ಅಪರೂಪದ ಅಭಿನೇತ್ರಿ ಭಾರತಿ ಹಾವನೂರ (೧೯೩೨-೨೦೧೭) ಭಾಗ ೨

ದಿಲ್ಲಿಯಲ್ಲಿ National school of Drama ಪ್ರಾರಂಭವಾಗಿತ್ತು. ಮೂರು ಮಕ್ಕಳ ತಾಯಿ ಭಾರತಿಯವರಿಗೆ ಆ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಹಂಬಲ! ಪತಿಯ ಪ್ರೋತ್ಸಾಹವೂ ಇತ್ತು. ಮಕ್ಕಳ ಲಾಲನೆ- ಪಾಲನೆ ಯಾರಾರಿಗೋ ಹಂಚಿ, ಹೆಚ್ಚಿನ ಹೊಣೆ ಪತಿರಾಜರಿಗೆ ವಹಿಸಿ, ಮಾಮಿಯವರ ಸವಾರಿ ದಿಲ್ಲಿಗೆ ಹೊರಟಿತು.ಅಲ್ಲಿಯ ಕಠಿಣ ಶ್ರಮದ ತರಬೇತಿ, ಉಚ್ಚ ಅಕಾಡೆಮಿಕ್ ವಿಷಯ, ಇಂಗ್ಲಿಷ್ ಸಿಲ್ಯಾಬಸ್, ಒಗ್ಗದ ವಾತಾವರಣದಲ್ಲಿ ಬೋಧನೆಗಿಂತ ಹೆಚ್ಚಾಗಿ ದಿಲ್ಲಿಯ ವಿಷಮ ಹವೆ ಅವರಿಗೆ ಹೊಂದಲಿಲ್ಲ. ನಡುವೆಯೆ ಕೋರ್ಸ್ ಬಿಟ್ಟು ಧಾರವಾಡಕ್ಕೆ ಮರಳುವಂತೆ ಆಯಿತು. ಕರ್ನಾಟಕ ಕಲೋದ್ಧಾರಕ ಸಂಘಕ್ಕೆ ಅವರು ಮರಳಿದ್ದು ವರದಾನವಾಗಿ ಪರಿಣಮಿಸಿತು! ರವಿವಾರದ ನಾಟಕ ಶಾಲೆ ಪ್ರಾರಂಭವಾಯಿತು. ಮುಂದೆ ೩೦ ವರ್ಷಗಳ ಕಾಲ ಅದನ್ನು ಸ್ಥಾಪಿಸಿದ ಸ್ವಾಮಿರಾಯ ಕೌಲಗಿ ಹಾಗೂ ವಿರೂಪಾಕ್ಷ ನಾಯಕರು ನಡೆಸಿಕೊಂಡು ಬಂದರು.

ಆ ಹೊತ್ತಿಗೆ ಹಾವನೂರ ಮಾಮಾ ಧಾರವಾಡ ಬಿಟ್ಟು ಮುಂಬೈಯ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫ್ಂಡೆಮೆಂಟಲ್ ರಿಸರ್ಚ್ ಸಂಸ್ಥೆಯ ವಾಚನಾಲಯಧಿಕಾರಿಯಾಗಿ ಹೊರಟೇ ಬಿಟ್ಟರು. ಸರಿ ಈಗ ಮಕ್ಕಳು. ಮನೆ ಸಂಭಾಳಿಸುತ್ತ, ರವಿವಾರದ ನಾಟಕ ಶಾಲೆ ನಡೆಸುತ್ತ, ಅದೇಷ್ಟೋ ನಾಟಕಗಳನ್ನು ನಿರ್ದೇಶಿಸುತ್ತ ಮಾಮಿಯವರು ಧಾರವಾಡದಲ್ಲಿ ಉಳಿದರು.

ನನ್ನ ಜೀವನದಲ್ಲೂ ಮಹತ್ವದ ಬದಲಾವಣೆಗಳಾಗಿ ಅಕಾಶವಾಣಿ ನೌಕರಿ, ಮದುವೆ, ವರ್ಗಾವರ್ಗಿಗಳಿಂದಾಗಿ ನಾಟಕ ಜಗತ್ತಿನ ಸಂಪರ್ಕ ತಪ್ಪಿ ಹೋಯಿತು. ಜಯಪುರ್, ಬೆಂಗಳೂರು, ಕಲಕತ್ತಾ, ಮೈಸೂರುಗಳ ಬಳಿಕ ಮುಂಬೈಗೆ ಹೋದೆ. ಆ ತನಕ ಹಾವನೂರ ಮಾಮಾ, ಮಂಗಳೂರ ವಿಶ್ವವಿದ್ಯಾಲಯದ ಪ್ರಾಧ್ಯಾಪಗಿರಿ ಮುಗಿಸಿ, ಮುಂಬೈ ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಅವರಿಗೆ ಬೋಧನೆ, ಸಂಶೋಧನೆ ಗಳೆರಡೂ ಈಗ ನಾಟಕಕ್ಕಿಂತ ಹೆಚ್ಚು ಪ್ರಿಯವಾಗಿ ಅದರಲ್ಲಿ ಮುಳುಗಿದರೂ ವಿದ್ಯಾರ್ಥಿ ವಾತ್ಸಲ್ಯ ಮರೆತಿರಲಿಲ್ಲ. ನನ್ನ ಸಂಶೋಧನಾ ವಿಷಯದಲ್ಲಿ ಆಸಕ್ತಿ ವಹಿಸಿ, ಹೊಸ ವಿಷಯ ಸೇರಿಸುವಂತೆ ಸೂಚಿಸಿ, ಅಲ್ಲಿಯ ವಿಶ್ವವಿದ್ಯಾಲಯ ವಾಚನಾಲಯದಲ್ಲಿ ಹೆಚ್ಚಿನ ಅಧ್ಯಯನ ಕೈಕೊಳ್ಳುವಂತೆ ಮಾಡಿ, ಪುಸ್ತಕ ಬರೆಸಿ- ಮುಂಬೈ ವಿಶ್ವವಿದ್ಯಾಲಯ ದಿಂದ ಪ್ರಕಟವಾಗುವಂತೆ ನೋಡಿಕೊಂಡರು.ನನ್ನ ,’ಕರ್ನಾಟಕ ಶಿಕ್ಷಣ ಪರಂಪರೆ’ಗೆ ೧೯೮೮ರ ವರ್ಷದ ಅತ್ಯುತ್ತಮ ಸೃಜನೇತರ ಕೃತಿಯ ಪ್ರಶಸ್ತಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಸಂದಿತು.

ಈ ವೇಳೆಗೆ ಹಾವನೂರರ ಮುಂಬೈ ಮನೆಯಲ್ಲಿ ಭಾರತಿ ಮಾಮಿ ಭೇಟಿಯಾಗಿದ್ದರು. ಎಂದಿನಂತೆ ಈ ದಂಪತಿಗಳದು ಒಂಟಿ ಸಂಸಾರವೇ ಆಗಿತ್ತು! (ನನ್ನ ಸಂಸಾರದಂತೆಯೇ!) ತಮ್ಮ ಮದುವೆಯ ೨೫ನೇ ವರ್ಧಂತ್ಯವನ್ನು ಊರಲ್ಲಿ ಮುಗಿಸಿಕೊಂಡು ಬಂದಿದ್ದರು. ನರೆಗೂದಲು ಬಿಟ್ಟರೆ ಮಾಮಿಯವರಲ್ಲಿ ವಿಶೇಷ ಬದಲಾವಣೆಯಿರಲಿಲ್ಲ. ಹೋಮಿಯೋಪತಿ ಅಭ್ಯಸಿಸುತ್ತಿದ್ದರು. ಸಾಂಸಾರಿಕ ವಿಷಯದಲ್ಲಿ ಸಮದುಃಖಿಗಳಾದ (!) ನಾವುಪರಸ್ಪರ ವಿಚಾರ ವಿನಿಮಯದಲ್ಲ್ ತೊಡಗಿಕೊಂಡಿರುತ್ತಿದ್ದೆವು. ಸ್ವಂತ ಮನೆಯಿಲ್ಲವೆಂಬ ಕೊರಗು ಮಾಮಿಯವರನ್ನು ಕಾಡುತ್ತಿತ್ತು. ನೌಕರಿ-ಊರುಗಳ ಬದಲಾವಣೆ, ಓದುವ ಮಕ್ಕಳ ಹೊಣೆ, ಮದುವೆ ಇತ್ಯಾದಿಗಳೆಲ್ಲ ಮಧ್ಯಮವರ್ಗವನ್ನು ಎಡಬಿಡದೇ ಕಾಡುವ ವಿಚಾರಗಳಷ್ಟೇ? ಪತಿ ನಿವೃತ್ತರಾದ ಮೇಲೆ ಒಟ್ಟಿಗಿರುವ ವಿಚಾರದಲ್ಲಿರುತ್ತಿದ್ದರು.

ಕೊನೆಗೂ ಮಗ ಸಂಜಯ ವಿಜಯನಗರದಲ್ಲಿ ಫ್ಲ್ಯಾಟ ಕೊಂಡು ತಂದೆತಾಯರನ್ನು ಸ್ಥಾಪಿಸಿ ಅಮೇರಿಕೆಗೆ ಪತ್ನಿಯೊಡನೆ ತೆರಳಿದ. ಆದರೆ ನಂತರ ಶೋಧಕ ತಂದೆ, ಅವನ ಮಾತು ಕೇಳುತ್ತಾರೆಯೇ? ಬಾಸೆಲ್, ಜರ್ಮನಿ, ಇಂಗ್ಲಂಡ್ ಎಂದು ರೆವರೆಂಡ್ ಕಿಟ್ಟೆಲ್ಲರ ಬೆಳಕಿಗೆ ಬಾರದ ಕೃತಿಗಳನ್ನು ಹೊರತರಲು ಅಲೆದೇ ಅಲೆದರು. ಅವರ ಬಿಘಡಾಯಿಸುತ್ತಿದ್ದ ಆರೋಗ್ಯದಿಂದಾಗಿ ಮಾಮಿ ಮನಸ್ಸಿನ ನೆಮ್ಮದಿಯನ್ನು ಆಗಾಗ ಕಳೆದುಕೊಳ್ಳುತ್ತಿದ್ದರು ಬೆಂಗಳೂರಿಗೆ ಬಂದ ಮೇಲೆ.

ಅವರ ಅಸಮಾಧಾನಕ್ಕೆ ಬಾಲ್ಯದಿಂದಲೂ ವಂಚಿತರಾಗಿದ್ದ ಮಮತೆ, ನಂಬಿಕೆ, ವಿಶ್ವಾಸ, ಸ್ಥಿರತೆಗಳು ಕೆಲಮಟ್ಟಿಗೆ ಕಾರಣವಾಗಿದ್ದವು. ಮಾಮಿಯವರ ಮೊದಲಿನ ಹೆಸರು ಶಕುಂತಲಾ ವಾಳವೇಕರ, ತಂದೆ ವಾಳವೇಕರರು ಕರ್ನಾಟಕ ಬ್ಯಾಂಕ ಸಂಸ್ಥಾಪಕರಲ್ಲಿ ಒಬ್ಬರಾದರೆ, ಸೋದರಮಾವ ಬಳವಂತರಾವ್ ದಾತಾರರು ನೆಹರೂ ಕ್ಯಾಬಿನೆಟ್ ದಲ್ಲಿ ಮಂತ್ರಿಯಾಗಿದ್ದರು. ಆದರೆ ಚಿಕ್ಕಂದಿನಿಂದಲೇ ತಾಯಿ ತಂದೆಯರನ್ನು ಕಳೆದುಕೊಂಡಾಕೆಗೆ ಬಾಲ್ಯ- ಕಿಶೋರಾವಸ್ಥೆಗಳನ್ನು ಬಳಗದವರ ಆಶ್ರಯದಲ್ಲಿ ಕಳೆಯಬೇಕಾಗಿ ಬಂದಿತು. ಅದರೆ ಸ್ವಾಭಿಮಾನ ಕೆಚ್ಚುಗಳೊಂದಿಗೆ ಜನ್ಮಜಾತ ಅಭಿನಯ ಕಲೆ ಸಾಧಿಸಿಕೊಡವರು. ಅಂದಿನ ಮುಂಬೈ ನಾಟಕಾಭಿನಯ ಪ್ರಪಂಚದಲ್ಲಿ ಮಿನುಗಿದರು. ಸಮಾನ ಆಸಕ್ತಿಯ ಕ್ಷೇತ್ರಗಳಿಂದಾಗಿ ಶ್ರೀನಿವಾಸ ಹಾವನೂರರ ಸ್ನೇಹ ಘಟಿಸಿತು, ಪ್ರಣಯಕ್ಕೆ ತಿರುಗಿತು. ಮದುವೆಯ ಸಮಯಕ್ಕೆ ಶಕುಂತಲೆಗೆ ಹದಿನೆಂಟು, ವರನಿಗೆ ಇಪ್ಪತ್ತೆರಡು ವರ್ಷ ವಯಸ್ಸು! ಅಂದಿನಿಂದ ಅವರು ಹಲವಾರು ಊರುಗಳಿಗೆ ಅಲೆಯಬೇಕಾಯಿತು.

೨೦೦೮ರಲ್ಲಿ ನಡೆದ ಅವರ ವಿವಾಹದ ಷಷ್ಟಬ್ಧಿ-ಪೂರ್ತಿ ಸಮಾರಂಭ ಮನಸ್ಸು ತುಂಬಿ ಸೂರೆ ಹೋಗುವಂತಹದಾಗಿತ್ತು. ಅಭಿಮಾನಿಗಳು, ನೆಂಟರಿಷ್ಟರು, ಶಿಷ್ಯರು, ಸ್ನೇಹಿತರೆಲ್ಲ ಪಾಲುಗೊಂಡಿದ್ದರು. ಮಾಮಿಯವರು ನತ್ತು, ಒಡವೆ ಧರಿಸಿ ಒಂಬತ್ತು ಗಜದ ಸೀರೆಯುಟ್ಟು ಹೂವು ಮುಡಿದು, ಸಂಭ್ರಮದಿಂದ ಓಡಾಡಿದ್ದು ತುಂಬ ಸಂತೋಷಕೊಟ್ಟಿತು. ಡಾ. ನಾ. ದಾಮೋದರ ಶೆಟ್ಟಿ ಸಂಪಾದಿಸಿದ , “ಸಂಕಥನ” ಎಂಬ ಹಾವನೂರ ಮಾಮಾರ ಆಯ್ದ ಬರಹಗಳನ್ನೊಳಗೊಂಡ ೭೫೦ ಪುಟಗಳ ಅಚ್ಚುಕಟ್ಟಾದ ಗ್ರಂಥ ಈ ಸಂಧರ್ಭದಲ್ಲಿ ಹೊರಬಂದಿತು. ಎಂದೋ ಬರಬೇಕಾಗಿದ್ದ ಅಭಿನಂದನ ಗ್ರಂಥವೊಂದು ಬೇರೆಯೇ ರೂಪ ಪಡೆದು ಹಾವನೂರ ಅಭಿಮಾನಿಗಳ ಕೊಡುಗೆಯಾಯಿತು.

ಕಾಲರಾಯನ ಜೊತೆ ನಿರಂತರ ಹೋರಾಡಿ ಗೆದ್ದು ಬಂದಿದ್ದ ಹಾವನೂರ ಮಾಮಾ ಕೊನೆಗೊಮ್ಮೆ ೨೦೧೦ರ ವರ್ಷ, ಯಾವ ಮುನ್ಸೂಚನೆಯಿಲ್ಲದೇ ಕುಸಿದು ಇಲ್ಲವಾದರು. ಈಗ ಮಾಮಿ ಕಾಯಂ ಒಂಟಿಯಾದರು.
ಮೊದಲಿನಿಂದಲೂ ರಾಘವೇಂದ್ರ ಸ್ಥಾಮಿಗಳ ಉಪಾಸನೆಯಲ್ಲಿ ಹೆಚ್ಚಿನ ಒಲವಿದ್ದವರು ಈಗ ಹೆಚ್ಚಿನ ವೇಳೆಯನ್ನು ಆಧ್ಯಾತ್ಮಿಕ ವಿಚಾರದಲ್ಲಿ ತೊಡಗಿಸಿಕೊಂಡರು. ಮನಸ್ಸು ಮಾಡಿದ್ದರೆ ಅವರಿಗೆ ಸಾಧಿಸಿದ ಅಭಿನಯ ಕಲೆಯಲ್ಲಿ ನಾಟಕ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಬಹುದಾಗಿತ್ತು. ಅದಕ್ಕೆ ಅವಕಾಶಗಳೂ ಬರಲಿಲ್ಲ. ಇವರೂ ಹೆಚ್ಚಿನ ಹುಮ್ಮಸ್ಸು ತೋರಿಸಲಿಲ್ಲ. ಮಕ್ಕ ಳಿಗೆ ಅಭಿನಯ ಕಲೆ ಕಲಿಸುವಲ್ಲಿ ತುಂಬ ಯಶಸ್ವಿಯಾಗಿದ್ದರು. ಅದನ್ನೂ ಬಳಸಿಕೊಳ್ಳಲಾಗಲಿಲ್ಲ. ಬೆಂಗಳೂರಿನ ಯಾವ ಅಕ್ಯಾಡೆಮಿ, ನಾಟಕ ಸಂಸ್ಥೆಗಳು ಅವರನ್ನು ಗುರುತಿಸಲಿಲ್ಲ. ಅವರಂತೆ ಚಿಕ್ಕ ದೊಡ್ಡ ಪಾತ್ರಗಳಲ್ಲಿ ಕ್ಷಣದಲ್ಲೇ (total involvement ) ತನ್ಮಮಯರಾಗು ತ್ತಿದ್ದ ತೀರ ಕಡಿಮೆ ಜನರನ್ನು ಕಂಡಿದ್ದೇನೆ.’ ಜಾಗೃತ ರಾಷ್ಟ್ರ’ ನಾಟಕದಲ್ಲಿ ಅವರಿಗೆ ಬವಳಿಬಂದು ಬೀಳುವಂತೆ ನಟಿಸಬೇಕಾಗಿ ಬಂದಾಗ, ನಿಜಕ್ಕೂ ತಲೆ ತಿರುಗಿ ಬಿದ್ದು ನಿಶ್ಚೇಷ್ಟರಾಗಿದ್ದರು.

ನಮ್ಮಲ್ಲಿ, ನಿಜವಾದ ಕಲೆಗೆ ಪ್ರೋತ್ಸಾಹವಿಲ್ಲ. ಗೃಹಿಣಿಯಾಗಿದ್ದುಕೊಂಡು, ಯಾವ ಮಹಾತ್ವಾಕಾಂಕ್ಷೆ ಇಲ್ಲದೇ ನಾಟಕ ಹವ್ಯಾಸದಲ್ಲೇ ಸಾರ್ಥಕತೆಯನ್ನು ಮಾಮಿ ಕಂಡರು. ತನ್ನ ಕೌಶಲ್ಯಕ್ಕೆ ಯೋಗ್ಯ ಅವಕಾಶ ಸಿಗಲಿಲ್ಲ! ಎಂಬ ಕೊರಗೂ ಅವರಿಗೆ ಇರಲಿಲ್ಲ. ಹೋಮಿಯೋಪಥಿ ಕಲಿತು ಮನೆಯಲ್ಲೇ ಸಾಧ್ಯವಿದ್ದಷ್ಟು ಮಹಿಳೆ- ಮಕ್ಕಳ ಚಿಕಿತ್ಸೆ ಮಾಡಿ ನೋವನ್ನು ಕಡಿಮೆ ಮಾಡಿದರು. ಕಾಲು ಗಂಟಿನ ನೋವು ಹೆಚ್ಚುತ್ತಿದ್ದರೂ, ಪೂಜೆ, ಧ್ಯಾನ, ಆಧ್ಯಾತ್ಮಿಕ ಚಟುವಟಿಗೆಗಳನ್ನು ಮುಂದುವರೆಸಿದರು. ಅಭಿನಯ, ಬೋಧನೆ, ನಿರ್ದೇಶನಗಳಲ್ಲಿ ಸ್ವಂತಿಕೆ ಮೆರೆದ ಈ ಕುಶಾಗ್ರಮತಿಯ ಮಾರ್ಗದರ್ಶನ ಸಮಾಜಕ್ಕೆ ಆಗಲಿಲ್ಲ! ಎಂಬ ಕೊರಗು ಕಾಡುತ್ತಿದೆ. ೬.೫. ೨೦೧೭ರಂದು ಈ ಅಪರೂಪದ ಕಲಾವಿದೆ ಯಾರಿಗೂ ತೊಂದರೆ ಕೊಡದೇ ಅಜ್ಞಾತರಾಗಿಯೇ ಮಗಳು ನಿವೇದಿತಾ ಮನೆಯಲ್ಲಿ ಕೊನೆಯುಸುರು ಎಳೆದರು.