ಶ್ವಾನ ಸ್ನೇಹಿತರು

ಮಾನವನ ಆಪ್ತಸ್ನೇಹಿತನೆಂದು ಶ್ವಾನವರ್ಗ ವಿಶ್ವದಾದ್ಯಂತ ಪರಿಚಿತವಿದೆ. ಅಂಧರಿಗೆ ದಾರಿ ತೋರಿಸುವಂತೆ, ಅಪರಾಧಿಗಳ ಪತ್ತೆಹಚ್ಚುವುದರಲ್ಲಿ ನಾಯಿಗಳ ಕೊಡುಗೆ ದೊಡ್ಡದು. ಮಿಶ್ರತಳಿಯ ಬಗೆ ಬಗೆಯ ನಾಯಿಗಳು ಮನೆಮನೆಗಳಲ್ಲಿ ಹಿರಿಕಿರಿಯರ ಜೊತೆಗಾರರಾಗಿ ಕುಟುಂಬದ ಸದಸ್ಯರಂತೆ ಪಾಲನೆ, ಪೋಷಣೆ, ಔಷಧೋಪಚಾರಕ್ಕೆ ಒಗ್ಗಿಹೋಗಿರುವುದು ಸಾಮಾನ್ಯ. ಆದರೆ ಕಾವಲು ನಾಯಿ ಎಂಬ ಅರ್ಥ ಸಾರ್ಥಕವಾಗುವಂತೆ ಅವು ಶತಕಗಳಿಂದ ಮಾನವಕೋಟಿಗೆ ಸೇವೆಸಲ್ಲಿಸಿದ್ದು ಆಸ್ತಿಪಾಸ್ತಿ, ಬೆಳೆಗಳ ರಕ್ಷಣೆಗೆ ಅರಣ್ಯಕ್ಕೆ ಹೊಂದಿರುವ ಗ್ರಾಮ- ಊರುಗಳಲ್ಲಿ ಹಿಂಸ್ರಪಶುಗಳನ್ನು ಹೆದರಿಸಲು, ಅವುಗಳ ಬೇಟೆಯಾಡಲು ತರಬೇತಿ ಕೊಟ್ಟು, ಜೊತೆಗಾರರಂತೆ ಸಾಕುವದು ಸಾಮಾನ್ಯವಾಗಿತ್ತು. ಬೇಟೆಗಲ್ಲದೇ ಬೆಟ್ ಕಟ್ಟಿ ಜಿಂಕೆ, ಮೊಲ ಇನ್ನಿತರ ಪ್ರಾಣಿಗಳ ಬೇಟೆ, ಅರಸರಾದಿ ಜನರ ವಿನೋದ ಪ್ರಕಾರವಾಗಿತ್ತು.

ಹನ್ನೆರಡನೆಯ ಶತಮಾನದ, ಕನ್ನಡದ ಚಾಲುಕ್ಯ ದೊರೆ ಭೂಲೋಕಮಲ್ಲನ ವಿಶ್ವಕೋಶದಂತಿರುವ ‘ಮಾನಸೋಲ್ಲಾಸ ದಲ್ಲಿ ಸಾರಮೇಯ-ವಿನೋದ’ ಎಂಬ ಅಧ್ಯಾಯವೇ, ನಾಯಿಗಳು ಬೇಟೆಯಲ್ಲಿ ಕೊಡುವ .ಖುಷಿ-ಕ್ರೀಡೆಯ ಆನಂದ ಕುರಿತಾಗಿ ಇದೆ. ವಿದರ್ಭ, ತ್ರಿಗರ್ತ(ತಿರಹುತ್), ಆಂಧ್ರ, ಹಾಗೂ ಕರ್ನಾಟಕ ದೇಶಗಳ ನಾಯಿಗಳು ಶೌರ್ಯ, ವೀರ್ಯ, ಬಲಗಳಿಂದ ಕೂಡಿರುತ್ತವೆ ಎಂದು ಈ ಅಧ್ಯಾಯದಲ್ಲಿ ಹೇಳಿದೆ. ‘ಸರಮಾ’ ಎಂಬುದು ವೇದ ಸಾಹಿತ್ಯದಿಂದ ಭಾರತಿಯರಿಗೆ ಪರಿಚಿತ ನಾಯಿ. ‘ಸಾರಮೇಯ’ ಅಂದರೆ ಆಕೆಯ ವಂಶಜರು ಎಂದರ್ಥ. ಎಲ್ಲ ನಾಯಿಗಳ, ರೋಮ, ಕಿವಿ, ನಾಲಿಗೆ, ಶರೀರ ರಚನೆಯ ವೈಶಿಷ್ಟ್ಯ, ಅವನ್ನು ಸಾಕುವ  ರೀತಿ, ಉಪಯೋಗಿಸುವ ವಿಧಾನಗಳನ್ನು ‘ಸಾರಮೇಯವಿನೋದದಲ್ಲಿ’ ಬಳಸಲಾಗಿದೆ. ವಿಶೇಷವಾಗಿ ಎರಡು, ಮೂರು ಬಾರಿ ಮರಿ ಈದ ಹೆಣ್ಣು ನಾಯಿಗಳೇ ಬೇಟೆಗೆ ಹೆಚ್ಚು ಪ್ರಯೋಜನಕಾರಿ! ಎಂದಿದೆ.

ಕನ್ನಡಿಗರ ಶ್ವಾನ ಪ್ರೇಮ ಮಿಗಿಲಾಗಿದ್ದು! ಕಾಡುಪ್ರಾಣಿಗಳೊಂದಿಗೆ ಹೋರಾಡಿ, ತಮ್ಮ(ಕಬ್ಬಿನ)ಗದ್ದೆ ಕಾಪಾಡಿದ, ತಮ್ಮ ಪ್ರಾಣವನ್ನು ರಕ್ಷಿಸಿದ ನಾಯಿಗಳಿಗೆ ವೀರಗಲ್ಲುಗಳನ್ನು ನೆಡಿಸಿ ಮಾನವತೆ ಮೆರೆದಿದ್ದಾರೆ. ಅವೇನೂ ಸಾಮಾನ್ಯ ಶೂರ ಪ್ರಾಣಿಗಳಲ್ಲ. ಕ್ರಿ.ಶ 975 ನೇ ವರ್ಷದ ಶಾಸನದ ಮಾಹಿತಿಯಂತೆ ‘ಲೋಗ’ವು ಎಪ್ಪತೈದು (ಕಾಡು) ಹಂದಿಗಳನ್ನು ಕೊಂದರೆ, ಥಳಗವು ಇಪ್ಪತ್ತಾರು ಹಂದಿಗಳನ್ನು ಕೊಂದಿದನ್ನು ವೀರಗಲ್ಲಿನ ಶಾಸನವೊಂದು ಸಾರುತ್ತಿದೆ.

“ಕಾಳಿಯ ಕಥೆಯನ್ನು ಲೋಕಕ್ಕೆ ಸಾರುತ್ತ ನಿಂತಿದೆ. ಮನಾಲರನು ರಾಷ್ಟ್ರಕೂಟರ ಕಾಲದ ಶಾಸನವೊಂದು, ಕಾಳಗದಲ್ಲಿ ಶೌರ್ಯ ತೋರಿದಾಗ ಆತನ ಧನಿ,” ಬೇಕಾದದನ್ನು ಕೇಳು! ಎಂದಾಗ ಆತನು, ಕಾಳಿ ಎಂಬ ನಾಯಿಯನ್ನು ಬೇಡಿ ಪಡೆಯುತ್ತಾನೆ. ಒಮ್ಮೆ ಅದು ಕಾಡು ಹಂದಿಯೋಡನೆ ಹೋರಾಡುತ್ತ ಅದನ್ನು ಕೊಂದು ತಾನು ಸಾಯುತ್ತದೆ. (ದುಃಖ ತಪ್ತ) ಮನಾಲರನು ಕಾಳಿಗೊಂದು ವೀರಕಲ್ಲು ನಿಲ್ಲಿಸಿ, ಅದರ ಪೂಜೆಗೆ ಗೊರವನನ್ನು ನೇಮಿಸಿ, ವೆಚ್ಚಕ್ಕೆ ಹೊಲವನ್ನು ಕೊಡಮಾಡಿ, ಆ ಕಲ್ಲನ್ನು ಪೂಜಿಸದೆ ಊಟಮಾಡಿದರೆ ಆತ ಪಾತಕಿ! ಎಂದು ಘೋಷಣೆಯನ್ನು ಬರೆಸಿದ್ದಾನೆ. ಕ್ರಿ.ಶ. 950 ರ ಮಂಡ್ಯ ಜಿಲ್ಲೆಯ ಆತಕೂರಿನ ಈ ಶಾಸನ ಹಂದಿಯೋಡನೆ ಹೋರಾಡಿದ ಕಾಳಿಯ ಶಿಲ್ಪ ಚಿತ್ರದೊಂದಿಗೆ ಮನಾಲರನ ಶ್ವಾನಪ್ರೇಮವನ್ನು ಸಾರುತ್ತ ಸಹಸ್ರ ವರ್ಷದಿಂದ ಅಮರವಾಗಿಸಿದೆ.

ಅಸ್ಪಷ್ಟವಾದ, ಗಾಳಿ ಮಳೆಗಳಿಗೆ ಸವೆದು ಹೋದ ಚಿತ್ರಗಳಿಂದ ನಾಯಿಯ ಜಾತಿ ಕಂಡು ಹಿಡಿಯಲಾಗದು. ಅವೆಲ್ಲ ಸಾಂಕೇತಿಕವಾಗಿರುತ್ತವೆ. ವೀರಗಲ್ಲುಗಳನ್ನು ಆಳವಾಗಿ ಅಭ್ಯಸಿಸಿದ ಡಾ. ಆರ್.ಶೇಷಶಾಸ್ತ್ರಿಗಳು ಕರ್ನಾಟಕದ ಇನ್ನಿತರ ಎಡೆಗಳಲ್ಲಿ ಹಂದಿಯೋಡನೆ ಹೋರಾಡಿದ ನಾಯಿಗಳಿಗೆ ಸಲ್ಲಿಸಿದ ವೀರಗಲ್ಲುಗಳನ್ನು ಗುರುತಿಸಿದ್ದಾರೆ. ನಾಯಿಗಳನ್ನು ಹಂದಿಯೋಡನೆ ಹೋರಾಡಲು ಛೂ ಬಿಟ್ಟು ಬೇಟೆಗಾರನು ತನ್ನ ಈಟಿಯನ್ನು ಗುರಿಯಿಟ್ಟು ಹಂದಿಯೆಡೆಗೆ ಎಸೆಯುತ್ತಿದ್ದ. ಹೀಗೆ ಎಸೆಯುವಾಗ ಗುರಿತಪ್ಪಿಯೋ, ನಾಯಿಗಳು ಸರಿದಾಡಿಯೂ ನಾಯಿಗೆ ಏಟು ಬಿದ್ದಿರಲು ಸಾಕು! ಅದರಿಂದಲೋ, ಹೋರಾಟದ ಗಾಯಗಳಿಂದಲೋ ನಾಯಿ ಸತ್ತಿದ್ದು ವೀರೋಚಿತ ಸ್ಮಾರಕವನ್ನು ತನ್ನ ಮಮತೆಯ ದ್ಯೋತಕವಾಗಿ ನಿಲ್ಲಿಸಿರುವ ಸಾಧ್ಯತೆಯನ್ನು ಉಲ್ಲೇಖಿದ್ದಾರೆ. ಏನಿದ್ದರು, ‘ಮಾನವರ ಮಿತ್ರರು’ ವಿರೋಚಿತ ಸ್ಮಾರಕವನ್ನು ಪಡೆದು ಇಂದಿಗೂ ಅದನ್ನು ಸಾರುತ್ತಿದ್ದಾರೆ.*

*ಆಧಾರ ಕರ್ನಾಟಕದ ವೀರಗಲ್ಲುಗಳು: ಡಾ. ಆರ್.ಶೇಷಶಾಸ್ತ್ರಿ- ಕನ್ನಡದ ಸಾಹಿತ್ಯ ಪರಿಷತ್ತು, ಬೆಂಗಳೂರು. 2005, ಪುಟ: 74-75

ಈ ಶಿಲ್ಪ ವೀರಗಲ್ಲಿನ ಮೇಲ್ಬಾಗ, ಕೆಳಭಾಗದಲ್ಲಿ ‘ಲೋಗ’ ಎಂಬ ನಾಯಿಯ ಚಿತ್ರವಿದ್ದು ಅದು ಎಪ್ಪತಾರು ಹಂದಿ ಗಳನ್ನು ಕೊಂದಿತ್ತು ಎಂದಿದೆ.

ಚಿತ್ರ 1 : ಆತಕೂರು ಬೂತುಗನ, ಕೆಳಗಿನ ಸೇನಾಧಿಕಾರಿ ಮನಾಲರನು ಹಾಕಿರುವ ಕಾಳಿ ಎಂಬ ನಾಯಿಯ ಸ್ಮಾರಕ.
ಚಿತ್ರ 2 :ಯಲಹಂಕದ ಕೆರೆಯ ಬಳಿಯಿರುವ ನಾಯಿಯ ವೀರಗಲ್ಲು
ಚಿತ್ರ 3 : ಯಲಹಂಕದ ನಾಯಿ ಸ್ಮಾರಕ
ಚಿತ್ರ 4 : ಮೇಲಾಗಣಿಯಲ್ಲಿರುವ ಪಿರಿಸಾರಿಯ ಮಾಗ’ದಳಗ’ ಎಂಬ ನಾಯಿ. ಇದು ಎಪ್ಪತೈದು ಹಂದಿಗಳನ್ನು ಕೊಂದಿತ್ತು.