ಗೋವಾಕ್ಕೆ ಹೊಗೋಣ ಬಾರಾ ಭಾಗ ೨

ಅನುಪಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಅನುಕಲನ-

ಐದನೂರು ವರ್ಷಗಳ  ವರೆಗಿನ ಪಾಶ್ಚಾತ್ಯ ಜೀವನದ ಪ್ರಭಾವ ಇಲ್ಲಿಯ ಸ್ಥಳೀಯರ ಮೇಲೆ ಅಚ್ಚು ಹಾಕಿದೆ. ಕ್ರಿಸ್ತ ಸಮಾಜ ಹೆಚ್ಚು ಪ್ರಮಾಣದಲ್ಲಿರುವದರಿಂದ ಅವರ ಉಡುಗೆ, ತೊಡಿಗೆ, ಪ್ರತಿ ದಿನ ಒಂದೆರಡು ಪೇಗ್ ಕುಡಿಯುವಿಕೆ, ಕ್ರಿಕೆಟ್ ಗಿಂತ ಫುಟ್ ಬಾಲ ಆಟದಲ್ಲಿಯ ಹುಚ್ಚು, ಆಂಗ್ಲ ಮತ್ತು ಪೋರ್ತುಗೀಸ್ ಭಾಷೆಯ ಮೇಲಿನ ಮಮತೆ, ‘ತಿನ್ನು, ಕುಡಿ ಮತ್ತು ಮಜಾ ಮಾಡು’ಎಂದು ಆರಾಮ ಜೀವನ ನಡೆಸುವವರು ಇವರು ಸದಾ ಸುಖಿ. ಪೋರ್ತುಗೀಸರ ಕಾಲದಲ್ಲಿ ಸುಳ್ಳುತನ, ಕಳವು, ದರೋಡೆ, ಮೋಸ ಇಂತಹ ಅಪರಾಧಗಳಿಗೆ ಕಾಯದೆ ಗಳು ಬಿಗಿಯಾಗಿರುವದರಿಂದ ಇಲ್ಲಿ ಇಂತಹದುಕ್ಕೆ ಅವಕಾಶವಿರಲಿಲ್ಲ. ಆದರೆ ಈ ೧೫/ ೨೦ ವರ್ಷಗಳಲ್ಲಿ ಕಾಲ ಬದಲಾಗಿದೆ, ಭಾರತದ ಅನೇಕ ರಾಜ್ಯಗಳಿಂದ ವ್ಯಾಪಾರ ಉದ್ಯೋಗ ಹುಡುಕಲು ಬಂದ ಜನರು ಇಲ್ಲಿಯೇ ನೆಲೆಸಿರುವದರಿಂದ ಮುಂಚಿನ ಶಿಸ್ತು ಇಲ್ಲಿ ಇಲ್ಲ. ಆದರೂ ಇಲ್ಲಿಯ ಜನರಲ್ಲಿ ತಾಳ್ಮೆ, ಧಾರ್ಮಿಕ ಸಹಿಷ್ಣುತೆ ಬೇಕಾದಷ್ಟು ಇದೆ.  ಪಾಶ್ಚಾತ್ಯ ಜೀವನದ ಪ್ರಭಾವ ಬಹಳಷ್ಟು ಇದ್ದರೂ ಕೂಡ,ಇಲ್ಲಿಯವರು ತಮ್ಮ ತನವನ್ನು ಬಿಟ್ಟು ಕೊಟ್ಟಿಲ್ಲ. ಇವರಿಗೆ ಪ್ರತಿದಿನ ಹಿಂದುವಾಗಲೀ ಕ್ರಿಸ್ತರಾಗಲಿ ಅನ್ನ ಮೀನಿನ ಸಾರು ಮತ್ತು ಹುರಿದ ಮೀನು ಇದೇ ಪರಮಾನ್ನ. ಧಾರ್ಮಿಕ ಹಿಂದುಗಳು ವಾರದಲ್ಲಿ ಕೆಲ ದಿನಗಳಲ್ಲಿ ಉಪವಾಸ ಇಟ್ಟು ಶಾಕಾಹಾರಿ ತಿನ್ನುತ್ತಾರೆ. ಧಾರ್ಮಿಕ ರೂಢಿ ರಿವಾಜುಗಳನ್ನು ಅಚ್ಚುಕಟ್ಟಾಗಿ ಅನುಸರಿಸುತ್ತಾರೆ. ತಮ್ಮನ್ನು ‘ಗೊಂಯಕಾರ’ ಎಂದು ಕರೆದುಕೊಂಡು, ತಮ್ಮ ಭಾಷೆ, ತಮ್ಮ ನಡೆ ನುಡಿಯ ಬಗ್ಗೆ ಅಭಿಮಾನ ಇಟ್ಟು ಕೊಂಡಿದ್ದಾರೆ. ಘಟ್ಟದ ಮೇಲಿಂದ ಬಂದ ಕರ್ನಾಟಕದವರಾಗಲೀ ಮಹಾರಾಷ್ಟ್ರದವರಿಗೆ ‘ಘಾಟಿ’ ಅಸುಸಂಸ್ಕೃತರೆಂದು ಕರೆಯುವ ವಾಡಿಕೆ ಇದೆ ! ಇಲ್ಲಿ ರಾಜಕೀಯ ಅಥವಾ ಬೇರೆ ಯಾವದೇ ಕ್ಷೇತ್ರದಲ್ಲಾಗಲೀ ವೈಯಕ್ತಿಕ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ, ತಮ್ಮವರನ್ನು ಬಿಟ್ಟು ಕೊಡುವದಿಲ್ಲ. ಇಲ್ಲಿಯವರು ಆರಾಮಜೀವಿಗಳು, ಹೀಗಾಗಿ ಹೊರಗಡೆಯಿಂದ ಬಂದ ಜನರೇ ವಿವಿಧ  ಉದ್ಯೊಗ ದಂಧೆಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ಈಗಲೂ ಕೂಡ ಇಲ್ಲಿ ಯಾವದೇ ಉದ್ಯೋಗ  ಪ್ರಾರಂಭಿದರೂ ಕೂಡ ಹಣ ಗಳಿಸಬಹುದು.

ಈ ನಾಡಿನಲ್ಲಿ ಗುಡಿ ಗೋಪುರ, ಚರ್ಚುಗಳು ಮತ್ತು ಚ್ಯಾಪಲ್ಲುಗಳು ಬಹಳ ಕಂಡು ಬರುತ್ತವೆ. ಬೆಟ್ಟದ ಮೇಲೆ ದಟ್ಟ ಅರಣ್ಯದ ಮಧ್ಯೆ ರಾರಾಜಿಸುವ ಇಲ್ಲಿಯ ಪ್ರಾಚೀನ ದೇವಸ್ಥಾನಗಳು ವಿಶಾಲ, ಭವ್ಯ ಮತ್ತು ಭಿನ್ನ ಪ್ರಕಾರದ್ದಾಗಿವೆ. ಕವಳೆಯ  ಶಾ0ತಾದುರ್ಗಾ ಮತ್ತು ರಾಮನಾಥಿ, ಪ್ರಿಯೋಲದ ಮಂಗೇಶಿ, ಬಂದಿವಾಡೆಯ ಮಹಾಲಕ್ಶ್ಮೀ, ಮಾರ್ದೋಳದ   ಮ್ಹಾಳಸಾ(ಮಹಾಲಸಾ), ಬಂಡೋರಾದ ನಾಗೇಶ ಮಹಾರುದ್ರ, ಖಂಡೊಲೆಯ ಮಹಾಗಣಪತಿ, ಇನ್ನೂ ಅನೇಕ ಸಾರಸ್ವತ ಜನರ ಮತ್ತು ಕೊಂಕಣಿ ಮಾತೃಭಾಷೆಯವರ ಕುಲ ದೇವರು ಇಲ್ಲಿ ವಾಸವಾಗಿರುವದರಿಂದ ಇದು ಒಂದು ಪುಣ್ಯ ಕ್ಶೇತ್ರ ಎಂದೆನಿಸಿಕೊಳ್ಳುತ್ತದೆ. ಪೋರ್ತುಗೀಸರ ಧಾರ್ಮಿಕ ಅಸಹಿಷ್ಣುತೆಯಿಂದ ಕಂಗೆಟ್ಟ ಪೂಜಾರಿಗಳು ಸೊಂದೆ ರಾಜರ ಸಹಾಯದಿಂದ ತಮ್ಮ ದೇವರನ್ನು ಸಂರಕ್ಷಿಸಿ ಮೂರ್ತಿ ಭಂಜಕರ ಕೈಯಲ್ಲಿ ಸಿಗದ ಹಾಗೆ ಕಾಪಾಡಿದರು. ಇಲ್ಲಿಯ ವೈಶಿಷ್ಟ್ಯ ವೆಂದರೆ ಮತಾಂತರ ಹೊಂದಿದ ಕ್ರಿಸ್ತಬಾಂಧವರು ತಮ್ಮ ಪೂರ್ವಧರ್ಮದ ಅಡ್ಡಹೆಸರುಗಳನ್ನು ತೆಗೆದು ಹಾಕದೇ ತಮ್ಮ ಮುಂಚಿನ ಕುಲ ಮತ್ತು ಗ್ರಾಮ ದೇವತೆಗಳನ್ನು ಇನ್ನೂ ಪೂಜಿಸುತ್ತಾರೆ. ಅಷ್ಟೇ ಅಲ್ಲ ದೇವಸ್ಥಾನಗಳ ಪೂಜಾರಿಗಳು ಕೂಡ ಅವರಿಗೆ ಸಲ್ಲುವ ಮಾನ ಸನ್ಮಾನವನ್ನು ಕೊಡುವದುಂಟು!

ಅದೇ ತರಹ ಹಿಂದುಗಳು ಕ್ರಿಸ್ತರ ಜಾತೆ ಮತ್ತು ಹಬ್ಬಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ರೈತರು ತಮ್ಮ ಮೊದಲ ಪೈರನ್ನು ಸ್ಥಳೀಯ ದೇವಸ್ಥಾನಕ್ಕೆ ಮತ್ತು ಚರ್ಚಿಗೆ ಅರ್ಪಿಸುವ ಈ ಅಪೂರ್ವ ರೂಢಿಯನ್ನು ‘ನೊವಿದಾದೆ’ ಎಂಬ ಇಲ್ಲಿಯ ಸುಗ್ಗಿಯ ಹಬ್ಬದಲ್ಲಿ ಗಮನಿಸಬಹುದು. ಇನ್ನು ಗೋವಾದ ಕಾರ್ನಿವಲ್, ಸಂತ ಫ್ರಾನ್ಸಿಸ ಝೇವಿಯರ್ನ ಹಬ್ಬದೂಟ, ಥ್ರೀ ಕಿಂಗ್ಸ್ಸ ಹಬ್ಬದೂಟ, ಕ್ರಿಸ್ಮಸ್ ಮತ್ತು ಹೊಸವರ್ಷದ ಉತ್ಸವಗಳನ್ನು ನೋಡಲು ಮತ್ತು ಇವುಗಳಲ್ಲಿ ಭಾಗವಹಿಸಲು ಇಲ್ಲಿ ಡಿಸೆಂಬರ ಮತ್ತು ಜನೇವರಿ ತಿಂಗಳಲ್ಲಿ ಜಗತ್ತಿನ ಮೂಲೆಗಳಿಂದ ಬರುವ ಜನಜಂಗುಳಿ ಜಾತಿಮತಭಾಷೆಯ ಚೌಕಟ್ಟಿನಿಂದ ಹೊರಬಂದು ಉತ್ಸಾಹದಿಂದ ಆಚರಿಸುವದನ್ನು ನೋಡುವದೇ ಒಂದು ಸಂಭ್ರಮ.

ಗ್ರಾಮೀಣ ಮತ್ತು ಆಧುನಿಕತೆಯ ಸಂಗಮ-

ಗೋವೆಯ  ರಾಜಧಾನಿಯಾದ ಪಣಜಿಯಾಗಲೀ, ವ್ಯಾಪಾರದ ಕೆಂದ್ರವಾದ ಮಾಪಸಾ, ಮಾಡಗಾಂವವಾಗಲೀ ಇಲ್ಲವೇ ವಿಮಾನ ನಿಲ್ದಾಣ ಮತ್ತು ಬಂದರು ಇರುವ ವಾಸ್ಕೋವಾಗಲೀ ಈ ಊರುಗಳ ವೈಶಿಷ್ಟ್ಯವೆಂದರೆ ಇಲ್ಲಿ ಸಿಟಿ ಮತ್ತು ಹಳ್ಳಿಯ ಕಲಬೆರಕೆ ಕಾಣಬಹುದು. ನಾಲ್ಕೈದು ಅಂತಸ್ತಿನ  ಮ ನೆಗಳ ಹಿಂದೆ ಮುಂದೆ ೪/೫ ಏಕರುಗಳ ಗದ್ದೆಗಳನ್ನು ಕಾಣಬಹುದು. ರೈತರು ತಾವು ಬೆಳೆದುದನ್ನು(ಫಸಲ) ರಸ್ತೆಗಳ ಬದಿಗೆ ಒಣಗಲು ಹಾಕುತ್ತಾರೆ. ದ್ವಿ ಮತ್ತು ನಾಲ್ಕು ಚಕ್ರಿನ ವಾಹನಗಳು ಅವುಗಳ ಬದಿಯಿಂದ ಓಡಾಡುತ್ತವೆ. ಹೀಗಾಗಿ ಎಲ್ಲೆಲ್ಲೂ ಹಸಿರು ಪೈರು ಕಾಣುವದು ಸಹಜ. ರಸ್ತೆಯ ಪಕ್ಕಕ್ಕೆ ಇಲ್ಲಿಯ ರೈತ ಹೆಣ್ಣುಮಕ್ಕಳು ತಾವು ಬೆಳೆದ ತರಕಾರಿಗಳನ್ನು, ಹಣ್ಣು ಹಂಪಲಗಳನ್ನು ಮಾರುವದನ್ನು ನೋಡಬಹುದು. ಪ್ರತಿಯೊಂದು ಊರಲ್ಲಿ ವಾರದ ಸಂತೆ ಕೂಡುತ್ತದೆ. ತಾಜಾ ತರಕಾರಿ, ನಿತ್ಯ ಉಪಯೋಗಿ ವಸ್ತುಗಳು, ತಾಜಾ ಮತ್ತು ಒಣಗಿಸಿದ ಮೀನು ಇವೆಲ್ಲ ಕಡಿಮೆ ಕ್ರಯದಲ್ಲಿ ಸಿಗುವದರಿಂದ ಬಹುತೇಕ ಎಲ್ಲರೂ ಸಂತೆಗೆ ಹೋಗುವವರೆ. ಹೀಗೆ ಸಿಟಿಯ ಅನುಕೂಲ ವನ್ನು ಹಾಗೂ ಹಳ್ಳಿಯ ತಾಜಾತನವನ್ನ್ನು ಪಡೆಯುವ ಗೋಂಯಕಾರನಿಗೆ ತನ್ನ ನಾಡಿನ ಬಗ್ಗೆ ಬಹಳ ಅಭಿಮಾನವಿದೆ. ಇದೇ ಇಲ್ಲಿಯ ವೈಶಿಷ್ಟ್ಯ. ಈ ಗ್ರಾಮೀಣ ಮತ್ತು ಆಧುನಿಕತೆಯ ಜೀವನದ ಶೈಲಿಯೇ ಪಾಶಾತ್ಯ ಪ್ರವಾಸಿಗರನ್ನು ಗೋವೆಗೆ ಆಕರ್ಷಿಸುವದು.

ಸುಷಮಾ ಆರೂರ್