ಆಗ್ರೇವಾಲಿ ಜೋಹರಾಬಾಯಿ (೧೮೬೮-೧೯೧೩)

ಜೋಹರಾಬಾಯಿ ಹುಟ್ಟಿದ್ದು ೧೮೬೮ರಲ್ಲಿ. ಇವಳ ಪ್ರಾಥಮಿಕ ಸಂಗೀತ ಶಿಕ್ಷಣವಾದದ್ದು ಅಹಮ್ಮದಖಾನ ಎಂಬ ಉಸ್ತಾದನ ಬಳಿ. ಈತ ಆಗ್ರಾದವ, ಸಾರಂಗೀ ನವಾಜ ಎಂದೂ ಪ್ರಸಿದ್ಧಿ ಪಡೆದವ. ಹೀಗಾಗಿ ಆಗ್ರಾದಲ್ಲಿಯೇ ಹುಟ್ಟಿ ಬೆಳೆದವಳು ಎಂದುಕೊಂಡಿದ್ದೇವೆ. ಅತ್ರೋಲಿ ಇದು ಆಗ್ರಾ ಪಕ್ಕದಲ್ಲಿಯ ಊರು. ಊರಿನ ಖ್ಯಾತ ‘ದರಸಪಿಯಾ’ ಮೆಹಬೂಬ ಖಾನರ ಬಳಿ ಮುಂದಿನ ಶಿಕ್ಷಣವಾಯಿತು. ಜೋಹರಾ ನೃತ್ಯದಲ್ಲಿಯೂ ನೈಪುಣ್ಯವನ್ನು ಸಾಧಿಸಿದ್ದರಿಂದ ಆ ಕಾಲದ ರಾಜ, ಮಹಾರಾಜಾ, ನವಾಬರು ಅವಳ ‘ಮುಜರಾ’ ಮತ್ತು ‘ಜಲಸಾ’ಗಳನ್ನು ಏರ್ಪಡಿಸುತ್ತಿದ್ದರಂತೆ. ಸ್ಥಾಯಿ ಹಾಗೂ ಅಂತರಾದಲ್ಲಿಯ ಆಕೆಯ ‘ಪೇಶಕಶ್’(ಪ್ರಸ್ತುತಿ) ಅತುಲನೀಯವಾಗಿತ್ತು! ಎಂದು ವಝೆ ಬುವಾ ಬರೆದಿಟ್ಟಿದ್ದಾರೆ. ಒಬ್ಬ ಶ್ರೇಷ್ಠಗಾಯಕ ಮತ್ತೊಬ್ಬರ ಬಗ್ಗೆ ಹೀಗೆ ಬರೆಯುವುದು ವಿರಳ. ಅವಳ ‘ದಾನೇದಾರ’ (ಸೂಕ್ಷ್ಮ) ತಾನಗಳು ಅದ್ಭುತವಾಗಿದ್ದವಂತೆ. ಬಡೆ ಗುಲಾಮ ಅಲಿಖಾನ ಸಾಹೇಬರು ಮತ್ತು ಆಗ್ರಾ ಪರಂಪರೆಯ ಫೈಯಾಜಖಾನರು ಇವಳ ಧ್ವನಿಮುದ್ರಿಕೆಗಳನ್ನು ಆಲಿಸುತ್ತಿದ್ದರಂತೆ (ಪ್ರಾ. ಬಿ.ಆರ್. ದೇವಧರ್) ಇವಳು ಹಾಡುವ ರೀತಿ, ವೇಳೆ ಅಂದರೆ ೩ ನಿಮಿಷದ ಹಾಡಿನಲ್ಲಿ ಖಯಾಲ ತುಂಬಿ ವ್ಯವಸ್ಥಿತವಾಗಿ ಪ್ರಸ್ತುತಿಪಡಿಸುವವರಲ್ಲಿ ಅಗ್ರಗಣ್ಯಳೆಂದು ಹೀರಾಬಾಯಿ ಬಡೋದೆಕರ್, ಅಬ್ದುಲ್ ಕರೀಂ ಖಾನರು ಇವಳನ್ನೇ ಅನುಸರಿಸುತ್ತಿದ್ದರು. ಉದಾಹರಣೆಗೆ ಇವಳ ಧ್ವನಿತಟ್ಟೆ, ‘ಸೋಹನಿ’ ರಾಗವನ್ನು ಕೇಳಿದ ಬಳಿಕ ಹೀರಾಬಾಯಿ ಅಥವಾ ಅಬ್ದುಲ್ ಕರೀಂ ಖಾನರ ಗಾಯನ ಕೇಳಿದರೆ ನಾನು ಹೇಳಿದ್ದು ಸರಿ ಅನಿಸಬಹುದು.

ಮುಂಬಯಿ ವಿದ್ಯಾಪೀಠದ ಸಂಗೀತ ವಿಭಾಗವು ಚರ್ಚಗೇಟ ಸ್ಟೇಶನ್‌ದ ಹತ್ತಿರ ಕ್ಲಬ್ ಹೌಸಿನಲ್ಲಿ ಇದೆ. ಇದರ ಮೊದಲ ಮುಖ್ಯಸ್ಥ ನನ್ನ ಸನ್ಮಿತ್ರ ಡಾ. ಅಶೋಕ.ದ ರಾನಡೆ. ಇವರ ಸಾರಥ್ಯದಲ್ಲಿ ಸಂಗೀತ ವಿಭಾಗ ಭಾರತದಲ್ಲಿಯೇ ಮೊಟ್ಟ ಮೊದಲು ಪ್ರಾರಂಭವಾದದ್ದು ಮುಂಬಯಿಯಲ್ಲಿ. ರಾನಡೆಯವರು ವಿದ್ಯಾಲಯದ ಸಂಗೀತ ವಿಭಾಗದ ಪ್ರಾರಂಭದ ಹತ್ತು ವರ್ಷ ಅತ್ಯಂತ ನಿಪುಣತೆಯಿಂದ ತಮ್ಮ ಕಾರ್ಯಭಾರ ಚಲಾಯಿಸಿ ಅನೇಕ ಹೊಸ ಹೊಸ ವಿಷಯಗಳ ಅಧ್ಯಯನsವನ್ನು ಪ್ರಾರಂಭಿಸಿದ್ದರು. ಅದರಲ್ಲಿ ಮೊದಲನೆಯದು ಅಂದರೆ ‘ರಿಕಾರ್ಡುಗಳ ಸಲುವಾಗಿ ಧ್ವನಿಯ ಎಸೆತ’. ಇದರಲ್ಲಿ ಪಂ. ನಾರಾಯಣರಾವ್ ವ್ಯಾಸ ಪುರುಷಧ್ವನಿಗೆ ಉದಾಹರಣೆ ಎಂದೂ ಮತ್ತು ಜೋಹರಾ ಬಾಯಿ ಆಗ್ರೇವಾಲಿ ಇವಳದ್ದು ಸ್ತ್ರೀಧ್ವನಿಯದ್ದು ಎಂದೂ ಶ್ರವಣ ಸತ್ರದ ಪ್ರಾತ್ಯಕ್ಷಿಕೆಯಲ್ಲಿ ಹೇಳಿದ್ದು ಉಂಟು. ಅಂದರೆ ಪ್ರಾಯದ ಸಾಧಾರಣ ೪೦ನೇ ವರ್ಷದಲ್ಲಿ ಮುದ್ರಣ ಮಾಡಿದ ಜೋಹರಾ ಈ ಕಲೆಯಲ್ಲಿ ನೈಪುಣ್ಯವನ್ನು ಹೇಗೆ ಸಾಧಿಸಿರಬೇಕು? ಎಂಬುದು ಯಕ್ಷಪ್ರಶ್ನೆ.

ರಿಕಾರ್ಡಿಂಗ್ ತಂತ್ರಜ್ಞಾನ, ಬಾಲ್ಯಾವಸ್ಥೆಯಲ್ಲಿದ್ದಾಗ ಗಾಯಕ-ಗಾಯಕಿಯರಿಗೆ ಒಂದು ದೊಡ್ಡ ಮೆಗಾಫೋನಿನಲ್ಲಿ ತಲೆ ಹಾಕಿ, ದೊಡ್ಡ ಧ್ವನಿಯಲ್ಲಿ ಕಿರುಚಿ, ಧ್ವನಿಮುದ್ರಣವನ್ನು ಮೇಣದ ಸಿಲಿಂಡರಗಳ ಮೇಲೆ ಮಾಡಬೇಕಾಗುತ್ತಿತ್ತು. ಹಳೆಯ ಎಚ್.ಎಮ್.ವಿಯವರ ೭೮ ಆರ್‌ಪಿ‌ಎಮ್ ಸ್ಪೀಡಿನ ರಿಕಾರ್ಡುಗಳ ಮೇಲೆ ನೀವು ಒಂದು ನಾಯಿ ಮೆಗಾಫೋನಿನ ಬಳಿ ಕುಳಿತ ಚಿತ್ರವನ್ನು ನೋಡಿರಬಹುದು. ರಿಕಾರ್ಡಿಂಗ ಮೆಗಾಫೋನ್ ಇದೇ ತರಹದ್ದು. ಗೋಹರ, ಜಾನಕೀಬಾಯಿ, ಆಗ್ರೇವಾಲಿ ಮಲಕಾ ಇವರ ರಿಕಾರ್ಡಿಂಗ್ ಅಂದರೆ ಧ್ವನಿಮುದ್ರಣ ಇದೇ ರೀತಿಯಲ್ಲಿ ಮಾಡಲಾಗುತ್ತಿತ್ತು. ಧ್ವನಿಕ್ಷೇಪಕ ವ್ಯವಸ್ಥೆ ಇರದಿದ್ದರಿಂದ ನಾಟಕದ ಎಲ್ಲ ನಟ-ನಟಿಯರಿಗೆ, ಗಾಯಕ-ಗಾಯಕಿಯರಿಗೆ ಚಾಪೆಯ ಮೇಲೆ ಕುಳಿತವರಿಗೆ ಕೂಡ ಸರಿಯಾಗಿ ಕೇಳುವಂತೆ ಶಬ್ದಗಳನ್ನೂ, ಸ್ವರಗಳನ್ನೂ (ಗದ್ಯ-ಪದ್ಯ) ಅಕ್ಷರಶಃ ಎಸೆಯಬೇಕಾಗುತ್ತಿತ್ತು. ಇದೇ ರೀತಿ ಕೋಠಿಗಳಲ್ಲಿ, ಕಚೇರಿಗಳಲ್ಲಿ ಹಾಡಬೇಕಾಗುತ್ತಿತ್ತು. ಧ್ವನಿಮುದ್ರಣವನ್ನು ಕೂಡ ಇದೇ ರೀತಿಯಲ್ಲಿ ಮಾಡಬೇಕಾಗುತ್ತಿತ್ತು.

ಇಷ್ಟೆಲ್ಲ ಬರೆಯುವ ಕಾರಣ, ಪುರುಷ ಗಾಯಕರ ಮಾಡೆಲ್ ಎಂದು ಪಂ. ನಾರಾಯಣ ರಾವ್ ವ್ಯಾಸರ ಹೆಸರನ್ನು ಬರೆದರೂ ಅದರ ಮುದ್ರಣ ತಟ್ಟೆಗಳನ್ನು ಮಾಡುವಾಗ ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆ ಆಗಿತ್ತು (೧೯೩೦-೧೯೩೫). ಆದರೆ ಗೋಹರ, ಮಲಕಾ, ಜಾನಕಿಯವರಂತೆಯೇ, ಜೋಹರಾಬಾಯಿಯ ಧ್ವನಿಮುದ್ರಣ ಪ್ರಾಥಮಿಕ ಹಂತದಲ್ಲಿಯೇ ಇದ್ದರೂ ೧೯೦೮ರಿಂದ ೧೯೧೧ರ ವರೆಗೆ ಹೊರತಂದ ತಟ್ಟೆಗಳನ್ನು ಆಲಿಸಿದರೆ ಅವಳ ಹಾಡುಗಾರಿಕೆಯ ಪರಿಪೂರ್ಣತೆಯ ಕಲ್ಪನೆ ಬರುತ್ತದೆ. ಅಂದರೆ ರಿಕಾರ್ಡಿಂಗ್ ಟೆಕ್ನಿಕದಲ್ಲಿ ಕೂಡ ಆಕೆ ಪರಿಪೂರ್ಣತೆ ಸಾಧಿಸಿದ್ದಳು.

ಜೋಹರಾಬಾಯಿಯ ೬೦ ಹಾಡುಗಳನ್ನು ಮುದ್ರಿಸಿದ ಗ್ರಾಮೋಫೋನ ಕಂಪನಿ ೧೯೩೧ರ ವರೆಗೆ ಅಪರಿಮಿತ ಹಣ ಗಳಿಸಿತು. ಆಲಾಪ್, ಮುರಕಿ, ಖಟಕಾ, ಲಯಕಾರಿಯಲ್ಲಿಯ ಜಲದ್ ಗತಿಯ ತಾನಗಳು, ಸರಗಮ್ ಇತ್ಯಾದಿಗಳನ್ನು ೩ ನಿಮಿಷಗಳಲ್ಲಿ ರಂಜಕತೆಯಿಂದ ಪ್ರಸ್ತುತಿಸಿದ್ದನ್ನು ನಾವು ಕೇಳಬಹುದು. ಇವಳ ‘ಭೂಪಾಲಿ’ ಹಾಗೂ ‘ಸೋಹನಿ’ ರಾಗಗಳು ಯು ಟ್ಯೂಬಿನಲ್ಲಿ ಇವೆ. ಸ್ವಲ್ಪ ಮರ್ದಾನಿ (ಗಂಗೂಬಾಯಿಯವರಂತೆ) ಕಂಠದ ಹಾಡುಗಾರಿಕೆ ಎಲ್.ಪಿ. ರಿಕಾರ್ಡು ಈಗಿನ ಕೇಳುಗರಿಗಾಗಿ ಆರ್‌ಪಿಜಿಯವರು ೧೯೯೪ರಲ್ಲಿ ಮಾರುಕಟ್ಟೆಯಲ್ಲಿ ತಂದರು. ಇವುಗಳಲ್ಲಿ ನಿಮಗೆ ೧೮ ಹಾಡು/ರಾಗಗಳು ಸಿಗುತ್ತವೆ. ‘ಅಲ್ಲಾ ಜಾನೆ, ಅಲ್ಲಾ ಜಾನೆ’ (ತೋಡಿ), ‘ಮಟಕಿ ರೇ ಮೋರಿ ಗೋರಸ’ (ಜೌನಪುರಿ), ‘ಪಿಯಾಕೆ ಮಿಲನ ಕಿ ಆಸ’ (ಜೋಗಿಯಾ) ಇವುಗಳೆಲ್ಲ ಅದ್ಭುತವಾಗಿವೆ. ‘ಗೌಡ ಸಾರಂಗ’ದಲ್ಲಿಯ ಠುಮರಿಯಂತೂ ‘ತೇರಿ ಕಟೀಲಿ ನಿಗಾಹೋ ನೇಂ ಮಾರಾ’ ಇದು ಅಕ್ಷರಶಃ ಗಾಯಗೊಳಿಸುತ್ತದೆ. ಇವಳ ಹಾಡುಗಳನ್ನು ಕೇಳಿ, ‘ಜೋಹರಾ ಕ್ಯಾ ಚೀಸ್ ಥೀ’ ಎಂಬ ಮಾತು ಮನದಟ್ಟಾಗಬಹುದು.

ಜೋಹರಾಬಾಯಿ ೧೯೧೩ರಲ್ಲಿಯೇ ತೀರಿಕೊಂಡಿದ್ದರಿಂದ, ಇವಳ ಒಂದೇ ಒಂದು ಚಿತ್ರ ಉಪಲಬ್ಧವಿದೆ. ಬಲಗೈಯಲ್ಲಿ ತಂಬೂರಿ ಮತ್ತು ಎಡತೊಡೆಯ ಮೇಲೆ ಬಹುಶಃ ಎರಡು ವರ್ಷ ವಯಸ್ಸಿನ ಮಗುವಿಗೆ ಜರಿಟೊಪ್ಪಿಹಾಕಿ ಎಡಕೈಯಿಂದ ಅವುಚಿ ಕುಳಿತು ತನ್ನ ಫೋಟೋ ತೆಗೆಸಿಕೊಂಡಿದ್ದಾಳೆ. ಚಿತ್ರ ಬಿಡಿ, ಇವಳ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸಿಕ್ಕದ್ದು ಇಷ್ಟೆ! ಮರಾಠೀ ಭಾಷೆಯಲ್ಲಿ ಗೋವಿಂದರಾವ್ ಟೆಂಬೆ (ಇವರು ಮೊದಲ ಮರಾಠೀ ಚಿತ್ರಪಟ ‘ಅಯೋಧ್ಯೆಚಾ ರಾಜಾ’ದಲ್ಲಿ ದುರ್ಗಾ ಖೋಟೆಯವರೊಂದಿಗೆ ನಟಿಸಿದ್ದಾರೆ) ಬರೆದ ಪುಸ್ತಕ ‘ಮಾಝಾ ಸಂಗೀತಾಚಾ ವ್ಯಾಸಂಗ’ ಹಾಗೂ ಖ್ಯಾತ ನಟಿ ಹಾಗೂ ಹಾಡುಗಾರ್ತಿ ಜ್ಯೋತ್ಸ್ನಾ ಭೋಳೆ ಇವರ ಪತಿ ಕೇಶವರಾವ್ ಭೋಳೆ ಬರೆದ ಕೆಲವು ವಾಕ್ಯಗಳು ಇದ್ದುದರಿಂದ ಈ ಲೇಖ ಬರೆಯುವ ಸಾಹಸ ಮಾಡಿದ್ದೇನೆ. ರಾಮಕೃಷ್ಣ ಬುವಾ ವಝೆ ಕೂಡ ಜೋಹರಾಬಾಯಿಯ ಮೈಫಲ್ಲುಗಳನ್ನು ಪ್ರತ್ಯಕ್ಷ ಕೇಳಿ ಬರೆದಿಟ್ಟಿದ್ದರಿಂದ ತುಂಬಾ ಸಹಾಯವಾಗಿದೆ.

೧೯೧೩ರಲ್ಲಿಯೇ ಜೋಹರಬಾಯಿ ಅವಳ ಬಹುಶಃ ೪೫ನೇ ವರ್ಷದಲ್ಲಿಯೇ ತೀರಿಕೊಂಡಿದ್ದರಿಂದ ಈಕೆಗೆ ಗ್ರಾಮೋಫೋನ್ ಸೆಲೆಬ್ರಿಟಿಯಾದರೂ ಆ ಸನ್ಮಾನ ಅವಳ ಜೀವಮಾನದಲ್ಲಿ ಸಿಗಲಿಲ್ಲವೆಂದು ಕಾಣುತ್ತದೆ. ಅವಳ ಕೊನೆಯ ಮುದ್ರಣ ೧೯೧೧ರಲ್ಲಿ ದಿಲ್ಲಿಯ ಹೋಟೆಲ್ ರೂಮಿನಲ್ಲಿ ಆಗಿತ್ತು. ಪ್ರತಿವರ್ಷ ೨೫೦೦ ರೂ ಬಿದಾಗಿ (ಗೌರವ ಧನ), ಹೋಗಿ ಬರುವ ಖರ್ಚು ಇತರ ಸಾಥಿದಾರರ (ಪಕ್ಕವಾದ್ಯದವರ) ಬಿದಾಗಿ, ಅವರ ಹೋಗಿ ಬರುವ ಖರ್ಚು ಹಾಗೂ ಮುದ್ರಣಕಾಲದಲ್ಲಿ ಎಲ್ಲರಿಗೂ ಉಚಿತ ವಸತಿ ಮತ್ತು ಭೋಜನ ವ್ಯವಸ್ಥೆಗಳನ್ನು ಗ್ರಾಮೊಫೋನ ಕಂಪನಿಯವರು ಮಾಡುತ್ತಿದ್ದರು. ಕಂಪನಿಯವರು ಜೋಹರಾ ಬಾಯಿಗೆ ಇತರ ರಿಕಾರ್ಡಿಂಗ್ ಕಂಪನಿಗಳಿಗೆ ಧ್ವನಿ ಎರವಲು ಕೊಡುವ ಪ್ರತಿಬಂಧವನ್ನು ವಿಧಿಸಿದ್ದರು. ಇವೆಲ್ಲ ಧ್ವನಿಮುದ್ರಣಗಳು ಕಂಪನಿಯ ೧೯೩೧ರ ಕೆಟೆಲಾಗಿನಲ್ಲಿ ಬಂದ ಮೇಲೆ ಇವುಗಳ ಮಾರಾಟದ ಉಚ್ಚಾಂಕ ೧೯೩೨ರಲ್ಲಿ ಆಗಿತ್ತಂತೆ.

ಹೀಗಿದೆ, ಜೋಹರಾಬಾಯಿಯ ಅಪೂರ್ಣ ಕತೆ – ಅವಳ ಒಂದೇ ಒಂದು ಚಿತ್ರದಂತೆ.