ಮರುಪಯಣ : ನಾ ಕಂಡಂತೆ- ಮಂಜುನಾಥ . ಗ . ಹೆಗಡೆ

ಹೊನ್ನಾವರ ತಾಲೂಕಿನ  ಗೇರುಸೊಪ್ಪದ  ಸರಕಾರಿ ಸಂಯುಕ್ತ ಪ್ರೌಢಶಾಲೆಯ ೧೦ ನೇ ತರಗತಿಯ  ಮಂಜುನಾಥ . ಗ . ಹೆಗಡೆ ಎಂಬ ವಿದ್ಯಾರ್ಥಿಯು ಡಾ. ಕೃಷ್ಣಾನಂದ ಕಾಮತರ ‘ಮರುಪಯಣಓದಿ ಬರೆದ ತನ್ನ ಅನಿಸಿಕೆಗಳನ್ನು ಈ ಕೆಳಗೆ ಕೊಡಲಾಗಿದೆ.

“ ಬಾನು ಭೂಮಿಯನು ಒಂದು ಮಾಡಿಹ

ಮನಕೆ ಎಂದೂ ಮುದವ ನೀಡುವ

ಮನದ ಕೊಳೆಯನು ತೊಳೆದು ಹಾಕುವ

ರಮ್ಯ ಪ್ರಕೃತಿಯೆ ನಿನಗಿದೋ ನಮನ”

ಶರಾವತಿ ನದಿ

ಎಂಬ ಸಾಲುಗಳು ಡಾ. ಕೃಷ್ಣಾನಂದ ಕಾಮತರ, ’ ಮರುಪಯಣ’ ಓದಿದ ಮೇಲೆ ನನ್ನ ಮನಃಪಟಲದ ಮೇಲೆ  ಮೂಡಿ ಹೋದವು. ಅಪಾರ ಜ್ಞಾನದ ಖನಿಯಾಗಿ, ಪ್ರಕೃತಿಯ ಕಂದನಾಗಿ, ಪ್ರಕೃತಿಯಲ್ಲೇ ಒಂದಾಗಿ ಹೋದ, ಎಲೆಮರೆಯ ಕಾಯಿಯಂತಿದ್ದು, ಜನಮನದಲ್ಲಿ ಸ್ಫೂರ್ತಿಯಲೆಯನ್ನು ಎಬ್ಬಿಸಿದ ಹೊನ್ನಾವರದ ಡಾ. ಕೃಷ್ಣಾನಂದ ಕಾಮತರು ನಿಜವಾಗಿಯೂ ಬಹುಮುಖ ಪ್ರತಿಭಾವಂತರಾಗಿದ್ದರು. ಎಂಬ ವಿಷಯ ನನಗೆ ಮನದಟ್ಟಾಯಿತು. ಅವರ ಹೊತ್ತಗೆಯ ಬಗ್ಗೆ ಬರೆಯ ಹೊರಟೆನೆಂದರೆ, ಮೇರುಪರ್ವತದ ಎದುರಿಗಿರುವ ಮರಿ ಇರುವೆಯಂತೆ ಭಾಸವಾಗಬಹುದು.

ಇಂದಿನ ಯುವಜನತೆ ಹೊಸದನ್ನು ಬಯಸುತ್ತಿದೆ. ಹೊಸದೆಂದರೆ ಎಲ್ಲದರಲ್ಲಿಯೂ ಹೊಸದು. ಹೊಸದರಲ್ಲಿ ಹೊಸದು. ಸಂಕೀರ್ಣ ವಿಷಯಗಳನ್ನೂ ಓದುಗರ ಮುಂದೆ ಸರಳವಾಗಿ ಬಿಚ್ಚಿಡುವ ಡಾ. ಕಾಮತರ ಹೊಸ ಶೈಲಿ ನನಗೆ ತುಂಬ ಇಷ್ಟವಾಯಿತು. ಇಂದಿನ ’ಹೊಸದನ್ನು ಬಯಸುವ’ ಯುಗದಲ್ಲಿ ಸಾಹಿತ್ಯ ಕೃತಿಗಳು ಅಣಬೆಗಳಂತೆ, ಎಲ್ಲೆಡೆ ಉದ್ಭವಿಸುತ್ತಿದ್ದರೂ ಅವುಗಳಲ್ಲಿ ಬಹುತೇಕ ಕೃತಿಗಳು ನಮಗೆ ಜೊಳ್ಳಾಗಿ ಕಾಣುತ್ತವೆ. ಆದರೆ ಕಾಮತರ ಕೃತಿ ಹೊಸದನ್ನು ಒಳಗಿರಿಸಿಕೊಂಡು, ಜ್ಞಾನಸತ್ವದಿಂದ ಕೂಡಿದ, ಬಲಿತ ಕಾಳುಗಳ ಕಣಜದಂತೆ ಎಂದರೆ ಅತಿಶಯೋಕ್ತಿವಿಲ್ಲ.

ನಾನು , ’ಮರುಪಯಣ’ ಪುಸ್ತಕದಲ್ಲಿನ , ’ದ್ವೀಪಗಳ ರಾಣಿ’ ತಲೆಬರಹದಡಿಯ ಕೆಲ ವಿಚಾರಗಳ ಬಗ್ಗೆ ಪ್ರಸ್ತಾಪಿಸ ಬಯಸುತ್ತೇನೆ. ಇಲ್ಲಿ ’ಕ್ರಿಶ” ಎಂದು ಕರೆದುಕೊಂಡಿರುವ  ಕಾಮತರು ತಮ್ಮ ಸತ್ವಪೂರ್ಣ, ಐತಿಹಾಸಿಕ ಬರಹಗಳ ಮೂಲಕ ಓದುಗರನ್ನು ಗತ ಇತಿಹಾಸದ ಕಾಲಗರ್ಭಕ್ಕೆ ಕರೆದೊಯ್ಯುತ್ತಾರೆ.. “ ನಿಮ್ಮ ಬಾಲ್ಯದಲ್ಲಿ ಶರಾವತಿ ನದಿಯಲ್ಲಿ ದ್ವೀಪಗಳೇ ಇರಲಿಲ್ಲವೇ?” ಎಂದು ಆರಂಭವಾಗುವ, ’ದ್ವೀಪಗಳ ರಾಣಿ’ ಭಾಗದಲ್ಲಿ ಕೃಷ್ಣಾನಂದರು ವ್ಯಕ್ತಪಡಿಸಿರುವ ಐತಿಹಾಸಿಕ, ಸಾಮಾಜಿಕ ಹಾಗೂ ಪ್ರಸ್ತುತ ವಿಚಾರಗಳ  ಸಮ್ಮಿಲನ ಅವಿಸ್ಮರಣೀಯ. ಯಾವ ಸಾಹಿತ್ಯ ಪ್ರಕಾರಕ್ಕೂ ಕಟ್ಟುಬೀಳದ ಸ್ವತಂತ್ರ, ನೈಜ ಅಭಿವ್ಯಕ್ತಿ ಇದರ ವೈಶಿಷ್ಟ್ಯ ಎಂದು ಪರಿಗಣಿಸ ಬಯಸುತ್ತೇನೆ. ಇಲ್ಲಿ ಕೃಷ್ಣಾನಂದರ ಜ್ಞಾನದ ಸುರುಳಿ ಬಿಚ್ಚುತ್ತ ಹೋಗಿರುವದು ಲೇಖನದುದ್ದಕ್ಕೂ ಹರಡಿರುವದು ಸುವ್ಯಕ್ತವಾಗುತ್ತದೆ.

ಮಾವಿನಕುರ್ವೆ ದ್ವೀಪ

’ದ್ವೀಪಗಳ ರಾಣಿ’ಎಂದೇ ಕರೆಸಿಕೊಂಡಿರುವ ,’ಶರಾವತಿ’ ನದಿಯಲ್ಲಿ ಕಂಡು ಬರುವ ಒಂದು ದ್ವೀಪವು, ಕೆಳದಿಯ ಬಸವಪ್ಪ ನಾಯಕನು ಕ್ರಿ.ಶ. ೧೭೦೦ ರಲ್ಲಿ ಕೋಟೆ ಕಟ್ಟುವ ಪೂರ್ವದಲ್ಲಿ , ’ಗೇರುಸೊಪ್ಪಾ ನದಿಯ ಬಂಡೆ’ ಎಂದೇ ಖ್ಯಾತವಾಗಿತ್ತು ಎಂದು ತಮ್ಮ ಐತಿಹಾಸಿಕ ಭಂಡಾರವನ್ನು ತೆರೆದಿಡಲು ಮೊದಲು ಮಾಡುತ್ತಾರೆ.

ಉತ್ತರ ಕನ್ನಡದ ಕರಾವಳಿಯನ್ನು ಆಳವಾಗಿ ಅಧ್ಯಯನ ಮಾಡಿದ ಪೋರ್ಬೇಸ್, ಟೋರಿಯಾನೋ ಮೊದಲಾದವರ ವಿಚಾರ- ವಿವರಗಳನ್ನು ಕೃಷ್ಣಾನಂದರು ನಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.

ಪಿಟ್ರೋ ಡೆಲ್ಲಾವಾಲೆಯಿಂದ ಅಭ್ಯಸಿಸಲ್ಪಟ್ಟ ಹೈಗುಂದ, ಮಾವಿನಕುರ್ವೆ ಮೊದಲಾದ ಸ್ಥಳಗಳು, ಅವುಗಳ ವಿಶೇಷಗಳು ಮೊದಲಾದವುಗಳನ್ನು ಅತ್ಯಂತ ಮನೋಜ್ಞವಾಗಿ ವರ್ಣಿಸಿದ್ದಾರೆ.

ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ, ಅದೂ ಹೊನ್ನಾವರ ತಾಲ್ಲೂಕಿನಲ್ಲಿರುವ ಹವ್ಯಕಕುಂಡ(ಹೈಗುಂದ), ಗೇರುಸೊಪ್ಪಾ ಮೊದಲಾದ ಐತಿಹಾಸಿಕ ಸ್ಥಳಗಳಲ್ಲಿ ಅಧ್ಯಯನ ಮಾಡಿದರೆ, ಉತ್ಖನನ ನಡೆಸಿದರೆ, ಸಾವಿರಾರು ಪುಟಗಳ ಪುಸ್ತಕಗಳನ್ನು ಬರೆಯ ಬಹುದಾಗಿರುವ ಅಮೂಲ್ಯ ಐತಿಹಾಸಿಕ ಸಂಪತ್ತಿನ ಬಗ್ಗೆ ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಇತಿಹಾಸ ತಜ್ಞರು ಮಾಡುತ್ತಿರುವ ದಿವ್ಯ ನಿರ್ಲಕ್ಷ ನನಗೆ ತುಂಬ ಖೇದಕರವಾಗಿ ಕಂಡಿತು.

ಅದೇನೇ ಇರಲಿ, ಇಂದಿನ ಬೆಳೆಯುತ್ತಿರುವ ಭವ್ಯ ಭಾರತಕ್ಕೆ , ಭಾರತದ ಯುವ ಪೀಳಿಗೆಗೆ ಕಾಮತರಂತಹ ಸರಳ ಜೀವಿಗಳು ಮಾದರಿಯಾಗಲಿ ಎಂದು ಬಯಸುತ್ತೇನೆ.

ಮಂಜುನಾಥ. ಗ. ಹೆಗಡೆ

೧೦ ನೇ ತರಗತಿ,

ಸರಕಾರಿ ಸಂಯುಕ್ತ ಪ್ರೌಢಶಾಲೆ, ಗೇರುಸೊಪ್ಪ

ತಾ-ಹೊನ್ನಾವರ, (ಉತ್ತರ ಕನ್ನಡ ) ೫೮೧೩೮೪

ತಂದೆ-ಗಜಾನನ ಸುಬ್ರಾಯ ಹೆಗಡೆ

ತಾಯಿ- ಗೌರಿ  ಗಜಾನನ ಹೆಗಡೆ

ದೂ. ಸಂಖ್ಯೆ:- ೯೩೪೨೧೨೦೧೭೫

ಮಿಂಚಂಚೆ:- omkarmanju@rediffmail.com