ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ- ಡಾ. ಲೀಲಾ. ಬಿ ( ಭಾಗ ೨ )

ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ

ಸಂಪಾದಕರು: ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಮತ್ತು ಡಾ. ಸುಷಮಾ ಅಶೋಕ ಆರೂರ್

೧೮೬೦-೧೯೯೧ ರಲ್ಲಿ ಹೊರಬಂದ ಧ್ವನಿಮುದ್ರಿಕೆಗಳ ಬಗ್ಗೆ ಸುದೀರ್ಘವಾದ ಲೇಖನವಿದೆ. ಇದು ಅತ್ಯಂತ ಉಪಯುಕ್ತ ಮತ್ತು ಇದರ ಹಿಂದೆ ಬುರ್ಡೆಯವರ ಅಪಾರ ಶ್ರಮವಿದೆ. ಕೆಲವನ್ನು ಹೆಸರಿಸುವದಾದರೆ, ಭೂಗಂಧರ್ವ ರಹೀಮತ್ ಖಾನ್ ಹಡ್ಡುಖಾನ್ (೧೮೬೦-೧೯೨೨), ಮೈ ನೇಮ್ ಇಸ್ ಗೋಹರ್ ಜಾನ್ ಆಫ್ ಕಲಕತ್ತಾ (೧೮೭೬-೧೯೩೦) ಹೀಗೆ ಇಪ್ಪತೈದು  ಅಪರೂಪ ಕಲಾವಿದರ ಪರಿಚಯವಿದೆ. ೧೯೦೨ ರಲ್ಲಿ ಗ್ರಾಮಫೋನ್ ರೆಕಾರ್ಡಿಂಗ ಕಂಪನಿ ಭಾರತದಲ್ಲಿ ಕಾರ್ಯಾರಂಭ ಮಾಡಿ ೨೦೦೮ ರ ವರೆಗೆ ಎರಡುವರೆ ಲಕ್ಷ ಧ್ವನಿಮುದ್ರಿಕೆ ಪ್ರಕಾಶವಾಯಿತು. ಬುರ್ಡೆಯವರು ೧೯೦೨ ರಿಂದ ೧೯೩೨ ರ ವರೆಗೆ ಹೊರ ಬಂದ ಧ್ವನಿಮುದ್ರಿಕೆಗಳನ್ನು ಆರಿಸಿದ್ದಾರೆ. ಒಂದು ಕಾಲದಲ್ಲಿ ಈ ಮುದ್ರಿಕೆಗಳೊಂದಿಗೆ ಅವುಗಳ ಮುಖ ಪೃಷ್ಠದಲ್ಲಿ  ಹಾಡುವವರ ಚಿತ್ರ , ಅವರ ಬಗ್ಗೆ ಮಾಹಿತಿ ಕೊಡುವ ರೂಢಿ ಇತ್ತು ಎಂದು ತಿಳಿಸಿದ್ದಾರೆ. ಈ ಲೇಖನ, ಧ್ವನಿ ಮುದ್ರಿಕೆಗಳಾ ಬಗ್ಗೆ ವಿಶೇಷ ಅರಿವನ್ನು ಉಂಟು ಮಾಡೂವದಲ್ಲದೇ , ವಿಪರೀತ ಕುತೂಹಲ ಮೂಡೀಸುತ್ತೆ. ಹೀಗೆ ( ೧-೪ ) ಅಧ್ಯಾಯಗಳ ಕೊನೆಯವರೆಗೆ ಓದಿ ತಿಳಿದುಕೊಳ್ಳುವ, ಅರ್ಥೈಸುವ  ಪ್ರಯತ್ನ ಮಾಡಬಹುದು. ಆದರೆ ಅಧ್ಯಾಯ (೫) ರಾಗಗಳು ಅಡಿಯಲ್ಲಿ ಭೈರವದ ವಿವಿಧ ಪ್ರಕಾರಗಳು , ಭೈರವಿ ರಾಗ ಹಿಂದುಸ್ತಾನಿ ಸಂಗೀತದಲ್ಲಿ  ಹೇಗೆ ಅತ್ಯಂತ ಮಹತ್ವಪೂರ್ಣ ವಾಗಿದೆ., ರಾಗ ತೊಡಿ ಎಷ್ಟು ( ಪು. ೨೨೨-೨೨೩) ಅದೆಷ್ಟು ವೈವಿಧ್ಯಮಯ, ಪಹಾಡೀ , ಯಮನ್ ಒಂದೇ ಎರಡೇ ಹಲವಾರು ರಾಗಗಳ ವಿಶ್ಲೇಷಣೆ  ಇಲ್ಲಿದೆ. ರಾಗವನ್ನು ತನ್ಮಯತೆಯಿಂದ  ಆಲಿಸಿ ಅದನ್ನು ಅನುಭವಿಸಬೇಕೆ ವಿನಹ ಸಂಗೀತವನ್ನು ವರ್ಣಿಸುವದು ಅಸಾಧ್ಯ . ಸಂಗೀತವನ್ನು ಆಲಿಸಲು, ಕೇಳಲು ಪ್ರತ್ಯೇಕ ಮನೋಧರ್ಮ ಬೇಕು . ಆದ್ದರಿಂದ ಈ ಅಧ್ಯಾಯವನ್ನು ಓದುಗ ಓದಿ ಅವನ ಅನುಭವಕ್ಕೆ ತಕ್ಕಂತೆ ಆಸ್ವಾದಿಸಬೇಕು.

 ತಾನಸೇನನಿಂದ ಭೀಮಸೇನರವರೆಗೆ  ಉತ್ತರಾದಿ ಸಂಗೀತ ನಡೆದು ಬಂದ ಹಾದಿ (ಪು ೨೦೯) , ಸಂಗೀತ ಪರಂಪರೆ, ಘರಾನಾ ಬೆಳೆದು ಬಂದ  ರೀತಿಯನ್ನು ವಿಸ್ತಾರವಾಗಿ ತಿಳಿಸಿದೆ. ಹಲವು ಅಪರೂಪದ ಸಂಗತಿ ನಮಗೆ ವಿದಿತವಾಗುತ್ತೆ. ಇದರಲ್ಲಿನ ಚಾರಿತ್ರಿಕ ಅಂಶಗಳನ್ನು ಗಮನಿಸಬೇಕು. ಇದರಲ್ಲಿ   ೨೨ ಪ್ರಬಂಧಗಳಿವೆ. ಹಲವನ್ನು ಮಾತ್ರ ಇಲ್ಲಿ  ವಿವರಿಸಿದೆ. ಡಾ. ಎಸ್ ಎಲ್ ಭೈರಪ್ಪನವರ , ’ ಮಂದ್ರ’ದ ಬಗ್ಗೆ ಬುರ್ಡೆಯವರು ಪುಣೆ ವಿಶ್ವವಿದ್ಯಾಲಯದಲ್ಲಿ   ಮರಾಠಿಯಲ್ಲಿ ಭಾಷಣ ಮಾಡಿದ್ದು, ಸ್ವತಃ ಭೈರಪ್ಪ ಮೆಚ್ಚಿಕೊಂಡದ್ದು ಈಗಾಗಲೇ ತಿಳಿಸಿದೆ.  ‘ಮಂದ್ರ ‘ ಸಂಗೀತದ ಮೇಲಿನ ಕಾದಂಬರಿ. ಸಂಗೀತಗಾರನ ಬಗ್ಗೆ ಅಲ್ಲ.  ಸಂಗೀತ ಕ್ಷೇತ್ರದಲ್ಲಿ ಇತ್ತೀಚಿಗೆ ನಡೆದ ಅಧಃಪತನ, ಆಗು -ಹೋಗು ಗಳನ್ನು ಭೈರಪ್ಪನವರು ಚಿತ್ರಿಸಿದ್ದಾರೆ. ವ್ಯಭಿಚಾರ ತನ್ನ ಶಿಷ್ಟಾಚಾರವೆಂದು ತಿಳಿದು ಅದನ್ನು ನಾಲ್ಕು ದಶಕಗಳ ಕಾಲ ಜೀವನ ಮೂಲ್ಯವೆಂದು ತಿಳಿದುಕೊಂಡ ಮೋಹನಲಾಲ್ ಅಶ್ಲೀಲ ವರ್ತನೆ ಇಲ್ಲಿ ಚಿತ್ರಿಸಲಾಗಿದೆ. ಗುರುವಿನ ಘನತೆಗೆ ಬಿರುಕು ಕೊಟ್ಟಿರುವದು ಅವನ ವರ್ತನೆ ಎಂದು ಬುರ್ಡೆ ಅಭಿಪ್ರಾಯ ಪಟ್ಟಿದ್ದಾರೆ. ಭೋಸ್ಲೆಯ ಧ್ವನಿಯಲ್ಲಿ ಹೇಳಬೇಕಾದರೆ, ” ಕಲೆಯನ್ನು ನೋಡಿದಾಗ ಸ್ವರ್ಗ ಪ್ರವೇಶ ಮಾಡಿದ ಹಾಗೆ ಆಗುತ್ತೆ. ಕಲಾವಿದನ ಒಳಾಹೊಕ್ಕಾಗ ಬೇರೆಯೆ ಇರುತ್ತೆ. ಯಾಕೆ ಈ ಕೊಂಟ್ರೆಡಿಕ್ಶನ್” . ‘ಇದೇ  ಮಂದ್ರ ಕಾದಂಬರಿಯ ತಿರುಳು’.  ಮತ್ತೊಂದು  ಪ್ರಬಂಧ  ” ಸರಸ್ವತಿ ದೇವಿಯ ಮುಸಲ್ಮಾನ್ ಉಪಾಸಕರು” ಜಾತಿ , ಮತ ಎಂದು ಸಮಾಜ ಘರ್ಷಣೆಗೆ ಇಳಿದಿರುವಾಗ , ” ಈ ಸರಸ್ವತಿ ದೇವಿಯ ಉಪಾಸಕರು” ತಂಗಾಳಿ ಬೀಸಿದಂತೆ ಭಾಸವಾಗುತ್ತೆ. ಸಂಗಿತಕ್ಕೆ ಯಾವ ಜಾತಿ ಭೇದವಿಲ್ಲ ಇದೆಲ್ಲವನ್ನು ಮೀರಿಸಿದೆ. ಎಂಬುದನ್ನು ನಿರೂಪಿಸಿದೆ.

 ಉಸ್ತಾದ್ ಅಲ್ಲಾ ಉದ್ದೀನ್ ಖಾನ್ ಮೈಹರ್ ಜಿಲ್ಲೆಯ  ಮಧ್ಯಪ್ರದೇಶ ವಾಸಿ. ಪಂಡಿತ ರವಿಶಂಕರರ ಗುರು ಮತ್ತು ಅಲಿ ಅಕ್ಬರ್ ಖಾನ್ ಅವರ ತಂದೆ. ೧೦೩ ವರ್ಷ ಬಾಳಿದ ಅಲ್ಲಾ ಉದ್ದೀನ ಖಾನ್  ಅವರ ಮಗಳು ರವಿಶಂಕರರ ಹೆಂಡತಿ ಅನ್ನಪೂರ್ಣಾದೇವಿ ಸೂರ್ ಬಹಾರ್ ವಾದಕರಲ್ಲಿ ಪ್ರಸಿದ್ಢಿ ಹೊಂದಿದವರು.. ಇವರೆಲ್ಲರ ಸರೋದದ ಮೇಲೆ  ಶಾರದಾ ದೇವಿಯ  ಚಿಕ್ಕ ಮೂರ್ತಿ ಇದೆ. ಬಿಜಾಪೂರ್ ದೊರೆ  ಜಗದ್ಗುರು ಇಬ್ರಾಹಿಂ ಆದಿಲ್ ಶಾಹನ ರಾಜ ಮುದ್ರೆ ಸರಸ್ವತಿ. ನವರಸ ವೀಣೆಯನ್ನು ಆನೆಯ ಮೇಲಿಟ್ಟು ಅಂಬಾರಿ ಮಾಡಿಸಿದ  ಭವ್ಯ ಮೆರವಣಿಗೆ ವೃತ್ತಾಂತ ತಿಳಿದಿದೆ. ಆದಿಲ್ ಶಾಹ ಸ್ವತಃ ವಿದ್ವಾಂಸ, ಸಂಗೀತ ಪುಸ್ತಕ ,” ಕಿತಾಬ್-ಎ- ನವರಸ್ ಬರೆದಿದ್ದಾನೆ. ಇನ್ನೂ ಪುಸ್ತಕದ ಆಳಕ್ಕೆ ಇಳಿದರೆ, ಸರಸ್ವತಿ, ಗಣೇಶ ಸ್ತುತಿಗಳು  ಕಾಣಬರುತ್ತೆ. ಬ್ರಿಜ್ ಭಾಷೆಯಲ್ಲಿರುವ  ಈ ಪ್ರಕಾರಗಳು  ಸಂಗೀತ ಪ್ರೇಮವನ್ನು ತೋರಿಸುತ್ತದೆ. ಹೀಗೆ ಸಂಗೀತ ಲೋಕದಲ್ಲಿ ಐಕ್ಯತೆ, ಜಾತಿಭೇದವನ್ನು  ಮೀರಿದೆ ಎಂಬುದನ್ನು ಸುಂದರವಾಗಿ ಚಿತ್ರಿಸಿದೆ. ( ಪೂರಕವಾಗಿ ಸಂಗೀತ  ಜ್ಯೋತಿಗೆ ಎಲ್ಲಿದೆ ಜಾತಿ) ಎಂಬುದನ್ನು ಓದಬಹುದು. ( ಶಿರೀಷ ಜೋಶಿ, ಪ್ರಜಾವಾಣಿ, ಮಾರ್ಚ್ ೨೧-೨-೨೦೧೭, ಪು. ೬)

” ಹಿಂದುಸ್ತಾನಿ ಅಥವಾ ಉತ್ತರಾದಿ ಸಂಗೀತಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ” ಮತ್ತೊಂದು ಉಪಯುಕ್ತ ಲೇಖನವಾಗಿದೆ. ಪುಟ್ಟರಾಜ ಗವಾಯಿಗಳ ಬಗ್ಗೆ ಆತ್ಮೀಯಲೇಖನವಿದೆ. ” “ಗಾಯಕರು ಮತ್ತು ಗಾಯಕಿಯರು” ಅಡಿಯಲ್ಲಿ  ಇಪ್ಪತ್ನಾಲ್ಕು ಕಲಾವಿದರ ಪರಿಚಯವಿದೆ.. ತಮ್ಮೆಲ್ಲರ ನೆಚ್ಚಿನ ಕಲಾವಿದರು ಅಂದರೆ ಒಂದಲ್ಲ ಒಂದು ದಿನ ಅವರ ಕಚೇರಿ ಕೇಳಿರತಕ್ಕಂತಹ ಕಲಾವಿದರು. ಇವರ ನೇರ ಸಂಪರ್ಕ ಓದುಗನಿಗೆ ಆಗಿರಲಿಕ್ಕಿಲ್ಲ. ಆದರೆ ಇವರ ಒಳಹೊಕ್ಕು  ಬುರ್ಡೆಯವರು  ಹಲವಾರು ವಿಷಯಗಳನ್ನು  ಹೆಕ್ಕಿ ತೆಗೆದು  ಅದನ್ನು ರಸದೌತಣದಂತೆ , ಹೂವಿನ ಹಾರ ಪೋಣಿಸಿದಂತೆ  ನಮ್ಮ ಮುಂದೆ ಇಟ್ಟಿದ್ದಾರೆ. ಪಂಡಿತ ಭೀಮಸೇನ ಜೋಶಿ, ಪಂಡಿತ. ದೆವೇಂದ್ರ ಮುರ್ಡೆಶ್ವರ್, ಫೀರೋಜ್ ದಸ್ತೂರ್,  ಶೋಭಾ ಗುರ್ಟು, ಜಿತೇಂದ್ರ ಅಭಿಶೇಕಿ…… ಇತ್ಯಾದಿ. ತಾರಾಬಾಯಿ ಮಾನೆ,  ಇಂದುಬಾಲ, ಅಂಗೂರಬಾಲ, ಅಂತಹ ಅಪರೂಪದ  ಕಲಾವಿದರು ಇಲ್ಲಿದ್ದಾರೆ. ವಿಸ್ಮೃತಿಯಲ್ಲಿ ಅಡಗಿದ  ಹಲವು ಕಿರಾನಾ ಪರಂಪರೆಯ ಗಾಯಕ ಗಾಯಕಿಯರ ಬಗ್ಗೆ ಸುದೀರ್ಘವಾದ ಪರಿಚಯವನ್ನು ಬುರ್ಡೆಯವರು ಮಾಡಿದ್ದಾರೆ. ಬಂದೇ ಅಲಿಖಾನ್ ( ೧೮೨೪-೧೮೯೫) ಮತ್ತು ಆ ಪರಂಪರೆಗೆ ಸೇರಿದ ವಿಶಿಷ್ಟ ಗಾಯಕರ  ವೃತ್ತಾಂತವನ್ನು ದಾಖಲಿಸಿದ್ದಾರೆ. ” ಮುಂಬಯಿ ಕಲಾಭಾರತಿಯ ಸುತ್ತಮುತ್ತ” ಪ್ರಬಂಧ, ಕಲಾಭಾರತಿ ಚಟುವಟಿಕೆ ಗೊತ್ತಿಲ್ಲದವರಿಗೆ ಅದೂ ಈ ಪೀಳಿಗೆಗೆ ಒಂದು ‘ಬೀಕನ್ ಲೈಟ್ ‘ ಇದ್ದ ಹಾಗೆ ಎಂದು ಹೇಳಿದರೆ ಅತಿಶಯೋಕ್ತಿ ಆಗಲಾರದು. ಪ್ರಕಾಶ ಬುರ್ಡೆಯವರ ಬಗ್ಗೆ  ತಿಳಿಯ ಬಯಸುವವರು, ಮಾನವಂದನಾ’ ( ಪರಿಶಿಷ್ಟ ೨) ಓದಿ ತಿಳಿಯಬಹುದು.

ಸಮಾಪ್ತಿ: ಕರ್ಣಾಟಕ ಸಂಗೀತ ಕಲಾವಿದರ  ಬಗ್ಗೆ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಆದರೆ ಹಿಂದುಸ್ತಾನಿ ಗಾಯಕ ಗಾಯಕಿಯರ ಪುಸ್ತಕ ಕನ್ನಡದಲ್ಲಿ ವಿರಳ . ಅದೂ ಅಲ್ಲದೇ , ” ಫಸ್ಟ ಹ್ಯಾಂಡ ಇನ್ಫೋರ್ಮೇಶನ್” ( ಅದಿಕೃತ ಮಾಹಿತಿ) ಅತಿ ವಿರಳ.  ಆ ನಿಟ್ಟಿನಲ್ಲಿ ಈ ಪುಸ್ತಕವನ್ನು  ನೋಡುವದಾದರೆ, ಇದರಲ್ಲಿ ಅಸಾಧಾರಣವಾದ ಹಲವಾರು  ನಮಗೆ ತಿಳಿಯದ , ಉಹೆಗೆ ನಿಲುಕದ ಸಂಗತಿ ಇದೆ. ಈ ಪುಸ್ತಕ ಕಾದಂಬರಿಯಂತೆ ಬೇಗ ಓದಿ ಮುಗಿಸಲು ಸಾಧ್ಯವಿಲ್ಲ. ನಿದಾನವಾಗಿ ಓದಬೇಕಾದ ಪುಸ್ತವಿದು. ಈ ಪುಸ್ತಕ ಸಂಗೀತ ದಾಖಲೆ ದೃಷ್ಟಿಯಿಂದ , ಓದುಗನಿಗೂ , ರಸಿಕರಿಗೂ , ಸಂಶೋಧಕರಿಗೂ ಅತ್ಯಂತ ಉಪಯೋಗವಾಗಿ ಒಂದು ಅತ್ಯುತ್ತಮವಾದ ಪರಾಮರ್ಶ  ಅಥವಾ ಅವಲೋಕನ  ಗ್ರಂಥ  ಆಗುವದರಲ್ಲಿ ಸಂಶಯವಿಲ್ಲ. ಇಲ್ಲಿ ಪ್ರಕಾಶ ಬುರ್ಡೆಯವರು ಪರಿಚಯಿಸಿರುವದು ಒಂದೆ ಎರಡೆ!  ಕಲಾವಿದರು, ಸಂಸ್ಥೆಗಳು, ಘರಾನಾಗಳು , ರಾಗಗಳು, ಅಪರೂಪವಾಗಿ ಮನಃಸ್ಪರ್ಷಿಯಾಗಿದೆ. ಇದೆಲ್ಲ ಪ್ರಕಾಶ ಬುರ್ಡೆಯವರು ಬರೆದಿಡದಿದ್ದರೆ ಎಂಥಹ ನಷ್ಟವಾಗುತ್ತಿತ್ತು! ಇಲ್ಲಿ ದಾಖಲಿಸಿರುವ ಹಲವು ಮಹಿನೀಯರು ತಮ್ಮ ಶ್ರಮ , ಸಾಧನೆಯಿಂದ ಉನ್ನತ ಶಿಖರವನ್ನೇರಿದವರು. ಪುಸ್ತಕ ಸರಳವಾಗಿ ಓದುಗರನ್ನು ಯಾವುದೋ ರಸಿಕ ಲೋಕಕ್ಕೆ ಕೊಂಡು ಒಯ್ಯುತ್ತೆ., ಸಾಮಾನ್ಯರಿಗೂ ತಲುಪವಂತಿದೆ.

ಪ್ರಕಾಶ ಬುರ್ಡೆಯವರಿಗೆ ಸಂದ ಪ್ರಶಸ್ತಿಗಳು ಮತ್ತು ಅವರ ಕ್ಷೇತ್ರ ಕಾರ್ಯಕ್ಕೆ ಇದ್ದ ಸೌಕರ್ಯ  ಬಹಳ ಕಡಿಮೆ. ಆದರೆ, ಇಂಗ್ಲಿಷಿನಲ್ಲಿ ಹೇಳುವಂತೆ , ” ಮೈ ವರ್ಕ್ ಸ್ಪೀಕ್ಸ್” ಇವರ ಕೃತಿ ಮಾತಾಡುತ್ತೆ ಅನ್ನುವದಾದರೆ, ಖಂಡಿತಾ ಎಲ್ಲರನ್ನು ಬೇರೆ ಲೋಕಕ್ಕೆ ಒಯ್ದು ಮಾತನಾಡಿಸುತ್ತೆ ಮತ್ತು ವಿಶಿಷ್ಟತೆಯನ್ನು ತೋರಿಸುತ್ತದೆ.