ಡಾಲಿ -ಚೀನ ದೇಶದ ಗ್ರಾಮೀಣ ಜೀವನದ ಒಳನೋಟ ಭಾಗ ೩

೮.ಭಿನ್ನ ಪಂಗಡಗಳ ವೈವಿಧ್ಯಮಯ ಸಂಸ್ಕೃತಿಯ ಸಂರಕ್ಷಣೆ-  ೧೯೪೯ ರಲ್ಲಿ ಸಾಮ್ಯವಾದ (ಕೊಮ್ಯುನಿಜಮ್) ಸ್ಥಾಪನೆಯಾದಾಗಿನಿಂದ ಚೀನದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕಿ ದೇವತಾ ಪೂಜೆಗಳಿಗೆ ನಿರ್ಬಂಧನೆ ಹಾಕಲಾಯಿತು. ಅಷ್ಟೇ‌ಅಲ್ಲ ಪೂರ್ವಜರು ಕಟ್ಟಿದ ಎಲ್ಲ ಪಗೋಡಗಳು, ಬೌಧ್ಧ ವಿಹಾರಗಳು,ಗುಡಿ ಗೋಪುರಗಳನ್ನು ಧ್ವಂಸಮಾಡಿ, ಅವರ ಪ್ರಾಚೀನ ಸಂಸ್ಕೃತಿಯನ್ನು ನಾಶ ಮಾಡಿದರು. ಆದರೆ ಇತ್ತಿಚಿಗೆ ಸರಕಾರವು ಮತ್ತೆ ತಮ್ಮ ಸಂಸ್ಕೃತಿಯ ಪುನರುಜ್ಜೀವನ ಮಾಡುತ್ತಿದ್ದಾರೆ. ಹ್ಯಾನ್‌ರು ಚೀನದ ಮುಖ್ಯ ಭೂ ಪ್ರದೇಶದ ಬಹುಭಾಗದಲ್ಲಿ ವಾಸಿಸುವ ಜನಾಂಗ. ಯೂನಾನ ಪ್ರಾಂತದಲ್ಲಿ ಅನೇಕ ಭಿನ್ನ ಪಂಗಡಕ್ಕೆ ಸೇರಿದ ಜನರು ಕಾಲಾಂತರದಿಂದ ಇಲ್ಲಿ ವಾಸಿಸುತ್ತಿದ್ದಾರೆ. ಟಿಬೆಟರು, ಬರ್ಮಾದವರು, ಬಾಯಿ, ದಾಯಿ ಈ ಪಂಗಡದವರು ಇಲ್ಲಿ ಬಹುಸಂಖ್ಯೆಯಲ್ಲಿದ್ದಾರೆ. ಇವರದೆಲ್ಲ ತಮ್ಮದೇ ಆದ ಭಾಷೆ, ಊಟ, ಉಡಿಗೆ, ರೂಢಿಗಳು, ವೇಷ- ಭೂಷಗಳು ಇರುವವು, ಹೀಗಾಗಿ ಈ ಪ್ರಾಂತದ ಸಂಸ್ಕೃತಿ ಯು ಶ್ರೀಮಂತವೂ ಅನುಪಮವೂ ಆಗಿದೆ. ಸರಕಾರವು ವಿವಿಧ ಪಂಗಡದವರ ಸಂಸ್ಕೃತಿಯನ್ನು ಪೋಷಿಸಲು ಅವರಲ್ಲಿಯ ಯುವತಿ-ಯುವಕರನ್ನು ಪ್ರವಾಸಿಗರಿಗೆ ‘ಗಾಯಿಡ’ಗಳನ್ನಾಗಿ ನೇಮಿಸಿದ್ದಾರೆ. ಇವರು ತಮ್ಮ ತಮ್ಮ  ಪಾರಂಪಾರಿಕ ಪೋಷಾಕಿನಲ್ಲಿ ತಮ್ಮ ಹಾಡು, ನೃತ್ಯದಿಂದ ಮನರಂಜಿಸುತ್ತಾರೆ. ಇವರ ವಸಂತ ಹಬ್ಬ, ಪಾರಂಪಾರಿಕ ಹಬ್ಬ, ಮಾರ್ಚ ತಿಂಗಳ ಹಬ್ಬ, ಚಿಟ್ಟೆಯ ಹಬ್ಬ ಇವುಗಳು ಇಲ್ಲಿಯ ಜನಪ್ರಿಯ ಚಟುವಟಿಕೆಗಳು. ಇಲ್ಲಿಯ ಎರ್-ಹಯ್ ಸರೋವರವಂತು ಬಲು ಸುಂದರವಾದ ತಾಣ, ಇಲ್ಲಿ ನೌಕಾ ಯಾನಕ್ಕೆ ಜನ ತುಂಬಿರುತ್ತಾರೆ. ಸರೋವರದಲ್ಲಿಯ ಒಂದು ಚಿಕ್ಕ ದ್ವೀಪವನ್ನು ಕಾಣುವ ಅವಕಾಶ ನಮಗೆ ಸಿಕ್ಕಿತು. ಪ್ರತಿ ವರ್ಷ ಇಲ್ಲಿಯ ಜನ ರಾತ್ರಿ ಹುಣ್ಣಿಮೆಯ ಚಂದ್ರನನ್ನು  ಸರೋವರದ ಹಸಿರು ನೀರಿನಲ್ಲಿ ನೋಡಿ ಆನಂದಿಸುತ್ತಾರಂತೆ.

ಚೀನದಲ್ಲಿ ಪರದೇಶದಿಂದ ಬಂದ ಪ್ರವಾಸಿಗರಿಗೆ ಬರುವ ಬಹು ದೊಡ್ಡ ಸಮಸ್ಯೆ ಎಂದರೆ ಭಾಷೆಯದು, ಇವರಿಗೆ ತಮ್ಮ ಭಾಷೆ ಬಿಟ್ಟರೆ ಬೇರೆ ಯಾವ ಭಾಷೆಯು ಸಲ್ಲದು. ‘ಗಾಯಿಡು’ಗಳು ಕೂಡ ಅಪ್ಪಿತಪ್ಪಿ ಆಂಗ್ಲ ಭಾಷೆ ಮಾತನಾಡುವದಿಲ್ಲ. ಚೀನಿ ಜನರಿಗೆ ತಮ್ಮ ಭಾಷೆಯ ಅಭಿಮಾನ ಬಹಳವಿದೆ, ಇರಲಿ ಆದರೆ ಪರ್ಯಟನಕ್ಕೆ ಪ್ರೊತ್ಸಾಹನ ಕೊಟ್ಟಾಗ ಪರದೇಶದಿಂದ ಬಂದ ಪ್ರವಾಸಿಗರ ಅನುಕೂಲಕ್ಕೆ ಕಿಂಚಿತ್ತಾದರೂ ಆಂಗ್ಲ ಭಾಷೆಯ ಜ್ನಾನ ಇರಬೇಕಲ್ಲವೇ? ‘ಬಸ ಸ್ಟೆಂಡ’, ‘ಎರ್‌ಪೊರ್ಟ್’ ಎಂಬ ಸಾಮಾನ್ಯ ಆಂಗ್ಲ ಶಬ್ದಗಳು ಅವರಿಗೆ ತಿಳಿಯುವದಿಲ್ಲ. ಇನ್ನು ಐತಿಹಾಸಿಕ ಸ್ಠಳಕ್ಕೆ ಹೋದಾಗ ಇಲ್ಲಿಯ ಇತಿಹಾಸ ತಿಳಿಯುವದಂತು ದೂರದ ಮಾತು.

.ಚಹ ಕುಡಿಯುವ ಸಮಾರಂಭ- ಇಲ್ಲಿಯ ಜನರು ತೆಳ್ಳಗಿರಲು ಕಾರಣ ಹುಡುಕಿದಾಗ ಅವರು ಪದೇ ಪದೇ ಕುಡಿಯುವ ಚಹದ ಚಟ  ಇರಬೇಕೆಂದು ತೋಚಿತು. ಇವರ ಚಹದಲ್ಲಿ ಹಾಲು ಸಕ್ಕರೆ ಇರುವದಿಲ್ಲ ಬರೀ ಬಿಸಿ ನೀರು ಮತ್ತು ಚಹದ ಎಲೆಸೊಪ್ಪು. ಒಣಗಿದ ಹೂವಿನ ಪಕಳೆಗಳು, ಎಲೆಗಳು, ಬೇರು , ಕಾಷ್ಟಗಳನ್ನು ಬಿಸಿನೀರಿನಲ್ಲಿ ಹಾಕಿ ಕಷಾಯದಂತೆ ಸದಾ ಕುಡಿಯುತ್ತಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಬಿಸಿನೀರು ಮತ್ತು ಈ ಔಷಧೀಯ ಸೊಪ್ಪನ್ನು ಫ್ಲಾ ಸ್ಕನಲ್ಲಿ ಹಾಕಿ ತಮ್ಮ ತಮ್ಮ ಕೆಲಸಗಳಿಗೆ ಹೊರಡುತ್ತಾರೆ. ಹೊರಗೆ ಎಲ್ಲಿ ಹೋದರು ಕುಡಿಯುವ ಬಿಸಿನೀರಿನ ವ್ಯವಸ್ಠೆಯಿದೆ. ಕೌತುಕದ ಸಂಗತಿ ಎಂದರೆ ಈ ಚಹ ಕುಡಿಯುವ ಚಟಕ್ಕೆ ಚೀನಿಯರು ಸಮಾರಂಭದ ರೂಪ ಕೊಟ್ಟು ತಮ್ಮ ಚಹ ಮಾರಾಟವನ್ನು ಅಂತ:ರಾಷ್ಟ್ರೀಯ ಸ್ಥರಕ್ಕೆ ಒಯ್ದಿದ್ದಾರೆ. ಚಂದದ ಚೀನಿ ಬಾಲೆಯರು ‘ಚಿಂವ ಚಿಂವ’ ಎಂದು ತಮ್ಮ ಭಾಷೆಯಲ್ಲಿ ವಿವರಣೆ ಕೊಡುತ್ತ ವೈಖರಿಯಿಂದ ಚಹ ತಯಾರಿಸುವ ವಿಧಾನವನ್ನು ನೋಡುವದೇ ಗಮ್ಮತ್ತು. ನಾವು ಕೂಡ ನಾಲ್ಕೈದು ತರಹದ ಚಹದ ಸೊಪ್ಪು ಕೊಂಡು ತಂದಿದ್ದೇವೆ!

೧೦.ದಕ್ಷ ಶಾಸನ– ಕುನ್ಮಿಂಗ ಮತ್ತು ಡಾಲಿಯಲ್ಲಿ ಓಡಾಡಿದ ಮೇಲೆ ಇಲ್ಲಿಯ ಸರಕಾರವು ತಮ್ಮ  ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಎಂಬುದು ಗವನಕ್ಕೆ ಬಂದಿತು. ಉಳಿದೆಲ್ಲದರಲ್ಲಿ ತಮ್ಮತನವನ್ನು ಉಳಿಸಿಕೊಂಡ ಚೀನಿಯರು ಪಾಶ್ಚಾತ್ಯ ಪೋಷಾಕನ್ನು ತಮ್ಮದೇ ದಿನನಿತ್ಯದ ಉಡುಗೆ ಮಾಡಿಬಿಟ್ಟಿದ್ದಾರೆ. ಅಲ್ಲಿ ಛಳಿ ತುಂಬ ಇರುವದರಿಂದ ಎಲ್ಲರೂ ಸಾಮಾನ್ಯವಾಗಿ ಪಾಶ್ಚಾತ್ಯ ಉಡುಪಿನಲ್ಲಿ ಕಂಡು ಬರುತ್ತಾರೆ. ಇನ್ನು ಅಲ್ಲಿ ಆಹಾರದ ವಸ್ತುಗಳು ವಿಪುಲವಾಗಿ ಹಾಗೂ ಅಗ್ಗದಲ್ಲಿ ಸಿಗುತ್ತವೆ. ನಾಲ್ಕು ‘ಯು‌ಆನಿನಲಿ’ ಆರೋಗ್ಯಕರವಾದ ಮತ್ತು ಒಳ್ಳೆಯ ಊಟ ಸಿಗುತ್ತದೆ. ತರಕಾರಿಯನ್ನು ಇಲ್ಲಿಯವರು ತುಂಬ ತಿನ್ನುತ್ತಾರೆ. ಮಾಂಸದ ವೈವಿಧ್ಯತೆಯಂತೂ ಅಪಾರ. ಅಲ್ಲಿ ನಾನು ಭಿಕ್ಷುಕರನ್ನು ಕಾಣಲೇ ಇಲ್ಲ. ಡಾಲಿಯಲ್ಲಿ ಸರಕಾರ ನಿರ್ಮಿತ ಇರಬಹುದು, ಒಂದೇ ತರಹದ ಬೂದು ಬಣ್ಣದ ಮನೆಗಳು ಎಲ್ಲೆಲ್ಲಿಯೂ ಕಾಣುತ್ತವೆ. ಮನೆಗಳ ಗೋಡೆಗಳ ಮೇಲೆ ಕರಿ ಇಲ್ಲವೇ ಬಿಳಿ ಬಣ್ಣದ ಪಶು ಪಕ್ಷಿ ನಿಸರ್ಗದ ವರ್ಣ ಚಿತ್ರಗಳನ್ನು ತೆಗೆದುದರಿಂದ ಕಣ್ಣಿಗೆ ಆಕರ್ಷಕವಾಗಿ ಕಂಡವು. ಆದರೆ ಕುನ್ಮಿಂಗನಲ್ಲಿ ಗಗನಚುಂಬಿ ಕಾಂಪ್ಲೆಕ್ಸಗಳು ಬೇಕಾದಷ್ಟಿವೆ. ಕಾರಖಾನೆಗಳು ಅದರ ಪಕ್ಕ ಕಾರ್ಮೀಕರ ಪಕ್ಕಾ ಮನೆಗಳನ್ನು ನೋಡಿದೆವು.ಹೊರಗಿನಿಂದ ಬಂದ ಪ್ರಯಾಣಿಕರಿಗೆ ಸ್ವಚ್ಚ ಮತ್ತು ಒಳ್ಳೆಯ ಸಾರಿಗೆ ಸಂಪರ್ಕ, ಶಿಸ್ತಿನ ಜೀವನ, ಕಠಿಣ ಶಿಕ್ಷೆ, ಅಗ್ಗದ ವಿಪುಲ ಆಹಾರ ಇವೆಲ್ಲ ಕಂಡು ಇಲ್ಲಿಯ ಜೀವನ ಶಿಸ್ತಿನದು ಮತ್ತು ಸುಖಮಯವಾಗಿರಬೇಕು ಎಂದು ಅನಿಸುತ್ತದೆ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಗಾದೆಯ ತರಹ.

 

ಸುಷಮಾ ಆರೂರ್