ವಿಜಯನಗರದ ವೈಭವ ! ಹೊರಳು ನೋಟ ( ಕಾಮತರ ದೃಷ್ಟಿ ಕೋನ)

ನಿನ್ನೆ ಲ್ಯಾಬ್ ಮುಚ್ಚಿ ರಾತ್ರೆ ಮನೆಗೆ ಹಿಂದಿರುಗಿದಾಗ ನನ್ನ ಮೆಚ್ಚಿನ ವಿವಿಧಭಾರತಿ ಹಳೇ ಹಾಡುಗಳ ಕಾರ್ಯಕ್ರಮ ಮುಗಿದಿದ್ದರಿಂದ ರೇಡಿಯೋದಲ್ಲಿ ’A’ ಹಾಕಿದೆ.  A Forgotten Empire Remembered ಎಂಬ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂದಿಸಿದ ಫೀಚರ್ ಒಂದು ಪ್ರಸಾರವಾಗುತ್ತಲಿತ್ತು, ಇಂಗ್ಲಿಷಿನಲ್ಲಿ . ಪ್ರೊ.ಪಿ. ಬಿ ದೇಸಾಯಿ, ಡಾ ಸೂರ್ಯನಾಥ ಕಾಮತ್, ವಿಜಯನಗರ ರಾಜ ವಂಶಸ್ಥ, ಆನೆಗೊಂದಿಯ ಅಚ್ಯುತ ದೇವರಾಯ  ಮತ್ತಾರಾರನ್ನೊ ಸಂದರ್ಶಿಸಿದ್ದರು. ಪೇಸ್, ನ್ಯೂನಿಝ್ ಮೊದಲಾದ ವಿಜಯನಗರ ವೈಭವವನ್ನು ಕಣ್ಣಾರೆ ಕಂಡವರ  ವರ್ಣನೆಗಳನ್ನು  ಮೊದಲಲ್ಲಿ ಹಾಕಿದಂತೆ ತೋರುತ್ತದೆ.ಜಿ.ಎಸ್ ಕಮಲಾಪೂರ ಎನ್ನುವವರು ನಿರ್ದೇಶಿಸಿದ್ದರು.

ನಾನು ಕೇಳಿದ ಭಾಗದಲ್ಲಿ ಮಾತನಾಡಿದವರೆಲ್ಲ ವಿಜಯನಗರದ ಗತವೈಭವವನ್ನು ಅದರ ಹತ್ತು ಹಲವು ಆಯಾಮಗಳಲ್ಲಿ ಕೊಡ ಮಾಡಿದರು. ಸಾಮ್ರಾಜ್ಯದ ಸಿರಿವಂತಿಕೆ , ಆ ಕಾಲಕ್ಕೆ, ಕನ್ನಡ ತೆಲಗು, ತಮಿಳು, ಸಂಸ್ಕೃತ ಕವಿಗಳಿಗೆ ಕೊಟ್ಟ ಆಶ್ರಯ, ಪ್ರೋತ್ಸಾಹಗಳನ್ನು ನೆನಪಿಸಿಕೊಂಡರು. ಮಹಾನವಮಿಯ ಉತ್ಸವದ ವರ್ಣನೆ, ವಿಜಯನಗರದ ಸೈನ್ಯದಲ್ಲಿ ಮುಸಲ್ಮಾನರ ಸೇರ್ಪಡೆ ಮಾಡಿದ್ದು. ಅರಸರಲ್ಲಿಯ ಸರ್ವ ಧರ್ಮ ಸಹಿಷ್ಣುತೆಗಳನ್ನು ಎತ್ತಿ ತೋರಿಸುತ್ತದೆ! ಇತ್ಯಾದಿಯಾಗಿ ಸಾರಿದರು. ಆದರೆ ಮಾತುಗಾರರಲ್ಲಿ ಒಬ್ಬರಾದರೂ ಅಂದಿನ ಜನಸಾಮಾನ್ಯರ ಜೀವನ ಹೇಗಿದ್ದಿರಲು ಸಾಕು? ಎಂದು ಹೇಳದೇ ಇದ್ದದ್ದು ಅಚ್ಚರಿಯನ್ನುಂಟು ಮಾಡಿತು.

ವಿಜಯನಗರದ ಕಾಲದಲ್ಲಿ ಅರಸರು, ರಾಣಿಯರು, ಅರಮನೆಯ ಊಳಿಗವರ್ಗದವರು (ಪೇಸ್ ನ ವರ್ಣನೆಯಲ್ಲಿ ಅದು ಬರುತ್ತದೆ) ಪಟ್ಟಷ್ಟು ಸುಖ – ಸೌಕರ್ಯಗಳು  ಅಧೀನರಾಗಿದ್ದ ಸೇನಾಧಿಕಾರಿಗಳಿಗೆ, ಸರದಾರರಿಗೆ, ಸಣ್ಣ-ಪುಟ್ಟ ಅಧಿಕಾರಿಗಳಿಗೂ ನಾಗರಿಕರೆಂದು ನಾವು ಇಂದು ಪರಿಗಣಿಸುವ ವರ್ಗಕ್ಕೂ ಇತ್ತೇ? ಅವರ ಸ್ಥಾನ -ಮಾನ, ಅನಿಸಿಕೆಗಳನ್ನು  ಅರಿಯುವ ಪ್ರಯತ್ನವನ್ನು ಯಾರೂ ಮಾಡಿಲ್ಲವೆಂದು ತೋರುತ್ತದೆ!

ಅಂದಿನ ಅರಸರು ಸದಾ ಕಾಲ ಯುದ್ಧಸಿದ್ಧತೆಯಲ್ಲಿ ಇರಬೇಕಾಗಿತ್ತು. ಪ್ರತಿಯೊಬ್ಬ ಸೇನಾಪತಿಯ   ಹತ್ತಿರ  ಹತ್ತಾರು ಆನೆಗಳು, ನೂರಾರು ಕುದುರೆಗಳು, ಸಾವಿರಾರು ಕಾಲಾಳುಗಳು ಇರಲೇ ಬೇಕಾಗಿತ್ತು. ನಿರಂತರ ಕಡ್ಡಾಯದ ತರಬೇತಿ ಇರುತ್ತಿತ್ತು. ಪ್ರತಿ ವರ್ಷ ರಾಯಬೊಕ್ಕಸಕ್ಕೆ ಒಂದು ನೂರು ಲಕ್ಷ  ’ಫನಮ್’ ( ಬಂಗಾರದ ನಾಣ್ಯ , ಹೊನ್ನು) ತೆರಿಗೆ ಕೊಡಲೇಬೇಕು! ಎಂದು ಸುಗ್ರೀವಾಜ್ಞೆ ಮಾಡಿದಾಗ ಇಷ್ಟೊಂದು ಹಣ ಆ ಸೇನಾಧಿಪತಿಗಳು ಎಲ್ಲಿಂದ ತಂದಾರು? ಎಂದು ಅಂದಿನ ಅರಸರು ಆಳವಾಗಿ ಯೋಚಿಸಿದಂತೆ ಇಲ್ಲ. ಅಂದಿನ ಊಳಿಗಮಾನ್ಯ ಪದ್ಧತಿಯಲ್ಲಿ ಈ ಸೇನಾಧಿಪತಿಗಳಿಗೆ ಕೆಲವು ಹೆಚ್ಚಿನ ಅಧಿಕಾರಗಳಿದ್ದವು . ಅವರು ಅರಸರ ಕಟ್ಟಾಜ್ಞೆ ಪಾಲಿಸಲು ಜನಸಾಮಾನ್ಯರನ್ನು ಸುಲಿಯುತ್ತಿದ್ದಿರಬೇಕು ತೆರಿಗೆಯ ರೂಪದಲ್ಲಿ ! ತಮ್ಮ   ಐಷಾರಾಮಗಳನ್ನು ಬಲಿಕೊಟ್ಟಾರೆ? ಪೇಸ್ ಉಲ್ಲೇಖಿಸಿದ ಅಂದಿನ ಯುಗದಲ್ಲೂ ( ೧೬ ನೇ ಶತಮಾನ) ವಿಜಯನಗರದ ಪೇಟೆಯಲ್ಲಿ ಮಾರಾಟದ ’ಅಗ್ಗತನ’ ಕಲ್ಪನೆಗೆ ಮೀರಿದ್ದು! ಆಡುಗಳನ್ನು ಮರಿಯಿಂದ ಬೆಳೆಸಿ ದೊಡ್ಡವನ್ನಾಗಿ ಮಾಡಿ  ಒಂದೇ ಫಣಮ್ ಗೆ ನಾಲ್ಕನ್ನು ಮಾರಿದರೆ ಅದರಿಂದ ಬರುವ ಲಾಭವೆಷ್ಟು? ಎಂದು ಯಾರೇ ಯೋಚಿಸಬಹುದಲ್ಲವೇ? ಕಾಯಿಪಲ್ಯ , ಹಣ್ಣುಹಂಪಲ. ಕಾಳುಕಡಿ, ಕುರಿ ಕೋಳಿ, ಹಂದಿ, ಹಕ್ಕಿಗಳ ದರವನ್ನು ಪೇಸ್ ಉಲ್ಲೇಖಿಸಿದ್ದು ನೋಡಿದರೆ, ಖುದ್ದಾಗಿ ಬೆಳೆದವರಿಗೆ ಅವುಗಳ ಆದಾಯದ ಬಹು ತಾಂಶ ತಲುಪುತ್ತಿರಲಿಕ್ಕಿಲ್ಲ ! ರಾಜಧಾನಿಯ ಅಗ್ಗದರಗಳು ಆ ಬೃಹತ್ ಸಾಮ್ರಾಜ್ಯದಲ್ಲಿ ಎಲ್ಲೆಡೆ ಇರುವದು ಅಂದಿನ ಯುಗದಲ್ಲಿ ಸಾಧ್ಯವಿತ್ತೆ? ಎಂದು ಹೇಳಲು ಬರುವದಿಲ್ಲ. ಜನರು ಕಡು ಬಡವರಾದ್ದರಿಂದ ಆಯಾ ಸಾಮಗ್ರಿಗಳನ್ನು ಬೆಳೆದರೂ ಸ್ವತಃ ಉಪಯೋಗಿಸುವ ಸಾಮರ್ಥ್ಯ ಇಲ್ಲದ್ದರಿಂದ ಅವುಗಳನ್ನು ಅಸಂಖ್ಯ ಚಕ್ಕಡಿಗಳಲ್ಲಿ ಹೇರಿ ರಾಜಧಾನಿಗೆ ಸಾಗಿಸುತ್ತಿದ್ದರು. ಇಂದು ಬೆಂಗಳೂರಿನ ನಾಗರಿಕರಿಗೆ ಸಿಗುವಷ್ಟು ಧಾರಾಳವಾದ , ಅಗ್ಗದ ಕಾಯಿಪಲ್ಯ, ಹಣ್ಣುಹಂಪಲ, ಹಾಲು ಮೊಸರು, ಹೈನದ ಇತರ ಪದಾರ್ಥಗಳನ್ನು ಸುತ್ತಮುತ್ತಲಿನ ಹಳ್ಳಿಗರು ತಿನ್ನಲು ಸಾಧ್ಯವೇ? ಇವನ್ನೆಲ್ಲ ಬೆಳೆದೂ ತಿನ್ನಲಾಗದಷ್ಟು ಬಡವರನ್ನಾಗಿಸಿ ಇಟ್ಟದ್ದರಿಂದಲೇ ಅವರು ಬೆಳೆಸಿದ್ದೆಲ್ಲ ಬೆಂಗಳೂರಿಗರಿಗೆ  ಸಿಗುತ್ತಿರುವದು?

ಅಂದಿನ ಜನಜೀವನದ ಬಗ್ಗೆ ಪೇಸ್ , ನ್ಯೂನಿಝರಂತಹ ವಿದೇಶೀ ಪ್ರವಾಸಿಗರು ಅಥವಾ ಕನ್ನಡ ಶಿಲಾಶಾಸನಗಳು ಹೆಚ್ಚಿನ ಬೆಳಕು ಚೆಲ್ಲುತ್ತಿರಲಿಕ್ಕಿಲ್ಲ. ಆದರೆ, ಪೋರ್ಚುಗೀಸರ ಫ್ಯಾಕ್ಟರಿ ರಿಕಾರ್ಡುಗಳು, ಸ್ವತಃ ಯೂರೋಪಿನ ಹಳೇ ಅರ್ಕೈವ್ ಗಳಲ್ಲಿ, ಸಮಕಾಲೀನ  ಆದಿಲ್ ಶಾಹಿ ಮತ್ತಿತರ ಮುಸ್ಲಿಂ ದೊರೆಗಳ ಖಾಸಗಿ ದಾಖಲಾತಿಗಳು   ( ಪರ್ಶಿಯನ್ ಭಾಷೆಯಲ್ಲಿದ್ದವುಗಳು) ಮುಂತಾದ ಆಧಾರಗಳ ಜೊತೆಗೆ ಲಭ್ಯವಿದ್ದ ಶಾಸನ, ಶಾಸ್ತ್ರ, , ಕಾವ್ಯಗಳ ಮಾಹಿತಿಯನ್ನು ತೌಲನಿಕವಾಗಿ ಅಭ್ಯಸಿಸಿದರೆ ವಿಜಯನಗರಕ್ಕೆ ಹರಿದು ಬರುತ್ತಿದ್ದ ಬಂಗಾರ , ಮುತ್ತುರತ್ನ, ಮಾಣಿಕ್ಯ, ವಜ್ರಗಳೆಲ್ಲ ಬಡವರ ರಕ್ತದ ಹೋಳಿಯಾಡಿ ರಾಜಧಾನಿಗೆ ಬಂದಿರಲು ಸಾಕು! ಅನಿಸಿತು! ನಾನು ಬಹುಶಃ ಕಣ್ಣು ಬಿಟ್ಟು ಓದಿ, ಧೇನಿಸಿದಾಗಿನ ವಿಚಾರಗಳು ಇವು. ನಾನು ಬೇಕಾದ್ದಕ್ಕಿಂತ  ಜಾಸ್ತಿ ಇತಿಹಾಸ ಓದುತ್ತೇನೆಂದು ಕಾಣುತ್ತದೆ! ಇತಿಹಾಸಕಾರರು, ವಿಜಯನಗರ ಅಭಿಮಾನಿಗಳು ನನ್ನ ವಾದವನ್ನು ಎಂದೂ ಒಪ್ಪಲಿಕ್ಕಿಲ್ಲ! ಆದರೆ ಸಾಧ್ಯವಾದರೆ ನಾನು ಇತರ ಆಕರಗಳಿಂದ  ಮಾಹಿತಿ ,ಅಂಕಿ ಸಂಖ್ಯೆಗಳನ್ನು ಕಲೆಹಾಕಿ, ಆಳವಾಗಿ ಅಭ್ಯಸಿಸಿ, ಅಂದಿನ ಜನಸಾಮಾನ್ಯರ ಬಗ್ಗೆ , ಸ್ಥಿತಿ-ಗತಿಯ ಬಗ್ಗೆ ಒತ್ತುಕೊಟ್ಟು ಬರೆಯಬೇಕೆಂದಿದ್ದೇನೆ.

(ಒನಕೆಯಿಂದ ಕುಟ್ಟುತ್ತಿರುವ ಹೆಣ್ಣುಮಗಳು, ಲೇಪಾಕ್ಷಿ ಶಿಲ್ಪ)

ನಿನಗೆ ಹೇಗೆ ಅನಿಸಿತು? ಚರಿತ್ರೆಗೆ ಸಂಬಂದಿಸಿದ  ಶಿಲಾಶಾಸನಾದಿಗಳನ್ನು  ನೀನು ಓದುತ್ತಿರುವಿ. ನನ್ನ ವಾದಸರಣಿಗೆ ಪುಷ್ಟಿಕೊಡುವ ಮಾಹಿತಿ ಸಿಕ್ಕರೆ ಅದನ್ನು ತಪ್ಪದೇ ಸಂಗ್ರಹಿಸಬೇಕು ಈ ನನ್ನ  reflections ನಿನ್ನ ಪ್ರಾಧ್ಯಾಪಕರಿಗೆ ಸರಿಬರಲಿಕ್ಕಿಲ್ಲ ಆದ್ದರಿಂದ ಈ ಅನಿಸಿಕೆಗಳನ್ನು ಅವರಿಗೆ ಹೇಳಬೇಕಾಗಿಲ್ಲ.

(ತಲೆಗೆ ಮುಂಡಾಸು ಕಟ್ಟಿರುವ ಫಕೀರ್, ಲೇಪಾಕ್ಷಿ ಶಿಲ್ಪ)

ಈಗ ಹಳೇ ಕೊಟೆ- ಕೊತ್ತಳ, ಭವ್ಯ ಮಂದಿರಗಳು, ಶಿಲಾವಿನ್ಯಾಸಗಳನ್ನೆಲ್ಲ ಕ್ಲಿಕ್ಕಿಸುವಾಗ, ಸೂಕ್ಷ್ಮಾತಿಸೂಕ್ಷ್ಮ ಶಿಲ್ಪಗಳನ್ನು ಗಮನಿಸುವಾಗ, ಇವನ್ನು ಕೊರೆಯಲು ಹಗಲೂ ರಾತ್ರಿ ದುಡಿಯುತ್ತಿದ್ದ ಆಳುಗಳಿಗೆ ಎಷ್ಟು ಸಂಬಳ, ದಿನಗೂಲಿ ಪಡಿತರ ಸಿಗುತ್ತಿತ್ತು? ಅದರಿಂದ ಅವರು ಎಂತಹ ಜೀವನ ನಡೆಸಲು ಸಾಧ್ಯವಿತ್ತು? ಎಂಬೀ ವಿಚಾರಗಳ ಕುರಿತು ಮಾಹಿತಿ ಹುಡುಕುತ್ತಿದ್ದೇನೆ.

ಕೃಷ್ಣಾನಂದ ಕಾಮತ್

 

(ಗುಡಿ ಗೋಪುರಗಳನ್ನು ಕಟ್ಟಿದ ವಾಸ್ತು ಶಿಲ್ಪಿಗಳು -ವೀರಣ್ಣ , ವೀರುಪಣ್ಣ ,ಲೇಪಾಕ್ಷಿ ವರ್ಣ ಚಿತ್ರ)

 

(ಬೆಣ್ಣೆ ತೆಗೆಯುವ ಮಹಿಳೆ )

(ಎಷ್ಟೋ ವರ್ಷಗಳ ಬಳಿಕ ಶಿಲ್ಪ ಚಿತ್ರಗಳನ್ನು  ಆಧರಿಸಿಯೇ ಕಾಮತರು ಸೂಚಿಸಿದ ’’ಹಂಪಿಯ ಶಿಲ್ಪಗಳಲ್ಲಿ ಜನಸಾಮಾನ್ಯರು’ ‘ ಎಂಬ ಲೇಖ ಬರೆದೆ. ಕುದುರೆ, ಒಂಟೆಪಾಲಕರು, ಹಾವಾಡಿಗರು,  ಕಾವಡಿ ಹೊರುವವರು, ಮನೆಗೆಲಸದಲ್ಲಿ ತೊಡಗಿದ ಸಾಮಾನ್ಯರು ಮುಂತಾದವರ ಚಿತ್ರಗಳನ್ನು ಕಾಮತರು ಕ್ಲಿಕ್ಕಿಸಿದ್ದರು. ಅವುಗಳ ಆಧಾರಿತ ರೇಖಾಚಿತ್ರಗಳನ್ನೂ ಮಾಡಿಕೊಟ್ಟರು. ಆ ಚಿತ್ರಲೇಖಗಳನ್ನು , ’ ‘ಕಲಸೊಗರ’ ‘ದಲ್ಲಿ ಹಾಕುವ ವಿಚಾರವಿದೆ)

ಜ್ಯೋತ್ಸ್ನಾ ಕಾಮತ್