ನಮ್ಮ ನಾರಿಯರು – ಹಾಲಕ್ಕಿ ಗೌಡತಿ

ಕಷ್ಟಕಾರ್ಪಣ್ಯದ ಜೀವನದಲ್ಲಿಯೂ ನಗುಮುಖದ ಹಾಲಕ್ಕಿ ಗೌಡತಿಯರನ್ನು ಕಾಣಬೇಕಿದ್ದರೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೇ ಹೋಗಬೇಕು. ಅವರಂತಹ ಕರ್ತವ್ಯ ನಿಷ್ಠ, ಸಜ್ಜನ, ಸಂಭಾವಿತ ಆದರೆ ಅಳ್ಳೆದೆಯ ಸರಳ ಜೀವಿಗಳು ನೋಡಲು ಸಿಗುವದು ಅತಿ ಅಪರೂಪ! ಅಂಕೋಲಾಕುಮಟಾ, ಹೊನ್ನಾವರ, ಗೋಕರ್ಣ ಊರುಗಳ ಹೊರಲವಲಯದಲ್ಲಿ, ಹರಿನೀರಿನ ಅನುಕೂಲ ಇದ್ದಲ್ಲಿ ಹೊಲ-ಗದ್ದೆಗಳಲ್ಲಿ ದುಡಿದು ನೆಮ್ಮದಿಯ ಬಾಳು ನಡೆಸಲೆತ್ನಿಸುತ್ತಾರೆ. ನಿಸರ್ಗದ ಮಡಿಲಲ್ಲಿ ಸಣ್ಣ ಪುಟ್ಟ ಗುಡಿಸಲುಗಳನ್ನು ನಿರ್ಮಿಸಿ ಸಾಂಘಿಕ ಸಕ್ರಿಯ ಜೀವನ ನಡೆಸುತ್ತಾರೆ. ಹುಲ್ಲು ಛಾವಣಿಯ, ಮಣ್ಣಿನ ಗೋಡೆಯ ಕುಟೀರಗಳಿಗೆ ಸುಣ್ಣ, ಮಣ್ಣು, ಸೆಗಣಿ ಬಳಿದು, ವಿಶೇಷ ಸಂದರ್ಭಗಳಲ್ಲಿ ವಿವಿಧ ಚಿತ್ರಗಳಿಂದ ಅಲಂಕರಿಸುತ್ತಾರೆ. ಹೊರಾಂಗಣವನ್ನು ಕೆಮ್ಮಣ್ಣು ಹಾಕಿ ಅರೆದು ಕನ್ನಡಿಯಂತೆ ಹೊಳೆಯುವಷ್ಟು ನುಣುಪು ಮಾಡಿರುತ್ತಾರೆ. ದೈನಂದಿನ ಹೆಚ್ಚಿನ ಚಟುವಟಿಕೆಗಳೆಲ್ಲ ನಡೆಯುವದು ಇಲ್ಲಿಯೇ! ಒಂದು ಭಾಗ ಪೂಜಾ ವಿಧಿಗೆ ಮೀಸಲು. ಎತ್ತರ ಜಾಗದಲ್ಲಿ ತುಳಸಿಕಟ್ಟೆ, ಸಪ್ತಗಿರಿಯ ಅಧಿಪತಿ ತಿರುಮಲ ವೆಂಕಟೇಶನ ವಿಗ್ರಹವಿರುವದು ಸಾಮಾನ್ಯ. ಪ್ರತಿದಿನ ಹಳದಿ ಕೆಂಪು, ದಾಸಾಳ ಹೂಗಳನ್ನು ಏರಿಸಿ ಅದಕ್ಕೆ ಪೂಜೆ ಸಲ್ಲಿಸಲೇಬೇಕು. ಅನತಿ ದೂರದಲ್ಲಿ ಹಾಕಿದ ಭತ್ತದ ರಾಶಿಯ ಹತ್ತಿರವೇ ನಾಯಿ, ಬೆಕ್ಕು, ಕುಕ್ಕುಟ, ದನ-ಕರುಗಳ ವಾಸಸ್ಥಾನ. ಇನ್ನೊಂದು ಅಂಚಿನಲ್ಲಿ ಸವೆದು ಹೋಗಿರುವ ರುಬ್ಬುವ ಕಲ್ಲು, ಕತ್ತಲುಮಯ ಒಳಭಾಗದಲ್ಲಿ ಸ್ವಚ್ಚವಾಗಿ ಸಾರಿಸಿದ ಒಲೆ, ಗಂಜಿ ಅನ್ನ-ಮೀನ ಪದಾರ್ಥದ ಗಡಿಗೆಗಳು, ತೆಂಗಿನ ಚಿಪ್ಪಿನ ಸೌಟುಗಳು, ಬುಟ್ಟಿಗಳು ಇವೇ ಆಕೆಯ ಸಂಸಾರದ ಪರಿಕರಗಳು.

ಹಾಲಕ್ಕಿ ಸಮಾಜದಲ್ಲಿ ಗೌಡತಿಯೇ ಕೇಂದ್ರ ವ್ಯಕ್ತಿ. ಅವಳೇ ಸಂಸಾರದ ಸಕಲ ಸೂತ್ರಗಳನ್ನು ಧರಿಸಿರುವವಳು. ಒಂದು ತೊಟ್ಟೂ ಹೆಚ್ಚಿನ ಕೊಬ್ಬು ಹೊಂದಿರದ ಸುಂದರ ಅಂಗ ಸೌಷ್ಠವ ಹೊಂದಿ, ಅತ್ಯಾಧುನಿಕರನ್ನೂ ನಾಚಿಸುವಂತೆ ಇರುತ್ತಾಳೆ. ಕಪ್ಪಗಿನ ಕೂದಲನ್ನು ಎಣ್ಣೆ ಹಾಕಿ ಬಾಚಿ ದೊಡ್ಡಾ ಮುಡಿ ಕಟ್ಟಿಕೊಳ್ಳುವದು ಅವಳಿಗೆ ಇಷ್ಟ. ಕನಕಾಂಬರ, ಮಲ್ಲಿಗೆ, ಜಾಜಿದಂಡೆಗಳನ್ನು ಮುಡಿದುಕೊಳ್ಳುತ್ತಾಳೆ. ಹೆಚ್ಚಿನ ಹೂ ಸಿಗದ ದಿನಗಳಲ್ಲಿ ದಾಸವಾಳ, ಕೇದಿಗೆ, ಚೆಂಡು ಹೂವಾದರೂ ಪಂಚಪ್ರಾಣ! ಕಿವಿಗಳಿಗೆ ಬೆಂಡೋಲೆ ಜೊತೆಗೆ ಬುಗುಡಿ. ಮೂಗಿಗೆ ಭಾರದ ಮೂಗುತಿ, ನಕ್ಕಾಗ ನರ್ತಿಸುತ್ತಿರುತ್ತದೆ. ಕೊರಳಿನಿಂದ ನೇತಾಡುವ ಕರಿಮಣಿ, ಗಾಜಿನ ಮತ್ತು ಅರಗಿನ ಮಣಿಸರಗಳನ್ನು ಎಣಿಸಲು ಬ್ರಹ್ಮನೇ ಬರಬೇಕು. ಸ್ಥಿತಿವಂತರು, ಬೆಳ್ಳಿ ಗೋಪು, ಸರಗಳನ್ನೂ ಧರಿಸುವದುಂಟು.

ಇಷ್ಟು ಸಾಲದೆಂಬಂತೆ ಕೆಂಪು ದಾರದಿಂದ ಇಳಿಬಿಟ್ಟ, ಕಿವಿ ಹಲ್ಲು ಗಳನ್ನು ಸ್ವಚ್ಛಗೊಳಿಸುವ ಬೆಳ್ಳಿ ಕಡ್ಡಿಗಳನ್ನು ಪ್ರದರ್ಶಿಸುತ್ತಾಳೆ. ತುಂಡು ಸೀರೆಯನ್ನು ಮೈಯ ಮಾಟ ಎದ್ದು ಕಾಣುವಂತೆ ಸಮಾನ ನೆರಿಗೆಗಳಿಂದ ಉಡುವದೇ ಚಮತ್ಕಾರ! ಕುಪ್ಪಸದ ಅವಶ್ಯಕತೆಯಿಲ್ಲದ ಆಕೆಯ ಸೀರೆ, ಸರಗಳು ತುಂಬ ಕಲಾತ್ಮಕವಾಗಿ ಎದೆಯ ಭಾಗವನ್ನು ಪೂರ್ತಿಯಾಗಿ ಮುಚ್ಚುತ್ತವೆ. ಮೊಳಕೈಗೆ ಹಿತ್ತಾಳೆಯ ಬಳೆಗಳಿದ್ದರೆ, ಮುಂಗೈಗೆ ಗಾಜು ಕೆಲವೊಮ್ಮೆ ಬೆಳ್ಳಿಯ ಬಳೆಗಳು. ಬೆಳ್ಳಿ ನಾಣ್ಯದ ಉಂಗುರಗಳು ಬೆರಳಿಗೆ ಇರುತ್ತವೆ. ಇವುಗಳಿಂದ ಅಲಂಕೃತವಾಗಿ ಕಾಡಿನಿಂದ ಸೌದೆಯನ್ನೊ ಸೊಪ್ಪನ್ನೋ ಹೊತ್ತು ಬರುವ ಗೌಡತಿ ವನದೇವತೆಯ ಪ್ರತಿನಿಧಿಯಂತೆ ತೋರಿದರೆ ಆಶ್ಚರ್ಯವಿಲ್ಲ!

ಈ ಗೃಹಿಣಿ ಸೂರ್ಯೋದಯದ ಪೂರ್ವದಲ್ಲೆ ಎಚ್ಚೆತ್ತು ಹಿಂದಿನರಾತ್ರೆ ನೆನೆಹಾಕಿದ ಸಮಪ್ರಮಾಣದ ಅಕ್ಕಿ-ರಾಗಿಗಳನ್ನು ನುಣುಪಾಗಿ ರುಬ್ಬಿ ಮಣ್ಣ ಮಡಕೆಯಲ್ಲಿ ಅಂಬಲಿ ಕುದಿಸುವಳು. ಮಧ್ಯಾಹ್ನಕ್ಕೆ ಕುಸುಬಲಕ್ಕಿ ಗಂಜಿ ಇಲ್ಲವೇ ಅನ್ನ, ಮೀನ ಪದಾರ್ಥ, ಕಾಯಿಪಲ್ಲೆ ಮಾಡುವಳು. ಅತಿವೃಷ್ಟಿ ಅನಾವೃಷ್ಟಿ ಕಾಲದಲ್ಲಿ ಕಾಡುಬಿದಿರಿನ ಅಕ್ಕಿ – ಗಡ್ಡೆಗೆಣಸುಗಳಿಂದ ಆಹಾರ ಪೂರೈಸುವದನ್ನೂ ಅರಿತವಳು. ಆಗೊಮ್ಮೆ ಈಗೊಮ್ಮೆ ಮೊಲ, ಕಾಡಿನ ಹೆಗ್ಗಣ, ಏಡಿಗಳ ಸುಗ್ರಾಸ ಭೋಜನ ಅವಳ ಕುಟುಂಬಕ್ಕೆ ಸಿಗುವದುಂಟು. ಹಾಲಕ್ಕಿ ಗೌಡರು ತಾವೇ ರಚಿಸಿದ ಬಲೆಗಳೊಂದಿಗೆ ಅವುಗಳ ಸಾಮೂಹಿಕವಗಿ ಬೇಟೆಯಾಡಿ ಸಿಕ್ಕವುಗಳನ್ನು ಹಂಚಿಕೊಳ್ಳುವರು. ಮನೆಯಾಕೆ ಅಂಬಲಿ ಕುಡಿದು ದೈನಂದಿನ ದುಡಿತಕ್ಕೆ ಹೊರಟರೆ, ಮನೆಯಲ್ಲಿಯ ಮಕ್ಕಳು, ಮುದಿಯರು, ಸೋಮಾರಿ ಗಂಡಸರು, ಮಾಡಿಟ್ಟ ಅಡಿಗೆಗೆ ನ್ಯಾಯ ಒದಗಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ದೋಸೆ, ಅಕ್ಕಿಬೆಲ್ಲಗಳ ಪಾಯಸ ಮಾಡುವದು ವಾಡಿಕೆ. ಬಾಯಚಪಲದ ತಿಂಡಿ ಅವರಿಗೆ ಸಿಗುವದಿಲ್ಲ.

ಆಡು ಮುಟ್ಟದ ಗಿಡವಿಲ್ಲವಂತೆ. ಅದರಂತೆ ಗೌಡತಿ ಮಾಡದ ಕೆಲಸವಿಲ್ಲ. ತನ್ನ ಗುಡಿಸಲ ಆವಾರದಲ್ಲಿ ಆಳವಾದ ಕುಣಿ ತೋಡಿ ಗಡ್ಡೆ, ಸೂರಣಗಡ್ಡೆ ಬೆಳೆಯುವಳು. ಚಪ್ಪರ ಹಾಕಿ ಬಸಳೆ ಸೊಪ್ಪು ಹಬ್ಬಿಸುವಳು. ಕೆಂಪು ಹರಿವೆ ಸೊಪ್ಪು ಪಡುವಲಕಾಯಿ, ಹೀರೆಕಾಯಿ, ಹಾಗಲ, ಬದನೆ ಕಾಯಿ ಬೆಳೆಯುವಳು. ನಡುನಡುವೆ ದಾಸಾಳ, ಕಣಗಿಲೆ, ಕನಕಾಂಬರ ಹೂಗಿಡಗಳನ್ನೂ ಹಾಕಿರುವಳು. ತಮ್ಮ ಗದ್ದೆಗಳಲ್ಲಿ ಬತ್ತ, ನೆಲಗಡಲೆ, ಉಳ್ಳಾಗಡ್ಡೆಗಳ ಕೊಯ್ಲು ಮುಗಿದ ನಂತರ ಸೋರೆಕಾಯಿ, ತೊಂಡೆಕಾಯಿ ಬೆಳೆಯುವಳು. ಮಾವು, ಆಮಟೆಕಾಯಿ ಬೆಳೆಯುವದೂ ಉಂಟು. ಕುಕ್ಕುಟಪಾಲನವೂ ಇದೆ. ಕಾಡಿನಿಂದ ಉರುವಲು, ಸೊಪ್ಪು ತರುವದು ಅವಳ ಹೊಣೆಯೇ! ಜೊತೆಗೆ ಮುರುಗಲ ಹಣ್ಣು ಶೇಖರಿಸಿ ಅದರಿಂದ ‘ಹುಳಿಚಿಪ್ಪು’ ತಯಾರಿಸುವಳು. (ಇದನ್ನು ಹುಣಿಸೆ ಹಣ್ಣಿನ ಬದಲಾಗಿ ಹುಳಿಗೆ ಉತ್ತರ ಕನ್ನಡದ ಪೇಟೆಯ ಜನ ಬಳಸುತ್ತಾರೆ) ಬೆಳೆದ ತರಕಾರಿ, ಇತರ ಸಾಮಗ್ರಿ ಹೊತ್ತು ಪೇಟೆಯಲ್ಲಿ ಮಾರಿ ಬರುವ ಜವಾಬ್ದಾರಿಯೂ ಆಕೆಯದೇ! ನಾಲ್ಕೆಂಟು ಕಿಲೋ ಮೀಟರ್ ದೂರದಿಂದ ಹೊತ್ತು ತಂದ ಸೌದೆ ಹೊರೆಯನ್ನು ಹತ್ತಿರದ ಊರಪೇಟೆಗೆ ಒಯ್ದಾಗ, ಚಹದಂಗಡಿಯವನು ಕೊಡುವದು ಚಹ, ಅವಲಕ್ಕಿ ಮತ್ತು ಎರಡು, ಮೂರು ರೂಪಾಯಿ ಮಾತ್ರ! ಗೊಬ್ಬರಕ್ಕೆಂದು ಬಳಸುವ ಸೊಪ್ಪಿಗೆ ಹೊರೆಯ ಬೆಲೆ ಒಂದೆರಡು ರೂಪಾಯಿ. ಊರವರೆಲ್ಲ ಗೌಡತಿಯರಿಂದ ಅಗ್ಗದಲ್ಲಿ ಕಾಯಿಪಲ್ಯ, ಹಣ್ಣು ಹಂಪಲುಗಳನ್ನು ಕೊಳ್ಳುವದರಲ್ಲಿ ತಮ್ಮ ಜಾಣತನ ವ್ಯಯಿಸುತ್ತಿರುತ್ತಾರೆ. ಈ ಮುಗ್ದ ಹೆಂಗಳೆಯರಿಗೆ ಬೇರಿಜು, ವಜಾಬಾಕಿ, ಗುಣಾಕಾರ, ಭಾಗಾಕಾರಗಳು ಸುಲಭವಾಗಿ ತಲೆಯಲ್ಲಿ ಹೋಗದ್ದರಿಂದ ಸದಾಕಾಲ ತಾವು ಮೋಸ ಹೋಗುತ್ತಿದ್ದೆವೆಯೇ? ಎಂಬ ಅಳುಕು ಇದ್ದೇ ಇರುತ್ತದೆ. ಅಂತೆಯೇ ಅನ್ಯರನ್ನು ಸುತರಾಂ ನಂಬುವದೇ ಇಲ್ಲ. ಕೊಡುವ ಸರಕನ್ನು ಹತ್ತು ಸಲ ಎಣಿಸಿದರೆ ಬಂದಹಣ ಇಪ್ಪತ್ತುಸಲ ಎಣಿಸಿದಾಗಲೇ ನೆಮ್ಮದಿ. ದಿನದ ವ್ಯವಹಾರ ಮುಗಿಸಿ ನಾಲ್ಕಾರು ಗೌಡತಿಯರು ಒಟ್ಟಾಗಿಯೇ ಗೃಹಮುಖಿಯಾಗುವದು ವಾಡಿಕೆ. ದಾರಿ ಸವೆಯುತ್ತಿದ್ದಂತೆ ಅಂದಿನ ಚಟುವಟಿಕೆಗಳನ್ನೆ ಪರಾಮರ್ಶಿಸಿ ಅಂದಿನ ಹಣದ ಲೆಕ್ಕಾಚಾರ ಇನ್ನೊಮ್ಮೆ ಮಾಡಿದಾಗಲೇ ತೃಪ್ತಿ. ಪ್ರತಿದಿನದ ಗಳಿಕೆಯಲ್ಲಿ ಕೊಂಚವಾದರೂ ಉಳಿಸಿ, ಮಣ್ಣಿನ ಮಡಕೆಯೊಂದಕ್ಕೆ ಸೇರಿಸಿ, ಗೋಡೆಯಲ್ಲಿ ಇಲ್ಲವೇ ನೆಲದಲ್ಲಿ ಅಡಗಿಸಿಡುವದು ವಾಡಿಕೆ. ಮನೆಯ ದುರಸ್ತಿ, ಮದುವೆ, ಇಂಥ ಪ್ರಸಂಗದಲ್ಲಿ ಮಾತ್ರ ಈ ಗುಪ್ತ ಧನದ ಬಳಕೆಯಾಗುವದು.

halakki-gowdati-kamat.com

ಗೌಡತಿಯರು ಚಟುವಟಿಕೆಯಿಂದ ತುಂಬಿ ತುಳುಕಿದರೆ ಗೌಡರು ಮೊದ್ದು ಮೊದ್ದಾಗಿ ಆರಾಂ ಪ್ರಿಯರಾಗಿರುತ್ತಾರೆ. ಅವರ ಸಮಾಜದಲ್ಲಿ ಸ್ತ್ರೀಸ್ವಾತಂತ್ರ್ಯಾಕ್ಕಾಗಿ ಹೋರಾಡುವ ಪ್ರಮೇಯವೇ ಇಲ್ಲ! ಹೆಂಗಳೆಯರು ಅಲ್ಪ-ಸಂಖ್ಯಾತರಾಗಿದ್ದರಿಂದ ವಿವಾಹದ ಬೇಡಿಕೆ ಸದಾ ಕಾಲ ಇದ್ದದ್ದೇ! ಮೂವತ್ತರ ಯುವಕ ಹನ್ನೆರಡರ ಹುಡುಗಿಯನ್ನು ವರಿಸುವದೂ ಇದೆ. ವರನ ಪಕ್ಷದವರು ವಧುದಕ್ಷಿಣೆ ತೆರಲೇಬೇಕು! ‘ತೆರು’ವು ಅಕ್ಕಿ, ಬೆಲ್ಲ, ತೆಂಗಿನ ಕಾಯಿಗಳ ರೂಪದಲ್ಲಿ ಕೊಡಬೇಕಾಗುತ್ತದೆ. ಅಪ್ರಾಯಸ್ಥ ಹಾಲಕ್ಕಿ ಹುಡುಗಿ, ತುಂಡು ಸೀರೆಯನ್ನು ಸೆರಗು ಹಾಕದೇ ಉಟ್ಟು ರವಕೆ ತೊಟ್ಟರೆ ಋತುಮತಿಯಾದಾಗ ಸೀರೆಯನ್ನು ಭುಜ ಮೇಲೆ ಜೇಟಿ (ಗಂಟು) ಕಟ್ಟಿ ಉಡಲಾರಂಭಿಸುವಳು. ವಿವಾಹದ ಅದೃಷ್ಟ ಇಲ್ಲದವನನ್ನು “ಬೋಳ ಮಂಡೆ ಕೂಸ” ಎಂದುಕರೆಯುವದು ವಾಡಿಕೆ! ಅಣ್ಣನ ವಿಧವೆಯನ್ನು ವರಿಸುವದು ಇವರ ಪಾಲಿಗೆ ಬರುತ್ತದೆ. ಮಳೇಗಾಲ ಪ್ರಾರಂಭವಾಯಿತೆಂದರೆ ಗೌಡರ ವಿವಾಹಗಳು ಪ್ರಾರಂಭ. ಎಅಡೆರಡು ಬಾಸಿಂಗ ಕಟ್ಟಿಕೊಂಡು ಮದುಮಗನು ಮಧುಮಗಳ ಮನೆಗೆ ಬಂದು ವಿವಾಹವಾಗುತ್ತಾನೆ. ತೆಂಗು, ಅಡಿಕೆ ಸಸಿಗಳನ್ನು ಬಳುವಳಿಯಾಗಿ ಕೊಡುವ ಪರಿಪಾಠವಿದೆ. ಆಮಂತ್ರಿತರಿಗೆ ಪಾಯಸದೂಟವಿರುತ್ತದೆ.

ಸುಧಾರಣೆಯ ಗಾಳಿ, ಈ ಬಡಪಾಯಿಗಳನ್ನು ಸೋಂಕದೇ ಹೋಗಲಿಲ್ಲ. ಸೋಮಾರಿ ಗಂಡಸರು ಕುಡಿತವನ್ನೂ ರೂಢಿಸಿಕೊಂಡಿದ್ದರಿಂದ ಸಾಂಸಾರಿಕ ಜೀವನದಲ್ಲಿ ಕೋಲಾಹಲ ತಲೆಹಾಕಿದೆ. ಗೌಡತಿಯ ವೇಷಭೂಷೆ, ಅವಮಾನಕಾರಿಯೆಂದು ಆಧುನಿಕ ಸಮಾಜ ಸುಧಾರಕರು ಅವರಿಗೆ ಮನದಟ್ಟು ಮಾಡಿದ್ದರಿಂದ ಅವರೆಲ್ಲ ಸಮವಸ್ತ್ರದಂತಿರುವ ಸೀರೆ ಕುಪ್ಪಸ ಧರಿಸಲಾರಂಭಿಸಿದ್ದಾರೆ! ಅಂತೆಯೇ ಕ್ಯಾಮರಾ ಹೊತ್ತು ಹಾಲಕ್ಕಿ ಗೌಡತಿಯ ಛಾಯಾಗ್ರಹಣಕ್ಕಾಗಿ ದಿನವಿಡೀ ಅಲೆದಾಡಿದರೂ ಕೊನೆಗೂ ನಿರಾಸೆಯಲ್ಲಿ ಭೇಟಿ ಕೊನೆಗೊಳ್ಳುವದು ಖಂಡಿತ! ಜೀವನದ ಈ ಪರಿವರ್ತನೆಯಿಂದ ಅವರು ಪ್ರಗತಿಪಥದಲ್ಲಿ ಸಾಗಿದ್ದಾರೋ ಎಂದು ಹೇಳುವದು ಕಷ್ಟ! ಅವರು ಈ ಮೊದಲು ಇರುತ್ತಿದ್ದಂತೆ ಈಗಿಲ್ಲ, ಎಂಬುದು ಮಾತ್ರ ಖಂಡಿತ.

ವಿ.ಸೂ: ಭರದಿಂದ ಹಾಲಕ್ಕಿ ಸಮಾಜ ‘ನಾಗರೀಕರಣ’ ಪಡೆಯುತ್ತಲಿದೆ. ಇವರಲ್ಲಿ ಶಿಕ್ಷಣವೂ ಹರಡಲಾರಂಭಿಸಿದೆ. ಹೀಗಾಗಿ ತೀರ ಹಿರಿಯರನ್ನು ಬಿಟ್ಟರೆ ಅವರ ಸಾಂಪ್ರದಾಯಿಕ ಉಡುಗೆಯಲ್ಲಿ ಕಂಡುಬರುವವರು ವಿರಳವಾಗಿದ್ದಾರೆ. ಹಾಲಕ್ಕಿ ಚಲುವೆಯರನ್ನು ಉತ್ತರ ಕನ್ನಡ ಜಿಲ್ಲೆಯ ಇತರ ಮಹಿಳಾ ಸಮುದಾಯದ ಸದಸ್ಯಯರನ್ನು ಗುರುತಿಸುವುದು ಸುಂಬ ಕಠಿಣವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರಾಗುವದರ ಜೊತೆಗೆ ಇತರ ಇತರ ವೃತ್ತಿಗಳಲ್ಲೂ ಹೆಂಗಳೆಯರು ಮಿಂಚುತ್ತಿದ್ದಾರೆ.