ತಾನಸೇನನಿಂದ ಭೀಮಸೇನನವರೆಗೆ ಉತ್ತರಾದಿ ಸಂಗೀತವು ನಡೆದುಬಂದ ಹಾದಿ ಭಾಗ ೩

ಹಡ್ಡು-ಹಸ್ಸುಖಾನ್ ಗ್ವಾಲಿಯರವಾಲೆ:  ಭೀಮಕಾಯ ಹೊತ್ತ ಈ ಬಂಧುಗಳು ತಂದೆ ನಥನ್ ಖಾನರಿಂದ ಶಿಕ್ಷಣ ಪಡೆದರು. ಇವರ ಮೊಟ್ಟ ಮೊದಲಿನ ಶಿಷ್ಯರೆಂದರೆ ಶಂಕರ ಪಂಡಿತ, ದೀಕ್ಷಿತ, ಬಾಲಗುರು ಜೋಶಿ ಮೊದಲಾದವರು. ಶಂಕರ ಪಂಡಿತರು ಅನೇಕ ಶಿಷ್ಯರಿಗೆ ತರಬೇತಿಯನ್ನು ನೀಡಿದರು. ವಾಸುದೇವ ಜೋಶಿಯ ಜೊತೆ ಬಾಳಕೃಷ್ಣ ಈಚಲಕರಂಜೀಕರ ಅವರು ಈ ಪರಂಪರೆಗೆ ಸೇರಿದವರು.

ಕವ್ವಾಲಿ ಎಂದರೆ ಸೂಫಿ ಭಕ್ತಿ ಸಂಗೀತ, ಇಸ್ಲಾಮ್ ಧರ್ಮದ ಸೂಕ್ತಿಪಠಣದ ಭಕ್ತಿಸಂಗೀತ. ಅರಬ್ಬಿ ಭಾಷೆಯಲ್ಲಿ ಕೌಲ ಅಂದರೆ ಸೂಕ್ತಿ, ಸುಭಾಷಿತ. ಕೌಲ ಹಾಡುವವರೆಲ್ಲ ಕವ್ವಾಲರು (ಅಮೀರ ಖುಸ್ರೋ ಹೇಳಿದ್ದು). ಹಿಂದೂಗಳೂ ಇದರಲ್ಲಿ ಭಾಗವಹಿಸಿ ಪ್ರಖ್ಯಾತರಾಗಿದ್ದರು. ಶಂಕರ ಶಂಭು ಕವ್ವಾಲರು ೧೯೫೦-೭೦ರಲ್ಲಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಜಯಭೇರಿ ಹೊಡೆದು ಬಂದಿದ್ದರು. ಗ್ವಾಲಿಯರ ಪರಂಪರೆಯವರಲ್ಲಿ ಈ ಕವ್ವಾಲ ಬಚ್ಚೆಯವರಿಗೆ ಉನ್ನತ ಸ್ಥಾನವಿದೆ. ಈ ಕವ್ವಾಲ ಬಚ್ಚೆಯರಲ್ಲಿ ಬಡೇ ಮಹಮ್ಮದ ಖಾನ ಕವ್ವಾಲ ಬಚ್ಚೆ, ನಿಯಾಮತ ಖಾನರಿಂದ ತಾಲೀಮು ಪಡೆದಿದ್ದರು. ಮುಂದೆ ಈ ಕವ್ವಾಲ ಪದ್ಧತಿ ಫೈಯಾಜ ಖಾನ ಆಗ್ರಾವಾಲೆ ಅವರ ಮೊಮ್ಮಗ, ರಂಗೀಲೆ ಘರಾಣೆಯ ಗುಲಾಮ ರಸೂಲರಿಂದ ವಿಕಸಿತಗೊಂಡಿತು. ಈ ಕವ್ವಾಲ ಬಚ್ಚೆಯವರ ರೂಢಿಯನ್ನು ಉಳಿಸಿಕೊಂಡು ಮುಂದೆ ಬಂದವರೆಂದರೆ ಹಡ್ಡು-ಹಸ್ಸು ಖಾನ್ ಬಂಧುಗಳು. ಖ್ಯಾಲ್ ಪ್ರಕಾರದ ಅಧ್ವರ್ಯುಗಳೆಂದು ಹೆಸರು ಮಾಡಿದರು. ಅಲ್ಲಾದಿಯಾ ಖಾನರ ಚರಿತ್ರೆಯಲ್ಲಿ ಅವರು ೧೫ ವರ್ಷದವರಿದ್ದಾಗ ಹಡ್ಡುಖಾನರ ಗಾಯನದ ಬಗ್ಗೆ ತಾವು ‘ಅವರ ಮಂದ್ರಸಪ್ತಕದ ತಾನಪೂರ್ಣ ‘ಪಲ್ಟಿ’ಯನ್ನು ಕೇಳಿ ಮಂತ್ರಮುಗ್ಧನಾಗಿದ್ದೆ’ ಎಂದು ಬರೆಯಲಾಗಿದೆ. ರಾಜಾ ಭೈಯ್ಯಾ ಪೂಛ್‌ವಾಲೆ, ಓಂಕಾರನಾಥ ಠಾಕೂರ್, ಕೃಷ್ಣರಾವ್ ಶಂಕರ ಪಂಡಿತ – ಇವರೆಲ್ಲ ಇದೇ ಪ್ರಣಾಲಿಗೆ ಸೇರಿದವರು. ರಾಮಕೃಷ್ಣ ಬುವಾ ವಝೆ, ಧಾರವಾಡದ ಗುರುರಾವ್ ದೇಶಪಾಂಡೆ, ಬಿ.ಆರ್. ದೇವಧರ್ ಮೊದಲಾದವರು.

ಇವರಲ್ಲಿ ಏಕಮೇವಾದ್ವಿತೀಯರೆನಿಸಿಕೊಂಡ, ಕರ್ನಾಟಕದ ಸೂಳೆಭಾವಿಯಲ್ಲಿ ಹುಟ್ಟಿ ಮುಂದೆ ಮಧ್ಯಪ್ರದೇಶದ ದೇವಾಸವನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡ ಕುಮಾರ ಗಂಧರ್ವ ಊರ್ಫ ಶಿವಪುತ್ರ ಕೊಂಕಾಳಿಯವರ ಕಾರ್ಯ ಮಹತ್ತರವಾದದ್ದು. ಈ ಘರಾಣೆಯ ಕೆಲ ವೈಶಿಷ್ಟ್ಯಗಳನ್ನು ತಮ್ಮದನ್ನಾಗಿ ಮಾಡಿಕೊಂಡರೂ ಕ್ಷಯರೋಗದಿಂದಾಗಿ ತಮ್ಮ ಪುಪ್ಪುಸದ ಒಂದು ಭಾಗವನ್ನು ಕಳೆದುಕೊಂಡರೂ ತಮ್ಮ ‘ಅಪೂರ್ಣ’ ಶಾರೀರಕ್ಕೆ ಹೊಂದುವಂತೆ, ಇಡೀ ಸಂಗೀತ ಪ್ರಣಾಲಿಯನ್ನೇ ಮಣಿಸಿದ ಅದಮ್ಯಶಕ್ತಿಯ, ಸ್ವಯಂಭೂ ಗಾಯಕರು ಅವರು! ಇವರ ಮಗ ಮುಕುಲ ಶಿವಪುತ್ರ ಮತ್ತು ಮಗಳು ಕಲಾಪಿನಿ ಈ ‘ಕುಮಾರ ಪ್ರಣಾಲಿ’ಯನ್ನು ಮುಂದುವರಿಸಿದ್ದಾರೆ.

ಹೀಗೆಯೇ ಮತ್ತೊಬ್ಬ ಮೇರುವ್ಯಕ್ತಿ ಎಂದರೆ ಇನಾಯತ್ ಹುಸೇನ್ ಖಾನ್. ಆಗಿನ ಕಾಲದ ಪದ್ಧತಿಯಂತೆ ಮಗನಿಗಾಗಿ ‘ಪೂರಿ ತಾಲೀಮ್’, ಮನೆಯ ಅಳಿಯನಿಗಾಗಿ ‘ಆಧಿ ತಾಲೀಮ್’, ಹಾಗೂ ಮಿಕ್ಕಿದ ಸಂಗೀತಜ್ಞಾವೆಲ್ಲ ಶಿಷ್ಯವೃಂದಕ್ಕೆಲ್ಲ್ಲಾ ಮೀಸಲಾಗಿತ್ತು. ಪುಣ್ಯಕ್ಕೆ ಬಹಾದೂರ್ ಖಾನರ ಶಿಷ್ಯ ಮತ್ತು ಅಳಿಯನೆಂದರೆ ಇನಾಯತ್ ಹುಸೇನ್. ಇವರಿಂದಲೇ ವಿಷ್ಣು ನಾರಾಯಣ ಭಾತ್‌ಖಂಡೆಯವರು ಸಂಗೀತ ಕಲಿತರು ಮತ್ತು ೨೦ನೆಯ ಶತಮಾನದ ಸಂಗೀತದ ಪಾಣಿನಿ ಎಂದು ಹೆಸರು ಗಳಿಸಿದರು, ಘರಾಣಾದ ನಾಲ್ಕು ಗೋಡೆಗಳಲ್ಲಿ ಬಂದಿಯಾಗಿದ್ದ ಮತ್ತು ಕೇವಲ ರಾಜಾಶ್ರಯ ಪಡೆಯುತ್ತಿದ್ದ, ಉತ್ತರಾದೀ ಸಂಗೀತವನ್ನು ಸಾಮಾನ್ಯರಿಗೆ ಅರ್ಥವಾಗಿಸುವಂತಹ ಮಹತ್ಕಾರ್ಯವನ್ನು ಮಾಡಿದರು. ಭಾತ್‌ಖಂಡೆ ೧೫ ವರ್ಷದವರಾಗಿದ್ದಾಗ ಇನಾಯತ್ ಖಾನರಿಂದ ಬೀನ್‌ವಾದ್ಯವನ್ನು ಕಲಿಯುತ್ತಿದ್ದರಂತೆ. ಇನಾಯತ್ ಹುಸೇನ್‌ರ ವೃತ್ತಿಪರ ಶಿಷ್ಯರೆಂದರೆ ರಾಮಕೃಷ್ಣ ಬುವಾ ವಝೆ, ನಜೀರ್ ಖಾನ್ ಭೆಂಡಿ ಬಝಾರವಾಲೆ (ಮುಂಬಯಿ), ಹಾಗೂ ಈಗಿನ ಸರೋದ್ ಗುರು ಅಮ್ಜದ ಅಲಿಯವರ ತಂದೆ ಹಫೀಜ್ ಖಾನ್.

ಆಗ್ರಾ ಘರಾಣೆ: ಈ ಮನೆತನದ ಮೂಲ, ಗ್ವಾಲಿಯರ್ ಘರಾಣೆಯೊಂದಿಗೆ ಇದೆ. ಹಾಜಿ ಸುಜಾನ ಈ ಮನೆತನದ ಮೂಲಪುರುಷ ಗೊಗ್ಗರು ಗಂಟಲಿನ ಘಗ್ಗೆ ಖುದಾ ಬಕ್ಷ್, ತನ್ನ ಶಾರೀರದ ನ್ಯೂನತೆಯನ್ನು ಮೊದಲೇ ಕಂಡುಕೊಂಡಿದ್ದರು. ಧ್ರುವಪದದ ಆಲಾಪನೆಯ ಅತಿ ಮಂದಗತಿ ತನಗೆ ಸಾಧ್ಯವಾಗದೆಂದು ತಿಳಿದು, ಗ್ವಾಲಿಯರಿಗೆ ಬಂದು, ಪೀರಬಕ್ಷನ ಶಿಷ್ಯನಾಗಿ, ಖಯಾಲ್ ಕಲಿತು ಅತ್ಯುತ್ತಮ ಗಾಯಕನೆಂದೆನಿಸಿಕೊಂಡರು. ತಂದೆಯವರ ಬದಿಯಿಂದ ರಂಗೀಲೆ ಘರಾಣೆಯ, ಹಾಗೂ ತಾಯಿಯವರ ಕಡೆಯಿಂದ ಆಗರಾ ಮನೆತನಕ್ಕೆ ಸೇರಿದವರು. ಹೀಗಾಗಿ, ಫೈಯ್ಯಾಜ್ ಖಾನರ ಗಾಯನದಲ್ಲಿ ಆಗ್ರಾ ಘರಾಣೆಯ ಮನೆತನದ ವೈಶಿಷ್ಟ್ಯಗಳು ಕೊಂಚ ಬದಲಾದವು. ಫಯ್ಯಾಜ್ ಖಾನರು (೧೮೮೬-೧೯೫೦) ಮೊದಲಿಗೆ ಬರೋಡಾ ಸಂಸ್ಥಾನದಲ್ಲಿದ್ದು ಆಗ್ರಾ ಮನೆತನದ ಪ್ರಭಾವ ಭಾರತದಾದ್ಯಂತ ಬೀರುವುದಕ್ಕೆ ಇಡೀ ಭಾರತ ಸಂಚಾರ ಮಾಡಿ ಕಚೇರಿಗಳನ್ನು ನಡೆಸಿದರು. ಮೈಸೂರು ಸಂಸ್ಥಾನದಲ್ಲಿ ಪ್ರತಿವರ್ಷ ದಸರಾ ಉತ್ಸವದಲ್ಲಿ ಹಾಡುವ ಪರಿಪಾಠವಿಟ್ಟುಕೊಂಡು ಮೈಸೂರು ಅರಸರಿಂದ ‘ಅಫತಾಬ್-ಎ-ಮೌಸೀಕಿ’ ಎಂಬ ಬಿರುದನ್ನೂ ಪಡೆದರು. ಭಾತ್‌ಖಂಡೆಯವರು ಉತ್ತರಾದಿ ಸಂಗೀತ ಪ್ರಸಾರಕ್ಕಾಗಿ ಏರ್ಪಡಿಸಿದ ೪-೫ ಸಂಗೀತ ಉತ್ಸವಗಳಲ್ಲಿ ಫೈಯ್ಯಾಜ್ ಖಾನರು ತಪ್ಪದೇ ಭಾಗವಹಿಸುತ್ತಿದ್ದರು. ಫೈಯ್ಯಾಜ್ ಖಾನ ಸಾಹೇಬರನ್ನು ಉತ್ತರಾದಿ ಸಂಗೀತದ ಆಗ್ರಾ ಪರಂಪರೆಯ ‘ಯುಗಪುರುಷ’ರೆಂದೇ ತಿಳಿಯಬೇಕು. ಇವರ ಶಿಷ್ಯರಲ್ಲಿ ಬೆಂಗಳೂರಿನ ರಾಮರಾವ್ ನಾಯಕ, ಆತಾ ಹುಸೇನ್, ಪಂಡಿತ್ ರತನಜನPರ್ ಮತ್ತು ಆಗ್ರಾ ಮನೆತನ ಮುಂದೆ ನಡೆಸಿಕೊಂಡು ಹೋಗುವ ಭಾರವನ್ನು ಹೊತ್ತ ವಿಲಾಯತ್ ಹುಸೇನ್ ಖಾರು ಇದ್ದಾರೆ. ಇವರ ಬಳಿಕ ಇವರ ಬಂಧು ಖಾದೀಮ್ ಹುಸೇನ್ ಖಾನರು ಈ ಸಂಗೀತ ಮನೆತನದ ಮುಖ್ಯಸ್ಥರಾದರು. ಪಂಡಿತ್ ದಿನಕರ ಕಾಯ್ಕಿಣಿ, ಆಚಾರ್ಯ ಎಸ್.ಸಿ.ಆರ್. ಭಟ್ಟ ಇವರೆಲ್ಲ ಶ್ರೀ ಕೃಷ್ಣ ರತನಜಕರರಿಂದ ಶಿಕ್ಷಣವನ್ನು ಪಡೆದು ನೂರಾರು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ್ದಾರೆ. ಸ್ವಾಮಿ ವಲ್ಲಭದಾಸರೂ ಆಗ್ರಾ ಸಂಗೀತ ಮನೆತನದವರು…..

to be continued