‘ಮೈನೇಮ್ ಈಸ್ ಜಾನಕೀಬಾಯಿ, ಅಲಹಾಬಾದ್’ ಅಥವಾ ‘ಛಪ್ಪನ್ ಚೂರೀ ಜಾನಕೀಬಾಯಿ’(೧೮೮೦-೧೯೩೪)

ಇದು ಸಾಧಾರಣ ೧೩೫ ವರ್ಷಗಳ ಹಿಂದೆ ನಡೆದ ಸತ್ಯಕತೆ. ಉತ್ತರ ಪ್ರದೇಶದ ಪ್ರಯಾಗ ಅಥವಾ ಅಲಹಾಬಾದದಲ್ಲಿ ನಡೆದದ್ದು. ಹೋಳಿ ಹಬ್ಬದ ಮೊದಲನೇ ದಿನ ಪೈಲವಾನ ಶಿವಬಾಲಕರಾಮ್ ಬನಾರಸದಿಂದ ಅಲಹಾಬಾದಕ್ಕೆ ಕುಸ್ತಿ ಪಂದ್ಯದಲ್ಲಿ ಭಾಗವಹಿಸಲು ಬಂದಿದ್ದ. ರಾತ್ರಿ ಗಂಗಾತೀರದ ಪಕ್ಕದಲ್ಲಿಯೇ ಹಾಡು ಹೇಳುತ್ತಾ ನಡೆಯುತ್ತಿದ್ದಾಗ, ಯಾರೋ ನದಿಯಲ್ಲಿ ಜಿಗಿದ ಸಪ್ಪಳ ಕೇಳಿಸಿತು ಅವನಿಗೆ. ಕೂಡಲೇ ನದಿಗೆ ಜಿಗಿದ ಈ ಪೈಲವಾನ ಮೀನಿನಂತೆ ಈಜಿ, ಆತ್ಮಹತ್ಯೆಮಾಡಿಕೊಳ್ಳಲು ಬಂದವಳನ್ನು ಎತ್ತಿ ದಡದ ಮೇಲಿಟ್ಟು ಪ್ರಾಣ ಉಳಿಸಿದ. ಸೆರಗಿನಲ್ಲಿ ಕಟ್ಟಿಕೊಂಡ ಶಿಶು ಅದಾಗಲೇ ತೀರಿಕೊಂಡಿತ್ತು. ಅವಳ ಹೆಸರು ಲಕ್ಷ್ಮಿ. ಬ್ರಾಹ್ಮಣ ಕುಲಕ್ಕೆ ಸೇರಿದ ಕುಮಾರಿಮಾತೆ.

ಶಿವಬಾಲಕರಾಮ ಪೈಲವಾನ, ಆಹಿರಜಾತಿಗೆ ಸೇರಿದವ, ಅಂದರೆ ಯಾದವ, ನಮ್ಮ ಕಡೆಯ ಗವಳಿಗಳ ಹಾಗೆ. ಈತ ಬನಾರಸದಲ್ಲಿ ಹಾಲು ಹಾಗೂ ಮಿಠಾಯಿ ಅಂಗಡಿ ಇಟ್ಟುಕೊಂಡಿದ್ದ. ಹೆಂಡತಿ ಮಾನಕಿ, ಒಬ್ಬಳೇ ಮಗಳು ಜಾನಕೀ, ಸಾಧಾರಣ ೮-೯ ವರ್ಷದವಳು.
ತಾನು ಪ್ರಾಣ ಉಳಿಸಿದವಳನ್ನು ದಿಟ್ಟಿಸಿ ನೋಡಿದ ಶಿವಬಾಲಕರಾಮ್. ಲಕ್ಷ್ಮೀ ಲಕ್ಷಣವಂತೆ. ಎಚ್ಚರ ಬಂದ ಮೇಲೆ ಇಬ್ಬರೂ ಕೂಡಿ ಸತ್ತ ಶಿಶುವನ್ನು ಮಣ್ಣುಮಾಡಿದರು. ಶಿವಬಾಲಕ ಅನಂತರ ಅಲಹಾಬಾದದಲ್ಲಿಯೇ ಉಳಿದುಬಿಟ್ಟ. ಅತ್ತ ಅವನ ಹೆಂಡತಿ ಮಾನಕೀಗೆ ಧರ್ಮಸಂಕಟ. ಪ್ರಯಾಗಕ್ಕೆ ಹೋದವರು ಗಂಡನ ಸುದ್ದಿ ತಂದರು. ಕೇವಲ ೭೦ ಮೈಲು ದೂರದ ಪ್ರವಾಸ ಮಾಡಿ ಮಾನಕಿ ಗಂಡನನ್ನೂ ಮತ್ತು ‘ಅವಳನ್ನೂ’ ತಂದು ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದಳು. ಅವಳಿಗೆ ಒಂದೆರಡು ವರ್ಷಗಳಲ್ಲಿಯೇ ಈ ಉತ್ತಮ ಕೆಲಸಕ್ಕೆ ಸಿಕ್ಕ ಪ್ರತಿಫಲವೆಂದರೆ ಲಕ್ಷ್ಮಿಯ ಮೊದಲ ಪ್ರಿಯಕರ (ಈತ ಸೈನಿಕನಾಗಿದ್ದ) ಮಾನಕಿಯ ಮಗಳು ಜಾನಕಿಯ ಮೇಲೆ ನಡೆಸಿದ ಪ್ರಾಣಾಂತಿಕ ಹಲ್ಲೆ. ಜಾನಕಿಯನ್ನು, ಲಕ್ಷ್ಮಿಯೆಂದು ತಪ್ಪು ತಿಳಿದು ಆತ ಶಿವಬಾಲಕರಾಮ ಇಲ್ಲದಿದ್ದಾಗ ಜಾನಕಿಯನ್ನು ಕಿಸೆಚಾಕುವಿನಿಂದ ೫೬ ಸಲ, ತಿವಿದು ಗಾಯಗೊಳಿಸಿದ. ಆಸ್ಪತ್ರೆಯಿಂದ ಮರಳಿದ ಕೆಲವೇ ದಿನಗಳಲ್ಲಿ ತಾಯಿ ಮಗಳನ್ನು, ಶಿವಬಾಲಕ ರಾಮ ಮತ್ತು ಲಕ್ಷ್ಮಿ ಮನೆಯಿಂದ ಹೊರದೂಡಿದರು.

ಅನಾಥರಾದ ಮಾನಕಿ ಮತ್ತು ಜಾನಕಿ ತಮ್ಮಲ್ಲಿದ್ದ ಬಂಗಾರದ ಆಭರಣಗಳನ್ನು ಮಾರಿ ಅಲಹಾಬಾದ್ ತಲುಪಿದರು. ಏನೂ ಇಲ್ಲದಿದ್ದರೂ ಗೆಳತಿ ಪಾರ್ವತಿಯ ಸಹಾಯದಿಂದ ಅಲಹಾಬಾದದ ಕೋಠಿ (ತವಾಯಫ್‌ರ ಮನೆ) ಸೇರಿದರು. ಮಾನಕಿಗೆ ನೃತ್ಯ-ಸಂಗೀತದ ಆಕರ್ಷಣೆ ಇದ್ದರೂ ಪರಿಶ್ರಮ ಇರಲಿಲ್ಲ. ಅವಳ ಬಳಿಯಲ್ಲಿ ಇದ್ದುದು ಕೇವಲ ವ್ಯವಹಾರಜ್ಞಾನ, ಮಾಟವಾದ ಶರೀರ. ಆದರೆ ಮಗಳು ಜಾನಕಿಯ ಶಾರೀರ ಇಂಪಾಗಿತ್ತು. ಮೈತುಂಬ, ಮೋರೆ ತುಂಬ ಗಾಯದ ಕಲೆ, ಸಾಕಿ ಅಥವಾ ಕನೀಜ (ಕೋಠಿಯ ಕನಿಷ್ಠ )ಕೆಲಸವನ್ನು ತಾಯಿ ಮಾನಕಿ ಕೋಠಿಯಲ್ಲಿ ಮಾಡುತ್ತಿದ್ದಳು. ಕೋಠಿಗೆ ‘ಮುಜರಾ’ ಸಮಯಕ್ಕೆ ಬರುವ ಸಾರಂಗೀ ಉಸ್ತಾದರನ್ನು ದುಂಬಾಲು ಬಿದ್ದು ‘ಛಪ್ಪನ್ನ ಚೂರೀ ಜಾನಕಿ’ಗೆ ಸಂಗೀತ ಕಲಿಸಿದಳು. ಇವಳೇ, ಮುಂದೆ ‘ಜಾನಕೀ ಬಾಯಿ ಅಲಹಾಬಾದ್’ ಎಂದು ಉತ್ತರ ಭಾರತದಲ್ಲಿ ಪ್ರಖ್ಯಾತಳಾದಳು. ರೂಪ, ಲಾವಣ್ಯ, ಇರದಿದ್ದರೂ, ಮೈತುಂಬ, ಮೊಗದ ತುಂಬ ಗಾಯಗಳ ಕಲೆಗಳಿದ್ದರೂ, ಉತ್ತಮ ಕಲಾವಿದೆ ಎಂದು ಹೆಸರು ಮಾಡಿದಳು. ಗೋಹರಜಾನ ಕಲಕತ್ತಾವಾಲಿಯ ಸಮಕಾಲೀನಳಾದ ಈಕೆ ಚಕ್ರವರ್ತಿ ಪಂಚಮ ಜಾರ್ಜ ಅಲಹಾಬಾದಿಗೆ ಬಂದಾಗ ಗೋಹರಜಾನಳೊಂದಿಗೆ ‘ಮುಬಾರಕ ಹೊ’ಕಚೇರಿ ನಡೆಸಿ ರಸಿಕರಿಂದ ಭಲೇ ಎನಿಸಿಕೊಂಡಳು.

ನಾನು ಬಹುರಾಷ್ಟ್ರೀಯ ಗ್ಲಾಕ್ಸೋ ಕಂಪನಿಯ ಪರವಾಗಿ ೧೯೮೪ರಲ್ಲಿ ಮಧ್ಯಪ್ರದೇಶದ ರತಲಾಮ್ ಸೇರಿಕೊಂಡೆ. ೧೯೭೦ರ ನಂತರ ಮುಂಬಯಿಯಲ್ಲಿಯೇ ಇದ್ದ ನನಗೆ ಮರಳಿ ‘ಭಾರತ ಭ್ರಮಣ’ದ ಕೆಲಸ ಸಿಕ್ಕಿದ್ದರಿಂದ, ಮಧ್ಯಪ್ರದೇಶದ ಸಂಗೀತ ಕ್ಷೇತ್ರಗಳಾದ ದೇವಾಸ್, ಇಂದೋರ್‌ಗೆ ಮರಳಿ ೨೦ ವರ್ಷಗಳ ನಂತರ ಹೋಗುವ ಸಂಧಿ ಸಿಕ್ಕಿದ್ದರಿಂದ ಅತ್ಯಂತ ಉಲ್ಲಾಸದಿಂದ ಹೊರಟಿದ್ದೆ. ಇಲ್ಲಿಯೇ ನನಗೆ ಅಂದರೆ, ರತಲಾಮ್‌ದಲ್ಲಿ ಕೈಲಾಶ್ ಗೌತಮ್ ಎಂಬ ಗೃಹಸ್ಥರ ಪರಿಚಯವಾಯಿತು. ಇವರಿಂದಲೇ ನಾನು ‘ಛಪ್ಪನ್ ಚೂರೀ ಜಾನಕಿ’ಯ ಕತೆಯನ್ನು ಅರಿತುಕೊಂಡೆ. ಮುಂದೆ ಸಾಧಾರಣ ಒಂದು ವರ್ಷದ ನಂತರ ನನಗೆ ಅಲಹಾಬಾzಕ್ಕೆ ಹೋಗುವ ಪ್ರಸಂಗ ಒದಗಿತು. ಆಗ ಕೈಲಾಶ ಗೌತಮ್‌ರು ಜಾನಕೀಬಾಯಿಯ ಮೇಲೆ ಒಂದು ಸಾಕ್ಷ್ಯಚಿತ್ರಮಾಡುವುದರಲ್ಲಿ ತೊಡಗಿದ್ದರು. ನನಗೆ ಜಾನಕಿಬಾಯಿಯವರ ‘ಬೇಸಿಗೆ ಮಹಲ್’, ಕಬ್ರಸ್ತಾನ್, ಮತ್ತು ಅವಳನ್ನು ಕಣ್ಣಾರೆ ಕಂಡಿದ್ದ ಮುದುಕ ಮಹೇಶವ್ಯಾಸ್ ಅವರನ್ನು ಭೆಟ್ಟಿಮಾಡಿಸಿದರು. ೧೯೯೦ರ ತನಕ ಗೌತಮ್‌ರೊಂದಿಗೆ ನನ್ನ ಒಡನಾಟ, ಪತ್ರವ್ಯವಹಾರ ಇತ್ತು. ‘ಧರ್ಮಯುಗ’ದಲ್ಲಿ ಅವರು ಬರೆದ ಕಾಲಮ್ ನನಗೆ ಕಳಿಸಿಕೊಟ್ಟಿದ್ದರು. ಮುಂದೆ ಅವರ ಸಾಕ್ಷ್ಯಚಿತ್ರದ ಹಣೆಬರಹ ಏನಾಯಿತು ಎಂಬುದು ತಿಳಿಯಲೇ ಇಲ್ಲ. ಅವರ ಸಂಪರ್ಕವೂ ಕ್ರಮಶಃ ನಿಂತೇ ಹೋಯಿತು, ಇದ್ದದ್ದು ಕೇವಲ ಜಾನಕೀಬಾಯಿಯ ನೆನಪುಗಳು ಮತ್ತು ಅವಳ ಧ್ವನಿಮುದ್ರಣಗಳ ತಟ್ಟೆಗಳು.

ಒಂದೆರಡು ೬೦ ಮಿಲಿ ವಿಸ್ಕಿ ಹೀರಿದ ಮೇಲೆ ಕೈಲಾಶ್ ಗೌತಮ್ ಅವರು ರತಲಾಮ್ ಊರಿನ ಏಕಮೇವ ಹಾಟೇಲು ‘ಭಾರತ’ದಲ್ಲಿ ತಮ್ಮ ಜಾನಕೀ ಕತೆಯನ್ನು ಪ್ರಾರಂಭಿಸುತ್ತಿದ್ದರು. ಗೋಹರ ಜಾನ್ ಮತ್ತು ಜಾನಕಿ ಇಬ್ಬರೂ ಕೂಡಿ ಹಾಡಿದ ಕಚೇರಿಯ ನೆನಪು (ಮುದುಕ ಮಹೇಶ ವ್ಯಾಸ ಹೇಳಿದಂತೆ) ಪ್ರತಿ ರಾತ್ರಿ ಮರುಕಳಿಸುತ್ತಿತ್ತು. ‘ಏಕ ಚೌದವೀ ಕಾ ಚಾಂದ, ದುಸರೀ ಅಮಾವಾಸ್ಯಾಕೀ ಖ್ವಾಬ್’, ಹಾಸ್ಯಕವಿ ಎಂದು ಮನ್ನಣೆ ಪಡೆದ ಕೈಲಾಶರ ‘ಅವಿಕಲ್ಪಸಮಾದಿ’ ಮುಟ್ಟುವ ಮೊದಲು ಅವರಿಂದ ಗೋಹರಜಾನ್ ಮತ್ತು ಜಾನಕೀ ಬಾಯಿಯ ಸೌಂದರ್ಯ ಮತ್ತು ಕುರೂಪತೆಯನ್ನು ಕುರಿತ, ತನ್ನದೇ ಕಾವ್ಯಶೈಲಿಯ ವರ್ಣನೆ ಮುಂದುವರಿಯುತ್ತಿತ್ತು.

ಬಡೀ ಮಲಕಾಜಾನಳಂತೆ ಜಾನಕಿ ಕವಯತ್ರಿಯೂ ಆಗಿದ್ದಳು. ಅಂತೆಯೇ, ಕೈಲಾಶ್ ಅವರ ವಿಶೇಷ ಪ್ರೇಮ ‘ಕ್ಯಾ ಬತಾವೂಂ ಬುರ್ಡೆಸಾಬ್, ವೋ ಜಮಾನಾ ಹೀ ಉಸಕಾ ಥಾ. ಬದಸೂರತ್ ಹೋನೆಕೆ ವಜಹಸೆ…’ ಗದ್ಗದ ಧ್ವನಿಯಲ್ಲಿ ಅವರು ಹೇಳಿದ್ದು. ಆಕೆಯ ವಿದ್ರುಪತೆಯ ಕಾರಣದಿಂದ ಸಿಲ್ಕ್ ಪರದೆ ಹಾಕಿ ಅದರ ಹಿಂದೆ ಕುಳಿತು ಜಾನಕಿಬಾಯಿ ಹಾಡುವ ಪದ್ಧತಿ ರೂಡಿಮಾಡಿಕೊಂಡಿದ್ದಳು. ಇತರ ಸಾಥೀದಾರರು ಪರದೆಯ ಹೊರಗೆ. ಅಲಹಾಬಾದದ ಪ್ರತ್ಯೇಕ ಜಮೀನದಾರರ ಮನೆಯಲ್ಲಿ ಈಕೆಯ ಜಲಸಾ ಆಗುತ್ತಿತ್ತು. ಇವಳ ಖ್ಯಾತಿ ಇಡೀ ಉತ್ತರ ಹಿಂದುಸ್ಥಾನದಲ್ಲಿ ಪಸರಿಸಿತ್ತು.

ಒಮ್ಮೆ ಮಧ್ಯಪ್ರದೇಶದ ರೇವಾ ಸಂಸ್ಥಾನದ ಮಹಾರಾಜರು ಕರೆಸಿಕೊಂಡರು, ಮಗಳ ಮದುವೆಯ ಸಮಾರಂಭದ ಶುಭ ಮುಹೂರ್ತಕ್ಕೆ. ಆಕೆಯ ಆಪ್ತಕಾರ್ಯದರ್ಶಿ ಪ್ರಧಾನಜಿಯ ಕಿವಿಯಲ್ಲಿ ಉಸುರಿದರು. ಹಾಡುವಾಗ ಪಡದೆ ಬೇಕು. ಜಾನಕಿ ಬಾಯಿಯ ಕೀರ್ತಿ ಕೇಳಿದ ಮಹಾರಾಜರು ತಲೆ ಅಲ್ಲಾಡಿಸಿದರು. ಅದ್ಭುತ ಕಚೇರಿ ಆಯಿತು. ಮಹಾರಾಜರಿಗೆ ಅತ್ಯಂತ ಸಂತೋಷವಾಗಿ ಅಮೂಲ್ಯ ಮುತ್ತಿನ ಹಾರ ಕೊಡಬಯಸಿದರು. ಆದರೆ ಮಾಡಿದ ಷರತ್ತು ಮುರಿದು ಪಡದೆ ತೆಗೆಸಿದರು. ಅವಳನ್ನು ನೋಡಿ ಕ್ಷಮೆಯಾಚಿಸಿ, ಹಾರದೊಂದಿಗೆ ವಜ್ರದ ಉಂಗುರವನ್ನೂ ದಯಪಾಲಿಸಿದರಂತೆ!

ಗೋಹರಜಾನಳಂತೆಯೇ ಈಕೆಯೂ ಗ್ರಾಮೊಫೋನ ಸೆಲೆಬ್ರಿಟಿ ಎಂದು ಮೆರೆದಳು. ಹತ್ತು ವರ್ಷಗಳಲ್ಲಿ ೨೫೦ ಹಾಡುಗಳನ್ನು ಈಕೆ ರಿಕಾರ್ಡು ಮಾಡಿದಳು. ಗುರುತಿಗಾಗಿ ತನ್ನ ಇಂಪಾದ ಧ್ವನಿಯಲ್ಲಿ ‘ಮೈ ನೇಮ್ ಈಸ್ ಜಾನಕಿಬಾಯಿ ಆಫ್ ಅಲಹಾಬಾದ’ ಹೇಳಿದ್ದು ಕೇಳಲಿಕ್ಕೆ ಈಗಲೂ ನಮಗೆಲ್ಲ ಖುಷಿ!

ಪಂಚಮ ಜಾರ್ಜ ಅಲಹಾಬಾದಿಗೆ ಬಂದಾಗ ಕಲಕತ್ತೆಯ ಗೋಹರಜಾನಳ ಕಚೇರಿಯ ನಂತರ ಜಾನಕಿಯೂ ಹಾಡಿದ್ದು ಮಹೇಶ ವ್ಯಾಸರ ಅಪ್ಪ ಕೇಳಿದ್ದರಂತೆ. ಅದೊಂದು ಅಭೂತಪೂರ್ವ ಮೆಹೆಫಿಲ್ ಆಗಿತ್ತಂತೆ.

ಅಲಹಾಬಾದದಲ್ಲಿ ಜಾನಕಿಬಾಯಿಯ ನಾಲ್ಕಾರು ದೊಡ್ಡ ಮನೆಗಳಿವೆ. ಅವರ ಮಕ್ಕಳು, ಮರಿಮಕ್ಕಳ ಬಗ್ಗೆ ಏನೂ ಮಾಹಿತಿ ಸಿಗಲಿಲ್ಲ. ಇವಳ ಹತ್ತು ಹಾಡುಗಳ ಧ್ವನಿಮುದ್ರಣ ೧೯೯೪ರಲ್ಲಿ ‘ಚೇರಮನ್ಸ ಚಾಯ್ಸ’ ಎಂದು ಎಚ್‌ಎಮ್‌ವಿಯವರು ಹೊರಗೆ ತಂದದ್ದು ವಿಶೇಷ.

ಇವಳೇ ಬರೆದು ಹಾಡಿದ ಒಂದು ಕವಿತೆಯಿಂದ ಈ ಜಾನಕೀಬಾಯಿಯ ಕತೆಯನ್ನು ಮುಗಿಸುತ್ತೇನೆ.

‘ಇಸ್ ನಗರೀಕೆ ದಸ್ ದರವಾಜಾ
ನ ಜಾನೂ ಕೌನಸಿ ಖಿಡಕಿ ಖುಲಿಥೀ,
ಸೈಂಯಾ ನಿಕಲಗಯೇ ಮೈಂ ನಾ ಲಡಿಥೀ.’
‘ಸಾತ ಸಖಿ ಮೇರೆ ಆಗೆ ಖಡೀ ಥೀ
ಇನಸೇ ಪೂಛೋ ಮೈನೆ ಕುಛ ನ ಕಹೀ ಥೀ
ಸೈಂಯಾ ನಿಕಲಗಯೇ ಮೈಂ ನಾ ಲಡಿಥೀ ’

ಮುಂದೆ ಇದು ಅವಳ ತತ್ತ್ವಜ್ಞಾನವನ್ನು ವಿವರಿಸುತ್ತದೆ.