ಮೋಗುಬಾಯಿ ಕುರ್ಡಿಕರ್ ಭಾಗ ೪

ಮುಂಜಾನೆ ಎದ್ದು ಅಲ್ಲಾದಿಯಾ ಅವರು ಕಾರ್ಯಕ್ರಮ ಆಯೋಜನೆ ಮಾಡಿದ ಸ್ಥಳಕ್ಕೆ ಬಂದು, ಮಧ್ಯಂತರದ ವಿಶ್ರಾಂತಿಯ ಹೊತ್ತಿಗೆ , ಶಿಷ್ಯರ ಹೆಗಲ ಮೇಲೆ ಕೈಯಿಟ್ಟು ವೇದಿಕೆಯನ್ನೇರಿ ಸಭಿಕರಿಗೆ ತಮ್ಮ ಧೀರ ಗಂಭೀರ ಧ್ವನಿಯಲ್ಲಿ ಎರಡು ಮಾತು ಹೇಳಿದರು. “ಹಮ್ ಏಕ್ ಗಲತ್ ಫೈಮಿ ದೂರ ಕರ್ನಾ ಚಾಹತೆ ಹೈಂ. ಯೇ ಹಮಾರಿ ಐಲಾನ ಹೈ, ಇಸಿಲಿಯೆ ಹಮ ಇಧರ ಹಾಜೀರ ಹುವೆಂ ಹೈಂ. ಮೋಗುಬಾಯಿ ಮೇರಿ ಗಂಡಾಬಂಧ್ ಶಾಗೀರ್ದ್ ಹೈ, ಔರ ಇಸಮೆಂ ಕೋಯಿ ಶಕ್ ನಹಿಂ.” (ನಾವು ಒಂದು ತಪ್ಪು ಕಲ್ಪನೆಯನ್ನು ದೂರಮಾಡಲು ಇಷ್ಟ ಪಡುತ್ತೇವೆ. ಇದು ನಮ್ಮ ಘೋಷಣೆ, ಅದಕ್ಕಾಗಿಯೇ ನಾವು ಇಲ್ಲಿ ಬಂದಿರುವದು. ಮೋಗುಬಾಯಿ ನನ್ನ ಗಂಡಾಬಂಧ ಶಿಷ್ಯೆ ಆಗಿದ್ದಾಳೆ ಮತ್ತು ಇದರಲ್ಲಿ ಯಾವ ಶಂಕೆಯೂ ಇಲ್ಲ….’ ). ಇದನ್ನು ಇದ್ದಕ್ಕಿದ್ದಂತೆ ಈ ಲೇಖನದಲ್ಲಿ ಕೊಟ್ಟಿದ್ದೇನೆ. ಇದರ ಬಗ್ಗೆ ಕೇಸರಬಾಯಿ ಕೇರಕರ ಅವರ ಚರಿತ್ರೆಯಲ್ಲಿ ಪೂರ್ಣ ಒಕ್ಕಣೆ ಸಿಗುತ್ತದೆ.

ಖಾನ್ ಸಾಹೇಬರ ತಾಲೀಮೂ ಜೋರಾಗಿ ನಡೆದಿತ್ತು. ಮಾಧವರಾಯರೂ ತಮ್ಮ ಬಳಲಿಕೆ ಹಿಂದೆ ಬಿಟ್ಟು ದಿನನಿತ್ಯದ ವ್ಯವಹಾರದಲ್ಲಿ ಮಗ್ನರಾದರು. ಕಿಶೋರಿಗೆ ಓರ್ವ ತಂಗಿ ಮತ್ತು ೧೯೩೮ರಲ್ಲಿ ಒಬ್ಬ ತಮ್ಮ ಹುಟ್ಟಿದರು. ಇಬ್ಬರೂ ಹುಟ್ಟಿದ್ದು ಗೋವಾದಲ್ಲಿಯೇ. ಉಲ್ಲಾಸ ಜನ್ಮ ತಾಳುವಾಗ ಮಾಧವರಾಯರು ಪರಲೋಕಕ್ಕೆ ಹೊರಟುಬಿಟ್ಟರು. ಆರು ವರ್ಷದ ಕಿಶೋರಿ, ಮೂರು ವರ್ಷದ ಲಲಿತಾ ಮತ್ತು ಅದೇ ತಾನೇ ಹುಟ್ಟಿದ ಉಲ್ಲಾಸ, ಅತ್ಯಂತ ದುಃಖದ ಪ್ರಸಂಗದಲ್ಲಿ ರವಳನಾಥನ ದರ್ಶನಮಾಡಿ ಮೋಗುಬಾಯಿ ಮಕ್ಕಳೊಂದಿಗೆ ಮುಂಬಯಿಗೆ ಬಂದರು. ರಿಯಾಜ಼್ ಮಾಡಿ ಮಾಡಿ ಅವರ ಸಂಗೀತ ಅತ್ಯಂತ ಉಚ್ಚಕೋಟಿಯದಾಗಿತ್ತು.

ಅಲ್ಲಾದಿಯಾರ ಶಿಷ್ಯ ಮಂಡಳಿ ತುಂಬ ದೊಡ್ಡದು. ಇವರಲ್ಲಿ ಮೋಗುಬಾಯಿ ಮತ್ತು ಕೇಸರಬಾಯಿಯವರು ಶ್ರೇಷ್ಠ ಗಾಯಕಿಯರಾಗಿದ್ದರು. ವೃದ್ಧಾಪ್ಯದಲ್ಲಿ ಖಾನಸಾಹೇಬರು ಮೋಗುಬಾಯಿಯವರಲ್ಲಿ ಹೆಚ್ಚು ವೇಳೆ ಕಳೆಯುತ್ತಿದ್ದರು. ಕೇಸರಬಾಯಿ ಖಾನಸಾಹೇಬರ ಜೊತೆಗೆ ಮಾತು ನಿಲ್ಲಿಸಿಬಿಟ್ಟಿದ್ದರೆಂದು ಗಾಳಿ ಸುದ್ದಿ ಹರಡಿತ್ತು. ಕೊನೆಗೆ ೧೯೪೬ರಲ್ಲಿ ಅಲ್ಲಾದಿಯಾ ಪೈಗಂಬರ ವಾಸಿಯಾದಾಗ ಕೂಡ ಕೇಸರಬಾಯಿ ಅವರತ್ತ ಹಾಯಲಿಲ್ಲ.

ಮೋಗುಬಾಯಿಯವರ ಎರಡು ಕಚೇರಿಗಳನ್ನು ಕೇಳಿದ ಭಾಗ್ಯವಂತ ನಾನು. ಮೊದಲನೆಯದು ಎನ್‌ಸಿಪಿ‌ಎ ಅಂದರೆ ರಾಷ್ಟ್ರೀಯ ಕಲಾ ಕೇಂದ್ರದ ಉದ್ಘಾಟನೆಯಾದಾಗ, ಮತ್ತೊಮ್ಮೆ ಗಿರಗಾಂವಿನ ಸಾಹಿತ್ಯ ಸಂಘ ಮಂದಿರದಲ್ಲಿ. ಮೊದಲನೇ ಕಚೇರಿಯ ರಾಗಗಳು ಮರೆತು ಹೋಗಿವೆ. ಆದರೆ ಅದೊಂದು ಅಭೂತಪೂರ್ವ ಕಚೇರಿಯಾಗಿತ್ತು ಎಂದಿಷ್ಟೇ ನೆನಪು. ಗಿರಗಾಂವಿನ ಕಚೇರಿಯಲ್ಲಿ ಮೊದಲು ಹಾಡಿದ್ದು, ಕಿಶೋರಿ ಅಮೋಣಕರ, ಬಳಿಕ ಪಂ. ಮಲ್ಲಿಕಾರ್ಜುನ ಮನ್ಸೂರ್ ಮತ್ತು ಕೊನೆಗೆ ಮೋಗುಬಾಯಿಯವರ ಅಚ್ಚಳಿಯದ ‘ಜೈ ಜೈಯವಂತಿ’ ಮತ್ತು ‘ಭೈರವಿ’. ಸ್ವರ ಸಾಥಿಗೆ ಕೌಸಲ್ಯಾ ಮಂಜೇಶ್ವರ ಮತ್ತು ಕಮಲ ತಾಂಬೆ ಇದ್ದರು.

ಮೋಗುಬಾಯಿಯ ಹಾಡುಗಾರಿಕೆಯ ವೈಶಿಷ್ಟ್ಯವೆಂದರೆ, ಲಯದಲ್ಲಿ ಡೌಲಿನಲ್ಲಿ ಕುದುರೆಯಂತೆ, ಅಂದರೆ ಜಾತಿವಂತ ಕುದುರೆಯ ಠೀವಿಯಲ್ಲಿ ಮುಂದೆ ಸಾಗುವದು. ಲಯಭಾಸ್ಕರ ಖಾಪುಮಾಮಾರ ಸಾನಿಧ್ಯ ಮೋಗುಬಾಯಿಯವರಿಗೆ ಯೋಗ್ಯ ವೇಳೆಯಲ್ಲಿ ಸಿಕ್ಕಿತ್ತು. ಮತ್ತೊಂದು ವಿಷಯ, ಅಲ್ಲಾದಿಯಾ ಖಾನರು ‘ಅಂತರಾ’ ಹಲವಾರು ಸಲ ಬಿಟ್ಟುಕೊಡುತ್ತಿದ್ದರು. ಆದರೆ ಕೆಲಕಾಲ ಆಗ್ರಾ ಪರಂಪರೆಯಲ್ಲಿ ಕಲಿತ ಮೋಗುಬಾಯಿಯವರಿಗೆ ಅಂತರಾ ಇಲ್ಲದ ಹಾಡುಗಾರಿಕೆ ಅಪೂರ್ಣವೆಂದೆನಿಸುತ್ತಿತ್ತು. ಶಕ್ಯವಾದ ಬಂದಿಶ್‌ಗಳಿಗೆ ತಾವೇ ಅಂತರಾ ಜೋಡಿಸಿ ಒಂದು ಪೂರ್ಣತ್ವ ಕೊಟ್ಟದ್ದು ಇದೆ. “ನನ್ನಲ್ಲಿ ಲಯ ಅಂಗ ಬಂದದ್ದು ಬಾಳುಮಾಮಾ ಮತ್ತು ಖಾಪುಮಾಮಾರಿಂದ ಮತ್ತು ಹಾಡಿನಲ್ಲಿಯ ಲಯಕಾರಿ ಹೈದರಖಾನ ಸಾಹೇಬರಿಂದ” ಎಂದು ಮೋಗುಬಾಯಿ ಹೇಳುತ್ತಿದ್ದರು.

ಎಚ್‌ಎಮ್‌ವಿಯ ಎರಡೋ, ನಾಲ್ಕೋ ತಟ್ಟೆಗಳನ್ನು ಮಾಡಿಸಿಕೊಂಡರು (೭೮ಆರ್ ಪಿ ಎಮ್) ಯಮನ ರಾಗದಲ್ಲಿಯ ತರಾಣಾ ೧೫ ೧/೨ ಮಾತ್ರೆಯದು ಇದ್ದು, ಇದನ್ನು ಅತ್ಯಂತ ಕುಶಲತೆಯಿಂದ ಮೋಗುಬಾಯಿ ಹಾಡಿದ್ದಾರೆ. ಇಂಪಾದ ಶಾರೀರ, ಹಾಡುಗಾರಿಕೆಯಲ್ಲಿ ಫೀರಕ್ಯಾ (ಸ್ಪಿನ್) ತಾನುಗಳು. ಫೀರಕ್ಯಾ ಅಂದರೆ ಒತ್ತಡ ಕೊಟ್ಟು ಆರೋಹ ಹಾಡುವದು ಮತ್ತು ಕೂಡಲೇ ಅವರೋಹದಲ್ಲಿ ಇಳಿಯುವದು. ಇದರಲ್ಲಿಯೇ ಲಡಿ ತಾನುಗಳ ಸುರುಳಿ ಬಿಚ್ಚುತ್ತಾ ಹೋಗುವದು. ಮನೆಗೆಲಸ ಮಾಡುತ್ತಾ ಮೋಗುಬಾಯಿ ಇಂತಹ ಫಿರಕ್ಯಾ ಅಭ್ಯಾಸ ಮಾಡುತ್ತಾ ಇರುತ್ತಿದ್ದರಂತೆ.

ಮುಪ್ಪಿನಲ್ಲಿ ಕೂಡ ಅಲ್ಲಾದಿಯಾಖಾನರ ಬುದ್ಧಿ ತೀಕ್ಷ್ಣವಾಗಿತ್ತು. ಹೀಗಾಗಿ ಮೋಗುಬಾಯಿಯವರಿಗೆ ಇದರ ಲಾಭ ತುಂಬಾ ಆಯಿತು. ಮೋಗು ಬಾಯಿಯವರು ತಮ್ಮ ಶಿಷ್ಯರಿಗೆ ತಮ್ಮ ಗುರುಗಳ ಉತ್ತರದಾಯಿತ್ವದ ಮತ್ತು ಶ್ರೇಷ್ಠ್ಠತೆಯ ಬಗ್ಗೆ ಯಾವಾಗಲೂ ಹೇಳುತ್ತಿದ್ದರಂತೆ. ಅಲ್ಲಾದಿಯಾ ತೀರಿಕೊಂಡಾಗ ಅವರ ವಯಸ್ಸು ತೊಂಬತ್ತೊಂದು. ಮೋಗುಬಾಯಿಯವರು ಇನ್ನೈದು ವರ್ಷ ಹೆಚ್ಚು ಬಾಳಿದರು. ಫ಼ೆಬ್ರುವರಿ ೧೦, ೨೦೦೦ಕ್ಕೆ ರವಳನಾಥನ ಪಾದ ಸೇರಿದರು. ಇವರ ಶಿಷ್ಯರಲ್ಲಿ ಕಮಲ ತಾಂಬೆ, ಕೌಸಲ್ಯಾ ಮಂಜೇಶ್ವರ, ಸುಶೀಲಾರಾಣಿ ಪಟೇಲ, ಕುಮುದಿನಿ ಕಾಟಧರೆ, ಅರುಣ ದ್ರವಿಡ, ಸುಲಭಾ ಐಶವೀಕರ ಮತ್ತು ಅವರ ಮಗಳೇ ಕಿಶೋರಿ ಅಮೋಣಕರ. ಮತ್ತು ಇನ್ನಿತರರು.