂತೆ ಕಲಾಸಕ್ತವಾಗಿ ಉಳಿಯಲಿಲ್ಲ. ಅವನ ಆಸ್ಥಾನದ ಗಾಯಕರೆಲ್ಲ ಒಬ್ಬೊಬ್ಬರಾಗಿ ಬಿಟ್ಟು ಬೇರೆ ಸಂಸ್ಥಾನಗಳಿಗೆ ಕೂಚುಮಾಡಿದರು. ಅವನ ಕೋಮಲಾಂಗಿ, ಪ್ರಿಯಸಖಿ, ಕಮಲಾಬಾಯಿ, ದಿಲ್ಲಿ ಬಿಟ್ಟು ಅವಧ ಸಂಸ್ಥಾನದೆಡೆ ಹೆಜ್ಜೆಯಿಟ್ಟರೆ, ಅದಾರಂಗನ ಪ್ರಿಯಶಿಷ್ಯ ಕರೀಮ್ ಸೇನ್ ಕರ್ನಾಟಕದ ಹೈದರಾಲಿಯ ಆಶ್ರಯಕ್ಕೆ ಬಂದ. ಅವನ ಮಗ ಹೈದರಾಬಾದಿನ ನಿಜಾಮನೆಡೆಗೆ ಹೋದ. ಹೀಗೆ, ರಾಮಪುರ್, ಹೈದರಾಬಾದ್, ಅವಧ್, ಬನಾರಸ್, ಇವೆಲ್ಲ ಹೊಸ ಸಾಂಸ್ಕೃತಿಕ ಕೇಂದ್ರಗಳಾದದ್ದು ನಾದಿರಶಾಹನ ಕೃಪೆಯಿಂದಲೇ ಎಂದು ಹೇಳಬಹುದು!

ಮಧ್ಯಪ್ರದೇಶದ ರೇವಾ ಸಂಸ್ಥಾನವು ತಾನಸೇನನ ಕಾಲದಿಂದಲೂ ಈವರೆಗೆ ಅಂದರೆ ೧೯೭೦ರ ತನಕ ಕೆಲ ಕಲಾವಿದರಿಗೆ ಸಂಬಳ ಕೊಡುತ್ತಿದ್ದುದಕ್ಕೆ ದಾಖಲೆಗಳಿವೆ. ಈ ಸಂಸ್ಥಾನದ ವಿಶ್ವನಾಥ ಸಿಂಹ, ಕಾಶಿ ನರೇಶ್ ಉದಿತ್ ನಾರಾಯಣ್, ರಾಮಪುರದ ಅಹಮ್ಮದ್ ಅಲಿ ಮತ್ತು ಲಖನೌದ ವಾಜಿದ್ ಅಲಿ ಇವರೆಲ್ಲ ಹತ್ತೊಂಬತ್ತನೇ ಶತಮಾನದಲ್ಲಿ ಉತ್ತರಾದಿ ಪ್ರಣಾಲಿಗೆ ಆಶ್ರಯವನ್ನು ಕೊಟ್ಟ ಗುಣಗ್ರಾಹಿಗಳು. ದಿಲ್ಲಿಯ ಪತನದಿಂದ ಈ ಎಲ್ಲಾ ಹೊಸ ಕೇಂದ್ರಗಳು ಶಕ್ತಿಶಾಲಿಗಳಾದವು. ಅಂತೆಯೇ ಠುಮರಿ, ದಾದರಾ ಪ್ರಕಾರಗಳು ಕಥಕ್ ನೃತ್ಯದೊಂದಿಗೆ ಹೆಜ್ಜೆ ಹಾಕಿ ಮುಂದೆ ಬಂದವು. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ದಿಲ್ಲಿಯ ತಾನರಸ್ ಖಾನ್ ತುಂಬಾ ಹೆಸರು ಗಳಿಸಿದ್ದರು. ತಾನರಸ ಖಾನರ ಅಸಂಖ್ಯ ಶಿಷ್ಯಸಂಪತ್ತಿಯಲ್ಲಿ ಅವರ ಮಗ ಉಮರಾವ್ ಖಾನ್, ಈ ರೂಢಿಯನ್ನು ನಡೆಸಿಕೊಂಡು ಹೋದರೂ ತಾನ್‌ಗಳ ಜಟಿಲತೆಯೇ ರಂಜಕತೆಯ ಮುಖ್ಯಭಾಗವೆಂದು ತಿಳಿದುಕೊಂಡು, ಅದನ್ನೇ ರಿಯಾಜು ಮಾಡಿ ರಾಗರಂಗಗಳನ್ನು ಬದಲಾಯಿಸಿದುದರಿಂದ ಈ ಘರಾಣೆ ಮುಂದೆ ನಾಸೀರ್ ಅಹಮರ್ ಖಾನರೊಂದಿಗೆ ಲುಪ್ತವಾಯಿತು. ಆದರೆ ವಾದ್ಯ ಸಂಗೀತ ಸಂಪ್ರದಾಯದಲ್ಲಿ ಬಾರಿಸುವ ಕಲಾವಿದರು ನಮ್ಮಲ್ಲಿ ಇನ್ನೂ ಇದ್ದಾರೆ. ಕಾಶಿಯ ಸುಪ್ರಸಿದ್ಧ ಬಿಸ್ಮಿಲ್ಲಾಖಾನರು ಶಹನಾಯಿ ನವಾಜ ಅಹಮ್ಮದ ಅಲಿ ಪರಂಪರೆಯವರು……

to be continued