ಗೀತಾ ರಹಸ್ಯದ ಕರ್ಮಯೋಗಿ

ವೇದೋಪನಿಷತ್ತುಗಳ ಸಾರವೆಂದೇ ಪ್ರಸಿದ್ಧವಿರುವ ಭಗವದ್ಗೀತೆ ಹಿಂದುಗಳಿಗೆಲ್ಲ  ಪವಿತ್ರ ಗ್ರಂಥವಾಗಿದ್ದಂತೆ , ಈ ಧರ್ಮದ ವಿವಿಧ ಆಚಾರ್ಯರಿಗೆಲ್ಲ  ತಂತಮ್ಮ ವಿಶ್ಲೇಷಣೆಗೆ ಅವಕಾಶ ಮಾಡಿಕೊಟ್ಟ ಸಂಗ್ರಹ  ಗ್ರಂಥವಾಗಿದೆ. ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಅದ್ವೈತ, ದ್ವೈತ, ವಿಶಿಷ್ಟದ್ವೈತ  ಮಾರ್ಗಗಳನ್ನು ಬೋಧಿಸಿದ ಆಚಾರ್ಯರಂತೆ, ಆಧುನಿಕ ಕಾಲದಲ್ಲೂ  ಕರ್ಮಯೊಗ ಹಾಗೂ ಅನಾಸಕ್ತಿ ವಿಧಾನಗಳನ್ನು  ಅದರಲ್ಲಿ ಕಂಡವರು ಲೋಕಮಾನ್ಯ ಟಿಳಕರು. ಅನಾಸಕ್ತಿಯೋಗ ಕಂಡುಕೊಂಡವರು ಗಾಂಧೀಜಿ. ಅದರಲ್ಲಿ ಭಾರತ ಬ್ರಿಟಿಶರ ದಾಸ್ಯದ ಶೋಷಣೆಯ ದಿನಗಳಲ್ಲಿ ನಮ್ಮವರ ಕುಂದುಕೊರತೆಗಳನ್ನು ಗಮನಿಸಿ, ಕ್ರೀಯಾಶೀಲರನ್ನಾಗಿಸಲು ಪ್ರಯತ್ನಿಸಿದ ಮಹಾತ್ಮರಲ್ಲಿ ಸ್ವಾಮಿ ವಿವೇಕಾನಂದರು ಹಾಗೂ ಲೋಕಮಾನ್ಯ ಟಿಳಕರು. ಸಮಕಾಲೀನರಾಗಿದ್ದ ಈ ಮಹಾಪುರುಷರು ಪೂರ್ವ- ಪಶ್ಚಿಮ  ಭಾರತಗಳಲ್ಲಿ ಜನಜಾಗೃತಿಯ ಕಾರ್ಯವನ್ನು ತಮ್ಮದೇ ವಿಧದಲ್ಲಿ ಕೈಗೊಂಡರು. ಭಾರತೀಯರ ಮೈಗಳ್ಳತನ, ಒಡಕು, ರಾಷ್ಟ್ರಾಭಿಮಾನದ ಕೊರತೆ ಹಾಗೂ ಪುಕ್ಕಲುತನಗಳನ್ನು  ಸ್ವಾಮಿ ವಿವೇಕಾನಂದರು ಖಂಡಿಸಿದ್ದು ಸರ್ವಶೃತ. “ ನಮಗೆ ಬೇಕಾದದ್ದು ದೇಹಬಲ, ಬುದ್ಧಿಬಲ, ಆತ್ಮಾವಲಂಬನ , ಆತ್ಮವಿಶ್ವಾಸ  ಎಂದು ಕಹಳೆಯೂದಿದಂತೆ ಲೋಕಮಾನ್ಯ ಟಿಳಕರೂ ಇವೇ ದೌರ್ಬಲ್ಯಗಳನ್ನು ಕಿತ್ತೊಗೆಯಲು ಕರೆ ಕೊಟ್ಟವರು. ಅದಕ್ಕಾಗಿ ಅವರು ಬಳಸಿದ ಸಾಧನ ಭಗವದ್ಗೀತೆ ಕಲಿಸುವದು, ಒತ್ತಿ ಹೇಳಿದ್ದು ಕರ್ಮಯೋಗ. ಭಗವದ್ಗೀತೆಗೆ ತಮ್ಮದೇ ವ್ಯಾಖ್ಯಾನ ಕೊಟ್ಟಿದೆ.

ಗೀತಾ ರಹಸ್ಯ ಮೊದಲು ಮರಾಠಿಯಲ್ಲಿ ಬಳಿಕ ಇಂಗ್ಲಿಷಿನಲ್ಲಿ ಬಂದು ಅಂದಿನ ಸುಶಿಕ್ಷಿತ ಸಮಾಜದಲ್ಲಿ ವೈಚಾರಿಕ ಕ್ರಾಂತಿಯನ್ನೇ ನಿರ್ಮಿಸಿತು. ಮೊದಲಿಗೆ ಇದನ್ನು ಬರೆದ ಮಹಾ ಮೇಧಾವಿಯ ಅಲ್ಪ ಪರಿಚಯ ಕೊಟ್ಟು  ಅವರ ಕರ್ಮ ಯೋಗ ಪ್ರತಿಪಾದನೆಯ  ಪ್ರಸ್ತುತತೆ ನಮ್ಮಂಥ , ಮಹಿಳೆಯರಿಗೆ  ಎಷ್ಟು ಇದೆ ಎಂದು ಹೇಳುವ  ಪ್ರಯತ್ನ ಮಾಡ್ತೀನಿ. ’ಮಹಾಜನೋ ಯೇನಗತಃ ಸ ಪಂಥಾ ’ ಎಂದು ಸ್ವತಃ ದೊಡ್ಡ ಕರ್ಮಯೋಗಿಯಾಗಿ ಬಾಳಿದ ಬಾಳ ಗಂಗಾಧರ ಟಿಳಕರು ’ಕೇಸರಿ’ ಪತ್ರಿಕೆ ನಡೆಸಿ ಜನಜಾಗ್ರತಿಗೆ ಕಾರಣರಾದರು. ಒಂದು ಬಾರಿ ಜೈಲು ವಾಸ ಅನುಭವಿಸಿ ಬಂದ ದಿನಗಳಲ್ಲಿಯ ಘಟನೆ. ಆಗ ಮುಂಬೈ ಪ್ರಾಂತದಲ್ಲಿ ಪ್ಲೇಗ್ ಹಾವಳಿ ಹಬ್ಬಿತ್ತು. ಸ್ವತಃ ಮನೆಯಲ್ಲಿ ಮಗನು ಪ್ಲೇಗಿಗೆ ತುತ್ತಾದ ಸಮಯದಲ್ಲಿ ಕೇಸರಿ ಆಫೀಸಿನಲ್ಲಿ ಸಂಪಾದಕೀಯ ಬರಯುತ್ತಿದ್ದ ವ್ಯಕ್ತಿಯ ಮನಸ್ಸಿನ ಸ್ಥಿಮಿತತೆ ಎಂತಹದಿರಲು ಸಾಕು! ಅವರಿಗೆ ದೊಡ್ಡ ದಿವ್ಯ  ನಂತರದ ದಿನಗಳಲ್ಲಿ ಕಾದಿತ್ತು. ರಾಜದ್ರೋಹದ ಆರೋಪದ ಮೇಲೆ ಅವರಿಗೆ ೬ ವರ್ಷಗಳ ಕಾಳಾಪಾಣಿ ಶಿಕ್ಷೆಯಾಯಿತು. ಬ್ರಹ್ಮ ದೇಶದ ಮಂಡಾಲೆಯಲ್ಲಿ ಏಕಾಂತವಾಸದ ತುರಂಗ ಶಿಕ್ಷೆ.

ಅವರಿಗೆ ಅಡಿಗೆ ಮಾಡಿ ಹಾಕಲಿಕ್ಕೆ ಬ್ರಾಹ್ಮಣ ಕೈದಿಯೊಬ್ಬ ನಿಯುಕ್ತನಾಗಿದ್ದ. ಅವನಿಗೆ ನ್ಯೂಮೋನಿಯಾ ಬಂದು ಟಿಳಕರು ಅವನಿಗೇ ಅಡಿಗೆ ಮಾಡಿ, ಶುಶ್ರೂಷೆ ಒದಗಿಸುವ ಪ್ರಸಂಗ ಬಂದಿತು. ಅವನನ್ನು ಅಂತೂ ಬದುಕಿಸಿಕೊಂಡರು. ಬರ್ಮಾದ ಸರಕಾರ ಅವರಿಗೆ ಒದಗಿಸಿದ ಒಂದೇ ಅನುಕೂಲವೆಂದರೆ, ಇಂಗ್ಲಿಷ, ಸಂಸ್ಕೃತ, ಜರ್ಮನ್ ಗ್ರಂಥಗಳು. ಅದಾಗಲೇ ಐವತ್ತೇರಡು ವರ್ಷ ದಾಟಿದ  ಟಿಳಕರ ದೃಷ್ಟಿ ಮಂದವಾಗಿತ್ತು. ಮಂಡಾಲೆಯ ಏಕಾಂತವಾಸದಲ್ಲಿ ಅವರು ಕಂಡುಕೊಂಡ  ಗೀತಾ ಸಂದೇಶವೇ  ಕರ್ಮಯೋಗದ್ದು.

ಎಲ್ಲರಿಗೂ ಗೊತ್ತಿರುವಂತೆ ಕುರುಕ್ಷೇತ್ರದಲ್ಲಿ ಯುದ್ಧಸನ್ನದ್ಧ ಸೇನೆಗಳ ನಡುವೆ ಇದ್ದಕ್ಕಿದ್ದಂತೆ ಅರ್ಜುನನಿಗೆ ತನ್ನವರನ್ನೇ ತಾನು ಕೊಲ್ಲಬೇಕಾಗಿ ಬಂದ ಭೀಕರ ಸಂದರ್ಭ, ಅದಕ್ಕೆ ಹೊಂದಿ ಮಾನವ ಸಹಜ  ಸಂದೇಹ, ಜಿಗುಪ್ಸೆ, ನೋವುಗಳು ಕಾಡಲಾರಂಬಿಸಿದಾಗ  ಆ ಪಾರ್ಥನಿಗೆ ಪಾರ್ಥಸಾರಥಿಯಾಗಿದ್ದ ಶ್ರೀ ಕೃಷ್ಣ ,ಅವನ ಕರ್ತವ್ಯದ  ಅರಿವು ಮಾಡಿಕೊಟ್ಟ ಈ ಮಾತು ಎಲ್ಲರಿಗೂ ಗೊತ್ತಿದ್ದದ್ದೆ. ’ಯುದ್ಧಸ್ಯ ವಿಗತಜ್ವರಃ ಯುಧ್ಯಸ್ವ’- ’ಯುದ್ಧ ಮಾಡು’ ಅನ್ನುವದೇ ಗೀತೆಯ ಸರಳ ಸಂದೇಶ ಸಾಂಕೇತಿಕವಾಗಿ ಬಂದಿದೆ ಎಂದು ಟಿಳಕರು ವಾದಿಸಿದರು.      ’ಲೋಕೇಸ್ಮಿನ್ ದ್ವಿವಿಧಾ ನಿಷ್ಠಾ ಪುರಾಪ್ರೋಕ್ತಾಮಮಾನಷು, ಜ್ಞಾನಯೋಗೇನ ಸಾಂಖ್ಯಾನಾಂ, ಕರ್ಮಯೋಗಿನ ಯೋಗಿನಾಂ’ ಎಂಬ ಸಂದೇಶ ಸ್ಪಷ್ಠವಾಗಿಯೇ ಇದ್ದರೂ, ಟಿಳಕರಿಗೆ ಒತ್ತು ಕಂಡದ್ದು ಮಾನವನ ಕರ್ಮನಿಷ್ಠೆ, ಕ್ರೀಯಾಶೀಲತೆ. ಅದನ್ನೇ ಶ್ರೀ ಕೃಷ್ಣ ಪರಮಾತ್ಮ ಬೋಧಿಸಿದ್ದಾನೆ ಎಂದು ಅವರು ಪ್ರತಿಪಾದಿಸಿದರು.

ಟಿಳಕರ ರಾಜದ್ರೋಹದ ಆರೋಪದ ಕತೆ ಭಾರತದ ಇತಿಹಾಸದಲ್ಲಿ ಬ್ರಿಟಿಷರು ನ್ಯಾಯಕ್ಕೆ ಬಗೆದ ದ್ರೋಹದ ಕತೆಯಾಗಿದೆ. ಆಗ ತಮ್ಮ ಕೇಸನ್ನು ಟಿಳಕರು ವಕೀಲರಾಗಿ ತಾವೇ ಸಮರ್ಥಿಸಿಕೊಂಡಿದ್ದರೂ ಶಿಕ್ಷೆ ಸ್ಥಿರ ಪಟ್ಟಿತು. ಆಗ ಅವರು ಉದ್ಗರಿಸಿದರು.  “ತನ್ನಿಂದ ಇನ್ನು ಒಳ್ಳೆಯ ಕೆಲಸ ದೇಶಕ್ಕಾಗಿ ಆಗಲಿಕ್ಕೆಂದೇ ವಿಧಿಯು ಈ ಶಿಕ್ಷೆ  ವಿಧಿಸಿರಲು ಸಾಕು!” ಎಂದು.  ಈಗ ಮುಂಬೈ ಹೈಕೋರ್ಟಿನಲ್ಲಿ ಅವರು ಆರೋಪಿಯೆಂದು ನಿರ್ಧರಿಸಲ್ಪಟ್ಟ ಜಾಗದಲ್ಲೇ ಈ ವಾಕ್ಯಗಳ ಫಲಕ ನಿಲ್ಲಿಸಲ್ಪಟ್ಟಿದೆ. ಟಿಳಕರು ತಮ್ಮ ಆರು ವರ್ಷಗಳ ಶಿಕ್ಷಾವಧಿಯನ್ನು ಭಗವದ್ಗೀತೆಯ ಇಂಗಿತಾರ್ಥವನ್ನು ತಾವು ಕಂಡಂತೆ ವ್ಯಾಖ್ಯಾನಿಸಲು ಉಪಯೋಗಿಸಿದರು.

ಈ ಅವಧಿಯಲ್ಲಿ ಪುಣೆಯಲ್ಲಿದ್ದ ಅವರ ಪತ್ನಿ ತೀರಿಕೊಂಡರು. ಈ ವಾರ್ತೆ ಅವರಿಗೆ ತಲುಪಿದ್ದು ಒಂದು ವಾರದ ಬಳಿಕ . ದೇಶಕ್ಕಾಗಿ ಎಷ್ಟೊಂದು ನೋವು, ತ್ಯಾಗ , ಸಂಕಟಗಳನ್ನು ಟಿಳಕರು ಅನುಭವಿಸಬೇಕಾಗಿ ಬಂತು!

ಬಿಡುಗಡೆ ಆಗುವ ಹೊತ್ತಿಗೆ ಟಿಳಕರಿಗೆ ಡಾಯಬೆಟಿಸ್, ರಕ್ತದೊತ್ತಡಗಳು ಬೆಳೆದಿದ್ದವು. ದೃಷ್ಟಿ ಮಂದವಾಗಿತ್ತು. ಆದರೆ  ಭಾರತೀಯ ಪ್ರಜೆಗಳ ದೃಷ್ಟಿಯಲ್ಲಿ ಅವರು ಆಗಲೇ”ಟಿಳಕ ಮಹಾರಾಜ್’ ಆಗಿಬಿಟ್ಟಿದ್ದರು.ಇನ್ನೊಂದು ಇತಿಹಾಸದ ವಿಡಂಬನೆ ಹೇಗಿದೆ ನೋಡಿ! ಬರ್ಮಾದ ಕೊನೆಯ ಅರಸು ಥಿಬಾ ಎಂಬಾತನನ್ನು ಟಿಳಕರ ಜನ್ಮಸ್ಥಳವಾದ ರತ್ನಾಗಿರಿಯಲ್ಲಿ ಬಂಧನದಲ್ಲಿ ಇಟ್ಟಿದ್ದರು., ಹಾಗೂ ಆ ಊರಿನ ಟಿಳಕರು ಬರ್ಮಾದ ಮಂಡಾಲೆಯಲ್ಲಿ ಜೈಲುವಾಸದಲ್ಲಿ ಇರಬೇಕಾಯಿತು.

ಇನ್ನು ’ಗೀತಾ ರಹಸ್ಯದ ಕರ್ಮಯೋಗ’. ಇದನ್ನು ನನಗೆ ಅನಿಸಿದಂತೆ ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ  ಕ್ರಮದ ಬಗ್ಗೆ ಒಂದು ಮಾತು. ಹುಲು ಮಾನವನು ಪ್ರತಿದಿನ ಎದುರಿಸಬೇಕಾದ ಬದುಕಿನ ಹೋರಾಟವನ್ನೇ ಮಹಾಭಾರತ ಯುದ್ಧವನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಭಗವದ್ಗೀತೆಯಲ್ಲಿ ಕಾಣಲಾಗಿದೆ ಮತ್ತು ಅದನ್ನು ಎದುರಿಸಬಹುದಾದ ಮಾನವ ಪ್ರಯತ್ನದ ಮೇಲೆ ಒತ್ತುಕೊಡಲಾಗಿದೆ ಎಂದು ಊಹಿಸಿಕೊಂಡರೆ ನಮ್ಮ ಗೃಹಿಣಿಯರು ದೈನಂದಿನ ಬದುಕಿನ ದ್ವಂದ್ವಗಳನ್ನು ಹೆಚ್ಚು ಸಮರ್ಥವಾಗಿ ಅರ್ಥೈಸಬಹುದು ಎಂದು ತೋರುತ್ತದೆ. ಪ್ರತಿದಿನ ನಾವು ಕಾಣುವ ಆಕಸ್ಮಿಕಗಳು, ಸಾವು-ನೋವುಗಳು, ಆರ್ಥಿಕ ಅಡಚಣೆಗಳು, ಅನಿರೀಕ್ಷಿತ ಆಘಾತಗಳು ಈ ಬದುಕಿನ ಹೋರಾಟದ ವಿವಿಧ ಮುಖಗಳಷ್ಟೇ! ವಿಧಿ ತಂದಿಟ್ಟ ದುಃಖಗಳ ಜೊತೆಗೆ ಮನುಷ್ಯ ಖುದ್ದಾಗಿ ತಂದುಕೊಂಡ ತಾಪತ್ರಯಗಳು ಸೇರಿಕೊಳ್ಳುತ್ತವೆ. ಎಲ್ಲ ಇದ್ದೂ ಸ್ವಪ್ರತಿಷ್ಟೇ, ಅಧಿಕಾರ, ಲಾಲಸೆ, ಸಂಪತ್ತಿನ ದುರಾಸೆ, ಇವುಗಳ ಸಲುವಾಗಿ ನಡೆದ ತಾಕಲಾಟಗಳನ್ನು ನೋಡುತ್ತೇವೆ. ಇವಾವವೂ ಬೇಡವೆಂದು ಸಾದಾ ಸರಳ ಜೀವನ ನಡೆಸುವ ನಿರುಪದ್ರವಿ ಜೀವಿಗಳಿಗೂ ದುಃಖ ತಪ್ಪಿಲ್ಲ . ಅಂಗವಿಕಲತೆ, ಅಸಹಾಯತೆ, ಸಾಂಸಾರಿಕ ವೈಫಲ್ಯತೆ,, ಪ್ರೋತ್ಸಾಹದ ಕೊರತೆಗಳು ಸಾರ್ವತ್ರಿಕವಾಗಿ  ಗೋಚರಿಸುತ್ತವೆ. ಇಂಥಲ್ಲಿ ಮುಖ್ಯವಾಗಿ  ಮಹಿಳೆಗೆ ಲಭ್ಯವಿರುವ ಸಾಧ್ಯತೆ ಒಂದೇ, ಮನೋಬಲ ಬೆಳೆಸಿಕೊಳ್ಳುವದು. ಈ ಆತ್ಮಸ್ಥೈರ್ಯ ಸಹಸಾ ಬರಲಾರದು! ಕ್ರಮೇಣ ಬೆಳೆಸಿಕೊಳ್ಳಬೇಕಾದದ್ದು. ಇದಕ್ಕೆ ಸಹಾಯವಾಗುವಂಥದು ಶಿಸ್ತು, ಗುರುಮುಖೇನ ಲಭ್ಯವಾಗದಿದ್ದರೆ ಸ್ವಾಧ್ಯಾಯದಿಂದ, ನೇಮ ನಿಷ್ಟೆಯಿಂದ ಮುಖ್ಯವಾಗಿ ಆತ್ಮವಿಶ್ವಾಸದಿಂದ ಬೆಳೆಸಿಕೊಳ್ಳಬಹುದು. ಇದನ್ನೇ ಯೋಗದ ವಿವಿಧ ರೂಪಗಳೆಂದು ಗೀತೆಯಲ್ಲಿ ಕರೆಯಲಾಗಿದೆ ಎಂದು ಟಿಳಕರು ಅರ್ಥೈಸುತ್ತಾರೆ.  ಜ್ಞಾನ, ಸಾಂಖ್ಯದಂತಹ ದರ್ಶನ ಯೋಗಗಳು ಯೋಗಿಗಳಿಗೆ, ವೈರಾಗಿಗಳಿಗೆ ಮಾತ್ರ ಸಾಧ್ಯ. ಸಾಮಾನ್ಯರಿಗೆ ಭಕ್ತಿ, ಕರ್ಮ ಅಂದರೆ ದೈನಂದಿನ ತಂತಮ್ಮ ಕೆಲಸಗಳಲ್ಲಿಯೇ ಕುಶಲತೆ ಕೆಲಮಟ್ಟಿಗೆ , ’ ಕಾಯಕವೇ ಕೈಲಾಸ’ ಕಲ್ಪನೆಯ ಮೂರ್ತ ರೂಪವನ್ನು ಕಾಣಲು ಸಾಧ್ಯ. ಯೋಗಃ ಕರ್ಮಸುಕೌಶಲಂ  ಆಯಾ ಕೆಲಸದಲ್ಲಿ ಕಷ್ಟಪಟ್ಟು ಪ್ರಾವಿಣ್ಯ ಗಳಿಸಲು ಸಾಧ್ಯ! ಎಂಬುದು ಸಂದೇಶ!

ಡಾ. ಜ್ಯೋತ್ಸ್ನಾ ಕಾಮತ್