ಡಾಲಿ -ಚೀನ ದೇಶದ ಗ್ರಾಮೀಣ ಜೀವನದ ಒಳನೋಟ

ಚೀನದ ಆಗ್ನೇಯ ದಿಕ್ಕಿನಲ್ಲಿರುವ ಯುನಾನ ಪ್ರಾಂತದ ಸಾಂಸ್ಕೃತಿಕ ಕೇಂದ್ರವಾದ ಡಾಲಿ ಎಂಬ ಒಂದು ಊರನ್ನು ಭೇಟಿಯಾಗುವ ಸುಸಂಧಿ ಒದಗಿತು. ನಮ್ಮ ಮಗಳು ಅಲ್ಲಿಯ ವಿಶ್ವವಿದ್ಯಾಲಯದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಶಿಕ್ಷಿಕೆ ಯಾಗಿದ್ದಳು.ಅವಳ ಆಗ್ರಹಕ್ಕೆ ಮಣಿದು ನಾವು ಹೊರಡುವ ಸಿದ್ಧತೆ ಮಾಡುವಾಗ ನಮ್ಮ ಆಪ್ತ ಸ್ವಕೀಯರು, ಚೈನಾಗೆ ಹೋಗುತ್ತೇವೆ ಅಂದ ತಕ್ಷಣ’ ಒಹೊ ಬೈಜಿಂಗ, ಶಾಂಘಾಯ್ ಗೆ ಹೋಗುತ್ತಿರೋ, ಹೊಂಗ ಕೊಂಗ ತುಂಬ ಚೆನ್ನಾಗಿದೆಯಂತೆ ಅಲ್ಲಿಗೆ ಪ್ರಯಾಣವೇ’ ಎಂದು ಕೇಳುವವರೇ ಜಾಸ್ತಿ. ಜಗತ್ತಿನ ಎಲ್ಲ ಮೆಟ್ರೊ ಸಿಟಿಗಳು ಸಾಮಾನ್ಯವಾಗಿ ಒಂದೇ ತರಹ ಇರುತ್ತವೆ. ವ್ಯಾಪಾರದ ಹಾಗೂ ವಾಣಿಜ್ಯದ ಸಾಮಾನು ಸರಕುಗಳಿಂದ ಥಳಳಿಸುವ, ವಿವಿಧ ವಸ್ತುಗಳನ್ನು ಮಾರಾಟಮಾಡುವ ಮಹಾನ ಮಾಲಗಳು, ಝಗ  ಝಗಿಸುವ ಅಂಗಡಿಗಳು ಹಾಗೂ ಅಲ್ಲಿಯ ಕಣ್ಣು ಸೆಳೆಯುವ ವಸ್ತುಗಳು ಮಹಾನ್ ಖರೀದಿಯ  ಮೋಹದ ಜಾಳಿನಲ್ಲಿ ಸಿಕ್ಕಿ ಹಾಕಿ ಕೊಂಡರೆ ಹೊರ ಬರುವದು ಬಲು ಕಷ್ಟ. ಗಗನೆತ್ತರದಷ್ಟು ಕಟ್ಟಿದ ಸುಂದರ ಇಮಾರತುಗಳು, ಅತ್ಯಾಧುನಿಕ ಹಾಗೂ ಅದ್ಭುತವಾದ ಮೆಟ್ರೊ ಟ್ರೈನಗಳು, ಗಿಜಿಬಿಜಿ ಜನಸಂದಣಿ ಇತ್ಯಾದಿ ಇವೆಲ್ಲ ಮಾಮೂಲಾಗಿ ಇರುತ್ತವೆ. ಆದರೆ ನಾವು ಗದ್ದಲ ಗಡಿಬಿಡಿಯಿಲ್ಲದ, ಶಾಂತ ಹಾಗೂ ಪ್ರಸನ್ನತೆಯಿಂದ ಕೂಡಿದ ಸ್ಠಳಕ್ಕೆ ಹೋಗಿ ದಣಿವಾರಿಸಿ ಕೊಂಡು, ತನ ಮನದಲ್ಲಿ ತಾಜಾತನ ತುಂಬಿ ತಂದ ನೆಮ್ಮದಿ ನಮಗಿತ್ತು. ಗ್ರಾಮೀಣ ಹಾಗೂ ಆಧುನಿಕತೆಯ ಸಂಗಮವಾಗಿದ್ದ ಡಾಲಿಯಲ್ಲಿ ವಿಶ್ವವಿದ್ಯಾಲಯದ ಕೆಂಪಸ್, ಅಲ್ಲಿಯ ಆಧುನಿಕ ಪೇಟೆ ಒಂದು ಕಡೆ, ಇನ್ನೊಂದೆಡೆ ಹಳ್ಳಿಯ ವಾತಾವರಣ, ಪರ್ವತ ಶ್ರೆಣಿಗಳ ಮರೆಯಲ್ಲಿ ಎಲ್ಲೆಡೆ ಹಸಿರು ಪೈರಿನಿಂದ ನಳಿನಳಿಸುವ ಹೊಲ ಗದ್ದೆಗಳು ಬಿಡುವಿಗಾಗಿ ಬಂದ ಪ್ರಯಾಣಿಕನಿಗೆ ಸ್ವಾಗತಿಸಿದವು. ಇಲ್ಲಿಯ ಹಳ್ಳಿಗಳ ರಸ್ತೆ, ಸಾರಿಗೆ ವ್ಯವಸ್ಥೆ, ಸ್ವಚ್ಚತೆ, ಹಾಗೂ ಶಿಸ್ತಿನ ಸಂಘಟನೆ ಕಂಡು ನಾವು ಬೆರಗಾದೆವು.

ಡಾಲಿಯ ಈ ಸುಂದರ ತಾಣದಲ್ಲಿ ನಮಗೆ ಆಕರ್ಷಿಸಿದ ಹಾಗೂ ಬಲು ಮೆಚ್ಚುಗೆಯಾದ ಹತ್ತು ವಿಷಯಗಳನ್ನು ಇಲ್ಲಿ ಹೇಳಲು ಇಷ್ಟ ಪಡುತ್ತೇನೆ.

೧.ಅತಿ ಮನೋಹರವಾದ ನಿಸರ್ಗ-

ಮೂರುವರೆ ಸಾವಿರ ಮಿಟರ್ ಎತ್ತರದ ಚಾನಶಾನ ಪರ್ವತ ಶ್ರೇಣಿಗಳು ಚಳಿಗಾಲದಲ್ಲಿ ಹಿಮದಿಂದ ಆಚ್ಚಾದಿತವಾಗಿ ಡಾಲಿಯನ್ನು ತಂಪಾಗಿ ಇಟ್ಟಿರುತ್ತದೆ. ಕಿವಿಯ ಆಕಾರದ ರಮಣೀಯವಾದ ಎರ್-ಹಾಯ ಬಲು ದೊಡ್ಡ ಸರೋವರ. ಇನ್ನು ರಸ್ತೆಯ ಅಕ್ಕಪಕ್ಕದಲ್ಲಿ ನಳನಳಿಸುವ ಹಸಿರು ಪೈರು ಅದರ ಮಧ್ಯದಲ್ಲಿ ಸಾಸಿವೆಯ ಹಳದಿ ಹೂವುಗಳು ಸೂರ್ಯ ಕಿರಣದಲ್ಲಿ ಬಂಗಾರದಂತೆ ಹೊಳೆಯುತ್ತವೆ. ಪರ್ವತ ಶ್ರೇಣಿಗಳ ಮಧ್ಯದಿಂದ ಒಸರುವ ನೀರಿನಿಂದ ಅನೇಕ ಸಣ್ಣ ಪುಟ್ಟ ಕೆರೆಗಳು ಡಾಲಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವನ್ನು ಇನ್ನೂ ಸುಂದರವಾಗಿ ಮಾಡಿವೆ.

೨. ಡಾಲಿ-ಗ್ರಾಮೀಣ ಮತ್ತು ಆಧುನಿಕತೆಯ ಸಂಗಮ

ಡಾಲಿಯ ವಿಶ್ವವಿದ್ಯಾಲಯದ ಕ್ಯಾಂಪಸ್ ರಮಣೀಯ ಸ್ಥಳದಲ್ಲಿ ನೆಲೆಯಾಗಿದೆ. ಆಧುನಿಕ ಯಂತ್ರೊಪಕರಣಗಳಿಂದ ಸುಸಜ್ಜಿತವಾದ ವೈದ್ಯಕೀಯ ಪ್ರಯೋಗಾಲಯಗಳು ಮತ್ತು ಇತರ ವಿಭಾಗಗಳು ಭವ್ಯವಾಗಿವೆ. ಇಲ್ಲಿಯ ಪೇಟೆ ಮತ್ತು ವಿಶ್ವವಿದ್ಯಾಲಯವಿರುವ ಭಾಗಕ್ಕೆ ಜೂ-ಯುಶಿ ಎಂದು ಕರೆಯುತ್ತಾರೆ. ಇಲ್ಲಿ ಸುಂದರವಾದ ಅಂಗಡಿಗಳು, ವಾಲ್ ಮಾರ್ಟ ಇವೆಲ್ಲ ಇವೆ. ಇನ್ನು ಹಳೆಯ ಡಾಲಿಗೆ ಗು-ಶೆಂಗ ಎನ್ನುತ್ತಾರೆ. ಇದು ಮಿಂಗರ ಕಾಲದಲ್ಲಿ(೧೩೬೮-೧೬೪೪) ಕಟ್ಟಲ್ಪಟ್ಟ ಊರು ಎಂದು ಪ್ರತೀತಿ ಇದೆ. ಇಲ್ಲಿ ಕಿಲ್ಲೆ ಮತ್ತು ಅದರ ನಾಲ್ಕು ದಿಕ್ಕಿನಲ್ಲಿಯ ದ್ವಾರಗಳು ಇವೆ. ಕಿಲ್ಲೆಯ ಒಳಗೆ ಸಾಲು ಸಾಲಾಗಿ ಚೀನಿ ಸಾಂಕೇತಿಕ ಕಂದಿಲಗಳಿಂದ ಮತ್ತು ರಂಗು ರಂಗಿನ ದಪ್ಪ ದಾರಗಳಿಂದ ಗಂಟು ಹಾಕಿದ ಶುಭ ಸಂಕೇತದ ವಸ್ತುಗಳಿಂದ  ಸುಶೋಭಿತವಾದ ಅಂಗಡಿಗಳು ಕಾಣುತ್ತವೆ. ಪರದೇಶದಿಂದ ಬಂದ ಪ್ರವಾಸಿಗರಿಗೆ ಅವರಿಗೆ ತಕ್ಕಂತಹ ಊಟದ ಮನೆಗಳಿವೆ. ಇವುಗಳ ಮಧ್ಯೆ ಕಂಡಿದ್ದು ‘ನಮಸ್ತೆ’ ಎಂಬ ಭಾರತೀಯ  ಊಟದ ಮನೆ, ಇಲ್ಲಿ ಆಲೂಗಡ್ಡೆ ಹಾಕದೇ ಬರೀ ತರಕಾರಿ ಹಾಕಿ ಮಾಡಿದ ಚಿಕ್ಕ ಸಮೊಸಾಗಳು ಬಲು ರುಚಿಕರವಿರುತ್ತವೆ. ಮುಘಲಾಯಿ, ಪಂಜಾಬಿ ಊಟವು ಚೆನ್ನಾಗಿ‌ಇರುತ್ತದೆ. ಇದನ್ನು ನಡೆಸುವವರು ಮತ್ತು  ಅಡಿಗೆ ಯವರು ಚೀನಿಯರು ಎಂದರೆ ಆಶ್ಚರ್ಯ ಪಡುತ್ತಿರಾ? ‘ರೆನರ್ಸ ಸ್ಟ್ರೀಟ’ ಎಂಬ ಒಂದು ಅಡ್ಡ ರಸ್ತೆ ಇಲ್ಲಿಯ ತುಂಬ ಜನಪ್ರಿಯ ತಾಣ, ಇಲ್ಲಿ ಚೀನಿ ಕರಕುಶಲ ವಸ್ತುಗಳನ್ನು ಚಂದದ ಹುಡುಗ ಹುಡುಗಿಯರು ಮಾರಾಟ ಮಾಡುತ್ತಿರುತ್ತಾರೆ.

ಇಲ್ಲಿ ನೋಡತಕ್ಕದ್ದು ಮೂರು ಸ್ತೂಪಗಳು ಮತ್ತು ಅವುಗಳ ಹಿಂದೆ ಕಟ್ಟಿದ ಪಗೋಡಗಳು ಅತಿ ಸುಂದರವಾಗಿವೆ. ಐತಿಹಾಸಿಕ ಕಾಲದಿಂದ ಡಾಲಿಯು ಚೀನ ಮತ್ತು ಪ್ರಾಚೀನ ಭಾರತವನ್ನು ಜೋಡಿಸುವ ಕೊಂಡಿಯಾಗಿರಬೇಕು. ಕ್ರಿ. ಪೂರ್ವ ಮೂರನೇ ಶತಮಾನದಿಂದ ಚೀನ ಮತ್ತು ಭಾರತದ ಮಧ್ಯೆ ಜನರ ಚಾಲನೆ ಜೋರಾಗಿಯೇ ಇತ್ತು, ಹೀಗಾಗಿ ಇಲ್ಲಿಯ ಚೀನ ಶಿಲ್ಪಕೃತಿಗಳಲ್ಲಿ ಭಾರತೀಯ ವೈಶಿಷ್ಟ್ಯಗಳನ್ನು  ಕಂಡರೆ ಆಶ್ಚರ್ಯ ಪಡಬೇಕಿಲ್ಲ. ಇಲ್ಲಿಯ ಒಂದು ಪಗೋಡದಲ್ಲಿ ಸ್ತ್ರೀ ದೇವತಾ ವಿಗ್ರಹಕ್ಕೆ ದೊಡ್ಡದಾದ ಕುಂಕುಮದ ಬೊಟ್ಟು ಇದ್ದದ್ದನ್ನು ಕಂಡೆವು. ನರ್ತಿಸುವ ನಟರಾಜ, ಶಿವ, ನಾಗದೇವತೆ ಯಂತಿರುವ ವಿಗ್ರಹಗಳು, ಸಿಂಹಾಸನಸ್ಥರಾದ ರಾಜ ಮಹಾರಾಜರುಗಳ ಮುಖಚರ್ಯೆಗಳಂತೂ ಚೀನಿಯರನ್ನು ಕದಾಪಿ ಹೋಲುವದಿಲ್ಲ. ಅವರ ಉಡುಪು, ಮೈಕಟ್ಟು, ರೂಪ, ಆಸೀನರಾಗುವ ಭಂಗಿ ಇವೆಲ್ಲಭಾರತೀಯ ಪಧ್ಧತಿಯಲ್ಲಿ ಕಂಡೆವು. ಈಂತಹ ಶಿಲ್ಪಗಳು ಇಲ್ಲಿ ಬೇಕಾದಷ್ಟಿವೆ.

ಮುಂದುವರೆಯುವದು