ಸೀಮಾತೀತ ಸಂಗೀತ ಯಾತ್ರಿಕ ನನ್ನ ದಾದಾ

ಸುಷಮಾ ಆರೂರ್

ನನ್ನ ದಾದಾ ಪ್ರಕಾಶ ಬುರ್ಡೆ ೨೦೧೬, ಹೊಸ ವರ್ಷದ ೪ನೇ ತಾರೀಖಿಗೆ ತನ್ನ ೭೮ ನೆಯ ವಯಸ್ಸಿನಲ್ಲಿ ಸ್ವಲ್ಪಕಾಲದ ಅನಾರೋಗ್ಯದ ನಂತರ ನಮ್ಮನ್ನು ಅಗಲಿದನು. ಇಂಗ್ಲಿಷ್ ಮತ್ತು ಮರಾಠಿಯಲ್ಲಿ ಖ್ಯಾತ ಸಂಗೀತ ವಿಶ್ಲೇಷಕ ಮತ್ತು ವಿಮರ್ಶಕನೆಂದು ಮಹಾರಾಷ್ಟ್ರದಲ್ಲಿ ಹೆಸರು ಗಳಿಸಿದ್ದ. ಅವನ ಅಂತ್ಯಸಂಸ್ಕಾರಕ್ಕೆ ಮುಂಬಯಿಗೆ ಹೋದಾಗ ಅವನ ಬರಹಗಳ ಕಂತೆಗಳನ್ನು ದೊಡ್ಡ ಅಲ್ಮೈರಾದಿಂದ ಹೊರತೆಗೆದು ನೋಡಿದಾಗ ನಾನು ದಿಗ್ಭ್ರಾಂತಳಾದೆ. ಹಿಂದೂಸ್ಥಾನಿ ಸಂಗೀತದ ವಿಷಯದ ಮೇಲೆ ಮೂರು ಭಾಷೆಗಳಲ್ಲಿ ಅವನು ಬರೆದ ವೈವಿಧ್ಯಮಯ ಲೇಖನಗಳಲ್ಲಿ ಬಹುತೇಕವಾಗಿ ಇದ್ದದ್ದು ಕನ್ನಡದಲ್ಲಿ! ‘ಮುಂಬಯಿಕರ’ ಆಗಿದ್ದ ನನ್ನ ದಾದಾನ ಮನೆಯಲ್ಲಿ ಮತ್ತು ಮನೆಯ ಹೊರಗೆ, ಯಾರಿಗೂ ಕನ್ನಡದ ಗಂಧ-ಗಾಳಿಯೂ ಸೋಂಕದಿದ್ದಾಗ, ಅವನು ಕನ್ನಡದ ಬರವಣಿಗೆಯನ್ನು ಮತ್ತು ಪ್ರೇಮವನ್ನು ಕಾಯ್ದುಕೊಂಡು ಬಂದಿದ್ದುದನ್ನು ಕಂಡು ನನಗೆ ವಿಸ್ಮಯ ಮತ್ತು ಆನಂದಗಳು ಒಮ್ಮೆಗೆ ಆದವು. ಆತನ ಪುಣ್ಯಸ್ಮೃತಿಗೆ ಅವನ ಬರಹಗಳನ್ನು ಬೆಳಕಿಗೆ ತರಬಹುದಲ್ಲ! ಎಂಬ ಯೋಚನೆ ನಾನಿದ್ದ ಪರಿಸ್ಥಿತಿಯಲ್ಲೂ ನನ್ನನ್ನು ತೀವ್ರವಾಗಿ ಕಾಡಿತು.

ದಾದಾ ಬರೆದ ಬಹಳಷ್ಟು ಲೇಖನಗಳು ಕರ್ನಾಟಕ ಸಂಘದ ಮುಖಪತ್ರಿಕೆಯಾದ ‘ಸ್ನೇಹಸಂಬಂಧ’ದಲ್ಲಿ, ಡಾ. ನಿಂಜೂರರ ಕೃಪೆಯಿಂದ ‘ಗೋಕುಲವಾಣಿ’ಯಲ್ಲಿ, ಅವರ ಪ್ರೊತ್ಸಾಹದ ಮೂಲಕವೇ ಉಡುಪಿಯ ‘ರಾಗ ಧನಾಶ್ರೀ’ಯಲ್ಲಿ ಪ್ರಕಟವಾಗಿವೆ. ಇನ್ನೆಷ್ಟೋ ಹಸ್ತಲಿಖಿತ ಬರಹಗಳು ಮರಾಠಿಯಲ್ಲಿ ಮತ್ತು ಇಂಗ್ಲೀಷಿನಲ್ಲಿ ಕಂಡವು. ಅವನ ಎಲ್ಲ ಬರಹಗಳನ್ನು ಹೊತ್ತುಕೊಂಡು ಬೆಂಗಳೂರಿಗೆ ಬಂದು ನಮ್ಮಿಬ್ಬರ ಹಿರಿಯಕ್ಕ ‘ತಾಯಿ’ಯ (ಡಾ. ಜ್ಯೋತ್ಸ್ನಾ ಕಾಮತ್) ಸಹಾಯ ಮತ್ತು ಮಾರ್ಗದರ್ಶನದಲ್ಲಿ, ಪ್ರತಿದಿನ ಒಂದೆರಡು ಲೇಖನಗಳನ್ನು ವಿಂಗಡಿಸಿ, ಓದಿ, ಚರ್ಚಿಸುತ್ತ ಮೂರು ತಿಂಗಳು ಸರಿದವು. ಇವೆಲ್ಲ ಓದುತ್ತಿರುವಾಗ ನಮ್ಮಿಬ್ಬರಿಗೂ ಒಂದೇ ಸಲ ಅನಿಸಿದ್ದು, ಈ ನಮ್ಮ ಸಹೋದgನನ್ನು ನಾವು ಸರಿಯಾಗಿ ಅರಿತೇ ಇರಲಿಲ್ಲವೇ? ಅತ್ಯಂತ ಆತ್ಮೀಯನಾದನಾತ ಸಂಗೀತ ವಿಂದ್ವಾಸನಾಗಿ ಏಕೇ ನಮಗೆ ಅಪರಿಚಿತನಂತೆ ಭಾಸವಾಗುತ್ತಾನೆ? ಅವನ ಬರವಣಿಗೆಯಲ್ಲಿಯ ಪ್ರತಿಯೊಂದು ಘಟನೆ, ಆತ್ಮಚರಿತ್ರೆಯಲ್ಲಿಯ ಕೆಲ ತುಣುಕುಗಳನ್ನು ಕಂಡಾಗ ಈ ಬರಹಗಳಲ್ಲಿಯ ಅವನ ಚಹರೆ ಹೊಸತಾಗಿ ಕಾಣಿಸಿಕೊಳ್ಳುತ್ತಿತ್ತು. ಓದುತ್ತ ಹೋದಹಾಗೇ, ಡಾ. ಶಿವರಾಮ ಕಾರಂತರ, ‘ಅಳಿದ ಮೇಲೆ’ ಕಾದಂಬರಿಯ ನಾಯಕನಂತೆ ಹಂತಹಂತವಾಗಿ ನಮ್ಮ ಸಹೋದರನ ಹೊಸಪರಿಚಯ ಆಯಿತಲ್ಲ ಆತ ಅಳಿದ ಮೇಲೆ! ಹೌದು, ನಮಗೆ ಮುಂಚಿನಿಂದ ಅವರ ಸಂಗೀತದ ಗೀಳಿನ ಮಾಹಿತಿ ಇತ್ತು. ಆದರೆ ಅದು ಇಷ್ಟು ತೀವ್ರವಾಗಿ ಮತ್ತು ಇಷ್ಟು ಆಳವಾಗಿ ಹರಡಿತ್ತು ಎಂಬುದರ ಕಲ್ಪನೆಯೂ ನಮಗಿರಲಿಲ್ಲ. ಒಳ್ಳೆಯ ಸಂಗೀತ ಕೇಳಿ, ಭಾವನೆಯ ಹೊಳೆಯಲ್ಲಿ ಮುಳುಗಿ ಹೋದ ಆನಂದದ ಅನುಭವ, ಸಾಹಿತ್ಯದಲ್ಲಿಯ ಅಭಿರುಚಿ, ಮತ್ತು ಅವನ ಆ ತನ್ಮಯತೆ … ಇವೆಲ್ಲವನ್ನೂ ಅವನು ನಮೂದಿಸಿದ ಕ್ಷಣಗಳು ನಮಗೆ ಅಚ್ಚರಿಯನ್ನುಂಟುಮಾಡಿತು ಮತ್ತು ಮುದವನ್ನು ಕೊಟ್ಟಿತು.

ಈ ಎಲ್ಲ ಭಾವನೆಗಳನ್ನು ಅವನು ಬಾಲ್ಯದಿಂದ ಪೋಷಿಸುತ್ತ, ತಾರುಣ್ಯದಲ್ಲಿ ಬೆಳೆಸುತ್ತ, ಇಲ್ಲಿಯತನಕ ಸಂಗೀತದ ಆಲಾಪನೆಯಲ್ಲಿ ಮುಳಗುತ್ತ, ಈಜುತ್ತ ಭಾವಸಮಾಧಿಯಲ್ಲಿ ಆನಂದಿಸುತ್ತಿದ್ದ ನಮ್ಮ ಈ ಬಂಧು ಯಾವಾಗ ಬರೆಯಲು ಪ್ರಾರಂಭಿಸಿದನು, ಮತ್ತು ಇಷ್ಟೆಲ್ಲ ಯಾವಾಗ ಬರೆದಿಟ್ಟ ಎಂಬುದೇ ವಿಸ್ಮಯವಾಗಿತ್ತು. ಅವನದೇ ಭಾಷೆಯಲ್ಲಿ ಹೇಳುವದಾದರೆ, ಅವನ, ‘ನೆನಪಿನ ಬುತ್ತಿಯಿಂದ’ ಅದೇಷ್ಟೋ ಹಳೆಯ, ಆಗಿಹೋದ ಘಟನೆಗಳನ್ನು ಅವನು ಹೊರತಂದಿದ್ದಾನೆ.

ಎಳೆಯ ವಯಸ್ಸಿನಲ್ಲಿಯೇ ಅವನ ಸಂಗೀತದ ಪ್ರವಾಸ ಪ್ರಾರಂಭವಾಗಿತ್ತು.  ಗಿರೀಶ ಕಾರ್ನಾಡರು ತಮ್ಮ ಆತ್ಮಚರಿತ್ರೆ ,” ಆಡಾಡ್ತಾ ಆಯೂಷ್ಯ”ದಲ್ಲಿ ಬರೆದಂತೆ ಸಿರ್ಸಿ ಊರು ಅವರ  ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದಂತೆಯೇ ಗೋಕರ್ಣ ದಾದಾನ ಮೇಲೆ ಪ್ರಭಾವ ಬೀರಿದೆ ಎಂದು ಹೇಳಬಹುದು. ಅವನೇ ಹೇಳಿದಂತೆ, ಶಿವರಾತ್ರಿಯ ಉತ್ಸವಕ್ಕೆ ಐತಿಹಾಸಿಕ ನಾಟಕಗಳು, ಸಂಗೀತ ನಾಟಕಗಳು, ಯಕ್ಷಗಾನ, ಊರಿಂದೂರಿಗೆ ಅಲೆದಾಡುವ ಕಂಪನಿ ನಾಟಕಗಳನ್ನು ನೋಡಿ, ಆನಂದಿಸಿ ತನ್ನ ಅನಂತರದ ಆಯುಷ್ಯದಲ್ಲಿ ಅವುಗಳನ್ನು ಮೆಲಕು ಹಾಕಿ ಬರೆಯುವ ರೂಢಿ ಮಾಡಿಕೊಂಡಿದ್ದನು*. ಕೆಲಸದ ನಿಮಿತ್ತದಿಂದ ಭಾರತದ ಉದ್ದಗಲಕ್ಕೆ ಹೋಗುತ್ತಿದ್ದ ಅವನು ಹೋದಲ್ಲೆಲ್ಲ ಅರಸಿಕೊಂಡು ಹೋಗಿ ಸಂಗೀತವನ್ನು ಕೇಳುತ್ತಿದ್ದ. ಹೈದ್ರಾಬಾದಿನಲ್ಲಿ ಭೀಮಸೇನ ಜೋಶಿಯವರು, ದಿಲ್ಲಿಯಲ್ಲಿ ಮಲ್ಲಿಕಾರ್ಜುನ ಮನ್ಸೂರವರು…. ಈ ಸಂಗೀತದ ಆಸಕ್ತಿ ಕೇವಲ ಕಚೇರಿಗಳನ್ನು ಕೇಳುವದಕ್ಕೆ ಸೀಮಿತವಾಗದೇ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳನ್ನು ತರಿಸಿ ಓದುವದು, ಚಿಂತನ, ಮನನ, ಇದು ಅವನ ಜೀವನದ ಅವಿಭಾಜ್ಯ ಅಂಗವಾಗಿ ಹೋಗಿತ್ತು.

ಅವನ ಬರಹಗಳನ್ನು ಓದಿದ ನಮಗೆ, ಸಂಗೀತವನ್ನು ಕೇಳುವಾಗಿನ ಅವನ ದೃಷ್ಟಿಕೋನ ಓರ್ವ ಜನಾಂಗ ಶಾಸ್ತ್ರಜ್ಞನ (ethnographer) ತರಹ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಜನಾಂಗಿಯಸಂಗೀತ ಶಾಸ್ತ್ರಜ್ಞನು(ethno musicologist) ಸಂಗೀತವನ್ನು ಸಾಂಸ್ಕೃತಿಕ ಅಧ್ಯಯನದ ಒಂದು ಭಾಗವೆಂದು ಪರಿಗಣಿಸುತ್ತಾನೆ ಮತ್ತು ಸಾಂಸ್ಕೃತಿಕ ಸನ್ನಿವೇಶಗಳ ಹಿನ್ನೆಲೆಯಲ್ಲಿಯೇ ಸಂಗೀತದ ಹಲವಾರು ಆಯಾಮಗಳ ನ್ನು ಚರ್ಚಿಸುತ್ತಾನೆ. ಅದೇ ತರಹ ನನ್ನ ದಾದಾ ಕೂಡ ಜನಾಂಗ ವರ್ಣನೆಯ ಶಾಸ್ತ್ರೀಯ ಕ್ರಮವನ್ನು ಅನುಸರಿಸುತ್ತಿದ್ದುದು ಕಂಡು ಬರುತ್ತದೆ. (methodology of ethnography) ತನ್ನ್ನ ಅಧ್ಯಯನದ ವಿಷಯವನ್ನು ಅವಲೋಕಿಸಿ, ಸಂದರ್ಶನ ಅಂದರೆ ಗಾಯಕ, ವಾದಕರನ್ನು ಭೇಟಿ ಮಾಡಿ, ಗುರುತು ಹಾಕಿಕೊಳ್ಳುತ್ತಿದ್ದ. ಅವರ ಮೇಲೆ ಬರೆದಿರುವ, ಇಲ್ಲವೇ ಅವರ ಬಗ್ಗೆ ತಿಳಿದಿರುವ ಜನರಿಂದ ಮಾಹಿತಿಯನ್ನು ಕಲೆ ಹಾಕಿ, ತನ್ನ ಸಂಶೋಧನ ವಿಧಾನಗಳನ್ನೆ ಉಪಯೋಗಿಸಿ, ದತ್ತಾಂಶವನ್ನು (ಜಚಿಣಚಿ) ಶೇಖರಿಸುತ್ತಿದ್ದ ಎಂದು ಅವನ ಬರಹಗಳನ್ನು ಓದುತ್ತ ಹೋದ ಹಾಗೆ ಖಚಿತವಾಗಹತ್ತಿತು. ಸಂಗೀತವನ್ನು ವ್ಯಾಪಕವಾಗಿ ತಿಳಿದುಕೊಂಡಿದ್ದ ಅವನು ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲಿ ಮಾಡಿರುವದರಿಂದ ಅಧ್ಯಯನದಲ್ಲಿ ಈ ಹೊಳಹುಗಳು ಪ್ರಕಟವಾಗಿವೆ. ಒಂದು ವಿಧದಲ್ಲಿ ಅವನೊಬ್ಬ ಜನಾಂಗ ಸಂಗೀತ ಶಾಸ್ತ್ರಜ್ಞನಾಗಿದ್ದ ಎಂಬುದು .(ethno musicologist) ಸ್ಪಷ್ಟವಾಗುತ್ತದೆ. ಹೀಗೆ ತನಗೆ ಅರಿಯದಂತೆ ಅವನು ಸಂಗೀತದ ಪ್ರಕಾರಗಳು ಹಾಗೂ ಸಂಗೀತಗಾರರ ಜೀವಂತ ಇತಿಹಾಸವನ್ನೇ ದಾಖಲಿಸಿದ್ದಾನೆ. ಆ ಸಾಲಿನಲ್ಲಿಯೇ ಅವನ ಬರಹಗಳನ್ನು ಗ್ರಂಥ ರೂಪದಲ್ಲಿ ತರಬೇಕೆಂಬ ಹಂಬಲ್ವು ಧ್ಡ ನಿಶ್ಚಯವಾಯಿತು.

ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಶ್ರವಣದಿಂದ ಅವನು ಪ್ರತಿಯೊಬ್ಬ ಗಾಯಕರ, ಹಾಡುವ ಪದ್ಧತಿಯ, ಅವರ ಶೈಲಿಯ ಬಗ್ಗೆ ತಿಳಿದುಕೊಂಡಿದ್ದ ಮತ್ತು ಹಾಡುಗಾರಿಕೆಯಲ್ಲಿಯ ಸೂಕ್ಷ್ಮಗಳನ್ನು ಕಂಡು ಹಿಡಿಯುತ್ತಿದ್ದ. ಗ್ರಾಮೊಫೋನ ರೆಕಾರ್ಡುಗಳ sಸಂಗ್ರಹಾಲಯದಿಂದ ಅಪರೂಪದ ಮುದ್ರಿಕೆಗಳನ್ನು ಮತ್ತೆ ಮತ್ತೆ ಆಲಿಸಿ, ಮರೆತುಹೋದ ಮಹನೀಯರನ್ನು ಬೆಳಕಿಗೆ ತಂದ. ಗೌಹರ್ ಮಾಮಾಜಿವಾಲಾ ಊರ್ಫ ಗ್ಲೋರಿಯಸ ಗೋಹರ್ (೧೯೧೦-೧೯೮೫,) ಎಂಬ ಅರ್ಮೇನಿಯನ್ ಮಹಿಳೆಯ ಜಾಡನ್ನು ಕಂಡು ಹಿಡಿದು ಮಾತನಾಡಿಸಿದ ಕತೆ ಸಾಕಷ್ಟು ರೋಚಕವಾಗಿದೆ. ಅದೇ ತರಹ, ಶೋಭಾ ಗುರ್ಟು ಅವರ ತಾಯಿ ಮೇನಕಾಬಾಯಿ ಅವರನ್ನು ಅವರ ಮನೆಯಲ್ಲಿ ಯೇ ಕಂಡದ್ದನ್ನು ತನ್ನ ಲೇಖನದಲ್ಲಿ ವಿವರಿಸಿದ್ದಾನೆ . ಈ ನಾಯಕಸಾನಿಯರಿಂದಲೇ ಸಂಗೀತವು ಜೀವಂತವಾಗಿದ್ದೂ, ವಿಕಸಿತವೂ ಆಯಿತು. ಇಂತಹ ಅನೇಕ ಸಂಗೀತ ಪ್ರಕಾರಗಳನ್ನು ಬೆಳೆಸಿದ ಅನೇಕ ಮಹಿಳೆಯರ ಬಗೆ ಮಾಹಿತಿ ಸಂಗ್ರಹಿಸಿ, ಇಲ್ಲವೇ ಸಂದರ್ಶಿಸಿ, ಅವರು ಪಟ್ಟ ಕಷ್ಟ ಕಾರ್ಪಣ್ಯಗಳ ಅನುಭಗಳನ್ನು ಕಲೆ ಹಾಕಿ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಕ್ಕೆ ಅವರು ಇತ್ತ ಅಪೂರ್ವ ಕೊಡುಗೆಯನ್ನು ಜನರ ಎದುರಿಗೆ ತೆರೆದಿಡುವ ವಿಶೇಷ ಪ್ರಯತ್ನವನ್ನು ದಾದಾ ಆತ ತೋರಿಸಿದ್ದಾನೆ ಎಂದು ಹೆಮ್ಮೆಯಿಂದ ಹೇಳಬಹುದು.

ಅವನು ಬರಹಗಾರನಷ್ಟೇ ಇರಲಿಲ್ಲ, ಕಾರ್ಯಕ್ರಮಗಳ ಉತ್ತಮ ಸಂಯೊಜಕನೂ ಆಗಿದ್ದ. ಕರ್ನಾಟಕ ಸಂಘ ಮತ್ತು ಕೆನರಾ ಸಾರಸ್ವತ ಅಸೋಸಿಯೆಶನ್‌ದ ಪರವಾಗಿ ಮತ್ತು ಅವರ ಸಿಬ್ಬಂದಿಯ ಸಹಾಯದಿಂದ ಪ್ರತಿ ವರ್ಷ ಸಂಗೀತಸಮ್ಮೇಳನಗಳನ್ನು, ಮತ್ತು ವರ್ಷದಲ್ಲಿ ಎಂಟು-ಹತ್ತು ಸಂಗೀತ ದೃಕ್-ಶ್ರಾವ್ಯ (audio-visual) ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದನು. ಕರ್ನಾಟಕದಿಂದ ವಲಸೆ ಹೋದ ಚಿತ್ರಾಪುರ ಸಾರಸ್ವತ ಸಮಾಜದವರು ಮುಂಬಯಿಯಲ್ಲಿ ಸ್ಥಾಪಿಸಿದ ಒಂದು ಸಾಂಸ್ಕೃತಿಕ ಸಮುದಾಯ, ‘ಕೆನರಾ ಸಾರಸ್ವತ ಅಸೋಸಿಯೇಶನ್’ನ ಶತಮಾನೋತ್ಸವದ ನಿಮಿತ್ತ ಆಯೋಜಿಸಿದ ಸಂಗೀತ ಸಮ್ಮೇಳನದಲ್ಲಿ ಕರ್ನಾಟಕದ ತi ಮೂಲ ಸ್ಥಾನವಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯ ಸಂಗೀತದ ಇತಿಹಾಸವನ್ನು ಬೀಸುವಕಲ್ಲಿನ ಹಾಡುಗಳಿಂದ ಹಿಡಿದು, ಮದುವೆ, ಮುಂಜಿಗಳಲ್ಲಿ ಹಾಡುವ ‘ಓವಿಗಳು’ (ಪಾರಂಪಾರಿಕವಾಗಿ ಬಂದ ನಾಲ್ಕು ಸಾಲಿನ ಪದ್ಯಗಳು), ಹಬ್ಬ ಹರಿದಿನಗಳಲ್ಲಿಯ ಪದಗಳು, ಇಲ್ಲಿಯವರೆಗೂ ವಿವಿಧ ಸಂಪ್ರದಾಯಗಳ (ಘರಾಣೆಗಳ) ಗಾಯಕರು, ಹಾಗೂ ವಾದಕರಿಗೆ ಅಭಿವಂದಿಸುವ ಮತ್ತು ಅಭಿನಂದಿಸುವ ‘ಮಾನ ವಂದನಾ’ ಎಂಬ ಸಂಗೀತ ಕಾರ್ಯಕ್ರಮವನ್ನು ದಾದಾ ಮೂರು ಸರಣಿಗಳಲ್ಲಿ (ಸುಗಮ ಸಂಗೀತಗಾರರ, ವಾದಕರ ಮೇಲೆ, ಶಾಸ್ತ್ರೀಯ ಸಂಗೀತಗಾರರ ಮೇಲೆ) ಸಂಯೋಜಿಸಿ ಯಶಸ್ವಿಯಾದನು. ಕರ್ನಾಟಕದಲ್ಲಿ ‘ಕರ್ನಾಟಕಿ’ ಪದ್ಧತಿಯ ಶಾಸ್ತ್ರೀಯ ಸಂಗೀತ ಭದ್ರವಾಗಿ ನೆಲೆಯೂರಿದ್ದರೂ ಕ್ರಮೇಣ ಹಿಂದೂಸ್ಥಾನಿ ಸಂಗೀತವು ಅಲ್ಲಿ ಹೇಗೆ ಹಾಸುಹೊಕ್ಕಾಗಿ ಬೆಳೆಯಿತು ಎಂಬ ಅವನ ಲೇಖ ಕುತೂಹಲ ಕೆರಳಿಸುವಂತಹದಾಗಿದೆ. ವಿಶೇಷವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಕರ್ನಾಟಕದ ಉತ್ತರಕನ್ನಡ ಜಿಲ್ಲೆಯ ಚಿತ್ರಾಪುರ ಮಠಾಧಿಪತಿಗಳು ತಮ್ಮ ಸಂಪ್ರದಾಯಗಳನ್ನು ಬದಿಗಿಟ್ಟು, ಮಠದಲ್ಲಿಯ ಪೂಜಾರಿಗಳನ್ನು, ಮುಸಲಮಾನ ಉಸ್ತಾದರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆಯಲು ಕಳಿಸಿದ ೧೯ ನೇ ಶತಮಾನದಲ್ಲಿಯ ಕ್ರಾಂತಿಕಾರಿ ನಿಲುವು ದರ್ಶಿಸುವಂತಹುದು. ಈ ಮಾತನ್ನು ಪ್ರಕಾಶಕ್ಕೆ ತಂದವನು  ಪ್ರಕಾಶ ಬುರ್ಡೆ.

ಅದೇ ತರಹ ಇನ್ನೊಂದು ಕಾರ್ಯಕ್ರಮ ‘ತಬಲಾದ ಠೇಕಾ’ದ (beats) ಮೇಲೆ ಇತ್ತು. ಇಲ್ಲಿ ಪರಿಕಲ್ಪನೆಯನ್ನು ಅದಲುಬದಲು ಮಾಡಿ ಪ್ರಸ್ತುತಿಸಿದ್ದರು. ತಬಲಾ ನುಡಿಸುವವರಿಗೆ ವೇದಿಕೆಯ ಮಧ್ಯ ಭಾಗದಲ್ಲಿ ಪ್ರಾಮುಖ್ಯವನ್ನು ಕೊಟ್ಟು, ಗಾಯಕರನ್ನು ಅಕ್ಕಪಕ್ಕದಲ್ಲ್ಲಿ ಇರಿಸಿದ್ದರು. ಇದೊಂದು ಹೊಸ ಪ್ರಯೋಗವಾಗಿದ್ದುದರಿಂದ ಪ್ರೇಕ್ಷಕರಿಗೆ ಬಹಳ ಹಿಡಿಸಿತು. ಇನ್ನೊಂದು, ‘Dymistification of Hindustani Clasical Music’ ಎಂಬ ಕಾರ್ಯಕ್ರಮವನ್ನು ಜನರಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಆಸಕ್ತಿ ಮತ್ತು ಕುತೂಹಲ ಹುಟ್ಟಿಸುವ ಸಲುವಾಗಿ ಸಂಯೋಜಿಸಿದ್ದ. ಮಾನ್ಯ ಜನರಿಗೆ ಶಾಸ್ತ್ರೀಯ ಸಂಗೀತವೆಂದರೆ ಒಂದು ಗೂಢ, ಕಲಿಯಲು ಕಷ್ಟ ಎಂಬ ಅಭಿಪ್ರಾಯವಿರುತ್ತದೆ. ಇನ್ನೂ ಕೆಲವರಿಗೆ ಶಾಸ್ತ್ರಿಯ ಸಂಗೀತವೆಂದರೆ ತಾತ್ಸಾರ. ಇಂಥವರಿಗೋಸ್ಕರ ಈ ಕಾರ್ಯಕ್ರಮವನ್ನು ಏರ್ಪಡಿಸಿ ಈ ಅಭಿಪ್ರಾಯವು ಸರಿಯಲವೆಂದು ಮನಗಾಣಿಸಿದರು. ಪ್ರತಿಯೊಂದು ರಾಗದ ಹಾಡುಗಳನ್ನು ಬೇರೆ ಬೇರೆ ರೀತಿಯಲ್ಲಿ ಅಂದರೆ, ಸುಗಮಸಂಗೀತದಲ್ಲಿ, ಬಡಾ ಖಯಾಲಿನಲ್ಲಿ ಮತ್ತು ಚಲನಚಿತ್ರದ ಹಾಡುಗಳಲ್ಲಿ ಹಾಡಿಸಿ ಶಾಸ್ತ್ರೀಯ ಗಾಯನವನ್ನು ಸುಲಭ ಹಾಗೂ ಆಕರ್ಷಕ ಮಾಡಿ ಪ್ರೇಕ್ಷಕರನ್ನು ರಂಜಿಸ ಬಹುದು ಎಂದು ತೋರಿಸಿಕೊಟ್ಟ. ಇವೆಲ್ಲ ಅವನಲ್ಲಿದ್ದ ಪ್ರಯೋಗಶೀಲತೆ ಮತ್ತು ಸೃಜನಶೀಲತೆಯ ಕೆಲ ಉದಾಹರಣೆಗಳು.

ಬಹು ಭಾಷಿಕನು ಇದ್ದದ್ದರಿಂದ, ದಾದಾ ಒಂದು ಪರಂಪರೆಯಿಂದ ಇನ್ನೊಂದಕ್ಕೆ ಬೇಲಿ ದಾಟಿ ಅವರಲ್ಲಿಯ ವೈವಿಧ್ಯವನ್ನು ಅಭ್ಯಸಿಸುತ್ತಿದ್ದ ಮತ್ತು ಬೇರೆ ಬೇರೆ ಗಾಯಕರ ಕಂಠ, ಶೈಲಿಗಳನ್ನು, ಅವರ ನಡುವಿದ್ದ ವ್ಯತ್ಯಾಸಗಳನ್ನು ಕಂಡು ಹಿಡಿಯುವ ನಿಪುಣತೆ ಅವನಲ್ಲಿ ಇತ್ತು. ಅವನೊಬ್ಬ ಯಾತ್ರಿಕನಂತೆ ಸಂಗೀತದ, ಭಾಷಾ ಅಧ್ಯಯನದ ಮತ್ತು ಸಾಹಿತ್ಯದ ಗಡಿಗಳನ್ನು ದಾಟಿ ಬೇರೆ ಬೇರೆ ಘರಾನಾಗಳ ಸಂಗೀತದ ವೈಶಿಷ್ಟ್ಯಗಳನ್ನು. ವಿಧಾನಗಳನ್ನು ಅರಿತು ಅವುಗಳಲ್ಲಿಯ ಸಾಮಾಜಿಕ ಪ್ರಕ್ರಿಯೆಯನ್ನು ಕಾಣಲು ಪ್ರಯತ್ನಿಸಿದ. ಸಂಗೀತಗಾರರ ಜೊತೆ ಆವರ ಭಾಷೆಯಲ್ಲಿಯೇ, ಹಿಂದಿ, ಉರ್ದು, ಮರಾಠಿ, ಕನ್ನಡದಲ್ಲಿ ಮಾತುಕತೆಯನ್ನು ನಡೆಸಿ ಅವರಿಂದ ಮಾಹಿತಿ ಸಂಗ್ರಹಿಸಿ ಬರೆದ. ಅವನ ಲೇಖನಗಳು ಕೇವಲ ವಿವರಣೆ ಆಗದೇ ವೈಯಕ್ತಿಕ ಟಚ್ ದೊಂದಿಗೆ ,ಅವನ ಸಂವೇದನಶೀಲ ಸ್ವಭಾವದ ಪರಿಚಯವೂ ಆಗುತ್ತದೆ. ಅವನ ಈ ‘ಗಡಿ ದಾಟುವ’ ಅನೌಪಚಾರಿಕ ಸಾಮರ್ಥ್ಯದಿಂದ, ತನಗೇ ಅರಿವಿಲ್ಲದಂತೆ ಒಬ್ಬ ವಿಶಿಷ್ಟ ಸಂಗೀತ ವಿಶ್ಲೇಷಜ್ಞನಾಗಿ ಉಳಿದವರಿಗಿಂತ ಎತ್ತರದ ಸ್ಥಾನದಲ್ಲಿ ಸಹಜವಾಗಿಯೇ ಎದ್ದು ಕಾಣುತ್ತಾನೆ ನನ್ನ ದಾದಾ.
* ದಾದಾನಿಗೆ ಕನ್ನಡದಲ್ಲಿ ಬರೆಯಲು ಪ್ರೋತ್ಸಾಹಿಸಿದವರು ಡಾ. ನಿಂಜೂರರು ಮತ್ತು ಡಾ. ಸನದಿಯವರು
** ಮರೆತು ಹೋದ ಕಿರಾನಾ ಗಾಯಕರು, ಅಮೀರಬಾಯಿ ಕರ್ನಾಟಕಿ, ಜಯವಂತಿ ಹಿರೇಬೆಟ್ – ಈ ಲೇಖನಗಳನ್ನು ಓದಿ