ಗೋವಾಕ್ಕೆ ಹೊಗೋಣ ಬಾರಾ

“ಅಲ್ರಿ ಲಾಂಗ ವೀಕ ಎಂಡ ಇದೆ ಗೋವಾಗೆ ಹೋಗಿ ಬರೋಣ ವಾ” ಎಂದು ಮೆಚ್ಚಿನ ಮಡದಿ ರಾಗ ಎಳೆದ್ರೆ ಯಾವ ಗಂಡನಿಗೆ ಖುಶಿಯಾಗಲಿಕ್ಕಿಲ್ಲ!! ಗೋವಾ ಎಂದ ತಕ್ಷಣ ಹೆಚ್ಚು ಖರ್ಚಿಲ್ಲದೇ ಪರದೇಶಕ್ಕೆ ಹೋದ ಅನುಭವ, ವಯಸ್ಸು, ತನ್ನ ಪೊಸಿಶನೆಲ್ಲ ಹಿಂದೆ ಬಿಟ್ಟು ನೀಲಿ ಸಮುದ್ರದಲ್ಲಿ ಮನಸೊಕ್ತ ಆಟವಾಡಿ ಟೆನ್ಷನಗಳ ಹೊರೆಯನ್ನು ನೀರಲ್ಲಿ ತಿಲಾಂಜಲಿ ಬಿಟ್ಟು ಬಿಡುವದು. ತಿಂದು ಕುಡಿದು ಹಾಯಾಗಿ ಫೇಮಿಲಿ ಜೊತೆ ಮಜ ಮಾಡಬಹುದಲ್ಲವೇ? ತನ್ನ ಉದ್ಯೋಗ, ಧಂದೆ, ಪ್ರೊಮೋಶನ್, ತನ್ನ ಬಾಸನ ಮೂಡ್ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತನ್ನವಳ ಮೂಡ ಇವುಗಳನ್ನು ಸಂಭಾಳಿಸಲು ದೇವರ ಕೃಪೆ ಬೇಡಲು ಇಲ್ಲಿದೇವಸ್ಥಾನಗಳ ಕೊರತೆ ಇಲ್ಲ. ಭವ್ಯವಾದ ಗುಡಿಗೋಪುರಗಳು, ಚರ್ಚುಗಳು ಚ್ಯಾಪಲಳು ವಿಪುಲವಾಗಿವೆ. ಇಂತಹುವೇ ವಿಚಾರಗಳು ಸಾಮಾನ್ಯವಾಗಿ ಬಹುತೇಕ ಎಲ್ಲ ಗಂಡಸರ ಮನದಲ್ಲಿ ಹಾಸು ಹೋದರೆ ಆಶ್ಚರ್ಯವೇನಿಲ್ಲ. ಗೋವೆಯ ಹಚ್ಚ ಹಸಿರು,  ಯಾವ ತರಹದ ಪೊಲ್ಯುಶನ್ ಇಲ್ಲದ, ಗಡಿಬಿಡಿ ಇಲ್ಲದ ತಾಣವು ವರ್ಷವಿಡಿ ಕಷ್ಟಪಟ್ಟು ದುಡಿದ ಜನರ ತನ ಮನಕ್ಕೆ ಆಹ್ಲಾದ ನೀಡುತ್ತದೆ ಎಂಬುದು ಸತ್ಯ. ಹೀಗಾಗಿ ದೇಶ ಹಾಗೂ ಪರದೇಶಿ ಪ್ರವಾಸಿಗರ ಮೆಚ್ಚಿನ ತಾಣ ಗೋವೆ ಅಂದರೆ ಅತಿಶಯೋಕ್ತಿ ಆಗಲಾರದು.

ಗೋವಾದ ಸೀಜನ್

ಮೂಲತಃ ಪ್ರವಾಸೊದ್ಯಮವೇ ಗೋವೆಯ ಉತ್ಪನ್ನವಾದುದರಿಂದ ಅಕ್ಟೋಬರನಿಂದ ಮೇ ತಿಂಗಳ ತನಕ ಇರುವ ಈ ಎಂಟು ತಿಂಗಳ ಪ್ರವಾಸಿಗರ ‘ಸೀಜನ್’ನಲ್ಲಿ ಮಾತ್ರ ಇಲ್ಲಿಯ ಜನರ ಸಂಪಾದನೆ ಅವಲಂಬಿಸಿರುವದು. ಈ ‘ಸೀಜನ್’ ಕಾಲಾವಧಿಯನ್ನು ಎಲ್ಲ ಸ್ಠಳೀಯರು ಚಾತಕ ಪಕ್ಷಿಯಂತೆ ಕಾದು ಕುಳಿತಿರುತ್ತಾರೆ. ಹೋಟೆಲ್ ಉದ್ಯಮೆ, ಟ್ಯಾಕ್ಸಿ, ಖಾಸಗಿ ಬಸ್ಸುಗಳು, ಮಿನಿ ಬಸ್ಸುಗಳು, ವಿಮಾನ ಇಂತಹ ಸಾರಿಗೆಯ ಸಾಧನಗಳು ತಮ್ಮ ರೇಟಗಳನ್ನು ಹೆಚ್ಚಿಸಿ ಲಾಭ ಮಾಡಿ ಕೊಳ್ಳುತ್ತಾರೆ, ಇಲ್ಲಿಯ ಕಲಾಕುಶಲ ವಸ್ತುಗಳ ಮಾರಾಟದ ಮಳಿಗೆಗಳು ಹಾಗೂ ಪ್ರವಾಸೋದ್ಯಮಕ್ಕೆ ಸಂಬದಿಸಿದ ಎಲ್ಲ ಚಟುವಟಿಕೆಗಳು ಅತಿ ಉತ್ಸಾಹದಿಂದ ಪ್ರಾರಂಭವಾಗುತ್ತವೆ. ಈ ಜನರ ಮಾಮೂಲು ಸಂವಾದವೆಂದರೆ “ ಸೀಜನ್ ಸುರು ಜಾಲ್ಲೆ ಮುರೆ, ಧಂಧೊ ಕಶಿರೆ?”(ಸೀಜನ್ ಶುರುವಾಯ್ತಲ್ಲಾ ವ್ಯಾಪಾರ ಹೇಗೆ) ಎಂದು ಒಬ್ಬರನೊಬ್ಬರನ್ನು ಕೇಳುವ ರೂಢಿ. ಇನ್ನೂ ಉಳಿದ ನಾಲ್ಕು ತಿಂಗಳು ಮಳೆಗಾಲವಾದುದರಿಂದ ಇಲ್ಲಿ ವ್ಯಾಪಾರದ ಚಟುವಟಿಕೆಗಳು ಕಡಿಮೆ. ತಮ್ಮ ಅಂಗಡಿಗಳನ್ನು ಸುಮಾರು ಸ್ಠಳಿಕರು ಮುಚ್ಚಿ ಗದ್ದೆ ಕೆಲಸಕ್ಕೆ ಹೊರಡುತ್ತಾರೆ. ಅಂತರಾಷ್ಟ್ರೀಯ  ಉತ್ಸವಕ್ಕೆ ದೂರ ದೇಶಗಳಿಂದ ಸಿನೆಮಾ ಪ್ರಪಂಚಕ್ಕೆ ಸಂಬಂದಿಸಿದ ಎಲ್ಲರೂ ಗೋವಾಗೆ ಆಗಮಿಸುತ್ತಾರೆ, ಪಣಜಿ, ಮಾಡಗಾಂವ, ವಾಸ್ಕೋ, ಮಾಪ್ಸ್ಸ ಈ ಊರುಗಳಲ್ಲಿ ವೈನ ಮತ್ತು ಫುಡ್ ಫೇಸ್ಟಿವಲ್‌ಗಳು ಇದೇ ಸಮಯಕ್ಕೆ  ನಡೆಯುತ್ತವೆ. ಇಲ್ಲಿಯ ಜನರು ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವಗಳಲ್ಲಿ ಉತ್ಸಾಹದಿಂದ ಭಾಗವಹಿಸುವದನ್ನು ನೋಡುವದೇ ಬಲು ಚಂದ.

ಪ್ರೇಕ್ಷಣೀಯ ಗೋವಾ

ಪ್ರತಿಯೊಬ್ಬ ಪ್ರವಾಸಿಗೆ ಗೋವಾದಲ್ಲಿ ನೋಡತಕ್ಕ ಸ್ಠಳಗಳು ಯಾವವು ಮತ್ತು ಇಲ್ಲಿ ಏನು ಸಿಗುತ್ತದೆ ಎಂಬ ಕುತೂಹಲ ಸಹಜ. ನಿಸರ್ಗದ ಚೆಲುವಿನಲ್ಲಿ ಆಸಕ್ತಿ ಇರುವವನಿಗ್ಲೆ ಯಾವ ಗದ್ದಲ ಗಡಿಬಿಡಿ ಇಲ್ಲದೇ ಶಾಂತತೆಯಲ್ಲಿ ಲೀನವಾಗಬಹುದು, ಸಾಹಸಪ್ರಿಯರಿಗೆ, ಸಮುದ್ರದ ಆಟಗಳಿವೆ, ಬೈಕು‌ಇಲ್ಲವೇ ಕಾರು ಬಾಡಿಗೆ ತೆಗೆದುಕೊಂಡು  ಊರೂರು ಸುತ್ತಬಹುದು, ಆಸ್ತಿಕರಿಗೆ ಗುಡಿ, ಚರ್ಚುಗಳಲ್ಲಿ ಮನ ರಮಿಸಬಹುದು, ಸಿಟಿಯಲ್ಲಿ ಇದ್ದು ಕೂಡ ಹಳ್ಳಿಯ ವಾತಾವರಣವನ್ನು ಆಸ್ವಾದಿಸಬಹುದು. ಇನ್ನೂ ಮಳೆಗಾಲದಲ್ಲಿ ಕೂಡ ಗೋವೆಯ ವಿಲಕ್ಷಣ ಸೌಂದರ್ಯವನ್ನು ಅನುಭವಿಸಲು ಬರುವ ಪ್ರವಾಸಿಗರೇ ಬೇರೆ. ಇಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಬಾಡಿಗೆಗೆ ಸಿಗುತ್ತವೆ, ಸಾಹಸಪ್ರಿಯ ತರುಣರು ಧೊ ಧೊ ಮಳೆಯಲ್ಲಿಯೇ ಗೆಳೆಯನನ್ನೋ, ಪ್ರೇಯಸಿಯನ್ನೋ  ಹಿಂದೆ ಕೂಡಿಸಿಕೊಂಡು  ’ ಜುಂ’ ಎಂದು ಮೋಟರ ಬೈಕುಗಳನ್ನು ಹೊಡೆದುಕೊಂಡು ಹ್ನೋಗುವ ದೃಶ್ಯ ಇಲ್ಲಿ ಸಾಮಾನ್ಯ. ಮಳೆಗಾಲದಲ್ಲಿ ದೊಡ್ಡ ದೊಡ್ಡ ಅಲೆಗಳು ಬರುವದರಿಂದ ಸಮುದ್ರದಲ್ಲಿ ಇಳಿಯಲು ನಿಷೇಧವಿದೆ. ಪ್ರತಿಯೊಂದು ದಡದಲ್ಲಿ ಎಚ್ಚರಿಕೆಯ ಸೂಚನಾ ಫಲಕ ಇಟ್ಟಿರುತ್ತಾರೆ. ಆದರೂ ಪ್ರತಿ ವರ್ಷ ಸರಕಾರದ ನಿಯಮಗಳ ಉಲ್ಲಂಘನೆ ಮಾಡಿದ ಕಾರಣ ಅಪಘಾತಗಳು ಜರಗುತ್ತವೆ. ಒಟ್ಟಾರೆ ತಮ್ಮ ತಮ್ಮ ಅಭಿರುಚಿಗೆ ಅನುಗುಣವಾಗಿ ಗೋವಾದಲ್ಲಿ ಎಂಜೊಯ ಮಾಡಬಹುದು.  ಇಲ್ಲಿಯ ಸುಂದರ ಪ್ರಾಕೃತಿಕ ಪರಿಸರದಲ್ಲಿ ವಿವಿಧ ಸ್ಠಳಗಳಲ್ಲಿಯ ಅರಬ್ಬಿ ಸಮುದ್ರದ ತೀರಗಳು (ಬೀಚುಗಳು),ಮತ್ತು ಇಲ್ಲಿಯ ಎರಡು ಮಹತ್ವದ ನದಿಗಳಾದ     ಜೂವಾ ರಿ ಮತ್ತು ಮಾಂಡೋವಿಯಲ್ಲಿ ತೇಲುವ ಕ್ಯಾಸಿನೊ ಹಡಗುಗಳು ಕತ್ತಲು ರಾತ್ರಿಯಲ್ಲಿ ಝಗಝಗಿಸುವ ಈ ದೄಶ್ಯವನ್ನು ವೀಕ್ಷಿಸಲು ಎರಡು ಕಣ್ಣುಗಳು ಸಾಲದು.ಸುಂದರವಾಗಿ ಶೄಂಗರಿಸಿದ ನೌಕೆಯು ಪ್ರವಾಸಿಗರನ್ನು ಇಲ್ಲಿಯ ಒಂದು ದ್ವೀಪಕ್ಕೆ ಕೊಂಡೊಯ್ದು ‘ಬೊನ ಫಾಯರ್’ ಮಾಡಿ, ಕೊಂಕಣಿ ಮತ್ತು ಪೋರ್ತುಗೀಸ ಜಾನಪದ ಹಾಡು ಹಾಗೂ ಕುಣಿತಗಳಿಂದ ಜನರನ್ನು ರಂಜಿಸಿ, ಅಲ್ಲಿಯ ಜನಾಂಗದ ಜೀವನವನ್ನು ಪ್ರದರ್ಶಿಸುವ ಈ ಯಾತ್ರೆ ಇಲ್ಲಿಯ ಬಲು ದೊಡ್ಡ ಆಕರ್ಷಣೆ. ಮಾಂಡೊವಿ ನದಿಯನ್ನು ಫೇ ರ್ರಿ  (ಲೊಂಚ, ಅಂದರೆ ಕಡವ ಇದರಲ್ಲಿ ಬಸ್ಸುಗಳು, ದ್ವಿಚಕ್ರಗಳು ನಿಲ್ಲಿಸಿ))ಯಲ್ಲಿ ದಾಟಬಹುದು. ಅಲ್ಲಿಂದ ‘ದೀವಾರ’ ಎಂಬ ಒಂದು ಸುಂದರವಾದ ತಾಣ ಇಲ್ಲಿ ಒಂದು ಗುಡ್ಡದ ಮೇಲಿನ ಚರ್ಚು, ಕೆಳಗೆ ಒಂದು ದೇವಸ್ಥಾನ ಹಾಗೂ ಸುಮಾರು ೧೦೦ ಪೊರ್ತುಗೀಸ ಮಾದರಿಯ ಮನೆಗಳಿವೆ. ಬೊಂದೆರಾ ಇದು ಇಲ್ಲಿಯ ದೊಡ್ಡ ಉತ್ಸವ,  ಹಿಂದು ಮತ್ತು ಕ್ರಿಸ್ತ ಎಂಬ ಭೇದ ಭಾವ ವಿಲ್ಲದೇ ಎಲ್ಲರು ಹಾಡುತ್ತ ಕುಣಿಯುತ್ತ ದೊಡ್ಡ ದೊಡ್ಡ ಫ್ಲೋಟ್ಸ್ ಗಳನ್ನು ತೇಲಿಸುತ್ತ ಮೆರವಣಿಗೆ ತೆಗೆಯುತ್ತಾರೆ. ಇದನ್ನು ವೀಕ್ಶಿಸಲು ಜನ ದೂರದಿಂದ ಬರುತ್ತಾರೆ.

ಇಲ್ಲಿಯ ಪ್ರತಿಯೊಂದು ಬೀಚುಗಳಿಗೆ ತಮ್ಮದೇ ಆದ ಸೌಂದರ್ಯವಿದೆ, ಕೆಲವು, ಜನರ ಸಂಪರ್ಕ ಹೆಚ್ಚು ಇಲ್ಲದ ಕಾರಣ ಶುಚಿಯಾಗಿವೆ, ಇನ್ನೂ ಕೆಲವು ಹೆಚ್ಚು ಜನಪ್ರಿಯಗಳಾದ ಕಾಲಾಂಗೂಟ, ಕೋಲ್ವಾ ಮಿರಾಮಾರ, ಬಾಗಾ, ಡೊನಾಪಾವಲ್ಲಾ ಇತ್ಯಾದಿ ಇಲ್ಲಿ ಪ್ರವಾಸಿಗರ ಜನಸಂದಣಿ ಕಾಣ ಬಹುದು. ಅಂಜುನಾ ಬೀಚ ಇದು ಮುಂಚೆ ಹಿಪ್ಪಿಗಳ ತಾಣವಾಗಿತ್ತು. ಇಲ್ಲಿ ಮಾದಕ ದ್ರವ್ಯಗಳ  ಮಾರಾಟ ಆಗುತ್ತದೆ ಮತ್ತು ಟ್ರಾನ್ಸ್ ಪಾರ್ಟಿ, ಹುಣ್ಣಿಮೆ ಪಾರ್ಟಿಗಳು ಆಗಾಗ ನಡೆಯುತ್ತವೆ.  ಬುಧವಾರದ ಮತ್ತು ಶನಿವಾರದ  ಫ್ಲೀ ಮಾರ್ಕೆಟುಗಳಲ್ಲಿ ಪರದೇಶದ ಪ್ರವಾಸಿಗರು ತಾವು ತಮ್ಮ ದೇಶದಿಂದ ತಂದ ಇಲ್ಲವೇ ಬಳಿಸಿದ ವಸ್ತುಗಳನ್ನು ಮಾರಾಟಕ್ಕೆ ಇಡುತ್ತಾರೆ. ಹೀಗಾಗಿ ಇದು ಒಂದು ಮಿನಿ ಯುರೋಪ ಮತ್ತು ಅಮೇರಿಕೆಯ ಮಾರ್ಕೆಟ್ಟಿನ ತರಹ  ಕಾಣುತ್ತದೆ. ಪರದೇಶದ ವಿವಿಧ ವಸ್ತುಗಳನ್ನು ಮಾರಾಟಕ್ಕೆ ಇಟ್ಟಿರುತ್ತಾರೆ ಉದಾ: ಸುಂದರವಾದ ಪೀಠೋಪಕರಣಗಳು, ರಂಗುರಂಗಿನ ಬಟ್ಟೆಬರೆಗಳು, ದಿನ ನಿತ್ಯದ ಉಪಯೋಗದ ವಸ್ತುಗಳು ಇತ್ಯಾದಿ. ಪಾಶ್ಚಾತ್ಯ ಪ್ರವಾಸಿಗರು ಇಷ್ಟ ಪಡುವ ಕಾಂಟಿನೆಂಟಲ್, ಈಟೇಲಿಯನ್, ಮತ್ತು ಗೋವಾದ ಪೋರ್ತುಗೀಸರು ಬಳುವಳಿ ಕೊಟ್ಟ ವಿಂಡಾಲೂ, ಕಾಫ್ರೀಯಾಲ್ , ಇಲ್ಲಿಯ ಜನಪ್ರಿಯ ನಾನ್ವೆಜ ಮತ್ತು ಚಿಕನ್, ಶಾಕುತಿ ಹಾಗೂ ಮೀನಿನ ಊಟದ ಮನೆಗಳು ಹಸಿದ ಪ್ರವಾಸಿಗಳನ್ನು ಕೈ ಬೀಸಿ ಕರೆಯುತ್ತವೆ. ಎಲ್ಲೆಲ್ಲೂ ಕಂಡುಬರುವ ಮಧುಶಾಲೆಗಳು ಇಲ್ಲಿಯ ಬಹು ದೊಡ್ಡ ಆಕರ್ಷಣೆ.

 

ಮುಂದುವರೆಯುವದು