ಕಣ್ಣೇ ಕ್ಯಾಮೆರಾ ಆದಾಗ

( ಮಾನವ ಜೀವನದ ಹತ್ತು ಹಲವು ಆಯಾಮಗಳಲ್ಲಿ ಆಸಕ್ತಿ ಹೊಂದಿದ ಕೃಷ್ಣಾನಂದ ಕಾಮತರು ಯಾವ ಸಂದರ್ಭ/ ವ್ಯಕ್ತಿಗಳ ಆಕರ್ಷಿತ ನೋಟವನ್ನು ಹುಸಿ ಹೋಗಗೊಡದೇ ಕ್ಲಿಕ್ಕಿಸುತ್ತಿದ್ದರು. ಕ್ಲಿಕ್ಕಿಸಲಾಗದ ಸಂದರ್ಭದಲ್ಲಿ ಕಣ್ಣನ್ನೇ ಕ್ಯಾಮರಾ ಮಾಡಿಕೊಂಡು ನೋಟವನ್ನು ಸೆರೆಹಿಡಿಯುತ್ತಿದ್ದರು. ಇಂಥ ಸಂದರ್ಭಗಳನ್ನು  ಪತ್ನಿಗೆ ಪತ್ರ ಬರೆದು ತಿಳಿಸಿದಾಗಲೇ ನೆಮ್ಮದಿ ಅವರಿಗೆ. ತಿಳಿ ಹಾಸ್ಯಕ್ಕೆ ಹೆಸರು ಮಾಡಿದ ಕಾಮತರ ಬರವಣಿಗೆಯ ಕಿರು ಮಾದರಿ ಇಲ್ಲಿದೆ )

ಪ್ರಿಯ ಜ್ಯೋತ್ಸ್ನಾ,

ಇಂದಿನ ದಿನಗಳಲ್ಲಿ ಮನೆಗೆ ಹೋಗುವಾಗ ರಾತ್ರಿ ಒಂಬತ್ತುವರೆ- ಹತ್ತು ಗಂಟೆಯಾಗುವದು ತೀರ ಸಾಮಾನ್ಯ. ತಂಪಾದ ಸಮಯದಲ್ಲಿ ಛಾಯಾಗ್ರಹಣ ಮಾಡಬೇಕಾಗುವದರಿಂದ ಈ ವ್ಯವಸ್ಥೆ ಮಾಡಿಕೊಂಡಿದ್ದೇನೆ. ನಿನ್ನೆ ಹೀಗೆಯೇ ತಡವಾಗಿದ್ದರಿಂದ ವೇಗವಾಗಿ ಕಾಲು ಹಾಕುತ್ತ ಮನೆಗೆ ಹೊರಟಿದ್ದೆ. ಹನ್ನೊಂದನೆ ಕ್ರಾಸಿನ ಅಂಚೆ ಕಚೇರಿಯ ಕಿರಿ ರಸ್ತೆಯಲ್ಲಿ ಚಿಗರೆಯನ್ನು ಕಂಡು ಚಿರತೆ ದಾರಿಯಲ್ಲಿ ಧಾವಿಸಿ ಬರುವಂತೆ ದೀರ್ಘದೇಹಿ ಅಜಾನಬಾಹು ಒಬ್ಬರು ಧುಮುಕಿ ಬಂದು ದಾರಿ ಅಡ್ಡ ಕಟ್ಟಿ , “ ತಮ್ಮ ಹೆಸರೇನು ಸಾರ್….?”ಎಂದರು! ಒಂದು ನಿಮಿಷ ಕಂಗಾಲಾಗಿ, ಸ್ಥಬ್ಧವಾಗಿ ನಿಂತು ಬಿಟ್ಟೆ. ಈ ಅಜಾನುಬಾಹುವನ್ನು  ಪ್ರತಿ ದಿನ ನೋಡುತ್ತೇನೆ. ತುಂಬು ಯವ್ವನೆ  ಅವರ ಮಗಳನ್ನು ಇನ್ನೂ ಹೆಚ್ಚಾಗಿ ನೋಡುತ್ತೇನೆ! ಈ ಚಟುವಟಿಕೆಯೆ ಈ ತೊಂದರೆಯಲ್ಲಿ ಸಿಲುಕಿ ಹಾಕಿರಬಹುದೇ? ಎಂಬ ಅನುಮಾನವು ನುಸುಳಿ ಹೋಯಿತು. ಈತನ ಕುಮಾರಿ ಒಳ್ಳೆ ಮಹಾರಾಯ್ತಿಯಂತೆ ಇದ್ದಾಳೆ. ಎತ್ತರ ನನ್ನಷ್ಟಿರಬಹುದು. ಆದರೆ ಎದೆಯುಬ್ಬಿನ ಭಾರತಾಳಲಾರದೇ ಬೆನ್ನು ಗೂನು ಬಿಟ್ಟಿದೆ.  ಅಂತಹ ಧಢೂತಿಯಾದವಳಿಗೆ  ಈ ಗೂನು ಎಂತಹ ಕೊರತೆ! ಎಂದು ಯೋಚಿಸಿದ್ದೂ ಉಂಟು. ಮನೆಯಲ್ಲಿ ಲಂಗ ಕುಪ್ಪುಸದ ಮೇಲೆಯೇ ಇರುವದರಿಂದ ಗೂನು ಹೆಚ್ಚು ಎದ್ದು ಕಾಣುತ್ತದೆ. ಅದೇ ಹೊರಕ್ಕೆ ಹೋಗಬೇಕಾದರೆ ತನ್ನದೋ ಇಲ್ಲ ಪರರದೋ ಸೀರೆಯುಟ್ಟುಕೊಂಡು ಸಿಸ್ತಾಗಿ ಹೊರಡುವದ ರಿಂದ ರಂಭೆಯಾಗಿ ಕಾಣುತ್ತಾಳೆ! ಅಕ್ಕಪಕ್ಕದಲ್ಲಿ  ಅವರ ಆಪ್ತರೇ ವಾಸಿಸುತ್ತಾರೆ. ಆದ್ದರಿಂದ ಮಾಡಿದ ಅಡಿಗೆ ಕೊಡಲೆಂದು, ಹರಟೆಗೆಂದು ಅತ್ತಿಂದಿತ್ತ  ಓಡಾಡಿಕೊಂಡು ಇರುತ್ತಾಳೆ. ಅಲ್ಲಿಯೇ ಹೋಂಗೂದಲಿನ ಸುಂದರವಾದ ಮಗು ಒಂದಿದೆ. ಆ ಮಗು ನನ್ನ ವರ್ಣ ಫಿಲ್ಮಿನ ಮೇಲೆ ಹೇಗೆ ಮೂಡಿಬರಬಹುದು! ಎಂದು ಯೋಚಿಸುತ್ತ ಒಂದು ನಿಮಿಷ ಹೆಚ್ಚಾಗಿ ನೋಡಿದ್ದುಂಟು, ಮಗುವನ್ನು , ಮದುಮಗಳನ್ನಲ್ಲ! ಈ ದೀರ್ಘ ದೇಹ ತನ್ನ ಗೆಳೆಯರೊಡನೆ ಅಂಚೆ ಕಚೇರಿ ಕಟ್ಟೆಯ ಮೇಲೆ ಹರಟೆಯಲ್ಲಿ ತೊಡಗಿರುತ್ತಿದ್ದರಿಂದ ನಿರ್ಭೀತಿಯಿಂದ  ಈ ’ಕಣ್ಣ ಸಾಹಸ’ ಪೂರೈಸಿಕೊಳ್ಳುತ್ತಿದ್ದೆ. ಆದರೆ ಈ ಮನುಷ್ಯ ಅಷ್ಟು ದೂರ ಕುಳಿತು ತನ್ನ ಕಣ್ನನ್ನೇ ಟೆಲಿಲೆನ್ಸ್ ಮಾಡಿಕೊಂಡು ನನ್ನ ಚಟುವಟಿಕೆಯನ್ನು ಪರಾಮರ್ಶಿಸುತ್ತಿರ ಬಹುದೇ? ಎಂಬ ಅನುಮಾನ ನನಗೆ ತಟ್ಟನೆ ಬಂದಿತು.

ತೊಂದರೆಗಳಿಂದ ಹೇಗೆ ದೂರ ಇರಬೇಕು? ಎಂದು ಇತರರಿಗೆ ತತ್ವ ಜ್ಞಾನ ಹೇಳುತ್ತ , ನಾನೇ ತೊಂದರೆಯಲ್ಲಿ ಸಿಲುಕಿ ಹಾಕಿಕೊಂಡೆನಲ್ಲ! ಶಿವಶಿವಾ! ಎಂದುಕೊಂಡೆ. ಮೊನ್ನೆ ತಾನೇ ನಿನ್ನ ಟಾಯಿಪಿಸ್ಟ್ ವಿಕಾಸನು ಇನ್ನೊಬ್ಬರಿಗೆ ಸಹಾಯ ಮಾಡಲು ಹೋಗಿ ತನ್ನ ಕಾಲ ಮೇಲೆ  ಕಲ್ಲು ಹೇಗೆ ಹಾಕಿಕೊಂಡ ! ಎಂದು ವಿವರಿಸಿ ಬರೆದ ಪತ್ರ ನೆನೆಸಿಕೊಂಡೆ. ಆದರೆ ಈಗ ಯಮದೂತನಂತೆ ಎದುರಿಗೆ ನಿಂತವನಿಂದ ತಪ್ಪಿಸಿ ಕೊಳ್ಳುವದು ಹೇಗೆ ? ಎಂದು ಅರಿಯದೆ ತೊದಲುತ್ತ “ ನನ್ನ ಹೆಸರು ಕೆ. ಎಲ್ ಕಾಮತ” ಎಂದೆ. “ಅದೆಲ್ಲ ಬೇಡ ಸಾರ್ ! ಪೂರ್ತಿ ಹೆಸರು ಹೇಳಿ” ಎಂದ. ಅಷ್ಟರಲ್ಲಿ ಇನ್ನಿಬ್ಬರು ಬಂದು ಸುತ್ತುವರೆದರು. ಅವರ ಹತ್ತಿರ ಏನೋ ತಮಿಳಿನಲ್ಲಿ ಗುಸುಗುಸು ಮಾತಾಯಿತು. ಪೋಲಿಸ್ ಠಾಣೆಗೆ ಕರೆದೊಯ್ಯುವ ತಯಾರಿ! ಎಂದ ಖಚಿತವಾಗಿ ಜಂಘಾಬಲವೇ ಉಡುಗಿ ಹೋಯಿತು! ಬೇರೆ ಏನೂ ತೋಚದೇ,“ ಕೃಷ್ಣಾನಂದ …” ಅನ್ನುತ್ತಿರುವಾಗಲೇ“ ’ವಂಗ ದರ್ಶನ ’ ದ ಲೇಖಕರು ತಾವೇನಾ ಸಾರ್….? ಆ ಪುಸ್ತಕ ಓದಿದೆ ತುಂಬಾ ಮೆಚ್ಚಿಗೆ ಆಯ್ತು, ನಂತರಾ ತಾವು , ’ ನಾ ರಾಜಸ್ಥಾನದಲ್ಲಿ ’ ಬರೆದಿದ್ದೀರಿ! ಅದರ ಕೊನೆಯಲ್ಲಿ ತಮ್ಮ ಫೋಟೊ ಒಂದನ್ನು ಕೊಟ್ಟಿದ್ದಾರೆ. ಆ ಫೋಟೊ ನೋಡಿದಾಗ ಇವರು ಇಲ್ಲಿಯೇ ಓಡಾಡಿಕೊಂಡಿದ್ದಾರಲ್ಲ! ಅನಿಸಿತು. ಆದರೆ ಕೇವಲ ಹೋಲಿಕೆಯಿಂದ ಹೇಗೆ ಕೇಳುವದು? ಸಹೋದರರು ಇದ್ದರೂ ಇದ್ದಿರಬಹುದು…. ಮೂರು ತಿಂಗಳ ಹಿಂದೆಯೇ ವಿಚಾರಿಸಬೇಕೆಂದಿದ್ದೆ. ಧೈರ್ಯ ಸಾಲಲಿಲ್ಲ. ತಮ್ಮ ಪರಿಚಯವಾದದ್ದಕ್ಕೆ ತುಂಬ ಸಂತೋಷ. ಮನೆಗೆ ಹೊರಟವರಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮಿಸಿ!” ಅಂದರು! ಶಿಕ್ಷೆ ನಿರೀಕ್ಷಿಸಿದವನಿಗೆ ಎಂತಹ ಉಡುಗೊರೆಯಲ್ಲವೇ?

 

 

 

 

ಕೃಷ್ಣಾನಂದ ಕಾಮತ

 

ಈ ರೀತಿ ಎಷ್ಟು ಅಸಂಖ್ಯಾತ ಜನರು ನನ್ನ ಪುಸ್ತಕವನ್ನು ಓದಿದ್ದಾರೊ ಏನೋ! ಜನರು ತಾವಾಗಿ ನಾನು ಯಾರು? ಎಂದು ಸಂಶೋಧಿಸಿ ಮೆಚ್ಚುಗೆ ಸೂಚಿಸಿದ್ದಕ್ಕಿಂತ ಬೇರೆ ಯಾವ ಪಾರಿತೋಷಕ ತೆಗೆದುಕೊಂಡು ಏನು ಮಾಡಬೇಕಾಗಿದೆ? ಆದರೆ ಇದರಿಂದ ನನಗಾದ ಅಡಚಣಿ ಎಂದರೆ ಇನ್ನು ಮುಂದೆ ನನಗೆ ಆ ’ಎಳೆಯ ಗೆಳತಿ ’ಯನ್ನು  ಬಿಚ್ಚುಗಣ್ಣಿನಿಂದ ನೋಡುವದು ಸಾಧ್ಯವಿಲ್ಲ ! ಅಜ್ಞಾತವಾಸದಲ್ಲಿ ಇರುವದು ಇಂತಹ ಚಟುವಟಿಕೆಗೆ ಬಹಳೇ ಸಹಾಯವಾಗುತ್ತದೆ. ನಾನು ಯಾರು? ಎಂದು ನಾನು ವಾಸಿಸುತ್ತಿರುವ , ’ದತ್ತ ಪ್ರಸಾದ’ದವರು ತಲೆ ಕೆಡಿಸಿಕೊಳ್ಳದಿರುವದರಿಂದ ನನಗೆ ಏಷ್ಟು ವಿಧದಲ್ಲಿ ಲಾಭವಾಗಿದೆ, ಎಂದು ನಿನಗೆ ತಿಳಿದಿರಬಹುದು. ಟೆಲಿ ಲೆನ್ಸ್ ಬಂದ ನಂತರವಂತೂ ಈ ಲಾಭ ಇನ್ನೂ ಅಧಿಕವಾಗಿದೆ.

ಡಾ ಕೃಷ್ಣಾನಂದ ಕಾಮತ್